ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಕಾ ಮಂಥನದಿ ಕನ್ನಡಿಯಲ್ಲಿ ಕರಿಯ ದರ್ಶನ !

By Staff
|
Google Oneindia Kannada News
  • ಎಚ್‌.ಆರ್‌.ಸತೀಶ್‌ಕುಮಾರ್‌, ಅಲೆಕ್ಸಾಂಡ್ರಿಯಾ
    E-mail : [email protected]
A.R. Krishna Shastryಕರಿಯನ್ನು ಕನ್ನಡಿಯಲ್ಲಿ ಹಿಡಿದಿಡುವುದು ಹೇಗೆ ?

ಅಂಥದೊಂದು ಪ್ರಯತ್ನ ಮಾಡಿದ ನಾಗೇಂದ್ರ ಅವರಿಗೆ ದಕ್ಕಿದ್ದು ಅಪರೂಪದ ಯಶಸ್ಸು . ಅದು ಅಸಾಧಾರಣ ಕೃತಿ-ಕರ್ತೃ ಪರಿಚಯ ಕಾರ್ಯಕ್ರಮ. ಕೃತಿ- ವಚನಭಾರತ, ಕರ್ತೃ- ಎ.ಆರ್‌.ಕೃಷ್ಣಶಾಸ್ತ್ರಿ . ಈ ಕಾರ್ಯಕ್ರಮ ನಡೆದದ್ದು ಮಾರ್ಚ್‌ 9ರ ಭಾನುವಾರ, ಭೂಮಿಕಾದ ಮಾಹೆ ಮಂಥನದಲ್ಲಿ .

ಕಾರ್ಯಕ್ರಮ ಪ್ರಾರಂಭವಾದದ್ದು ಪ್ರಭಾಕರ ಅವರ ಪರಿಚಯ ಭಾಷಣದೊಂದಿಗೆ. ಆನಂತರ ಮಾತಿಗಾರಂಭಿಸಿದ ನಾಗೇಂದ್ರ ಅವರು ಎ. ಆರ್‌. ಕೃಷ್ಣಶಾಸ್ತ್ರಿಗಳ ಪರಿಚಯವನ್ನು ಶ್ರೋತೃಗಳಿಗೆ ಮಾಡಿಕೊಟ್ಟರು, ವಚನಭಾರತ ಮಾತ್ರವಲ್ಲದೆ ಅವರ ಇತರ ಕೃತಿಗಳನ್ನೂ ಸಂಕ್ಷಿಪ್ತವಾಗಿ ಪರಿಚಯಿಸಿದರು. ಕೃಷ್ಣಶಾಸ್ತ್ರಿಗಳ ಬರೆದದ್ದೇನು ಅಂತಿಂಥ ಕೃತಿಗಳೇ ; ಕಥಾಸರಿತ್ಸಾಗರದ ಕನ್ನಡರೂಪ ಕಥಾಮೃತ, ಬಂಕಿಮಚಂದ್ರ, ಸಂಸ್ಕೃತನಾಟಕ, ಭಾಸಕವಿ- ಒಂದೊಂದೂ ಶಾರದೆಯ ಭಂಡಾರ ಒಡೆದು ತಂದಂತವು.

ಕುಮಾರವ್ಯಾಸನಿಗೆ ಸರಿಸಮ ಪ್ರತಿಭೆ

ಕೃಷ್ಣಶಾಸ್ತ್ರಿಗಳ ವಚನ ಭಾರತ ಪ್ರತಿಯಾಬ್ಬ ಕನ್ನಡಿಗರ ಮನೆಯಲ್ಲಿಯೂ ಇರಲೇ ಬೇಕಾದಂತಹ ಕೃತಿ. ಅದರ ಅಜರಾಮರ. ಕನ್ನಡ ಗದ್ಯದಲ್ಲಿ ಕೃಷ್ಣಶಾಸ್ತ್ರಿಗಳ ಲಾಲಿತ್ಯ ಹಾಗೂ ಅನುಪಮವಾದ ಸರಳ ಶೈಲಿ ಮಹಾಕವಿ ಕುಮಾರವ್ಯಾಸನ ಪಾಂಡಿತ್ಯದಷ್ಟೇ ಅಮೋಘವಾದದ್ದು ಎಂದು ನಾಗೇಂದ್ರ ಬಣ್ಣಿಸಿದರು.

ಎ.ಆರ್‌. ಕೃಷ್ಣಶಾಸ್ತ್ರಿ ಯವರ ಪುತ್ರಿ ಶಾಂತಾರವರ ಎ. ಆರ್‌. ಕೃ. ಸಂಸ್ಕೃತಿ ಪೀಠದ ಮೂಲಕ ವಚನ ಭಾರತದ ಹತ್ತನೇ ಆವೃತ್ತಿ ಮುದ್ರಣವಾಗುತ್ತಿರುವ ಸಮಯದ ‘ಸ್ಮರಣೆ’ಯನ್ನು ನಾಗೇಂದ್ರರವರು ನಮ್ಮೊಡನೆ ಹಂಚಿಕೊಂಡರು.

