ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆನೆತೆನೆ ಗೂಡಿ ತುಂಬಿತು ಕ್ಯಾಲಿಫ್‌ ಕನ್ನಡಿಗರ ಕಣಜ

By Staff
|
Google Oneindia Kannada News

*ಶ್ರೀವತ್ಸ ದುಗ್ಲಾಪುರ, ಸನ್ನಿವೇಲ್‌, ಕ್ಯಾಲಿಫೋರ್ನಿಯ.

New Logo of Kannada Koota of North California (KKNC) designed by Janardhana Swamyಬೆಳಗಾಗ ನಾನೆದ್ದು ಯಾರ್ಯಾರ ನೆನಯಲಿ ಸುಪ್ರಭಾತ, ಸುಗ್ಗಿಯ ಹಿಗ್ಗು , ಗೋವಿನ ಹಾಡು, ಬಬ್ರುವಾಹನ ನಾಟಕ, ಕೋಲಾಟ, ಸ್ವರ್ಣಸೇತು ವಾರ್ಷಿಕ ಸಂಚಿಕೆ ಬಿಡುಗಡೆ, ಕರಗದ ಜಾತ್ರೆಯ ಮೆರವಣಿಗೆ ಸಂಭ್ರಮ, ಕೋಳೂರ ಕೊಡಗೂಸಿನ ಶಿವ ಭಕ್ತಿ , ಮಾತಿನ ಮಂಟಪ, ಜಾನಪದ ನೃತ್ಯಗಳು, ಸಮೂಹ ಗಾನ, ಮೃಷ್ಠಾನ್ನ ಭೋಜನ...ಕರ್ನಾಟಕದ ಒಂದು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಇದಕ್ಕಿಂತ ಇನ್ನೇನು ಬೇಕು ?

ಎಲ್ಲರೂ ಆತುರದಿಂದ ಕಾತುರದಿಂದ ಎದುರು ನೋಡುತ್ತಿದ್ದ ಆ ದಿನ ಕೊನೆಗೂ ಬಂದೇಬಂತು. ಫೆಬ್ರವರಿ 1, 2003 ಸಂಜೆ 4.25 ಕ್ಕೆ ‘ ಸುಗ್ಗಿಯ ಹಿಗ್ಗು ’ ಸಮಾರೋಪ ಕಾರ್ಯಕ್ರಮ. ಕೂಟದ ಮೊದಲ ಕಾರ್ಯಕ್ರಮವಾದ್ದರಿಂದ ಸದಸ್ಯತ್ವ ನವೀಕರಣ ನಾಲ್ಕು ಕೇಂದ್ರಗಳಲ್ಲಿ ಲಗುಬಗೆಯಿಂದ ಆರಂಭಗೊಂಡಿತು. ಸದಸ್ಯತ್ವ ನವೀಕರಣಕ್ಕೆ ನಮ್ಮವರು ಸರತಿಯ ಸಾಲಿನಲ್ಲಿ ನಿಂತದ್ದನ್ನು ಕಂಡು ಸಮಿತಿಯ ಸದಸ್ಯರು ಒಂದರಗಳಿಗೆ ಬೆಚ್ಚಿಬಿದ್ದಿರಬೇಕು ! ಕೂಟದ ಸ್ವಯಂಸೇವಕರು ಕಿರಣ್‌ರವರ ನೇತೃತ್ವದಲ್ಲಿ ಕನ್ನಡ ಕುಟುಂಬಗಳನ್ನು ಸ್ವಾಗತಿಸಿ ಬೇಗಬೇಗನೆ ಸದಸ್ಯತ್ವದ ಕಾರ್ಡುಗಳನ್ನು ನೀಡಿ ಸಭಾಂಗಣದೆಡೆಗೆ ಕಳುಹಿಸುತ್ತಿದ್ದರು. ಮುಖ್ಯದ್ವಾರದಲ್ಲಿ ಕಂಡುಬಂದ ಕನ್ನಡಿಗರ ಸೌಹಾರ್ದತೆ ಕನ್ನಡಿಗರಿಗೇ ವಿಶಿಷ್ಟವಾದದ್ದು. ಸಾಂಪ್ರದಾಯಿಕ ವೇಷ-ಭೂಷಣಗಳೊಂದಿಗೆ, ಎಳ್ಳು-ಬೆಲ್ಲ ಕೊಟ್ಟು ಸ್ವಾಗತಿಸಿ ಒಳಗೆ ಕರೆದೊಯ್ಯುತ್ತಿದ್ದ ಆತಿಥ್ಯ ಕನ್ನಡಕೂಟದ ಸದಸ್ಯರಿಗೆ ಅಪಾರ ಸಂತೋಷದಾಯಕವಾಗಿತ್ತು.

