ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಮನೆಯಲ್ಲಿ ಕಾದಂಬರಿಯ ಬೀಜ !

By Staff
|
Google Oneindia Kannada News
  • ಲಕ್ಷ್ಮೀನಾರಾಯಣ ಗಣಪತಿ
    ಉತ್ತರ ಕೆರೊಲಿನಾ, ಯು. ಎಸ್‌. ಎ.

    [email protected]
ಒಂದು ಕಾದಂಬರಿಗಾಗುವಷ್ಟು ಇರಬಹುದಾದ ಮೂರು ತಲೆಮಾರುಗಳ ಬದುಕಿನ ಸಾರವನ್ನು ಸಣ್ಣ ಕಥೆಯ ಹಂದರದೊಳಗೆ ಹಿಡಿದು ಸಮಾಜಕ್ಕೆ ಹೇಳಲೇಬೇಕಾದ್ದನ್ನು ಹೇಳಿದ ರೀತಿಯಲ್ಲಿ , ಸಾಮಾಜಿಕ ಜವಾಬ್ದಾರಿ ತಮಗಿದೆ ಎಂದು ರಾಜಲಕ್ಷ್ಮಿ ತೋರಿಸಿಕೊಂಡಿದ್ದಾರೆ. ಲೋಕಯ್ಯ-ನಾಗಿಯರ ಮಾಟ ಮಂತ್ರಗಳ ಬದುಕಿನಿಂದ ನಮ್ಮ ದೃಷ್ಟಿ ಜಾರಿ ಕಿಶೋರ ಚಿದಾನಂದರ ಕಾಲಕ್ಕೆ ಬಂದು ಒಂದಾಗಿ ಸೇರುವಲ್ಲಿ ಕೋವಿಮನೆಯ ಸಂತಾನದ ಪ್ರಶ್ನೆ ಎತ್ತುವುದರ ಮೂಲಕ ಬದಲಾದ ಬದುಕಿನ ಮೌಲ್ಯಗಳು ಮತ್ತು ಜೀವನ ದೃಷ್ಟಿಗಳನ್ನ ಚಿತ್ರಿಸಿದ ರೀತಿ ಮೆಚ್ಚುವಂತದ್ದು.

ಆಯಾ ಕಾಲದ ಸಾಮಾಜಿಕ ವಿಪರ್ಯಾಸಗಳಿಗೆ ತಕ್ಕಂತೆ ನಾಗಿ ಲೋಕಯ್ಯರ ಬದುಕಿನಲ್ಲಿರುವ ಮಾಟ ಮಂತ್ರಗಳ ಪಾತ್ರ, ಲೋಕವನ್ನ ಸರಿದಾರಿಗೆ ಎಳೆಯಲಿಕ್ಕಾಗಿ ದಾಯಾದಿ ದ್ವೇಷಕ್ಕೊಳಗಾಗಿಯೂ ದೊಡ್ಡನ ಜನಮನ್ನಣೆಯನ್ನ ಗಳಿಸಿಕೊಳ್ಳಲಾರದ ಲೋಕಯ್ಯನ ಸ್ಥಿತಿಯಲ್ಲಿ ಸುಧಾರಣೆಯಾಗದ ಸಮಾಜವೊಂದರ ವೈಫಲ್ಯವಿದೆ. ಜೊತೆಗೇ ಸಮಾಜಕ್ಕೆ ಮಂಕೆರಚಿದ ದೊಡ್ಡಪ್ಪನ ರೀತಿಗೆ ತಿರುಗಿಬಿದ್ದರೂ ಅದನ್ನ ದೊಡ್ಡರೀತಿಯಲ್ಲಿ ಸಮಾಜದ ಒಳಿತಿಗಾಗಿಯಾಗಲಿ ಅಥವಾ ನ್ಯಾಯ ಸಮ್ಮತವಾದ ರೀತಿಯಲ್ಲಿ ತನ್ನ ಒಳಿತಿಗಾಗಿಯೂ ಪರಿವರ್ತಿಸಿಕೊಳ್ಳಲಾಗದ ಲೋಕಯ್ಯನ ನಿಷ್ಕಿೃಯತೆಯ ಫಲದ ಕಷ್ಟಗಳೆಲ್ಲಾ ನಾಗಿಯ ಬದುಕಿನಲ್ಲಿ ಸೇರಿಕೊಂಡು ಅವಳ ಬದುಕಿನ ಉದ್ದಕ್ಕೂ ನೋವು ಕೊಟ್ಟದ್ದು ಆ ಕಾಲದ ದ.ಕನ್ನಡ ಜಿಲ್ಲೆಯ ಬದುಕಿನ ಸಹಜ ಚಿತ್ರಣ. ನಾಗಿಯಿಂದ ಬೆಂಬಲ ಸಾಧ್ಯವಾಗದ ಲೋಕಯ್ಯನಿಗಾದರೂ ದಾಯಾದಿ ದ್ವೇಷದ ಜೊತೆಗೆ ಸಾಮಾಜಿಕ ಆಂದೋಲನವನ್ನೂ ಸಾಧಿಸುವುದು ಆಗದಿದ್ದರ ಹಿಂದಿನ ಸಂಪೂರ್ಣ ಚಿತ್ರಣ ನಮಗ್ಯಾರಿಗೂ ಸಿಗದ ಲೋಕಯ್ಯನ ಬದುಕಿನ ನೋವು. ಪ್ರಾಯಶಃ, ಲೋಕಯ್ಯನ ಬದುಕನ್ನ ಹತ್ತಿರದಿಂದ ನೋಡಿ ಅಥವಾ ಕೇಳಿ ಗೊತ್ತಿರುವ ರಾಜಲಕ್ಷ್ಮಿಯವರಿಂದ ಒಂದು ಕಾದಂಬರಿಯ ವಸ್ತುವಾಗಿ ಬಂದರೆ.. ಎಂಬ ಆಶಯ ಇಟ್ಟುಕೊಳ್ಳೋಣ.

