• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಮಣಮಹರ್ಷಿ ಅಂಧರ ಶಾಲೆಯ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ನಾವು ಬರೀ ‘ನೋಡ’ಲಿಲ್ಲ ; ಹೃದಯದಲ್ಲಿ ಬೊಗಸೆಯಾಗಿ ತುಂಬಿಕೊಂಡೆವು ! ತುಂಬಿಕೊಳ್ಳುತ್ತಿದ್ದಂತೆ ಕಣ್ಣು ತೇವವಾಯಿತು, ಹೃದಯ ಆರ್ದ್ರವಾಯಿತು.

By Staff
|

ಕಾರ್ಯಕ್ರಮದ ಆರಂಭ ಮಂಜಪ್ಪ ಸುಶ್ರಾವ್ಯವಾಗಿ ಹೇಳಿದ ‘ಶರಣು ಬೆನಕ’ ಪ್ರಾರ್ಥನೆ (‘ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ...’ ಎಂಬ ಅಂತರಂಗದ ಕಳಕಳಿ)ಯಾಂದಿಗೆ. ಅದಾದ ಬಳಿಕ ನೃತ್ಯವೈಭವ. ‘ಪುಷ್ಪಾಂಜಲಿ’ ಯ ಮೂಲಕ ಆಶೀರ್ವಚನ ಕೋರುತ್ತ ವೇದಿಕೆಗೆ, ಸಭಿಕರಿಗೆ ಮತ್ತು ಭಂಗವಂತನಿಗೆ ನೃತ್ಯದ ಅರ್ಪಣೆ. ಆನಂತರ ‘ದೀಪಾಂಜಲಿ’ - ದೀಪನೃತ್ಯ. ‘ಕತ್ತಲಿನಿಂದ ಬೆಳಕಿನೆಡೆ’ ದಿವ್ಯ ಸಂದೇಶದ ರೋಮಾಂಚಕಾರಿ ನಿರೂಪಣೆ. ಮುದ್ದಿನ ಐಟಮ್‌ ‘ತರಂಗ’ - ಕೂಚಿಪುಡಿ ಮತ್ತು ಭರತನಾಟ್ಯ ಶೈಲಿಗಳ ಜುಗಲ್‌ಬಂದಿ. ಸುಮಾರು 20 ನಿಮಿಷಗಳ ಅವಧಿಯಲ್ಲಿ ಮುಖ್ಯ ಭೂಮಿಕೆ ಮಂಜಪ್ಪನದು. ತಲೆಯ ಮೇಲೆ ಕಂಚಿನ ಬಿಂದಿಗೆಯನ್ನಿಟ್ಟು ಕಂಚಿನ ಹರಿವಾಣದ ಅಂಚಿನ ಮೇಲೆ ಪಾದಗಳನ್ನೂರಿ ಒಂದಿಂಚೂ ಆಯತಪ್ಪದೆ ಮಿಂಚು ಸಂಚರಿಸಿದಂತೆ ನರ್ತಿಸಿದ ಮಂಜಪ್ಪ ಪ್ರೇಕ್ಷಕರ ಕಣ್ಣು ಮಂಜಾಗಿಸಿದ ಎಂದರೆ ಅದು ಅತಿಶಯೋಕ್ತಿಯಲ್ಲ !

ಮಹಿಷಾಸುರ ಮರ್ದಿನಿಯ ಕಥೆಯ ನಿರೂಪಣೆ ಮುಂದಿನ ಐಟಮ್‌ ‘ಶಕ್ತಿ’ಯಲ್ಲಿ . ಸ್ಫುರದ್ರೂಪಿಯೂ ಆಗಿರುವ ಹೇಮಲತಾ ಚಾಮುಂಡಿದೇವಿಯಾಗಿ, ಮಂಜಪ್ಪ ಮಹಿಷಾಸುರನಾಗಿ, ಶ್ರೀಧರ್‌ ಮತ್ತು ಸಾವಿತ್ರಿ ಭಗವದ್ಭಕ್ತರಾಗಿ ಪ್ರಸ್ತುತಪಡಿಸಿದ ಸಮೂಹ ನೃತ್ಯ- ಅತ್ಯುತ್ತಮ ಸಂಗೀತ, ಅಪ್ರತಿಮ ಸಂಯೋಜನೆ, ಅದ್ಭುತ ಸಂಚಲನಗಳ ಸಂಗಮದಿಂದ ‘ಶಕ್ತಿ’ ಹೆಸರೇ ಹೇಳುವಂತೆ ‘ಪವರ್‌ಫುಲ್‌’ ಆಗಿತ್ತು.

