ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸವಾಲು ಎದುರಿಸಲು ಸನ್ನದ್ಧ ಅಮೇರಿಕ

By Staff
|
Google Oneindia Kannada News

ಈ ರೀತಿ ಸಾಗುವ ಲೇಖನ, ಅಮೇರಿಕಾದ ಮೇಲೆ ಚೀನಾ ಮತ್ತು ಭಾರತದ ಪ್ರಭಾವವನ್ನು ಹೋಲಿಸುತ್ತದೆ. ‘ಚೀನಾದ ಶಕ್ತಿಯಾದ manufacturing ಅಮೇರಿಕಾದ ಒಟ್ಟು ಉತ್ಪತ್ತಿಯ 14% ಮತ್ತು ಉದ್ಯೋಗದ 11% ಕ್ಕೆ ಸೀಮಿತವಾಗಿದ್ದರೆ, ಭಾರತದ ಶಕ್ತಿಯಾದ ಸೇವಾ ವಲಯ ಕ್ರಮವಾಗಿ 60% ಮತ್ತು ಮೂರರ ಎರಡು ಭಾಗದ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತದೆ. ಇದರರ್ಥ ಭಾರತ ಅಮೇರಿಕಾದ ಆರ್ಥಿಕತೆಯ ಅತಿಮುಖ್ಯ ತಿರುಳು ಭಾಗಕ್ಕೆ ನುಸುಳುತ್ತಿದೆ.’

ಇನ್ನೂ ಹೀಗೆಯೆ ಓತಪ್ರೋತವಾಗಿ ಸಾಗುವ ಲೇಖನ ಭಾರತದ ಇತ್ತೀಚಿನ ಪ್ರಗತಿ, ಅಮೇರಿಕಾಗೆ ಅದರಿಂದಾಗುವ ಲಾಭ, ನಷ್ಟ, ಯಾವ ಯಾವ ವರ್ಷದಲ್ಲಿ ಯಾವ್ಯಾವ ವಿಭಾಗದಲ್ಲಿ ಎಷ್ಟು ಅಭಿವೃದ್ಧಿ, ಭಾರತಕ್ಕಾಗುವ ಲಾಭ ಮುಂತಾದವುಗಳ ಬಗ್ಗೆ ಅತ್ಯಂತ ವಿವರವಾಗಿ ಚರ್ಚಿಸುತ್ತದೆ. ಕೊನೆಯಲ್ಲಿ ‘ಈ ಸಮಯವನ್ನು ಅಮೇರಿಕಾ ಸರಿಯಾಗಿ ಉಪಯೋಗಿಸಿಕೊಂಡರೆ, ಹದಿನೈದು ವರ್ಷಗಳ ಹಿಂದೆ ಹೇಳಿಕೊಳ್ಳುವಂತಹ ಒಡನಾಟವಿಲ್ಲದ ಈ ಎರಡೂ ರಾಷ್ಟ್ರಗಳು ಹೊಸ ಶತಮಾನದ ಆದರ್ಶ ಆರ್ಥಿಕ ಪಾಲುದಾರರಾಗಬಹುದು’ ಎಂಬರ್ಥ ಬರುವ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ.

