• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋಮಕುಂಡದಲ್ಲಿ ಅರಳಿದ ಹೂವುಗಳುಬರವಣಿಗೆಯ ಗುರಿಯಾದರೂ ಏನು ? ಸಹೃದಯನೊಂದಿಗೆ ಲೇಖಕನ ಸಂವಾದ ಎನ್ನುವುದಷ್ಟೇ ಬರವಣಿಗೆಯ ಗುರಿ ಅನ್ನುವುದಾದರೆ ನಾವ್ಯಾರೂ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ . ಲೇಖಕ ಹಾಗೂ ಓದುಗನ ನಡುವಣ ಸಂವಾದವಾದ ಬರವಣಿಗೆ, ಅದೇಕಾಲಕ್ಕೆ- ವರ್ತಮಾನವನ್ನು ಚಿತ್ರಿಸುತ್ತದೆ, ಭೂತಕಾಲವನ್ನು ವಿಶ್ಲೇಷಿಸುತ್ತದೆ, ಭವಿಷ್ಯದ ಕನ್ನಡಿಯಾಗುತ್ತದೆ. ಒಂದು ಸಮುದಾಯದ ಕಥೆಯನ್ನು, ನಾಗರಿಕತೆಯ ಹೆಜ್ಜೆ ಗುರುತುಗಳನ್ನು ಬರವಣಿಗೆ ಶಾಶ್ವತಗೊಳಿಸುತ್ತದೆ. ಕೆಲವು ಅನರ್ಘ್ಯ ಸಾಹಿತ್ಯ ಕೃತಿಗಳು ಲೇಖಕನ ರಕ್ತದಲ್ಲಿ ಬರೆಸಿಕೊಂಡಿರುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಇಲ್ಲಿ ಕೆಲವು ನಿದರ್ಶನಗಳಿವೆ. ಓದಿ.

By Staff
|
ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ ಫೆಬ್ರವರಿ 10, 2003

ಹೋಮಕುಂಡದಲ್ಲಿ ಅರಳಿದ ಹೂವುಗಳು

M.R. Dattatri, The Authorಬರವಣಿಗೆಯ ಗುರಿಯಾದರೂ ಏನು ? ಸಹೃದಯನೊಂದಿಗೆ ಲೇಖಕನ ಸಂವಾದ ಎನ್ನುವುದಷ್ಟೇ ಬರವಣಿಗೆಯ ಗುರಿ ಅನ್ನುವುದಾದರೆ ನಾವ್ಯಾರೂ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ . ಲೇಖಕ ಹಾಗೂ ಓದುಗನ ನಡುವಣ ಸಂವಾದವಾದ ಬರವಣಿಗೆ, ಅದೇಕಾಲಕ್ಕೆ- ವರ್ತಮಾನವನ್ನು ಚಿತ್ರಿಸುತ್ತದೆ, ಭೂತಕಾಲವನ್ನು ವಿಶ್ಲೇಷಿಸುತ್ತದೆ, ಭವಿಷ್ಯದ ಕನ್ನಡಿಯಾಗುತ್ತದೆ. ಒಂದು ಸಮುದಾಯದ ಕಥೆಯನ್ನು, ನಾಗರಿಕತೆಯ ಹೆಜ್ಜೆ ಗುರುತುಗಳನ್ನು ಬರವಣಿಗೆ ಶಾಶ್ವತಗೊಳಿಸುತ್ತದೆ. ಕೆಲವು ಅನರ್ಘ್ಯ ಸಾಹಿತ್ಯ ಕೃತಿಗಳು ಲೇಖಕನ ರಕ್ತದಲ್ಲಿ ಬರೆಸಿಕೊಂಡಿರುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಇಲ್ಲಿ ಕೆಲವು ನಿದರ್ಶನಗಳಿವೆ. ಓದಿ.

