ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ

Ashoka SM ಅಶೋಕ ಎಸ್‌.ಎಂ.
[email protected]

The Loveಹಸಿರು ಸಿರಿ. ಬಂಗಾರದ ಹೊಳಪು. ಪಾನಕದ ತಂಪು. ರೇಷ್ಮೆಯ ಸರಬರ ಸದ್ದು . ಮಕ್ಕಳ ಅಳು, ತಾಯಂದಿರ ಮರೆವು. ಕಿರಿಕಿರಿ ಅನಿಸುವ ಓಲಗ. ಮದುವೆ ಸಪ್ಪೆ ಆಗುವುದೇನೋ ಎಂದು ಹೆಣ್ಣಿನ ತಂದೆ ಆತಂಕದಿಂದಲೇ ಮಾಡಿರುವ ವ್ಯವಸ್ಥೆ. ಧಾವಂತದ ಬೀಸು ನಡಿಗೆ.

ಹರೆಯದವರ ಓರೆನೋಟ. ಕನ್ನೆಯರ ಕುಡಿನೋಟ. ಅನಾವಶ್ಯಕ ನಗು! ಎಲ್ಲಿ ನೋಡಿದರೂ ಜಗಮಗಿಸುವ ಹುಡುಗಿಯರು. ಭಕ್ತರಂತೆ ಎಡತಾಕುವ ಹುಡುಗರು. ಪೊಲೀಸರಂತೆ ಠಳಾಯಿಸುವ ರೇಷ್ಮೆಸೀರೆಯ ಅಮ್ಮಂದಿರು, ಸಿಲ್ಕ್‌ ಜುಬ್ಬಾದ ಅಪ್ಪಂದಿರು.

ಮಂಟಪದ ನಟ್ಟ ನಡುವೆ ಸುಡುಸುಡು ಅಗ್ನಿ. ತುಪ್ಪವುಂಡು ಜ್ವಾಲೆಗಳ ಹರಿತಗೊಳಿಸಿಕೊಳ್ಳುವ ಅಗ್ನಿ. ಭಟ್ಟರ ಬಾಯಿಪಾಠದ ಮಂತ್ರದಲ್ಲಿ ಯಾರಿಗುಂಟು ಆಸಕ್ತಿ ? ಅವರು ಹೇಳುವ ತಂತ್ರವನ್ನು ಚಾಚೂ ತಪ್ಪದೆ ಮಾಡಿದರೆ ಮುಗಿಯಿತು. ಎಲ್ಲರ ಮುಖದಲ್ಲೂ ಶಾಸ್ತ್ರಗಳು ಬೇಗ ಮುಗಿಯಲೆನ್ನುವ ಧಾವಂತ. ದೃಷ್ಟಿಗಳು ಎತ್ತಲೆತ್ತಲೋ. ಮನಸ್ಸು ಈಗ ಇಲ್ಲಿ , ಈಗಲೇ ಅಲ್ಲಿಯೂ!

ಮಂಡಿಯ ಮೇಲೆ ಮುಖವಿರಿಸಿ ಕುಳಿತಿದ್ದಾಳೆ ಮದುವಣಗಿತ್ತಿ . ಸರ್ವಾಲಂಕಾರ ಭೂಷಿತೆ ಮದುವಣಗಿತ್ತಿ . ಕೈಕಾಲ್ಗಳ ತುಂಬಿದ ಚಿತ್ತಾರ. ಮುಖದ ತುಂಬಾ ಮೆತ್ತಿದ ಬಣ್ಣ . ಭಾವಗಳು ಕಲಸಿಹೋಗುವಷ್ಟು ಗಾಢ ಬಣ್ಣ . ಅರಿಷಿಣ ಮೈಯ ಮದುವಣಗಿತ್ತಿಯ ಮನದಲ್ಲಿ ಏನಿರಬಹುದು. ಮನದೊಳಗಿನ ಭಾವದ ಕಲಸುಮೇಲೋಗರದಲ್ಲಿ ಯಾವ ಭಾವದ ಮೇಲುಗೈ ಇರಬಹುದು ? ಮುಖಭಾವ ಮಾತ್ರ ಏನನ್ನೂ ಬಿಟ್ಟುಕೊಡುತ್ತಿಲ್ಲ . ಹೊಸ ಜೀವನ ಸಂಗಾತಿಯ ಸಾಮಿಪ್ಯ ಯಾವುದೇ ನಿರ್ದಿಷ್ಟ ಭಾವನೆಗಳಿಗೆ ಎಡೆ ಮಾಡುತ್ತಿಲ್ಲ.

ಮುಖ ತುಸು ನಾಚಿಕೆಯಿಂದ ತುಸುವೇ ಕೆಂಪಾಗಿದೆ. ಬೆಂಕಿಯ ಬಿಸಿ, ಹೊಗೆಯ ದಾಳಿ ಗಾಳಿ. ರೇಷ್ಮೆ ಸೀರೆಯ ಆಡಂಬರ ಕಿರಿಕಿರಿ, ಇತ್ಯಾದಿ ಇತ್ಯಾದಿ ಕಾರಣಗಳು ಹಿಂಸಿಸುತ್ತಿವೆ.

ತೊಡೆಯ ಮೆಲೆ ಉಡುಗೊರೆಯ ಪಟ್ಟಣವಿರಿಸಿ ಕುಳಿತಿದ್ದಾನೆ ಆ ಯುವಕ. ಅವನ ಮುಖದಲ್ಲಿ ನಿರ್ಲಿಪ್ತತೆ ಇದ್ದರೂ ಒಳಒಳಗೆ ದುಗುಡವಿದ್ದಂತಿದೆ. ದುಃಖವಿದೆ. ದುಮ್ಮಾನವಿದೆ. ಅವನ ತೊಡೆಯ ಮೇಲಿನ ಉಡುಗೊರೆ ವಿಷಾದದ ಗುರುತಿನಂತಿದೆ. ಹುಡುಗ ಇರುವುದೇ ಹಾಗಾ ?

ಅಂಗಡಿಯಲ್ಲಿ ಶುಭಾಶಯ ಪತ್ರಕ್ಕೆ ಗಂಟೆಗಟ್ಟಲೆ ಹುಡುಕಾಟ ನಡೆಸಿದ್ದ ಆ ಹುಡುಗ. ಕೊನೆಗೆ ಆಯ್ದುಕೊಂಡಿದ್ದು ‘ನೀನು ಜೀವನಪರ್ಯಂತ ಸುಖವಾಗಿರು’ ಎನ್ನುವ ಸರಳ ಸಂದೇಶದ ಶುಭಾಶಯ ಪತ್ರ. ಆ ಪತ್ರವನ್ನು ಆತ ಪದೇಪದೇ ನೋಡುತ್ತಿದ್ದಾನೆ!

ಆತನ ಪ್ರೀತಿ ಎಲ್ಲಿಯೋ ಹಳಿ ತಪ್ಪಿತ್ತು . ತನ್ನ ಪ್ರೀತಿಯನ್ನು ವಿವಾಹ ಬಂಧನದವರೆಗೆ ಕೊಂಡೊಯ್ಯಲಾರದ ಆ ಯುವಕನಲ್ಲಿ ಸಣ್ಣದೊಂದು ಹಿಂಜರಿತ. ನಗು ತುಂಬಿಕೊಂಡ ಮುಖದಲ್ಲಿ ಕಂಡೂ ಕಾಣದ ನೋವಿನ ಗೆರೆ.

ಪ್ರೀತಿ ಸಾರ್ಥಕಗೊಳ್ಳುವುದು ಮದುವೆಯಲ್ಲೇನಾ? ಉಹ್ಞುಂ.... ಪ್ರೀತಿಯ ಪರಿಪೂರ್ಣತೆ ತ್ಯಾಗದಲ್ಲಿ . ಹಾಗಂತ ಇತಿಹಾಸದಲ್ಲಿನ ಪ್ರೇಮಕಥಾ ಸಂಪುಟ ಹೇಳುತ್ತದೆ.

ಅದು ನಿಷ್ಕಾಮ ಪ್ರೀತಿ. ಅವ್ಯಾಜ ಅವ್ಯವಚ್ಛಿನ್ನ ಪ್ರೀತಿ. ಅಸಲಿಗೆ ಅವಳು ಅವನಲ್ಲಿ , ಅವನು ಅವಳಲ್ಲಿ ಎಂದೂ ಹೇಳಿಕೊಳ್ಳದ ಪ್ರೀತಿಯದು. ಇಬ್ಬರಿಗೂ ಅರಿವಿದ್ದ ಅವ್ಯಕ್ತ ಪ್ರೀತಿಯದು.

ಪ್ರೀತಿಯಂದರೆ ಆಹ್ಲಾದವಂತೆ. ಅದೊಂದು ನಂಬಿಕೆಯಂತೆ. ಪ್ರೀತಿ ತರ್ಕಕ್ಕೆ ನಿಲುಕದ ವಸ್ತುವಂತೆ... ಅದು ಯಾವಾಗಲೂ ಒಳಿತನ್ನೆ ಹಾರೈಸುವುದಂತೆ. ಅವನ ಕೈಯಲ್ಲಿನ ಶುಭಾಶಯ ಪತ್ರವೂ ಒಳಿತನ್ನೇ ಬಯಸುತ್ತಿದೆ !

ಪ್ರೀತಿ ಮುಂದುವರೆಯಲಿ ; ದಾಂಪತ್ಯ ಸುಖವಾಗಿರಲಿ.

ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ
ಕಹಿಯೆಲ್ಲ ನನಗಿರಲಿ ....

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+