• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಚ್ಚಾಟವಿನ್ನು ಸಾಕು,‘ಅಕ್ಕ’ನ ವ್ಯಾಧಿಗೆ ಔಷಧ ಬೇಕು

By Staff
|

*ಡಾ. ಮೈ. ಶ್ರೀ. ನಟರಾಜ, ಗೈಥರ್ಸ್‌ ಬರ್ಗ್‌, ಮೇರೀಲ್ಯಾಂಡ್‌, ಯು.ಎಸ್‌.ಎ

Dr. M.S. Nataraj‘ಅಕ್ಕ’ ಹುಟ್ಟಿದ ಘಳಿಗೆಯೋ ಅಮೆರಿಕನ್ನಡಿಗರ ಹಣೇಬರಹವೋ ಅಂತು ಈ ಸಂಸ್ಥೆಯ ಬಗ್ಗೆ ಸಕಾರಣವಾಗಿ ಹಲವಾದರೆ ನಿಷ್ಕಾರಣವಾಗಿ ಹಲವು ವಾದ-ವಿವಾದಗಳು ನಡೆಯುತ್ತಲೇ ಇವೆ.

ಆಕ್ಕ ಸಂಸ್ಥೆಯ ಕಲ್ಪನೆ ಸುಂದರವಾದುದು ಮತ್ತು ಅದರ ಧ್ಯೇಯ-ಧೋರಣೆಗಳು ಘನವಾದವು. ಅಂಥಾ ಒಂದು ಸಂಘದ ಅಗತ್ಯವಿತ್ತು ಎಂಬುದರ ಬಗ್ಗೆ ಎರಡು ಅಭಿಪ್ರಾಯಗಳಿಲ್ಲ - ಇರಕೂಡದು. ಆದರೆ ಹ್ಯೂಸ್ಟನ್‌ ಸಮ್ಮೇಳನದ ಸಂದರ್ಭದಲ್ಲಿ ಹುಟ್ಟಿದ ಅಪಸ್ವರ ಒಂದಲ್ಲ ಒಂದು ರೀತಿ ಮುಂದುವರೆಯುತ್ತಲೇ ಇದೆ. ಸುಮಧುರ ಸಂಗೀತಕ್ಕೆ ಬದಲು ಆಗಾಗ್ಗೆ ಕೇಳಿಬರುವ ಕರ್ಕಶ ಧ್ವನಿ ಎಲ್ಲರ ಮನಸ್ಸನ್ನೂ ನೋಯಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

ಈ ಸಂಸ್ಥೆಯನ್ನು ಪ್ರಾರಂಭಿಸಿ, ಬೆಳೆಸಿ ಹೆಸರುಗಳಿಸಿದವರು ಹಲವು ಹತ್ತಾರು ಜನರಾದರೆ ಎಲೆಮರೆಯಲ್ಲಿ ಕುಳಿತು ಹೆಸರಿನ ಹಂಬಲವಿಲ್ಲದೇ ದುಡಿದವರು ನೂರಾರು ಜನರಿದ್ದಾರೆ. ಅವರೆಲ್ಲರಿಗೂ ನಾವೆಲ್ಲ ಕೃತಜ್ಞರಾಗಿರೋಣ. ಹಿಂದಿನ ಕಹಿ ಅನುಭವಗಳನ್ನು ಮರೆತು ಮುಂದುವರೆಯಲು ಏನು ಮಾಡಬೇಕು ಎಂಬುದು ಮುಖ್ಯವಾದ ಪ್ರಶ್ನೆ. ನಾನು ಅಕ್ಕ ಸಂಸ್ಥೆಯ ಪದಾಧಿಕಾರಿಯಲ್ಲ . ಹಿಂದಾಗಿರಲಿಲ್ಲ, ಮುಂದೆ ಆಗುವ ಆಸೆಯೂ ಇಲ್ಲ . ಅಕ್ಕ ಸಮಿತಿಯ ಮಾಜಿ ಅಥವಾ ಹಾಲಿ ನಿರ್ದೇಶಕರಾರೂ ನನಗೆ ಖಾಸಾ ದೋಸ್ತಿಗಳಲ್ಲ , ಶತ್ರುಗಳಂತು ಮೊದಲೇ ಅಲ್ಲ , ಅವರಲ್ಲನೇಕರು ನನಗೆ ಹೆಸರಿನಿಂದಷ್ಟೇ ಗೊತ್ತು. ಹೀಗಾಗಿ ನನಗೆ ಯಾರನ್ನೂ ವಹಿಸಿಕೊಳ್ಳುವ ಅಥವಾ ಯಾರ ಬಗ್ಗೆಯೂ ಕತ್ತಿಮಸೆಯುವ ಅಗತ್ಯವಿಲ್ಲ . ನಾನು ಹಿಂದೆ ಕಾವೇರಿಯ ಅಧ್ಯಕ್ಷನಾಗಿದ್ದೆ . ಆದರೆ ಇಂದು ಯಾವ ಕನ್ನಡ ಸಂಘವನ್ನೂ ನಾನು ಪ್ರತಿನಿಧಿಸುತ್ತಿಲ್ಲ. ಒಬ್ಬ ಕಾಳಜಿಯುಳ್ಳ ಕನ್ನಡಿಗನಾಗಿ, ಮೂರು ದಶಕಗಳಿಗೂ ಹೆಚ್ಚುಕಾಲ ಅಮೇರಿಕಾವಾಸಿಯಾಗಿ ಮತ್ತು ಸಂಘಸಂಸ್ಥೆಗಳನ್ನು ಕಟ್ಟುವುದು, ಉಳಿಸುವುದು ಮತ್ತು ಬೆಳೆಸುವದು ಎಷ್ಟು ಕಷ್ಟ , ಎಂಥಾ ಜವಾಬ್ದಾರಿ ಎಂಬುದನ್ನರಿತಿರುವವನಾಗಿ- ಈ ಹಿನ್ನೆಲೆಯಲ್ಲಿ ನನ್ನ ಕೆಲವು ವೈಯಕ್ತಿಕ ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ಯಾರ ಮನಸ್ಸನ್ನೂ ನೋಯಿಸುವ ಉದ್ದಿಶ್ಯ ನನಗಿಲ್ಲ .

  1. ಅಕ್ಕನ ಬಗ್ಗೆ ಜಗಳ ಕರ್ನಾಟಕದಲ್ಲಿ ಯಾಕೆ ನಡೆಯುತ್ತಿದೆ? ಅಕ್ಕ ಅಮೆರಿಕನ್ನಡಿಗರ ಸಂಸ್ಥೆ, ಇದರ ಆಗುಹೋಗುಗಳಿಗೆ ನಾವೇ ಕಾರಣರು. ನಮ್ಮನಮ್ಮ ಆಂತರಿಕ ತಿಕ್ಕಾಟಗಳನ್ನು ಬಗೆಹರಿಸಿಕೊಳ್ಳಲು ಅಥವಾ ಅಗತ್ಯವಾದ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಹೊರಗಿವರ ಸಹಾಯದ ಅಗತ್ಯವಿಲ್ಲ , ಇರಕೂಡದು. ಆದ್ದರಿಂದ, ಅಕ್ಕನ ಬಗ್ಗೆ ಕರ್ನಾಟಕದ ಯಾವ ವ್ಯಕ್ತಿಗಳಾಗಲೀ ಸಂಸ್ಥೆಗಳಾಗಲೀ, ಪತ್ರಿಕೆಗಳಾಗಲೀ ಸರ್ಕಾರವಾಗಲೀ ತಲೆಕೆಡಿಸಿಕೊಳ್ಳದಿರಲಿ, ಮೂಗು ತೂರಿಸದಿರಲಿ.
  2. ಅಕ್ಕನ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಗಳು ಯಾಕೆ ನಡೆಯಬೇಕೋ ನನಗಂತೂ ಅರ್ಥವಾಗುತ್ತಿಲ್ಲ. ಹಾಗೇನಾದರೋ ಅಕ್ಕದ ಬಗ್ಗೆ ವಿಚಾರವಿನಿಮಯದ ಅವಶ್ಯಕತೆ ಇದ್ದಲ್ಲಿ, ಅಂಥಾ ಸಭೆ ಇಲ್ಲಿ ನಡೆಯಲಿ. ಆದರ ಸದಸ್ಯಕೂಟಗಳೊಂದಿಗೆ ವಿಚಾರವಿನಿಮಯವಾಗಲಿ, ಎಲ್ಲಾ ಸದಸ್ಯರಿಗೂ ಅಗತ್ಯವಿದ್ದಂತೆ ವಿಷಯ ತಲುಪಲಿ. ಇಲ್ಲಿನ ಕನ್ನಡಿಗರಿಗೇ ಅಕ್ಕದ ವಿಚಾರದಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿರುವಾಗ ಕನ್ನಡ ನಾಡಿನ ಜನಗಳಿಗೆ ನಮ್ಮ ಒಳಜಗಳ ಕಟ್ಟಿಕೊಂಡು ಏನಾಗಬೇಕಾಗಿದೆ?
