ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ ಗೋಲ್ಡ್‌ ರಷ್‌ ಅರ್ಥಾತ್‌ ‘ಹಿರಣ್ಯ ಸಂದಣಿ ’

By Staff
|
Google Oneindia Kannada News

ರವಿ ಕೃಷ್ಣಾರೆಡ್ಡಿ

ಭಾರತ ಹಾಗೂ ಬೆಂಗಳೂರಿನಲ್ಲಿನ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಪರಿಣಾಮಗಳನ್ನು ನೋಡಿ :

ಅಮೆರಿಕಾದ ಸಿಲಿಕಾನ್‌ ಕಣಿವೆ, ಸ್ಯಾನ್‌ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯ ಮುಂತಾದುವೆಲ್ಲ ನಮ್ಮವರಿಗೆ ಪರಿಚಿತವಾಗಿ ಆಗಾಗ್ಗೆ ತೇಲಿ ಬರುವ ಪದಗಳಾಗಿ ಪರಿಣಮಿಸಿವೆ. ಅಂತರ್ಜಾಲದ ಓದುಗರಿಗಂತೂ ಇವು ದಿನಬಳಕೆಯ ಪದಗಳು. ಕ್ಯಾಲಿಫೋರ್ನಿಯ ಎಂಬ ಅಮೇರಿಕಾದ ಅತಿ ಶ್ರೀಮಂತ ಹಾಗೂ ಅತಿ ಹೆಚ್ಚು ಜನಸಂಖ್ಯೆ ಉಳ್ಳ ರಾಜ್ಯ, ವಿಶ್ವದಲ್ಲಿಯ ಹತ್ತು ಅತಿ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದು. ಇದು ಎಷ್ಟೆಂದರೆ, ಈ ರಾಜ್ಯದ ವಾರ್ಷಿಕ ಬಜೆಟ್‌ ನಮ್ಮ ಭಾರತ ಸರ್ಕಾರದ ಎರಡರಷ್ಟು ! ಇನ್ನೂ ಹೇಳಬೇಕೆಂದರೆ, ಇತ್ತೀಚಿನ ಆರ್ಥಿಕ ಹಿನ್ನಡೆಯಿಂದಾಗಿ ಆಗಿರುವ ಬಜೆಟ್‌ ಕೊರತೆಯೇ ಇಡೀ ಭಾರತದ ರಕ್ಷಣಾ ವೆಚ್ಚದ ಎರಡರಷ್ಟಿದೆ(ಸುಮಾರು 30 ಶತಕೋಟಿ ಡಾಲರ್‌ಗಳು). ಆದರೆ ಇಲ್ಲಿ ಎಲ್ಲಕ್ಕಿಂತ ವಿಚಿತ್ರ, ಕುತೂಹಲ, ಕೌತುಕದ ವಿಷಯವೆಂದರೆ, ಕ್ಯಾಲಿಫೋರ್ನಿಯ ಕೇವಲ 150 ವರ್ಷಗಳ ಹಿಂದೆ- ಮೆಕ್ಸಿಕೋಗೆ ಸೇರಿಯೂ ಸೇರಿರದ, ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಲು ಹೊಸ್ತಿಲಲ್ಲಿ ನಿಂತು, ಹೊರಗಿನ ಜನರಿಗೆ ಅಷ್ಟೇನೂ ಗೊತ್ತಿರದ, ಅಕ್ಷರಶಃ ಅರಾಜಕತ್ವದಿಂದ ಕೂಡಿದ್ದ ಪ್ರದೇಶವಾಗಿತ್ತು . ಹಾಗಾದರೆ ಇಷ್ಟೆಲ್ಲ ಅಭಿವೃದ್ಧಿ, ಜನಸಂಖ್ಯಾ ಬೆಳವಣಿಗೆ, ಇಷ್ಟು ಕ್ಷಿಪ್ರ ಅವಧಿಯಲ್ಲಿ ಹೇಗೆ ಸಾಧ್ಯವಾಯಿತು ?
ಇದು ಪ್ರಾರಂಭವಾಗಿದ್ದು 1849ರ ಹಿರಣ್ಯ ಸಂದಣಿಯಿಂದ!
Ravi Krishnareddy 1848ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ಸುಮಾರು 500 ಜನಸಂಖ್ಯೆಯ ಸಣ್ಣ ಪಟ್ಟಣ. ಆ ಸಮಯದಲ್ಲಿ ಕ್ಯಾಲಿಫೊರ್ನಿಯ ಕೆಲವೆ ಅಮೇರಿಕನ್ನರು ನೋಡಿದ್ದ, ಕೇಳಿದ್ದ ಪ್ರದೇಶವಾಗಿದ್ದು, ಈ ಸುತ್ತಮುತ್ತಲಿಗೆಲ್ಲ ಜಾನ್‌ ಸಟ್ಟರ್‌ ಎಂಬ ಸ್ವಿಸ್‌ ದೇಶದ ಮೂಲದವ ದೊಡ್ಡ ಶ್ರೀಮಂತನಾಗಿದ್ದ. ಇವನ ಇಚ್ಛೆ ಇದ್ದದ್ದೆಲ್ಲ ತನ್ನದೇ ಆದ ಸಣ್ಣ ಕೃಷಿಯಾಧಾರಿತ ಸಾಮ್ರಾಜ್ಯ ಸ್ಥಾಪಿಸುವಲ್ಲಿ . 1839ರಲ್ಲಿ ಇಲ್ಲಿಗೆ ಬಂದವ ಹತ್ತು ವರ್ಷಕ್ಕೆಲ್ಲ 12000 ಜಾನುವಾರುಗಳನ್ನು, ನೂರಾರು ಕೆಲಸದವರನ್ನು, ಕೋಟೆಯಂತಹ ಮನೆಯನ್ನೂ ಇಟ್ಟಿದ್ದ. ದೊಡ್ಡ ಕೃಷಿ ಪ್ರದೇಶವನ್ನು ನಿಯಂತ್ರಿಸುವ ಕನಸು ಕಂಡಿದ್ದ ಈ ದೊಡ್ಡ ಕನಸುಗಾರ ಅಷ್ಟೊತ್ತಿಗೆ ದೊಡ್ಡ ಸಾಲಗಾರನೂ ಆಗಿಬಿಟ್ಟಿದ್ದ.

