• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕರೆಯ ಮೂಟೆಯಲ್ಲಿ ಸಿಕ್ಕಿದ್ದೇನು?

By Staff
|
  • ಕೆ. ತ್ರಿವೇಣಿ ಶ್ರೀನಿವಾಸರಾವ್‌

ಇಲಿನಾಯ್‌, ಅಮೆರಿಕಾ

(ತವರು:ಕಡೂರು-ಚಿಕ್ಕಮಗಳೂರು ಜಿಲ್ಲೆ)

venivas@hotmail.com

ನಮ್ಮ ಆತ್ಮೀಯ ಸ್ನೇಹಿತರೊಬ್ಬರು ಈಚೆಗೆ ಭಾರತ ಪ್ರವಾಸ ಮುಗಿಸಿಕೊಂಡು ಹಿಂತಿರುಗಿದರು. ಅವರೊಡನೆ ನನ್ನಕ್ಕ ಒಂದಿಷ್ಟು ಸರಕು ತುಂಬಿಸಿದ ಕವರನ್ನು ಕಳಿಸಿದ್ದಳು. ನಾವು ಅಂಗಡಿಯಿಂದ ಒಂದರಕ್ಕೆರೆಡು ಬೆಲೆ ಕೊಟ್ಟು ಖರೀದಿಸಿದ ವಸ್ತುಗಳಿಗಿಂತ ಅನಿರೀಕ್ಷಿತವಾಗಿ ಬಂದೊದಗುವ ಇಂತಹ ಲಕೋಟೆಗಳು ಹೆಚ್ಚು ಆಕರ್ಷಕ. ಅದರ ಮೇಲೆ ಯಾರದೋ ಬೆಚ್ಚಗಿನ ಹಾರೈಕೆಗಳ ಅಗೋಚರ ಕೈ ಗುರುತುಗಳು ಒಡಮೂಡಿರುತ್ತವೆ. ನೀಟಾದ ಗರಿಮುರಿಯಾದ ಹೊಳಪು ಕಾಗದಗಳಲ್ಲಿ ಗಾಳಿ ಕೂಡ ನುಸುಳದಂತೆ ಸೀಲು ಮಾಡಿದ ಅಂಗಡಿಯ ವಸ್ತುಗಳು ಸಮವಸ್ತ್ರ ತೊಟ್ಟ ಬಿಗಿದ ಮುಖದ ಮಿಲಿಟರಿ ಸಿಪಾಯಿಗಳಂತೆ. ಮನಸ್ಸಿಗೆ ಹತ್ತಿರವಾಗುವುದಿಲ್ಲ. ಮುಟ್ಟಿದರೆ ಎಲ್ಲಿ ಮುಕ್ಕಾಗುವುದೋ ಎಂಬ ಅಂಜಿಕೆ ಕಾಡುತ್ತದೆ. ಅದೇ ಯಾರೋ ಆಪ್ತರು, ಸ್ನೇಹಿತರು ನಾವು ಹೊರಟೇ ಬಿಡುತ್ತೇವೆಂದು ಆತುರಾತುರವಾಗಿ ಕೈಗೆ ಸಿಕ್ಕಿದ ಮುದುರು ಮುದುರು ಕವರಿನಲ್ಲಿ ತುಂಬಿಸಿ ಕೊಟ್ಟ ಸಿಹಿ ತಿಂಡಿಗಳ ರುಚಿ ಕ್ರಯ ಕೊಟ್ಟು ತಂದ ವಸ್ತುಗಳಿಗೆ ಬರುವುದು ಸಾಧ್ಯವೇ ಇಲ್ಲ. ಎಲ್ಲರಿಗೂ ಹೀಗೆಯೇ ಅನ್ನಿಸುತ್ತದೋ ಅಥವಾ ನನ್ನಂತ ಅತಿ ಭಾವುಕ ಮನಸ್ಕರಿಗೆ ಮಾತ್ರ ಹೀಗೋ ನನಗೆ ಗೊತ್ತಿಲ್ಲ.

