ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕು, ಮುಚ್ಚು ಮರೆಯಿಲ್ಲದ ಸ್ವಚ್ಛ ರಾಜಕೀಯ !

By Staff
|
Google Oneindia Kannada News

Triveni Srinivasa Rao, Illinois, US* ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
(ತವರು : ಕಡೂರು-ಚಿಕ್ಕಮಗಳೂರು ಜಿಲ್ಲೆ)
[email protected]

ಇದು ಸುಮಾರು ವರುಷಗಳ ಹಿಂದಿನ ಮಾತು. ಆಗ ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ ಡಾ.ರಾಜಕುಮಾರರನ್ನು ರಾಜಕೀಯಕ್ಕೆ ಎಳೆದು ತರಲು ಇನ್ನಿಲ್ಲದಂತೆ ಪ್ರಯತ್ನಿಸಲಾಗುತ್ತಿತ್ತು. ಆದರೆ ರಾಜ್‌, ನನಗಿರುವ ಈ ಕಲಾ ಮಾಧ್ಯಮದ ಅಭಿಮಾನ, ಜನಪ್ರಿಯತೆಯನ್ನು ರಾಜಕೀಯದ ಹೊಲಸು ಕ್ಷೇತ್ರಕ್ಕಿಳಿದು ಕಳೆದುಕೊಳ್ಳಲಾರೆ ಎಂದು ನಯವಾಗಿ ನಿರಾಕರಿಸಿದ್ದು ಈಗ ಇತಿಹಾಸ. ರಾಜಕುಮಾರ್‌ ಅವರ ಈ ಬಿಗಿ ನಿಲುವು ಆಗ ಬಹಳ ಜನರ ಮನಸ್ಸಿಗೆ ಗಾಢ ನಿರಾಸೆ ಉಂಟು ಮಾಡಿದ್ದರೂ ಅದು ರಾಜಕುಮಾರ್‌ ಕೈಗೊಂಡ ಅತ್ಯುತ್ತಮ ನಿರ್ಧಾರ. ಜನ ಮಾನಸದಲ್ಲಿ ಇಂದಿಗೂ ರಾಜ್‌ ಭದ್ರವಾಗಿ ನೆಲೆ ನಿಂತಿರುವುದಕ್ಕೆ ಅವರು ರಾಜಕೀಯದಿಂದ ದೂರ ಉಳಿದಿದ್ದೂ ಒಂದು ಪ್ರಮುಖ ಕಾರಣ.

ಈಗ ಆ ಘಟನೆ ಇದ್ದಕ್ಕಿದ್ದಂತೆ ನೆನಪಾಗಲು ಕಾರಣವಿದೆ. ಬಹು ಹಿಂದೆ ನಿಸ್ವಾರ್ಥದಿಂದ ಜನತಾ ಜನಾರ್ದನನ ಸೇವೆ ಮಾಡ ಬಯಸುವವರು ರಾಜಕೀಯವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಅಯ್ದುಕೊಳ್ಳುತ್ತಿದ್ದರು. ಸಮಾಜಕ್ಕೆ ಒಳಿತು ಮಾಡಲು, ನೊಂದ ಜನರ ಕಣ್ಣೀರೊರೆಸಲು ಇಲ್ಲಿರುವಷ್ಟು ಅವಕಾಶ ಬೇರೆಲ್ಲೂ ಇಲ್ಲ ಎಂಬ ಉದಾತ್ತ ಭಾವನೆ ಇಟ್ಟುಕೊಂಡು ಆದರ್ಶವಾದಿಗಳು ರಾಜಕೀಯ ಸಂಗ್ರಾಮ, ಚಳುವಳಿಗಳಿಗೆ ಧುಮುಕುತ್ತಿದ್ದರು. ದಿನ ಕಳೆದಂತೆ ರಾಜಕೀಯದ ಈ ವ್ಯಾಖ್ಯೆ ಬದಲಾಗಿ ಹೋಗಿದ್ದು ಹೇಗೆ? ಈಗ ‘ರಾಜಕೀಯ ಮಾಡುವುದು’ ಎಂದರೆ ಕುತಂತ್ರ, ಕುಯುಕ್ತಿ, ಕಿತಾಪತಿ, ಕುಟಿಲತೆ, ಚಿಲ್ಲರೆತನ, ಭಂಡತನ, ತಂದು ಹಾಕುವುದು....ಇನ್ನೂ ಮುಂತಾದ ನೂರಾರು ಕೆಟ್ಟ ಪರ್ಯಾಯ ಪದಗಳು ನಮ್ಮ ಮನಸ್ಸಿನಲ್ಲಿ ಹೊಳೆಯುತ್ತವೆ. ರಾಜಕೀಯಕ್ಕೆ ಮೊದಲಿದ್ದ ಆ ವಿಶಾಲಾರ್ಥ ಹೋಗಿ ಅದಕ್ಕೆ ಈ ರೀತಿಯ ಹೀನಾರ್ಥ ಪ್ರಾಪ್ತಿಯಾಗಿದ್ದು ಯಾಕಿರಬಹುದು?

