• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪಿದ ಅಪ್ಪಿಗೆ ಬಿಡದಾಕೆ ಈ ಚಳಿಯಾಕೆ !

By Staff
|

ಋತುರಾಜ ವಸಂತ ನಮ್ಮ ಕವಿಗಳ ಹೃದಯ ವಲ್ಲಭ ! ಈ ಸುಂದರ ಋತುವಿಲಾಸವನ್ನು ಬಣ್ಣಿಸಿ ದಣಿಯರು ಅವರು. ವರ್ಣಿಸಿದಷ್ಟೂ ಸಾಲದು ಅವರಿಗೆ. ಎಲ್ಲಾ ಕವಿಗಳ ಮೊದಲ ಕವಿತೆಯ ಕುಡಿಯಾಡೆಯುವುದೇ ಅವನ ನವಿರು ಕಪೋಲಗಳಲ್ಲಿ, ಚಿಗುರು ಬೆರಳುಗಳಲ್ಲಿ ! ಕನ್ನಡ ಮತ್ತು ಸಂಸ್ಕೃತ ಕಾವ್ಯಗಳಲ್ಲಿ ಇತರ ಋತುಗಳನ್ನೂ ಮುಲಾಜಿಗೆಂಬಂತೆ ಅಲ್ಲಲ್ಲಿ ವರ್ಣಿಸಿದ್ದಾರಾದರೂ ನಮ್ಮ ಕವಿಗಳೆಲ್ಲರ ಪಕ್ಷಪಾತದ ತಕ್ಕಡಿ ಹೆಚ್ಚಾಗಿ ವಾಲುವುದು ವಸಂತನತ್ತಲೇ!

ವರ್ಷ ಋತು ವಸಂತನಂತೆ ಅಲ್ಲವಾದರೂ ಸ್ವಲ್ಪವಾದರೂ ಕವಿಜನಪ್ರಿಯ. ಆದರೆ ಹೇಮಂತ ಮತ್ತು ಶರದೃತುಗಳಂತೂ ನಮ್ಮ ಕವಿಗಳಿಗೆ ಅಷ್ಟೇನೂ ಮೆಚ್ಚಲ್ಲ. ‘ಹೇಮಂತ ಋತುರಾಜ, ಏನುಂಟು ನಿನ್ನಲ್ಲಿ? ಹೂವಿಲ್ಲ, ಹಣ್ಣಿಲ್ಲ’ ಎಂದು ಎದುರಾ ಎದುರೇ ಮುಖ ಮುರಿಯುವಂತೆ ಮೂದಲಿಸಿದವರಿದ್ದಾರೆ. ಬೇಡ, ಬೇಡ ಎಂದರೂ ಬಿಡದೆ ನಮ್ಮನ್ನು ಅಮರಿಕೊಳ್ಳುವ ಈ ಮೈ ಕೊರೆಯುವ ಚಳಿಯನ್ನು ಬೇಂದ್ರೆಯವರು ತಮ್ಮ ‘ಚಳಿಯಾಕೆ’ ಎಂಬ ಕವನದಲ್ಲಿ ಸಂಗಸುಖ ಒಲ್ಲೆನೆಂದು ಕೊಸರಿಕೊಂಡು ಹೋಗುವ ಪುರುಷನನ್ನು ಬೆನ್ನು ಹತ್ತಿ ಹೋಗಿ ಒಲಿಸಿಕೊಳ್ಳುವ ವೈಯಾರಗಿತ್ತಿ ಹೆಣ್ಣಿಗೆ ಹೋಲಿಸುತ್ತಾ ಆತ್ಮೀಯವಾಗಿ ಹೀಗೆ ಲೇವಡಿ ಮಾಡುತ್ತಾರೆ-

ಉಸುರುಸುರಿಗೆ ಮರುಕ ಹೆಜ್ಜೆ ಹೆಜ್ಜೆಗೆ ಬೆಡಗು

ಮೆಲ್ಲಗೆ ಮುಂಗೈಯ್ಯ ಹಿಡಿದಾಕೆ

ಯಾವ ಜಾತಿಯ ಹೆಣ್ಣೊ? ಹಾವ ಭಾವವೆ ಬೇರೆ

ಅಪ್ಪಿದ ಅಪ್ಪಿಗೆ ಬಿಡದಾಕೆ !

