ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿಮರಿಯು ಮತ್ತು ನೀರಿನ ಲಾರಿಯು

By ರಾಜಾರಾಮ್ ಕಾವಳೆ, ಯುಕೆ
|
Google Oneindia Kannada News

ಮೊದಲಿಗೆ ನನ್ನ ಪುಟ್ಟ ಪರಿಚಯ. ನಾನು ಈಗಿರುವುದು ಸೌದೀ ಅರೇಬಿಯದಲ್ಲಿರುವ ಜೆಡ್ಡ ಎಂಬ ಊರಿನಲ್ಲಿ. ಅಲ್ಲಿನ ಒಂದು ಆಸ್ಪತ್ರೆಯಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿರುವೆ. ಕಳೆದ ಬೇಸಿಗೆಯಲ್ಲಿ ನಾನು ಮತ್ತು ನನ್ನ ಸ್ನೇಹಿತರಾದ ಮಂಜುನಾಥ್‌ ಅವರು ಗಮನಿಸಿದ ಒಂದು ಭಾವುಕ ಸನ್ನಿವೇಶವನ್ನು ಓದುಗರ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ.

ರಣ ಬೇಸಗೆಯದು. ಆ ಹಗಲೋ ಬಹು ಸೆಕೆಯ ದಿನ. ಸೌದಿ ದೇಶದಲ್ಲಿ , ಬೇಸಿಗೆಯ ಅಧಿಕ ಉಷ್ಣಾಂಶ 48 ಸೆಂ. ಅಥವಾ ಅದಕ್ಕೂ ಮೇಲೇರುವುದು ಸಾಮಾನ್ಯದ ಸಂಗತಿ. ಅಂತಹ ಒಂದು ಕುದಿಕುಲುಮೆಯ ದಿನ, ಸಾಯಂಕಾಲ ಸೂರ್ಯ ಮುಳುಗಿದ ಮೇಲೆ ನಾನು ಮತ್ತು ನನ್ನ ಸ್ನೇಹಿತರಾದ ಮಂಜುನಾಥ್‌ ವಾಕಿಂಗ್‌ಗೆ ಹೊರಟೆವು. ಆಗ ಕಂಡ ಆ ದೃಶ್ಯ ; ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ನಮ್ಮ ಆಸ್ಪತ್ರೆಯ ರೆಸಿಡೆನ್ಷಿಯಲ್‌ ಕಾಂಪೌಂಡಿನಿಂದ ಹೊರಗಿರುವ ರಸ್ತೆಯಲ್ಲಿ ಮುಂದಕ್ಕೆ ಹೋಗಿ ಸುಮಾರು ಮೂರು ಕಿಲೋಮೀಟರಿನಷ್ಟು ನಡೆದು ಅಷ್ಟೇದೂರ ವಾಪಸ್ಸು ಬರುವುದು ನಮ್ಮ ವಾಡಿಕೆ. ಆ ರಸ್ತೆಯಲ್ಲಿ ಸಿಗುವ ಒಂದು ದಿಬ್ಬವನ್ನು ಇಳಿದರೆ ಅಲ್ಲೊಂದು ದೊಡ್ಡ ಮೈದಾನವಿದೆ. ಆ ಮೈದಾನವು ನೀರು ಸರಬರಾಜು ಮಾಡುವ ಒಂದು ಕಂಪನಿಗೆ ಸೇರಿರುವುದು. ಸುಮಾರು ಇಪ್ಪತ್ತು ಅಥವ ಮೂವತ್ತು ವಾಟರ್‌ ಟ್ಯಾಂಕರ್‌ ಲಾರಿಗಳು ಸಾಮಾನ್ಯವಾಗಿ ಆ ಬೃಹತ್‌ ಮೈದಾನದಲ್ಲಿ ನಿಂತಿರುತ್ತವೆ.

