ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬ್ದ ಸೂತಕದಲ್ಲಿ ನಾವು ಕಳಕೊಂಡ ನಿಶ್ಯಬ್ದದ ಸುಖ!

By Staff
|
Google Oneindia Kannada News

*ಕೆ.ತ್ರಿವೇಣಿ ಶ್ರೀನಿವಾಸರಾವ್‌, ಐಟಾಸ್ಕ, ಇಲಿನಾಯ್‌

K. Triveni Srinivasarao, Itaaska, Illinoisಆಧುಕನಿಕತೆಗೆ ಒಗ್ಗಿಕೊಂಡ ಬದುಕಿನಿಂದ ನಾವು ಕಳೆದುಕೊಂಡ ಅನೇಕ ಸುಖಗಳ ಪೈಕಿ ಒಂದು ಈ ನಿಶ್ಯಬ್ದದ ಸುಖ. ಈಗ ಮನೆಗಳಲ್ಲಿ ಮೊದಲಿನಂತೆ ನಿಶ್ಯಬ್ದ ಏರ್ಪಡುವುದು ತುಂಬಾ ಕಡಿಮೆ. ಸದಾ ಕಾಲ ಟೀವಿಯಲ್ಲಿ ಏನೋ ಕಾರ್ಯಕ್ರಮ. ವಿ.ಸಿ.ಆರ್‌, ಡಿ.ವಿ.ಡಿ. ಗಳಲ್ಲಿ ಯಾವುದೋ ಸಿನಿಮಾ. ಬೇಕೋ, ಬೇಡವೋ ಅಂತೂ ಓಡಿಕೊಂಡಿರುತ್ತವೆ.

ವಿಡಿಯಾ ಗೇಮುಗಳಲ್ಲಿ ಕರ್ಕಶವಾಗಿ ಮೊರೆಯುವ ಕಾರು, ವಿಮಾನಗಳ ಸದ್ದು. ವಿವಿಧ ಬಗೆಯಲ್ಲಿ ಮೊಳಗುವ ದೂರವಾಣಿ ಕರೆಗಳು. ಫ್ರಿಜ್‌, ಫ್ಯಾನ್‌, ಮಿಕ್ಸಿಗಳ ಕಿರಿಕಿರಿ. ಏನಿಲ್ಲವೆಂದರೂ ಯಾಹೂ, ಎಮ್‌.ಎಸ್‌.ಎನ್‌.ಗಳ ಅಲರ್ಟೆಗಳು ನಿಮ್ಮ ಶಬ್ದ ಸಾಮ್ರಾಜ್ಯದಲ್ಲಿ ನಾವೂ ಇದ್ದೇವೆ ಎಂದು ತಮ್ಮ ಇರುವಿಕೆಯನ್ನು ಆಗಾಗ ನೆನಪಿಸುತ್ತಿರುತ್ತವೆ. ಒಟ್ಟಿನಲ್ಲಿ ನೀರವತೆಯ ಕತ್ತು ನಮ್ಮ ಮನೆಯಲ್ಲಿ ಯಾವಾಗಲೂ ಹಿಸುಕಲ್ಪಟ್ಟಿರುತ್ತದೆ.

ಮನೆಯಲ್ಲಿರಲಿ, ಜನಗಳು ಒಂಟಿಯಾಗಿ ವಾಯುವಿಹಾರ ಹೊರಟಾಗಲೂ ಇದೇ ಪಾಡೇ. ಮೊದಲಿನಂತೆ ಮನಸ್ಸಿನ ಜೊತೆಗೆ ಮಾತಾಡಿಕೊಳ್ಳುತ್ತಾ ಗಿಡ, ಮರಗಳ ಸೊಬಗು ಸವಿಯಲು ಈಗ ಪುರಸೊತ್ತಿಲ್ಲ . ಕೈಯಲ್ಲಿರುವ ಮೊಬೈಲಿನಲ್ಲಿ ಎಲ್ಲೋ ಇರುವ ಗೆಳೆಯನೋ , ಬಾಸೋ, ಪರಿಚಿತನೋ, ಮತ್ತಾರೋ ಘಂಟೆಗಟ್ಟಲೆ ಬಿಡದೆ ಹರಟುತ್ತಿರುತ್ತಾರೆ. ಈ ಜಡಿಮಳೆಯಂತಹ ಸಂಭಾಷಣೆಗಳ ನಡುವೆ ಇನ್ನೆಲ್ಲಿ ಏಕಾಂತ ? ಮನಸ್ಸಿಗಿನ್ನೆಂತಹ ವಿರಾಮ? ಶಬ್ದ, ಶಬ್ದ, ಶಬ್ದಮಯವೀ ಬದುಕು....