Dance Performance by Students of Ramanamaharshi School for the Blind, Banglaore in SSVT, WDC

ಇದಿಷ್ಟರ ನಂತರ ನೃತ್ಯ ಪಟುಗಳಿಗೊಮ್ಮೆ ನಿಟ್ಟುಸಿರು ಬಿಡಲು, ಮುಂದಿನ ಪ್ರಸ್ತುತಿಗಳಿಗೆ ವೇಷಭೂಷಣ ಬದಲಾಯಿಸಲು ಅನುಕೂಲವಾಗುವಂತೆ ಗುರು ಸ್ವರೂಪಲಕ್ಷ್ಮಿಯವರಿಂದ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ...’ ಕನಕದಾಸರ ದೇವರನಾಮ ಗೀತೆಯ ಹಿನ್ನೆಲೆಯಲ್ಲಿ ಭರತನಾಟ್ಯ ಪ್ರದರ್ಶನ. ಉತ್ತಮ ; ಆದರೆ ಮೊನ್ನೆಯ ಕಾರ್ಯಕ್ರಮದಲ್ಲಿ ಅದಕ್ಕೆ ಪ್ರಾಧಾನ್ಯತೆ, ಪ್ರಶಂಸೆ ಕಡಿಮೆ. ಸಹಜವೇ, ಗುರುವನ್ನು ಮೀರಿಸಿದ ಶಿಷ್ಯರು !

ಅಲ್ಪವಿರಾಮದ ಮತ್ತು ಕಾಸ್ಟ್ಯೂಂಸ್‌ ಬದಲಾವಣೆಯ ನಂತರ ಮತ್ತೆ ರಂಗಪ್ರವೇಶ ನಾಲ್ಕು ಮಂದಿ ಕಣ್ಮಣಿಗಳದು. ಭರತನಾಟ್ಯ ಮಾತ್ರವಲ್ಲ , ಪಂಜಾಬಿ ಭಾಂಗ್ರಾ ಡ್ಯಾನ್ಸ್‌ ಕೂಡ ಮಾಡಿತೋರಿಸಬಲ್ಲೆವು ಎಂಬ ದೃಢವಿಶ್ವಾಸದ ಮೂರ್ತಸ್ವರೂಪಿಗಳು ದಲೇರ್‌ ಮಹೆಂದಿಯ ಜನಪ್ರಿಯ ‘ಬೊಲೋ ತಾ ರಾ ರಾ ರಾ...’ ಡೈನಮಿಕ್‌ ಹಾಡಿಗೆ ಕುಣಿದು ಕುಪ್ಪಳಿಸಿದಾಗ ಪ್ರೇಕ್ಷಕರೂ ಚಪ್ಪಾಳೆ ತಟ್ಟುತ್ತ ಜತೆಗೂಡಿಸಿದ್ದೇನು, ಸ್ವತಃ ದಲೇರ್‌ ಮಹೆಂದಿ ಬಂದಿರುತ್ತಿದ್ದರೂ ಮೂಕವಿಸ್ಮಿತರಾಗುತ್ತಿದ್ದರೇನೊ. ಅಷ್ಟೇ ಪ್ರಭಾವಶಾಲಿಯಾಗಿ ಮೂಡಿಬಂದ ಮುಂದಿನ ಪ್ರಸ್ತುತಿ ‘ವಂದೇ ಮಾತರಂ’. ಎ.ಆರ್‌.ರೆಹಮಾನ್‌ ನಿರ್ಮಿತ ಟ್ಯೂನ್‌ ಮಾತ್ರ ಗೊತ್ತಿದ್ದವರಿಗೊಂದು ಬ್ರೇಕ್‌. ಪ್ರಸಿದ್ಧ ಸ್ಯಾಕ್ಸೊಫೋನ್‌ ವಾದಕ ಕದ್ರಿಗೋಪಾಲ್‌ನಾಥ್‌ ಅವರ ‘ಯಾತ್ರಾ’ ಧ್ವನಿಸುರುಳಿಯ ‘ವಂದೇ ಮಾತರಂ’ ಫ್ಯೂಷನ್‌ಮ್ಯೂಸಿಕ್‌ಗೆ ನರ್ತಿಸುವಾಗ ಅಂಧ ನೃತ್ಯಪಟುಗಳ ಮಧ್ಯೆ ಯಾವುದೇ ಕನ್‌ಫ್ಯೂಷನ್‌ ಇಲ್ಲ. ಅದಾದ ಬಳಿಕ ಮಲಯಾಳಮ್‌ ಭಕ್ತಿಗೀತೆಯಾಂದಕ್ಕೆ (ಪ್ರಭು ಯೇಸುವನ್ನು ಕುರಿತು) ಕ್ಲ್ಯಾಪ್‌ಡಾನ್ಸ್‌ - ‘ಚಪ್ಪಾಳೆ ನೃತ್ಯ’.