A Saudi Arabia experience with a thirsty dog

ಆ ಸಾಯಂಕಾಲ ನಾವಿಬ್ಬರು ಆ ರಸ್ತೆಯ ದಿಬ್ಬವನ್ನು ಇಳಿಯತೊಡಗಿದಾಗ ಒಂದು ನೀರು ತುಂಬಿದ ಅಗಾಧವಾದ ಲಾರಿಯು ಆ ಮೈದಾನದಿಂದ ಹೊರಬಂದು ನಮಗೆದುರಾಗಿ ರಸ್ತೆಯ ದಿಬ್ಬವನ್ನು ಹತ್ತತೊಡಗಿತು. ಆ ದೊಡ್ಡ ಲಾರಿಯು ನೀರಿನ ಭಾರದಿಂದ ಬಹಳ ನಿಧಾನವಾಗಿ ರಸ್ತೆಯನ್ನು ಏರಲಾರಂಭಿಸಿತು. ಅದೇ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿದ್ದ ಒಂದು ಕಸದ ಕುಪ್ಪೆಯಿಂದ ಏನನ್ನೋ ಕೆದಕಿ ತಿನ್ನುತಿದ್ದ ಒಂದು ಸಣ್ಣ ನಾಯಿಮರಿಯು ನಮ್ಮನ್ನು ನೋಡಿ ಬೊಗಳತೊಡಗಿ, ನಮ್ಮೆಡೆಗೆ ಬಾಲವನ್ನಾಡಿಸುತ್ತಾ ಓಡಿಬಂದು ರಸ್ತೆಯ ಮಧ್ಯಕ್ಕೆ ಬಂದಿತು. ನಾಯಿಯನ್ನು ನೋಡಿ ನಮಗೆ ಗಾಬರಿ. ಆ ನಾಯಿಮರಿ ಲಾರಿಗೆ ಸಿಕ್ಕಿಕೊಂಡಿತೇಂದು ಹೆದರಿ, ರಸ್ತೆಯ ಮಧ್ಯದಿಂದ ಕಸದಕುಪ್ಪೆಯ ಕಡೆಗೆ ನಾಯಿಮರಿಯನ್ನು ಓಡಿಸಿ ಮುಂದಕ್ಕೆ ನಡೆದೆವು.

ಆ ಲಾರಿಯು ಮುಂದಕ್ಕೆ ಸಾಗುತ್ತಿರಲು, ಆ ನಾಯಿಮರಿಯು ರಸ್ತೆಯ ಮಧ್ಯಕ್ಕೆ ಮತ್ತೆ ಬರಬೇಕೆ ? ಚಲಿಸುತ್ತಿರುವ ದೈತ್ಯ ಗಾತ್ರದ ಲಾರಿಯ ಮುಂದೆ ನಿಂತು ಆ ನಾಯಿಮರಿ ಬೊಗಳತೊಡಗಿತು. ಇನ್ನು ಆ ನಾಯಿಮರಿಯ ಗತಿ ಮುಗಿಯಿತೆಂದುಕೊಂಡು ಸಂಕಟದಿಂದ ಆ ದೃಶ್ಯ ನೋಡತೊಡಗಿದೆವು. ಆದರೆ ಆದುದೇ ಬೇರೆ !

ಆ ಲಾರಿಯು ದಿಬ್ಬವನ್ನು ಹತ್ತುತಿದ್ದರೂ ಕಷ್ಟದಿಂದ ಬ್ರೇಕ್‌ ಹಾಕಿ ನಿಲ್ಲಲು, ನಮಗೆ ಬಹಳ ಆಶ್ಚರ್ಯವಾಯಿತು. ತಕ್ಷಣ ಆ ನಾಯಿಮರಿಯು ಓಡಿ ಆ ಲಾರಿಯ ಹಿಂಭಾಗಕ್ಕೆ ಬಂದು ನಿಂತಿತು. ಒಡನೆಯೇ ಕ್ಲಿಕ್‌ ಎಂಬ ಶಬ್ದ . ಲಾರಿಯ ಹಿಂಭಾಗದಿಂದ ನೀರು ಸುರಿಯಲಾರಂಬಿಸಿತು. ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯಲಾರಂಭಿಸಿ, ಹರಿಯುವ ನೀರನ್ನು ಆ ನಾಯಿಮರಿ ಕುಡಿಯತೊಡಗಿತು. ಹಲವು ನಿಮಿಷಗಳ ನಂತರ ಆ ಲಾರಿ ಮುಂದಕ್ಕೆ ಸಾಗಿತು. ನೀರು ಕುಡಿದು ತೃಪ್ತಿಯಾದ ನಾಯಿಮರಿ ವಾಪಸ್ಸು ಕಸದ ಕುಪ್ಪೆಯೆಡೆಗೆ ನಡೆಯಿತು. ಅದೊಂದು ಹೃದಯಂಗಮ ದೃಶ್ಯ.

