ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಯಲ್ಲಿ ಮನರಂಜನೆ ತೂಫಾನು !

By Staff
|
Google Oneindia Kannada News

*ಕಾವೇರಿ ಕಾರ್ಯಕಾರಿ ಸಮಿತಿ

Pranayaraja Srinath celebrating Ugadi with Kaveri Members in WDC‘ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ...’ ಎನ್ನುವ ಬೇಂದ್ರೆಯವರ ಯುಗಾದಿ ಕವಿತೆಯ ಸಾಲುಗಳು ವಾಷಿಂಗ್ಟನ್‌ ಡಿ.ಸಿ ಪ್ರದೇಶದ ಕನ್ನಡ ಸಂಘ ‘ಕಾವೇರಿ’ಯ ಮಟ್ಟಿಗೆ ಯುಗಾದಿಗೆ ಮಾತ್ರವಲ್ಲ, ಕಾವೇರಿ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೂ ಅನ್ವಯ. ಅಂದ ಮೇಲೆ ಈ ಸಲದ ಯುಗಾದಿ ಆಚರಣೆ, ಏಪ್ರಿಲ್‌ 12ರ ಶನಿವಾರದಂದು ಸಂಜೆಯ ಕಾರ್ಯಕ್ರಮ ಕೂಡ ‘ಹೊಸತು ಹೊಸತು ಹೊಸತು...’!

ಕಾರ್ಯಕ್ರಮದ ಪ್ರಮುಖ, ವಿಶೇಷ ಆಕರ್ಷಣೆ ಪ್ರಣಯರಾಜ ಶ್ರೀನಾಥ್‌ ನೇತೃತ್ವದ ಕನ್ನಡಚಿತ್ರರಂಗದ ತಂಡದಿಂದ ರಸಮಂಜರಿ!

ಅಂದ ಹಾಗೆ ಶ್ರೀನಾಥ್‌ ಬಳಗದಲ್ಲಿ ಅವರ ಜತೆಗಿರುವವರು ಯಾರು ಯಾರೆಂದರೆ- ಪತ್ನಿ ಗೀತಾ ಶ್ರೀನಾಥ್‌, ಅಮೂಲ್ಯ ದೀಪಕ್‌, ಚಂದ್ರಶೇಖರ್‌, ಸರಿತಾ, ಗೀತಾ ಮತ್ತು ರಾಮಕೃಷ್ಣ . ಇದೇ ತಂಡ ಮೊನ್ನೆ ಶನಿವಾರ ಏಪ್ರಿಲ್‌ 5ರಂದು ನ್ಯೂಯಾರ್ಕ್‌-ನ್ಯೂಜೆರ್ಸಿ ಪ್ರಾಂತದ ತ್ರಿವೇಣಿ ಕನ್ನಡ ಸಂಘದಲ್ಲಿ ಯುಗಾದಿಹಬ್ಬದ ನಿಮಿತ್ತ ನೀಡಿದ ರಸಮಂಜರಿ ಕಾರ್ಯಕ್ರಮ ಬಹಳ ಚೆನ್ನಾಗಿತ್ತೆಂದು ಅಲ್ಲಿಯ ಕನ್ನಡಿಗರಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಶ್ರೀನಾಥ್‌ ಬಳಗ ಈಗಾಗಲೇ ಅಮೆರಿಕ ರಾಜಧಾನಿಯನ್ನು ತಲುಪಿದ್ದು ಇಲ್ಲೂ ರಂಗತಾಲೀಮು ನಡೆಸುತ್ತಲೇ ಇದ್ದಾರೆ; ರಸಗವಳದ ರುಚಿ ಇನ್ನೂ ಅಧಿಕವಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಕಾವೇರಿ ಕಾರ್ಯಸಮಿತಿಯ ಅಧ್ಯಕ್ಷ ಸಂಜಯ್‌ ರಾವ್‌ ನೇತೃತ್ವದಲ್ಲಿ ಕಾರ್ಯಕ್ರಮದ ‘ಫೈನಲ್‌ ಟಚ್‌ಅಪ್‌’ ಸಭೆ ಮೊನ್ನೆ ಭಾನುವಾರವೇ ನಡೆದು, ಕಾರ್ಯಕ್ರಮ ನಡೆಯುವ ಹೈಸ್ಕೂಲ್‌ ಸಭಾಂಗಣದ ಪೂರ್ವಭಾವಿ ವೀಕ್ಷಣೆಯಿಂದ ಮೊದಲ್ಗೊಂಡು ಇತರ ಎಲ್ಲ ಕೆಲಸ, ಜವಾಬ್ದಾರಿಗಳ ವಿಂಗಡಣೆಯೂ ಸಮರ್ಪಕವಾಗಿ ಆಗಿದೆ. ಕಾರ್ಯಕ್ರಮ ನಡೆಯುವ ದಿನ ಬೇವು-ಬೆಲ್ಲ ವಿತರಣೆಗೆ ವ್ಯವಸ್ಥೆಯಾಗಿದೆ. ಕಾವೇರಿ ವಾರ್ತಾಪತ್ರದ ‘ವಸಂತ ಸಂಚಿಕೆ’ ಮುದ್ರಣಗೊಂಡಿದ್ದು ಅವತ್ತೇ ನಿಮ್ಮ ಕೈಸೇರಲಿದೆ.