Hoo Uduruva Munna...Bhoomi Thabbida Modaಒಟ್ಟಿನಲ್ಲಿ ಕವಿಗಳಿಗೆಲ್ಲಾ ತಮ್ಮ ಕಾವ್ಯಕ್ಕೆ ಸ್ಫೂರ್ತಿ ತುಂಬಲು ವಸಂತನೇ ಬರಬೇಕು. ಸಕಲ ಜೀವಜಾಲವನ್ನೂ ಮೋಡಿ ಮಾಡಿ ಹಿಡಿದಿಡುವ ಮಹಾ ಗಾರುಡಿಗ ಈ ವಸಂತ ! ಆದರೇನು ಮಾಡುವುದು? ಎಲ್ಲಾ ವಾರಗಳೂ ಹೇಗೆ ಭಾನುವಾರವಲ್ಲವೋ, ಎಲ್ಲಾ ರಾತ್ರಿಗಳೂ ಹೇಗೆ ಹುಣ್ಣಿಮೆಯಲ್ಲವೋ, ಹಾಗೆ ಎಲ್ಲಾ ಋತುಗಳೂ ವಸಂತವಲ್ಲ. ವಸಂತನ ಸಿರಿಸೊಬಗಿನ ಜೊತೆಗೆ ಗ್ರೀಷ್ಮದ ಸುಡು ಬಿಸಿಲು, ಶರದದ ಒಣಗಾಳಿ, ಹೇಮಂತನ ಕೊರೆವ ಶೈತ್ಯ ಕೂಡ ಈ ಪ್ರಕೃತಿ ನಮಗೆ ಕೊಡಮಾಡಿರುವ ಪ್ಯಾಕೇಜ್‌ ಡೀಲ್‌! ಅದನ್ನು ಆನಂದದಿಂದ ಆಸ್ವಾದಿಸಿದ ಮೇಲೆ ಇದನ್ನು ಒತ್ತಾಯದಿಂದಲಾದರೂ ಆಹ್ವಾನಿಸದೆ ವಿಧಿಯಿಲ್ಲ. ಅದು ಒಪ್ಪಿ ತಂದಿದ್ದಾದರೆ ಇದು ತಪ್ಪದೆ ಬಂದಿದ್ದು !

ಜೀವಕಳೆ ಇಲ್ಲದೆ ಮರಗಟ್ಟಿ ನಿಂತ ಮರಗಿಡಗಳಿಗೆಲ್ಲಾ ಈಗ ಎಲೆಯುದುರಿಸಿಕೊಳ್ಳುವ ಸಡಗರ. ಹಳೆ ಬಟ್ಟೆಗಳ ಕಳೆದು ನಿಂತ ದಿಗಂಬರ ಆತ್ಮಕ್ಕೆ ನೇಯ್ದು ಬರುವ ಹೊಸ ಚರ್ಮಾಂಬರದ ಹಂಬಲ ! ತಾಯಿ ಒಂದು ಕಡೆಯಿಂದ ಮನೆಯನ್ನು ಒಪ್ಪ ಮಾಡುತ್ತಾ ಹೋದಂತೆ ಕೀಟಲೆಗೆಂದೇ ಕೆದರಿ ಹಾಕಿ ಕಿಲಕಿಲನೆ ನಗುವ ಹಾವಳಿಕೋರ ಮಗು ಈಗ ಪ್ರಕೃತಿ. ಕಿರಿದಾದ ಗುಡ್ದಗಳಂತೆ ಬೆಳೆದು ನಿಂತ ಹಣ್ಣೆಲೆಗಳ ರಾಶಿ. ನಡೆದಾಡುವವರ ಪದಾಘಾತಕ್ಕೆ ನಲುಗಿ, ಹಪ್ಪಳದಂತೆ ಮುರಿದು ಪುಡಿಪುಡಿಯಾಗುವ ಬಂಗಾರದ ಬಣ್ಣದ ಪತ್ರೆಗಳು ! ಎಂದೋ ಬರೆದಿಟ್ಟು ಅಂಚೆಗೆ ಹಾಕದೆ ಮರೆತು ಹೋದ ನಿರರ್ಥಕ ಪ್ರೇಮಪತ್ರಗಳು !

