ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಪ್ರವಾಸಿ ಭಾರತೀಯ ದಿವಸಕ್ಕೆ ದ್ವಿ ಪೌರತ್ವದ ಉಡುಗೊರೆ

By Staff
|
Google Oneindia Kannada News

Prime Minister Atal Bihari Vajpayeeನವದೆಹಲಿ : ಅನಿವಾಸಿ ಭಾರತೀಯರಿಗೆ ದ್ವಿಪೌರತ್ವವನ್ನು ಕಲ್ಪಿಸುವ ಮಸೂದೆಯನ್ನು ಫೆಬ್ರವರಿಯಲ್ಲಿ ಪ್ರಾರಂಭವಾಗುವ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದಾರೆ.

ಕೆಲವು ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ದ್ವಿಪೌರತ್ವವನ್ನು ನೀಡುವ ಕುರಿತು ನೀತಿ ನಿಯಮವನ್ನು ರೂಪಿಸುವ ಕೆಲಸದಲ್ಲಿ ಪ್ರಸ್ತುತ ನಾವು ತೊಡಗಿದ್ದೇವೆ. ಈ ಮಸೂದೆಯನ್ನು ಬರುವ ಫೆಬ್ರವರಿ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ‘ಪ್ರಥಮ ಪ್ರವಾಸಿ ಭಾರತೀಯ ದಿವಸ ’ ಆಚರಣೆ ಕಾರ್ಯಕ್ರಮಕ್ಕೆ ಜ.9 ರ ಗುರುವಾರ ನವದೆಹಲಿಯಲ್ಲಿ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ವಾಜಪೇಯಿ ಹೇಳಿದರು.

ತಾವು ನೆಲೆಸಿರುವ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಸೌಹಾರ್ದತೆಗೆ ಧಕ್ಕೆಯಾಗದಂತೆ ಹೊಂದಿಕೊಳ್ಳುವ ಹಾಗೂ ಭಾರತೀಯ ಗುರುತ್ವವನ್ನು ಉಳಿಸಿಕೊಳ್ಳುವ ಬಹುದೊಡ್ಡ ಸವಾಲನ್ನು ಅನಿವಾಸಿ ಭಾರತೀಯರು ಎದುರಿಸುತ್ತಿದ್ದಾರೆ. ಈ ಸವಾಲನ್ನು ಇತ್ತೀಚಿನ ದಿನಗಳಲ್ಲಿ ಎನ್‌ಆರ್‌ಐಗಳು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಕೂಡ ಎಂದು ಪ್ರಧಾನಿ ಬಣ್ಣಿಸಿದರು.

ವಾಸಿಸುತ್ತಿರುವ ದೇಶದ ಪೌರತ್ವ ಹಾಗೂ ಭಾರತೀಯ ಐಡೆಂಟಿಟಿಯ ನಡುವೆ ಸಂಘರ್ಷ ಉಂಟಾಗದಂತೆ ಅನಿವಾಸಿ ಭಾರತೀಯರು ಸಮತೋಲನವನ್ನು ಸಾಧಿಸಿದ್ದಾರೆ. ಆ ಕಾರಣದಿಂದಲೇ ಅನಿವಾಸಿ ಭಾರತೀಯರಿಗೆ ದ್ವಿಪೌರತ್ವವನ್ನು ಕಲ್ಪಿಸಲು ಸರ್ಕಾರ ಉದ್ದೇಶಿಸಿದ್ದು , ಎಲ್‌. ಎಂ. ಸಿಂಘ್ವಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದರು.

‘ಅನಿವಾಸಿ ಭಾರತೀಯರ ಕಲ್ಯಾಣ ನಿಧಿ’

ಗಲ್ಫ್‌ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ಭಾರತೀಯ ಕೆಲಸಗಾರರಿಗೆ ಕಡ್ಡಾಯ ವಿಮೆ ಯೋಜನೆಯನ್ನು ಶೀಘ್ರವೇ ಪರಿಚಯಿಸುವುದಾಗಿ ವಾಜಪೇಯಿ ಘೋಷಿಸಿದರು.