ರಾಜಕೀಯ ಕ್ಷೇತ್ರ ಮೊದಲಿನ ತನ್ನ ಪಾವಿತ್ರ್ಯ ಕಳೆದುಕೊಂಡು ಮಲಿನವಾಗಿ ಹೋಗಲು ನೂರಾರು ಕಾರಣಗಳನ್ನು ಪಟ್ಟಿ ಮಾಡಬಹುದಾದರೂ ಎಲ್ಲಕ್ಕಿಂತ ಬಹು ಮುಖ್ಯ ಕಾರಣ ಇದು ತನ್ನ ಪಾರದರ್ಶಕತೆ, ನಿರ್ಮಲತೆಯನ್ನು ಕಳೆದುಕೊಂಡಿದ್ದು. ರಾಜಕೀಯದ, ಅಧಿಕಾರದ ಚುಕ್ಕಾಣಿ ಹಿಡಿದ ಅಧಿಕಾರಸ್ಥರು ತಮ್ಮ ವ್ಯವಹಾರಗಳನ್ನು ಜನರಿಗೆ ಕಾಣದಂತೆ ಮುಚ್ಚುಮರೆಯಲ್ಲಿ ನಡೆಸತೊಡಗಿದ್ದೇ ದಿನಕ್ಕೊಂದು ಹಗರಣಗಳು ಮೇಲೇಳಲು ಕಾರಣವಾಯಿತು. ಗೋಪ್ಯತೆ, ರಹಸ್ಯಗಳು ದೇಶದ ರಕ್ಷಣೆಗೆ, ಭದ್ರತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅತ್ಯಗತ್ಯ ನಿಜ, ಆದರೆ ಈಗ ರಹಸ್ಯವೆಂಬುದು ಇರಬೇಕಾದ ಕಡೆ ಇಲ್ಲವಾಗಿ, ಇರಬಾರದ ಕಡೆಗೆಲ್ಲಾ ರಾರಾಜಿಸುತ್ತಿದೆ.

ಮಾಜಿ ಡಿಜಿಪಿ ದಿನಕರ್‌ ತಮ್ಮ ಪುಸ್ತಕ ಬಿಡುಗಡೆ ಮಾಡಿ ರಾಜ್‌ ಬಿಡುಗಡೆಯ ಸಂಧರ್ಭದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳನ್ನು ಬಯಲಿಗೆಳೆದಾಗ ಆದದ್ದೇನು? ದಿನಕರ್‌ ಪುಸ್ತಕದಲ್ಲಿ ಅರೋಪಕ್ಕೊಳಗಾದ ಮಂತ್ರಿ ಮಹೋದಯರುಗಳು, ಅಧಿಕಾರ ವಲಯದವರು ತಕ್ಕ ತನಿಖೆಗಳನ್ನು ನಡೆಸಿ ದಿನಕರ್‌ ತಮ್ಮ ಮೇಲೆ ಹೊರಿಸಿರುವ ಆರೋಪಗಳನ್ನು ಸುಳ್ಳೆಂದು ಸಾಧಿಸಬೇಕಿತ್ತು . ಆದರೆ ಈ ರಾಜಕಾರಣಿಗಳೆಲ್ಲಾ ಮಾಡಿದ್ದೇನು? ದಿನಕರ್‌ ಒಬ್ಬ ಹುಚ್ಚ, ಸಿನಿಕ, ತಲೆ ಕೆಟ್ಟವನು ಎಂದು ಅವರ ಖಾಸಗೀ ವಿವರಗಳನ್ನೆಲ್ಲಾ ಬಯಲಿಗೆಳೆದು ಅವರ ಚಾರಿತ್ರ್ಯ ವಧೆ ಮಾಡುವುದರಲ್ಲಿ , ಅವರ ಮೇಲೆ ಮಾನ ನಷ್ಟ ಮೊಕದ್ದಮೆಗಳನ್ನು ಹೂಡುವುದರಲ್ಲಿ ಇವರೆಲ್ಲಾ ಬ್ಯುಸಿಯಾಗಿ ಇದ್ದು ಬಿಟ್ಟರು. ರಾಜ್‌ ಸುರಕ್ಷಿತವಾಗಿ ಬಿಡುಗಡೆಯಾಗಿ ಹೊರಬಂದಂತೆ ಮಾಜಿ ಶಾಸಕ ನಾಗಪ್ಪನವರು ಹೊರ ಬರದಿದ್ದುದಕ್ಕೆ ಕಾರಣ ಹಣದ ಮೂಟೆಗಳ ಸರಬರಾಜಿನಲ್ಲಾದ ಅಡಚಣೆಯೇ ಎಂಬುದು ಎಂತಹ ಅಮಾಯಕರಿಗಾದರೂ ಹೊಳೆಯುವ ವಿಷಯವೇ ಆಗಿತ್ತು. ಆದರೆ ಅದನ್ನು ಜನರೆದುರಿನಲ್ಲಿ ಒಪ್ಪಿಕೊಳ್ಳುವ ನೈತಿಕ ಬಲ ಮಾತ್ರ ನಮ್ಮ ನಾಯಕರಲ್ಲಿ ಇಲ್ಲವಾಗಿತ್ತು.

