• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಡ್ನಿ ಕನ್ನಡ ಸಂಘದ ದ್ವಿದಶಮಾನೋತ್ಸವಕ್ಕೆ ಶ್ರೀಗಂಧದ ಕಂಪು

By Staff
|
  • ಬೆಳ್ಳಾವೆ ನಾಗಶಯನ,

ಸಿಡ್ನಿ, ಆಸ್ಟ್ರೇಲಿಯ

ಸಿಡ್ನಿ ಕನ್ನಡ ಸಂಘದ 20ನೇ ವಾರ್ಷಿಕೋತ್ಸವ ಸಮಾರಂಭವು ಸಿಡ್ನಿಯ ಬರ್‌ವುಡ್‌ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಜೂನ್‌ 28ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ರಾಣಿ ಸತೀಶ್‌ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕದಿಂದ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.

ಸಿಡ್ನಿಯಲ್ಲಿರುವ ಭಾರತೀಯ ರಾಯಭಾರಿಗಳಾದ ಗಣಪತಿ, ನ್ಯೂಸೌತ್‌ ವೆಲ್ಸ್‌ ರಾಜ್ಯದ ಪಾರ್ಲಿಮೆಂಟ್‌ ಸದಸ್ಯೆ ವರ್ಜೀನಿಯಾ ಜಡ್ಜ್‌, ಯುನೈಟೆಡ್‌ ಇಂಡಿಯನ್‌ ಅಸೋಸಿಯೇಶನ್‌ ಅಧ್ಯಕ್ಷೆ ಶುಭಾಕುಮಾರ್‌ ಮುಂತಾದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿ, ಮೆಚ್ಚುಗೆ ಸೂಚಿಸಿದರು.

ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸುವಂತಹ ಕಾರ್ಯಕ್ರಮಗಳು ಮೂಡಿಬಂದು, ಮನರಂಜನೆಯಾಂದಿಗೆ ಮಾಹಿತಿಗಳನ್ನು ನೀಡಿದ್ದು ವಾರ್ಷಿಕೋತ್ಸವದ ವಿಶೇಷ. ‘ಜೈ ಭಾರತ ಜನನಿಯ ತನುಜಾತೆ’ ಪ್ರಾರ್ಥನೆಯಾಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ , ಕವಿ ಕಂಡ ಕರ್ನಾಟಕ ಶೀರ್ಷಿಕೆಯಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಕವಿಗಳು ರಚಿಸಿದ ಕವಿತೆಗಳನ್ನು ವಾಚಿಸಲಾಯಿತು. ‘ಭಾಗ್ಯದ ಬಳೆಗಾರ ’ ನೃತ್ಯ ಜಾನಪದ ಸೊಗಡನ್ನು ನೀಡಿದರೆ, ‘ಕಾವ್ಯಾಂಜಲಿ’ ರೂಪಕ ಜಿ.ಪಿ.ರಾಜರತ್ನಂರವರ ಶಿಶುಗೀತೆಗಳನ್ನು ಆಧರಿಸಿ ಮಕ್ಕಳಿಂದಲೇ ಪ್ರದರ್ಶನಗೊಂಡಿತು.

ಕರ್ನಾಟಕದ ವಚನ ಸಾಹಿತ್ಯದಲ್ಲಿ ಅಗ್ರಗಣ್ಯೆಯಾದ ‘ಅಕ್ಕಮಹಾದೇವಿ’ ಕುರಿತ ಕಿರುನಾಟಕ, ಮನರಂಜನೆ ನೀಡಿದ ‘ಚೆಲುವಾಂತ ಚೆನ್ನಿಗನೆ’ ನೃತ್ಯ ಕಾರ್ಯಕ್ರಮದ ಹೈಲೈಟ್ಸ್‌ . ಕರ್ನಾಟಕ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಹೊಯ್ಸಳ ರಾಜವಂಶದ ಮೂರನೆಯ ವೀರಬಲ್ಲಾಳನ ಕಥೆ ಆಧಾರಿತ ನಾಟಕ ‘ರಣ ಪ್ರಚಂಡ’ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು. ಜನಾನುರಾಗಿಗಳಾದ ವಿಜಯನಗರ ಅರಸರ ಕುರಿತ ‘ವಿಜಯನಗರ ವೈಭವ’ ಕರ್ನಾಟಕವು ಸಂಪದ್ಭರಿತ ನಾಡು ಎಂದು ತೋರಿಸಿಕೊಟ್ಟಿತು.