B. Nagendraವಚನಭಾರತ ಅಪರೂಪದ ಕೃತಿಯಾದರೂ ಆ ಕೃತಿಯನ್ನು ಪ್ರಕಟಿಸುವಲ್ಲಿ ಹಾಗೂ ಜನತೆಗೆ ಮುಟ್ಟಿಸುವಲ್ಲಿ ಕೃಷ್ಣಶಾಸ್ತ್ರಿಗಳು ಪಟ್ಟ ಪಾಡು ಒಂದೆರಡಲ್ಲ . ಶಾಸ್ತ್ರಿಗಳ ಪರಿಪಾಟಲನ್ನು ನಾಗೇಂದ್ರ ಅವರು ಪ್ರೇಕ್ಷಕರ ಮನಮುಟ್ಟುವಂತೆ ವಿವರಿಸಿದರು. ವಚನ ಭಾರತದ ಮುನ್ನುಡಿಯಲ್ಲಿ ಬರೆದಂತೆ ಮೂಲ ವ್ಯಾಸ ಮಹಾಭಾರತ (ಸಂಸ್ಕೃತ) ಗ್ರಂಥದಿಂದ ಆಯ್ದ ಕಥೆಯನ್ನು ‘ಕಾಮನ ಬಿಲ್ಲಿಗೆ ಬಣ್ಣ ಬಳಿದಂತೆ’ ಅಥವಾ ‘ಚಿತ್ರ ಪಟಕ್ಕೆ ಬಟ್ಟೆ ಹೊಲಿಸಿದಂತೆ’ ಅಭಾಸವಾಗದಿ ಇರುವಲ್ಲಿ ಕೃಷ್ಣಶಾಸ್ತ್ರಿಗಳ ಶ್ರಮವನ್ನು ಅವರು ಸ್ಮರಿಸಿದರು.

ಕನ್ನಡವುಳಿದೆನಗೆ ಅನ್ಯ ಜೀವನವಿಲ್ಲ ..

ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಕೃಷ್ಣಶಾಸ್ತ್ರಿಗಳು ಹೊರತಂದ ನಿಯತ ಕಾಲಿಕೆಗಳು (ಪ್ರಬುದ್ಧ ಕರ್ನಾಟಕ) ಹಾಗೂ ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತಿನ ಏಳಿಗೆಗೆ ಅವರ ಕೊಡುಗೆಯನ್ನು ನಾಗೇಂದ್ರ ಕೊಂಡಾಡಿದರು.

ಭೀಮನ ‘ಸೌಗಂಧಿಕಾ ಪುಷ್ಪ ಹರಣ’ದ ಕಥೆ ಹಾಗೂ ವಚನ ಭಾರತದ ಇತರ ಪುಟಗಳನ್ನು ವಾಚಿಸುವ ಮೂಲಕ- ಕೃಷ್ಣ ಶಾಸ್ತ್ರಿಗಳ ವಚನ ಭಾರತ ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಓದಿಸಿಕೊಂಡು ಹೋಗುತ್ತದೆ ಎನ್ನುವುದನ್ನು ನಾಗೇಂದ್ರ ಮನವರಿಕೆ ಮಾಡಿಕೊಟ್ಟರು.

ಅಕ್ಷೋಹಿಣೀ ಸೈನ್ಯದ ವಿವರಣೆ, ಮಹಾಭಾರತದ 18 ದಿನಗಳ ಯುದ್ಧದ ವಿವರಗಳು, ಅಸ್ತೀಕ ಪರ್ವದ ಕೆಲವು ಕಥೆ-ಉಪಕಥೆಗಳನ್ನು ಶ್ರೋತೃಗಳಿಗೆ ನಾಗೇಂದ್ರ ಸ್ವಾರಸ್ಯಕರವಾಗಿ ಉಣಬಡಿಸಿದರು.

H.R. Satish Kumarಮಹಾಭಾರತದ ಹುಟ್ಟು ಮತ್ತು ಬೆಳವಣಿಗೆ, ವಿವಿಧ ಪಂಡಿತರು ಕಂಡುಕೊಂಡಂತೆ ಅದರ ಕಾಲ, ಕರ್ತೃ ವಿಚಾರಗಳನ್ನು ನಾಗೇಂದ್ರ ಚರ್ಚಿಸಿದರು. ಮಹಾಭಾರತದಲ್ಲಿನ ಧರ್ಮ, ನೀತಿ, ಕಾವ್ಯ ಗುಣ, ಅದರಲ್ಲಿನ ಜೀವನ ದರ್ಶನ ಹಾಗೂ ಭಗವದ್‌ಗೀತೆಯಿಂದ ಆಯ್ದ ಕೆಲವು ಶ್ಲೋಕಗಳನ್ನು ಪಠಿಸಿ ಅವುಗಳ ಸಾರದ ಮೇಲೆ ಬೆಳಕು ಚೆಲ್ಲಿದರು.

