ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕೆಯಲ್ಲಿ ನಾಗು ಶಂಕರ್‌ ದೋಸೆ ಕ್ಯಾಂಪ್‌ !

By Staff
|
Google Oneindia Kannada News

ಅಮೆರಿಕೆಯಲ್ಲಿ ನಾಗು ಶಂಕರ್‌ ದೋಸೆ ಕ್ಯಾಂಪ್‌ !
6 ವರ್ಷಗಳ ಹಿಂದೆ ನಾಗು ಹಾಗೂ ಅವರ ಯಜಮಾನರು ಇಟ್ಟ ಪುಟ್ಟ ಅಂಗಡಿ ಇವತ್ತು ಹಸಿದು ಬಂದವರಿಗೆ ದೋಸೆ ಮನೆೆ. ಶನಿವಾರ ಬಂತೆಂದರೆ ನಾಗು ದೋಸೆಗೆ ಮೈಲುದ್ದ ಕ್ಯೂ.

  • ದಟ್ಸ್‌ಕನ್ನಡ ಬ್ಯೂರೋ
ದೋಸೆ ಎಲ್ಲಿಲ್ಲ ಹೇಳಿ. ಫ್ರೆಂಚರ ಕ್ರೆಪ್‌, ಇಥಿಯೋಪಿಯನ್ನರ ಇಂಡೆರಾ, ಚೀನೀಯರ ಮ್ಯಾಂಡರಿನ್‌ ಪ್ಯಾನ್‌ಕೇಕ್‌, ರಷ್ಯನ್ನರ ಬ್ಲಿನಿ, ಇಟಾಲಿಯನ್ನರ ಕ್ರೆಸ್ಪೆಲ್ಲ, ಮೆಕ್ಸಿಕನ್ನರ ಟಾರ್ಟಿಲ್ಲ- ಇವೆಲ್ಲ ಆಯಾ ದೇಶದ ದೋಸೆಗಳೇ. ಇಡ್ಲಿ- ದೋಸೆ ಅನ್ನೋದು ನಮ್ಮ ಕನ್ನಡ ಪಾಕಸಂಸ್ಕೃತಿಯ ಪ್ರತಿನಿಧಿಗಳು. ಇಂಥಾ ದೋಸೆ ಸಂಸ್ಕೃತಿ ಸಾಗರದಾಚೆಯ ಟಾಂಪದಲ್ಲಿ ಜೀವ ತಳೆದಿದೆ. ಅದಕ್ಕೆ ಜೀವ ಕೊಟ್ಟಿರುವವರು ನಾಗರತ್ನ ಉರುಫ್‌ ನಾಗು ಶಂಕರ್‌ ಹಾಗೂ ಅವರ ಪತಿ ವಿಜಯಾ ಶಂಕರ್‌. ಅಲ್ಲಿನ ಎನ್‌.ಎಸ್‌.ಫುಡ್‌ ಅಂಡ್‌ ಗಿಫ್ಟ್ಸ್‌ನಲ್ಲಿ ಬಿಸಿ ದೋಸೆಯದ್ದೇ ಭರಾಟೆ.

ನಾಗು ಅವರು ಕಾವಲಿಯಿಂದ ತೆಗೆದು ಪೇಪರ್‌ ತಟ್ಟೆಯ ಮೇಲಿಟ್ಟು ಕೊಡುವ ದೋಸೆ ಟೈಮ್ಸ್‌ ಪತ್ರಿಕೆಯಲ್ಲಿ ದೊಡ್ಡ ನುಡಿಚಿತ್ರವಾಗಿ ಪ್ರಕಟವಾಗಿತ್ತು. ಅಲ್ಲಿ , ದೋಸೆ ಎಂದರೇನು ಎಂಬುದರಿಂದ ಶುರುವಾಗಿ, ಅದರ ಇತಿ ವೃತ್ತಾಂತ ವ್ಯಕ್ತವಾಗಿರುವುದೇ ಒಂದು ಗಮ್ಮತ್ತು. ಆ ಲೇಖನದ ಸಂಕ್ಷಿಪ್ತ ಸಾರ ಹೀಗಿದೆ-

Nagu Shankar preparing Delicious Dosaಅಕ್ಕಿಯಿಂದ ಮಾಡುವ ತಿಂಡಿ ದೋಸೆಯನ್ನು ಕೆಲವು ಬಾರಿ ಪ್ಲೇನ್‌ ಆಗಿ ತಿನ್ನುತ್ತಾರೆ. ಆದರೆ, ಬಹುತೇಕ ಈರುಳ್ಳಿ- ಆಲೂಗಡ್ಡೆ ಪಲ್ಯದ ರೋಲ್‌ ರೂಪದಲ್ಲಿ ಅದು ರುಚಿಸುತ್ತದೆ. ಇದೇ ಮಸಾಲೆ ದೋಸೆ. ಟಾಂಪಾದ ಎನ್‌.ಎಸ್‌.ಫುಡ್‌ನ ನಾಗು ಶಂಕರ್‌, ಇದನ್ನು ಬರ್ರಿಟೋ ಥರ ತಿನ್ನಿ ಅಂತಾರೆ.