ಈ ಹೃದಯ ಕರಗಿಸುವ ದೃಶ್ಯವನ್ನು ನೋಡಿ ನಮಗೆ ನಮ್ಮ ಅಜ್ಞಾನದ ಅರಿವಾಯಿತು. ಆ ನಾಯಿಮರಿ ಬಾಲವಾಡಿಸುತ್ತಾ ಬೊಗಳಿಕೊಂಡು ನಮ್ಮೆಡೆಗೆ ಓಡಿಬಂದ ಕಾರಣ ಅದರ ಬಾಯಾರಿಕೆ. 'ಆ ಲಾರಿಯನ್ನು ನೀವು ನಿಲ್ಲಿಸಿ, ನನಗೆ ದಾಹವಗಿದೆ’ ಎಂದು ನಮ್ಮೆಡೆ ನಾಯಿಮರಿ ಓಡಿಬಂದಿತ್ತು . ಆದರೆ ನಾಯಿಮರಿ ಮನಸ್ಸು ನಮಗೆ ಅರ್ಥವಾಗಿರಲಿಲ್ಲ .

ಕರುಳು ಒಣಗಿಸೊ ಸೆಖೆಯ ಸಾಯಂಕಾಲ ಆ ನಾಯಿಮರಿಗೆ ಅದೆಂಥ ನೀರಿನ ದಾಹವಿರಬಹುದು ಎಂಬ ಅರಿವು ನಮ್ಮ ತಿಳಿವಳಿಕೆಗೆ ಬಾರದೆ ಹೋದುದರಿಂದ ಬೇಸರವಾಯಿತು. ಆದರೆ, ಆ ಸಣ್ಣ ನಾಯಿಮರಿಗೆ ನೀರುಬೇಕಾಗಿದೆ ಎಂದು ತಿಳಿದು, ದೈತ್ಯ ಲಾರಿಯನ್ನು ಕಷ್ಟದಿಂದ ನಿಲ್ಲಿಸಿ ನೀರು ಹನಿಸಿದ ಆ ಚಾಲಕನ ಅನುಕಂಪ-ಮಾನವೀಯತೆಯನ್ನು ನೆನೆದು ಹೃದಯ ತುಂಬಿ ಬಂತು.

ಅನೇಕ ವೇಳೆ ನಾವು ನಮ್ಮ ಭಾವನೆಗಳನ್ನು ಇತರರ ಮೇಲೆ ಹೇರುತ್ತೇವೆ. ನಮ್ಮ ಭಾವನೆಗಳೇ ಸರಿ ಎನ್ನುವ ಮತ್ತಿನಲ್ಲಿ ಇತರರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗುವುದಿಲ್ಲ . ವಾಸ್ತವ ಸಂಗತಿಯೇ ಬೇರೆ ; ಸಮಾಜದಲ್ಲಿ ನಮಗಿಂತಲೂ ಕಷ್ಟದಲ್ಲಿರುವ ಜೀವಗಳು ಸಾಕಷ್ಟಿರುತ್ತವೆ. ನಮ್ಮ ಒಂದು ಕ್ಷಣದ ಯೋಚನೆ, ತಾಳ್ಮೆ ಆ ಜೀವಗಳಿಗೆ ಕಿಂಚಿತ್ತು ತಂಪು ನೀಡುವ ಸಾಧ್ಯತೆಗಳೂ ಇರುತ್ತವೆ. ಆದರೆ, ನಿಸ್ವಾರ್ಥ ಮನೋಭಾವದಿಂದ ಇತರರ ಸಂಕಟಕ್ಕೆ ಒದಗುತ್ತಾರಲ್ಲ , ಅವರ ಮನಸ್ಸು ದೊಡ್ಡದು. ಆ ಮನಸ್ಸುಗಳಿಗೆ, ಆ ಮನಸ್ಸುಗಳ ಒಡೆಯರಿಗೆ ಒಂದು ಸಲಾಮು.

English summary
A tanker man provides water to a thirsty dog in Saudi Arabia.. writes Rajaram Cavale
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X