ತನ್ನ ಬೆಳೆಯುತ್ತಿದ್ದ ದನಗಾವಲಿಗಾಗಿ ಬೇಕಾದ ಮರಮುಟ್ಟುಗಳಿಗಾಗಿ, ಜೇಮ್ಸ್‌ ಮಾರ್ಷಲ್‌ ಎಂಬ ಮೇಸ್ತ್ರಿಯ ನೇತೃತ್ವದಲ್ಲಿ ಈಗಿನ ಕ್ಯಾಲಿಫೋರ್ನಿಯಾದ ರಾಜಧಾನಿಯಾದ ಸ್ಯಾಕ್ರಮೆಂಟೊ ಸಮೀಪದ (ಇದು ಸ್ಯಾನ್‌ ಫ್ರಾನ್ಸಿಸ್ಕೊದ ಪೂರ್ವಕ್ಕಿದೆ) ಅಮೇರಿಕನ್‌ ನದಿಯ ಬಳಿ ಸಟ್ಟರ್‌ ಒಂದು ಸಾಮಿಲ್‌ ಕಟ್ಟಿಸುತ್ತಿದ್ದ. ಈ ಕೆಲಸ ಮುಕ್ತಾಯದ ಹಂತದಲ್ಲಿದ್ದ ದಿನಗಳಲ್ಲಿ , ಜನವರಿ 24, 1848ರಂದು- ಮಾರ್ಷಲ್‌ ಕಣ್ಣಿಗೆ ಹೊಳೆಯವ ಸಣ್ಣ ವಸ್ತು ನೆಲದಲ್ಲಿ ಕಾಣಿಸಿತು. ನಂತರ ಅವನು ಹೇಳಿದ್ದು, 'ಬಾಗಿ ಕೈಗೆ ತೆಗೆದುಕೊಂಡೆ. ಚಿನ್ನ ಎಂದು ಎನಿಸಿದ್ದರಿಂದ ಎದೆ ವಿಪರೀತವಾಗಿ ಬಡಿದುಕೊಳ್ಳುತ್ತಿತ್ತು. ಅದು, ಅರ್ಧ ಅವರೆ ಕಾಳಿನ ಗಾತ್ರ ಮತ್ತು ಆಕಾರದಲ್ಲಿತ್ತು. ಮತ್ತೆ ನೆಲದಲ್ಲಿ ಅಂತಹುದೇ ಇನ್ನೊಂದನ್ನು ಕಂಡೆ!"

