• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಸ್‌ವರ್ಡ್‌ ಪುರಾಣವ ಕೇಳಿರಯ್ಯಾ ನೀವೆಲ್ಲರೂ..

By Staff
|

ಪಾಸ್‌ವರ್ಡ್‌ ಪುರಾಣವ ಕೇಳಿರಯ್ಯಾ ನೀವೆಲ್ಲರೂ..

ನಾನು ನನ್ನಿಷ್ಟ ಎಂದು ರಾಮು ಸುಖಾ ಸುಮ್ಮನಿರುವಂತಿಲ್ಲ ! ಮನೆ ಆಫೀಸಿನ ಕಂಪ್ಯೂಟರ್‌ಗಳು ಹಾಗೂ ಫೋನುಗಳು ಒಡೆಯನಿಗೇ ಪ್ರವೇಶ ನಿರಾಕರಿಸಿದರೆ ಮಾಡುವುದಾದರೂ ಏನು ? ಪಾಸ್‌ವರ್ಡ್‌ ಚಕ್ರವ್ಯೂಹದಲ್ಲಿ ಸಿಲುಕಿ ಆತ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಒಂದೇ.. ಎರಡೇ.. ಶಿವ ಶಿವಾ !

 • ಎಂ.ಎನ್‌.ಪದ್ಮನಾಭ ರಾವ್‌, ಮಿಲ್ಪಿಟಸ್‌, ಕ್ಯಾಲಿಫೋರ್ನಿಯ.
 • ಒಂದೆರದು ದಿನಗಳಿಂದ ರಾಮೂ ತುಂಬಾ ಸೀರಿಯಸ್‌ ಆಗಿಬಿಟ್ಟಿದ್ದ . ಕುಳಿತೆಡೆ, ನಿಂತೆಡೆ ಪ್ರಪಂಚವನ್ನೇ ಮರೆತು ಯಾವುದೋ ಗಹನ ವಿಚಾರದಲ್ಲಿ ವಿಹರಿಸುತಿತ್ತು ಅವನ ಮನಸ್ಸು. ‘ರಾಮೂ, ರಾಮೂ, ಏ! ರಾಮೂ’, ಎಂದು ಅವನ ಹೆಂಡತಿ ಸೀತೂ ಕರೆಯುತ್ತಲೇ ಇದ್ದರೆ, ಈ ಅಸಾಮೀ ಕಂಪೂಟರ್‌ ಮುಂದೆ ಕುಳಿತು ಕೀ ಕುಟ್ಟುವುದರಲ್ಲಿ ಮಗ್ನ. ಕೊನೆಗೆ ಸೀತೂ ಹತ್ತಿರ ಬಂದು, ಬೆನ್ನು ತಟ್ಟಿ ‘ಏ ! ಏನಾಯಿತು? ಯಾಕೆ ಹೀಗೆ ? ಕರೆದದ್ದು ಕೇಳಿಸ್ಲಿಲ್ವ’ ಎಂದು ದಬಾಯಿಸಿದಾಗಲೇ ಅವನಿಗೆ ಪ್ರಪಂಚದ ಅರಿವು.

