ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಮೈ.ಶ್ರೀ.ನಟರಾಜರ ಕಾವ್ಯ-ವರ್ತಮಾನಕ್ಕೊಂದು ಭಾಷ್ಯ

By Staff
|
Google Oneindia Kannada News

Dr MS Nataraj
ಕವಿತೆಯ ಮೂಲಕ ಕನ್ನಡ ಸಹೃದಯರಿಗೆ ಪರಿಚಿತರಾದ ಕವಿ ಡಾ.ಮೈ.ಶ್ರೀ.ನಟರಾಜರ ಚಿಂತನೆಗಳು ಈ ವಿಶೇಷ ಸಂದರ್ಶನದಲ್ಲಿ ವ್ಯಕ್ತವಾಗಿವೆ. ಗೊರೂರು ಪ್ರಶಸ್ತಿ ನಟರಾಜ್‌ ಅವರಿಗೆ ಸಂದ ಸಂದರ್ಭದ ನೆಪದಲ್ಲಿ ನಡೆದ ಈ ಸಂದರ್ಶನ ಪ್ರಸಕ್ತ ಕಾವ್ಯ ಕ್ಷಣಗಳತ್ತ ಚೆಲ್ಲುವ ಬೆಳಕು ಕುತೂಹಲಕರವಾದುದು.

* ಸಂದರ್ಶಕ : ಎಂ.ಆರ್‌. ದತ್ತಾತ್ರಿ, ಫಾಸ್ಟರ್‌ ಸಿಟಿ, ಕ್ಯಾಲಿಫೋರ್ನಿಯಾ

ಡಾ.ಮೈ.ಶ್ರೀ ನಟರಾಜರ ಕಾವ್ಯ ಓದುಗನನ್ನು ಸೆಳೆಯುವುದು ಅನೇಕ ಕಾರಣಗಳಿಂದ.

ಮೊತ್ತ ಮೊದಲನೆಯದಾಗಿ ವರ್ತಮಾನವನ್ನು ಕೆಣಕುವ ಅದರ ಬಗೆಯಿಂದಾಗಿ. ಸಾಗರದ ದಂಡೆಯಲ್ಲಿ ನಿಂತಾಗ ಒಂದರ ಮೇಲೊಂದರಂತೆ ಬರುವ ಅಲೆಗಳಲ್ಲಿ ಮುಗಿಲೆತ್ತರಕ್ಕೆ ಹಾರುವ ಒಂದು ಅಲೆಯನ್ನು ನಟರಾಜರು ಹಿಡಿಯುತ್ತಾರೆ. ಉದ್ದ, ಅಗಲಗಳನ್ನು ಅಳೆದು ನೋಡುನೋಡುತ್ತಲೇ ಅದರ ಬೆನ್ನೇರಿ ಉತ್ಸಾಹದಲ್ಲಿ ಸವಾರಿ ಮಾಡಿಬಿಡುತ್ತಾರೆ.

ಗುಜರಾತಿನ ಮತೀಯ ದಳ್ಳುರಿ, ನ್ಯೂಯಾರ್ಕ್‌ನ್ನು ನಡುಗಿಸಿದ ಭಯೋತ್ಪಾದನೆ, ಇಸ್ರೇಲಿ ಪ್ಯಾಲೆಸ್ಟೈನಿಯನ್ನರ ಜಗಳದಿಂದ ಹಿಡಿದು ವೀರಪ್ಪನ್‌ ಮತ್ತು ಸದ್ದಾಂ ಹುಸೇನರ ತನಕ ನಟರಾಜರ ಕರ್ತೃತ್ವ ಶಕ್ತಿ ವರ್ತಮಾನದೊಂದಿಗೆ ಕೈ ಕೈ ಮಿಲಾಯಿಸಿ ಒಡಲಾಳದ್ದನ್ನು ಹೊರಗೆಳೆಯಲು ನೋಡುತ್ತದೆ. ವರ್ತಮಾನದ ಹರಿತ ಕತ್ತಿಯ ಮೇಲೆ ದಿಟ್ಟವಾಗಿ ಓಡಾಡಿ ಕೇಕೆ ಹಾಕಲು ಅಷ್ಟೇ ಹರಿತವಾಗಿ ಅಭಿವ್ಯಕ್ತಿಗೊಳ್ಳಲು ತಯ್ಯಾರಿರುವ ಮನಸ್ಸು ಬೇಕಾಗುತ್ತದೆ, ನಿಧಾನವಾಗಿ ದಿನಗಟ್ಟಲೆ ಹರಿಯದೆ ಕ್ಷಣದಲ್ಲಿ ಸಾವಿರ ಅಡಿ ಧುಮ್ಮಿಕ್ಕಿ ಭೋರ್ಗರೆಯುತ್ತಾ ನಿಲ್ಲುವ ಪದಪುಂಜಗಳು ಬೇಕಾಗುತ್ತವೆ. ನಟರಾಜರು ಅನೇಕ ರೀತಿಯಲ್ಲಿ ಇವೆಲ್ಲವನ್ನೂ ಸಾಧಿಸಿದ್ದಾರೆ.

