• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸ್ವರ್ಣಸೇತು’ ಎಂಬ ಪಾಟ್‌ಲಕ್‌ ಡಿನ್ನರ್‌!!

By Staff
|

ಈ ವರ್ಷದ ’ಸ್ವರ್ಣಸೇತು’ವಿನ ಪ್ರಧಾನ ಶಿಲ್ಪಿಗಳು ಎಮ್‌.ಎನ್‌.ಪದ್ಮನಾಭರಾವ್‌ ಅವರ ನೇತೃತ್ವದ ಇತರ ಐದು ಜನರ ಸಂಪಾದಕ ಮಂಡಳಿ. ಅತ್ಯಾಕರ್ಷಕ ಮುಖಪುಟವನ್ನು ವಿನ್ಯಾಸ ಮಾಡಿದವರು ಜನಾರ್ಧನ ಸ್ವಾಮಿ (ಹೈಟೆಕ್‌ ಕಾರ್ಟೂನಿಸ್ಟ್‌, ಈತ ನನ್ನ ಖಾಸಾ ಸ್ನೇಹಿತ). ವಿದ್ಯುದ್ದೀಪಾಲಂಕೃತ ಮೈಸೂರು ಅರಮನೆ ಮತ್ತು ಸ್ಯಾನ್‌ ಫ್ರಾನ್ಸಿಸ್ಕೋದ ಟ್ರಾನ್ಸ್‌ ಅಮೆರಿಕ ಕಟ್ಟಡದ ಚಿತ್ರಗಳು ಮುಖಪುಟಕ್ಕೆ ಅಪಾರ ಶೋಭೆಯನ್ನು ನೀಡಿವೆ.

200ಕ್ಕೂ ಹೆಚ್ಚು ಪುಟಗಳ ಸಂಚಿಕೆ ಎಲ್ಲ ಅರ್ಥಗಳಲ್ಲೂ ‘ತೂಕ’ವುಳ್ಳದ್ದಾಗಿದೆ. ಕ್ಯಾಲಿಫ್‌ ಕನ್ನಡಿಗರ ಸಾಹಿತ್ಯ ಸಂಪತ್ತು ಮತ್ತು ಜತೆಯಲ್ಲೇ ಕನ್ನಡಕೂಟದ ಆರ್ಥಿಕ ಮಟ್ಟ ಈ ಉತ್ಕೃಷ್ಟ ದರ್ಜೆಯ ಸಂಚಿಕೆಯಲ್ಲಿ ಪುಷ್ಕಳವಾಗಿ ಗೋಚರವಾಗುತ್ತದೆ. ವರದಿ, ಸಂವಾದ, ಮಂಥನ, ಕಥನ, ಕವನ, ಚಿತ್ರಣ, ನಂದನ ಮತ್ತು ಸ್ಪಂದನ ಎಂಬ ವಿಭಾಗಗಳಲ್ಲಿ ಲೇಖನಗಳ ವಿಂಗಡಣೆಯನ್ನು ಮಾಡಿ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಲಾಗಿದೆ. ಎಲ್ಲ ವಿಭಾಗಗಳ ಹೆಸರುಗಳೂ ಸ್ವಯಂ-ಸೂಚಕ (self explanatory) ಆಗಿಯೇ ಇವೆ. ‘ವರದಿ’ಯಲ್ಲಿ ಕೂಟದ ವರ್ಷವಿಡಿಯ ಚಟುವಟಿಕೆಗಳ ವರದಿಗಳಿದ್ದರೆ ಸಂವಾದದಲ್ಲಿ ಕ್ರಿಕೆಟರ್‌ ಕನ್ನಡಿಗ ಜಾವಗಲ್‌ ಶ್ರೀನಾಥ್‌ ಕೆಲತಿಂಗಳ ಹಿಂದೆ ಕ್ಯಾಲಿಫೋರ್ನಿಯಾಕ್ಕೆ ಭೇಟಿ ನೀಡಿದ್ದಾಗಿನ ಸಂದರ್ಶನವಿದೆ. ‘ಚಿತ್ರಣ’ದಲ್ಲಿ ಅತ್ಯುತ್ತಮವೆನಿಸಿಕೊಳ್ಳುವ ಕೆಲ ವರ್ಣಚಿತ್ರಗಳನ್ನು ಒಳ್ಳೆ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿರುವುದು ನಿಜವಾಗಿಯೂ ಸಂಚಿಕೆಯ ‘ಗೆಟ್‌ಅಪ್‌’ ಹೆಚ್ಚಿಸಿದೆ. ಕೂಟದ ಸದ್ಯಸರ ವಿಳಾಸದರ್ಶಿನಿ ಇರುವ ವಿಭಾಗಕ್ಕೆ ‘ಸ್ಪಂದನ’ ಎಂಬ ಹೆಸರು ಎಷ್ಟು ಸಮಂಜಸ ಎಂಬುದು ನನಗೆ ಅರ್ಥವಾಗಲಿಲ್ಲ ; ಸ್ಪಂದನ ವಿಭಾಗದಲ್ಲಿ ‘ಓದುಗರ ಓಲೆ’ ಇರಬಹುದೆಂದು ನಾನಂದುಕೊಂಡಿದ್ದೆ !