  ನೀವಿನ್ನೂ ರಾತ್ರಿ ನಡೆದ ಘಟನೆ ಕೇಳಿಲ್ಲ ಅಲ್ವೆ! ಸರಿ ಅದೊಂದು ದೊಡ್ಡ ಕಥೆ. ಸೀತೂ ಅಂತೂ ಹೆದರಿ ಕಂಗಾಲಾಗಿ ಅಳುತ್ತಾ ಕುಳಿತು ಬಿಟ್ಟಿದ್ದಳು. ಅಂಥಾದ್ದು ಏನಾಯಿತು ಅಂದಿರಾ! ಇಲ್ಲಿ ಕೇಳಿ. ಕಳೆದೆರಡು ದಿನಗಳಂತೆ ರಾಮು ರಾತ್ರಿ ಕೂಡಾ ಕಂಪ್ಯೂಟರ್‌ ಮುಂದೆ ಕುಳಿತು, ಏನೇನೋ ಕುಟ್ಟಿ ಕುಟ್ಟಿ , ಸಮಯ ಕಳೆದು, ಮಧ್ಯರಾತ್ರಿಯ ವೇಳೆಗೆ ಸೀತೂ ಪಕ್ಕ ಬಂದು ಮಲಗಿದ. ಸಾಮಾನ್ಯವಾಗಿ ರಾಮೂಗೆ ಕನಸುಗಳೇ ಬೀಳುವುದಿಲ್ಲ. ಸುಮಾರು ಎರಡು ಘಂಟೆಯ ಸಮಯಕ್ಕೆ, ರಾಮೂ ಜೋರಾಗಿ, ಗಹಗಹಿಸಿ ನಗಲು ಶುರುಮಾಡಿದ. ಜೊತೆ ಜೊತೆಗೇ ‘ಎಮ್ಮೆ! ನಿನಗೆ ಸಾಟಿ ಇಲ್ಲ, ಅರೆ ಹೊಯ್‌! ಅರೆ ಹೊಯ್‌!! 123’ ಎಂಬ ಪದ ಬೇರೆ. ಸೀತೂ ಕಿಟಾರನೆ ಕಿರುಚಿ ಎದ್ದು ‘ರಾಮೂ.. ರಾಮೂ..’ ಎಂದು ಅವನನ್ನು ಅಲುಗಾಡಿಸಿದರೂ ಎಚ್ಚರವಾಗದೇ, ಮಂಚದಿಂದ ಕೆಳಗೆ ದೂಡಿದಾಗಲೇ ಅವನಿಗೆ ವಾಸ್ತವ ಲೋಕ ದರ್ಶನ. ಸೀತೂ ಅಂತೂ ಈಗ ಹೆದರಿ ಬೆದರಿದ ಹರಿಣಿಯಂತೆ ಕಂಗಾಲಾಗಿದ್ದಳು. ಬಾಯಿಂದ ಹನುಮಂತ ಸ್ತುತಿ ಅವಳಿಗೆ ಅರಿವಿಲ್ಲದೇ ಹೊರಬಿತ್ತು!!

  ಅದು ಸರಿ, ರಾಮು ಬೆಚ್ಚಿ ಬಿದ್ದದ್ದಾದರೂ ಯಾಕೆ ?