ಮಾರ್ಷಲ್‌ ಮತ್ತು ಅವನ ಸಹಚರರು ನಂತರ ಕೆಲಸ ಮುಂದುವರಿಸಿದರೂ, ಕುತೂಹಲದಿಂದ ಕೂಡಿದ್ದರಿಂದ ಆ ತರಹದ್ದವನ್ನೆ ನೆಲದಲ್ಲಿ ಆದಿನ ಬಹಳ ಕಾಣುತ್ತ ಹೋದರು. ಅಪನಂಬಿಕೆಯಲ್ಲಿದ್ದ ಮಾರ್ಷಲ್‌ ಕೆಲವು ಚೂರುಗಳನ್ನು ತೆಗೆದುಕೊಂಡು ನೇರವಾಗಿ ಸಟ್ಟರ್‌ ಬಳಿಗೆ ಹೋದ. ಇಬ್ಬರೂ ತಮಗೆ ವೈಜ್ಞಾನಿಕವಾಗಿ ಸಾಧ್ಯವಾದಷ್ಟೂ, ಹಳೆಯ ಪುಸ್ತಕಗಳ ನೆರವಿನಿಂದ ಪರೀಕ್ಷಿಸಿ ಅದು ಚಿನ್ನ ಎಂದು ಖಚಿತ ಪಡಿಸಿಕೊಂಡರು. ಆದರೆ ಈ ಶೋಧನೆಯಿಂದ ಇಬ್ಬರಿಗೂ ಅಂತಹ ಸಂತೋಷವಾಗಲಿಲ್ಲ. ಸಟ್ಟರ್‌ಗೆ ಚಿನ್ನಕ್ಕಾಗಿ ಬರುವವರಿಂದ ಉಂಟಾಗಬಹುದಾದ ಸ್ಪರ್ಧೆ ತನ್ನ ವೈಯುಕ್ತಿಕ ಆಕಾಂಕ್ಷೆಗೆ ವಿರುದ್ಧವಾಗಿತ್ತು , ಮತ್ತು ಅನಾವಶ್ಯಕವಾಗಿತ್ತು. ಮಾರ್ಷಲ್‌ಗೆ, ಜನಜಾತ್ರೆಯಿಂದ ಸಾಮಿಲ್‌ ಕಟ್ಟಿಮುಗಿಸುವ ತನ್ನ ಕೆಲಸಕ್ಕೆ ಬರಬಹುದಾದ ತೊಂದರೆಗಳ ಪರಿಜ್ಞಾನವಿತ್ತು . ಆದ್ದರಿಂದ ಇಬ್ಬರೂ ಈ ವಿಷಯವನ್ನು ರಹಸ್ಯವಾಗಿಡುವ ಒಡಂಬಡಿಕೆಗೆ ಬಂದರು.

ಈ ವಿಷಯ ಸುತ್ತಮುತ್ತಲು ಹರಡಲು ತಡವಾಗಲಿಲ್ಲವಾದರೂ, ಅಮೇರಿಕನ್‌ ನದಿಯಲ್ಲಿ ಅಂತಹ ದೊಡ್ಡ ಸಂದಣಿಯೇನೂ ತಕ್ಷಣ ಆಗಲಿಲ್ಲ. ಇದು ಒಂದು ರೀತಿಯ ರಮ್ಯ ರೋಮಾಂಚಕ, ಆದರೆ ನಂಬಲು ಕಷ್ಟವಾದ ಕಥೆಯಾಗಿ ಮಾತ್ರ ಕೆಲಕಾಲ ಚಲಾವಣೆಯಲ್ಲಿತ್ತು.