ನೃತ್ಯವೈಭವದ ರಸದೌತಣವುಣ್ಣುತ್ತಿದ್ದ ಪ್ರೇಕ್ಷಕರೊಡನೆ ವಂದನಾರ್ಪಣೆಯ ಮಾತುಗಳನ್ನಾಡಿದ ಕಾವೇರಿ ಸಂಘದ ಉಪಾಧ್ಯಕ್ಷ ಹರೀಶ್‌ ಹಿರೇಮಠ್‌ ನೃತ್ಯ ತಂಡದವರನ್ನೆಲ್ಲ ಒಬ್ಬೊಬ್ಬರಾಗಿ ವೇದಿಕೆಗೆ ಕರೆತಂದು ಪರಿಚಯಿಸಿ ಗೌರವಿಸಿ ಭಾವುಕರಾದರು. ಕಾರ್ಯಕ್ರಮ ಆರಂಭವಾಗುವ ಮೊದಲೇ ಕಲಾವಿದರೊಂದಿಗೆ ಮತ್ತು ಅವರ ಸಂಯೋಜಕ ಸ್ವಾಮಿನಾಥನ್‌ ಅವರೊಂದಿಗೆ ಮಿನಿ ಸಂದರ್ಶನವೊಂದನ್ನು ಮಾಡಿಟ್ಟುಕೊಂಡಿದ್ದ ಹರೀಶ್‌, ಈ ಮಹಾನ್‌ ಪ್ರತಿಭೆಗಳು ರೂಪುಗೊಂಡ ಬಗೆಯನ್ನು, ಎಲ್ಲ ನಾಲ್ಕು ಮಂದಿಯ ತಂದೆ ತಾಯಿಗಳೂ ನೃತ್ಯ-ಸಂಗೀತ-ಕಲೆಯ ಯಾವುದೇ ಗಂಧ-ಗಾಳಿಯಿಲ್ಲದ ಶ್ರಮಜೀವಿ ಕೂಲಿಕಾರ್ಮಿಕರೋ, ರೈತರೋ ಆಗಿದ್ದರೂ ಈ ಮಕ್ಕಳು ರಮಣಮಹರ್ಷಿ ಎಕಾಡೆಮಿಯಲ್ಲಿ ಪಳಗಿ ಅಂತಾರಾಷ್ಟ್ರೀಯ ಖ್ಯಾತಿಯ ಮಟ್ಟಕ್ಕೇರಿದ ಯಶೋಗಾಥೆಯನ್ನು ಪ್ರೇಕ್ಷಕರೊಂದಿಗೆ ಹಮ್ಚಿಕೊಂಡರು. ಸಭಿಕರ ಪರವಾಗಿ ಕಾವೇರಿ ಸಂಘದ ಮಾಜಿ ಅಧ್ಯಕ್ಷ ಮೈ.ಶ್ರೀ.ನಟರಾಜ್‌ ಅವರು ಮೆಚ್ಚುಗೆಯ ಎರಡು ಮಾತುಗಳನ್ನಾಡಿದರು. ನೃತ್ಯ ತಂಡದ ಅಮೇರಿಕಾಯಾನದ ವ್ಯವಸ್ಥಾಪಕ ಸ್ಥಳೀಯ ಬಿ.ಟಿ.ಲಕ್ಷ್ಮಣ್‌ ಅವರೂ ಕೃತಜ್ಞತೆಯ ಮಾತನಾಡಿ ಸಹೃದಯಿ ಕಲಾಭಿಮಾನಿಗಳ ಪ್ರೋತ್ಸಾಹವನ್ನು ಮನಸಾರೆ ಕೊಂಡಾಡಿದರು.