ಮೊದಲು ಹೀಗಿರಲಿಲ್ಲ . ನಾನು ಶಾಲೆ, ಕಾಲೇಜುಗಳಲ್ಲಿ ಓದುತ್ತಿದ್ದ ದಿನಗಳಲ್ಲಿ ಮಧ್ಯಾನ್ಹಗಳಲ್ಲಿ ಊಟದ ನಂತರ ಮನೆಯಲ್ಲಿ ಒಂದು ರೀತಿಯ ಅಖಂಡ ಮೌನ ಸಾಮ್ರಾಜ್ಯ ನಿರ್ಮಾಣವಾಗುತ್ತಿತ್ತು . ಅದು ನನ್ನ ತಾಯಿ, ತಂದೆಯ ಕಿರುನಿದ್ರೆಯ ಸಮಯ. ಇಡೀ ದಿನ ನಡೆದೇ ಇರುತ್ತಿದ್ದ ಲೋಕ ವ್ಯಾಪಾರಗಳು ಆ ಒಂದೆರಡು ಘಂಟೆಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದ್ದವು. ಆಗೀಗ ಯಾರೋ ತೆರೆದು ಮುಚ್ಚುವ ಗೇಟು, ಕೊಟ್ಟಿಗೆಯಲ್ಲಿ ಕೆನೆದಾಡುವ ಎಳೆಗರುಗಳು, ಸರಿದಾಡುವ ಚಪ್ಪಡಿ ಕಲ್ಲಿನ ಸದ್ದು ಬಿಟ್ಟರೆ ಎಲ್ಲೆಡೆ ನೀರವತೆಯದೇ ಕಾರುಬಾರು. ಬೆಳಕು ಹರಿಯುವ ಮೊದಲೇ ಎದ್ದು ಚಟುವಟಿಕೆಯಲ್ಲಿ ತೊಡಗಿದ್ದ ಮನೆಯ ಎಲ್ಲಾ ಜೀವಗಳಿಗೆ ಆಗ ವಿರಾಮ. ಮೂಲೆಯಲ್ಲಿ ಕುಳಿತು ಸಣ್ಣಗೆ ಉಲಿಯುತ್ತಿದ್ದ ರೇಡಿಯಾ ಒಂದು ಗದ್ದಲ ಎಂದು ನನಗೆ ಎಂದಿಗೂ ಅನ್ನಿಸಿಲ್ಲ.

The Bliss of Silenceಈ ಸುಂದರ ಮೌನದಲ್ಲೇ ನನ್ನ ಅರೆ ಬರೆಯಾಗಿ, ನಿರ್ಜೀವವಾಗಿ ಬಿದ್ದಿದ್ದ ಕವಿತೆ, ಕತೆಗಳು ಜೀವಪಡೆದುಕೊಳ್ಳುತ್ತಿದ್ದವು. ಯಾವುದೋ ಪ್ರಬಂಧ, ಮತ್ತಾವುದೋ ಪತ್ರಿಕೆಗೆ ಲೇಖನ, ಮತ್ತಾರಿಗೋ ಪತ್ರಲೇಖನ ಹೀಗೆ ನನ್ನ ಕಲ್ಪನೆಯ ಮಯೂರ ಗರಿಕೆದರುತ್ತಿದ್ದುದೇ ಇಂತಹ ಮೌನ ತಬ್ಬಿದ ನೆಲದ ನಿರ್ಲಿಪ್ತ , ನಿಶ್ಚಿಂತ ನಿಮಿಷಗಳಲ್ಲಿ . ಅನಂತಮೂರ್ತಿಯವರ ಸಂಸ್ಕಾರ, ಭಾರತೀಪುರ, ಭೈರಪ್ಪನವರ ಪರ್ವ, ಗೃಹಭಂಗ, ಧರ್ಮಶ್ರೀ, ಕಾರಂತರ ಬೆಟ್ಟದ ಜೀವ, ನಿರಂಜನರ ಮೃತ್ಯುಂಜಯ ಎಲ್ಲಾ ನಾನೋದಿದ್ದು ಇಂತಹ ದಿನಗಳಲ್ಲೇ. ತೇಜಸ್ವಿಯ ಕರ್ವಾಲೋ ಭೇಟಿಯಾಗಿ ಬೆರಗು ಮೂಡಿಸಿದ್ದು ಆಗಲೇ. ಲಂಕೇಶರ ಟೀಕೆ-ಟಿಪ್ಪಣಿಗೆ ನಾನು ಮಾರು ಹೋಗಿದ್ದು ಇಂತಹ ಸಾರ್ಥಕ ಅಪರಾಹ್ನಗಳಲ್ಲೇ. (ಆಗಿನ್ನೂ ರವಿ ಬೆಳಗೆರೆ ನನಗೆ ಗೊತ್ತಿರಲಿಲ್ಲ). ನಾಕೂವರೆಯ ಸುಮಾರಿಗೆ ನನ್ನಮ್ಮ ಎಚ್ಚೆತ್ತು ಕಾಫಿ ತಯಾರಿಗೆ ತೊಡಗಿದಾಗ ಅವತ್ತಿನ ಈ ಮೌನಗೀತೆ ಮುಕ್ತಾಯವಾಗುತ್ತಿತ್ತು . ಆದರೆ ಇಂದಿನ ದಿನಗಳಲ್ಲಿ ಇಂತಹ ಅಲೌಕಿಕ ಮೌನ ಜಗವನಾಳುವುದು ಅಪರೂಪವಾಗಿದೆ. ನೂರಾರು ಅನಗತ್ಯ ಶಬ್ದದಾಡಂಬರಗಳನ್ನು ಚಟದಂತೆ ಹಚ್ಚಿಸಿಕೊಂಡ ನಮಗೆ ಎಂದೋ ಒಮ್ಮೆ ಇಂತಹ ದೈವೀಕ ಏಕಾಂತ ಅಯಾಚಿತವಾಗಿ ಒದಗಿಬಂದರೂ ಅದು ಬಹು ಬೇಗ ಬೋರ್‌ ಅನ್ನಿಸಿಬಿಡುತ್ತದೆ.

