• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಜ್ಜನಿಕೆ ಹೇಗೆ ಬರುತ್ತದೆ ?

By Staff
|
  • ಕುಂಭಾಸಿ ಶ್ರೀನಿವಾಸ ಭಟ್‌, ಟ್ರಾಯ್‌, ಮಿಶಿಗನ್‌

SRINIVASABHAT@aol.com

ಒಬ್ಬ ವ್ಯಕ್ತಿಗೆ ಸಜ್ಜನಿಕೆ ಹೇಗೆ ಬರುತ್ತದೆ ? ಹುಟ್ಟಿನಿಂದಲೆ ? ಒಡನಾಟದಿಂದಲೆ ? ವಿದ್ಯಾವಂತನಾಗುವುದರಿಂದಲೆ ? ಅಥವಾ ವ್ಯಕ್ತಿ ಬೆಳೆದುಬಂದ ಪರಿಸರದ ಪ್ರಭಾವದಿಂದಲೆ ?

ನಾನು ಯಾರೊಡನಾದರೂ ಫೋನಿನಲ್ಲಿ ಮಾತನಾಡುವಾಗ ನನ್ನ ಮೊದಲನೆಯ ಪ್ರಶ್ನೆ- ‘ಹೇಗಿದ್ದೀರಿ, ಚೆನ್ನಾಗಿದ್ದೀರ ?’

ಆಶ್ಚರ್ಯದ ಸಮಾಚಾರವೆಂದರೆ ಕೆಲವು ವಿದ್ಯಾವಂತ ಸ್ನೇಹಿತರು ಅಥವಾ ಬಂಧುಗಳು ‘ನಾವೆಲ್ಲ ಚೆನ್ನಾಗಿದ್ದೇವೆ’ ಎಂದಷ್ಟೇ ಹೇಳಿ ಬೇರೆ ವಿಷಯದ ಕಡೆಗೆ ತಿರುಗುತ್ತಾರೆ. ಆದರೆ ನಮ್ಮ ತಾಯಿ (ಹೆಚ್ಚು ಓದಿಲ್ಲ, ಬರೇ ಮೂರನೆ ಕ್ಲಾಸು) ‘ನಾವೆಲ್ಲಾ ಚೆನ್ನಾಗಿದ್ದೇವೆ, ನೀನು, ನಳಿನಿ, ಮಕ್ಕಳು ಎಲ್ಲಾ ಹೇಗಿದ್ದೀರಿ?’ ಎಂದು ಕೇಳುತ್ತಾರೆ. ಈ ಅಭ್ಯಾಸ ನನ್ನ ತಾಯಿಗೆ ಯಾರೂ ಹೇಳಿ ಕೊಟ್ಟು ಕಲಿಸಿದ್ದಲ್ಲ, ಅದು ಅವಳ ಹುಟ್ಟಿನಿಂದ ಬಂದ ಸಜ್ಜನಿಕೆ.

