ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ಹಾಡುಹಾದಿಯ ಬೆಚ್ಚನೆಯ ನೆನಪು

By Staff
|
Google Oneindia Kannada News

ನಮ್ಮ ಮನೆಯಲ್ಲಿ ಎಲ್ಲರಿಗೂ ಹಾಡಿನ ಹುಚ್ಚು. ಹಾಗೆಂದರೆ ಹಾಡುವ ಹುಚ್ಚಲ್ಲ , ಹಾಡು ಕೇಳುವ ಹುಚ್ಚು. ಹಾಡು ಯಾವುದಾದರೂ ಆಗಿರಲಿ, ಸಾಹಿತ್ಯ, ಸಂಗೀತ ಹಿತ ಮಿತವಾಗಿ, ಹದವಾಗಿ ಬೆರೆತ ಸುಮಧುರ ಗೀತೆಗಳು. ಇಂತಹ ಗೀತೆಗಳಿಗೆ ಭಾಷೆಯ ಬೇಲಿ ಇಲ್ಲ. ನಮ್ಮವರೇ ಆದ ಪುತ್ತೂರು ನರಸಿಂಹ ನಾಯಕ್‌, ಸುಬ್ಬಣ್ಣ, ಅಶ್ವಥ್‌, ಸಂಗೀತಾ ಕಟ್ಟಿ, ಛಾಯಾ, ಅರ್ಚನಾ ಉಡುಪರು ಹಾಡಿದ್ದಾದರೂ ಸರಿ, ನಮ್ಮ ಗಡಿ ದಾಟಿದ ಕಿಶೋರ್‌, ಆಶಾ, ಹರಿಹರನ್‌, ಚಿತ್ರಾ, ಜಗಜೀತಸಿಂಗರಾದರೂ ಸರಿಯೇ, ಪೂರ್ತಿ ಪರಕೀಯ ಫರಂಗಿಯವರಾದ ಎಲ್ಟನ್‌ ಜಾನ್‌, ಜಾನಿ ಹೇಟ್ಸ್‌, ಫಿಲ್‌ ಕಾಲಿನ್ಸ್‌, ಬೋನೊ, ರಿಕಿ, ಎಮಿನೆಮ್‌ಗಳಾದರೂ ಪರವಾಗಿಲ್ಲ. ಭಾವನೆಗಳ ಹೂದೋಟದಿಂದ ಮಾಧುರ್ಯದ ಮಕರಂದ ಹೊತ್ತು ಬರುವ ಈ ಸಪ್ತವರ್ಣಗಳ ಸುಂದರ ರಾಗ ಭ್ರಮರಗಳಿಗೆ ನಮ್ಮ ಮನೆ, ಮನಗಳಲ್ಲಿ ಸದಾ ಕೆಂಪು ಕಂಬಳಿಯ ಸ್ವಾಗತ !

ತೀರಾ ಇತ್ತೀಚೆಗಿನ ಕೆಲವು ಹಾಡುಗಳನ್ನು ಹೊರತುಪಡಿಸಿದರೆ ನಾನು ಕೇಳದ ಹಾಡುಗಳಿಲ್ಲ. ಒಮ್ಮೆ ಆ ಹಾಡು ನನ್ನ ಮನಹೊಕ್ಕಿತೆಂದರೆ ಸರಿ, ಅದು ಹೇಗೋ ಅದರ ಸಾಹಿತ್ಯವೂ ನನ್ನ ಮೆದುಳಿನಲ್ಲಿ ಸ್ಥಾಯಿಯಾಗಿ ನಿಂತು ಬಿಡುತ್ತದೆ. ಏಳೇ ನಂಬರಿರುವ ದೂರವಾಣಿ ಸಂಖ್ಯೆಯನ್ನು ನಿಮಿಷದಲ್ಲಿ ಮರೆಯುವ ನಾನು ಹತ್ತಾರು ಸಾಲುಗಳ ನಾ ಮೆಚ್ಚಿದ ಅದೆಷ್ಟೆಷ್ಟೋ ಗೀತೆಗಳನ್ನು ಎಷ್ಟೋ ವರುಷಗಳ ನಂತರವೂ ಇಂದಿಗೂ ಎದೆಗೂಡಲ್ಲಿ ಜತನದಿಂದ ಕಾದಿಟ್ಟುಕೊಂಡಿದ್ದೇನೆ! ಸಂಗೀತಕ್ಕಿರುವ ಮಹಾನ್‌ ಶಕ್ತಿಯೇ ಅಂತಹದಿರಬೇಕು. ಅರವತ್ತರ ಇಳಿವಯಸ್ಸಿನಲ್ಲೂ ನಮ್ಮಮ್ಮ ಹರಿಕಥಾಮೃತ ಸಾರದ ಮೂವತ್ತಮೂರು ಸಂಧಿಗಳನ್ನು ಚಾಚುತಪ್ಪದೆ ಹೇಳುತ್ತಿದ್ದುದು ಇವತ್ತಿಗೂ ನನಗೆ ಬಿಡಿಸಲಾರದ ಒಗಟು! ಇಂತಹ ನೆನಪಿನ ಶಕ್ತಿಯಿರುವ ತುಂಬಾ ಜನರನ್ನು ನಾನು ಕೇಳಿಬಲ್ಲೆನೇ ಹೊರತು ನೋಡಿದವಳಲ್ಲ.

