• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಭೂಮಿಕಾ’ದಲ್ಲಿ ಬಾಚಿಕೊಂಡಷ್ಟೂ ಬೀ

By Staff
|

ನೀವೊಬ್ಬರ ಮನೆಗೆ ಹೋಗುತ್ತೀರಿ. ಮನೆಯ ಯಜಮಾನ ನಿಮ್ಮನ್ನು ಸ್ವಾಗತಿಸುತ್ತಾರೆ. ಅದೂ ಇದೂ ಹರಟೆ ಆಗುತ್ತಿದ್ದಂತೆಯೇ, ‘ಸತ್ಯ ನಾರಾಯಣ....’ ಎಂದು ಯಜಮಾನ ಜೋರಾಗಿ ಕರೆಯುತ್ತಾರೆ. ಬಾಲ ಅಲ್ಲಾಡಿಸುತ್ತ ಆ ಮನೆಯ ನಾಯಿ ಬರುತ್ತದೆ! ಸ್ವಲ್ಪ ಹೊತ್ತಿನ ನಂತರ ಹರಟೆಯ ಮಧ್ಯದಲ್ಲೇ ಯಜಮಾನ ‘ಜಿಮ್ಮೀ....’ ಎಂದು ಕರೆಯುತ್ತಾರೆ. ಅವರ ಮಗ ಬರುತ್ತಾನೆ ಅಲ್ಲಿಗೆ! ‘ಇದೇನ್‌ ಸಾರ್‌, ನಾಯಿಗೆ ಸತ್ಯನಾರಾಯಣ ಅಂತಾನೂ, ಮಗನಿಗೆ ಜಿಮ್ಮಿ ಅಂತಾನೂ ಕರೆಯುತ್ತಿದ್ದೀರಿ...’ ಎಂದು ನೀವು ಕೇಳಿದರೆ ಮನೆಯಾಡೆಯನ ಉತ್ತರ - ‘ಹೌದು ಸ್ವಾಮೀ, ನಾಯಿ ಅದೆಷ್ಟು ನಿಯತ್ತುಳ್ಳ ಪ್ರಾಣಿ ನೋಡಿ, ಕೊನೆಪಕ್ಷ ಅದರ ಹೆಸರಿಟ್ಟಿರುವುದರಿಂದಾದ್ರೂ ನನ್‌ಮಗ ಶಿಸ್ತನ್ನು ಕಲಿಯುತ್ತಾನೇನೊ ಎಂಬ ಹಂಬಲ...’!

ಇಂತಹ ಸಂಭಾಷಣೆ ನಡೆಯಬಹುದಾದುದು (ನಿಜವಾಗಿ ನಡೆದಿರುವುದು) ಕನ್ನಡ ಸಾಹಿತ್ಯದ ಹಾಸ್ಯಬ್ರಹ್ಮ ಬೀಚಿಯವರ ಮನೆಯಲ್ಲಿ ! ಬೀಚಿಯವರ ಬದುಕು-ಬರೆಹಗಳಲ್ಲಿ ಹಾಸುಹೊಕ್ಕಾಗಿರುವ ಇಂತಹ ಅನೇಕ ಹಾಸ್ಯಮಯ ಸನ್ನಿವೇಶಗಳನ್ನು ಭೂಮಿಕಾ ಸಾಹಿತ್ಯ ಮಂಥನ ತಿಂಗಳ ಚರ್ಚೆಯಡಿ (ಜೂನ್‌ 8, 2003) ಬಣ್ಣಿಸಿ ರಂಜಿಸಿದವರು, ಬೀಚಿಯವರನ್ನು ಹತ್ತಿರದಿಂದ ಬಲ್ಲ ಸುರೇಶ್‌ ರಾಮಚಂದ್ರ. ಬೀಚಿ ಉವಾಚಗಳನ್ನು ಕೇಳಿ ನಸುನಕ್ಕು ಭಾನುವಾರ(ಜೂ.8) ಅಪರಾಹ್ನದ ಜಡತ್ವಕ್ಕೆ ಚೇತನ ಪಡಕೊಂಡವರು, ಭಾಷಣ ಕೇಳಿಸಿಕೊಂಡ ಮಂದಿ.