ಕನ್ನಡಿಗರ, ಕನ್ನಡದ ಕಾರ್ಯಕ್ರಮಗಳಿಗೆ ಪುಷ್ಕಳವಾಗಿ ಪ್ರಾಯೋಜಕತ್ವ ನೀಡುತ್ತಿರುವ ವುಡ್‌ಲ್ಯಾಂಡ್ಸ್‌ ಹೊಟೇಲಿನಿಂದಲೇ ಅಚ್ಚಕನ್ನಡ ಶೈಲಿಯ ಭೋಜನದ ಏರ್ಪಾಡು ಆಗಿದೆ. ಬಿಸಿಬೇಳೆಭಾತ್‌, ಬೋಂಡಾ-ಚಟ್ನಿ, ಮೊಸರನ್ನ, ಪೂರಿ-ಸಾಗು... ಮೆನು ಬಾಯಲ್ಲಿ ನೀರೂರುವಂತಿದೆ! ಯುಗಾದಿ ಎಂದಮೇಲೆ ಊಟಕ್ಕೆ ಹೋಳಿಗೆ ಇರದಿದ್ದರೆ ಹೇಗೆ? ಇದೆ ಸ್ವಾಮೀ, ಊಟಕ್ಕೆ ಹೋಳಿಗೆಯೂ ಇದೆ, ಅದೂ ಎಲ್ಲಿಂದ ಅಂತೀರಾ ? ಮೈಸೂರಿಂದ ! ಈಗಾಗಲೇ ಬ್ಲೂಡಾರ್ಟ್‌ ಕೋರಿಯರ್‌ನಲ್ಲಿ ಹೋಳಿಗೆ ಪಾರ್ಸೆಲ್‌ ರವಾನೆಯಾಗಿದ್ದು ವಾಷಿಂಗ್ಟನ್‌ ಡ್ಯೂಲಸ್‌ ಏರ್‌ಪೋರ್ಟ್‌ನ ಫುಡ್‌ ಇನ್ಸ್‌ಪೆಕ್ಷನ್‌ ವಿಭಾಗದಿಂದ ಅದು ಕ್ಲಿಯರೆನ್ಸ್‌ ಪಡೆದಿದೆಯೆಂಬುದು ಹೋಳಿಗೆಯಷ್ಟೇ ಸಿಹಿಸುದ್ದಿ !