  Padmanabha Rao Melanahalliರಾಮೂವಿನ ತಲೆ ಚಿತ್ರಾನ್ನ ಮಾಡಿದ್ದು ಬೇರೆ ಏನೂ ಅಲ್ಲ ! ಅನೇಕಾನೇಕ ಗುರುತಿನ, ಸಾಂಕೇತಿಕ, ಗುಪ್ತಪದಗಳು. ಅದೇ ‘ಪಾಸ್‌ವರ್ಡ್ಸು’. ಚಿತ್ರಾನ್ನ ಎಂದಾಗ ನೆನಪಿಗೆ ಬರುತ್ತೆ - ಮದುವೆಯಾದ ಹೊಸದರಲ್ಲಿ ರಾಮೂ, ಸೀತೂಗೆ ಹೇಳಿದ ಈ ಕಥೆ. ಒಬ್ಬ ಯುವಕ ದಾರಿ ತಪ್ಪಿ ರಾತ್ರಿಯಲ್ಲಿ ಅಡವಿಯ ಪಾಲಾಗುತ್ತಾನೆ. ಕತ್ತಲಲ್ಲಿ ಕಾಣುವ ಮಿಣುಕು ದೀಪದೆಡೆ ಬಿರ ಬಿರನೆ ಅವನ ಕಾಲುಗಳು ಓಡುತ್ತದೆ. ಒಂದು ಸಣ್ಣ ಮನೆ. ಎರಡೇ ಕೊಠಡಿಗಳು. ಅಪ್ಪ ಮತ್ತು ಮಗಳ ವಾಸ. ಬಾಯಾರಿ ಬಳಲಿದ ಯುವಕನನ್ನು ನೋಡಿ ಮರುಗಿ ಮಗಳು ಹೇಳುತ್ತಾಳೆ: ‘ಅಪ್ಪ , ಇವನು ಇಂದು ಇಲ್ಲಿ ರಾತ್ರಿ ಕಳೆಯಲಿ. ಬೆಳಗಾದ ಮೇಲೆ ಪಟ್ಟಣ ಸೇರಿಸೋಣ. ರಾತ್ರಿಯೆಲ್ಲಾ , ಅವನನ್ನು ನಾನು ನೋಡಿಕೊಳ್ಳುತೇನೆ. ಪಾಪ! ಹೆದರಿ ಬಿಟ್ಟಿದ್ದಾನೆ. ಪ್ರಾಣವೇನಾದರೂ ಹೋಗಿಬಿಟ್ಟರೆ!!’. ಸರಿ! ತಂದೆಗೂ ಇದು ಹೌದು ಎನಿಸಿತು. ಆದರೆ ತಂದೆಯಲ್ಲವೆ! ಮಗಳಿಗೆ ಎಚ್ಚರಿಕೆಯ ಮಾತು ಹೇಳಿದ. ‘ನಾನು ಪಕ್ಕದ ಕೋಣೆಯಲ್ಲಿ ಮಲಗಿರುತ್ತೇನೆ. ಅವನೇನಾದರೂ ನಿನ್ನ ಕೈ-ಮೈ ಮುಟ್ಟಲು ಬಂದರೆ ನನಗೆ ತಿಳಿಸು. ಜೋರಾಗಿ ಕೂಗಿ ಹೇಳು. ಕೈ ಮುಟ್ಟಿದರೆ ಒಗ್ಗರಣೆ ಎಂದೂ, ಕಾಲು ಮುಟ್ಟಿದರೆ ನಿಂಬೆ ಹುಳಿ ಎಂದೂ, ಮೈ ಮೇಲೆ ಕೈ ಹಾಕಿದರೆ ಅನ್ನ! ಅನ್ನ!! ಎಂದೂ ಕೂಗಿ ಕರೆದರೆ ನನಗೆ ಅರ್ಥವಾಗುತ್ತದೆ. ಬೇಗನೆ ನಾನು ಬಂದು ಆ ಯುವಕನನ್ನು ವಿಚಾರಿಸಿಕೊಳ್ಳುವೆ.. ’ ರಾತ್ರಿಯೆಲ್ಲಾ ತಂದೆಗೆ ನಿದ್ದೆ ಬರಲಿಲ್ಲ . ಬೆಳಗಿನ ಜಾವ ಸ್ವಲ್ಪ ಮಂಪರು, ಮಂಪರು! ಆಗ, ಕಿಟೀರನೆ ಚೀರಿದ ಶಬ್ದದ ಜೊತೆಗೇ ಕೇಳಿಸಿತು ‘ಚಿತ್ರಾನ್ನ! ಅಪ್ಪಾ ಚಿತ್ರಾನ್ನ!’.

  ಏನು ಹೇಳುತ್ತಿದ್ದೆ!! ಅದೇ ರಾಮುವಿನ ತಲೆ ಕೂಡಾ ಈಗ ‘ಪಾಸ್‌ವರ್ಡ್ಸ್‌’ ಗಿಜಿಗಿಜಿಯಲ್ಲಿ ಚಿತ್ರಾನ್ನವಾಗಿದೆ.