ಈಗ ಮತ್ತೊಬ್ಬ ಮಾಜಿ ಡಿಜಿಪಿ ಜಾರ್ಜ್‌-ಶೀಲಾ ಜಾರ್ಜ್‌-ದಿನಕರ್‌ ಪ್ರಕರಣದಲ್ಲಿ ಆಗುತ್ತಿರುವುದು ಇದೇ. ಈ ಜಾರ್ಜ್‌ ಎಂಬ ಮಾಜಿ ಪೋಲಿಸ್‌ ಮನುಷ್ಯ ಯಾರದೋ ಪಗಡೆಯಾಟದ ದಾಳವಾಗಿರುವುದು ಮೇಲು ನೋಟಕ್ಕೇ ಎಂತಹವರಿಗಾದರೂ ಎದ್ದು ಕಾಣುತ್ತದೆ. ಇಲ್ಲೂ ಕೂಡ ಅಷ್ಟೇ, ದಿನಕರ್‌ ಹೊರಿಸುತ್ತಿರುವ ಆರೋಪಗಳಿಗೆ, ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವವರು ಯಾರೂ ಇಲ್ಲ. ನಿಜವಾಗಲೂ ಈ ಜಾರ್ಜ್‌ ಬಗ್ಗೆ, ಅವರ ಹಣಕಾಸಿನ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಇದ್ದ ವಿಷಯಗಳನ್ನು ಇದ್ದಂತೆ ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿ ಹರಡಿದ್ದೇ ಆದಲ್ಲಿ ಜನರೇ ನಿರ್ಧರಿಸುತ್ತಾರೆ -ಯಾರು ಹುಚ್ಚರು? ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವವರು ಯಾರು? ಎಂದು. ಆದರೆ ಇದೇಕೆ ನಮ್ಮಲ್ಲಿ ಸಾಧ್ಯವಾಗುವುದಿಲ್ಲ ? ಅವರಿವರ ಮೇಲೆ ಕೆಸರು ಎರಚುವ ಆಟದಲ್ಲೇ ಖುಷಿ ಪಡುವ ಈ ಜನರಿಗೆ ತಮ್ಮ ಮೈ ಮೇಲಿರುವ ಕೊಳಕು ಕಾಣುವುದಿಲ್ಲವೇಕೆ?