ಕನ್ನಡ ಚಿತ್ರಗೀತೆಗಳನ್ನು ಕೇಳಿ ಬಹಳ ದಿನಗಳಾಗಿತ್ತು. ಅಂತರ್ಜಾಲದ ತಾಣಗಳಲ್ಲಿ, ನಮ್ಮದೇ ಸಂಗ್ರಹಗಳಲ್ಲಿ ಹೊಸದಾಗಿ ಬಂದಿರುವ ಚಿತ್ರಗೀತೆಗಳನ್ನು ಅರಸುತ್ತಿದ್ದಾಗ ಸಿಕ್ಕಿದ್ದು ಇದು- ‘ನೋಡ್ಕೊಂಡ್‌ ಬಾರೋ ಅಂದ್ರೆ ನೀ ಮಾಡ್ಕೊಂಡ್‌ ಬಂದ್ಯಲ್ಲೋ’. ಇದು ಯಾವ ಸೀಮೆ ಸಾಹಿತ್ಯವೋ ಮಾರಾಯ? ಅಂತ ಹುಡುಕುತ್ತಾ ಹೋದ ಹಾಗೆ ಕಣ್ಣಿಗೆ ಬಿದ್ದವು ಇಂತಹುದೇ ಹತ್ತು, ಹಲವಾರು....

ಹಾಗೆಂದು ನಾನೇನೂ ಹಳೆಯದು ಮಾತ್ರ ಹೊನ್ನು, ಹೊಸದು ಬರೀ ಮಣ್ಣು ಎಂದು ಗೊಣಗುವ ಮಡಿವಂತರ ಜಾತಿಗೆ ಸೇರಿದವಳೇನಲ್ಲ. ‘ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ, ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ, ತುತ್ತಾ ? ಮುತ್ತಾ ? ಗೊತ್ತಾ ?’ ಎಂದು ಛೇಡಿಸುವ ಹಂಸಲೇಖರ ತುಸು ಪೋಲಿತನದ ಅಂಚಿಗೆ ತಾಗಿಯೇ ಬಿಟ್ಟಿತೇನೋ ಅನ್ನಿಸುವ ತುಂಟ ಗೀತೆಗಳು, ‘ಅಲ್ಲಿಗೂ ಇಲ್ಲಿಗೂ ಸೇತು, ಮೌನ ಮೌನದ ನಡುವೆ ಮಾತು’ ಎನ್ನುವ ಎಚ್‌.ಎಸ್‌.ವೆಂಕಟೇಶ್‌ಮೂರ್ತಿಯವರ ಮುತ್ತಿನಂತಹ ಸಾಲುಗಳು, ‘ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ, ಸುಳ್ಳಿನ ನಿಜವೂ ನಿಜವಲ್ಲ’ ಎನ್ನುವ ಉಪೇಂದ್ರನ ಪದಬಂಧದಂತಹ ಹಾಡುಗಳೂ ನನಗೆ ಇಷ್ಟವೇ. ಆಗ ತಾನೇ ಅರಳಿ ನಿಂತ ದುಂಡು ಮಲ್ಲಿಗೆ ಹೂವಿನಂತಹ ನವಿರಾದ ಪದಗಳನ್ನು ಹೆಕ್ಕಿ, ಲಾಲಿತ್ಯಮಯವಾದ ಚಿಗುರು ಭಾಷೆಯಲ್ಲಿ, ಹುಣ್ಣಿಮೆ ಕವಿ ಕಲ್ಯಾಣ್‌ ರಚಿಸುವ ಗೀತೆಗಳಂತೂ ನನಗೆ ಪರಮಪ್ರಿಯ. ವಿಪರ್ಯಾಸವೆಂದರೆ ಈ ‘ನೋಡ್ಕೊಂಡ್‌ ಬಾರೋ’ ಪದ ಮಂದಿರವೂ ಕೂಡ ಇದೇ ಕಲ್ಯಾಣ ನಿರ್ಮಾಣವೇ!