  ಹಾಳಾದ್ದು ಮನೆಯ ಮತ್ತು ಆಫೀಸಿನ ಕಂಪ್ಯೂಟರ್‌ಗಳು, ಟೆಲಿಫೋನು, ಮೊಬೈಲ್‌ ಫೋನು ಇತ್ಯಾದಿ ಇತ್ಯಾದಿ ಅವನ ಮೇಲೆ ಒಂದು ವಿಚಿತ್ರ ಯುದ್ಧವನ್ನೇ ಸಾರಿಬಿಟ್ಟಿದ್ದವು. ಏನೂ ಮಾಡಲು ಹೋದರೂ ‘ಯುವರ್‌ ಪಾಸ್‌ವರ್ಡ್‌ ಈಸ್‌ ಎಕ್ಸ್‌ಪೈರ್ಡ್‌. ಪ್ಲೀಸ್‌ ಚೂಸ್‌ ಯುವರ್‌ ನ್ಯೂ ಪಾಸ್‌ವರ್ಡ್‌, ವಿಚ್‌ ಇಸ್‌ ಈಸಿ ಫಾರ್‌ ಯು ಟು ರಿಮೆಂಬರ್‌ ಅಂಡ್‌ ಡಿಫಿಕಲ್ಟ್‌ ಫಾರ್‌ ಅದರ್ಸ್‌....!!’.

  ‘ಈ ಕಂಪ್ಯೂಟರ್‌ಗಳಿಗೇನಾಗಿದೆ. ನಮ್ಮ ಹೆಂಡ, ನಮ್ಮ ಭಂಗಿ!! ನನ್ನ ಕಂಪ್ಯೂಟರ್‌ ಮತ್ತು ಫೋನುಗಳು ನನಗೇ ಪ್ರವೇಶ ನಿರಾಕರಿಸಿದರೆ ನಾನು ಏನು ಮಾಡಲಿ!’ ಎಂದು ಅಪರಾತ್ರಿಯಲ್ಲಿ ತನ್ನ ಸ್ಥಿತಿ ನೋಡಿ ಕಂಗಾಲಾದ ಸೀತೂವಿನತ್ತ ನೋಡುತ್ತ ರಾಮು ಉದ್ಗರಿಸಿದ. ರಾಮೂವಿನ ಚಡಪಡಿಕೆ ಮತ್ತು ಕನಸಿನ ಅವಾಂತರಗಳು ಎಲ್ಲಾ ಪದರ ಪದರವಾಗಿ ಬಿಚ್ಚಿಕೊಳ್ಳುತ್ತಾ ಈಗ ಅರ್ಥವಾಯಿತು ಸೀತೂಗೆ. ತಕ್ಷಣ ಎದ್ದ ಸೀತೂ ಅವನಿಗೆ ಒಂದು ಲೋಟ ನೀರು ತಂದು ಕೊಟ್ಟು, ಗಾಳಿ ಬೀಸಿ ಸಮಾಧಾನ ಪಡಿಸಿದಳು. ಸ್ವಲ್ಪ ಸಮಯದ ಬಳಿಕ ‘ಅದು ಸರಿ ಯಾಕೆ ಹಾಡು! ಎಂದೂ ಇಲ್ಲದ್ದು’ ಎಂದಾಗ ರಾಮೂಗೆ ಏನನ್ನೂ ಮುಚ್ಚಿಡಲಾಗಲಿಲ್ಲ. ‘ಪಾಸ್‌ವರ್ಡ್‌ ಪುರಾಣ’ ವನ್ನು ಸೀತೂಗೆ ಹೇಳಲು ಪ್ರಾರಂಭಿಸಿದ.