ಚಳಿಗಾಲ ಹೊತ್ತು ತರುವ ಕಿರಿಕ್ಕುಗಳು ಒಂದೆರಡಲ್ಲ. ಒಣಗಾಳಿಗೆ ಬಿರಿಯವ ತುಟಿ, ಕೆನ್ನೆಗಳು. ಕ್ರೀಮು, ಎಣ್ಣೆ, ತುಪ್ಪ ಏನೇನು ಸವರಿಕೊಂಡರೂ ಶಮನವಾಗದ ಉರಿ, ನೆಮ್ಮದಿ ಕಾಣದ ಜೀವ. ಬಿಡುಬೀಸಾಗಿ, ಹಾಯಾಗಿ ಓಡಾಡಿಕೊಂಡಿರುವಂತಿಲ್ಲ. ಕೈಗಳಿಗೆ ಗ್ಲೊವ್ಸ್‌, ಕಾಲಿಗೆ ಸಾಕ್ಸು, ಗಗನಯಾತ್ರಿಗಳಂತೆ ವೇಷ. ಇಡೀ ಮೈತುಂಬಾ ಬಟ್ಟೆಗಳ ಭಾರ...ದೇಹಕೆ ಉಸಿರೇ ಸದಾ ಭಾರ ! ಉಸಿರಾಡಲು ಮೂಗು, ದಾರಿ ಕಾಣಲು ಕಣ್ಣಾದರೂ ತೆರೆದಿರಬೇಕಲ್ಲವೇ? ಅಷ್ಟು ಸಾಕು, ಈ ಚಳಿಗೆ ದಾಳಿ ನಡೆಸಲು. ಹಲ್ಲುಗಳು ಕಟಗುಟ್ಟಿ ನಾಲಿಗೆ ನಿರ್ಜೀವ. ಹೋಗಲಿ, ಮಾತಾಡಿಕೊಂಡಾದರೂ ದಾರಿ ಸವೆಸೋಣವೆಂದರೆ ಮಾತು ಗದ್ಗದ. ಅವನಾಡಿದ್ದು ಇವಳಿಗೆ ಕೇಳದು, ಇವಳ ತೊದಲು ನುಡಿಗೆ ಅವನಿಗೆ ಉಕ್ಕಿ ಬರುವ ನಗು.....

ಇಡೀ ಮನೆಯೇ ದೊಡ್ಡ ಶೈತ್ಯಯಂತ್ರವಾಗಿ ಪರಿವರ್ತನೆಯಾದ ಅನುಭವ. ಮುಟ್ಟಿದರೆ ಮುನಿಯುವಂತೆ ಕೊರೆಯುವ ಮೇಜು ಕುರ್ಚಿ, ನೆಲ, ಗೋಡೆಗಳು. ಬಿಸಿ ಮಾಡಿರಿಸಿದಷ್ಟೂ ಕ್ಷಣಾರ್ಧದಲ್ಲಿ ತಣಿದು ಹೋಗುವ ಅಡಿಗೆ, ತಿಂಡಿಗಳು! ಕುರುಕಲು ತಿಂಡಿ, ಖಾರದ ಹಪ್ಪಳ, ಕರಿದ ಗೋಡಂಬಿಗಳನ್ನು ಮನ ಬಯಸುವುದಾದರೂ ಮೈಮೇಲೇರಿ ಕುಳಿತುಕೊಳ್ಳುವ ಕೆಲೊರಿಗಳ ಭಾರ....ಬಲು ನೋವಿನದೀ ಲೆಕ್ಕಾಚಾರ !