ಇವತ್ತು ನಾವು ಶಾಂತ ಮಾನಸ ಸರೋವರಕ್ಕೆ ಅನವಶ್ಯಕವಾಗಿ ಸದ್ದು ಗದ್ದಲಗಳ ಕಲ್ಲೆಸೆದು, ಬದುಕನ್ನು ಕಲಕಿಕೊಂಡಿದ್ದೇವೆ ಎಂದು ನನಗನ್ನಿಸುತ್ತಿದೆ. ನಮ್ಮೊಳಗೆ ತುಂಬಿಸಿಕೊಂಡ ಸಂತೆ ಗದ್ದಲಗಳಿಂದ ಹೊರಗಿನ ನವಿರು ದನಿಗಳಿಗೆ ಕಿವುಡಾಗಿ ಹೋಗಿದ್ದೇವೆ. ದಿನದಿಂದ ದಿನಕ್ಕೆ ಸೂಕ್ಷ್ಮತೆ, ಕೋಮಲತನ ಕಳೆದುಕೊಂಡು ಒರಟರಾಗಿ ಹೋಗುತ್ತಿದ್ದೇವೆ. ಅದರಿಂದಲೇ ನಮಗೆ ಇವತ್ತು ಹಕ್ಕಿಗಳ ಇಂಪಾದ ಕಲರವ ಕೇಳಿಸುವುದಿಲ್ಲ . ಮಂದಾನಿಲ ಸುಯ್ಯನೆ ಸುಳಿದು, ಮೈಯನ್ನು ತಾಗಿಸಿಕೊಂಡು ಹೋಗುವುದು ನಮ್ಮನ್ನು ಅರಳಿಸುವುದಿಲ್ಲ . ಹೂಗಳ ಕಂಪು, ಜಲರಾಶಿಯ ತಂಪು.... ಉಹುಂ, ನಮಗೇನೂ ಹೊಳೆಯಿಸುವುದಿಲ್ಲ . ಸದ್ದಿಲ್ಲದೆ ಬಿರಿದು, ಸಾರ್ಥಕವಾಗಿ ಮೆರೆದು, ಮರೆಯಾಗಿ ಹೋಗುವ ವನಸುಮದ ಸಂದೇಶ ಅರಿವಿಗೇ ಬರುವುದಿಲ್ಲ . ಕಪ್ಪೆಗಳಂತೆ ವಟಗುಟ್ಟುತ್ತಾ ಸಮಗ್ರ ಶಾಂತಿಯನ್ನು ರಾಡಿಗೊಳಿಸುತ್ತಾ ನಮಗೆ ನಮ್ಮ ನಮ್ಮ ಒಳದನಿಗಳೇ ಕೇಳಿಸದಂತೆ ಮರಗಟ್ಟಿ ಹೋಗಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಶಬ್ದ ಸಾಗರದಲ್ಲಿ ಪ್ರತಿಯಾಬ್ಬರೂ ಒಂದೊಂದು ಪ್ರತ್ಯೇಕ ದ್ವೀಪವಾಗಿ ಹೋಗಿದ್ದೇವೆ.

Post your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X