• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವಿನ ಗುಲಾಮನಾಗುವ ತನಕ....

By Staff
|
  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

(ತವರು: ಕಡೂರು-ಚಿಕ್ಕಮಗಳೂರು ಜಿಲ್ಲೆ)

venivas@hotmail.com

ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಬಹಳ ಉನ್ನತವಾದ ಸ್ಥಾನವಿದೆ. ‘ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ’ ಎಂದು ತ್ರಿಮೂರ್ತಿಗಳ ಜೊತೆ ಸಮೀಕರಿಸಿ ಗೌರವಿಸಲಾಗುತ್ತದೆ. ಎಂತಹ ಸೈನ್ಯ ಶಕ್ತಿಯ ಮುಂದೆ ಮಣಿಯದವನೂ ತನ್ನ ಪರಮ ಗುರುವಿನ ಮುಂದೆ ತಲೆ ಬಾಗದೆ ಇರಲಾರ. ಗುರು ಎಂದರೆ ಯಾರು? ನಮಗೆ ಯಾವುದೋ ಒಂದು ಹೊಸ ವಿದ್ಯೆಯನ್ನು ಕಲಿಸಿಕೊಟ್ಟವರು, ಒಂದೇ ಒಂದು ಹೊಸ ಅಕ್ಷರವನ್ನು ಬರೆಯಲು ಕಲಿಸಿಕೊಟ್ಟವರನ್ನೂ ಕೂಡ ನಾವು ಗುರು ಎಂದು ಪೂಜ್ಯ ಭಾವನೆಯಿಂದ ಗೌರವಿಸುತ್ತೇವೆ.

‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’- ಈ ಸಾಲು ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಒಬ್ಬ ಮನುಷ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಸರಿಯಾದ ಹಾದಿಯಲ್ಲಿ ಸಾಗಿ ಆತ್ಮೋನ್ನತಿ ಹೊಂದಲಾರ ಎಂಬುದು ಇದರ ಅರ್ಥ. ಗುರು ಮುಖೇನ ಕಲಿಯದ ವಿದ್ಯೆ ಅಪೂರ್ಣ ಎಂಬ ಭಾವನೆ ಇಂದಿಗೂ ನಮ್ಮಲ್ಲಿ ಜಾರಿಯಲ್ಲಿದೆ. ಆದರೆ ಈಗ ನಿಜವಾಗಿಯೂ ಅಂತಹ ಗುರುಗಳನ್ನು ಹುಡುಕಲು ಸಾಧ್ಯವೇ? ಅಂತಹ ಗುರುಗಳು ಈಗ ಎಲ್ಲಿದ್ದಾರೆ ? ಅವರನ್ನು ನಾವು ದೊರಕಿಸಿಕೊಳ್ಳುವುದಾದರೂ ಹೇಗೆ?

ಬಹಳ ಹಿಂದಿನ ಕಾಲದಲ್ಲಿ ಋಷಿ, ಮುನಿಗಳು ಆಶ್ರಮಗಳಲ್ಲಿ ನೆಲೆಸಿದ್ದು, ಗುರುಕುಲಗಳನ್ನು ನಡೆಸುತ್ತಿದ್ದರು. ಅಲ್ಲಿ ವರ್ಷಾನುಗಟ್ಟಲೆ ಗುರುಗಳ ಸೇವೆ ಮಾಡಿ ಅವರ ಮನವೊಲಿಸಿ ಗುರುಗಳಿಂದ ವಿದ್ಯೆಯನ್ನು ಕಲಿಯಬೇಕಾಗಿತ್ತು. ಗುರುಗಳು ತನ್ನ ಶಿಷ್ಯರನ್ನು ಪುತ್ರ ವಾತ್ಸಲ್ಯದಿಂದ ಸಾಕಿ ಸಲಹಿ, ಜೊತೆಯಲ್ಲಿ ಸಕಲ ವಿದ್ಯೆಗಳನ್ನು ಕಲಿಸಿ ಕಳುಹಿಸುತ್ತಿದ್ದರಂತೆ. ಶಿಷ್ಯರಿಗೂ ತನ್ನ ವಿದ್ಯಾದಾತ ಗುರುವಿನ ಮೇಲೆ ಅಪಾರ ಭಕ್ತಿ ಭಾವನೆ ಇರುತ್ತಿತ್ತು.