ಇನ್ನೊಂದು ವಿಷಯ. ಕಾರ್ಯಕ್ರಮ ಸಿಲ್ವರ್‌ಸ್ಪ್ರಿಂಗ್‌ನ ಮಾಂಟಿಗೋಮೆರಿ ಬ್ಲೇರ್‌ ಹೈಸ್ಕೂಲ್‌ನಲ್ಲಿ ಏಪ್ರಿಲ್‌ 12ರಂದು ಶನಿವಾರ ಸಂಜೆ ಐದು ಗಂಟೆಗೆ ಸರಿಯಾಗಿ ಆರಂಭವಾಗಲಿದೆ. ಶ್ರೀನಾಥ್‌ ಕಾರ್ಯಕ್ರಮ ಆರಂಭವಾಗುವಾಗ ಹೇಗೂ ಐದೂವರೆ-ಆರು ಗಂಟೆ ಅಗುತ್ತದಲ್ಲ , ನಿಧಾನ ಹೋದರೆ ಸಾಕು ಎಂದು ನೀವಂದುಕೊಂಡರೆ ದೊಡ್ಡ ತಪ್ಪು ಮಾಡಿದಂತೆ. ಏಕೆಂದರೆ ಈ ಸಲ ಕಾರ್ಯಕ್ರಮ-ನಿರ್ವಾಹಕ (ಎಂ.ಸಿ) ಕೆಲಸ ಒಪ್ಪಿಕೊಂಡಿರುವ ಪುರುಶೋತ್ತಮ್‌ ರಾವ್‌ ಉಡುಪಿಯವರು ‘ಎಂ.ಸಿ’ಗೊಂದು ಹೊಸರೂಪ, ಕಳೆ ನೀಡಲಿದ್ದಾರೆ! ಸೂಪರ್‌ ಸಸ್ಪೆನ್ಸ್‌ !! ತಡವಾಗಿ ಬಂದು, ಅಯ್ಯೋ ಅದನ್ನು ಮಿಸ್‌ ಮಾಡಿದೆವಲ್ಲ ... ಎಂದು ಮರುಗಬೇಡಿ.

ನೀವು ತಡಮಾಡಬಾರದು ಎನ್ನುವುದಕ್ಕೆ ಇನ್ನೊಂದು ಕಾರಣ ಇದೆ - ಕಾರ್ಯಕ್ರಮದಲ್ಲಿ ಮುಂದಿನ ಸಾಲುಗಳಲ್ಲಿ ನೀವು ಕುಳಿತುಕೊಂಡಿದ್ದರೆ ನಿಮಗೂ ಶ್ರೀನಾಥ್‌ ನಡೆಸಲಿರುವ ‘ಆದರ್ಶ ದಂಪತಿಗಳು’ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶದ ಸಾಧ್ಯತೆ ಜಾಸ್ತಿ ! ಆಕರ್ಷಕ ಬಹುಮಾನ ಆಗಲಿದೆ ನಿಮ್ಮ ಆಸ್ತಿ !

ವಿವರಗಳಿಗೆ ಕ್ಲಿಕ್‌ ಮಾಡಿ ನೋಡಿ : ತಾರೆಗಳೊಂದಿಗೆ ಕಾವೇರಿಯ ಯುಗಾದಿ.

ನೀವೆಲ್ಲ ಬನ್ನಿ. ನಿಮ್ಮ ಮನೆಯವರನ್ನು, ಸ್ನೇಹಿತರನ್ನೆಲ್ಲ ಕರಕೊಂಡುಬನ್ನಿ. ಸರಿ, ಹಾಗಾದರೆ ಭೇಟಿಯಾಗೋಣ ಶನಿವಾರ ಸಂಜೆ ಐದು ಗಂಟೆಗೆ!

ಕಾವೇರಿಯ ಇ-ಮೇಲ್‌ ವಿಳಾಸ : [email protected]
ವೆಬ್‌ಸೈಟ್‌ : http://www.kaveri-usa.org/events.html

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X