ಧನಶ್ರೀ ರಾಗದ ತಿಲ್ಲಾನದ ಹಿನ್ನೆಲೆಗೆ ನೃತ್ಯ ಪ್ರದರ್ಶನದೊಂದಿಗೆ ಒಂದು ಅಮೋಘ, ಅಸದೃಶ, ಅದ್ಭುತ ಕಾರ್ಯಕ್ರಮಕ್ಕೆ ತೆರೆಬಿತ್ತು. ಇನ್ನೂ ತುಂಬಾ ದಿನಗಳ ಕಾಲ ಪ್ರೇಕ್ಷಕರ ಕಣ್ಣಲ್ಲೆಲ್ಲ ಈ ಕಣ್ಮಣಿಗಳೇ ತುಂಬಿರುತ್ತಾರೆಂಬುದರಲ್ಲಿ ಸಂಶಯವಿಲ್ಲ. ಉಚಿತ ಪ್ರವೇಶದ ಈ ಕಾರ್ಯಕ್ರಮದಲ್ಲಿ ಟಿಕೆಟ್‌ ಇಟ್ಟಿರುತ್ತಿದ್ದರೆ ಆಗುತ್ತಿದ್ದ ಮೊತ್ತಕ್ಕಿಂತ ಬಲು ಹೆಚ್ಚಿನ ಮೊತ್ತ ದೇಣಿಗೆಯ ಬಾಕ್ಸ್‌ನಲ್ಲಿ ಜಮೆಯಾದದ್ದು, ತನ್ಮೂಲಕ ರಮಣಮಹರ್ಷಿ ಸಂಸ್ಥೆಯಂತಹ ಉತ್ತಮ ಯೋಜನೆಗೆ ವಿನಿಯೋಗವಾಗುವ ಕಾರ್ಯಕ್ರಮವೊಂದನ್ನು ರಾಜಧಾನಿ ಪರಿಸರದ ಕನ್ನಡಿಗರಿಗೆ ನೀಡಿದ ತೃಪ್ತಿ, ಧನ್ಯತಾಭಾವ ಕಾವೇರಿ ಸಂಘದ ಅಧ್ಯಕ್ಷ ಸಂಜಯ ರಾವ್‌ ಅವರ ಮುಖದಲ್ಲಿ ಗೋಚರಿಸುತ್ತಿತ್ತು.

ದೃಷ್ಟಿಹೀನವಾಗಿಯೂ ಏನೇನೆಲ್ಲ ಸಾಧಿಸಬಹುದು ಎಂಬುದಕ್ಕೆ ಪ್ರಪಂಚಕ್ಕೇ ಮಾದರಿಯಾಗಿರುವ ಹೆಲೆನ್‌ ಕೆಲರ್‌ ಹೇಳುತ್ತಿದ್ದುದುಂಟು: "The most beautiful things in this world cannot be seen or even touched. They must be felt with the heart". ರಮಣಮಹರ್ಷಿ ಅಂಧರ ಶಾಲೆಯ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ನಾವು ಬರೀ ‘ನೋಡ’ಲಿಲ್ಲ ; ಹೃದಯದಲ್ಲಿ ಬೊಗಸೆಯಾಗಿ ತುಂಬಿಕೊಂಡೆವು ! ತುಂಬಿಕೊಳ್ಳುತ್ತಿದ್ದಂತೆ ಬಹಳಷ್ಟು ಮಂದಿಗೆ ಕಣ್ಣು ತೇವವಾದದ್ದು ಹೃದಯದ ಆರ್ದ್ರತೆಯ ಪ್ರತೀಕ.

ಕಾರ್ಯಕ್ರಮದ ಫೋಟೋ ಗ್ಯಾಲರಿ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more