ಬರ್ರಿಟೋಗಿಂತ ಮಸಾಲೆ ದೋಸೆ ಕೊಂಚ ಅಗಲ. ಕಾಗದದ ತಟ್ಟೆಯ ಮೇಲೆ ಹಾಕಿಕೊಡುವ ಮೃದುವಾದ ಅಂಚಿನ ದೋಸೆಯ ಮಧ್ಯದ ಪಲ್ಯ ಇರುವ ಭಾಗದ ರುಚಿ ಬಾಯಲ್ಲಿ ನೀರೂರಿಸುತ್ತದೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಅನೇಕರು ಇಷ್ಟಪಡುವ ತಿನಿಸು ಈ ದೋಸೆ.

ಭಾರತದ ಚರಿತ್ರೆಯಲ್ಲಿ ದೋಸೆಯ ಬೇರುಗಳಿವೆ. ಕ್ರಿ.ಶ.6ನೇ ಶತಮಾನದಲ್ಲೇ ತಮಿಳು ಸಂಗಮ ಸಾಹಿತ್ಯದಲ್ಲಿ ಮೊದಲ ಬಾರಿಗೆ ದೋಸೆಯ ಉಲ್ಲೇಖವಾಯಿತು. ಭಾರತದಲ್ಲಿ ಬೆಳಗಿನ ತಿಂಡಿಯಾಗಿ ದೋಸೆ ಅನೇಕರ ಮೆಚ್ಚು. ಅದರ ಜೊತೆಗೆ ಹಾಲಿನಿಂದ ಮಾಡಿದ ಕಡಕ್‌ ಚಾಯ್‌ ಇದ್ದರೆ ಮಜವೋ ಮಜಾ. ಮಧ್ಯಾಹ್ನದ ಕೊನೆಯ ಗಳಿಗೆಗಳಲ್ಲೂ ದೋಸೆಯನ್ನು ಲಘು ಉಪಹಾರವಾಗಿ ಚಟ್ನಿ ಹಾಗೂ ಸಾಂಬಾರಲ್ಲಿ ಅದ್ದಿಕೊಂಡು ತಿನ್ನುತ್ತಾರೆ. ಇವತ್ತು ಭಾರತದ ಪಂಚತಾರಾ ಹೊಟೇಲುಗಳಿಂದ ಹಿಡಿದು ರಸ್ತೆ ಬದಿಯ ಅಂಗಡಿಗಳವರೆಗೆ ದೋಸೆ ಸಿಗದ ಜಾಗವಿಲ್ಲ. ಬೆಂಗಳೂರಲ್ಲಂತೂ ದೋಸೆಕ್ಯಾಂಪುಗಳದೇ ಕಾರುಬಾರು.

ಬಹುಶಃ ಭಾರತದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಇದ್ದುದರಿಂದ ದೋಸೆ ತಿಂಡಿರಾಯನಾಗಿ ಜೋರಾಗಿರಬೇಕು. ಯಾಕೆಂದರೆ ದೊಡ್ಡ ಸಂಸಾರದಲ್ಲಿ ಚಿಣ್ಣರು, ದೊಡ್ಡಪ್ಪ- ಚಿಕ್ಕಪ್ಪಂದಿರು, ಅತ್ತೆ- ಮಾವಂದಿರು, ಅಣ್ಣ- ತಮ್ಮಂದಿರು, ದೊಡ್ಡಮ್ಮ- ಚಿಕ್ಕಮ್ಮಂದಿರು- ಹೀಗೆ ಸದಸ್ಯರ ಸಂಖ್ಯೆ ದೊಡ್ಡದು. ಒಂದು ಪುಟ್ಟ ತವ ಅಥವಾ ಹಂಚು ಅಥವಾ ಕಾವಲಿ ಇಷ್ಟೆಲ್ಲಾ ಮಂದಿಗೆ ದೋಸೆಯನ್ನು ಬೇಯಿಸಿಕೊಡಬಲ್ಲುದು. ಈ ಕಾರಣಕ್ಕೇ ದೋಸೆ ಭಾರತದಲ್ಲಿ ಫೇಮಸ್‌ ಆಗಿರಬಹುದೋ ಏನೋ?