ಸುಗ್ಗಿಯ ಹಿಗ್ಗನ್ನು ಹಂಚಿಕೊಳ್ಳಲು ಬಂದ ಎಲ್ಲರ ಬಾಯಲ್ಲಿ ಒಂದೇ ಮಾತು. ‘ ಈ ಸಾರಿ ಕನ್ನಡ ಕೂಟದವರು ಮನೆಗೆ ದೂರವಾಣಿ ಕರೆಯಿತ್ತು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದೇ ಅಲ್ಲದೆ ಎಳ್ಳು-ಬೆಲ್ಲ ಕೊಟ್ಟು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ’ .

ಕೂಟದ ಈ ಸಾಲಿನ ಅಧ್ಯಕ್ಷರಾದ ಸುರೇಶ್‌ ಬಾಬು, ಕೂಟದ ವ್ಯವಹಾರ ಮತ್ತು ಅಭಿವೃದ್ಧಿಯ ಹೊಣೆ ಹೊತ್ತಿರುವ ಕರುಣ್‌ ಶಿವಮೊಗ್ಗ ಮತ್ತು ಕೂಟದ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಸಮ್ಮಿಲನ ಮನೆಹಬ್ಬದಂತೆಯೂ, ಊರಹಬ್ಬದಂತೆಯೂ ಎಲ್ಲರ ಮನರಂಜಿಸಿತು. ಸುಮಾರು ಒಂದು ಸಾವಿರ ಮಂದಿ ಕನ್ನಡಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದು ಈ ಬಾರಿಯ ಸಂಕ್ರಾಂತಿಯ ವಿಶೇಷ. ಇದೇ ಉತ್ತರಾಯಣ ಪುಣ್ಯಕಾಲ !