Suresh Ramachandra, The speaker at Bhoomikaಬೀಚಿ ಬಗ್ಗೆ ತಮ್ಮ ಉಪನ್ಯಾಸವನ್ನು ಮೂರು ವಿಭಾಗಗಳಲ್ಲಿ ಪ್ರಸ್ತುತಪಡಿಸಿದ ಸುರೇಶ್‌, ಮೊದಲು ಬೀಚಿಯವರ ಹುಟ್ಟು ( 1913, ಹರಪ್ಪನಹಳ್ಳಿ), ಬಾಲ್ಯ, ಓದು, ನೌಕರಿ (ಪೊಲೀಸ್‌ ಅಟೆಂಡರ್‌, ಆಫೀಸ್‌ ಸುಪರಿಂಟೆಂಡೆಂಟ್‌) ಇತ್ಯಾದಿಯ ಬಗ್ಗೆ ಪರಿಚಯ ಮಾಡಿಕೊಟ್ಟರು. ತದನಂತರ ಬೀಚಿಯವರ ಜೀವನದ ಮತ್ತು ಬೀಚಿಯವರು ತಮ್ಮ ಕಾಲ್ಪನಿಕ ಪಾತ್ರ ತಿಂಮನ ಮೂಲಕ ಕನ್ನಡ ಸಾರಸ್ವತಲೋಕಕ್ಕೆ ನೀಡಿದ ವಿಟ್‌-ಪನ್‌ಗಳಿಂದೊಡಗೂಡಿದ ಅಣಿಮುತ್ತುಗಳನ್ನು ಒಂದೊಂದಾಗಿ ‘ನೆನಪುಗಳು’ ಎಂಬ ವ್ಯಾಖ್ಯೆಯಾಂದಿಗೆ ಸ್ಮರಿಸಿದರು. ಸುರೇಶ್‌ ತಾವು ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದಾಗ ಬೀಚಿಯವರನ್ನು ಭಾಷಣಕ್ಕೆ ಕರೆದದ್ದು, ಅವರ ರಸಾಳ ಭಾಷಣ ಇಪ್ಪತ್ತೈದು ವರ್ಷಗಳ ನಂತರವೂ ಹೇಗೆ ಮೆಲುಕು ಹಾಕುವಂತಿದೆಯೆಂಬುದನ್ನು ನೆನೆಸಿಕೊಂಡರು. ಜಾತಿ ಪದ್ಧತಿಯ ವಿರುದ್ಧ, ಆಸ್ತಿಕತೆಯ ವಿರುದ್ಧ ಸಾಮಾಜಿಕ ಕಳಕಳಿ ಮತ್ತು ಚಿಂತನವುಳ್ಳ ಬೀಚಿಯವರ ಇನ್ನೊಂದು ಮುಖದ ಪರಿಚಯವನ್ನೂ ಮಾಡಿಸಿದರು.

ಎಸ್ಸೆಲ್ಸಿವರೆಗಷ್ಟೇ ವ್ಯಾಸಂಗಮಾಡಿದ್ದ ಬೀಚಿ ಕನ್ನಡ ಓದುವುದೆಂದರೇ ವಾಕರಿಸುತ್ತಿದ್ದ ವ್ಯಕ್ತಿ ! ಕನ್ನಡ ಪುಸ್ತಕ ಓದುವುದು ಪ್ರತಿಷ್ಠೆಗೆ ಕುಂದು ಎಂದೂ, ಹಾಗೊಂದು ವೇಳೆ ಓದಬೇಕಾಗಿ ಬಂದರೂ ‘ಇಲ್ಲಸ್ಟ್ರೇಟೆಡ್‌ ವೀಕ್ಲಿ’ ಮ್ಯಾಗಜಿನ್‌ನ ಒಳಗಿಟ್ಟು ಕನ್ನಡ ಪುಸ್ತಕ ಓದಿದ ಮಹಾಶಯ. ಅಂಥವರಿಗೆ ಅವರ ಹೆಂಡತಿಯೇ ಒಮ್ಮೆ, ಅ.ನ.ಕೃ ಬರೆದ ‘ಸಂಧ್ಯಾರಾಗ’ ಕೃತಿಯನ್ನು ಓದುವಂತೆ ಪ್ರೇರೇಪಿಸಿದರಂತೆ. ಆ ಪುಸ್ತಕ ಬೀಚಿಯವರ ಮೇಲೆ ಬಹಳ ಪ್ರಭಾವ ಬೀರಿತಂತೆ. ಮುಂದೆ ಬೀಚಿ ಕನ್ನಡದಲ್ಲೇ ಬರೆಯಲಾರಂಭಿಸಿದರು. ಜಾರ್ಜ್‌ ಬರ್ನಾರ್ಡ್‌ ಷಾ ಕೂಡ ಬೀಚಿಯವರ ಮೇಲೆ ಪ್ರಭಾವ ಬೀರಿದ ಇಂಗ್ಲೀಷ್‌ ಸಾಹಿತಿ. ರಷ್ಯಾಕ್ಕೆ ಭೇಟಿ ನೀಡಿ ಬಂದ ಮೇಲೆ ಬೀಚಿ ಅಲ್ಲಿಯ ಜನಜೀವನ, ಸ್ವಚ್ಛತೆ ಇತ್ಯಾದಿಯನ್ನೆಲ್ಲ ಮೆಚ್ಚಿ ‘ದೇವರಿಲ್ಲದ ಗುಡಿ’ ಕೃತಿಯನ್ನು ಬರೆದರು.