ಗುಡಿಗಳ ಕೆಡವುತ ಪುಡಿ ಪುಡಿ ಮಾಡುತ
ಗುಂಬಸ್‌ ಕಟ್ಟುವನೊಬ್ಬ
ಗುಂಬಸ್‌ ಉರುಳಿಸಿ ಗುಡಿಯ ಕಟ್ಟುವೆನು
ಎನ್ನುತ ಚೀರುವ ಇನ್ನೊಬ್ಬ

ಎನ್ನುವಲ್ಲಿ ವ್ಯಕ್ತವಾಗುವ ವ್ಯಂಗ್ಯ ಅಭಿವ್ಯಕ್ತಿಯ ಯಾವ ಮಟ್ಟದಲ್ಲೂ ದ್ವೇಷಕ್ಕೆ ತಿರುಗದೆ ಸಾತ್ವಿಕವಾಗಿಯೇ ಓದುಗನನ್ನು ವರ್ತಮಾನದ ವಾಸ್ತವತೆಗೆ ತಿರುಗಿಸುತ್ತದೆ. ಇದು ನಾನು ಗುರುತಿಸುವಂತೆ ನಟರಾಜರ ಕಾವ್ಯದಲ್ಲಿ ಎದ್ದು ಕಾಣುವ ವಿಶೇಷತೆ.

'ಮಧುಚಂದ್ರ, ಸಿರಿಕೇಂದ್ರ"ಕ್ಕೆ ಬೆನ್ನುಡಿಯಾಗಿ ಡಾ. ಯು.ಆರ್‌. ಅನಂತಮೂರ್ತಿಯವರು ಹೀಗೆನ್ನುತ್ತಾರೆ - "ತನ್ನನ್ನೇ ತಾನು ಗೇಲಿ ಮಾಡಿಕೊಳ್ಳಬಲ್ಲ ನಟರಾಜರು ಯಾರನ್ನಾದರೂ ಗೇಲಿ ಮಾಡಿ ಬಚಾಯಿಸಿಕೊಳ್ಳಬಲ್ಲರು". ಇದಕ್ಕೆ ಉತ್ತರವೋ ಅಥವಾ ಅನಂತಮೂರ್ತಿಯವರ ಉತ್ತರಕ್ಕೆ ಪ್ರಶ್ನೆಯೋ ಎನ್ನುವಂತೆ ನಟರಾಜರು ಅನಂತಮೂರ್ತಿಯವರನ್ನೇ ಗೇಲಿಗೆ ವಸ್ತುವಾಗಿಸುತ್ತಾರೆ.

ಸಾರ್‌,
ನಮಗೆ ನೀವು ಹಾಸನದಲ್ಲಿ ಮೇಷ್ಟ್ರಾಗಿದ್ದಾಗ
ನೀವಿನ್ನೂ ನಿಮ್ಮ ಜೀವನದ
ಸ್ತರಗಳನ್ನು ಹುಡುಕುತ್ತಿದ್ದಾಗ
ಯೌವನದ ಹಾದಿಯಲ್ಲಿ
ಆ-ಸ್ತರ, ಈ-ಸ್ತರಗಳನ್ನು ತಡಕುತ್ತಿದ್ದಾಗ
ನಿಮಗೆ ದೊರೆತದ್ದು ?
ಯಾವ ಸ್ತರ ?..... ಎಸ್ತರಾ?!

ಅನಂತಮೂರ್ತಿಯವರು ಗುರುತಿಸುವಂತೆ 'ಹಾರಬಲ್ಲ ಹಗುರ ಭಾಷೆಯ" ನಟರಾಜರು ಯಾರನ್ನೂ ನೋಯಿಸಲು ಗೇಲಿ ಮಾಡುವುದಿಲ್ಲ . ಬದಲಾಗಿ, ಸಂದರ್ಭವನ್ನು ಹಗುರಾಗಿಸಲು ಗೇಲಿ ಮಾಡುತ್ತಾರೆ. ಗೇಲಿ ಮಾಡುತ್ತಾ ಮಾಡುತ್ತಾ ಗಂಭೀರ ವಸ್ತುವನ್ನು ಜೇನುತುಪ್ಪದಲ್ಲಿ ತೇಯ್ದ ಔಷಧಿಯನ್ನು ಮಗುವಿನ ಗಂಟಲಿಗಿಳಿಸಿದಂತೆ ನಮಗರಿವಿಲ್ಲದೇ ಗ್ರಹಿಸುವಂತೆ ಮಾಡುತ್ತಾರೆ.