  3. ಅಕ್ಕ ನಿಜವಾಗಿಯೂ ಅಮೇರಿಕದ ಕನ್ನಡಕೂಟಗಳ ಆಗರವಾಗಿದ್ದಲ್ಲಿ ಇಲ್ಲಿರುವ ಎಲ್ಲ ಕನ್ನಡಕೂಟಗಳ ಪ್ರತಿನಿಧಿಗಳು ಒಂದೆಡೆ ಸೇರಿ ಅದರ ಭವಿಷ್ಯವನ್ನು ನಿರ್ಧರಿಸಲಿ. (ಹಾಗೆ ಒಂದೆಡೆ ಸೇರಲು ಕಷ್ಟವಾದಲ್ಲಿ , ಈಗೇನು, ಈ-ಮೈಲ್‌ ಇಲ್ಲವೇ, ಎಲ್ಲ ಪ್ರತಿನಿಧಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಲು ಬಹಳಷ್ಟು ಸಾಧನಗಳಿವೆಯಲ್ಲ.)
  4. ಕರ್ನಾಟಕದಲ್ಲಿ ನಡೆಯುವ ಸಮ್ಮೇಳನಗಳ ಬಗ್ಗೆ ಇಲ್ಲಿರುವ ಕನ್ನಡಿಗರು ಮೂಗು ತೂರಿಸುವುದಿಲ್ಲವಷ್ಟೆ ? ಅಂತೆಯೆ ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು , ಅಥವಾ ಅಲ್ಲಿನ ಇನ್ಯಾವ ವ್ಯಕ್ತಿಗಳಾಗಲೀ ಸಂಸ್ಥೆಗಳಾಗಲೀ ನಮ್ಮ ದ್ವೈವಾರ್ಷಿಕ ಸಮ್ಮೇಳನಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರಲಿ. ಭಾಗವಹಿಸಲು ಇಚ್ಛೆಯಿದ್ದವರು ತಮ್ಮ ಪ್ರತಿಭೆಯ ಆಧಾರದ ಮೇಲೆ ಯತ್ನಿಸಲಿ.
  5. ಕರ್ನಾಟಕ ಸರ್ಕಾರದಿಂದ ಯಾವ ಧನಸಹಾಯವನ್ನೂ ಮತ್ತು ಶಿಫಾರಸ್ಸಿನೊಂದಿಗೆ ಬರುವ ಇನ್ಯಾವುದೇ ಸಹಾಯವನ್ನೂ ನಾವು ನಿರೀಕ್ಷಿಸದೇ, ಸರ್ಕಾರೇತರ ಸಂಘಗಳ ಸಹಾಯ (ಅಗತ್ಯವಿದ್ದಷ್ಟು ಮಾತ್ರ) ಪಡೆದುಕೊಂಡು ಮುಂದುವರೆಯೋಣ.
  6. ಚುನಾವಣೆಯಲ್ಲಿ ಗೆದ್ದ ಸರ್ಕಾರದ (ಜನಾನುರಾಗಿಯಾದ) ಒಬ್ಬಾತ/ಒಬ್ಬಾಕೆಯನ್ನು ಪ್ರತಿನಿಧಿಯಾಗಿ ಕರೆಸುವುದನ್ನು ಬಿಟ್ಟು ಮತ್ಯಾವ ರಾಜಕಾರಣಿಗೂ ಅಧಿಕೃತ ಆಹ್ವಾನ ಕೊಡದಂತೆ ನಿಬಂಧನೆ ಮಾಡಿಕೊಳ್ಳೋಣ. (ನನಗೆ ತಿಳಿದ ಮಟ್ಟಿಗೆ ರಾಜಕಾರಣಿಗಳ ಭಾಷಣ ಕೇಳಲು ಯಾವ ಅಮೆರಿಕನ್ನಡಿಗನೂ ಸಮ್ಮೇಳನಕ್ಕೆ ಬರುವುದಿಲ್ಲ.)