*

Kumbhasi Srinivasa Bhatಇಲ್ಲಿ ಅಮೆರಿಕಾದಲ್ಲಿ ಹಲವಾರು ಸ್ನೇಹಿತರ ಮನೆಗೆ ಪಾರ್ಟಿಗೆ ಹೋಗುತ್ತೇವೆ. ನಮ್ಮಂತೆಯೇ ಇನ್ನೂ ಹಲವು ಸ್ನೇಹಿತರನ್ನು ಆಹ್ವಾನಿಸಿ ಬಹಳ ಶ್ರಮಪಟ್ಟು ಸ್ನೇಹಿತ, ಅವನ ಹೆಂಡತಿ, ಮಕ್ಕಳು ಬಹುದಿನಗಳ ಯೋಜನೆಯಿಂದ ಉತ್ತಮವಾದ ಅಡುಗೆ ಮಾಡಿ, ಅತಿಥಿ ಸತ್ಕಾರ ಮಾಡುತ್ತಾರೆ. ಆದರೆ ಕೆಲವು ಅತಿಥಿಗಳು ಬಹಳ ತಡವಾಗಿ ಬರುತ್ತಾರೆ, ಬಹಳ ಬೇಗ ವಾಪಾಸು ಮನೆಗೆ ಹೊರಡುತ್ತಾರೆ. ತಿಂದು, ಕುಡಿದು, ತಟ್ಟೆ ಲೋಟಗಳನ್ನು ಸಿಂಕಿನಲ್ಲೂ ಹಾಕದೆ, ಹೊರಡುವ ಮುನ್ನ ಸತ್ಕರಿಸಿದ ಮನೆಯಾಡತಿಗೆ ಎರಡು ಮೆಚ್ಚುಗೆಯ ಮಾತುಗಳನ್ನೂ ಆಡದೆ, ತಮ್ಮದೇ ಆಡಂಬರದ ಮಾತುಗಳನ್ನು ಆಡಿ, ತಾವು ಬಹಳ ‘ಬ್ಯುಸಿ’ ಆಗಿದ್ದೇವೆ ಎಂಬ ಬೂಟಾಟಿಕೆಯನ್ನು ತೋರಿಸಿ ಮನೆಗೆ ಹೊರಡುತ್ತಾರೆ. ಆದರೆ ಹಲವಾರು ಅತಿಥಿಗಳು ಸಮಯಕ್ಕೆ ಸರಿಯಾಗಿ ಬಂದು, ಮನೆಯವರ ಯೋಗಕ್ಷೇಮ ಸಮಾಚಾರಗಳನ್ನು ವಿಚಾರಿಸಿ, ಊಟ, ತಿಂಡಿ ಎಲ್ಲದರಲ್ಲೂ ಶಿಸ್ತಿನಿಂದ ವ್ಯವಹರಿಸಿ, ಮನೆಗೆ ಹೊರಡುವ ಮುನ್ನ ಆತಿಥ್ಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿ ನಗುಮುಖದಿಂದ ಹೊರಡುತ್ತಾರೆ. ಇದು ಅಮೆರಿಕದಲ್ಲಿ ಬಹು ದಿನಗಳು ಇದ್ದವರು ಮಾತ್ರವಲ್ಲ , ಭಾರತದಿಂದ ಸಂದರ್ಶನಕ್ಕಾಗಿ ಬಂದ ಬಂಧು, ಸ್ನೇಹಿತರುಗಳಿಗೂ ಅನ್ವಯಿಸುತ್ತದೆ. ಈ ಸಜ್ಜನಿಕೆಯನ್ನು ಯಾರು ಕಲಿಸಿಕೊಟ್ಟರು? ಅವರ ವಿದ್ಯೆ, ಒಡನಾಟಗಳಂತೂ ಅಲ್ಲ!

*

ಇನ್ನು ಕೆಲವರು ಪಾರ್ಟಿಯಲ್ಲಿ ಒಂದು ಗುಂಪಿನಲ್ಲಿ ಇದ್ದಾಗ ಹೇಗೆ ವ್ಯವಹರಿಸಬೇಕು ಎನ್ನುವುದನ್ನೇ ಅರಿಯರು. ಸಂಸ್ಕೃತದಲ್ಲಿ ಒಬ್ಬರ ಒಡನಾಟದಲ್ಲಿರುವಾಗ ಇರಬೇಕಾದ ಸುಸಂಸ್ಕೃತರ ಲಕ್ಷಣಗಳನ್ನು ಹೀಗೆ ವಿವರಿಸುತ್ತಾರೆ:

ಸ್ವಸ್ಥಾನ ಪರಿಜ್ಞಾನ - ತನ್ನ ಸ್ಥಾನಮಾನದ ಅರಿವು

ಪರ ಇಂಗಿತ ಪರಿಜ್ಞಾನ - ಬೇರೆಯವರ ಅಭಿಪ್ರಾಯದ ಬಗ್ಗೆ ಗೌರವ

ಪರಮತ ಸಹಿಷ್ಣುತೆ - ಪರರ ಅಭಿಪ್ರಾಯವನ್ನು ಸಹಿಸುವಿಕೆ

ಸರಸತಾ ಅಭಿರುಚಿ - ಸ್ನೇಹದ ವಾತಾವರಣ ರಚಿಸುವಿಕೆ

ಸತ್ಯಾಸತ್ಯ ನಿರ್ಣಯ - ಸತ್ಯ, ಅಸತ್ಯಗಳ ತುಲನಾತ್ಮಕ ನಿರ್ಣಯ

ನಮ್ಮ ಸ್ನೇಹಿತರು ಒಂದೆಡೆ ಸೇರಿದಾಗ- ಅನೇಕ ಹಿರಿಯರು, ಬುದ್ಧಿವಂತರೂ, ವಿದ್ಯಾವಂತರೂ ಆದ ವ್ಯಕ್ತಿಗಳು ಈ ಎಲ್ಲ ನಿಯಮಗಳಿಗೂ ವ್ಯತಿರಿಕ್ತವಾಗಿ ನಡೆಯುವುದನ್ನು ನೋಡಿದ್ದೇನೆ. ಆದರೆ ಭಾರತದಿಂದ ಸಂದರ್ಶನಕ್ಕಾಗಿಬಂದ ಹಲವಾರು ಹಿರಿಯರು, ಎಳೆಪ್ರಾಯದ ಹುಡುಗ ಹುಡುಗಿಯರು, ಈ ನಿಯಮವನ್ನು ಸರಿಯಾಗಿ ಪರಿಪಾಲಿಸುವುದನ್ನು ನೋಡಿದ್ದೇನೆ. ಹಾಗಾದರೆ ಸಜ್ಜನಿಕೆಗೆ ವಿದ್ಯೆ, ಪ್ರಾಯ, ಒಡನಾಟ ಇವಾವುದೂ ಕಾರಣವಲ್ಲ!