ಉದಾಹರಣೆಗೆ ನೋಡಿ, ಗಂಡ, ಹೆಂಡತಿ ಇಬ್ಬರೂ ಹೊರಗೆ ದುಡಿಯುವ ಸಂಸಾರದಲ್ಲಿ , ವಿಶೇಷವಾಗಿ ಅಮೆರಿಕಾದಲ್ಲಿ , ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಬೇಬಿ ಸಿಟ್ಟರ್‌ ಬಳಿ ಬಿಟ್ಟು ವೇಗದ ಜೀವನಕ್ಕೆ ಜಾರಿಹೋಗುವುದನ್ನು 'ದಿನಚರಿ" ಎಂಬ ಕವಿತೆಯಲ್ಲಿ ವಿಡಂಬಿಸುತ್ತಾ ಬೇಬಿ ಸಿಟ್ಟರ್‌ಗೆ 'ಬೆಳಗಿನ ತಾಯಿ" ಎಂದು ಕರೆಯುತ್ತಾರೆ. ಪೀಟ್ಜಾ ಹಟ್‌ ಪೀಟ್ಜಾ ಹಟ್ಟಿಯಾಗುತ್ತದೆ. ಈ ರೀತಿಯ ಧಾಟಿಗೆ ಬೇಕಾದದ್ದು ತೀವ್ರತೆಗಳನ್ನೊಡ್ಡಿಕೊಂಡ ಕಾವ್ಯ ಮಾರ್ಗ ಮತ್ತು ಮೈ. ಶ್ರೀ. ನಟರಾಜರವರು ಅದನ್ನು ಸೂಕ್ತವಾಗಿ ದುಡಿಸಿಕೊಂಡಿದ್ದಾರೆ.

ಗೊರೂರು ಪ್ರತಿಷ್ಠಾನವು ನಟರಾಜರ 'ಮಧುಚಂದ್ರ, ಸಿರಿಕೇಂದ್ರ"ಕ್ಕೆ ಪ್ರಶಸ್ತಿಯನ್ನು ಘೋಷಿಸಿದ ಸಂಧರ್ಭದಲ್ಲಿ ದಟ್ಸ್‌ ಕನ್ನಡ ಡಾಟ್‌ ಕಾಮ್‌ನ ಸಂಪಾದಕರಾದ ಎಸ್ಕೆ. ಶಾಮಸುಂದರ್‌ರ ಅಭಿಲಾಷೆಯ ಮೇರೆಗೆ ನಾನು ನಟರಾಜರೊಂದಿಗೆ ನಡೆಸಿದ ಈ ಸಂದರ್ಶನವೂ ಅವರ ಕಾವ್ಯದ ವೈಖರಿಯ ಈ ವಿಶೇಷಣಗಳನ್ನೇ ಎದ್ದು ತೋರಿಸುತ್ತದೆ.

ದತ್ತಾತ್ರಿ : ನಿಮ್ಮ ಕಾವ್ಯದ ಉದ್ದೇಶವೇನು? ನಿಮ್ಮ ನಾಟಕಗಳ ರಚನೆಯ ಉದ್ದೇಶಕ್ಕಿಂತಾ ಇದು ಭಿನ್ನವೆ?

ಮೈ.ಶ್ರೀ.ನ: ಯಾವುದೋ ಒಂದು ಸಂದರ್ಭದಲ್ಲಿ ಮನಸ್ಸಿನಲ್ಲಿ ಮಿಂಚಿ ಮಾಯವಾಗಿಬಿಡುವ ಭಾವನೆಗಳು ಒಮ್ಮೊಮ್ಮೆ ಮತ್ತೆ ಮತ್ತೆ ಮರುಕಳಿಸಿ ಕಾಡಿದಾಗ ಉತ್ಕಟವಾದ ವಿಚಾರಮಂಥನ ನಡೆದುಹೋದಂತಾಗಿ ಆ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆನಿಸಿದಾಗ ನಾನು ಬರೆಯಲು ಕೂರುತ್ತೇನೆ. ಕವನದ ಯಾವುದೋ ಒಂದು ಸಾಲು ಮತ್ತೆ ಮತ್ತೆ ಒಳಕಿವಿಗೆ ಕೇಳಿಸುತ್ತದೆ. ಕಾರಿನಲ್ಲಿ ಹೋಗುವಾಗ, ಸ್ನಾನಮಾಡುವಾಗ ನನಗೆ ನಾನೇ ಹೇಳಿಕೊಳ್ಳುತ್ತಾ ಅದಕ್ಕೊಂದು ರೂಪ ಬಂದಾಗ ಅದನ್ನು ಗಣಕದ ತೆರೆಯಲ್ಲಿ ಬೆರಳಚ್ಚಿಸಿದಾಗ ಏನೋ ಒಂದು ಸಮಾಧಾನವಾಗುತ್ತದೆ. ನನ್ನ ಕಾವ್ಯಕ್ಕೆ ಉದ್ದೇಶವೊಂದಿದೆಯೇ ಎಂಬ ಪ್ರಶ್ನೆಯನ್ನೇ ನಾನು ಹಾಕಿಕೊಂಡಿಲ್ಲ. ಉದ್ದೇಶವಿಟ್ಟು ಬರೆಯಲು ಕೂತಾಗ ಅನೇಕ ಬಾರಿ ನಿರಾಶೆಯಾಗಿದೆ. ಅಂತರಾಳದ ಭಾವತರಂಗಕ್ಕೆ ಕಳ್ಳದಾರಿಯಾಂದನ್ನು ರಚಿಸಿ ಅದಕ್ಕೆ ಬಿಡುಗಡೆ ಕೊಡುವುದೇ ನನ್ನ ಕವನದ ಉದ್ದೇಶವೆನ್ನಬಹುದು.