ಆಗ ವಸಂತ ಕವಲಿಯವರ ನಿರ್ದೇಶನದಲ್ಲಿದ್ದ, ಭದ್ರಾವತಿ ಆಕಾಶವಾಣಿಯಲ್ಲಿ ಜಿ. ಕೆ. ರವೀಂದ್ರ ಕುಮಾರ್‌, ಶ್ರೀನಿವಾಸ ಪ್ರಸಾದ್‌, ಸುಧೀಂದ್ರ, ರಾಮಚಂದ್ರ, ಚಿನ್ನಪ್ಪ, ಛಾಯಾ ಮುಂತಾದ ಉತ್ಸಾಹೀ ಯುವ ಉದ್ಘೋಷಕರು ಕಾರ್ಯಕ್ರಮ ಪ್ರಸಾರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದ ಕಾಲ. ಹಾಡುಗಳು ಅವೇ ಹಳೆಯವಾದರೂ ಅವುಗಳನ್ನು ಕೇಳುಗರ ಮುಂದೆ ಚಿತ್ರ ರಂಜಿನಿ, ಸವಿನೆನಪು, ರಾಗಲತಾ, ನೆನಪು ನಿನಾದ... ಮುಂತಾದ ನವನವೀನ ಶೀರ್ಷಿಕೆಯಲ್ಲಿ ಆಕರ್ಷಕ ನಿರೂಪಣೆಯಾಂದಿಗೆ ಪ್ರಸ್ತುತ ಪಡಿಸಲಾಗುತ್ತಿತ್ತು.

ಛಾಯಾಗೀತ್‌, ಮನರಂಜನ್‌, ಫೌಜಿ ಬಾಯಿಯೋಂಕೆ ಲಿಯೆ, ಭೂಲೆ ಬಿಸರೆ ಗೀತ್‌ ಮುಂತಾದ ಹಿಂದಿ ಕಾರ್ಯಕ್ರಮಗಳ ನಡುವೆ ಕಳೆದುಹೋಗಿದ್ದ ನಮ್ಮಲ್ಲಿ ಕನ್ನಡ ಗೀತೆಗಳ ಮೋಹ ಹುಟ್ಟಲು ಕಾರಣರಾದವರು ಈ ಬಂಗಾರ ಕಂಠದ ನಿರೂಪಕರೇ. ಈಗಿನಂತೆ ಆಗ ಚಿತ್ರಗೀತೆಗಳು ವಿಫುಲವಾಗಿ ಕೇಳಲು ಸಿಗುತ್ತಿರಲಿಲ್ಲ. ಹದಿನೈದು ನಿಮಿಷಗಳ ಕಾರ್ಯಕ್ರಮದಲ್ಲಿ ಎರಡು ಅಥವಾ ಮೂರು ಹಾಡುಗಳನ್ನು ಕೇಳಲು ನಾವು ಅದೆಷ್ಟು ಕಾತುರದಿಂದ ಕಾಯುತ್ತಿದ್ದೆವೋ? ‘ರಾಮನ ಅವತಾರ..ರಘುಕುಲ ಸೋಮನ ಅವತಾರ’ದಂತಹ ದೊಡ್ಡ ನುಡಿಗಳ ಹಾಡು ಬಂದರೆ ಅವತ್ತು ಒಂದೇ. ಅವತ್ತಿನ ಅನೌನ್ಸರ್‌ನನ್ನು ನಾವು ಇಡೀ ದಿನ ಬೈದುಕೊಳ್ಳುತ್ತಿದ್ದೆವು.