ಉಪನ್ಯಾಸದ ಮೂರನೇ ಸೆಕ್ಷನನ್ನು ಬೀಚಿಯವರ ಕೃತಿಗಳಿಂದ ಕೆಲಭಾಗಗಳನ್ನು ಓದಿ ಹೇಳಲು ಉಪಯೋಗಿಸಿದ ಸುರೇಶ್‌ ‘ಅಂದನಾ ತಿಂಮ’ (ಇದು ಡಿವಿಜಿಯವರ ಮಂಕುತಿಮ್ಮನ ಕಗ್ಗದಂತೆಯೇ ಇರುವ ಆದರೆ ಹಾಸ್ಯದ ಮೂಲಕ ಉಪದೇಶದ ಪುಸ್ತಕ) ದಿಂದ ವಿನೋದದ ಪದ್ಯಗಳೊಂದಿಷ್ಟನ್ನು ಓದಿದರು. ‘ಭಯಾಗ್ರಫಿ’ ಎಂಬ ಬೀಚಿಯವರ ಆತ್ಮಚರಿತ್ರೆಯಲ್ಲಿ ಬರುವ ಕೆಲವು ಭಾಗಗಳನ್ನೂ ಉಲ್ಲೇಖಿಸಿದರು. ಕುಡಿತ ಮತ್ತಿತರ ದುಶ್ಚಟಗಳಿದ್ದರೂ ಬೀಚಿ ಸ್ವತಃ ಮಾನವೀಯತೆಯ ನಿದರ್ಶನರಾಗಿದ್ದರಷ್ಟೇ ಅಲ್ಲ, ಇತರರಲ್ಲಿದ್ದ ಮಾನವೀಯತೆಯನ್ನು ಮೆರೆಸುವ ವಿಶಾಲ ಹೃದಯಿ ಎಂಬ ಅಂಶವನ್ನು ಸುರೇಶ್‌ ಸೋದಾಹರಣವಾಗಿ ಪ್ರಶಂಸಿಸಿದರು.

ಸುರೇಶ್‌ ಉಪನ್ಯಾಸದಲ್ಲಿ ಬೀಚಿ ಬಗ್ಗೆ ಹೇಳಲು ಮರೆತ ಒಂದು ಸಂಗತಿಯೆಂದರೆ - ಕನ್ನಡದ ಜನಪ್ರಿಯ ವಾರಪತ್ರಿಕೆ ‘ಸುಧಾ’ದಲ್ಲಿ ‘ನೀವು ಕೇಳಿದಿರಿ?’ ಅಂಕಣದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ‘ಉತ್ತರಭೂಪ’ ಬೀಚಿಯೇ ಆಗಿದ್ದರು ಎಂಬುದು ಸುಮಾರು ಹತ್ತು-ಹನ್ನೆರಡು ವರ್ಷಗಳ ಕಾಲ ರಹಸ್ಯವಾಗಿಯೇ ಇದ್ದದು ್ದ!

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X