ಪ್ರಸಿದ್ಧ ಹಿರಣ್ಯ ಜಾತ್ರೆ (ದಿ ಗೋಲ್ಡ್‌ ರಷ್‌) ಪ್ರಾರಂಭವಾಗಲು ಮಾತ್ರ, ಸ್ಯಾನ್‌ ಫ್ರಾನ್ಸಿಸ್ಕೋದ ಒಬ್ಬ ಬೊಗಳೇವೀರ, ಬುದ್ಧಿವಂತ, ಸಣ್ಣ ವ್ಯಾಪಾರಿ ಸ್ಯಾಮ್‌ ಬ್ರ್ಯಾನ್ನನ್‌ಗಾಗಿ ಕಾಯಬೇಕಾಯ್ತು. ಇವನು ಮಾಡಿದ್ದು ಮಾತ್ರ ಬಾಲಿಶ ಎನ್ನಬಹುದಾದ, ಬಂಗಾರದ ಬಣ್ಣದ ಕಲ್ಲು ಧೂಳಿನಿಂದ ಕೂಡಿದ್ದ ಒಂದು ಬಾಟಲಿ ಹಿಡಿದು ಸ್ಯಾನ್‌ ಫ್ರಾನ್ಸಿಸ್ಕೋದ ಬೀದಿಗಳಲ್ಲಿ ಗಟ್ಟಿಯಾಗಿ ಸಾರುತ್ತ ಹೋಗಿದ್ದು. ಹೀಗೆ ಸಾರುತ್ತ ಹೋದ ಬ್ರ್ಯಾನ್ನನ್‌ನ ಹಂಚಿಕೆಯಿದ್ದದ್ದು ಚಿನ್ನ ಅಗೆಯುವುದರಲ್ಲಿ ಅಲ್ಲ ; ಅಗೆಯುವುದಕ್ಕೆ ಬೇಕಾದ ಸಲಿಕೆ, ಗುದ್ದಲಿ, ಮತ್ತಿತರ ಸಾಮಾನುಗಳನ್ನು ಮಾರುವುದರಲ್ಲಿ . ನಿಜವಾದ ರಮ್ಯವೆಂದರೆ, ವ್ಯಂಗ್ಯವೆಂದರೂ ಸರಿ, ಚಿನ್ನದ ಗಣಿಗಾರಿಕೆ ಮಾಡದಿದ್ದರೂ ಇಡೀ ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ದಿನಗಳಲ್ಲಿ ಶ್ರೀಮಂತನಾದವನೂ ಇವನೇ. ಈ ಚಾಣಾಕ್ಷ, ತನ್ನ ಕೂಗಾಟಕ್ಕಿಂತ ಮುಂಚೆ ಸುತ್ತಮುತ್ತಲಿನ ಪ್ರತಿಯಾಂದು ಜರಡಿ, ಮೊರ, ಗುದ್ದಲಿ, ಸಲಿಕೆಗಳನ್ನೆಲ್ಲಾ ಕೊಂಡು, ಕೂಡಿ ಹಾಕಿಬಿಟ್ಟಿದ್ದ. ಜನಜಾತ್ರೆ ಶುರುವಾದ ಬಳಿಕ ಈ ಮುಂಚೆ ಇಪ್ಪತ್ತು ಸೆಂಟ್‌ಗಳಿಗಿದ್ದ ತಟ್ಟೆ-ಮೊರಗಳನ್ನು, ತನ್ನ ಕೃತಕ ಕ್ಷಾಮ ಸೃಷ್ಟಿಯಿಂದಾಗಿ ಹದಿನೈದು ಡಾಲರ್‌ಗೆ ಮಾರಿದ. ಹೀಗೆ ಕೇವಲ ಒಂಬತ್ತು ವಾರಗಳಲ್ಲಿ ಇವನು ಮಾಡಿದ ಹಣ 36000 ಡಾಲರ್‌!!