ಈ ಅಂತರ್ಜಾಲದ ಯುಗದಲ್ಲಿ ಸ್ವದೇಶಿ ಸುದ್ದಿಗೆ ಹಸಿದ ಭಾರತೀಯ ಓದುಗರಿಗೆ ವಿವಿಧ ಪತ್ರಿಕೆ-ಅಂತರ್ಜಾಲ ತಾಣಗಳ ಓದು-ದರ್ಶನದಿಂದಾಗಿ ಮೇಲಿನ ಎಲ್ಲಾ ಸುದ್ದಿಗಳೂ ಒಂದು ರೀತಿಯಲ್ಲಿ ಹಳಸಲೇ. ಕಳೆದ ಒಂದೆರಡು ವರ್ಷಗಳಲ್ಲಿ ಇವೆಲ್ಲವೂ ಒಂದಲ್ಲ ಒಂದು ಕಡೆ ಪ್ರಸ್ತಾಪವಾಗಿ ಜಗಿಯಲ್ಪಡುತ್ತಿರುವ ಸುದ್ದಿಗಳೆ. ಆದ್ದರಿಂದ ಕೆಲವು ಓದುಗರಿಗೆ ಈಗಾಗಲೆ ಅನ್ನಿಸಿರುವಂತೆಯೆ ನನಗೂ ಇದರಲ್ಲಿ ಅಂತಹ ಹೊಸದೇನೂ ಕಾಣಿಸಲಿಲ್ಲ. (ಮ್ಯಾಗಜೈನ್‌ನ ಮುಖಪುಟದಲ್ಲಿ ಭಾರತ ಕಾಣಿಸಿದ ಸಂತೋಷದ, ಆತ್ಮರತಿಯ ಹೊರತಾಗಿ.) ಇಂತಹ ಸಮಯದಲ್ಲಿ ನನ್ನ ಗಮನವನ್ನು ಸೆಳೆದದ್ದು, ಮೆಚ್ಚಿಗೆ ಪಡೆದದ್ದು ಇದೇ ಸಂಚಿಕೆಯಲ್ಲಿನ ಇನ್ನೊಂದು ಲೇಖನ, ‘ಏಷ್ಯಾದ ಸವಾಲನ್ನು ಎದುರಿಸುವುದು - Meeting the Asian Challenge. ಇದು ಅಮೇರಿಕನ್ನರು ಈಗ ಮಾಡಬೇಕಿರುವುದೇನು ಎಂಬುದರ ಕುರಿತು ಮತ್ತು ನಮಗೆಲ್ಲರಿಗೂ ಮುಖ್ಯವಾಗಬೇಕಾದದ್ದೂ ಇದೇ. ಅಮೇರಿಕಾದ ಶತಮಾನಗಳ ಯಶಸ್ಸಿನ ಅಂತಃಸತ್ವವೇ ಈ ಲೇಖನದಲ್ಲಿದೆ. ‘ಅಮೇರಿಕಾ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಹಿಂದುಳಿದುಬಿಡಬಹುದು ಎಂಬ ಭೀತಿಯನ್ನು ಯಾವಾಗಲೂ ಹೊಂದಿದೆ. 1957 ರಲ್ಲಿ ರಷ್ಯಾ ಸ್ಪುಟ್ನಿಕ್‌ ಗಗನ ನೌಕೆಯನ್ನು ಅಂತರಿಕ್ಷಕ್ಕೆ ಹಾರಿಸಿದಾಗ, 1980ರಲ್ಲಿ ಜಪಾನ್‌ ತನ್ನ G.D.P. ಯ 2.6 %ರಷ್ಟನ್ನು ಅಮೇರಿಕಾದ ಕೇವಲ 1.8% ರಷ್ಟಕ್ಕೆ ವಿರುದ್ಧವಾಗಿ R&D ಯಲ್ಲಿ ತೊಡಗಿಸಿ ಉತ್ಪಾದನಾ ವಲಯದಲ್ಲಿ ಯಶಸ್ಸು ಸಾಧಿಸಿದಾಗ, ಹೀಗೆ... ಮತ್ತು ಈಗ ಮತ್ತೊಂದು ಬಾರಿಯ ಹುಚ್ಚೋನ್ಮಾದ. ಭಾರತ ಮತ್ತು ಚೀನಾ ಖಳನಾಯಕರ ಪಾತ್ರದಲ್ಲಿ.’ ಹೀಗೆ ಪ್ರಾರಂಭವಾಗುತ್ತದೆ ಈ ಲೇಖನ.