ನಮ್ಮ ಟೈಪಿಂಗ್‌, ಹಿಂದಿ ಕ್ಲಾಸುಗಳ ಸಮಯ ನಿಗದಿ ಮಾಡುತ್ತಿದ್ದವು ಇವೇ ಚಿತ್ರಗೀತೆಗಳೇ. ‘ನೀನು ಎರಡನೆಯ ಹಾಡು ಮುಗಿದೊಡನೆಯೇ ಮನೆಯಿಂದ ಹೊರಬಂದಿರು ಎಂದೋ, ಅಥವಾ ಮೂರನೆಯ ಹಾಡಿನ ಶುರುವಿನಲ್ಲಿ ನಾನೇ ಹೊರಟು ಬರುತ್ತೇನೆ ಎಂದೋ ಗೆಳತಿಗೆ ಮೊದಲೇ ನಿರ್ದೇಶನ ದೊರಕಿರುತ್ತಿತ್ತು. ಈಗಿನಂತೆ ಮನರಂಜನೆಗೆ ನೂರೆಂಟು ಚಾನಲ್ಲುಗಳಿಲ್ಲದ ಕಾಲವದು. ಎಲ್ಲರ ಮನೆಯಲ್ಲೂ ಅದೇ ಸಮಯಕ್ಕೆ ಅದೇ ಹಾಡು ಮೊಳಗುತ್ತಿದ್ದುದರಿಂದ ಯಾರೊಬ್ಬಳಿಗೂ ಸಮಯ ತಪ್ಪುವ ಭಯವಿರಲಿಲ್ಲ.

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೇ ಮರೆಯಲಿ?

ನಮ್ಮದು ಆಗ ಕನಸು ಕಾಣುವ ವಯಸ್ಸು. ಬರೆದಿದ್ದೆಲ್ಲಾ ಕವಿತೆಯಾಗಿಸುವ ಹುಮ್ಮಸ್ಸು. ಈ ಹಾಡುಗಳನ್ನು ಕಿರುನಗುತ್ತಾ ಹಾಡುತ್ತಿದ್ದ ನಾಯಕರಾದರೂ ಯಾರು? ತಂದೆ ತಾಯಿ ಹಾಕಿದ ಗೆರೆ ದಾಟದ, ಅಕ್ಕ ತಂಗಿಯರ ಮುದ್ದಿನ, ನೆರೆ ಹೊರೆಯವರ ಕಣ್ಣ ಬೆಳಕಾದ, ಕೈ ಹಿಡಿದ ಹೆಣ್ಣಿನ ಮನ ನೋಯದಂತೆ ನಡೆಯುವ ಜಾಣಮರಿ ಗಂಡಂದಿರು! ಈಗಿನಂತೆ ಸಿಗರೇಟಿನ ಹೊಗೆಯುಗುಳುತ್ತಾ , ಕುಡಿದ ಗ್ಲಾಸನ್ನು ಟಳಾರೆಂದು ಬಿಸಾಕುತ್ತಾ , ಕೆಂಡದುಂಡೆಯಂತಹ ಕಣ್ಣಿನಿಂದ ಕೆಕ್ಕರಿಸಿಕೊಂಡು ನೋಡುವ ಇಂದಿನ ಹೀರೋಗಳು ಅಂದು ಔಷಧಿಗೆ ಬೇಕೆಂದರೂ ಸಿಗುತ್ತಿರಲಿಲ್ಲ.

ಜೀವನವೆಲ್ಲಾ ಗೋಕುಲವಾಗಿ ಒಲವೇ ಯಮುನಾ ನದಿಯಾಗಿ
ನಾವೇ ರಾಧಾಮಾಧವರಾಗಿ ಆಡುವ ಮಾತೇ ಪ್ರೇಮವಿಲಾಸ...