ನಂತರ ನಡೆದದ್ದೆಲ್ಲ ಹೊಸ ಇತಿಹಾಸ ಸೃಷ್ಟಿ . ಕೈಕಾಲು ಗಟ್ಟಿಯಾಗಿದ್ದು ಓಡಿದ ಬೀರಬಲ್ಲನ ಭಿಕ್ಷುಕರ ಕತೆಯ ಒಂದು ರೀತಿಯ ಸೌಮ್ಯ ಪುನರಾವಳಿ. ಸುದ್ದಿ ಕೇಳಿದ ಜನ ಅಮೇರಿಕಾದ ಮೂಲೆಮೂಲೆಗಳಿಂದ (ವಿದೇಶಗಳಿಂದಲೂ ಸಹ), ಪಶ್ಚಿಮ ಕರಾವಳಿಯತ್ತ ಹೊರಟರು. ಆಗ ಅಮೇರಿಕಾದಲ್ಲಿ ಹೆಚ್ಚು ಜನವಾಸವಿದ್ದದ್ದು ಪೂರ್ವ ಕರಾವಳಿಯ ಕಡೆ. ಆದ್ದರಿಂದ ಬಹಳಷ್ಟು ಜನ ಸುಮಾರು 2000 ಮೈಲಿಗಿಂತ ಹೆಚ್ಚು ಕ್ರಮಿಸಬೇಕಾಗಿತ್ತು.

ದುಡ್ಡಿದ್ದವರು ಕುದುರೆ ಗಾಡಿಗಳಲ್ಲೊ , ಇಲ್ಲಾ ಮೆಕ್ಸಿಕೋಗಿಂತ ಕೆಳಗೆ ಪನಾಮದ ತನಕ ಸಮುದ್ರ ಮಾರ್ಗದಲ್ಲಿ ಹೋಗಿ, ಅಲ್ಲಿನ ಸಣ್ಣ ಭೂಪ್ರದೇಶ ದಾಟಿ (ಇದೂ ಆಗದವರು ಕೆಳಗಿನ ದಕ್ಷಿಣ ಧ್ರುವದ ತನಕ ಹೋಗಿದ್ದೂ ಉಂಟು). ಮತ್ತೆ ಕೆಳಗಿನಿಂದ ಪೆಸಿಫಿಕ್‌ ಸಮುದ್ರದಲ್ಲಿ ಪಶ್ಚಿಮ ಕರಾವಳಿಗುಂಟಾ ಹಡಗಿನಲ್ಲಿ ಪಯಣ ಬೆಳೆಸಿದರು. ಅನುಕೂಲವಿಲ್ಲದವರು ಕುದುರೆಗಳ ಮೇಲೊ, ಅರೆ ನಡೆದೊ, ಬಂದರು. ಹೀಗೆ ಬರುವಾಗ ಉತ್ತರದ ಹಿಮಗಾಳಿಗೆ, ಮಂಜಿಗೆ ಸಿಕ್ಕಿ, ದಕ್ಷಿಣದ ಅರಿಜೋನ-ನೆವಾಡದ ಮರಳಿನ ಬೆಂಗಾಡಲ್ಲಿ ಬಳಲಿ ಸತ್ತವರು ಲೆಕ್ಕವಿಲ್ಲದಷ್ಟು . ಹಾಗೆಯೇ ಅಮೇರಿಕಾದ ಮಧ್ಯ ಭಾಗಗಳಲ್ಲಿ ಈ ಜನರ ಸೌಕರ್ಯಕ್ಕಾಗಿ ಹುಟ್ಟಿದ, ಬೆಳೆದ ಪಟ್ಟಣಗಳೂ ಬಹಳಷ್ಟು. ಇದೆಲ್ಲಾ ಆಗಿದ್ದು 1849ರಲ್ಲಿ.