ಇನ್ನು ನಾಟಕಗಳ ಬಗ್ಗೆ ಹೇಳುವುದಾದರೆ, ನಮ್ಮ ಸುತ್ತಮುತ್ತಲ ಕೆಲವು ಪಾತ್ರಗಳಿಗೆ ಜೀವಕೊಟ್ಟು ಅವನ್ನು ಕಾಲ್ಪನಿಕವೆನಿಸುವಂತೆ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸಿ ಓದುಗರಿಗೆ/ನೋಡುಗರಿಗೆ ಕನ್ನಡಿ ಹಿಡಿಯುವುದೇ ನನ್ನ ಮುಖ್ಯ ಉದ್ದೇಶ. ನಾಟಕ ರಚನೆಗೆ ಹೆಚ್ಚಿನ ತಯಾರಿ ಮತ್ತು ಹೆಚ್ಚಿನ ಸಮಯ ಬೇಕಾಗುತ್ತದೆ. ಪ್ರೇಕ್ಷಕರನ್ನು ನಗಿಸುತ್ತ ಅವರ ಮಿದುಳನ್ನು ಕೆಣಕಿ ಅವರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿ ಕೊಂಚ ಗೊಂದಲವನ್ನೂ ಉಂಟುಮಾಡಿ ಖುಷಿಪಡುವುದರಲ್ಲಿ ನನಗೆ ಮಜ ಬರುತ್ತದೆ!

ದತ್ತಾತ್ರಿ : ನೀವು ಗುರುತಿಸಿದಂತೆ ನಿಮ್ಮ ಓದುಗರು ಯಾರು? ಬೇರೆ ರೀತಿಯಲ್ಲಿ ಕೇಳಬೇಕೆಂದರೆ ಯಾರನ್ನು ಉದ್ದೇಶಿಸಿ ನೀವು ಕಾವ್ಯ ರಚನೆ ಮಾಡುತ್ತೀರಿ? ಅಮೆರಿಕನ್ನಡಿಗರೇ ಅಥವಾ ಭಾರತದ ಕನ್ನಡಿಗರೆ ? ದಿನಚರಿ, ಅಲ್ಲಿಲ್ಲಿ ಅಲ್ಲಾ, ಹ್ಯೂಸ್ಟನ್‌ ಹುಳಿ ಹೆಂಡದಂತಹಾ ಕವಿತೆಗಳು ಬಹಳಷ್ಟರ ಮಟ್ಟಿಗೆ ಇಲ್ಲಿಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಬರೆದಂತಿದೆ. ಈ ತರಹದ ಕವಿತೆಗಳನ್ನು ಕರ್ನಾಟಕದ ಓದುಗರು ಯಾವ ರೀತಿ ಸ್ವೀಕರಿಸುತ್ತಾರೆ?

ಮೈ.ಶ್ರೀ.ನ: ನಾನು ಗಂಭೀರವಾಗಿ ಬರೆಯಲು ಪ್ರಾರಂಭಿಸಿದ್ದು ಅಮೇರಿಕೆಗೆ ಬಂದಮೇಲೆ. ಹೀಗಾಗಿ ನನ್ನ ಬರಹದ ವಸ್ತುಗಳು ಇಲ್ಲೇ ಸೃಷ್ಟಿಯಾದವು. ಭಾರತದಲ್ಲಿ ಕಳೆದ ಬಾಲ್ಯ, ತಾರುಣ್ಯ, ಅಂದಿನ ಕರ್ನಾಟಕದ ಸಂದರ್ಭಗಳು ಬಿಡಿಸಲಾಗದ ಕೊಂಡಿಗಳಂತೆ ನನ್ನ ಮನಸ್ಸಿನಲ್ಲಿ ಬೆಸುಗೆಯಾಗಿರುವುದರಿಂದ ಅಲ್ಲಿಯ ಇಲ್ಲಿಯ ಎಲ್ಲರೂ ನನ್ನ ಗಮನದಲ್ಲಿರುತ್ತಾರೆ. ಒಮ್ಮೆ ಎಸ್‌.ಎಲ್‌. ಭೈರಪ್ಪನವರು ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದಾಗ ಈ ಪ್ರಸ್ತಾಪ ಬಂತು. ನನ್ನ ಕೆಲವು ಬರಹಗಳನ್ನು (ಕವನ ಮತ್ತು ನಾಟಕ) ಅವರಿಗೆ ಓದಲು ಕೊಟ್ಟೆ, 'ನಾನು ಮುಖ್ಯವಾಗಿ ಇಲ್ಲಿನ ಕನ್ನಡಿಗರನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತೇನೆ" ಎಂದಾಗ, ಬರಹಗಳನ್ನು ಓದಿ 'ನೀವು ಕೇವಲ ಅಮೇರಿಕದ ಕನ್ನಡಿಗರಿಗಾಗಿ ಬರೆಯುವ ಅಗತ್ಯವಿಲ್ಲ, ಎಲ್ಲ ಓದುಗರನ್ನೂ ಗಮನದಲ್ಲಿಟ್ಟುಕೊಂಡರೆ ಒಳ್ಳಿತು" ಎಂದು ಸಲಹೆ ಕೊಟ್ಟರು.