ಸ್ವರ್ಣಸೇತು ಬರೀ ‘ಅಕ್ಷರಗಳ ಕಾಡು’ ಆಗಿರದೆ ನಡುನಡುವೆ ವ್ಯಂಗ್ಯಚಿತ್ರಗಳೂ, ರೇಖಾಚಿತ್ರಗಳೂ, ಜಾಹೀರಾತುಗಳೂ ಇವೆ. ಎರಡು ಪೂರ್ಣಪ್ರಮಾಣದ ಕನ್ನಡ ಪದಬಂಧಗಳೂ ಸೇರಿದಂತೆ ಮೆದುಳಿಗೆ ಆಹಾರವಾಗುವ ಸಣ್ಣಪುಟ್ಟ ರಸಪ್ರಶ್ನೆ, ಚಟುವಟಿಕೆಗಳು ಅಲ್ಲಲ್ಲಿ ಸೊಗಸಾಗಿ ಬಂದಿವೆ. ಬಹುತೇಕ ಎಲ್ಲ ಲೇಖಕ/ಲೇಖಕಿಯರ ಭಾವಚಿತ್ರಗಳು ಲೇಖನದ ಶೀರ್ಷಿಕೆಯ ಜತೆಗಿವೆ. ‘ನಂದನ’ ವಿಭಾಗದಲ್ಲಿ ಒಳ್ಳೊಳ್ಳೆಯ ಪ್ರಬಂಧಗಳನ್ನು ವಸ್ತು ವೈವಿಧ್ಯತೆಯಾಂದಿಗೆ, ಇಂಗ್ಲಿಷ್‌ ಭಾಷೆಯಲ್ಲಿ ಬರೆದಿರುವ ಚಿಣ್ಣರನ್ನು ನೋಡುವುದು ತುಂಬ ಖುಷಿಯಾಗುತ್ತದೆ.

ಒಟ್ಟಿನಲ್ಲಿ ಇಷ್ಟೊಂದು ಸುಂದರವಾದ ‘ಸ್ವರ್ಣಸೇತು’ವನ್ನು ನಿರ್ಮಿಸಲು ಶ್ರಮಿಸಿರುವ ಎಲ್ಲ ಲೇಖಕ/ಲೇಖಕಿಯರು, ಚಿತ್ರಕಲಾವಿದರು, ಸಂಪಾದಕ ಮಂಡಳಿ ಮತ್ತು ‘ವಿನೂತನ ಪ್ರಯೋಗಗಳಿಂದಾಗಿ ಭರ್ಜರಿ ಯಶಸ್ಸನ್ನು ಕಂಡಿರುವ’ ಕನ್ನಡಕೂಟದ ಅಧ್ಯಕ್ಷ ಸುರೇಶ್‌ ಬಾಬು ಮತ್ತು ಅವರ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ‘ಏಕ್‌ದಂ’ ಮೆಚ್ಚುಗೆಯನ್ನು ಗಳಿಸುತ್ತಾರೆ ಇಂಥದೊಂದು ಉತ್ಕೃಷ್ಟ ಹೊತ್ತಿಗೆಯಿಂದ. ಅದಕ್ಕೇ ನಾನದನ್ನು ಒಂದು ‘ಪಾಟ್‌ಲಕ್‌ ಡಿನ್ನರ್‌’ಗೆ ಹೋಲಿಸಿದ್ದು!