ಅನಿವಾಸಿ ಭಾರತೀಯರ ಕುರಿತು ಸರ್ಕಾರಕ್ಕೆ ಅತೀವ ಕಾಳಜಿಯಿದ್ದು - ‘ಅನಿವಾಸಿ ಭಾರತೀಯರ ಕಲ್ಯಾಣ ನಿಧಿ’ ಸ್ಥಾಪಿಸುವ ಕುರಿತು ಮಸೂದೆಯನ್ನು ತರುವ ಪ್ರಸ್ತಾವನೆ ಈಗಾಗಲೇ ಸರ್ಕಾರದ ಮುಂದಿದೆ. ಗಲ್ಫ್‌ನಲ್ಲಿ ಉದ್ಯೋಗ ಮಾಡುವ ಭಾರತೀಯರ ಮಕ್ಕಳಿಗೆ ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಮೀಸಲಾತಿ ಕಲ್ಪಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎಂದು ಪ್ರಧಾನಿ ಹೇಳಿದರು.

ಬಂಡವಾಳವಷ್ಟೇ ಅಲ್ಲ , ಅನುಭವವೂ ಬೇಕು

ಅನಿವಾಸಿ ಭಾರತೀಯರು ಹಾಗೂ ಭಾರತೀಯ ಮೂಲದ ವ್ಯಕ್ತಿಗಳು ಹೊಸ ಸಹಸ್ರಮಾನದಲ್ಲಿ ಮುನ್ನಡೆಯಲು ತಮ್ಮ ಅನ್ನಿಸಿಕೆ ಅಭಿಪ್ರಾಯಗಳನ್ನು ಭಾರತದೊಂದಿಗೆ ಹಂಚಿಕೊಳ್ಳಬೇಕು. ನಾವು ಕೇವಲ ಬಂಡವಾಳ ಹೂಡಿಕೆಯನ್ನು ಮಾತ್ರ ನಿರೀಕ್ಷಿಸುವುದಿಲ್ಲ ; ನಿಮ್ಮ ಐಡಿಯಾಗಳನ್ನೂ ಕೂಡ ಬಯಸುತ್ತೇವೆ. ನಿಮ್ಮ ಸಮೃದ್ಧ ಅನುಭವ, ಜಾಗತಿಕ ದೃಷ್ಟಿಕೋನ ನಮಗೆ ಬೇಕು ಎಂದು ಪ್ರವಾಸಿ ಭಾರತೀಯ ದಿನ ಸಂದರ್ಭದಲ್ಲಿ ಎನ್‌ಆರ್‌ಐಗಳನ್ನುದ್ದೇಶಿಸಿ ಪ್ರಧಾನಿ ನುಡಿದರು.

ಬಾಹ್ಯ ( ಕಾರ್ಗಿಲ್‌ ಕದನ ) ಅಥವಾ ಆಂತರಿಕ ( ಸಂಸತ್‌ ಭವನದ ಮೇಲಿನ ದಾಳಿ) ಸವಾಲುಗಳು ಹಾಗೂ ಉಗ್ರರ ದಾಳಿಯನ್ನು ದೇಶ ಎದುರಿಸಿದಾಗಲೆಲ್ಲ ಬೆಂಬಲಕ್ಕೆ ನಿಂತ ಅನಿವಾಸಿ ಭಾರತೀಯರನ್ನು ಪ್ರಧಾನಿ ಅಭಿನಂದಿಸಿದರು. 1998 ರಲ್ಲಿ ಅಣು ಪರೀಕ್ಷೆ ನಡೆಸಿದ ಸಂದರ್ಭದಲ್ಲೂ ಭಾರತದ ಸಮರ್ಥನೆಗೆ ನಿಂತ ಅನಿವಾಸಿ ಭಾರತೀಯರ ನಿಲುವನ್ನು ಪ್ರಧಾನಿ ಶ್ಲಾಘಿಸಿದರು.

1998 ರಲ್ಲಿ , ಇಂಡಿಯಾ ಬಾಂಡ್‌ಗಳ ಪುನರುಜ್ಜೀವನದ ಮೂಲಕ 4 ಬಿಲಿಯನ್‌ ಡಾಲರ್‌ಗಳಿಗೂ ಹೆಚ್ಚಿನ ಮೊತ್ತ ಸಂಗ್ರಹವಾದುದನ್ನೂ ಪ್ರಧಾನಿ ಸ್ಮರಿಸಿದರು.

ಸಂಭ್ರಮದ ಸಮಾರಂಭ

ಪ್ರಥಮ ಪ್ರವಾಸಿ ಭಾರತೀಯ ಸಮಾರಂಭಕ್ಕೆ ಆಗಮಿಸಿದ ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಹಾಗೂ ಭಾರತೀಯ ಮೂಲದವರನ್ನು ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಯಶವಂತ್‌ ಸಿನ್ಹಾ ಪ್ರಧಾನಿಯವರೊಂದಿಗೆ ಸ್ವಾಗತಿಸಿದರು.