*ಎಂ.ಆರ್‌. ದತ್ತಾತ್ರಿ, ಕ್ಯಾಲಿಫೊರ್ನಿಯಾ - 94086, ಯು.ಎಸ್‌.ಎ

dramanna@hotmail.com

ಯುದ್ಧ ಮತ್ತು ಹಿಂಸೆಗಳೇ ಬಹುವಾಗಿ ಇತಿಹಾಸವನ್ನು ನಿರ್ಮಿಸಿದ್ದರೂ ಬೆಚ್ಚಿಬೀಳಿಸುವಷ್ಟು ರಕ್ತ ಹೆಪ್ಪುಗಟ್ಟಿರುವುದು ಎರಡನೇ ಮಹಾಯುದ್ಧದ ದಿನಗಳಲ್ಲಿ . ಈ ವಿಪ್ಲವದಲ್ಲಿ ಅದೆಷ್ಟು ಅಮಾಯಕರ ಕಗ್ಗೊಲೆಯಾಯಿತು! ಅದೆಷ್ಟು ಮಕ್ಕಳ ಭವಿಷ್ಯ ಹಿಟ್ಲರ್‌ನ ಸೈನಿಕರ ಬೂಟ್ಸಿಗೆ ಸಿಲುಕಿ ಹೊಸಗಿಹೋಯಿತು !

ಇಷ್ಟಾದರೂ ಈ ಅಮಾಯಕರ ತಪ್ಪಾದರೂ ಏನು ? ಸರ್ವಾಧಿಕಾರಿಯಾಬ್ಬ ದ್ವೇಷಿಸುವ ಮತದಲ್ಲಿ ತಮ್ಮ ಯಾವ ಸ್ವಆಯ್ಕೆಯಿಂದಲ್ಲದೆ ಹುಟ್ಟಿನಿಂದ ಬಂದುದನ್ನು ಸ್ವೀಕರಿಸಿ ಇದ್ದುದು. ಜರ್ಮನಿ, ಪೋಲೆಂಡ್‌, ರಷ್ಯಾ, ಹಂಗೇರಿ, ಫ್ರಾನ್ಸ್‌ , ಇಟಲಿ ... ಹಿಟ್ಲರ್‌ನ ‘ಜನಾಂಗ ಶುದ್ಧೀಕರಣ’ಕ್ಕೆ ಮನುಷ್ಯತ್ವ ಬಲಿಯಾಯಿತು. ಹಿಂಸೆಯ ಮಾರ್ಗಗಳು ಒಂದೇ ಎರಡೇ? ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಸರ್ವಾಧಿಕಾರಿಯ ಮಾತನ್ನು ಬರೀ ಆಜ್ಞೆ ಎಂದು ಪಾಲಿಸಿದ್ದರೆ ಇಷ್ಟೊಂದು ಹಿಂಸೆ ಗುರುತಾಗಿ ಉಳಿಯುತ್ತಿರಲಿಲ್ಲವೇನೋ ! ವಿಪರ್ಯಾಸವೆಂದರೆ ಹಿಟ್ಲರ್‌ನ ಸೈನಿಕರು ಇವುಗಳನ್ನು ಮನಸಾರೆ ಅನುಭವಿಸಿದರು. ಆಜ್ಞೆಗಿಂತ ಹೆಚ್ಚಾಗಿ ಅನುಸರಿಸಿದರು. ಒಬ್ಬಿಬ್ಬರ ಪ್ರಶ್ನೆಯಲ್ಲದೆ ಲಕ್ಷಾಂತರ ಯೋಧರು ಈ ರೀತಿ ವರ್ತಿಸಬೇಕಾದರೆ ಮನುಷ್ಯ ಮನುಷ್ಯನ ನಡುವಿನ ಸೌಹಾರ್ದತೆ ಮೂಲದಲ್ಲಿ ಕೃತಕವಾಗಿ ನಿಜರೂಪದಲ್ಲಿ ಕ್ರೌರ್ಯವೇ ಮೂಲಗುಣವಾಗಿ ವಿಜೃಂಭಿಸುತ್ತದೇನೋ ಎನ್ನುವ ನಿರಾಶಾವಾದವು ಹೊಳೆದು ಸದಾ ಯುದ್ಧದಂಚಿನಲ್ಲಿಯೇ ಬದುಕುವ ಮಾನವಕುಲದ ನೈತಿಕ ಗುಣಮಟ್ಟದ ಬಗ್ಗೆ ಯಾವ ಫಲಪ್ರದವಾದ ಅಭಿಲಾಷೆಗಳೂ ಹೊಮ್ಮದಿದ್ದರೆ ಆಶ್ಚರ್ಯಪಡಬೇಕಿಲ್ಲ.