ಕಾರ್ಯಕ್ರಮಕ್ಕೆ ಮೊದಲು ಆಗಮಿಸಿದ 25 ಸದಸ್ಯರಿಗೆ ಅಚ್ಚರಿ ಕಾದಿತ್ತು. ಎರಡು ವಾರಗಳ ಪರಿಶ್ರಮದೊಂದಿಗೆ ಶ್ರೀಮತಿ ವೀಣಾ ಗೌಡ ಹಾಗೂ ತಂಡದವರು ತಯಾರಿಸಿದ ‘ ಎತ್ತಿನ ಗಾಡಿ, ಹುಲ್ಲಿನ ರಾಶಿ ಮತ್ತು ಧಾನ್ಯಗಳಿಂದ ರಚಿಸಿದ್ದ ಶುಭಾಶಯ ಚಿತ್ರಗಳ ’ ಮುಂದೆ ಅವರ ಛಾಯಾಚಿತ್ರವನ್ನು ತೆಗೆದು, ಅದರ ಪ್ರತಿಯನ್ನು ಅವರಿಗೆ ತಕ್ಷಣವೇ ಕೊಡುತ್ತಿದ್ದ ವೈಖರಿ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿತ್ತು . ಸಾಂಸ್ಕೃತಿಕ ಕಾರ್ಯಕ್ರಮಗಳು ಸರಿಯಾಗಿ 5.10ಕ್ಕೆ ಪ್ರಾರಂಭವಾಯಿತು. ಮೊದಲಿಗೆ ಗ್ರಾಮೀಣ ಶೈಲಿಯಲ್ಲಿ ‘ಬೆಳಗಾಗ ನಾನೆದ್ದು ಯಾರ್ಯಾರ ನೆನಯಲಿ’ ಸುಪ್ರಭಾತ ನೃತ್ಯ ಗಾರ್ಗಿ ಪಂಚಾಂಗಂ ಮತ್ತು ಪೂನಂ ಶರ್ಮರವರ ನಿರ್ದೇಶನದಲ್ಲಿ ನಡೆಯಿತು. ಸುಮಾರು 17 ಮಕ್ಕಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸೃಷ್ಟಿಸಿದ ಮುಂಜಾನೆ ಮಂಜಿನ ಮಾರ್ದವತೆ, ಹಳ್ಳಿಯ ದೃಶ್ಯಗಳು, ಪ್ರೇಕ್ಷಕರನ್ನು ಮಂತ್ರಮುಗ್ಧರನಾನಗಿಸಿತು. ನಂತರ ‘ ಸಗ್ಗದ ಸಿರಿಬಂತು’ ಎಂಬ ಮಕ್ಕಳ ಕೋಲಾಟದ ಸುಂದರ ಕಾರ್ಯಕ್ರಮವನ್ನು ಶ್ರೀಮತಿ ರಾಧಾ ಮೂರ್ತಿಯವರು ನಡೆಸಿಕೊಟ್ಟರು.

ವಾರ್ಷಿಕ ಸಂಚಿಕೆ ಬಿಡುಗಡೆ : ಕನ್ನಡ ಕೂಟದ ವಾರ್ಷಿಕ ಸಂಚಿಕೆ ‘ ಸ್ವರ್ಣಸೇತು’ ವನ್ನು ವಸಂತರಾವ್‌ ಬಿಡುಗಡೆ ಮಾಡಿದರು. ದತ್ತಾತ್ರಿ ರಾಮಣ್ಣ ಅವರ ಮುಖ್ಯ ಸಂಪಾದಕತ್ವದಲ್ಲಿ ಹೊರಹೊಮ್ಮಿರುವ ಈ ಸಂಚಿಕೆ ತುಂಬಾ ಚೆನ್ನಾಗಿದೆ. ಸಂಪಾದಕ ಸಮಿತಿಯ ಸದಸ್ಯರು ಶ್ರೀಮತಿ ಜ್ಯೋತಿ ಮಹಾದೇವ, ನರೇಂದ್ರ ಕುನ್ಞೋಡಿ, ಪದ್ಮನಾಭ ರಾವ್‌, ಪ್ರಕಾಶ್‌ ನಾಯಕ್‌ ಮತ್ತು ಕುಮಾರಿ ರಶ್ಮಿ ಶ್ರೀಧರ್‌. ಹೊರನಾಡ ಕನ್ನಡಿಗರ ಪ್ರತಿಭೆಯನ್ನು ಎತ್ತಿ ತೋರಿಸುವ ವೈವಿಧ್ಯಮಯ ಲೇಖನ, ಕವನ, ಸುಂದರ ಛಾಯಾಚಿತ್ರ, ರೇಖಾಚಿತ್ರಗಳಿಂದ ಕಂಗೊಳಿಸುವ ಸ್ವರ್ಣಸೇತು 180 ಪುಟಗಳ ಅಪೂರ್ವ ಹೊತ್ತಗೆ. ಉತ್ತರ ಕ್ಯಾಲಿಫೋರ್ನಿಯ ಕನ್ನಡಿಗರ ಆಕರ ಗ್ರಂಥವೆಂದರೂ ತಪ್ಪಲ್ಲ ..