Sydney kannadigas celebrate 20th anniversary of thier kannada sanghaಮೈಸೂರು ದಸರ ಎಷ್ಟೊಂದು ಸುಂದರ

‘ಮೈಸೂರು ದಸರ’ ಉತ್ಸವವು ಪ್ರೇಕ್ಷಕರ ನಡುವೆಯೇ ಆಗಮಿಸಿ, ಸಿಡ್ನಿ ಕನ್ನಡಿಗರೆಲ್ಲರಿಗೂ ಸನಿಹದಿಂದ ದಸರ ಉತ್ಸವದ ವೀಕ್ಷಣೆಗೆ ಅನುವು ಮಾಡಿಕೊಟ್ಟಿತು. ಆನೆ, ಆನೆಯ ಮೇಲೆ ಅಂಬಾರಿ, ಅಂಬಾರಿಯಲ್ಲಿ ಚಾಮುಂಡಿಯ ಚಿತ್ರಪಟ, ಮುಂದೆ ವಾದಕರು, ಹಿಂದೆ ಭಕ್ತಾದಿಗಳು... ಒಟ್ಟಿನಲ್ಲಿ ದಸರೆ ಎಷ್ಟೊಂದು ಸುಂದರ, ನೋಡುವ ಕಣ್ಣಿಗೆ ಹಬ್ಬ.

ಸಚಿವೆ ರಾಣಿ ಸತೀಶ್‌ ಅಂಬಾರಿ ಮೇಲಿನ ಚಾಮುಂಡೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ಕನ್ನಡಿಗರಿಗೆ ಭಾವನಾತ್ಮಕ ಮಿಂಚನ್ನು ನೀಡಿದರು. ಮಹಿಷಾಸುರ ಮರ್ದಿನಿಯ ಕಥೆಯಾಧಾರಿತ ನೃತ್ಯರೂಪಕ ನೀಡಿದ ತಂಡ ದಸರ ವಿಶೇಷತೆಯನ್ನು ಪರಿಚಯಿಸಿತು. ಮಹಿಷಾಸುರ ಮತ್ತು ಮಹಿಷಾಸುರ ಮರ್ಧಿನಿಯ ಅಭಿನಯವಂತೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.

Shreegandha Magazine Released by Honorable minister Smt Rani Satishಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಂದೇಶದ ವಿಡಿಯಾ ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಸಿಡ್ನಿ ಕನ್ನಡ ಸಂಘದ ಅಧ್ಯಕ್ಷ ಓಂಕಾರಸ್ವಾಮಿ ಗೊಪ್ಪೇನಳ್ಳಿಯವರು ಏಷ್ಯಾ-ಪೆಸಿಫಿಕ್‌ ಕನ್ನಡ ಕೂಟಕ್ಕೆ ಚಾಲನೆ ನೀಡಿದರು.