ನೀವು ಭಾರತಕ್ಕೆ ಮರಳಲು ಇಷ್ಟಪಡುವಂಥ ವಾತಾವರಣ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ. ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲ ; ಸಾಧ್ಯವಿರುವ ಎಲ್ಲಾ ಅಗತ್ಯಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಭಾರತದ ನಿಧಾನಗತಿಯ ಪ್ರಗತಿಯನ್ನು ಪ್ರಸ್ತಾಪಿಸಿದ ವಾಜಪೇಯಿ- 2020 ನೇ ಇಸವಿಯಾಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಿಸುವ ತಮ್ಮ ಮಹತ್ವಾಕಾಂಕ್ಷೆಯ ಗುರಿಯನ್ನು ತೋಡಿಕೊಂಡರು. ‘ಬಡತನದ ಅವಶೇಷಗಳಿಂದ ಸಂಪೂರ್ಣವಾಗಿ ಹೊರಬಂದು, 1 ಬಿಲಿಯನ್‌ ಜನರಿಗೆ ಎಲ್ಲ ಅವಕಾಶಗಳು ದೊರೆಯಬೇಕು’ ಎಂದು ಪ್ರಧಾನಿ ತಮ್ಮ ಯೋಜನೆಯನ್ನು ಬಣ್ಣಿಸಿದರು.

ಭಾರತವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಪ್ರವಾಸಿ ಭಾರತೀಯ ವಾಹಕನಾಗಲಿ ಎಂದು ವಾಜಪೇಯಿ ಆಶಿಸಿದರು.

ಹತ್ತು ಗಣ್ಯರಿಗೆ ಸನ್ಮಾನ

ವಿವಿಧ ದೇಶಗಳಲ್ಲಿ ನೆಲೆಸಿರುವ ಹತ್ತು ಮಂದಿ ಅನಿವಾಸಿ ಭಾರತೀಯ ಹಾಗೂ ಭಾರತೀಯ ಮೂಲದ ಪ್ರಮುಖರನ್ನು ‘ಪ್ರವಾಸಿ ಭಾರತೀಯ ದಿವಸ’ ಆಚರಣೆ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿ ಸನ್ಮಾನಿಸಿದರು.

ಸನ್ಮಾನಿತರು : ಮಾರಿಷಿಸ್‌ ಮುಖಂಡ ಅನಿರುಧ್‌ ಜುಗ್ನಾಥ್‌, ಕಾಮನ್ವೆಲ್ತ್‌ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀದತ್‌ ರಾಮ್‌ಪಾಲ್‌, ಮೆಕಿನ್ಸೆ ಕಾರ್ಯ ನಿರ್ವಾಹಕ ನಿರ್ದೇಶಕ ರಜತ್‌ ಗುಪ್ತಾ , ಬ್ರಿಟೀಷ್‌ ಸಂಸದ ಲಾರ್ಡ್‌ ನವನೀತ್‌ ಧೋಲ್ಕಿಯ, ಬ್ರಿಟೀಷ್‌ ಕೊಲಂಬಿಯಾದ ಮಾಜಿ ಪ್ರಧಾನಿ ಉಜ್ಜಲ್‌ ದೊಸಂಝ್‌, ಮಲೇಷಿಯಾ ಸಚಿವ ಡಿ ಸಮಿ ವೆಲ್ಲು , ದಕ್ಷಿಣ ಆಫ್ರಿಕಾದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಫಾತಿಮ ಮಿರ್‌, ಕೀನ್ಯಾದ ಉದ್ಯಮಿ ಮನುಭಾಯ್‌ ಚಂದೇರಿಯ, ಹಾಂಕಾಂಗ್‌ ಉದ್ಯಮಿ ಹರಿಲಿಲ ಹಾಗೂ 300 ವರ್ಷಗಳಿಂದ ಒಮನ್‌ನಲ್ಲಿ ನೆಲೆಸಿರುವ ಮನೆತನದ ಉದ್ಯಮಿ ಖನಕ್‌ಭಾಯ್‌ ಖೇಮ್ಜಿ .

ಇದೇ ಸಂದರ್ಭದಲ್ಲಿ 1930 ರಲ್ಲೇ ಟ್ರಿನಿಡಾಡ್‌ ಹಾಗೂ ಟೊಬೆಗೊಗೆ ವಲಸೆ ಹೋದ ಕಾರ್ಮಿಕ ನಜೀರ್‌ ಅಹ್ಮದ್‌ ಅವರನ್ನೂ ಪ್ರಧಾನಿ ಸನ್ಮಾನಿಸಿದರು.

(ಪಿಟಿಐ)

Post your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X