ಆದರೆ ಈಗ ಗುರುಕುಲ ಪದ್ಧತಿ ಮಾಯವಾಗಿ ಶಾಲೆ ಕಾಲೇಜುಗಳಾಗಿ ಪರಿವರ್ತನೆಗೊಂಡಿವೆ. ಗುರು-ಶಿಷ್ಯರ ನಡುವೆ ಈಗ ಮೊದಲಿದ್ದಂತಹ ಆತ್ಮೀಯವಾದ ಸಂಬಂಧವಿಲ್ಲ . ಪಾಠ ಹೇಳಿ ಕೊಡುವುದು ಎಷ್ಟೋ ಜನರ ಪಾಲಿಗೆ ಬರೀ ಜೀವನೋಪಾಯಯಕ್ಕಾಗಿ ಆರಿಸಿಕೊಂಡ ವೃತ್ತಿಯಾಗಿ ಹೋಗಿರುವುದರಿಂದ ಮೊದಲಿದ್ದಂತಹ ಒಂದು ಪಾವಿತ್ರ್ಯವನ್ನು ಈಗ ಈ ಕ್ಷೇತ್ರ ಕಳೆದುಕೊಂಡಿದೆ. ವಿದ್ಯಾರ್ಥಿಗಳಿಗೂ ಈಗ ಶಿಕ್ಷಕರ ಮೇಲೆ ಹಿಂದಿನ ತಲೆಮಾರಿನವರಿಗೆ ಇದ್ದಂತಹ ಆದರಾಭಿಮಾನಗಳಿಲ್ಲ.

ನಮ್ಮ ಕಾಲೇಜಿನಲ್ಲಿ ಒಬ್ಬರು ಅಧ್ಯಾಪಕರಿದ್ದರು. ಒಳ್ಳೆಯ ವಾಗ್ಮಿಯಾಗಿದ್ದು ನಗೆ ಚಟಾಕಿ ಹಾರಿಸುತ್ತಾ ಅವರು ತೆಗೆದುಕೊಳ್ಳುತ್ತಿದ್ದ ತರಗತಿಗಳನ್ನು ನಾವೆಲ್ಲ ಬಹಳವಾಗಿ ಇಷ್ಟ ಪಡುತ್ತಿದ್ದೆವು. ಆದರೆ ಅವರು ನಮಗೆ ಪಾಠ ಮಾಡುತ್ತಿದ್ದುದೇ ಬಹಳ ಕಮ್ಮಿ. ತಮ್ಮ ಮಾತಿನ ಮೋಡಿಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ಅವರ ಸುತ್ತಲೂ ಯಾವಾಗಲೂ ಹುಡುಗರ ದಂಡೇ ಇರುತ್ತಿತ್ತು. ಈ ಪುಂಡ ವಿದ್ಯಾರ್ಥಿಗಳನ್ನು ಚಿತಾವಣೆ ಮಾಡಿ ಇತರ ಅಧ್ಯಾಪಕರ ಮೇಲೆ ಎತ್ತಿ ಕಟ್ಟುವುದರಲ್ಲಿಯೇ ನಿರತರಾಗಿರುತ್ತಿದ್ದ ಅವರಿಗೆ ಪಾಠಗಳನ್ನು ತೆಗೆದುಕೊಳ್ಳಲು ಸಮಯವೇ ಇರುತ್ತಿರಲಿಲ್ಲ. ಎಲ್ಲಾ ದುರಭ್ಯಾಸಗಳನ್ನು ಮೈಗೂಡಿಸಿಕೊಂಡಿದ್ದ ಅವರು ನಮಗೆ ಯಾವಾಗಲು ಹೇಳುತ್ತಿದ್ದ ಮಾತು ಇದು-‘ನಾನು ಹೇಳಿದ್ದು ಮಾತ್ರ ನೀವು ಕೇಳಿ, ಆದರೆ ನಾನು ಮಾಡಿದ್ದೆಲ್ಲಾ ನೀವು ಮಾಡಲು ಹೋಗಬೇಡಿ’ ಎಂದು. ಇಂತಹ ಅಧ್ಯಾಪಕರನ್ನು ಗುರು ಎಂಬ ಮಹತ್ವದ ಸ್ಥಾನದಲ್ಲಿ ಕೂಡಿಸಿ ಗೌರವಿಸುವುದಾದರೂ ಹೇಗೆ ?