ಆದರೆ ಅದು ಇಂತಹ ವಾದಕ್ಕೇ ನಿಲ್ಲುವುದಿಲ್ಲ. ಭಾರತ ಮತ್ತು ಚೀನಾ ಆರ್ಥಿಕತೆಯ ಏಣಿ ಏರುತ್ತಿರುವಾಗ ಅಮೇರಿಕಾ ತನ್ನ ಹೊಸದನ್ನು ಸೃಷ್ಟಿಸುವ, ಶೋಧಿಸುವ ಶಕ್ತಿಯನ್ನು ಬೆಳೆಸಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಬೇಕು ಎನ್ನುತ್ತದೆ. ಎಂದರೆ ಇಲ್ಲಿನ ವಿಜ್ಞಾನಿ, ಚಿಂತಕ, ಆಡಳಿತ, ವ್ಯಾಪಾರಿ, ಪತ್ರಕರ್ತ ಬಳಗದವರು ಏಷ್ಯಾದ, ಅಂದರೆ ಭಾರತ ಮತ್ತು ಚೀನಾದ ಸವಾಲುಗಳನ್ನು ಎದುರಿಸಲು ಆಗಲೇ ನೂತನ ಚಿಂತನೆಗಳತ್ತ, ವಿಧಿವಿಧಾನಗಳತ್ತ ತಮ್ಮ ಗಮನ ಹರಿಸುತ್ತಿದ್ದಾರೆ ಎಂದರ್ಥ ತಾನೆ? ಅಂತಹ ಸಲಹೆ ಮತ್ತು ಕ್ರಿಯಾರೂಪಗಳನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಇವರು ಹಿಂದೆ ಬೀಳುವುದಿಲ್ಲ. ಅಮೇರಿಕನ್ನರು ಎಂತಹ ನಷ್ಟವನ್ನಾಗಲಿ, ಕಷ್ಟವನ್ನಾಗಲಿ ಸಹಿಸುತ್ತಾರೆ, ಆದರೆ ‘ಸೋತ- Loser ‘ ’’ ಎಂಬ ಹಣೆಪಟ್ಟಿಯನ್ನು ಮಾತ್ರ ಸಹಿಸರು. ಇಲ್ಲಿ ಒಬ್ಬ ವ್ಯಕ್ತಿಯನ್ನು Loser ‘ ಎಂದರೆ ಅದು ಅವನನ್ನು ಗರಿಷ್ಠ ಪ್ರಮಾಣದಲ್ಲಿ ಅವಮಾನಿಸಿ ಹೀಯಾಳಿಸಿದಂತೆ.

ಈ ಲೇಖನದಲ್ಲಿ ಅಮೇರಿಕಾ ಮುಂದೆಯೂ ತಂತ್ರಜ್ಞಾನದಲ್ಲಿ ತನ್ನ ನಾಯಕತ್ವವನ್ನು ಉಳಿಸಿಕೊಳ್ಳಲು ನೀಡಿರುವ ಸಲಹೆಗಳು ಕೇವಲ ಅದಕ್ಕೆ ಮಾತ್ರ ಸೀಮಿತವೆಂದು ಪರಿಗಣಿಸಬೇಕಾಗಿಲ್ಲ. ಯಾವ ದೇಶಕ್ಕಾದರೂ ಎಂತಹ ಸಮಯದಲ್ಲಿಯಾದರೂ ಅನ್ವಯಿಸುವಂತಹವು. ಭಾರತದ ಸದ್ಯದ ಯಶಸ್ಸನ್ನು ದೀರ್ಘಕಾಲಿಕ ಮಾಡಲು ನಮ್ಮ ಆಡಳಿತ ಯಂತ್ರಾಂಗವೂ ಇಂತಹ ಒಂದು ನೀಲಿನಕ್ಷೆಯನ್ನು ಈಗಲೇ ಸಿದ್ಧಪಡಿಸಿಕೊಳ್ಳಬೇಕು. ಲೇಖನದಲ್ಲಿನ ನಾಲ್ಕು ಮುಖ್ಯ ಸಲಹೆಗಳು ಹೀಗಿವೆ:

  1. R&D ಯಲ್ಲಿ ಸರ್ಕಾರದ ವೆಚ್ಚವನ್ನು ಹೆಚ್ಚಿಸುವುದು.

    ಸದ್ಯದ ವಿನಿಯೋಗದ ಮೇಲೆ 10ಶತಕೋಟಿ ಡಾಲರ್‌ ಅಂದರೆ 20% ರಷ್ಟು ಹೆಚ್ಚಿಸುವುದು. ಎಲ್ಲಾ ತರಹದ ತಾಂತ್ರಿಕ ಶೋಧನೆಗಳಿಗೆ R&D ಪ್ರಾರಂಭ ಬಿಂದು. (ನಮ್ಮಲ್ಲಿನ ಸರ್ಕಾರಿ ಉದ್ದಿಮೆಗಳಲ್ಲಿನ R&D ಪರದೇಶದವರ ಮುದಿ-ಮುರುಕಲು ತಂತ್ರಜ್ಞಾನ ಎರವಲು ಪಡೆಯುವ ದೈನೇಸಿ ಬಿಂದುವಿನಲ್ಲಿ ನಿಲ್ಲುತ್ತಿದೆ.)

  2. ವಿಜ್ಞಾನ ಪದವಿಯ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳ ಮೇಲೆ ಇನ್ನೂ ಹೆಚ್ಚು ಧನ ವಿನಿಯೋಗಿಸುವುದು.

    ವಿಜ್ಞಾನ ಮತ್ತು ಇಂಜಿನಿಯರಿಂಗ್‌ಗಳಲ್ಲಿ Phd ಗಳು ಇಲ್ಲದೆ cutting-edge research ಮಾಡುವುದು ಅಸಾಧ್ಯ ಮತ್ತು ಅದು ಒಂದು ಸಮಸ್ಯೆ ಸಹ. (ನಮ್ಮ ಛಪ್ಪನ್ನಾರು ವಿಶ್ವವಿದ್ಯಾನಿಲಯಗಳಲ್ಲಿನ ಸಂಶೋಧನೆಗಳು ಸುಲಭವಾಗಿ ಬಡ್ತಿ ಪಡೆಯುವ ವಿಧಿವಿಧಾನಗಳ ಮೇಲಿದೆ. ವಿಜ್ಞಾನ ವಿಭಾಗಗಳು ಇರುವ ಸುದ್ದಿ ಕೇಳಿಬರುವುದೇ ಅಪರೂಪ. ವಿಜ್ಞಾನ ಮತ್ತು ಗಣಿತ ವಿಭಾಗಗಳು ಚೈತನ್ಯವಂತವಾಗಿ ಹೊಸತನ್ನು ಸೃಜಿಸುವ ಮನಸ್ಸುಗಳನ್ನು ಬೆಳೆಸಬೇಕು.)

  3. ಚೈತನ್ಯವಂತ ವಾಣಿಜ್ಯ (financial) ಮಾರುಕಟ್ಟೆಗಳನ್ನು ಪ್ರೋತ್ಸಾಹಿಸುವುದು.

    ಬೇರೆ ದೇಶಗಳು ಒಳ್ಳೆಯ ತಂತ್ರಜ್ಞಾನ ಮತ್ತು ಚಾಲೂ ಕೆಲಸಗಾರರನ್ನು ಹೊಂದಿದ್ದರೆ, 90 ರ ದಶಕದಲ್ಲಿ ಅಮೇರಿಕಾದ ದೊಡ್ಡ ಅನುಕೂಲ ಅದರ ಚೇತೋಹಾರಿ ವಾಣಿಜ್ಯ ಮಾರುಕಟ್ಟೆಗಳಲ್ಲಿತ್ತು. ಇದರ ವಿವಿಧ ನೀಡಿಕೆಗಳು ಹೊಸ ಹೊಸ, ಕೇಳರಿಯದ, ಸಂಶೋಧನಾತ್ಮಕ ಟೆಕ್‌ ಕಂಪನಿಗಳನ್ನು ಅಪರಿಮಿತವಾಗಿ ಪ್ರೋತ್ಸಾಹಿಸಿದ್ದರಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಕೆಲಸಗಳನ್ನು ಸೃಷ್ಟಿಸುವಂತಾಯಿತು. (ನಮ್ಮಲ್ಲಿಯೂ ಷೇರು ಮಾರುಕಟ್ಟೆ ಮತ್ತು ಕಡಿಮೆಯಾಗುತ್ತಿರುವ ಬಡ್ಡಿ ದರಗಳಿಂದಾಗಿ ಬ್ಯಾಂಕುಗಳು ಹೊಸ ಚೈತನ್ಯ ಹುಟ್ಟು ಹಾಕುತ್ತಿವೆ. ಈ ವರ್ಗದಲ್ಲಿ ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಬೆಳೆಸಬೇಕಷ್ಟೆ.)