*

ನನ್ನ ಬಾಲ್ಯದಲ್ಲಿ ನಮ್ಮ ಮನೆಯ ದಿನಗೂಲಿ ಕೆಲಸ ಮಾಡಲು ಈರ (ತಂದೆ ತಾಯಿಯರು ವೀರ ಎಂದು ಹೆಸರಿಟ್ಟಿರಬೇಕು, ಜನರು ಈರನೆಂದು ಹೀನಾಯವಾಗಿ ಕರೆಯುತ್ತಿದ್ದರು. ನಾನು ಮಾತ್ರ ವೀರ ಎಂದೇ ಕರೆಯುತ್ತಿದ್ದೆ) ಎಂಬಾತ ಬರುತ್ತಿದ್ದ. ಬಡತನದಲ್ಲಿ ಹುಟ್ಟಿ ಬೆಳೆಯುತ್ತಿದ್ದರೂ, ವೀರ ನಮ್ಮ ಮನೆಗೆ ಬಂದೊಡನೆ, ನಮ್ಮ ಮನೆಯ ಸಮೀಪದ ಈಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ, ದೇವರಿಗೆ ಒಂದೆರಡು ಪ್ರದಕ್ಷಿಣೆ ಹಾಕಿ ಪ್ರಸಾದದ ರೂಪದಲ್ಲಿ ಸ್ವಲ್ಪ ಭಸ್ಮವನ್ನು ಹಣೆಯ ಮೇಲೆ ಹಚ್ಚಿಕೊಂಡೇ ಕೆಲಸ ಶುರು ಮಾಡುತ್ತಿದ್ದ. ಕೆಲಸವಾದ ಮೇಲೆ ಇನ್ನೊಮ್ಮೆ ಕೆರೆಯಲ್ಲಿ ಸ್ನಾನ ಮಾಡಿ ತನ್ನ ಮನೆಗೆ ಹೋಗುತ್ತಿದ್ದ. ಹಲವಾರು ಬ್ರಾಹ್ಮಣರ ಮನೆಯವರೇ ದಿನವೂ ಸ್ನಾನ ಮಾಡದಿರುವುದನ್ನು ನಾನೇ ಕಂಡಿದ್ದೇನೆ. ಈ ಸಜ್ಜನಿಕೆ, ಸಂಸ್ಕೃತಿ ಈರನಿಗೆ ಹೇಗೆ ಬಂತು?

*

ಅಮೆರಿಕಾದಲ್ಲಿ ಬಹಳಕಾಲದಿಂದ ನೆಲೆಸಿರುವ ನನ್ನ ಹಲವು ಸ್ನೇಹಿತರು ಯಾವುದಾದರೂ ವಿಶೇಷ ಸಂದರ್ಭಕ್ಕೆ ಆಹ್ವಾನಿಸಿದಾಗ RSVP ಮಾಡಿ ಎಂದರೆ, ಮರೆತು ಬಿಡುತ್ತಾರೆ. ಎರಡು ಮೂರು ಬಾರಿ ಕರೆದು ಜ್ಞಾಪಿಸಬೇಕು ಎಂದು ನಿರೀಕ್ಷಿಸುತ್ತಾರೆ. ಇನ್ನು ಮನೆಗೆ ಬಂದಾಗ ತಮ್ಮ ದೊಡ್ಡಸ್ತಿಕೆಯನ್ನು ತೋರಿಸುವ, ತಾವು ಅಮೇರಿಕದಲ್ಲೆ ಹುಟ್ಟಿದವರು, ನನ್ನಷ್ಟು ಅಮೇರಿಕೆಗೆ ಹೊಂದಿಕೊಂಡವರು ಯಾರೂ ಇಲ್ಲವೆಂದು, ಅಮೇರಿಕನ್ನಡಿರಿಗೆ ತಾರತಮ್ಯದ ಸ್ವಭಾವವೇ ಇಲ್ಲವೆಂದು ಸಾಧಿಸುವ, ಭಾರತದ ಬಗ್ಗೆ ತಾತ್ಸಾರವಾಗಿ ಮಾತಾಡುವ ಅಭ್ಯಾಸ ಇನ್ನು ಕೆಲವರಿಗೆ. ಇನ್ನು ಕೆಲವರಿಗೆ ತಮ್ಮ ಮಕ್ಕಳೇ ಇಂದ್ರ ಚಂದ್ರರೆಂದು ಹೊಗಳಿಕೊಳ್ಳುವ ಹುಚ್ಚು .