Srivathsa Duggalapura joins thatskannada contributors Clubಆನಂತರದ ಕಾರ್ಯಕ್ರಮಗಳಲ್ಲಿ ಗಮನ ಸೆಳೆದದ್ದು ಕೊಟ್ಟಮಾತಿಗೆ ತಪ್ಪದೇ ನಡೆದ ಪುಣ್ಯಕೋಟಿಯ ನಡತೆಯನ್ನು ಸಾರುವ ‘ಗೋವಿನ ಹಾಡು’ ನೃತ್ಯ ರೂಪಕ, ಶ್ರೀಮತಿ ನಂದಿನಿ ಉಮೇಶ್‌ ಅವರ ನಿರ್ದೇಶನದಲ್ಲಿ ಗೀತರೂಪಕ ಅದ್ಭುತವಾಗಿ ಮೂಡಿಬಂತು. ಸುಮಾರು 16 ಕಲಾವಿದರಿಂದ ಮೂಡಿಬಂದ ಈ ರೂಪಕ ಸುಶ್ರಾವ್ಯ ಸಂಗೀತ, ಪಕ್ವವಾದ ಭಾವಭಂಗಿಗಳಿಂದ ಸಭಿಕರ ಮನವನ್ನು ಸೂರೆಗೊಂಡಿತು. ಕಿವಿಗಡಚಿಕ್ಕುವ ಚಪ್ಪಾಳೆಗಳ ಸದ್ದಿನಲ್ಲಿ Once More ಕೂಗು ಕೇಳಿಬಂದವು. ಈ ಕಾರ್ಯಕ್ರಮದ ನಂತರ ಸಭಿಕರನ್ನು ಪೌರಾಣಿಕ ಲೋಕಕ್ಕೆ ಕರೆದೊಯ್ದವರು ಶ್ರೀಮತಿ ಸುರೇಖಾ ಗುರುಸ್ವಾಮಿ. ಅವರು ನಿರ್ದೇಶನದ ‘ಬಬ್ರುವಾಹನ’ ಕಿರು ನಾಟಕದ ವಿಶೇಷವೆಂದರೆ ಭಾಗವಹಿಸಿದ ಮಕ್ಕಳೆಲ್ಲರೂ ಅಮೇರಿಕಾದಲ್ಲಿ ಹುಟ್ಟಿಬೆಳೆದವರು ! ಕ್ಲಿಷ್ಟವಾದ ಸಂಭಾಷಣೆಗಳನ್ನು ನಿರರ್ಗಳವಾಗಿ ಉಚ್ಛರಿಸುತ್ತಿದ್ದ ಮಕ್ಕಳ ಕನ್ನಡ ಜ್ಞಾನಕ್ಕೆ ಅಂದು ಮನಸೋಲದವರೇ ಇಲ್ಲ . ಭರ್ಜರಿ ಕರತಾಡನದ ಬಹುಮಾನ ಈ ಮಕ್ಕಳ ಮನಸ್ಸಿನ ಕಪಾಟಿನಲ್ಲಿ ಬಹುಕಾಲ ಇರುವುದರಲ್ಲಿ ಸಂದೇಹವೇ ಇಲ್ಲ.