ಕೆಲವು ಕಡೆ ಇಂತಹ ಹೊಣೆಗೇಡಿ ಅಧ್ಯಾಪಕರಿದ್ದರೆ, ಮತ್ತೆ ಕೆಲವೆಡೆ ನಿಸ್ಪೃಹ ಮನಸ್ಸಿನ ನಿಷ್ಠಾವಂತ ಅಧ್ಯಾಪಕರುಗಳು ತಮ್ಮಲ್ಲಿರುವ ಅರಿವಿನ ಭಂಡಾರವನ್ನೆಲ್ಲಾ ತಮ್ಮ ವಿದ್ಯಾರ್ಥಿಗಳಿಗೆ ವಿಶಾಲ ಮನಸ್ಸಿನಿಂದ ಧಾರೆಯೆರೆಯ ಬಯಸಿದರೆ- ‘ಅದೆಲ್ಲಾ ಕಂತೆ ಪುರಾಣ ಯಾರಿಗೆ ಬೇಕಾಗಿದೆ ಸಾರ್‌ ? ಪರೀಕ್ಷೆಗೆ ಅಗತ್ಯವಿದ್ದಷ್ಟು ಮಾತ್ರ ಹೇಳಿ ಕೊಡಿ ಸಾಕು’ ಎಂದು ಗುರುವಿಗೇ ತಿರುಮಂತ್ರ ಹೇಳಿಕೊಡುವ ಶಿಷ್ಯರೂ ಇಲ್ಲದಿಲ್ಲ.

ಕುವೆಂಪು, ಎ.ಎನ್‌. ಮೂರ್ತಿರಾವ್‌, ಶಿವರುದ್ರಪ್ಪ ಮುಂತಾದವರು ತಮ್ಮ ಜೀವನದಲ್ಲಿ ತಮಗೆ ಬಂದೊದಗಿದ ಗುರುಗಳ ಬಗೆಗೆ ಬಹಳ ಅಭಿಮಾನಪೂರ್ವಕವಾಗಿ ಬರೆದ ಬರಹಗಳನ್ನು ಓದಿದ್ದೇವೆ. ರಾಧಾಕೃಷ್ಣನ್‌ ತರಹದ ಶಿಕ್ಷಕರು ತಮ್ಮ ನಡೆ-ನುಡಿಗಳಿಂದ ತಮ್ಮ ವಿದ್ಯಾರ್ಥಿಗಳ ಜೀವನದಲ್ಲಿ ಅಚ್ಚಳಿಯದ ಪ್ರಭಾವ ಮೂಡಿಸಿದ ಅನೇಕ ಘಟನೆಗಳನ್ನು ಕೇಳಿದ್ದೇವೆ. ವಿದ್ಯೆಯನ್ನು ಅರಸಿ ಬರುವ ಶಿಷ್ಯರ ಸುಪ್ತ ಪ್ರತಿಭೆ ಇಂತಹ ದಿವ್ಯ ಚೇತನಗಳ ಸಾನ್ನಿಧ್ಯದಲ್ಲಿ ಸಾಣೆ ಹಿಡಿದ ವಜ್ರವಾಗಿ ಪ್ರಕಾಶಗೊಳ್ಳುತ್ತಿತ್ತು. ಕಗ್ಗಲ್ಲೂ ಕೂಡ ಅರಳಿ ಸುಂದರ ಶಿಲ್ಪವಾಗುತ್ತಿತ್ತು. ಆದರೆ ಇಂತಹ ಅಪರೂಪದ ವ್ಯಕ್ತಿಗಳ ಮಾರ್ಗದರ್ಶನ ಎಲ್ಲರಿಗೂ ದೊರಕುವುದು ದುರ್ಲಭ.