ಅಭಿವೃದ್ಧಿಗೆ ಅವಕಾಶಗಳು

ಕಾರ್ಪೊರೇಟ್‌ ಅಮೆರಿಕದಲ್ಲಿ ಹೊಸ ಪದಪ್ರಯೋಗವೆಂದರೆ developmental opportunities. ಈಗ negative points/ drawbacks/ demerits ಇತ್ಯಾದಿಯನ್ನು ಆಯಾ ಪದಗಳಲ್ಲಿ ಹೇಳುವ ಬದಲು ಸ್ವಲ್ಪ ಮೃದುವಾಗಿ ‘ಅಭಿವೃದ್ಧಿಯ ಅವಕಾಶಗಳು’ ಎನ್ನುವುದು. ‘ಸ್ವರ್ಣಸೇತು’ ಸಂಚಿಕೆಯಲ್ಲೂ ಇಂಥವು ಕೆಲವು ಇವೆ. ಕಾಗುಣಿತ ತಪ್ಪುಗಳಿಗೇನೊ ಟೆಕ್ನಾಲಜಿಯನ್ನು (ಬರಹ ತಂತ್ರಾಂಶದಲ್ಲಿ ಟೈಪಿಸಿದ್ದನ್ನು ಇನ್ನೊಂದಕ್ಕೆ ವರ್ಗಾವಣೆ ಮಾಡುವಾಗ ಇತ್ಯಾದಿ) ಹೊಣೆಯಾಗಿಸಿದ್ದಾರೆ ಸಂಪಾದಕ ಮಂಡಳಿಯವರು. ಎಲ್ಲೋ ಒಂದೆರಡು ಕಡೆ ಕಾಗುಣಿತದೋಷವಿದ್ದರೆ ಪರವಾ ಇಲ್ಲ. ಹೆಚ್ಚು ಕಡಿಮೆ ಪ್ರತಿಲೇಖನದ ಪ್ರತಿಪುಟದಲ್ಲೂ ಎಂಬಂತೆ ಕಾಗುಣಿತ ತಪ್ಪಿದ್ದರೆ ಭಾಷಾಪ್ರಿಯರಿಗೆ ಸ್ವಲ್ಪ ಕಸಿವಿಸಿಯಾಗುತ್ತದೆ. ಮುಂದಿನ ಸಲದ ಸಂಪಾದಕಮಂಡಳಿ ಇನ್ನಷ್ಟು ‘ಕಣ್ಣಲ್ಲಿ ಎಣ್ಣೆಹಾಕಿ’ ಕರಡು ಪ್ರತಿ ತಿದ್ದುತ್ತಾರೆಂದು ಆಶಿಸೋಣ.

ಕಾಗುಣಿತದ ವಿಷಯ ಹಾಗಾದರೆ, ವಾಕ್ಯರಚನೆಯಲ್ಲೂ ಇನ್ನೂ ಕೊಂಚ ಬಿಗುವು ಬೇಕು. ಇದು ವಿಶೇಷತಃ ‘ಸಂಪಾದಕ ಮಂಡಳಿ’ಯ ಬರಹಗಳ ಬಗ್ಗೆ ನಾನು ಹೇಳುತ್ತಿರುವುದು. ‘ಈ ಮುಖಪುಟವನ್ನು ಸುಂದರವಾಗಿ ತರಲು ಪ್ರಮುಖ ಕಾರಣ ಶ್ರೀ ಜನಾರ್ಧನ ಸ್ವಾಮಿ.’ ಎಂಬ ವಾಕ್ಯವನ್ನು ನೋಡಿ. ಏನನಿಸುತ್ತದೆ ನಿಮಗೆ? ಮುಖಪುಟ ಸುಂದರವಾಗಿ ಬರದಿದ್ದರೆ ಎರಡು ಏಟು ಬಾರಿಸುತ್ತೇನೆ ಎಂದು ಜನಾರ್ಧನಸ್ವಾಮಿಯವರು ಕೋಲು ಹಿಡಿದು ನಿಂತಿದ್ದರೇ? ಹಾಗಲ್ಲವಲ್ಲ ! ಮುಖಪುಟವನ್ನು ರಚಿಸಿದ್ದೇ ಜನಾರ್ಧನಸ್ವಾಮಿ. ಅಂದಮೇಲೆ ಅದನ್ನು ‘ಈ ಸಂಚಿಕೆಗೆ ಸುಂದರವಾದ ಮುಖಪುಟವನ್ನು ರಚಿಸಿಕೊಟ್ಟಿರುವವರು ಶ್ರೀ ಜನಾರ್ಧನ ಸ್ವಾಮಿ.’ ಎಂಬ ವಾಕ್ಯ ಅರ್ಥಪೂರ್ಣವಾಗುತ್ತದೆ, ಅಲ್ಲವೇ? ಸಂಪಾದಕೀಯದಲ್ಲಿ ಬರುವ ‘ಕವಿತೆಗಳ ಸಾಲುಗಳು ಪೆಪ್ಪರ್‌ಮಿಂಟ್‌ನಂತೆ ಜಿಗಿದರೆ ಸಿಹಿ ಹೆಚ್ಚು...’’ ಎಂದು ಓದುವಾಗ ಪೆಪ್ಪರ್‌ಮಿಂಟ್‌ ಜಿಗಿದದ್ದನ್ನು ನಾನೆಲ್ಲೂ ನೋಡಿಲ್ಲವಲ್ಲ, ಮತ್ತೆ ಕವಿತೆಯ ಸಾಲು ಆ ರೀತಿ ಜಿಗಿಯುತ್ತದೆ ಎಂದು ಹೇಗೆ ಕಲ್ಪಿಸಲಿ? ಎನ್ನುವಂತಾಗುತ್ತದೆ, ‘ಜಗಿಯಲು’ ಎಂದಿರಬೇಕಾದದ್ದು ‘ಜಿಗಿಯಲು’ ಎಂದಾದ್ದರಿಂದ !