ಈ ವರ್ಷದ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಕಾರ್ಯಭಾರಕ್ಕೆ ಟೊಂಕಕಟ್ಟಿನಿಂತ ಕಾರ್ಯಕಾರೀ ಸಮಿತಿಯ ಸದಸ್ಯರನ್ನು, ಅಧ್ಯಕ್ಷರಾದ ಸುರೇಶ್‌ ಬಾಬುರವರು ಸಭೆಗೆ ಪರಿಚಯಿಸಿದರು. ಸಮಿತಿಯ ಎಲ್ಲಾ ಪದಾಧಿಕಾರಿಗಳ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಪುಟ ನೋಡಿರಿ. http://www.kknc.org/committe.htm. ತರುವಾಯ, ಮುಗ್ಧ ಬಾಲಕಿಯ ಶಿವಭಕ್ತಿಯನ್ನು ಎತ್ತಿ ತೋರಿಸುವ ‘ಕೋಳೂರ ಕೊಡಗೂಸು’ ನಾಟಕ. ಶ್ರೀಮತಿ ಶರ್ಮಿಳಾ ವಿದ್ಯಾಧರ ಅವರು ನಿರ್ದೇಶಿಸಿದ್ದ ಈ ನಾಟಕದಲ್ಲಿ ಎಲ್ಲಾ ಪಾತ್ರಗಳನ್ನೂ ಮಕ್ಕಳೇ ಸೊಗಸಾಗಿ ನಿರ್ವಹಿಸಿದ್ದರು. ಶಿವತಾಂಡವ ನೃತ್ಯ ಹಾಗೂ ಇತರೆ ಪುಟಾಣಿಗಳ ನಟನೆ ಪ್ರೇಕ್ಷಕರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾದವು. ಬಳಿಕ ಹಬ್ಬದೂಟಕ್ಕಾಗಿ ಸ್ವಲ್ಪ ಹೊತ್ತು ಬಿಡುವು. ನಿರೀಕ್ಷೆಗೂ ಮೀರಿ, ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಸಭಿಕರಿಗೆ ಭೋಜನ ವ್ಯವಸ್ಠೆಯನ್ನು ಕೂಟದ ಆಹಾರ ಸಮಿತಿಯ ಕಾರ್ಯಕರ್ತರಾದ ನರೇಂದ್ರ ಹೊಸಹಳ್ಳಿ, ಶ್ರೀಮತಿ ತಾರಿಣಿ ಕುಮಾರ್‌ ಹಾಗೂ ತಂಡದವರು ಅಚ್ಚುಕಟ್ಟಾಗಿ ನೋಡಿಕೊಂಡರು.

ಸಿಹಿಯೂಟ ಸವಿದು ಬಂದ ಕೂಟದ ಸದಸ್ಯರಿಗೆ ಸುನಿಲ್‌ ಶಂಕರ್‌, ಅಂಜನ್‌ ಶ್ರೀನಿವಾಸ್‌ ಮತ್ತು ನಟರಾಜ್‌ ಗುಜ್ರಾನ್‌ ಭರ್ಜರಿ ಹಾಸ್ಯದ ಅಡುಗೆಯನ್ನು ಮಾತಿನ ಮಂಟಪದ (ಟಾಕ್‌ ಷೋ) ಮೂಲಕ ಮತ್ತೊಮ್ಮೆ ಉಣಬಡಿಸಿದರು. ಘಲ್ಲು ಘಲ್ಲೆನುತಾ ಗೆಜ್ಜೆ ಕುಣಿತದೊಡನೆ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿದವರು ಚಿನ್ಮಯಿ ಬೆಟ್ಟದಪುರ ಮತ್ತು ತಂಡದವರು.