ನಮ್ಮಲ್ಲಿರುವ ಧಾರ್ಮಿಕ ಮಠಗಳ ಸ್ವಾಮಿಗಳನ್ನು ಕೂಡ ನಾವು ಗುರುಗಳು ಎಂದು ಕರೆಯುತ್ತೇವೆ. ಮನುಷ್ಯ ಸಾಂಸಾರಿಕ ಬದುಕಿನ ಕಷ್ಟ, ಕೋಟಲೆಗಳಿಗೆ ಸಿಲುಕಿ ಕಂಗಾಲಾಗಿ ಹೋದಾಗ ವೇದಾಂತದ ಆಸರೆ ಒದಗಿಸಿ, ಸಮಾಧಾನ ನೀಡಿ ಸಂತೈಸುವ ಇಂತಹ ಗುರುಗಳ ಅಗತ್ಯ ಈ ಸಮಾಜಕ್ಕೆ ಇದ್ದೇ ಇದೆ. ಆದರೆ ಈಗ ಸದ್ಯದ ಮಠಗಳ ಪರಿಸ್ಥಿತಿ ಹೇಗಿದೆ ಎಂದರೆ ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಬಂಗಾರದ ಪಂಜರದಲ್ಲಿ ಸೆರೆಯಾಳಾಗಿರುವ ಈ ಸ್ವಾಮಿಗಳಿಂದ ಸಮಸ್ಯೆಗಳಲ್ಲಿ ಸಿಲುಕಿರುವ ಸಾಮಾನ್ಯನೊಬ್ಬ ಸಾಂತ್ವನ ಪಡೆಯುವುದಿರಲಿ, ಅವರನ್ನು ಸುಲಭವಾಗಿ ಸಂಪರ್ಕಿಸುವುದೂ ಆಗದ ಮಾತು. ಸಾರ್ವಜನಿಕ ಬದುಕನ್ನು ಕಾಡುತ್ತಿರುವ ನೂರೆಂಟು ವ್ಯಾಧಿಗಳಿಗೆ ಆಧ್ಯಾತ್ಮದ ಮದ್ದೆರೆದು ಆರೋಗ್ಯವಂತ ಸಮಾಜ ರೂಪಿಸುವ ಹೊಣೆ ಹೊತ್ತ ಇವರು ಕ್ಷುಲ್ಲಕ ರಾಜಕಾರಣ ಮಾಡುತ್ತಾ ತಮ್ಮ ತಮ್ಮ ಮಠದ ಆಸ್ತಿ-ಪಾಸ್ತಿಗಳನ್ನು ಬೆಳೆಸಿಕೊಳ್ಳುವುದರಲ್ಲಿ ನಿರತರಾಗಿ ಹೋಗಿದ್ದಾರೆ.

ಇನ್ನು ಕೆಲವು ಸ್ವಾಮೀಜಿಗಳಂತೂ ಆಧುನಿಕ ಲೋಕದ ವಿದ್ಯಮಾನಗಳಿಗೆ ಸಂಪೂರ್ಣ ಬೆನ್ನು ತಿರುಗಿಸಿ ಸನಾತನ ಕಾಲದ ಜಡ್ಡು ಹಿಡಿದ, ಕಂದಾಚಾರದ ಕತ್ತಲೆ ಕವಿದ ಕುರುಡು ಓಣಿಗಳಲ್ಲಿ ಕಳೆದು ಹೋಗಿದ್ದಾರೆ. ಇವರು ತಮ್ಮ ತಮ್ಮ ಮೂಗಿನ ನೇರಕ್ಕೆ ಜಗತ್ತನ್ನು ನೋಡುವುದನ್ನು ಬಿಟ್ಟು ಸಮಕಾಲೀನ ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ತಮ್ಮ ಅನುಯಾಯಿಗಳನ್ನು ಅಣಿಗೊಳಿಸಬೇಕಿದೆ. ಕಳೆದು ಹೋದ ಇತಿಹಾಸವನ್ನೇ ಮೆಲುಕು ಹಾಕುತ್ತಾ ಕುಳಿತಿರುವ ಬದಲು ವರ್ತಮಾನದ ಕರೆಗೆ ಓಗೊಡಲೇ ಬೇಕಾಗಿದೆ. ತಿರುಗುವ ಬುಗುರಿಯೇ ಆದ ಈ ಭೂಮಿಯ ಮೇಲೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹೊರ ಪ್ರಪಂಚದ ಹೊಸ ಗಾಳಿ, ಬೆಳಕುಗಳಿಗೆ ತಮ್ಮನ್ನು ತಾವೇ ಒಡ್ಡಿಕೊಳ್ಳುವ ಸುಸಮಯವೀಗ ಒದಗಿ ಬಂದಿದೆ.