  ಬಹಳ ಕಾಲದ ಹಿಂದೆ ನೈಮಿಶಾರಣ್ಯವೆಂಬ ಬಹು ದೊಡ್ಡ ಅರಣ್ಯವೊಂದಿತ್ತು... ಸ್ವಲ್ಪ ಇರಿ ಸ್ವಾಮಿ! ಅಗ್ನಿದೇವ, ಗುರು ವಸಿಷ್ಠರಿಗೆ ಹೇಳಿದ ಅಗ್ನಿಪುರಾಣವನ್ನು, ವಸಿಷ್ಠರು ವ್ಯಾಸದೇವರಿಗೆ ಹೇಳಿದಂತೆ, ವ್ಯಾಸದೇವರು ಋಷಿಗಳಾದ ಸೂತ, ಶುಕ ಮತ್ತು ಪೈಲರಿಗೆ ಹೇಳಿದಂತೆ, ನಿಮ್ಮತನಕ ಬರುತ್ತಿದೆಯಲ್ಲಾ ಎಂದು ಕೊಂಡಿರಾ! ಇಲ್ಲಾ ದೇವ್ರು! ಎಲ್ಲಾ ಪುರಾಣಗಳೂ ಪ್ರಾರಂಭವಾಗುವ ಹಾಗೆ ನನ್ನ ಈ ‘ಮಾಡೆರನ್‌ ಪಾಸ್‌ವರ್ಡ್‌’ ಪುರಾಣವೂ ಪ್ರಾರಂಭವಾಗಲಿ ಎಂದುಕೊಂಡೆ. ಇರಲಿ ಬಿಡಿ. ಭಕ್ತಿ-ಭಾವ ತುಂಬಿದ ನಿಮ್ಮನ್ನು ಏಕೆ ಕಾಡಿಸಲಿ!

  ಅಂತರ್ಜಾಲ ವ್ಯವಸ್ಥೆಯ ಉಪಯೋಗ ಜಾಸ್ತಿಯಾದಂತೆಲ್ಲಾ, ಕಂಪ್ಯೂಟರ್‌ ಭದ್ರತಾ(Security) ವಾತಾವರಣದ ಗೊಂಡಾರಣ್ಯದಲ್ಲಿ ಗುಪ್ತಪದಗಳದೇ ಅಧಿಪತ್ಯ. ಯಾವ ಅಂತರ್ಜಾಲ ಪುಟ ನೋಡಿದರೂ Signin ದಾರಿದೀಪಗಳು. ಮೊದ ಮೊದಲು ರಾಮೂ ಪ್ರೀತಿಯಿಂದ ತನ್ನ ಹೆಂಡತಿ ಹೆಸರು, ತನ್ನೂರಿನ ಹೆಸರು, ಹುಟ್ಟಿದ ದಿನ ಇತ್ಯಾದಿ ಇತ್ಯಾದಿ ಬೇಗ ನೆನಪಿಗೆ ಬರುವ ಗುಪ್ತಪದಗಳನ್ನು ಬಳಸುತ್ತಿದ್ದ. ಕಂಪ್ಯೂಟರ್‌ ಕಳ್ಳರು ಜಾಸ್ತಿಯಾದಂತೆಲ್ಲಾ ಈ ಸಣ್ಣ ಹಾಗೂ ಬರೀ ಅಕ್ಷರಗಳುಳ್ಳ ಗುಪ್ತಪದಗಳಿಗೆ ಅರ್ಥವೇ ಇಲ್ಲದಂತಾಗಿ, ಯಾರೂ ಮೂಸು ನೋಡದ ಪರಿಸ್ಥಿತಿಯುಂಟಾದಾಗಲೇ ರಾಮುವಿನ ತಲೆ ಗಾಂಧಿ ಚರಕಕಿಂತ ವೇಗವಾಗಿ ಸುತ್ತಲು ಆರಂಭಿಸಿದ್ದು.