ಹಿಟ್ಲರ್‌ನ ಕಾನ್ಸಂಟ್ರೇಷನ್‌ ಕ್ಯಾಂಪ್‌ಗಳಲ್ಲೆಲ್ಲಾ ಅತಿ ಭೀಕರವಾದದ್ದು ಎಂದು ಹೆಸರು ಮಾಡಿದ್ದು ಆಶ್‌ವಿಟ್ಸ್‌ ಕ್ಯಾಂಪ್‌. ಇಲ್ಲೇ ಗ್ಯಾಸ್‌ ಚೇಂಬರ್‌ ಕೂಡ ಇದ್ದುದು. ಹಸಿವು, ನಿಶ್ಯಕ್ತಿ, ಮಾನಸಿಕ ಮತ್ತು ದೈಹಿಕ ಆಘಾತಗಳಿಗೆ ನಲುಗಿ ಮಂಕಾದವರಿಗೆ ಕೊನೆಯ ಸ್ಟಾಪ್‌ ಇದು. ಉಳಿದು ಹೊರ ಹೋಗುತ್ತೇವೆ ಎಂಬ ಯಾವ ನಂಬಿಕೆಯೂ ಇಲ್ಲ. ಸೈನಿಕರ ಅತ್ಯಾಚಾರಗಳಿಗೆ ನಲುಗಿ ಖುದ್ದು ಸಾವನ್ನು ಬಯಸುವವರೂ ಧಾರಾಳ. ಮಕ್ಕಳ ಗತಿ ಇನ್ನೂ ದಾರುಣ.

ಹದಿನಾಲ್ಕು ವರ್ಷದ ಒಬ್ಬ ಹುಡುಗ ಹದಿನಾರು ವರ್ಷದ ಕೆಲಸಗಾರನೆಂದು ಸುಳ್ಳು ಹೇಳಿ ಈ ನೋವುಗಳನ್ನೆಲ್ಲಾ ಅನುಭವಿಸುತ್ತಿದ್ದಾನೆ. ಸೈನಿಕರ ಕೆಲಸಕ್ಕೆ ಬಾರದ ವಿದ್ಯಾರ್ಥಿ ಎಂದು ಹೆಸರಿಸದೆ ಕೆಲಸಗಾರನೆಂದು ಹೇಳಿಕೊಂಡರೆ ಜೀವ ಉಳಿಸಿಕೊಳ್ಳುವ ಅವಕಾಶಗಳು ಹೆಚ್ಚು . ಕುಡಿ ಮೊಗ್ಗಾಗುವ ಸಮಯದಲ್ಲೇ ಜೀವನದ ಉಳಿವಿಗಾಗಿ ಹೋರಾಟ. ಚಿಣ್ಣರೊಡನೆ ಕೂಡಿ ಬಯಲಿನಲ್ಲಿ ಆಟವಾಡುವ ವಯಸ್ಸಿನಲ್ಲಿ ತುತ್ತು ಕೂಳಿಗಾಗಿ ಹಾಗೂ ಅಸಹನೆಯಿಂದ ಹಾರುವ ಯೋಧರ ಬುಲ್ಲೆಟ್ಟುಗಳನ್ನು ತಪ್ಪಿಸಿಕೊಳ್ಳಲು ದಿನಪೂರ್ತಿ ದುಡಿಮೆ. ಸಾವು ಏನೆಂದು ಗೊತ್ತಿಲ್ಲದ ವಯಸ್ಸಿನಲ್ಲಿ ಪ್ರತಿದಿನವೂ ಅದರ ದರ್ಶನ.