  4. ಅಪಾಯವನ್ನು ಎದುರಿಸುವ, ಸ್ವೀಕರಿಸುವ (risk-taking) ನಮ್ಮ ಸ್ವೇಚ್ಛೆಯನ್ನು ಹೊಸದಾಗಿ ಹುರಿದುಂಬಿಸುವುದು, ಶಕ್ತಿವಂತಗೊಳಿಸುವುದು.

    ಅಮೇರಿಕನ್ನರು ಇತ್ತೀಚಿನ ವರ್ಷಗಳ ವಿದ್ಯಮಾನಗಳಿಂದಾಗಿ ಭಯಪಡುತ್ತ ಸದ್ಯದ ಕೆಲಸಗಳಿಗೆ ತಗುಲಿಕೊಂಡಿರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸ ತುಂಬಬೇಕು. (ನಮ್ಮ ದೇಶದಲ್ಲಿನ ಕೆಲವು ಮೂಲಭೂತ ಕಾರಣ-ಗುಣಗಳಿಂದಾಗಿ ನಮ್ಮಲ್ಲಿ risk-taking ಎನ್ನುವುದು ಒಂದು ರೀತಿಯಲ್ಲಿ ಅಪಥ್ಯ. ಅಲ್ಪತೃಪ್ತರಾಗುವ ಸಮಯ ಇದಲ್ಲ. ಆಕಾಶಕ್ಕೆ-ಚಂದ್ರನೆಂಬ ಉಪಗ್ರಹಕ್ಕಲ್ಲ, ಮಂಗಳಾದಿಗಳೆಂಬ ಗ್ರಹಗಳಿಗೆ- ಪ್ರಾಯೋಗಿಕವಾಗಿಯೇ ಏಣಿ ಹಾಕುವ ಇಚ್ಛಾಸಮಯವಿದು.)

ಇಂತಹ ದೂರಗಾಮಿ ಚಿಂತನೆಗಳೇ ಅಮೇರಿಕಾವನ್ನು ಹೊಸ ಹೊಸ ಸವಾಲುಗಳನ್ನು ಒಡ್ಡಿದರೂ ಸೋಲಿಸಲಾಗದ, ಅಭೇದ್ಯ ದೇಶವನ್ನಾಗಿ ಉಳಿಸಿಕೊಂಡಿವೆ. ಎಲ್ಲಾ ದೇಶದ ದೇಶಭಕ್ತರೂ ಬಯಸುವುದೂ ಇದನ್ನೇ ಅಲ್ಲವೇ?

ಬೇರೆಯವರಿಂದ ಪಾಠವನ್ನು ಕಲಿಯುವುದರಲ್ಲಿ ಯಾವುದೇ ಅವಮಾನ ಪಡಬೇಕಾಗಿಲ್ಲ. ಬೇರೆಯವರು ಈಗಾಗಲೇ ಕಂಡುಹಿಡಿದಿರುವುದನ್ನು ಉಪಯೋಗಿಸಿಕೊಳ್ಳದೆ ನಾವೇ ಕಂಡುಹಿಡಿಯುತ್ತೇವೆ ಎನ್ನುವ ಗರ್ವ ತೋರಿಸಿದರೆ ನಮ್ಮ ಶೋಧ ಬೆಳಕು ಕಾಣುವಷ್ಟರಲ್ಲಿ ಅದು out-dated ಆಗಿರುತ್ತದೆ. ಮತ್ತೆ ಕೊನೆಯ ಸ್ಥಾನದಿಂದಲೇ ಪ್ರಾರಂಭಿಸಬೇಕು. ಅದೇ ಅಲ್ಲವೆ ದಾಸ್ಯ ಮತ್ತು ಹಿಂದುಳಿಯುವಿಕೆ?

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X