  ಹಲವು ಕಂಪ್ಯೂಟರ್‌ ವ್ಯವಸ್ಥೆಗಳು, ಅಕ್ಷರದ ಜೊತೆ ಅಂಕೆಗಳೂ ಇರಬೇಕು, 6 ರಿಂದ 11 ಅಕ್ಷರವಿರಬೇಕು, ವಿಶೇಷ ಸಂಜ್ಞೆಗಳು ಇರಬೇಕು ಎಂದಾಗ, ರಾಮೂ ಸುಸ್ತು ಹೊಡೆದ. ಇದ್ಯಾವ ಪೀಕಲಾಟವಯ್ಯಾ! ಎಂದು ಚಿಂತಿಸದ ಕ್ಷಣಗಳಿಲ್ಲದಿಲ್ಲ ! ಭಕ್ತ ತನ್ನ ಜಿಜ್ಞಾಸು ಮನಸ್ಸಿನ ಶಾಂತಿಗೆ ವೇದ-ಪುರಾಣ ಮೊರೆಹೊಕ್ಕಂತೆ, ರಾಮೂ ಕೂಡಾ ತಾನು ಓದಿದ ಎಲ್ಲಾ ಪುಸ್ತಕಗಳನ್ನು ತಿರುವಿ ಹಾಕಲು ಆರಂಭಿಸಿದ. ಎಲ್ಲಾ ಪುಸ್ತಕಗಳು ಹೇಳುವಂತೆ

  ‘1. ನಿಮ್ಮ ಗುಪ್ತಪದಗಳು ಸಣ್ಣ ಹಾಗೂ ದೊಡ್ಡ ಅಕ್ಷರಗಳನ್ನು ಹೊಂದಿರಲಿ.

  2.ಒಂದಲ್ಲ ಕೆಲವು ಅಂಕಿ ಅಥವಾ ಸಂಜ್ಞೆ ಇರಲಿ.

  3.ಸುಲಭವಾಗಿ, ಕೀಲಿಮಣೆಯ ಕೈಗಳನ್ನು ಹುಡುಕದೆ!, ಕೀಲಿಮಣೆಯ ಮೇಲೆ ಕೈಆಡಿಸುವ ಪದಪುಂಜಗಳನ್ನು ಬಳಸಿ ಗುಪ್ತಪದವನ್ನು ಆರಿಸಿ’

  ಇತ್ಯಾದಿ ಸಲಹೆ ಸೂಚನೆಗಳು ದೊರೆತರೂ ಮನಸ್ಸಿಗೆ ಹಾಯ್‌! ಎನಿಸಲಿಲ್ಲ. ತತ್ತರಿಕೆ! ರಾಮೂ ತನ್ನ ಇಂಜಿನಿಯರಿಂಗ್‌ ಪರೀಕ್ಷೆಗೂ ಇಷ್ಟು ಒದ್ದಾಡಿರಲಿಲ್ಲ!

  ಇನ್ನು ಉಳಿದದ್ದು ಒಂದೇ ಮಾರ್ಗ. ಸ್ನೇಹಿತರನ್ನು ಕೇಳುವುದು. ಎಲ್ಲರಿಗೂ ಈ ಸಮಸ್ಯೆಗಳು ಇದ್ದೇ ಇರುತ್ತವೆಯಲ್ಲಾ!! ಹಾಗಾಗಿ ಮುಂದಿನ ಒಂದು ‘ಪಾಟ್‌ಲಕ್‌’ ಭೇಟಿಗೆ ಕಾದರಾಯಿತು ಎಂದುಕೊಂಡು ಸುಮ್ಮನಾದ. ಆದರೆ ‘ಒಳಗೆ ಸೇರಿದರೆ ಗುಂಡು..’ ಗೊತ್ತು ತಾನೆ! ರಾಮೂವಿನ ಚಡಪಡಿಕೆ. ಕೊನೆಗೂ ತನ್ನ ಕನ್ನಡದ ಸ್ನೇಹಿತನೊಬ್ಬನಿಗೆ ಫೋನಾಯಿಸಿಯೇ ಬಿಟ್ಟ. ಗುರು! ಗುಪ್ತಪದಗಳ ಅಳವಡಿಕೆ ಮೇಲೆ ನಿನ್ನ ಅಭಿಪ್ರಾಯ ತಿಳಿಸು? ರಾಮೂ ಸ್ನೇಹಿತನಿಗೆ ಇದ್ದಕ್ಕಿದ್ದಂತೆ ಏನೋ ಉತ್ಸಾಹ ಬಂದು ‘ಬಾರಿಸು ಕನ್ನಡ ಡಿಂಡಿಮವ! ಓ ಕರ್ನಾಟಕ ಹೃದಯ ಶಿವ!!’ ಏಂದು ಹಾಡಬೇಕೆ? ಅವನ ಪ್ರಕಾರ ಸುಮಾರು ಇಪ್ಪತ್ತೊಂದು ಈ ರೀತಿಯ ಗುಪ್ತಪದಗಳನ್ನು ಅವನು ಬಳಕೆಯಲ್ಲಿಟ್ಟುಕೊಂಡಿದ್ದಾನಂತೆ. ಕನ್ನಡದ ಒಂದೊಂದು ಕವಿತಾ ಸಾಲು ಅಥವಾ ಪೂರಾ ಕವಿತೆ ಅವನ ಅಂತರ್ಜಾಲ ವ್ಯವಸ್ಥೆಯ ಭದ್ರತೆಗೆ ಒಳ್ಳೆ ಮಜಬೂತಾದ ಬೇಲಿಯಂತೆ!