ಯುದ್ಧದಲ್ಲಿ ಹಿಟ್ಲರ್‌ ಸೋತು ಕೊನೆಗೂ ಆಶ್‌ವಿಟ್ಸ್‌ ಶಿಬಿರಕ್ಕೆ ಒಂದು ಗತಿ ಕಾಣಿಸಲಾಯಿತು. ನೋವನ್ನೇ ಎಲುಬುಗೂಡುಗಳ ಸ್ವರೂಪದಲ್ಲಿ ಹೊತ್ತು ಜನ ಹೊರಗೆ ಬಂದರು. ಈ ಹುಡುಗನೂ ಬಂದ. ಆದರೆ ಹತಾಶೆ, ಮಾನವತೆಯ ಮೇಲಿನ ನಿರಾಶೆ, ಹಿಂಸೆಯ ಭೀಕರ ಸ್ವರೂಪದ ಬೂತದರ್ಶನ, ಅನಿರ್ದಿಷ್ಟತೆ, ಬಳಲಿದ ದೇಹ ಮನಸ್ಸುಗಳ ಕೀಳರಿಮೆ ಅವನನ್ನು ಪ್ರತಿದಿನವೂ ಕಾಡಿತು. ಅವನು ಬರೆದ ಕಾದಂಬರಿಗಳಲ್ಲಿ ಪುಟಪುಟವೂ ಸಾಮಾನ್ಯ ದಿನಗಳಲ್ಲಿ ನಾವರಿಯದ ವಿಕಾರಗಳ ಭಯಾನಕ ದರ್ಶನವನ್ನು ಮಾಡಿಸಿತು. ಅವನ ಸಾಹಿತ್ಯಕ್ಕೆ 2002ನೇ ಸಾಲಿನ ನೋಬೆಲ್‌ ಪ್ರಶಸ್ತಿ ಬಂದಾಗ ವೇದಿಕೆಯ ಮೇಲಿನಿಂದ ಮೆಲುದನಿಯಲ್ಲಿ ಹೇಳಿದ - ‘ ಆ ಮಹಾಹತ್ಯೆಯ ಸಾಕ್ಷಿಯ ತುಣುಕಾಗಿ ನಿಮ್ಮ ಮುಂದೆ ನಿಂತಿದ್ದೇನೆ’. ಆತ ಇಮ್ರೆ ಕರ್ಟ್ಸ್‌. ಹಂಗೇರಿಯ ಕಾದಂಬರಿಗಾರ.

‘ಯಾರಿಗೋಸ್ಕರ ಬರೆಯಬೇಕು?’, ಬರೆದದ್ದು ಯಾರಿಗೂ ಅಲ್ಲ , ನನಗಾಗಿ ಮಾತ್ರ ಎನ್ನುತ್ತಾನೆ. ಆಶ್‌ವಿಟ್ಸ್‌ನ ಮಹಾಹಿಂಸೆ ಎಲ್ಲವನ್ನು ಕೊಂದುಬಿಟ್ಟಿತು, ಸಾಹಿತ್ಯವನ್ನು ಕೂಡ. ಕಣ್ಣು ಮುಚ್ಚಿದೊಡನೆಯೇ ಅವೇ ದೃಶ್ಯಗಳು. ಅವೇ ಬೂಟುಗಾಲಿನ ಶಬ್ದ , ಜನರ ನರಳಿಕೆ, ಮಕ್ಕಳ ಕೂಗು.... ಸುಮಾರು ಹತ್ತು ವರ್ಷ ಇಮ್ರೆಗೆ ಇದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಆಮೇಲೆ ಒಂದು ದಿನ ಒಂದು ದೃಢ ನಿಲುವು ಆಕಾರವೆತ್ತಿತು. ಒಂದೇ ಒಂದು ಸತ್ಯವೆಂದರೆ ನನ್ನ ಇರುವಿಕೆ, ನನ್ನೊಡನೆ ಹಾಯ್ದುಬಂದ ಈ ಜೀವನ. ಹಿಡಿದು ಹಿಂಸಿಸಿ ನಲುಗಿಸಿದ ಹೊರಗಿನ ಶಕ್ತಿಗಳು ನಾನು ಭೂತಕಾಲಕ್ಕೆ ದಾಸನಾಗಿದ್ದಷ್ಟೂ ಮತ್ತೂ ಆಶ್‌ವಿಟ್ಸ್‌ ಕಾನ್ಸಂಟ್ರೇಷನ್‌ ಕ್ಯಾಂಪಿನಲ್ಲಿಟ್ಟಿರುತ್ತವೆ. ಇದರಿಂದ ಬಿಡಿಸಿಕೊಳ್ಳಬೇಕು!