ನನ್ನ ವಸ್ತುಗಳ ಕಾರಣದಿಂದ ಅನೇಕ ಕವಿತೆಗಳು (ಮತ್ತು ನಾಟಕಗಳೂ ಸಹ) ಅಮೇರಿಕನ್ನಡಿಗರಿಗೆ ಹಿಡಿಸುವಷ್ಟು ಕರ್ನಾಟಕದ ಕನ್ನಡಿಗರಿಗೆ ಹಿಡಿಸದೇ ಇರಬಹುದು. ಆದರೆ, ಇತ್ತೀಚೆಗೆ ಅಮೇರಿಕಾ ಮತ್ತು ಭಾರತದ ನಡುವೆ ಸಂಪರ್ಕ ಹೆಚ್ಚಾಗಿರುವುದರಿಂದ ಸ್ವಲ್ಪ ಯತ್ನ ಮಾಡಿದರೆ ಯಾರು ಬೇಕಾದರೂ ಓದಿ ಮೆಚ್ಚ ಬಹುದು. ಕೆಲವೊಮ್ಮೆ ಕವನದ ಸಂದರ್ಭ ಅಮೇರಿಕವೇ ಆಗಿದ್ದರೂ ಅರ್ಥ ಮಾಡಿಕೊಂಡು ಖುಷಿ ಪಡುವುದು ಅಷ್ಟೇನೂ ಕಷ್ಟವಲ್ಲವೆಂಬುದು ನನಗೆ ಅರಿವಾಗಿದೆ. ಕವನಗಳಿಗೆ ಯಾವಾಗಲೂ ಮಿತವಾದ ಓದುಗರು (ಅಲ್ಲೇ ಆಗಲಿ, ಇಲ್ಲೇ ಆಗಲಿ), ನಾಟಕಗಳಿಗೂ ಅಷ್ಟೆ . ಇದನ್ನು ಗಮನದಲ್ಲಿಟ್ಟುಕೊಂಡರೆ, ನನ್ನ ಕವನಗಳಿಗೆ ದೊರಕಿರುವ ಸ್ವಾಗತ 'ಅದ್ಭುತವಾಗಿದೆ" ಎನ್ನಲು ಸಾಧ್ಯವಿಲ್ಲವಾದರೂ 'ತೃಪ್ತಿಕರವಾಗಿದೆ" ಎನ್ನಬಹುದು.

ದತ್ತಾತ್ರಿ : ನಿಮ್ಮ ಕಾವ್ಯದ ಮೇಲಿನ ಪ್ರಭಾವಗಳನ್ನು ಯಾವ ರೀತಿ ಗುರುತಿಸುತ್ತೀರಿ?

ಮೈ.ಶ್ರೀ.ನ : ಕನ್ನಡದ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ನನ್ನಲ್ಲಿ ಬಿತ್ತಿದವರು, ಮನಸ್ಸು ವಿಕಾಸವಾಗುವ ವಯಸ್ಸಿನಲ್ಲಿ ಅತ್ಯಂತ ಹೆಚ್ಚಿನ ಪ್ರಭಾವವನ್ನು ಬೀರಿದವರೆಲ್ಲ ನನ್ನ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಉಪಾಧ್ಯಾಯರುಗಳು. ಹಾಸನದ ಸರ್ಕಾರೀ ಬಾಲಕರ ಉನ್ನತ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದ (ದಿವಂಗತ) ನಂ. ಅಶ್ವತ್ಥನಾರಾಯಣ, ಸಂಸ್ಕೃತದ ಅಡಿಪಾಯ ಹಾಕಿದ ವಿದ್ವಾನ್‌. ನಾಗೇಂದ್ರ ಶಾಸ್ತ್ರಿ , ವಿದ್ವಾನ್‌ ಶ್ರೀನಿವಾಸ ದೇಶಿಕಾಚಾರ್ಯ, ವ್ಯಾಕರಣ ಪಂಡಿತ ತಿರು ಶ್ರೀನಿವಾಸಾಚಾರ್ಯ, ಹಿಂದೀ ಸಾಹಿತ್ಯದ ಪರಿಚಯ ಮಾಡಿಸಿದ ಶ್ರೀ. ಕೆ. ರಾಮಚಂದ್ರಮೂರ್ತಿಗಳು ಇವರುಗಳಲ್ಲಿ ಮುಖ್ಯರು. ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ ಮುಂತಾದವರನ್ನು ಓದಿದ್ದೇನಾದರೂ ಸಾಹಿತ್ಯ ವಿದ್ಯಾರ್ಥಿಯಾಗಿ ಯಾರ ಕಾವ್ಯವನ್ನೂ ಅಭ್ಯಾಸ ಮಾಡಿಲ್ಲ. ಲೇಖಕನಾಗಿ ಯಾರಿಂದಲೂ ಪ್ರಭಾವಿತನಾಗಬಾರದೆಂಬುದೇ ನನ್ನ ಗುರಿಯಾಗಿರುವುದರಿಂದ ಪ್ರಯತ್ನಪೂರ್ವಕವಾಗೇ ಸ್ವತಂತ್ರನಾಗಿರಲು ಹೆಣಗಿದ್ದೇನೆ.