ಸಂಗಾತಿಯಾಗುವವನು ಯಾರೆಂದೇ ಗೊತ್ತಿರದಿದ್ದರೂ ಅವನ ಬಗ್ಗೆ ಬಣ್ಣ ಬಣ್ಣದ ಕನಸು ಹೆಣೆಯುತ್ತಿದ್ದ ನಮ್ಮ ಮತ್ತೇರಿದ ಮನದಾಸೆಯ ಹಕ್ಕಿ ಗರಿಗೆದರಿ ಹಾರಿ ಹೋಗಲು ಇಂತಹ ಹಾಡಿನ ಒಂದೇ ಒಂದು ಸಣ್ಣ ಸಾಲು ಸಾಕಿತ್ತು ! ಅಲ್ಲಿ, ಇಲ್ಲಿ, ಎಲ್ಲೆಲ್ಲೋ ಅಲೆಯುತ್ತಿದ್ದ, ಸ್ವಪ್ನಲೋಕ ವಿಹಾರಿಗಳಾಗಿದ್ದ ನಮ್ಮ ಹರಯದ ಹುರುಪು ತುಂಬಿದ ಹೃದಯಗಳನ್ನು ಎಸ್ಪಿ ನಗು ತುಂಬಿದ ಕಳ್ಳ ದನಿಯಲ್ಲಿ ಕೆಣಕುತ್ತಿದ್ದ-

ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಕೇಳಿತು
ಅತ್ತ ಇತ್ತ ಆಡುವ ಮನಸು ಏನೋ ಹೇಳಿತು...

ಎಲಾ, ಇವನ...ನನ್ನೆದೆಯಲ್ಲಿ ನನಗೇ ಗೊತ್ತಾಗದಂತೆ ಬಚ್ಚಿಟ್ಟುಕೊಂಡಿರುವ ಗುಟ್ಟು ಇವನಿಗೆ ತಿಳಿದಿದ್ದಾದರೂ ಹೇಗೆ? ಹೇಳುವುದೋ ಬೇಡವೋ ಎಂದು ಮನಸ್ಸು ಗಲಿಬಿಲಿಗೊಳ್ಳುತ್ತಿರುವಂತೆ ಅಂತರಾಳದಲ್ಲೊಂದು ಮಧುರ ದನಿ ಮೆಲ್ಲನೆ ಉಲಿದೇ ಬಿಡುತ್ತಿತ್ತು-

ತಗಲದೇ ನಿನ್ನ ಕೈಗಳಿಗೀಗ ವಿರಹದ ಈ ಬಿಸಿಯುಸಿರು?
ನನ್ನಯ ದೇಹದ ನರನಾಡಿಗಳು ಮಿಡಿದಿದೆ ನಿನ್ನಯ ಹೆಸರು!
ಹಾಡು...ಹಾಡು...ಹಾಡು...

ನಮ್ಮ ನೋಟ್‌ಬುಕ್ಕಿನ ಖಾಲಿ ಜಾಗದಲ್ಲೆಲ್ಲ ನೂರಾರು ಹಾಡುಗಳ ತುಂಡು ತುಂಡು ಎಳೆಗಳು! ಮುದ ತುಂಬಿದ ನಮ್ಮ ಅಮಾಯಕ ಭಾವ ಪ್ರಪಂಚಕ್ಕೆ ಕಚಗುಳಿಯಿಡುವಂತಹ ಮನೋಹರ ಸಾಲುಗಳು! ಅಚ್ಚ ಇಂಗ್ಲೀಷಿನ ಕಠಿಣ ಪ್ರಶ್ನೋತ್ತರಗಳ ನಟ್ಟ ನಡುವೆ ‘ಸಪ್ತಪದಿ ಈ ನಡೆಯಾಯ್ತು, ಸಂಜೆ ರಂಗು ಆರತಿಯಾಯ್ತು’ ಎಂಬ ಶಾಸನ ವಾಕ್ಯ ಕೊರೆದಿದ್ದರೆ, ಅರ್ಥಶಾಸ್ತ್ರದ ಬರೀ ಬೋರು ಬೋರು ವಿವರಣೆಗಳ ಕೆಳಗೆಲ್ಲೋ ಕೆಂಪು ಬಣ್ಣದ ಮುದ್ದಾದ ಬರಹವೊಂದು ‘ಮರೆಯದಿರು ಸ್ನೇಹ, ಬಗೆಯದಿರು ದ್ರೋಹ’ ಎಂದು ಅಧಿಕಾರವಾಣಿಯಿಂದ ಆಜ್ಞಾಪಿಸುತ್ತಿತ್ತು.