ದೋಸೆ ಮಾಡುವ ಹಿಂದಿನ ದಿನವೇ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಟ್ಟಾಗಿ ರುಬ್ಬಿ ಹುದುಗಲು ಇಡಲಾಗುತ್ತದೆ. ಇಡೀ ರಾತ್ರಿ ಚೆನ್ನಾಗಿ ಹಿಟ್ಟು ಹುದುಗಿದರೆ ಮಾತ್ರ ಹದವಾದ ದೋಸೆ ಮಾಡೋಕೆ ಸಾಧ್ಯ. ದೋಸೆ ಮಾಡುವುದೆಂದರೆ ಭಾರತೀಯರ ದೊಡ್ಡ ಕುಟುಂಬಗಳಿಗೆ ಸಂಭ್ರಮ. ಅಜ್ಜಿಯರು, ಅಮ್ಮ- ಚಿಕ್ಕಮ್ಮ, ಅತ್ತೆ- ಸೊಸೆಯರು ಎಲ್ಲರೂ ಪಟ್ಟಾಂಗ ಹೊಡೆಯುತ್ತಾ ತವದ ಮೇಲೆ ಹಿಟ್ಟು ಸುರಿದು, ಗರಿಗರಿ ದೋಸೆ ಮಾಡುತ್ತಿದ್ದರೆ, ತಟ್ಟೆ ಹಿಡಿದು ನಿಂತ ಮಕ್ಕಳು ತಾವೂ ಹೊಟ್ಟೆ ತುಂಬಿಸಿಕೊಂಡು ದೊಡ್ಡವರಿಗೂ ತಟ್ಟೆಗಳ ಒಯ್ದು ಕೊಡುತ್ತಾರೆ. ಯಾರ ಹೊಟ್ಟೆಯೂ ಖಾಲಿ ಇರೋಲ್ಲ. ಒಟ್ಟು ಕುಟುಂಬಗಳಲ್ಲಿ ದೋಸೆ ಮನುಷ್ಯ ಸಂಬಂಧಗಳಿಗೆ ಕೊಂಡಿ ಹಾಕುವ ಅಂಟೂ ಹೌದು !

ಅಮೆರಿಕಾದಲ್ಲಿ ದೋಸೆಗೆ ಸಣ್ಣ ಮಟ್ಟದಲ್ಲಿ ಪ್ರಚಾರ ಸಿಕ್ಕಿದ್ದು 1990ರ ದಶಕದಲ್ಲಿ , ಮ್ಯಾನ್‌ಹಟನ್‌ನಲ್ಲಿ ದೋಸಾ ಹಟ್‌ ಶುರುವಾದಾಗ. ಅದುವರೆವಿಗೂ ಭಾರತೀಯ ರೆಸ್ಟೋರೆಂಟ್‌ಗಳ ಚಿಕನ್‌ ಟಿಕ್ಕ ಮಸಾಲ, ವಿಂಡಲೂ, ತಂದೂರಿ ಚಿಕನ್‌, ಸಮೋಸಾದಂಥಾ ತಿನಿಸುಗಳೇ ಅಮೆರಿಕೆಯಲ್ಲಿ ಮಾತಾಗಿದ್ದದ್ದು. ಆಮೇಲೆ ದೋಸೆಯೇನೋ ಸಿಕ್ಕಿತು. ಆದರೆ ಇವತ್ತಿಗೂ ಅಮೆರಿಕಾದಲ್ಲಿ ತಂದೂರಿ ಚಿಕನ್‌ ಅಥವಾ ಸಮೋಸಾದಷ್ಟು ದೋಸೆ ಫೇಮಸ್‌ ಅಲ್ಲ.

ಫ್ಲೋರಿಡಾದ ಕಾರಲ್‌ವುಡ್‌ನ ಹಿಂದೂ ದೇವಳದಲ್ಲಿ ಕೆಲವು ಬಾರಿ ಪೂಜೆಯ ನಂತರ ದೋಸೆಯನ್ನು ಭಕ್ತರಿಗೆ ಕೊಡುವುದುಂಟು.

ಐವತ್ತೆೈದು ವರ್ಷದ ನಾಗು ಶಂಕರ್‌ ಮತ್ತು 63 ವರ್ಷದ ವಿಜಯಾ ಮೂಲತಃ ದಕ್ಷಿಣ ಭಾರತದ ಕರ್ನಾಟಕದವರು. 6 ವರ್ಷಗಳ ಹಿಂದೆ ಅಮೆರಿಕದಲ್ಲಿ ಇವರು ಸಣ್ಣ ಭಾರತೀಯ ಮಾರುಕಟ್ಟೆ ತೆರೆದರು. ಬಲು ಬೇಗ ಅವರ ದೋಸೆಗಳು ಮನೆಮಾತಾದವು.