ದತ್ತಾತ್ರಿ : ವರ್ತಮಾನಕ್ಕೆ ಬಹಳಷ್ಟು ಸ್ಪಂದಿಸುವ ಕವಿಗಳು ನೀವು. ಡಾಟ್‌ಕಾಂಗಳು ನೀರಿನ ಗುಳ್ಳೆಗಳಂತೆ ಒಡೆದ ಬಗ್ಗೆ, ವೀಸಾದ ಅವಧಿ ಮುಗಿದು ಹಿಂದಿರುಗಿ ಹೋಗುವ ಬಗ್ಗೆ ಇಬ್ಬಗೆ, ಸೆಪ್ಟೆಂಬರ್‌ ಹನ್ನೊಂದು 2001ರ ಭಯೋತ್ಪಾದಕರ ಧಾಳಿ ಕುರಿತಾಗಿ, ಗುಜರಾತಿನಲ್ಲಿ ನಡೆದ ಹಿಂಸಾಚಾರ, ಜರೂಸಲೇಮಿನಲ್ಲಿ ಯುವತಿಯೋರ್ವಳು ಬಾಂಬುಗಳನ್ನು ಬಿಗಿದುಕೊಂಡು ಆತ್ಮಹತ್ಯಾದಳದ ಸದಸ್ಯೆಯಾಗಿ ಸಿಡಿದುಹೋದದ್ದು, ಹೀಗೆ ನಿಮ್ಮ ಕವಿತೆಗಳು ಅನೇಕಾನೇಕ ವರ್ತಮಾನಕ್ಕೆ ಪ್ರತಿಕ್ರಿಯೆಯಾಗಿ ಮೂಡಿಬರುತ್ತವೆ. ಕವಿಯಾಬ್ಬ ವರ್ತಮಾನಕ್ಕೆ ಸ್ಪಂದಿಸಲೇಬೇಕಾದ ಅಗತ್ಯವಿದೆಯೇ?

ಮೈ.ಶ್ರೀ.ನ: ನನಗೆ ವರ್ತಮಾನ ಮುಖ್ಯ. ನನ್ನ ಅನುಭವಕ್ಕೆ ಸಿಕ್ಕುವ, ನನ್ನ ಶೈಲಿಗೆ ದಕ್ಕುವ (ಅಂದರೆ, ಹಾಸ್ಯ ಮತ್ತು ವ್ಯಂಗ್ಯಕ್ಕೆ ಒಗ್ಗುವ) ವಸ್ತುಗಳಿಗೆ ನನ್ನ ಮನಸ್ಸು ಥಟ್ಟನೆ ಸ್ಪಂದಿಸುತ್ತದೆ. 'ಎಲ್ಲ ಕವಿಗಳೂ ವರ್ತಮಾನಕ್ಕೆ ಸ್ಪಂದಿಸಬೇಕೇ?" ಎಂದರೆ, ಅಗತ್ಯವಿಲ್ಲ ಎನ್ನುತ್ತೇನೆ. ಅನೇಕರಿಗೆ, ಪ್ರಕೃತಿ, ಪ್ರೇಮ, ಪ್ರೀತಿ, ರಾಗ-ದ್ವೇಷ ಮುಂತಾದ ಅನೇಕ ವಸ್ತುಗಳು ಹೆಚ್ಚು ಪ್ರಿಯವಾಗಬಹುದು. ವರ್ತಮಾನದಿಂದ ಸ್ಫೂರ್ತಿ ಪಡೆದರೂ ಯಾವುದೋ ಒಂದು ಸಾರ್ವಕಾಲಿಕ, ಸಾರ್ವದೇಶಿಕ ಸತ್ಯವನ್ನು ಅರಸುವುದೇ ಕಾವ್ಯದ ಮೂಲ ಉದ್ದೇಶವಲ್ಲವೇ?

ದತ್ತಾತ್ರಿ : ಮಾಧ್ಯಮಗಳ ದಬ್ಬಾಳಿಕೆಯ ಈ ಯುಗದಲ್ಲಿ ಅವುಗಳಿಂದ ಕೊಚ್ಚಿಹೋಗಿ ಅಂತರಂಗಕ್ಕೆ ಕಿವಿ ಇಡುವ ಸೂಕ್ಷ್ಮಕ್ಕಿಂತಾ ಹೊರಗಿನಿಂದ ಹೇರಿದ್ದನ್ನು ಒಪ್ಪಿಕೊಂಡು ಅವುಗಳಿಗೇ ಮತ್ತು ಅವು ಅಪೇಕ್ಷಿಸಿದಂತೆಯೇ ಸ್ಪಂದಿಸುವ ಅಪಾಯ ಈ ಜಾಗತಿಕ ಪ್ರಪಂಚದ ಪ್ರತಿಯಾಬ್ಬ ಕವಿಗೂ ಇದೆ. ಒಬ್ಬ ಕವಿ ಇದನ್ನು ಹೇಗೆ ಮೀರಿ ನಿಲ್ಲಬಹುದು?