ಅಷ್ಟೇ ಅಲ್ಲದೆ ಚಿದಾನಂದ ಓಡಿಹೋದದ್ದರ ಹಿಂದಿನ ಹುನ್ನಾರು ಮತ್ತು ಕೋವಿಮನೆ ದೊಡ್ಡಪ್ಪ ಬಾವಿಗೆ ಹಾರಿ ಸತ್ತದ್ದರ ಹಿಂದಿನ ಬದುಕುಗಳ ಸತ್ಯ, ಕೃತಿಗಾರ್ತಿಯ ಮನದ ಮೆಲುಕಿನಲ್ಲಿ ಮುಂದೊಂದು ದಿನ ಒಳ್ಳೆಯ ಕಾದಂಬರಿಯಾಗಿ ಬಂದೀತೆ? ಯಾಕಾಗಬಾರದು ಎಂಬೊಂದು ಆಶೆ, ನನ್ನಂತಹ ಓದುಗರಿಗೆ.

ಕಥೆಯ ಮೊದಲಲ್ಲೇ ವ್ಯಕ್ತವಾಗುವ ದಾಯಾದಿ ದ್ವೇಷಗಳ ಜೀವನ ಚಿತ್ರಣ ಮಾತ್ರ ಅತೀ ಸಹಜವಾಗಿ ಮೂಡಿಬಂದು ನಮ್ಮನ್ನ ಕಥೆಯುದ್ದಕ್ಕೂ ಓದಿಸಿಕೊಂಡುಹೋಗುತ್ತದೆ. ಸಣ್ಣ ಕಥೆಯಾಂದರ ಗೆಲುವಿಗೆ ಇಂತಹ ಒಂದು ಆಂಶವೇ ಸಾಕಾಗಬಹುದಾದರೂ, ಕಥೆಗಾರ್ತಿ ತೆರೆದಿಡುವ ಕೆಲ ಪ್ರಮುಖ ಘಟ್ಟಗಳಿಂದಾಗಿ, ಬದಲಾಗುತ್ತಿರುವ ಸಮಾಜದ ನಾಯಕರುಗಳಾದ ಕಿಶೋರ ಮತ್ತು ಚಿದಾನಂದರನ್ನ ಸಟ್ಟಂತ ನಮ್ಮ ಮುಂದೆ ಪರಿಚಯಿಸುವ ರೀತಿಯಲ್ಲಿ, ಭಾರತೀಪುರದ ಗಣೇಶನ ಕ್ರಾಂತಿಯಿಲ್ಲದಿದ್ದರೂ ನಿಜಜೀವನದಲ್ಲಿ ನಡೆದು ಹೋದ ಸತ್ಯದ ಚಿತ್ರಣವಿದೆ. ಇಷ್ಟೊಂದು ತುಡಿತಗಳ ಮಡುವಾಗಿರುವ ಕಥೆಗಾರ್ತಿ ಕೋವಿಮನೆಯ ಕಥೆಯನ್ನ ಕಾದಂಬರಿಯಾಗಿಸಿದರೆ, ಚಿತ್ತಾಲರ ‘ಶಿಕಾರಿ’ ಅಥವಾ ಅನಂತಮೂರ್ತಿಯವರ ‘ಭವ’ದಂತಹ ಆಯಾಮ ಕನ್ನಡ ಸಾಹಿತ್ಯಕ್ಕೊದಗೀತು.

ಕೊನೆಯದಾಗಿ ಒಂದು ಮಾತು, ‘ಮಾಟ ಮಂತ್ರ ಗಳನ್ನ ಪ್ರತಿಷ್ಠಾಪನೆ ಮಾಡುತ್ತಿದ್ದ ಕಾಲಕ್ಕೇಯೇ, ದೊಡ್ಡಪ್ಪ ಕೋವಿಯನ್ನೂ ತೆಗೆದುಕೊಂಡು ಕೋವಿಮನೆಯ ಅಡಿಪಾಯ ಹಾಕುವ ರೀತಿಯಲ್ಲಿನ ದೊಡ್ಡಪ್ಪನ ಚಿತಾವಣೆ ಈಗ ನಿಂತು ಹಿಂದೆ ನೋಡುವ ನಮಗೆ, ಮನುಷ್ಯ ಯಶಸ್ಸಿಗಾಗಿ ನಡೆಸುವ ಅದ್ಭುತ ಹೂಟದಂತೆ ಕಂಡು ಚಕಿತಗೊಳಿಸುತ್ತದಲ್ಲಾ..’ ಇರಲಿ ರಾಜಲಕ್ಷ್ಮಿಯವರಿಗೆ ಯಶಸ್ಸು ಕೋರುತ್ತಾ, ಇಂತಹ ಪ್ರತಿಭೆಗಳನ್ನ ಬಚ್ಚಿಟ್ಟುಕೊಂಡಿರುವ ‘ದಟ್ಸ್‌ಕನ್ನಡ..’ ವನ್ನ ಅಭಿನಂದಿಸುವೆ.

ಕೋವಿ ಮನೆ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X