ಕರ್ನಾಟಕ ಉತ್ಸವ : ಇನ್ನೇನು ಕಾರ್ಯಕ್ರಮ ಮುಗಿಯಿತು ಎಂದುಕೊಂಡ ಸದಸ್ಯರನ್ನು ಮತ್ತೆ ಕುಣಿಸಿ, ನಲಿಸಿ, ಬೆರಗಾಗಿಸಿದ್ದು ಸಭಾಂಗಣದ ಹೊರಗಿನಿಂದ ಪ್ರವೇಶಿಸಿದ ಮೆರವಣಿಗೆ . ಅರಿಶಿನ ಕುಂಕುಮದ ಅರ್ಚನೆ ಮಾಡುತ್ತಿದ್ದ ಸುಮಂಗಲಿಯರು, ಛತ್ರ-ಛಾಮರಗಳನ್ನೊಳಗೊಂಡ ಉತ್ಸವ ಮೂರ್ತಿ, ಕರಗದಾಟ, ಹುಲಿಯಾಟ, ಕೋಲಾಟ, ಹುಲಿ ಕೊಲ್ಲಲೊಬ್ಬ ಬೇಟೆಗಾರ, ಮುತುವರ್ಜಿಯಿಂದ ತಯಾರಿಸಿದ್ದ ಗಂಡು -ಹೆಣ್ಣು ಕೀಲುಕುದುರೆಗಳು, ತಮ್ಮ ಲಯಬದ್ಧವಾದ ಬಡಿತಗಳಿಂದ ಜನರನ್ನು ನರ್ತಿಸಲು ಆಹ್ವಾನಿಸುತ್ತಿದ್ದ ಡೊಳ್ಳುವಾದಕರು, ಕೋಲಾಟದ ಜೋಡಿಗಳು, ಬಲೂನು, ಕಡ್ಲೆಕಾಯಿ ಮಾರಾಟಗಾರರು, ಅವರ ಗ್ರಾಮವೇಷದ ಸೊಗಡು, ಒಂದು ಪುಟ್ಟ ಕರ್ನಾಟಕವನ್ನೇ ಎಲ್ಲರೆದುರಿಗೆ ತೆರೆದಿಟ್ಟಿತು! ಕಿವಿಗಡಚಿಕ್ಕುವ ಜನರ ಪ್ರಶಂಸೆಗಳ ಹುಯ್ಲು , ಮೆರವಣಿಗೆಯ ಸಂಭ್ರಮದ ಸದ್ದನ್ನು ಇಮ್ಮಡಿಗೊಳಿಸಿತ್ತು ! ಈ ಮೆರವಣಿಗೆಯ ಸಂಯೋಜನೆ ಶ್ರೀಮತಿ ನಂದಿನಿ ಉಮೇಶ್‌ .

ಸುಂದರವಾದ ಜಾನಪದ ಗೀತೆಗಳನ್ನು ಹಾಡಿ, ಸುಗ್ಗಿಯ ಕಂಪನ್ನ್ನು ಇನ್ನಷ್ಟು ದೂರ ಹರಡಿದ್ದು , ಶ್ರೀಮತಿ ಮನೋರಮಾ ರಾವ್‌ ಅವರು ನಿರ್ದೇಶಿಸಿದ್ದ ‘ ವೃಂದಗಾನ’ ದ ತಂಡ. ಕೀಬೋರ್ಡ್‌ ನುಡಿಸಿದ ಪ್ರಸಾದ್‌ ಪಂಚಾಂಗಂ ಹಾಗೂ ತಬಲಾದಲ್ಲಿ ಶಕೀಲ್‌ ಅವಧಾನಿ ಅವರು ಗೀತೆಗಳ ಮೆರುಗನ್ನು ಹೆಚ್ಚಿಸಿದರು.