ಈ ಬರುವಾಟ ಇಲ್ಲಿ ಸಾಮಾಜಿಕವಾಗಿ ಎಷ್ಟು ಪರಿಣಾಮ ಬೀರಿತೆಂದರೆ, ಆಗ ಬಂದವರನ್ನು ಫಾರ್ಟಿನೈನರ್ಸ್‌ (49ರವರು) ಎಂದು ಕರೆದು ಹೊಸ ಪದ, ತನ್ಮೂಲಕ ಒಂದು ಜನಾಂಗವೇ ಸೃಷ್ಟಿಯಾಯಿತು. ಎಷ್ಟೋ ಫಾರ್ಟಿನೈನರ್ಸ್‌ ಸ್ಯಾನ್‌ ಫ್ರಾನ್ಸಿಸ್ಕೊ ಮುಟ್ಟಲಾರದೆ, ಮಧ್ಯ ದಾರಿಯಲ್ಲೇ ನೆಲಸಿದರೂ ಅವರಿಗೆ ಆ ಹೆಸರೇ ಕಾಯಂ ಆಯಿತು.

ಪ್ರಪಂಚದ ಬಹಳಷ್ಟು ಚಿನ್ನ ನೆಲದಡಿಯಲ್ಲಿ ಇರುವುದೇ ಹೆಚ್ಚು . ಈ ಚಿನ್ನಕ್ಕಾಗಿ ಸಾಂಘಿಕ ಗಣಿಗಾರಿಕೆ ಮಾಡಬೇಕು. ಆದರೆ ಇಲ್ಲಿ ಹಾಗೆ ಇರದೆ ನೆಲದ ಮೇಲ್ಪದರಗಳಲ್ಲಿ , ಮಣ್ಣಿನ ಮೇಲಡಿಯಲ್ಲೇ ಚಿನ್ನ ಸಿಗುತ್ತಿತ್ತು . ಹಾಗೆಯೇ ಇಲ್ಲಿನ ರಾಜಕೀಯ ವ್ಯವಸ್ಥೆಯೂ ವಿಚಿತ್ರವಾಗಿತ್ತು. ಮೆಕ್ಸಿಕೋಗೆ ಸೇರಿದ್ದ ಕ್ಯಾಲಿಫೋರ್ನಿಯಾ ರಾಜ್ಯ ಮಾರ್ಷಲ್‌ಗೆ ಚಿನ್ನ ಕಾಣಿಸಿದ ನಂತರದ ದಿನಗಳಲ್ಲೆ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಸೇರಿದ್ದು (1850ರಲ್ಲಿ). ಹೀಗಾಗಿ, ಇಲ್ಲಿ ಯಾವ ತರಹದ ಸುಬದ್ಧ ಸರಕಾರಿ ವ್ಯವಸ್ಥೆ ಬರುವುದಕ್ಕಿಂತ ಮುಂಚೆಯೇ ಹಿರಣ್ಯಜಾತ್ರೆ ಬಂದಿತು. ಸುಲಭವಾಗಿ ದೊರಕುವ ಚಿನ್ನ, ಅದೂ ಉಚಿತವಾಗಿ! ಸರಕಾರದ ಕಟ್ಟುಪಾಡುಗಳಿಲ್ಲದ್ದು, ಎಲ್ಲಾ ತರಹದ ಜನರಿಗೆ ಹೊಸ ಅವಕಾಶದ ಬಾಗಿಲನ್ನೆ ತೆರೆಯಿತು.

ಹೀಗೆ ಬಂದ ಜನರಿಂದಾಗಿ, ಮೊದಲಿಗೆ ಶುರುವಾಗಿದ್ದು ಆಹಾರದ ಕ್ಷಾಮ. ಚಿನ್ನ ಎಲ್ಲೆಲ್ಲೂ ಸಿಗುತ್ತಿತ್ತು . ಆದರೆ ಇಡೀ ಒಂದು ದಿನದ ಪರಿಶ್ರಮ ಕೆಲವು ಸಲ ಊಟಕ್ಕೂ ಸಾಲದಷ್ಟು ಅಭಾವವಾಯಿತು. ಜನ ಸಟ್ಟರ್‌ನ ಕೋಟೆ-ತೋಟಕ್ಕೆಲ್ಲ ಲಗ್ಗೆ ಇಟ್ಟು ಅದನ್ನು ಸುಲಿಗೆ ಮಾಡಿಬಿಟ್ಟರು. ಚಿನ್ನದಲ್ಲಿ ಆಸಕ್ತಿಯಿಲ್ಲದಿದ್ದ ಸಟ್ಟರ್‌, ಎಲ್ಲರಿಗಿಂತಲೂ ಹೆಚ್ಚು ಅವಕಾಶ-ಅನುಕೂಲಗಳಿದ್ದರೂ, ತನ್ನ ಕೃಷಿ ಸಾಮ್ರಾಜ್ಯದ ಕನಸು ಮುರಿದು ಬಿದ್ದಿದ್ದರಿಂದ, ಕ್ರಮೇಣ ರಾಜ್ಯ ತ್ಯಜಿಸಿ ಹೊರಟು ಹೋದ.