Triveni Srinivasa Raoಅಕ್ಕ ಕಳಿಸಿದ ಆ ಅಕ್ಕರೆಯ ಮೂಟೆಯಿಂದ ಒಂದೊಂದೇ ವಸ್ತುಗಳನ್ನು ಹೊರ ತೆಗೆಯತೊಡಗಿದೆ. ಏನಿತ್ತು? ಏನಿಲ್ಲ ಅಲ್ಲಿ? ಬಹು ಹಿಂದೆ ಅನುಭವಿಸಿ ಈಗ ಮರೆತೇ ಹೋದಂತಿದ್ದ ವಾತ್ಸಲ್ಯಮಯ ಚಿಕ್ಕ ಲೋಕವೊಂದು ನನ್ನೆದುರು ಮೈದಾಳ ತೊಡಗಿತು. ಅಲ್ಲಿಂದ ವರುಷಗಳ ಹಿಂದೆ ಹೊರಟು ಬರುವಾಗ ತೊಟ್ಟಿದ್ದು ಈಗೀಗ ಮಾಸಿದಂತೆ ಕಾಣುವ ಕಿವಿಯೋಲೆ ಧರಿಸಿದ್ದ ನನ್ನ ಮಗಳಿಗೆ ಹೊಸದಾದ ಪುಟ್ಟ ಹೊಳೆಯುವ ಲೋಲಾಕುಗಳು, ನನ್ನ ಪುಟ್ಟ ಮಗನ ಎಳೆಯ ಮೈಗೆ ಹಿತವೆನ್ನಿಸುವ ಇಂಡಿಯಾದ ಟ್ಯಾಂಟೆಕ್ಸ್‌ ಬನಿಯನ್ನುಗಳು, ನನ್ನವರ ಬಾಯಿಗೆ ಹಿತವೆನ್ನಿಸುವಂತೆ ಸ್ವತಃ ಅಕ್ಕ ತನ್ನ ಬಿಳುಪಾದ ದುಂಡನೆಯ ಕೈಯಿಂದ ಕೊಬ್ಬರಿ, ಸಕ್ಕರೆ,ತುಪ್ಪ ಬೆರೆಸಿ ತಯಾರಿಸಿದ ಮೆದುವಾದ ಅಡಿಕೆ ಪುಡಿ, ಎಲ್ಲಾ ದೇವರ, ಗುರುಗಳ ಆಶೀರ್ವಾದದ ಭರವಸೆ ಹೊತ್ತು ತಂದ ಕುಂಕುಮ, ಮಂತ್ರಾಕ್ಷತೆಗಳ ಚಿಕ್ಕ ಚಿಕ್ಕ ಪೊಟ್ಟಣಗಳು, ಬೋಳು ತಲೆ ಹೊತ್ತು ನಗುತ್ತಿರುವ ಅಕ್ಕನ ಮೊಮ್ಮಕ್ಕಳ ಮುದ್ದು ಮುದ್ದು ನಗೆಯ ಭಾವಚಿತ್ರಗಳು, ಎಲ್ಲಾ ಇರುವ ಇಲ್ಲಿ ಸಿಗಲಾರದ ಶಿಂಗಾರ್‌ ಕುಂಕುಮದ ಕೊಳವೆಗಳು, ಹೂಬತ್ತಿಗಳು, ಜನಿವಾರಗಳು...

ಹೀಗೆ ಪ್ರತಿ ಸಣ್ಣ ಸಣ್ಣ ವಸ್ತುವೂ ನನಗೆ ಸಾವಿರಾರು ಮೈಲುಗಳ ದೂರದಿಂದ ಅಮೃತಮಯವಾದೊಂದು ಅಭಿಮಾನದ ಸಂದೇಶ ಹೊತ್ತು ತಂದ ಅದ್ಭುತ ಪ್ರತಿನಿಧಿಗಳಂತೆ ಕಾಣಿಸತೊಡಗಿದವು. ಬದುಕಿನ ಬೀಸು ಅಲೆಗಳ ಹೊಡೆತಕ್ಕೆ ಪ್ರೀತಿ ಪಾತ್ರರಿಂದ ಬಹು ದೂರ ಬಂದು ಬಿದ್ದಿರುವ ನಮ್ಮನ್ನು ಅಗಲಿಕೆಯ ಬೇಗೆ ದಹಿಸಿ ಹಾಕದಂತಿರಲು ಆಗಾಗ ಇಂತಹ ತಂಪು ಚೆಲ್ಲುವ ಖುಶಿಯ ಮೂಟೆಗಳು ಬಂದು ತಲುಪುತ್ತಲೇ ಇರಬೇಕು. ಎರಡು ವಿಭಿನ್ನ ದಡಗಳ ನಡುವೆ ಹೊಯ್ದಾಡುತ್ತಿರುವ ನಮ್ಮ ಕೈ ಸೋಲದಂತಿರಲು, ನಮ್ಮ ಬಾಳ ನೌಕೆ ಗುರಿ ತಪ್ಪಿ ಅಲೆಯದಂತಿರಲು ಇಂತಹ ದಿಕ್ಸೂಚಿ ಧ್ರುವ ತಾರೆಗಳು ಅನವರತ ದಾರಿ ತೋರುತ್ತಲೇ ಇರಬೇಕು.