ಪರವಾ ಇಲ್ಲ ಬಿಡಿ, ಅಂತಹ ಪರ್ಫೆಕ್ಷನ್‌ಗಿಂತ ಇಷ್ಟೊಂದು ಸೃಜನಶೀಲತೆ ಮೆರೆದಿದೆಯಲ್ಲ ಸಂಚಿಕೆಯಲ್ಲಿ - ಅದನ್ನು ಮೆಚ್ಚಬೇಕು. ಆದರೆ, ಇನ್ನೊಂದು ಸಂಗತಿಯನ್ನು ಇಲ್ಲಿ ಬರೆಯಲೇಬೇಕು. ‘ಸ್ವರ್ಣಸೇತು’ ಸಂಚಿಕೆಗಾಗಿಯೇ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಂದ ವಿಶೇಷ ಸಂದೇಶವನ್ನೂ ತರಿಸಿ ಅದನ್ನು ಯಥಾವತ್ತಾಗಿ ಅಳವಡಿಸಿದ್ದಾರೆ ಈ ಸಂಚಿಕೆಯಲ್ಲಿ. ಮುಖ್ಯಮಂತ್ರಿಗಳ ಕಾರ್ಯದರ್ಶಿಯ ಉಕ್ತಲೇಖನವನ್ನು ವಿಧಾನಸೌಧದ ಒಬ್ಬ ಬೆರಳಚ್ಚುಗಾರ ಟೈಪಿಸಿದ್ದು ಆಮೇಲೆ ಮುಖ್ಯಮಂತ್ರಿಗಳು ಸಹಿಹಾಕಿದ್ದಿರಬಹುದು. ಕನ್ನಡ ರಾಜಧಾನಿಯ ಆಡಳಿತ ದೇಗುಲದಿಂದ ಬಂದ ಆ ದಿವ್ಯ ಸಂದೇಶದಲ್ಲಿ ಕನಿಸಿನ (ಕನಸಿನ), ಭಾಂದವ (ಬಾಂಧವ), ಭಾವಸೇತವೂ (ಭಾವಸೇತುವೂ), ಅವ್ಯಾಹಿತವಾಗಿ (ಅವ್ಯಾಹತವಾಗಿ), ಭಾಂದವ್ಯ (ಬಾಂಧವ್ಯ) - ಇವೇ ಮೊದಲಾದ ದೋಷಗಳು ಮುಜುಗರ ತರುತ್ತವೆ! ಹಾಗಾಗಿ ‘ಯಥಾ ರಾಜಾ ತಥಾ ಪ್ರಜಾಃ’?

ಇರಲಿ, ಅಭಿವೃದ್ಧಿಗೆ ಅವಕಾಶಗಳು ಯಾವಾಗಲೂ ಇದ್ದೇ ಇರುತ್ತವೆ. ಇಷ್ಟು ತಾದಾತ್ಮ್ಯವಾಗಿ ಕನ್ನಡಪ್ರೀತಿಯಿಂದ ದುಡಿದವರ ತಪ್ಪುಗಳನ್ನು ಹುಡುಕುತ್ತ ಕೂರುವುದು ಸಭ್ಯತನವಲ್ಲ. ಮುಂದಿನ ವರ್ಷಗಳಲ್ಲಿ ಸ್ವರ್ಣಸೇತು ಇನ್ನಷ್ಟು ಉತ್ತಮವಾಗಲಿ. ಸೇತು ಕಲ್ಪಿಸುವ ಸಂಪರ್ಕ ಚಿರಾಯುವಾಗಲಿ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more