ಯೋಗ ನಾಟ್ಯ ಸರಸ್ವತಿ ಜ್ಯೋತಿ

ಬೆಂಗಳೂರಿನ ಹೆಸರಾಂತ ‘ಸಾಧನಾ ನೃತ್ಯ ಕಲ್ಪ’ದ ನಿರ್ದೇಶಕಿ ಜ್ಯೋತಿ ಪಟ್ಟಾಭಿರಾಮ್‌ರವರನ್ನು ಸಿಡ್ನಿ ಕನ್ನಡ ಸಂಘದ ಪರವಾಗಿ ವರ್ಜೀನಿಯಾ ಜಡ್ಜ್‌ ಅವರು ಸನ್ಮಾನಿಸಿದರು. ಜ್ಯೋತಿ ಅವರಿಗೆ ‘ಯೋಗ ನಾಟ್ಯ ಸರಸ್ವತಿ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ‘ನಮಸ್ತೆ’ ಎಂದೇ ಭಾಷಣ ಆರಂಭಿಸಿದ ಜಡ್ಜ್‌ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ಭಾರತದ ಏಳಿಗೆಯಲ್ಲಿ ಕರ್ನಾಟಕದ ಪ್ರಾಮುಖ್ಯತೆಯನ್ನು ಗಣಪತಿ ಪ್ರಶಂಸಿಸಿದರು. ಸಂಘದ 20ನೇ ವಾರ್ಷಿಕೋತ್ಸವದ ಸ್ಮರಣ ಸಂಚಿಕೆ ‘ಶ್ರೀಗಂಧ’ವನ್ನು ರಾಣಿ ಸತೀಶ್‌ ಬಿಡುಗಡೆ ಮಾಡಿ- ‘ಶ್ರೀಗಂಧವನ್ನು ಹಿಡಿದಿಡಬಹುದು. ಆದರೆ ಅದರ ಸೌರಭವನ್ನು ಹಿಡಿದಿಡಲಾಗದು. ಹಾಗೆಯೇ ಕನ್ನಡದ ಕಂಪು ಕೂಡ ವಿಶ್ವದೆಲ್ಲೆಡೆ ಪ್ರಸಾರವಾಗುತ್ತದೆ. ಸಿಡ್ನಿ ಕನ್ನಡ ಸಂಘವು ಹೀಗೆಯೇ ತನ್ನ ಬೆಳ್ಳಿ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಲಿ’ ಎಂದು ಮನದುಂಬಿ ಹಾರೈಸಿದರು.

Honorable minister Smt Rani Satish Dancing with Local MP Ms Judgeಕನ್ನಡದ ಕಣ್ಮಣಿ ಡಾ।।ರಾಜ್‌ ಹಾಡಿರುವ ‘ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು’ ನೃತ್ಯವನ್ನು ಪುಟ್ಟ ಮಕ್ಕಳು ಪ್ರದರ್ಶಿಸುವುದರೊಂದಿಗೆ ಈ ಯಶಸ್ವೀ ಸಮಾರಂಭಕ್ಕೆ ಮಂಗಳ ಹಾಡಲಾಯಿತು. ಈ ನೃತ್ಯಕ್ಕೆ ರಾಣಿ ಸತೀಶ್‌, ವರ್ಜೀನಿಯಾ ಜಡ್ಜ್‌ ಅವರೂ ಮಕ್ಕಳೊಂದಿಗೆ ಕಾಲುಗೂಡಿಸಿದ್ದು ವೇದಿಕೆಗೆ ಮೆರುಗು ನೀಡಿತು. ನೆರೆದಿದ್ದ ಸುಮಾರು ಎಂಟುನೂರು ಕನ್ನಡಿಗರು ಭೋಜನ ಸವಿದು, ಸ್ಮರಣ ಸಂಚಿಕೆಯಾಡನೆ ಮನೆಗೆ ತೆರಳುವುದರೊಂದಿಗೆ ಸಿಡ್ನಿ ಕನ್ನಡ ಸಂಘದ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರ ಸೇರ್ಪಡೆಯಾಯಿತು.

ಕಾರ್ಯಕ್ರಮದ ಯಶಸ್ವಿಗೆ ದುಡಿದ ಸ್ವಯಂ ಸೇವಕರಿಗೂ, ಕಲಾವಿದರಿಗೂ, ಕಾರ್ಯಕ್ರಮದ ಪ್ರಾಯೋಜಕರಿಗೂ, ಜಾಹೀರಾತುದಾರರಿಗೂ ಹಾಗೂ ಸಮಸ್ತ ಕನ್ನಡಿಗರಿಗೂ ಸಿಡ್ನಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿ ವಂದನೆಗಳನ್ನು ತಿಳಿಸಿದೆ.

ದ್ವಿ ದಶಮಾನೋತ್ಸವ ಆಚರಿಸಿಕೊಂಡ ಸಿಡ್ನಿ ಕನ್ನಡ ಸಂಘಕ್ಕೆ ದಟ್ಸ್‌ಕನ್ನಡ.ಕಾಂ ಬಳಗದ ಶುಭಾಶಯಗಳು.

ಹೆಚ್ಚಿನ ಮಾಹಿತಿಗೆ ಕನ್ನಡ ಸಂಘದ ವೆಬ್‌ ಸೈಟ್‌ ನೋಡಿ: http://kannada.org.au

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more