ಮೈ.ಶ್ರೀ.ನ : ಕಾಡಿಗೆ ಹೋದರೂ ನಮ್ಮನ್ನು ಅಟ್ಟಿ ಬರುವ 'ಮಾಧ್ಯಮ-ರಕ್ಕಸ"ನ ಹಿಡಿತದಿಂದ ಯಾರಿಗೂ ಬಿಡುಗಡೆ ಇಲ್ಲ . ಮಾಧ್ಯಮ-ರಕ್ಕಸನ ಪ್ರಭಾವದಿಂದ ಕ್ಷಣಕಾಲವಾದರೂ ಹೊರಬಂದು ಮಿದಿಳಿನ ಸ್ವಿಚ್ಚನ್ನು 'ಆಫ್‌" ಮಾಡಿ ಹೃದಯದ ಸ್ವಿಚ್ಚನ್ನು 'ಆನ್‌" ಮಾಡಿದರೆ ಅಂತರಂಗದ ಮಾತು ಕೇಳದೇ ಇರುವುದಿಲ್ಲ . ನಮ್ಮಲ್ಲಿರುವ ಕವಿ, ನಮ್ಮ ಮೇಲಿನ ಸ್ವಾಮ್ಯವನ್ನು ಸಾಧಿಸ ಬಯಸುವ ವ್ಯಕ್ತಿಗಿಂತ ಶಕ್ತನಾದಾಗ ಮಾತ್ರ ಅಂತರಂಗದ ಸೂಕ್ಷ್ಮ ಉಳಿಯುತ್ತದೆ.

ಮಾಧ್ಯಮಗಳನ್ನು ಸುಮ್ಮನೇ ದೂರಬೇಕಿಲ್ಲ . ವಿ-ಅಂಚೆಯ ಮಾಧ್ಯಮದಿಂದ ಕೆಲವು ಹಿಂದೊಮ್ಮೆ ಊಹಿಸಲೂ ಆಗದಂತಿದ್ದ ಅನುಕೂಲಗಳು ನಮಗಿಂದು ದೊರಕಿವೆ. ನಾವು ಬರೆದ ಕವನವೊಂದನ್ನು ಬೇರೆಲ್ಲೋ ಇರುವ ಮಿತ್ರರೊಂದಿಗೆ ಹಂಚಿಕೊಳ್ಳಲು ಎಷ್ಟೆಲ್ಲ ಅಡೆತಡೆಗಳಿದ್ದವು ? ಈಗ ? ಇವತ್ತು ಬರೆದ ಕವಿತೆ ಕೆಲವೇ ಘಂಟೆಗಳಲ್ಲಿ ಜಾಲದಲ್ಲಿ ಪ್ರಕಟವಾಗಿ, ಮಾರನೇದಿನವೇ ಗೋಳದ ಮತ್ಯಾವುದೋ ಮೂಲೆಯಲ್ಲಿರುವ ಮಿತ್ರ ಅದನ್ನೋದಿ ತನ್ನ ಪ್ರತಿಕ್ರಿಯೆಯನ್ನೂ ಜಾಲದಲ್ಲಿ ಪ್ರಕಟಿಸುವ ಇಂದಿನ ಸಾಧ್ಯತೆಯನ್ನು ನೆನೆಸಿಕೊಂದರೆ ಮೈ ಝುಂ ಎನ್ನುತ್ತದೆ!

ದತ್ತಾತ್ರಿ : ನೀವು ಬಹಳಷ್ಟು ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವವರು. ಪಶ್ಚಿಮದಲ್ಲಿ ಬಾಳುತ್ತಾ ಪೂರ್ವದ ಭಾಷೆಯಲ್ಲಿ ಮತ್ತು ಪೂರ್ವದ ಸಂಸ್ಕೃತಿಗೆ ತಕ್ಕಂತೆ ಅಭಿವ್ಯಕ್ತಗೊಳ್ಳಬೇಕಾದರೆ ಒಂದು ರೀತಿಯಲ್ಲಿ ಬೇರೆ ನಿಂತಂತೆ ನಿಮಗನ್ನಿಸುವುದಿಲ್ಲವೇ ? ಇಲ್ಲಿಯ ಕನ್ನಡ ಕವಿಗಳನ್ನು ಕನ್ನಡ ನಾಡಿನಲ್ಲಿ ಯಾವ ರೀತಿಯಲ್ಲಿ ಗುರುತಿಸಬೇಕು ಎಂದು ಬಯಸುತ್ತೀರಿ ?