ಆಗಿನ ಸಿನಿಮಾ ಸಾಹಿತಿಗಳಾಗಿದ್ದ ಉದಯಶಂಕರ್‌, ಆರ್‌. ಎನ್‌. ಜಯಗೋಪಾಲ್‌, ಗೀತಪ್ರಿಯ, ವಿಜಯ ನಾರಸಿಂಹ, ಸೋರಟ್‌ ಅಶ್ವಥ್‌, ಕರೀಂಖಾನ್‌ ಮುಂತಾದವರು ಯಾವ ಭಾವಗೀತೆಗಳಿಗೂ ಕಡಿಮೆ ಎನಿಸದಂತಹ ಸೊಗಸಾದ ಸಿನಿಮಾ ಗೀತೆಗಳನ್ನು ಲೇಖನಿಯ ಮೊನಚಿಗೊಂದು ಚೆಂಗುಲಾಬಿ ಹಚ್ಚಿಕೊಂಡವರಂತೆ ಅಕ್ಕರೆಯಿಂದ ಬರೆದೇ ಬರೆದರು. ನೆರೆಯ ಹಿಂದಿ ಚಿತ್ರರಂಗದಲ್ಲಿ ಸುರಿಮಳೆಯಾಗುತ್ತಿದ್ದ ಸುಂದರ ಗೀತೆಗಳಿಗೆ ಸರಿ ಸಮಾನವಾಗಿ ನಿಲ್ಲುವಂತಹ ರಾಶಿ ರಾಶಿ ಹಾಡುಗಳನ್ನು ಕೀಳು ಕಾಮನೆಗಳ ಸೋಂಕಿಲ್ಲದಂತೆ, ಅಗ್ಗದ ಜನಪ್ರಿಯತೆಗೆ ಆಸೆಪಡದಂತೆ, ಜೀವನ ಪ್ರೀತಿ, ಮಾನವ ಪ್ರೇಮಕ್ಕೆ ನೀರೆರೆಯುವಂತೆ, ಎದೆಯಾಲವೆಲ್ಲಾ ಹಾಡಾಗಿ ಹರಿದಂತೆ ಮಮತೆಯಿಂದ ಬರೆದಿಟ್ಟರು. ಅವು ಕನ್ನಡ ಚಿತ್ರರಂಗ ಕಂಡ ಸುವರ್ಣ ದಿನಗಳು!

ಯಾಕೋ ಕಾಣೆ, ಈಗಿನ ಹಾಡುಗಳನ್ನು ಸುತ್ತ ರಾಶಿ ಹಾಕಿಕೊಂಡಿದ್ದಾಗ ನಿರಾಸೆ ಉಮ್ಮಳಿಸಿ ಬಂದಿತು. ಆದರೆ ನನ್ನ ಅಳಲಿಗೆ ಕಾರಣಗಳೇ ಇರಲಿಲ್ಲ. ಲೋಕೋ ವಿಭಿನ್ನ ರುಚಿಃ ಎನ್ನುವ ಹಾಗೆ ಈ ಹಾಡುಹಕ್ಕಿಗಳೂ ಮತ್ತಾರದೋ ಒಲಿದ ಮನಸ್ಸುಗಳಲ್ಲಿ ಒಲವಿನ ಗೂಡು ಕಟ್ಟಿ ಸಂಭ್ರಮದ ಕಲರವ ಮೂಡಿಸಿರಲೂಬಹುದು! ಯಾರಿಗೆ ಗೊತ್ತು?

ಮಳೆ ಇರದಿರಬಹುದು, ಬೆಳೆ ಬರದಿರಬಹುದು, ಮನುಜನೆದೆಯ ಸುಕೋಮಲ ಭಾವನೆಗಳಿಗೆ ಬರವೆಂಬುದಿದೆಯೇ?

ಕಾಲ ಬದಲಾಗಿರಬಹುದು, ತಂತ್ರಜ್ಞಾನ ಬೆಳೆದಿರಬಹುದು, ಹಾಗೆಂದು ಮಾಧುರ್ಯ ಎಲ್ಲೇ ಇರಲಿ, ಮೈದಡವಿ ಎದೆಗೊತ್ತಿಕೊಳ್ಳುವ ಹೃದಯಗಳು ಎಂದಿಗಾದರು ಬದಲಾಗುವುದಿದೆಯೇ?

ಹೇಳಿ, ಈಗ ನಿಮ್ಮೆದೆ ಗುನುಗುತ್ತಿರುವ ಹಾಡು ಅದಾವುದು ?

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X