ಫೋರ್ಟ್‌ ಲಾಡರ್‌ಡೇಲ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದ ತನ್ನ ಗಂಡ ನೋವಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದುವುದರಲ್ಲಿ ಬ್ಯುಸಿಯಾಗಿದ್ದಾಗ, ನಾಗು ಶಂಕರ್‌ ಮೆಡಿಕಲ್‌ ಸೆಕ್ರೆಟರಿ ಕೋರ್ಸ್‌ ಬಗ್ಗೆ ಯೋಚಿಸುತ್ತಿದ್ದರು. ಆಗಲೇ ವಿದ್ಯಾರ್ಥಿಗಳಿಗೆ ಈಕೆ ದೋಸೆ ಮಾಡಿಕೊಡಲು ಶುರುವಿಟ್ಟುಕೊಂಡಿದ್ದು. ಆಮೇಲೆ ಜನ ಒತ್ತಾಯಿಸಿದರು. ಅಮೆರಿಕದಲ್ಲಿ ಭಾರತದ ದೋಸೆ ಕ್ಯಾಂಪು ತಲೆಯೆತ್ತಿತು !

ಎನ್‌.ಎಸ್‌.ಫುಡ್‌ನಲ್ಲಿ ಎಲ್ಲಾ ಭಾರತಮಯ. ಇಲ್ಲಿ ಸದಾ ಒಂದು ಟೀವಿ ಆನ್‌ ಆಗಿರುತ್ತೆ. ಅದರಲ್ಲಿ ಭಾರತೀಯ ಸಿನಿಮಾದ ಹಾಡು. ನಾಯಕ- ನಾಯಕಿ ಮರ ಸುತ್ತುತ್ತಿರುತ್ತಾರೆ. ಅಲ್ಲಿ ಮಾವಿನ ಹಣ್ಣಿನ ಡಬ್ಬವೂ ಇದೆ. ಮಕ್ಕಳಿಗೆ ಲಾಲಿಪಪ್ಪು ಕೂಡ. ನಾಗು ಶಂಕರ್‌ ಹೇಳುವಂತೆ ತಮ್ಮದು ರೆಸ್ಟೋರೆಂಟ್‌ ಅಂತ ಯಾರೂ ಅಂದುಕೊಳ್ಳೋಲ್ಲ. ಹಸಿದವರು ಅಡುಗೆಮನೆಗೇ ಬಂದು, ಹಸಿವಾಗುತ್ತಿದೆ ಅಂತ ಕೇಳುತ್ತಾರೆ. ಹಸಿದು ಬಂದವರ ಪಾಲಿಗೆ ನಾಗು ಪ್ರೀತಿಯ ಆಂಟಿ.

ಶನಿವಾರ ನಾಗು ದೋಸೆ ಕ್ಯಾಂಪ್‌ ಮುಂದೆ ದೊಡ್ಡ ಸರತಿ ಸಾಲು. ಪತಿ ವಿಜಯಾ ಶಂಕರ್‌ ಆರ್ಡರ್‌ಗಳನ್ನು ಕೇಳುತ್ತಾ , ಒಳಗಡೆ ಅಡುಗೆಮನೆಯಲ್ಲಿನ ನಾಗು ಶಂಕರ್‌ಗೆ ಜೋರಾಗಿ ಕೂಗಿ ಹೇಳುತ್ತಾರೆ- ‘ಮೂರು ದೋಸೆ’. ಶನಿವಾರ ಕನಿಷ್ಠ 250 ದೋಸೆ ಖರ್ಚಾಗುತ್ತದೆ.

ಕಾವಲಿ ಮೇಲೆ ದೋಸೆ ಹಾಕುವುದೇ ಒಂದು ಕಲೆ. ಅದು ಒಂದೇ ದಿನಕ್ಕೆ ಬರುವಂಥದಲ್ಲ. ಹಾಕಬೇಕಾದ್ದನ್ನು ಹದವಾಗಿ ಹಾಕಿ, ಅಗತ್ಯಕ್ಕೆ ತಕ್ಕಂತೆ ಹಿಟ್ಟು ಹುದುಗುವಂತೆ ನೋಡಿಕೊಂಡರೆ ಯಾರು ಬೇಕಾದರೂ ಚೆಂದದ ದೋಸೆ ಮಾಡಬಹುದು ಅಂತಾರೆ ನಾಗು.

ನಾಗು ಅವರಂತೆ ಹದವಾದ ದೋಸೆಗಳನ್ನು ಮಾಡೋದು ಹೇಗೆ?


ಅಡುಗೆ ಮನೆಯಲ್ಲಿ ಓಡಾಡಿ ಬನ್ನಿ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X