ಮನುಷ್ಯ ಹೊನ್ನು, ಮಣ್ಣಿಗಾಗಿ ಹಸಿದಿರುತ್ತಾನೆ ಎನ್ನುತ್ತಾರೆ, ಆದರೆ ನಿಜವಾಗಿಯೂ ನಾವೆಲ್ಲಾ ಬಾಯಾರಿರುವುದು ಒಂದು ಬೊಗಸೆ ಪ್ರೀತಿಗಾಗಿ. ಎದುರಿಗೆ ಕುಳಿತು ಘಂಟೆಗಟ್ಟಲೆ ನಿಂದಿಸಿದರೂ ಜಪ್ಪೆನ್ನದ ಪರಮ ಪಾಪಿಯಾಬ್ಬನಿಗೆ ಕರುಣೆಯಲ್ಲದ್ದಿದ ಒಂದೆರಡು ಒಲಮೆಯ ಮಾತನಾಡಿ ನೋಡಿ, ಕಟುವಾದ ಹೆಬ್ಬಂಡೆಯಂತಹ ಅವನ ಹೃದಯ ನಸುವೇ ಮಿಸುಕಾಡಿ ಕಣ್ಣಂಚಿನಲ್ಲಿ ಅಚ್ಚರಿಯ ಒಂದು ಬಿಂದು ಹೊಳೆಯದಿದ್ದರೆ ಆಗ ಹೇಳಿ ಬೇಕಾದರೆ. ಅಡಿಗರು ‘‘ಅಮೃತವಾಹಿನಿಯಾಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ’’ ಎಂದು ಬೆರಗಾಗಿದ್ದು ಇದಕ್ಕೇ ಇರಬೇಕು. ಒಬ್ಬರು ಮತ್ತೊಬ್ಬರಿಗಾಗಿ ಮಿಡಿಯುವ, ಒಬ್ಬರ ನೋವಿಗೆ ಮತ್ತೊಬ್ಬರು ಕರಗುವ ಈ ಪ್ರೀತಿಯೆಂಬ ಚುಂಬಕ ಶಕ್ತಿ ಲೋಕದಿಂದಲೇ ಮರೆಯಾಗಿ ಹೋಗಿದ್ದರೆ ಈಗಲೇ ಇಷ್ಟು ಯಾಂತ್ರಿಕವಾಗಿ, ಔಪಚಾರಿಕವಾಗಿರುವ ಬದುಕು ಮತ್ತೆಷ್ಟು ಹದಗೆಟ್ಟಿರುತ್ತಿತ್ತು ಅಲ್ಲವೇ?

ಯಾರೋ ನಮ್ಮನ್ನು ನೆನಪಿಸಿಕೊಂಡು ಬಿಕ್ಕಳಿಸುತ್ತಾರೆಂದರೆ, ನಮ್ಮ ಒಡನಾಟದ ಸವಿ ನೆನಪು ಮತ್ತಾರದೋ ಮೊಗದಲ್ಲಿ ಕಿರು ನಗುವೊಂದನ್ನು ಅರಳಿಸಿತೆಂದರೆ, ಮತ್ತಾರೋ ಉಣ್ಣಲು ಮೇಲೆತ್ತಿದ ತುತ್ತು ನಮ್ಮ ಅಗಲಿಕೆಯ ಭಾರಕ್ಕೆ ಕೆಳಗೆ ಜಾರಿತೆಂದರೆ, ಯಾರದೋ ಮನಸ್ಸಿನ ಮೂಲೆಯಲ್ಲಿ ನಮಗೊಂದು ಪುಟ್ಟ ಜಾಗವಿದೆ ಎಂದರೆ, ನಮ್ಮನ್ನೂ ಪ್ರೀತಿಸುವವರು, ನಮಗಾಗಿ ಹಂಬಲಿಸುವವರು ಎಲ್ಲೋ ಇದ್ದಾರೆಂದರೆ ಈ ಭುವಿ ಎಷ್ಟು ಅಂದ ಎನ್ನಿಸಲು, ಈ ಬದುಕೆಷ್ಟು ಚಂದ ಅನ್ನಿಸಲು ಇದಕ್ಕಿಂತ ಮಿಗಿಲಾದ ಬೇರೆ ಕಾರಣಗಳು ಬೇಕಾ??

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more