Imre Kerteszಇಮ್ರೆಯ ಪ್ರತಿಯಾಂದು ಕಾದಂಬರಿಯೂ ಒಂದಲ್ಲ ಒಂದು ರೀತಿಯಲ್ಲಿ ಆಶ್‌ವಿಟ್ಸ್‌ ಕ್ಯಾಂಪಿನ ಸುತ್ತಾ ಸುತ್ತುತ್ತದೆ. ಅದರಲ್ಲೂ ಅವನಿಗೆ ಹೆಸರು ತಂದುಕೊಟ್ಟ ‘ಫೇಟ್‌ಲೆಸ್‌’ (ಭವಿಷ್ಯಹೀನ) ಸಾವು ಮತ್ತು ದೌರ್ಜನ್ಯಗಳ ಬಂಧನದಲ್ಲಿ ನಿಸ್ತೇಜತೆ ಮತ್ತು ಅಸಹಾಯತೆಗಳ ದರ್ಶನ. ‘ಕಡ್ಡಿಷ್‌ ಫಾರ್‌ ಎ ಚೈಲ್ಡ್‌ ನಾಟ್‌ ಬಾರ್ನ್‌’ (ಜನಿಸದ ಮಗುವಿಗೊಂದು ಚರಮಗೀತೆ)ಯಲ್ಲಿ ಮುಗ್ಧತೆಯ ಮೇಲೆ ನಡೆಯುವ ಹಿಂಸೆಯ ತಾಂಡವತೆಯ ಹತ್ತಿರದ ಮತ್ತು ನೇರ ನೋಟಗಳು.

ಹೊಲೊಕಾಸ್ಟ್‌ನ ಮೇಲೆ ಅನೇಕ ಪುಸ್ತಕಗಳು ಬಂದಿವೆ. ಅನೇಕ ಸಿನೆಮಾಗಳು ಬಂದಿವೆ. ಎರಡನೇ ಮಹಾಯುದ್ಧ ಮತ್ತು ಅದರಿಂದಾದ ಯಾತನೆಗಳು ವಿಶ್ವ ಸಾಹಿತ್ಯಕ್ಕೆ ಒದಗಿಸಿರುವಷ್ಟು ವಸ್ತುಗಳನ್ನು ಬೇರೆ ಯಾವ ಘಟನೆಗಳೂ ಇತಿಹಾಸದಲ್ಲಿ ಒದಗಿಸಿಲ್ಲ . ಆದರೆ ಇಮ್ರೆ ಕರ್ಟ್ಸ್‌ನ ಸಾಹಿತ್ಯ ವಿಶೇಷವಾಗುವುದು ಅದರಲ್ಲಿನ ಹಸಿತನದಿಂದ, ಲೇಖಕನ ಖುದ್ದು ಅನುಭವಗಳಿಂದ. ಇದಕ್ಕೆ ಇಮ್ರೆ ಕರ್ಟ್ಸ್‌ನೇ ಒಂದು ಉದಾಹರಣೆಯನ್ನು ಕೊಡುತ್ತಾನೆ. ಸೈನಿಕರ ಬೆಂಗಾವಲಲ್ಲಿ ಆಗಮಿಸುತ್ತಿದ್ದ ಟ್ರೈನಿನಲ್ಲಿ ತುಂಬಿ ತುಳುಕುವಂತೆ ಬಂಧಿಗಳು. ರೈಲು ಪ್ಲಾಟ್‌ಫಾರಂನಲ್ಲಿ ನಿಂತೊಡನೆಯೇ ಸೈನಿಕರ ಅಬ್ಬರದ ಅಪ್ಪಣೆ ಮತ್ತು ಕೋವಿಯ ಹಿಂಭಾಗದ ಗುದ್ದುಗಳ ನಡುವೆ ಇವರಿಗಾಗಿ ಕಾಯುತ್ತಿದ್ದ ಆಫೀಸರನನ್ನು ತಲುಪಲು ಇಪ್ಪತ್ತು ನಿಮಿಷಗಳು ಬೇಕು. ಅಲ್ಲಿ ಬಂಧಿಗಳ ವಿಂಗಡನೆಯಾಗುತ್ತದೆ. ದೃಢಕಾಯರಾಗಿ ಕಂಡವರೋ ಅಥವಾ ಆ ಕ್ಷಣದ ಕೃಪಾಕಟಾಕ್ಷಕ್ಕೆ ಒಳಗಾದವರೋ ಕೆಲಸಗಾರರಾಗಿ ಒಳಸೇರುತ್ತಾರೆ. ಉಳಿದವರು ‘ಕೆಲಸಕ್ಕೆ ಬಾರದವರು’ ಗ್ಯಾಸ್‌ ಛೇಂಬರಿಗೆ. ಅಲ್ಲಿ ವಿಷಗಾಳಿಯನ್ನು ಹರಿಸಿ ಅವರನ್ನೆಲ್ಲಾ ನಿವಾರಿಸಲಾಗುತ್ತದೆ. ಇಳಿದ ಟ್ರೈನಿನಿಂದ ನಿರ್ಧಾರದ ಅಧಿಕಾರಿಯ ತನಕ ನಡೆಯುವ ಆ ಇಪ್ಪತ್ತು ನಿಮಿಷಗಳು ಲೇಖಕನ ಖುದ್ದು ಅನುಭವವೇ ಆಗಿದ್ದರೆ.. ಒಂದೇ ಗತಿಯಲ್ಲಿ ನಿರ್ಲಿಪ್ತವಾಗಿ ಸಾಗುವ ಸಾಹಿತ್ಯಕ್ಕೆ ಇದ್ದಕ್ಕಿದ್ದಂತೆಯೇ ಜೀವಶ್ಚೇತನವಾಗುವುದು ಹೀಗೇ.