ನಮ್ಮ ಸರಕಾರಗಳು ಯಾಕಿಷ್ಟು ಮುಚ್ಚು ಮರೆಯ ವ್ಯವಹಾರ ನಡೆಸುತ್ತಿವೆ? ನಿಷ್ಪಕ್ಷಪಾತವಾದ ತನಿಖೆಗಳಿಗೆ ಇವೇಕೆ ಹೆದರಿ ನಡುಗುತ್ತವೆ? ನಿಮ್ಮಲ್ಲಿ ಏನೂ ಹುಳುಕಿಲ್ಲವೆಂದ ಮೇಲೆ ಭಯವೇಕೆ ಮತ್ತೆ? ಇದ್ದದ್ದನ್ನು ಇದ್ದ ಹಾಗೆ ಹೇಳುವುದು ತಾನೇ? ಸುಮ್ಮನೆ ಗಮನಿಸಿ ನೋಡಿ- ಜನ ಸಾಮಾನ್ಯರಿಗೆ ಪ್ರಕರಣಗಳ ಒಳ ಸುಳಿಗಳು ಎಂದಿಗೂ ನಿಲುಕುವುದೇ ಇಲ್ಲ. ವಾರಗಳ ಕಾಲ ಪತ್ರಿಕೆಗಳ ಮುಖ ಪುಟದಲ್ಲಿ ಸುದ್ದಿಯಾಗುವ ಅನೇಕ ಹಗರಣಗಳು ಮುಂದೆ ಏನಾಗುತ್ತವೋ, ಯಾರಿಗೆ ಶಿಕ್ಷೆಯಾಗುತ್ತದೋ, ಯಾರಿಗಾದರೂ ನ್ಯಾಯ ದೊರಕುತ್ತದೋ ಇಲ್ಲವೋ ಒಂದೂ ನಮಗೆ ತಿಳಿಯುವುದಿಲ್ಲ. ಅವುಗಳನ್ನು ಅಲ್ಲಲ್ಲಿಯೇ ವ್ಯವಸ್ಥಿತವಾಗಿ ಮಟ್ಟ ಹಾಕಲಾಗುತ್ತದೆ. ಹಿರಣ್ಮಯವಾದ ಪ್ರಕಾಶ ಹೊಂದಿ ಮೋಹಕವಾಗಿ ಮಿರುಗುವ ಸತ್ಯದ ಮುಖಕ್ಕೆ ಕರಿ ಮುಸುಕು ಹೊದಿಸಿ ಕತ್ತಲೆಯಲ್ಲಿ ಅದನ್ನು ಕೂಡಿಡುವುದರಲ್ಲಿಯೇ ಇವರ ತನು ಮನಗಳ ಶಕ್ತಿ ವ್ಯಯವಾಗಿ ಹೋಗಿರುತ್ತದೆ.

ರಾಜಾಜಿಯವರ ಪ್ರಸಿದ್ಧ ಹೇಳಿಕೆಯಾಂದಿದೆ - ‘‘ಗುಟ್ಟು ಎನ್ನುವುದೇ ಒಂದು ಮಹಾಪಾಪ. ಸರಿ, ಗುಟ್ಟಾಗಿಡಬೇಕಾದುದನ್ನು ಮಾಡುತ್ತೀರೇಕೆ ಹಾಗಾದರೆ?’’ ನಮ್ಮ ಎಲ್ಲಾ ರಾಜಕೀಯಸ್ಥರು, ಮಂತ್ರಿ ಮಹೋದಯರುಗಳು ಇದನ್ನು ತಮ್ಮ ಧ್ಯೇಯ ವಾಕ್ಯವಾಗಿ ಇರಿಸಿಕೊಳ್ಳಬೇಕು. ಸಾರ್ವಜನಿಕ ಬದುಕೆಂಬ ಗಾಜಿನ ಮನೆಯಲ್ಲಿರುವ ಇವರು ತಮ್ಮ ನಡೆ-ನುಡಿಗಳನ್ನು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಇರಿಸಿಕೊಳ್ಳುವುದು ಮುಖ್ಯ. ರಾಜಕೀಯದ ಚದುರಂಗದಾಟದಲ್ಲಿ ಆರೋಪ, ಪ್ರತ್ಯಾರೋಪ, ಅಪವಾದ, ಅನುಮಾನಗಳು ಬರುವುದು ಸಾಮಾನ್ಯ. ಹಾಗೆಂದು ಎಲ್ಲವೂ ನಿಜವೂ ಅಲ್ಲ. ಹೀಗಾದಾಗ ಸತ್ಯಾಸತ್ಯತೆಯನ್ನು ಜನರ ಮುಂದೆ ಒರೆಗೆ ಹಚ್ಚುವ ಕೆಲಸವಾಗಬೇಕೇ ಹೊರತು ಸತ್ಯ ಹೇಳುವವರ ಕತ್ತನ್ನೇ ಮುರಿದು ಬಿಡಬಾರದು. ಸದಾ ನೂರೆಂಟು ಹಗರಣಗಳ ಕೊಳಚೆಯಲ್ಲಿ ಉರುಳಾಡುವ ನಮ್ಮ ರಾಜಕಾರಣಿಗಳು ಶುದ್ಧ ಮಾತು, ಮನಸ್ಸು, ತಿಳಿಗೊಳದಂತಹ ಯಾರೂ ಹೊಕ್ಕು ನೋಡಬಹುದಾದಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದೇ ಆದಲ್ಲಿ ಇವರಿಂದ ಈ ನಾಡಿಗೆ ನಾವೆಲ್ಲರೂ ಏನಾದರೂ ಒಳಿತನ್ನು ನಿರೀಕ್ಷಿಸಬಹುದೇನೊ?


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X