ಇತ್ತ ತೆರೆದ ಅವಕಾಶಗಳಿಂದಾಗಿ ಶ್ರೀಮಂತರಾದವರಲ್ಲಿ, ಪ್ರಸಿದ್ಧರಾದವರಲ್ಲಿ ಬ್ರಾನ್ನನ್‌ ಮೊದಲಿಗ. ಲೆವೈ ಸ್ಟ್ರಾಸ್‌ ಎಂಬಾತ ಗಟ್ಟಿ-ಮುಟ್ಟು ಪ್ಯಾಂಟುಗಳನ್ನು ಶೋಧಿಸಿ ಜೀನ್ಸ್‌ ಎಂಬ ಹೊಸ ಬಟ್ಟೆ- ವಿನ್ಯಾಸದ ತಂದೆಯಾದ. ವೆಲ್ಸ್‌ ಮತ್ತು ಫರ್ಗೊ ಎಂಬಿಬ್ಬರು ವೆಲ್ಸ್‌-ಫರ್ಗೊ ಎಂಬ ಈಗಲೂ ಪ್ರಮುಖವಾಗಿ ಉಳಿದಿರುವ ಬ್ಯಾಂಕ್‌ ಕಟ್ಟಿದರು, ಇತ್ಯಾದಿ. ಸ್ಯಾನ್‌ ಫ್ರಾನ್ಸಿಸ್ಕೋಗೆ ಬಂದು, 'ಕಾಲ್‌" ಎಂಬ ಪತ್ರಿಕೆಗೆ ಬರೆಯಲಾರಂಭಿಸಿದ ಅನಾಮಿಕನ ಬದಲಾದ ಹೆಸರು ಮಾರ್ಕ್‌ ಟ್ವೇಯ್ನ್‌, ವಿಶ್ವಪ್ರಸಿದ್ದ ಸಾಹಿತಿ.

ಮೊದಲೆಲ್ಲಾ ಎಲ್ಲೆಂದರಲ್ಲಿ ನೆಲದ ಮೇಲೆಯೆ ಸಿಗುತ್ತಿದ್ದ ಚಿನ್ನ ಬಹುಬೇಗ, ಒಂದೆರಡು ವರ್ಷಗಳಲ್ಲಿಯೇ ಅಷ್ಟು ಸುಲಭವಾಗಿ ಲಭ್ಯವಾಗದೆ ಹೋಯಿತು. ನಂತರದ ದಿನಗಳಲ್ಲಿ ಜನರ ದುರಾಸೆಯಿಂದ, ಬೇರೆಯವರು ಅಗೆದದ್ದನ್ನು ಮುಚ್ಚಿಟ್ಟದ್ದನ್ನು ಕದಿಯಲು ಪ್ರಾರಂಭವಾಗಿ- ದೊಂಬಿ, ಸುಲಿಗೆ, ಮೋಸ, ಅರಾಜಕತ್ವಕ್ಕೆ ಎಡೆಕೊಟ್ಟಿತು. ಕಾಲಕ್ರಮೇಣ ಕಡಿಮೆಯಾದ ಲಭ್ಯತೆಯಿಂದಾಗಿ, ನಿರಾಶೆ, ಸೋಲುಗಳಿಂದಾಗಿ ಕೆಲವರು ವಾಪಸು ಹೋದರೆ, ಬಹಳಷ್ಟು ಮಂದಿ ಹಾಗೂ ಹೀಗೂ ಇಲ್ಲಿಯೆ ನೆಲೆಸಿದರು. ಅಷ್ಟೊತ್ತಿಗೆ, ಕೆಲ ದಿನಗಳಲ್ಲಿಯೆ ಸ್ಯಾನ್‌ ಫ್ರಾನ್ಸಿಸ್ಕೊ ಶ್ರೀಮಂತ ಪಟ್ಟಣವಾಗಿ ಹೋಗಿತ್ತು. ನಂತರದ ದಿನಗಳಲ್ಲಿ ಸುಮಾರು 300 ಮೈಲಿ ದೂರಕ್ಕೆ ದಕ್ಷಿಣದಲ್ಲಿ, ಜಗತ್ತಿಗೆಲ್ಲ ಕನಸು ಹಂಚಲು ಹಾಲಿವುಡ್‌ ಉದ್ಭವಿಸಿತು.