ನೋಬೆಲ್‌ ಕಮಿಟಿ ಕೂಡಾ ಇಮ್ರೆಯನ್ನು ಗುರುತಿಸಿದ್ದು ಈ ಅಂಶಕ್ಕೇನೇ. ‘ಆಳವಾದ ಮತ್ತು ತೀರಾ ವೈಯಕ್ತಿಕವಾಗಿ ಭಯದ ನೆರಳಿನಲ್ಲಿ ಹುಟ್ಟಿದ ಅನುಭವಗಳನ್ನು ಮತ್ತು ಆ ಸಂದರ್ಭದ ಮನಃಸ್ಥಿತಿಯ ತುಣುಕುಗಳನ್ನು ಇತಿಹಾಸದ ಕಾರ್ಗತ್ತಲಲ್ಲಿ ಕಳೆದು ಹೋಗದಂತೆ ತಡೆದು ಸಾಹಿತ್ಯದ ರೂಪು ಕೊಟ್ಟದ್ದಕ್ಕೆ’.

Alice Seboldಅನುಭವವನ್ನು ಸಾಹಿತ್ಯವಾಗಿಸುವಲ್ಲಿ ಇವತ್ತು ಕೇಳಿಸುತ್ತಿರುವ ಮತ್ತೊಂದು ಹೆಸರು ಆಲಿಸ್‌ ಸೆಬೋಲ್ಡ್‌ಳದ್ದು. ಕ್ಯಾಲಿಫೋರ್ನಿಯಾದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಈಕೆಯ ‘ದ ಲವ್‌ಲಿ ಬೋನ್ಸ್‌’ ಎನ್ನುವ ಕಾದಂಬರಿ ಅನೇಕ ಪ್ರಶಸ್ತಿಗಳಿಗೆ ಪಾತ್ರವಾಯಿತು. ಕಾದಂಬರಿಯಲ್ಲಿ ಸ್ವರ್ಗದಿಂದ ಮಾತನಾಡುವ ಸೂಸಿ ಸೊಲಮಾನ್‌ ಎನ್ನುವ ಹದಿನಾಲ್ಕು ವರ್ಷದ ಹುಡುಗಿಯೇ ನಾಯಕಿ. ಪಕ್ಕದ ಮನೆಯವನಿಂದ ಅತ್ಯಾಚಾರಕ್ಕೊಳಗಾಗಿ ಮೃತ್ಯುವನ್ನಪ್ಪಿದ ಸೂಸಿ ಯಾವ ಭಾವಾತಿರೇಕವಿಲ್ಲದೆ ತನ್ನ ಕಥೆಯನ್ನು ಹೇಳುತ್ತಾಳೆ. ಮೇಲಾಗಿ, ಹತ್ತು ವರ್ಷಗಳ ಕಾಲ ತನ್ನ ಕುಟುಂಬವು ತನ್ನ ಸಾವನ್ನು ಸ್ವೀಕರಿಸಿದ ಬಗೆಗೆ ನಿರಾಕಾರ ಸಾಕ್ಷಿಯಾಗಿ ಎಲ್ಲವನ್ನೂ ನೋಡುತ್ತಾಳೆ. ಮೊದ ಮೊದಲು ನಮ್ಮ ಸೂಸಿ ಇಲ್ಲೇ ಎಲ್ಲೋ ಕಳೆದುಹೋಗಿದ್ದಾಳೆ, ಇವತ್ತೋ ನಾಳೆಯೋ ಸಿಗುತ್ತಾಳೆ ಎಂಬ ಆಶಾಕಿರಣದ ಆಶ್ರಯದಲ್ಲಿದ್ದ ತಂದೆತಾಯಿಗೆ ಅವಳ ಕೊಲೆಯಾಗಿದೆ ಎಂಬ ದಾರುಣ ವಾರ್ತೆ ಕುಸಿದುಬೀಳುವಂತೆ ಮಾಡುತ್ತದೆ. ಸೂಸಿಯ ಸಾವು ಆ ಸಂಸಾರದ ಮೇಲೆ ಮತ್ತೆಂದೂ ಗುಣಪಡಿಸಲಾರದಂತಹ ಆಳವಾದ ಗಾಯಗಳನ್ನು ಮೂಡಿಸುತ್ತದೆ. ಸೂಸಿಯ ತಂಗಿಗೆ ಸೂಸಿಯ ಸಾವಿನ ನೋವು ತಟ್ಟದಂತೆ ತಂದೆ ತಾಯಿ ವಿಷಯವನ್ನು ಅವಳಿಂದ ಮುಚ್ಚಿಡುವ ರೀತಿ ಮತ್ತು ಸೂಸಿಯ ತಂಗಿ ಮಾತುಗಳನ್ನು ಕದ್ದು ಆಲಿಸಿ ತನ್ನದೇ ರೀತಿಯಲ್ಲಿ ಅರ್ಥೈಸುವುದು ಹಿಂಸೆಯ ಪರಿಣಾಮಗಳಲ್ಲಿ ಕಲ್ಪಿಸಿಕೊಳ್ಳದ ದಿಗ್ಭ್ರಮೆ ಹಿಡಿಸುವಂತಹ ಕೋನಗಳನ್ನು ನಮ್ಮೆದುರಿಗೆ ತೆರೆದಿಡುತ್ತವೆ.

ಆದರೆ ಈ ಕಾಬಂಬರಿಯ ವಿಶೇಷವೆಂದರೆ ಅದು ಸೂಸಿಯ ಮೇಲಿನ ಅತ್ಯಾಚಾರವನ್ನು ಬಿಡಿಸಿಡುವ ರೀತಿ ಹಾಗೂ ನೋವುಗಳನ್ನು ಸೂಸಿ ಅಸಹಾಯಕಳಾಗಿ ಅನುಭವಿಸುವುದನ್ನು ಚಿತ್ರಿಸಿರುವುದು. ಇದನ್ನು ಇಷ್ಟು ಹತ್ತಿರದಿಂದ ಬರೆಯಲು ಆಲಿಸ್‌ ಸೆಬೋಲ್ಡ್‌ಳಿಗೆ ಸಾಧ್ಯವಾದದ್ದು ಅದು ಆಕೆಯ ಸ್ವಂತ ಅನುಭವವಾದುದ್ದರಿಂದ!