ಹೊರಗೆ ಅಲೆಯುವಂತಿಲ್ಲ, ಕಿಟಕಿ ತೆರೆದರೂ ನುಸುಳಿ ಬರುವ ಚಳಿ ! ನಾಲ್ಕು ಗೋಡೆಯ ನಡುವೆ ಕುಳಿತು ಮಾಡುವುದೇನು? ಮತ್ತದೇ ಸಂಜೆ....ಅದೇ ಬೇಸರ... ಅದೇ ಏಕಾಂತ ! ಗರಿಮುರಿ ಸಿಗರೇಟು ಬೂದಿಯಾಗಿಸುತ್ತಾ, ‘ಬೆಳಿಗ್ಗೆ ಸಂಜೆ ಮಧ್ಯಾಹ್ನ, ಕುಡೀತೀನಿ ನಾನು ಮದ್ಯಾನ’ ಅಂತ ವೈಎನ್‌ಕೆ ಗುರುಮಂತ್ರ ಜಪಿಸುವ ಗುಂಡುಗೋವಿಗಳಿಗೆ ಈ ಚಳಿಗಾಲ ಬಹು ಸುಭಿಕ್ಷಕಾಲ! ಅದರೆ ನಮ್ಮ ಮನೆಯಲ್ಲಿ ಮಾತ್ರ ಪಾನ ನಿರೋಧ, ಧೂಮಪಾನ ಮಹಾ ನಿಷೇಧ!!

ಹಾಗೆಂದು ತೀರ್ಥಯಾತ್ರೆ, ಅಗ್ನಿಕಾರ್ಯಗಳ ಹಂಗಿಗೆ ಬೀಳದ ಕನ್ನಡ ಜಾಣರು ಹತಾಶರಾಗಿ ಹೋಗಬೇಕಿಲ್ಲ. ‘ಹೊರ ತಂಪಿಗೆ ಒಳ ಬೆಂಕಿಗೆ ಬಿಸಿಯಪ್ಪುಗೆ ಉಪಶಮನ’ದಂತಹ ಸುಂದರ ಯಶಸ್ವೀ ಪರಿಹಾರ ಸೂತ್ರಗಳೂ ನಿಮ್ಮ ಪಾಲಿಗೆ ಇಲ್ಲದಿಲ್ಲ. ಹೇಳಿ ಕೇಳಿ ಚಳಿಗಾಲ ಪ್ರೇಮದ ಋತು. ಬಿಸಿಲಿಗೆ, ಬೆವರಿಗೆ ಹೆದರಿ ದೂರ ದೂರ ಓಡಿ ಹೋಗುವ ಮೈಮನಸ್ಸುಗಳನ್ನು ಹತ್ತಿರ ಹತ್ತಿರ ಬೆಸೆಯುವ ಪ್ರೇಮಮಯ ಋತು. ಆದರೆ ಈ ನಿಸರ್ಗದ ಬಹು ದೊಡ್ಡ ಕುಹಕವೆಂದರೆ ಜನಸಂಖ್ಯಾ ಸ್ಫೋಟಕ್ಕೆ ಸಿಕ್ಕು ಬಾಡಿ ಬಸವಳಿದು ಹೋಗುತ್ತಿರುವವರು ಉಷ್ಣ ದೇಶಗಳ ಜನರೇ ಹೊರತು ಶೀತ ದೇಶಗಳ ಜನರು ಈ ಜ್ವಲಂತ ಸಮಸ್ಯೆಯಿಂದ ಬಹುದೂರದಲ್ಲಿ ತಣ್ಣಗಿದ್ದಾರೆ !