  ಇದನ್ನು ಕೇಳಿದೊಡನೆಯೇ ರಾಮೂಗೆ ನೆನಪಾಗಿದ್ದು ‘ಅಣ್ಣಾವ್ರ ಸಿನೆಮಾಗಳು’. ಸರಿ ಸಿನೆಮಾದ ಎಲ್ಲಾ ಹೆಸರುಗಳನ್ನು ಒಂದೆಡೆ ಪಟ್ಟಿ ಮಾಡಲು ಶುರುಮಾಡಿತು ರಾಮೂವಿನ ಮನಸ್ಸು. ಯಾಕೆ ಹೇಳಿ! ಕುಡುಕನಿಗೆ ಚೇಳು ಕಡಿಸಿ ಬಿಟ್ಟರೆ... ಗಾದೆ ಮಾತು ಕೇಳಿದ್ದಿರಿ ತಾನೆ. ರಾಮೂವಿನ ದೂರಾಲೋಚನೆ ನಾಗಾಲೋಟದಲ್ಲಿ ಸಾಗಿತು. ಬರೀ ಸಿನಿಮಾದ ಹೆಸರು ಎಂದರೆ ಸ್ವಲ್ಪ ದಿನಗಳಲ್ಲೇ ಮುಗಿದು ಹೋಗಬಹುದು. ‘ತೊಟ್ಟ ಬಾಣವನ್ನು ಮತ್ತೆ ತೊಡುವಂತಿಲ್ಲವಲ್ಲಾ !’. ಹಾಗಾಗಿ ಬಹಳ ಯೋಚಿಸಿ, ಒಂದೇ ಸಲಕ್ಕೆ ಕಾರ್ಯರೂಪಕ್ಕೆ ತರುವುದು ಅನಿವಾರ್ಯ ಕೂಡ ಎಂದು ಅನಿಸಿತು. ಕನ್ನಡದ ಎಲ್ಲಾ ಹಾಡು ಹಸೆಗಳಲ್ಲಿ ಅವನ ಮನಸ್ಸು ಹೊರಳಿತು. ಚಿಕ್ಕಂದಿನಲ್ಲಿ ಕಲಿತ ಎಲ್ಲಾ ಪದ್ಯಗಳನ್ನು ಗುನುಗುನಿಸಲು ತೊಡಗಿದ. ‘ಬಸವ ಮತ್ತು ಕಮಲ’ ನೆನಪಾದರು. ತಿರುಕನ ಕನಸು ಜ್ಞಾಪಿಸಿಕೊಳ್ಳಲು ಕಷ್ಟ ಎನಿಸಿತು. ಕೊನೆಗೂ ಒಂದಷ್ಟು ಪದ್ಯಗಳನ್ನು ಹುಡುಕಿ ತನ್ನ ಎಲ್ಲಾ ಅಂತರ್ಜಾಲ ಪುಟಗಳ ಗುಪ್ತಪದಗಳನ್ನು ಬದಲಾಯಿಸಿಯೇ ಬಿಟ್ಟ !