ಮೈ.ಶ್ರೀ.ನ: ಮೊದಲ ಪೀಳಿಗೆಯ ವಲಸೆಗಾರರ ಜೀವನ ಇಬ್ಬಗೆಯ ಸಂಕಟದ ಜೀವನ. ನಮ್ಮ ಸಂಕಟವೇ ನಮಗೆ ವರವೂ ಹೌದು. ನಮಗೆ ಎರಡು ಸಂಸ್ಕೃತಿಗಳ ಮತ್ತು ಎರಡು ಭಾಷೆಗಳ ಸೂಕ್ಷ್ಮ ಪರಿಚಯವಿದೆ. ಕವಿ ಎಲ್ಲೇ ಇದ್ದರೂ ಒಂದು ರೀತಿಯಲ್ಲಿ ಬೇರೆಯಾಗಿ ನಿಲ್ಲಲೇ ಬೇಕಾಗುತ್ತದೆ. ಕನ್ನಡನಾಡಿನಲ್ಲಿರುವ ಅನೇಕ ಕನ್ನಡ ಕವಿಗಳನ್ನೇ ಕನ್ನಡ ಓದುಗರು ಗುರುತಿಸಿಲ್ಲ , ಗಮನಿಸಿಲ್ಲ . ಹೀಗಿರುವಾಗ ಎಲ್ಲೋ ನೆಲೆಸಿ ತಮ್ಮ ಮನಸ್ಸಿನ ತೃಪ್ತಿಗಾಗಿ ಬರೆದುಕೊಳ್ಳುವ ನಮ್ಮ-ನಿಮ್ಮಂಥಾ ಕನ್ನಡ ಕವಿಗಳನ್ನು ಕನ್ನಡಿಗರು ಗುರುತಿಸಲು ಹೆಚ್ಚು ಸಮಯ ಹಿಡಿದರೆ ಆಶ್ಚರ್ಯವೇನಿಲ್ಲ . ಆದರೂ, ತಂದೆ-ತಾಯಿಗಳ ವಿರುದ್ಧ ತಿರುಗಿ ಬೀಳುವ ಹದಿಹರೆಯದ ಮಕ್ಕಳೂ ಸಹ ತಂದೆ-ತಾಯಿಗಳ ಮಾನ್ಯತೆ ಬಯಸುವಂತೆ, ದೇಶಬಿಟ್ಟು ಬಂದರೂ ತವರಿನ ಆದರ ಪ್ರೀತಿಗಳನ್ನು ನಾವೂ ಬಯಸುತ್ತೇವೆ. ಹಾಗೆ ಒಂದು ಪ್ರಶಸ್ತಿಯೋ ಗೌರವವೋ ತವರಿನ ಮಾನ್ಯತೆಯಾಂದಿಗೆ ಸಿಕ್ಕಾಗ ಧನ್ಯತೆಯ ಸಮಾಧಾನ ಮತ್ತು ಸಂತೋಷ ಸಿಕ್ಕುವುದರಲ್ಲಿ ಅನುಮಾನವಿಲ್ಲ .

ಹೊರನಾಡ ಮತ್ತು ಹೊರದೇಶವಾಸೀ ಕನ್ನಡ ಲೇಖಕರನ್ನು ಕರ್ನಾಟಕ ಸರ್ಕಾರ ಮತ್ತು ಜನತೆ ಕಡೆಗಣಿಸದೇ ಗುರುತಿಸಿದಾಗ ಮಾತ್ರ ಕನ್ನಡ ಅಂತರರಾಷ್ಟ್ರೀಯ ಭಾಷೆಯಾಗುವುದು ಸಾಧ್ಯ. ಸರ್ಕಾರ ಮತ್ತು ಜನತೆ ಅಷ್ಟೇ ಅಲ್ಲ, ಕನ್ನಡನಾಡಿನ ಪತ್ರಿಕೆಗಳು, ಕನ್ನಡ ಸಾಹಿತ್ಯ ಪರಿಷತ್ತು , ಖಾಸಗೀ ಸಂಸ್ಥೆಗಳು, ಪ್ರತಿಷ್ಠಾನಗಳು, ವ್ಯಾಪಾರೀ ಸಂಸ್ಥೆಗಳು, ಪ್ರಕಾಶಕರು, ಪುಸ್ತಕ ಭಂಡಾರಗಳು ಮತ್ತು ಪುಸ್ತಕ ಮಾರಾಟಗಾರರುಗಳೂ ಸಹ ಹೊರನಾಡ/ಹೊರದೇಶದ ಕನ್ನಡ ಲೇಖಕರ ಬಗ್ಗೆ ಯೋಚಿಸಬೇಕಾಗಿದೆ, ಆಸಕ್ತಿ ವಹಿಸ ಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ 'ಹಿತ್ತಲಗಿಡ ಮದ್ದಲ್ಲ" ಎಂಬ ಧೋರಣೆಯನ್ನು ಬಿಟ್ಟು ಅಮೇರಿಕನ್ನಡ ಸಂಘ ಸಂಸ್ಥೆಗಳು ಸಹ ತಂತಮ್ಮ ಸದಸ್ಯರ ಪೈಕಿ ಬರೆದು ಪ್ರಕಟಿಸುವ (ಬೆರೆಣಿಕಿಯಷ್ಟೇ ಇರುವ) ಮಂದಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಪರಂಪರೆ ಬರಬೇಕಾಗಿದೆ. ಇವೆಲ್ಲಾ ಆದಾಗ ಬರಹಗಾರರನ್ನು ಗುರುತಿಸಿದಂತಾಗುತ್ತದೆ, ಹೊರದೇಶದ ಕಷ್ಟಕರ ವಾತಾವರಣದಲ್ಲೂ ಕನ್ನಡ ಸಾಹಿತ್ಯ ಬೆಳೆಯುತ್ತದೆ, ಉಳಿಯುತ್ತದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X