ಒಟ್ಟಿನಲ್ಲಿ ಕಾಲದ ನಾಗಾಲೋಟ ನಿಲ್ಲುವಂತಿಲ್ಲ. ಯಾರು ಬಯಸುತ್ತಾರೋ, ಮತ್ತಾರು ಗೊಣಗುತ್ತಾರೋ, ಇನ್ಯಾರೋ ಮುಂಬರುವ ಶೀತಕ್ಕೆ ಇಂದೇ ಹೆದರಿ ನಡುಗುತ್ತಾರೋ ಎಂದು ಈ ಕಾಲ ಕೇಳುವುದಿಲ್ಲ. ಋತುಮಾನ ಸಂಪುಟದಲ್ಲಿ ಮತ್ತೊಂದು ಹೊಸ ಪುಟ ತೆರೆದಿದ್ದಾಗಿದೆ. ಇನ್ನೊಂದು ಚಳಿಗಾಲ ನಮ್ಮ ಹೊಸ್ತಿಲಿನಲ್ಲಿ ಆಗಲೇ ತನ್ನ ಶೀತಲ ಹೆಜ್ಜೆಗಳನ್ನು ಇರಿಸಿದ್ದಾಗಿದೆ. ಓ ಹೇಮಂತ ಋತುರಾಜ, ನಿನಗೆ ಸುಸ್ವಾಗತ ! ನಿನ್ನಲ್ಲೂ ಅರಸಲಿದ್ದೇನೆ ನಾನು ಸೌಂದರ್ಯ! ಮನೆಯ ಮುಂದಿನ ಮಣ್ಣಿನಂಗಳವನ್ನೇ ಮಂಜು ಮುಸುಕಿನ ಹಿಮಾಲಯವಾಗಿಸಿ, ಕಣ್ಮನ ತಣಿಸುವ ನೋಟ ನಿನ್ನದೇ ಔದಾರ್ಯ! ಸೃಷ್ಟಿ, ಸ್ಥಿತಿಗಳಂತೆ ಲಯವೂ ಅಲ್ಲವೇ ಒಂದು ಮಹಾಕಾರ್ಯ?

ಯಾರು ಯಾರನ್ನೋ ಕರೆದು ಅನ್ನ- ನೀರುಗಳನಿತ್ತು ಉಪಚರಿಸಿದ ನಾಡವರು ನಾವು ! ದಾಕ್ಷಿಣ್ಯಕ್ಕೆ ಕದವನ್ನೇ ಕಡವಾಗಿ ಕೊಟ್ಟು ಬೆಳ್ಳಂಬೆಳಗು ನಿದ್ದೆಯಿಲ್ಲದೆ ಬಾಗಿಲು ಕಾದುಕೊಂಡ ಬಹು ಸೌಜನ್ಯದ ಕರುನಾಡವರು ನಾವು! ನಿನ್ನನ್ನು ಬರಬೇಡ ಎಂದೆವೆಯೇ? ಬಾ ಮಹರಾಯ, ಬಾ ! ಬಂದಿರು ಇಲ್ಲಿ, ಇದು ನಿನ್ನದೇ ಮನೆ !! ಆದರೆ ಒಂದು ಮನವಿ. ಬಂದಿದ್ದಾಯಿತು, ಸ್ವಲ್ಪ ದಿನವಿದ್ದು ನಿನಗೆ ನ್ಯಾಯವಾಗಿ ಸಲ್ಲಬೇಕಾದ ಪಾಲನ್ನು ತೆಗೆದುಕೊಂಡು ಹೊರಟುಬಿಡು. ಇಲ್ಲಿಯೇ ನೆಲೆಯೂರಬೇಡ ಮತ್ತೆ ! ಇತ್ತ ಕಡೆಯಿಂದ ನೀನು ಹೊರಟು ನಿಂತೊಡನೆ ಅತ್ತ ಬಾಗಿಲಿನಿಂದ ಒಳಗಡಿಯಿಡಲು ಕಳ್ಳತನದಲ್ಲಿ ಹೊಂಚಿ ನಿಂತಿದ್ದಾನೆ, ನಮ್ಮ ವಸಂತ ! ಶಿಶಿರನ ಹೆಗಲೇರಿ, ಹಸಿರೆಲೆಗಳ ಸಿಂಗಾರದೊಡನೆ ಬರಲಿದ್ದಾನೆ, ವಸಂತ! ನಮ್ಮ ರಾಜ ವಸಂತ !!

(ಕೃತಜ್ಞತೆಗಳು : ಬೇಂದ್ರೆಯವರ ‘ಚಳಿಯಾಕೆ’ ಕವನವನ್ನು ಹುಡುಕಿ, ಕಳಿಸಿಕೊಟ್ಟ ಶ್ರೀಯುತ ಹರಿಹರೇಶ್ವರ ಅವರಿಗೆ)

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X