ವಚನಭಾರತದ ಪೀಠಿಕೆಯಲ್ಲಿ ಬರೆದಂತೆ ಮಹಾಭಾರತದ ಕೆಲವು ಪಾತ್ರಗಳನ್ನಾಯ್ದುಕೊಂಡು ಅವುಗಳು ಅನುಭವಿಸಿದ ಕಷ್ಟ-ಸುಖಗಳನ್ನು ವಿವರಿಸುತ್ತಾ, ಯಾರು ಹೇಗೆ ಕಷ್ಟ ಪಟ್ಟರು, ದುಷ್ಟರೂ ಶಿಷ್ಟರೂ ಅನುಭವಿಸಿದ ಕಷ್ಟ ಕೋಟಲೆಗಳನ್ನು ನಾಗೇಂದ್ರ ಸ್ವಾರಸ್ಯಕರವಾಗಿ ವಿವರಿಸಿದರು. ವಚನ ಭಾರತದ ಪೀಠಿಕೆಯಲ್ಲಿ ಕೃಷ್ಣಶಾಸ್ತ್ರಿಗಳು ‘ಕರ್ಮ’ವನ್ನು ವಿವರಿಸಿ, ವ್ಯಾಖ್ಯಾನಿಸಿದ್ದನ್ನು ನೆನಪಿಸಿಕೊಂಡ ನಾಗೇಂದ್ರರು- ಐದಾರು-ದಶಕಗಳ ಹಿಂದಿನ ಸಂದೇಶವಾದ ‘ಇಂದಿನ ಪ್ರಪಂಚ ಮತ್ತು ಅದಕ್ಕೆ ಮಹಾಭಾರತದ ಸಂದೇಶ’ ಇವತ್ತಿಗೂ ಎಷ್ಟು ಪ್ರಸ್ತುತ ಎಂದು ಕಾಲ, ದೇಶ, ಭಾಷೆಗಳ ವಿಸ್ತಾರದಲ್ಲಿ ವಿವರಿಸಿ, ಶ್ರೋತೃಗಳನ್ನು ತಮ್ಮ ಆಲೋಚನಾ ಪಥದಲ್ಲಿ ಯಶಸ್ವಿಯಾಗಿ ಕೊಂಡೊಯ್ದರು.

ಮಹಾಭಾರತಕ್ಕೆ ಕನ್ನಡ ಜನತೆಯ ಭಾಷ್ಯ

ವಚನ ಭಾರತದಲ್ಲಿ ಚಿತ್ರಿಸಿದಂತೆ- ಎಷ್ಟು ಧರ್ಮಿಷ್ಟರಾದರೂ ಕುಂತೀ ಮಕ್ಕಳು ರಾಜ್ಯ ಸೌಖ್ಯ ಪಡೆಯಲಿಲ್ಲವೆಂಬ ವೈಪರೀತ್ಯವನ್ನು ಕನ್ನಡ ಜನತೆ ‘ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ’ ಎಂದು ಚೊಕ್ಕವಾಗಿ ಹೇಳಿದೆ ಎಂಬುದನ್ನು ನಾಗೇಂದ್ರ ಮಾರ್ಮಿಕವಾಗಿ ನೆನಪಿಸಿದರು.

ವಿಜಯಾ ಮನೋಹರ್‌ರವರ ವಂದನಾರ್ಪಣೆ ಮತ್ತು ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ವಚನಭಾರತವನ್ನು ಈ ಮೊದಲೇ ಓದಿದವರು ನಾಗೇಂದ್ರರು ನಾವು ಇನ್ನೊಮ್ಮೆ ಓದುತ್ತೇವೆ’ ಎಂದೂ ಹಾಗೂ ಈವರೆಗೆ ಓದದವರು ನಾಗೇಂದ್ರರು ನಾವೂ ಒಂದು ಪ್ರತಿ ತರಿಸುತ್ತೇವೆ’ ಎಂತಲೂ ಮಾತನಾಡಿಕೊಂಡರು. ಇದಲ್ಲವೇ ಕಾರ್ಯಕ್ರಮವೊಂದರ ಯಶಸ್ಸು ! ?


ಪೂರಕ ಓದಿಗೆ-
ಎ.ಆರ್‌.ಕೃಷ್ಣಶಾಸ್ತ್ರಿ ಯೆಂಬ ಕನ್ನಡದ ಅಶ್ವಿನಿ ದೇವತೆ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X