ಈ ಬಾರಿಯ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾದ ಮಧುಕಾಂತ್‌ ಅವರು ಕಾರ್ಯಕ್ರಮದ ನಡುನಡುವೆ ತಮ್ಮ ಹಳ್ಳೀ ಕನ್ನಡದ ಧಾಟಿಯ ಹಾಸ್ಯದ ಮಾತುಗಳಿಂದ ಜನರನ್ನು ರಂಜಿಸಿದರು. ವಂದನಾರ್ಪಣೆಯೂ ಅವರದೇ. ಕಾರ್ಯಕ್ರಮದ ಧ್ವನಿನಿರ್ವಹಣೆಯನ್ನು ಪ್ರಸಾದ್‌ ಪಂಚಾಂಗಂ ಹಾಗೂ ಉದಯ್‌ ನಾಯಕ್‌ ಅವರು ಸಮರ್ಪಕವಾಗಿ ನಡೆಸಿಕೊಟ್ಟರು. ನೆಳಲು-ಬೆಳಕಿನ ಭಾರಕ್ಕೆ ಹೆಗಲು ಕೊಟ್ಟವರು ಶ್ರೀನಾಥ್‌ ಹೊನ್ನವಳ್ಳಿ ಹಾಗೂ ಜಿನದತ್ತರಾಯ. ರಂಗಮಂಟಪ ನಿರ್ವಹಣೆ ಉಸ್ತುವಾರಿ ಶ್ರೀಮತಿ ವೀಣಾ ಗೌಡ. ಮಂಟಪಕ್ಕೆ ಬೆನ್ನಾಗಿದ್ದ ಪರದೆಯ ಮೇಲೆ ಸುಂದರವಾದ ಹಳ್ಳಿಯ ಚಿತ್ರವನ್ನು ಬಿಡಿಸಿಲು ವೀಣಾ ಅವರ ಜೊತೆಗೂಡಿದವರು ಶ್ರೀಮತಿ ರಶ್ಮಿ ರಾಜನ್‌. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಸರಸ್ವತಿ ವಟ್ಟಮ್‌ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅವರದು ಆತ್ಮೀಯವೆನಿಸುವ ಶೈಲಿ. ಕೊನೆಯಲ್ಲಿ, ಪುಟಾಣಿಗಳಾದ ಮೇಘನಾ ಶಾಸ್ತ್ರಿ ಹಾಗೂ ನಿಖಿಲ್‌ ಶಾಸ್ತ್ರಿ ಅವರು ಭಾರತ ಹಾಗೂ ಅಮೇರಿಕಾ ದೇಶಗಳ ರಾಷ್ಟ್ರಗೀತೆಗಳನ್ನು ಕೀಬೋರ್ಡಿನಲ್ಲಿ ನುಡಿಸುವುದರ ಮೂಲಕ ಅರ್ಥಪೂರ್ಣವಾದ ಅಂತ್ಯವನ್ನು ಈ ಸುಂದರ ಸಂಜೆಗೆ ನೀಡಿದರು.

ಕಾರ್ಯಕ್ರಮದ ಉದ್ದಕ್ಕೂ, ಅಮೇರಿಕಾದಲ್ಲಿ ಬೆಳೆಯುತ್ತಿರುವ ಕನ್ನಡದ ಚಿಣ್ಣರು, ಕರಗ, ಕೋಲಾಟ, ಜಾನಪದ ನೃತ್ಯ, ಪೌರಾಣಿಕ ಪಾತ್ರಗಳನ್ನು ತಮ್ಮ ಬೆರಗುಗಣ್ಣುಗಳಿಂದ ಎವೆಯಿಕ್ಕದೇ ಅಚ್ಚರಿಯಿಂದ ನೋಡುತ್ತಿದ್ದರು. ಸಂಸ್ಕೃತಿಯನ್ನು ಬೆಸೆಯುವ , ತನ್ನತನದ ಕೊಂಬೆಗಳನ್ನು ಚಾಚುತ್ತಾ ಸ್ವರ್ಣಸೇತುವನ್ನು ಕಟ್ಟಲು ಇಂಥ ಕಾರ್ಯಕ್ರಮಗಳು ಅಗತ್ಯ. ಈ ದಿಕ್ಕಿನಲ್ಲಿ ಅವಿರತ ಶ್ರಮಿಸಿದ ಕಾರ್ಯಕ್ರಮದ ಸಂಘಟಕರು ಮತ್ತು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಿದ ಕೂಟದ ಸದಸ್ಯ ಕುಟುಂಬ ವರ್ಗದವರು ಅಭಿನಂದನೆ, ಅಭಿವಂದನೆಗೆ ಪಾತ್ರರು.

ಈ ಕಾರ್ಯಕ್ರಮದ ಛಾಯಾಚಿತ್ರಗಳನ್ನು, ಅಂತರ್‌ಜಾಲದ ಈ ತಾಣದಲ್ಲಿ ನೋಡಿ-
http://www.kknc.org/past_events.htm.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X