ಹದಿನೆಂಟು ವರ್ಷದವಳಾಗಿದ್ದಾಗ ಆಲಿಸ್‌ ಒಂದು ರಾತ್ರಿ ತನ್ನ ಕಾಲೇಜಿನಿಂದ ರೂಮಿಗೆ ಹಿಂತಿರುಗುತ್ತಿರುವಾಗ ಒಬ್ಬ ಕಪ್ಪು ದಾಂಡಿಗ ಅವಳನ್ನು ಭೀಕರವಾಗಿ ಹಿಂಸಿಸಿ ಅತ್ಯಾಚಾರವೆಸಗಿದ. ತನ್ನ ಮೇಲೆ ಎರಗಿದ ಬರ್ಬರತೆಯ ಸ್ವರೂಪವನ್ನು ತಿಳಿಸಲು ಸೆಬೋಲ್ಡ್‌ ಒಂದು ದೃಷ್ಟಾಂತವನ್ನು ಹೇಳುತ್ತಾಳೆ. ಕೋರ್ಟಿನಲ್ಲಿ ಸಾಕ್ಷಿಯಾಗಿ ಪೋಲೀಸರು ಬಹಿರಂಗಪಡಿಸಿದ ಅವಳ ಒಳ ಉಡುಪು ಎಷ್ಟು ರಕ್ತಸಿಕ್ತವಾಗಿತ್ತೆಂದರೆ ಕರೆಗಟ್ಟಿದ ರಕ್ತದಿಂದಾಗಿ ಕಪ್ಪು ರಬ್ಬರಿನ ಮುದ್ದೆಯಂತೆ ಕಾಣುತ್ತಿತ್ತಂತೆ. ಮುಂದೆ ಬಹಳ ವರ್ಷಗಳ ನಂತರವೂ, ಆಲಿಸ್‌ ಸೂಸಿಯ ಕತೆ ಬರೆಯಲು ಹೊರಟಾಗ ಅವಳಿಗೆ ತನ್ನದೇ ಕಥೆ ಎಷ್ಟು ಕಾಡಿತ್ತೆಂದರೆ ಸೂಸಿಯ ಕಥೆಯ ಮೇಲೆ ತನ್ನ ಕತೆಯ ಹಸಿತನ ಮತ್ತು ನೇರ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಆ ಪುಸ್ತಕವನ್ನು ಮಧ್ಯದಲ್ಲಿಯೇ ನಿಲ್ಲಿಸಿ ತನ್ನ ಆತ್ಮಕತೆ ‘ಲಕ್ಕಿ’ಯನ್ನು ಬರೆದು ಆಮೇಲೆ ಸೂಸಿಯ ಕಥೆಯನ್ನು ಮುಂದುವರೆಸಿದಳು!

ಅನುಭವವೇ ಸಾಹಿತ್ಯದ ದ್ರವ್ಯ. ಅನುಭವವಿಲ್ಲದ ಸಾಹಿತ್ಯ ನಿಶ್ಯಕ್ತವಾಗಿ ಬಹುಬೇಗ ಕುಸಿದುಬೀಳುತ್ತದೆ. ಅನುಭವದ ಗಣಿ ಆಳವಾದಷ್ಟೂ ಹೊರಬರುವ ಕಲೆ ಅಪ್ಪಟ. ಒಂದು ಸಣ್ಣ ಕಿಡಿ ಸಾಕು ಪ್ರಚೋದನೆಗೆ. ಯಾವುದೋ ಒಂದು ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್‌ಗೆ ತಮ್ಮ ಸ್ಕೂಟರ್‌ ಅಡ್ಡ ಹೋದದ್ದಕ್ಕೆ ಟ್ರಕ್‌ ಡ್ರೈವರ್‌ ಆಡಿದ ಮಾತುಗಳು ಎಸ್‌.ಎಲ್‌.ಭೈರಪ್ಪನವರಿಗೆ ‘ನೆಲೆ’ಯಂತಹ ಸಾವಿನ ಮೇಲಿನ ಅದ್ಭುತ ತಾತ್ವಿಕ ವಿಚಾರ ಸರಣಿಯ ಕಾದಂಬರಿಗೆ ಪ್ರಚೋದನೆಯಾಯಿತಂತೆ.

ಸೂಕ್ಷ್ಮವಾಗಿ ಗಮನಿಸಿದಾಗ ಒಮ್ಮೊಮ್ಮೆ ಅನರ್ಘ್ಯ ಸಾಹಿತ್ಯ ಕೃತಿಗಳು ಲೇಖಕನ ರಕ್ತದಲ್ಲಿ ಬರೆಸಿಕೊಂಡಿರುತ್ತವೆ ಅಲ್ಲವೇ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more