ಸ್ಯಾನ್‌ ಫ್ರಾನ್ಸಿಸ್ಕೋಗೆ ಮತ್ತಿನ್ನೊಂದು ಸಂದಣಿ, ಅಭಿವೃದ್ಧಿ ಹಾಗೂ ಹಣದ ಸುರಿಮಳೆಯಾದದ್ದು ವಿದ್ಯುನ್ಮಾನ (ಎಲೆಕ್ಟ್ರಾನಿಕ್‌) ಕ್ರಾಂತಿಯಿಂದಾಗಿ, ಸುಮಾರು ಐದಾರು ದಶಕಗಳ ಹಿಂದೆ. ಹೀಗೆ ಹಿಂದೆ ಹಿಂದೆಯೇ ಬಂದ ವಿಪುಲ ನೈಸರ್ಗಿಕ, ವೈಜ್ಞಾನಿಕ, ಪಾರಿಶ್ರಮಿಕ ಸಹಾಯ, ಶೋಧನೆಗಳಿಂದಾಗಿ ಕ್ಯಾಲಿಫೋರ್ನಿಯ ಪ್ರದೇಶವಿಂದು ಕೇವಲ ಒಂದೂವರೆ ಶತಮಾನದ ಅವಧಿಯಲ್ಲಿ ಅಮೇರಿಕಾದ ಅತಿ ವೈವಿಧ್ಯಮಯ ಶ್ರೀಮಂತ ರಾಜ್ಯ ಎನ್ನಿಸಿಕೊಂಡಿದೆ.

ಕ್ಯಾಲಿಫೋರ್ನಿಯಾದಲ್ಲಿಂದು ಮೂರರ ಒಂದರಷ್ಟು ಮೆಕ್ಸಿಕೋ ಮತ್ತಿತರ ಲ್ಯಾಟಿನ್‌ ರಾಷ್ಟ್ರ ಮೂಲದವರಿದ್ದಾರೆ. ಅರ್ಧದಷ್ಟು ಮಾತ್ರ ಬಿಳಿ ಜನರಿದ್ದಾರೆ. ಇಡೀ ಅಮೆರಿಕಾಗೆ ಅನೇಕ ವಿಷಯಗಳಲ್ಲಿ ಕ್ಯಾಲಿಫೋರ್ನಿಯಾ ಮಾರ್ಗದರ್ಶಿ ರಾಜ್ಯವಾಗಿದೆ. ಬಹಳಷ್ಟು ಅಮೇರಿಕನ್ನರ ಕನಸು ಕ್ಯಾಲಿಫೋರ್ನಿಯಾಗೆ ಹೋಗಿ ಕೆಲಸ ಮಾಡುವುದು ; ನಮ್ಮಲ್ಲಿ ಹಿಂದೆ ಮುಂಬಯಿಗೆ (ಇತ್ತೀಚೆಗೆ ಕ್ಯಾಲಿಫೋರ್ನಿಯಾ?) ಹೋಗಲು ಬಯಸುತ್ತಿದ್ದರಲ್ಲ , ಹಾಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X