ಮತ್ತೂ ಕೆಲವರಿಗೆ ತಮ್ಮ ಒಡವೆಗಳ, ಕಾರಿನ, ತಾವು ಹೋಗಿ ಬಂದ ಕ್ರೂಸಿನ ಬಗ್ಗೆ ಎಷ್ಟು ಹೊಗಳಿಕೊಂಡರೂ ಸಾಲದು. ಇನ್ನು ಕೆಲವರಿಗೆ ತಮ್ಮಷ್ಟು ಬ್ಯುಸಿ ಆಗಿರುವವರು ಪ್ರಪಂಚದಲ್ಲೇ ಯಾರೂ ಇಲ್ಲವೆಂದು ತೋರಿಸಿಕೊಳ್ಳುವ ಆಸೆ. ಇನ್ನು ಕೆಲವರಿಗೆ ನಮ್ಮೂರಿನ ದೇವಸ್ಥಾನದಲ್ಲಿ ಮಾಡುವ ತಮ್ಮ ಸ್ವಯಂ ಸೇವಕತನದ ಬಗ್ಗೆ ಎಷ್ಟು ಹೊಗಳಿಕೊಂಡರೂ ಸಾಲದು. ತಮ್ಮ ಕೆಲಸದಲ್ಲಿ ತಮ್ಮ ಅಮೇರಿಕನ್‌ ಸಹೋದ್ಯೋಗಿಯ ಹುಂಬತನದ ಬಗ್ಗೆ ಕೊಚ್ಚಿಕೊಳ್ಳುವ ಅಭ್ಯಾಸ ಕೆಲವರಿಗಾದರೆ, ತಮ್ಮ ಅಮೇರಿಕನ್‌ ಬಾಸ್‌ ತಾನಿಲ್ಲದೇ ಉಳಿಯುವುದೇ ಅಸಾಧ್ಯ ಎನ್ನುವ ಜಂಭ ಇನ್ನು ಕೆಲವರಿಗೆ. ನನ್ನ ಹಲವಾರು ಸ್ನೇಹಿತರಿಗೆ ಸ್ಟಾಕ್‌ ಮಾರ್ಕೆಟ್‌ ಹುಚ್ಚಾದರೆ, ಕೆಲವು ವೈದ್ಯ ಸ್ನೇಹಿತರು ರೋಗಿಗಳ, ಆಸ್ಪತ್ರೆಯ ಮತ್ತು ಒಟ್ಟಾರೆ ಅಮೇರಿಕಾದ ಮೆಡಿಕಲ್‌ ಕೇರ್‌ ಸಿಸ್ಟಂ ಬಗ್ಗೆ ತಲೆನೋವು ಮಾಡಿಕೊಂಡು ಇತರರಿಗೂ ತಲೆ ನೋವು ಕೊಡುತ್ತಾರೆ. ಕೆಲವೊಮ್ಮೆ ಈ ವಾಗ್ವಾದ ಚರ್ಚೆಗಳು ಬಿರುಸಾಗಿ ಅತಿರೇಕಕ್ಕೆ ಹೋಗಿ ಅಹ್ವಾನಿಸಿದಾತನಿಗೆ ಕಷ್ಟಕರ ಸನ್ನಿವೇಶ ಬರುವಂತಾಗುತ್ತದೆ. ಇವರೆಲ್ಲ ಓದಿದವರೆ, ಉತ್ತಮ ಒಡನಾಟದಲ್ಲಿರುವವರೆ. ಆದರೆ ಸಜ್ಜನಿಕೆಯನ್ನು ಕಲಿಯಲಿಲ್ಲವೇಕೆ?

*

ಇದೆಲ್ಲ ಯೋಚನೆ ಮಾಡಿದಾಗ ಸಜ್ಜನಿಕೆ ಹುಟ್ಟಿನಿಂದಲೇ ಬರಬೇಕು, ಕಲಿಯುವಿಕೆಯಿಂದ ಅಥವಾ ಒಡನಾಟದಿಂದ ಬರುವುದು ಸಾಧ್ಯವಿಲ್ಲ ಎಂದು ನನಗೆ ಅನ್ನಿಸುತ್ತದೆ. ನಿಮಗೆ ?

(ಲೇಖಕರು, 2002 ಡೆಟ್ರಾಯಿಟ್‌ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ ‘ಸ್ಪಂದನ’ದ ಸಂಪಾದಕರು.)

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more