  ಆಹಾ!! ಅಂದು ಅವನ ಮುಖ ನೋಡಬೇಕಿತ್ತು..‘ಧೀರಾಧಿ ಧೀರನಂತೆ, ಮಾರ ಸುಕುಮಾರನಂತೆ..’ ಇರಲಿಬಿಡಿ, ನಾನೇನು ಈಗ ಕರಪಾಲ ಮೇಳ ಮಾಡಲು ಹೋಗ್ತಿಲ್ಲ . ನಿಮಗೆ ಗೊತ್ತಲ್ಲ ಈ ಕರಪಾಲ ಮೇಳದ ವರಸೆ- ‘ಅಪ್ಪಾ ! ಮಗನೇ!! ಕೇಳಬೇಕಲ್ಲಾ, ಯಾವ ರೀತಿಯಾಗಿ ನಮ್ಮ ರಾಮೂ, ತನ್ನೆಲ್ಲಾ ಗುಪ್ತಪದಗಳನ್ನು ಬದಲಾಯಿಸಿಬಿಟ್ಟನೆಂದರೆ...’. ಕೇಳಲು ಅಂದ, ನೋಡಲು ಚಂದ. ನೀವೇನಾದರೂ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಆಸು-ಪಾಸು ಹೋದರೆ, ಕರಪಾಲ ಮೇಳ ನೋಡುವ ಅವಕಾಶ ಸಿಕ್ಕರೆ ಖಂಡಿತ ಬಿಡದೆ ನೋಡಿ. ಬಹಳ ಮಜಾ ಇರುತ್ತೆ .

  ಆದರೆ ‘ರಾಮೇಶ್ವರಕ್ಕೆ ಹೋದರೂ ಶನೇಶ್ವರ ಬಿಡಲಿಲ್ಲವಂತೆ!’. ಸರಿ! ಗುಪ್ತಪದಗಳೇನೋ ಬದಲಾಗಿಬಿಟ್ಟವು, ಯಾವ ಜಾಲಪುಟಕ್ಕೆ ಯಾವ ಗುಪ್ತಪದ ಎನ್ನುವುದು ಇನ್ನೂ ‘ರತ್ನಗಿರಿಯ ರಹಸ್ಯವಾಗೇ’ ಇದೆ. ರಾಮೂವಿನ ಕಳೆದೆರಡು ದಿನಗಳ ಚಡಪಡಿಕೆಗೆ ಈ ವಸ್ತುವೇ ಗ್ರಾಸ. ಆಫೀಸಿನ ತನ್ನ ಫೋನಿನಲ್ಲಿ ಎರಡು ಹೊಸ ಸಂದೇಶಗಳಿವೆ. ಗುಪ್ತಪದದ ಕಲಸುಮೇಲೋಗರದಲ್ಲಿ ಅವನಿಗೆ ಸರಿಯಾದ ಗುಪ್ತಪದ ಸಿಗದೇ, ಗೊತ್ತಿರುವ ಎಲ್ಲಾ ಹಾಡುಗಳನ್ನು ಪ್ರಯತ್ನಿಸಿಯೇ ಪ್ರಯತ್ನಿಸಿದ್ದು ! ರಾತ್ರಿ ಕನಸಿನಲ್ಲೂ ಎಮ್ಮೆ ನಿನಗೆ ಸಾಟಿಯಿಲ್ಲ ಹಾಡು! ಈ ಪಸ್ಸ್‌ವರ್ಡ್ಸು ರಾಮೂಗೇ ಡಿಫಿಕಲ್ಟ್‌ ಆಗಿಬಿಡಬೇಕೇ? ಕಲಿಕಾಲವಯ್ಯಾ, ಕಲಿಕಾಲ.

  ಮುಖಪುಟ / ಎನ್‌ಆರ್‌ಐ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more