ಈಗಲೂ ಯಾವುದೇ ಪ್ರಲೋಭನೆಗಳಿಗೆ ಗುರಿಯಾಗದೆ, ಪ್ರಚಾರ ಬಯಸದೆ ‘ಗುರುವೇ ದಾರಿ ತೋರು’ ಎಂದು ಆರ್ತರಾಗಿ ಬಂದ ಜನಗಳಿಗೆ ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಸಲ್ಲಿಸುತ್ತಿರುವ ನೂರಾರು ಗುರು ಪೀಠಗಳಿವೆ. ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ ವಿಪರೀತ ಮತಿಯನಳಿದ ನಿರ್ಮೋಹಿ ಸಾಧು ಸಂತರ ದೊಡ್ಡ ಪಡೆಯೇ ನಮ್ಮಲ್ಲಿದೆ. ಅನೇಕ ಆಶ್ರಮ, ಕುಟೀರ, ಸೇವಾಸದನಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ತಮ್ಮ ಹೆಸರೂ ಕೂಡ ಹೇಳ ಬಯಸದ ಅಕಳಂಕಿತ ಸಾಧಕರು ಅಸಂಖ್ಯಾತವಾಗಿದ್ದಾರೆ. ಈ ಬಾಳ ಲೆತ್ತದಾಟದಲ್ಲಿ ಹೀನಾಯವಾಗಿ ಸೋತು ನೊಂದು ಬೆಂದು ಬಂದ ಮಂದಿಗೆ ನೈತಿಕ ಬಲ ನೀಡಿ, ಹೊಸ ಹುರುಪು ತುಂಬಿ ಮತ್ತೆ ಬದುಕಿಗೆ ಮರಳಿಸುತ್ತಿರುವ ಇವರ ಜೀವನಪ್ರೀತಿಯ ಕಾಯಕ ನಿರಂತರ ನಡೆದೇ ಇದೆ.

ಇಂತಹ ಸಾಧು-ಸನ್ಯಾಸಿಗಳ ಮಾತಿಗೆ ಅಧಿಕಾರ ವಲಯದಲ್ಲಿಯೂ ಹೆಚ್ಚು ಬೆಲೆ ಇರುವುದರಿಂದ ತಮ್ಮ ಈ ಸಾತ್ವಿಕ ತೇಜಸ್ಸನ್ನು ಸಮಾಜಕ್ಕೆ ಏನಾದರೂ ಒಳಿತು ಮಾಡುವಲ್ಲಿ ಇವರು ಬಳಸಿಕೊಳ್ಳಬೇಕು. ನಾಡು-ನುಡಿಯ ಅಳಿವು ಉಳಿವಿನ ಪ್ರಶ್ನೆ ಎದುರಾದಾಗ, ಸಮುದಾಯದ ಸಾಮರಸ್ಯಕ್ಕೇ ಸಂಕಟ ಒದಗಿ ಬಂದಾಗ ನಮಗೇಕೀ ರಾಜಕೀಯ? ಎಂದು ಮೌನದ ಮೊರೆ ಹೋಗದೆ ತಮ್ಮ ಧೀರ ಗಂಭೀರ ನಿಲುವಿನಿಂದ ರಾಜಕೀಯಸ್ಥರನ್ನು ಮಣಿಸಲೂ ಇವರು ಹಿಂಜರಿಯಬಾರದು. ಅರಮನೆಗಿಂತಲೂ ಗುರುಮನೆ ಹೆಚ್ಚಿನದು ಎಂಬ ಜನರ ನಂಬಿಕೆಗೆ ಅರ್ಥ ಬರುವುದು ಇಂತಹ ಸತ್ವ ಪರೀಕ್ಷೆಯ ಸಂಧರ್ಭಗಳಲ್ಲೇ.

ಒಟ್ಟಿನಲ್ಲಿ ಮನುಷ್ಯ ಸರಿಯಾದ ದಾರಿಯಲ್ಲಿ ನಡೆದು ಬದುಕಿನಲ್ಲಿ ಏನಾದರೂ ಮಹತ್ತನ್ನು ಸಾಧಿಸಲು ಅವನ ಮುಂದೆ ನಿಶ್ಚಲವಾದ ಗುರಿಯಾಂದಿರಬೇಕು. ಹಿಂದೆ ಬೆಂಗಾವಲಾಗಿದ್ದು ಮನ್ನಡೆಸಲು ಸರಿಯಾದ ಗುರು ಇದ್ದೇ ಇರಬೇಕು. ಯಾರು ಸರಿಯಾದ ಗುರು ಮತ್ತು ಗುರಿಯನ್ನು ಆರಿಸಿಕೊಳ್ಳುತ್ತಾರೋ ಅವರ ಜೀವನ ನಿಜಕ್ಕೂ ಧನ್ಯ! ಯಶಸ್ಸು ಅವರ ಪಾಲಿಗೆ ಶತಸ್ಸಿದ್ಧ !

ಪೂರಕ ಓದಿಗೆ-

‘ಕನ್ನಡ ಮೇಷ್ಟ್ರು’ ಪರಂಪರೆ ಶ್ರೀಮಂತಗೊಳಿಸಿದ ರಾಜುಮೇಷ್ಟ್ರು

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more