  7. ಕವಿ/ಸಾಹಿತಿ/ಬರಹಗಾರ/ಸಂಗೀತಗಾರ ಮುಂತಾದ ಕಲಾವಿದರನ್ನು ಮುಖ್ಯ ಅತಿಥಿಗಳಾಗಿ ಕರೆದರೆ ಅವರ ಖರ್ಚು-ವೆಚ್ಚ ಕೊಟ್ಟು ಗೌರವದಿಂದ ನಡೆದುಕೊಳ್ಳೋಣ. ಅದು ಸಾಧ್ಯವಾಗದಿದ್ದರೆ ಸ್ಥಳೀಯ ಪ್ರತಿಭೆಗಳಿಲ್ಲವೇನು? ಹಾಗೆ ನೋಡಿದರೆ, ಸ್ಥಳೀಯ ಪ್ರತಿಭೆಗೇ ಆದ್ಯತೆ ಕೊಟ್ಟು ಕೆಲವು ಅಪರೂಪದ ಉತ್ಕೃಷ್ಟ ದರ್ಜೆಯ ಕಲಾವಿದರನ್ನು ಮಾತ್ರ ಕರ್ನಾಟಕದಿಂದ ಕರೆಸೋಣ.
  8. ಉತ್ತಮವಾದ ಕಲಾಪಗಳನ್ನು ನಡೆಸಿ ಬಂದವರೆಲ್ಲ ಸಂತೋಷದಿಂದ ಹಿಂದಿರುಗುವಂತೆ ಸಮ್ಮೇಳನಗಳನ್ನು ಶಿಸ್ತಿನಿಂದ ನಡೆಸೋಣ. (ಕಾರ್ಯಕ್ರಮಗಳು ಹೇಗಿರಬೇಕು ಯಾವುದಕ್ಕೆ ಎಷ್ಟು ಸಮಯವಿರಬೇಕು ಇತ್ಯಾದಿಗಳ ಬಗ್ಗೆ ಹಿಂದೆ ಬರೆದಿದ್ದೇನೆಯಾದ್ದರಿಂದ ಮತ್ತೆ ಪುನರುಕ್ತಿಗೊಳಿಸುವುದಿಲ್ಲ.)
  9. ಮತ್ತೊಂದು ಮುಖ್ಯ ವಿಚಾರ. ಅಮೇರಿಕದಲ್ಲಿದ್ದೂ ಕರ್ನಾಟಕದಲ್ಲಿ ಒಂದಿಲ್ಲ ಒಂದು ರೀತಿ ರಾಜಕೀಯದಲ್ಲಿ ಪ್ರವೃತ್ತರಾಗಿರುವವರ ಸಹಾಯವನ್ನು ಮತ್ತು ಲಾಭಕ್ಕಾಗಿರುವ ಔದ್ಯೋಗಿಕ ಮತ್ತಿತರ ವ್ಯಾಪಾರೀ ಸಂಘ-ಸಂಸ್ಥೆಗಳಲ್ಲಿ ನಿರತರಾದವರ ಆರ್ಥಿಕ ನೆರವನ್ನೂ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದ್ದಾಗ್ಯೂ ಸ್ವಾರ್ಥಕ್ಕಾಗಿ ಅಕ್ಕ ಸಂಸ್ಥೆಯನ್ನು ಬಳಸಿಕೊಳ್ಳುವವರನ್ನು ಕಾರ್ಯಕಾರೀ ಸಮಿತಿಯಿಂದ ದೂರವಿಡುವುದೇ ಸೂಕ್ತ.
  10. ಕೊನೆಯದಾಗಿ, ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಅಕ್ಕ ಸಂಸ್ಥೆ ಜಾತೀಯತೆ, ಗುಂಪುಗೂಳಿತನ ಅಥವಾ ಇನ್ಯಾವುದೇ ಅಸಭ್ಯ ವರ್ತನೆ ತೋರುವ ಮತ್ತು ಸ್ವಂತ ಪ್ರತಿಷ್ಠೆಗಾಗಿ ಮುಂದಾಳತ್ವ ವಹಿಸುವ ವ್ಯಕ್ತಿಗಳನ್ನು ದೂರವಿಡಬೇಕು. ಈ ಯೋಜನೆ ಕಾರ್ಯಗತವಾಗಬೇಕಾದರೆ ಪ್ರಜಾಪ್ರಭುತ್ವದ ಮೂಲತಂತ್ರಗಳನ್ನು ಜಾರಿಗೆ ತರದೇ ವಿಧಿಯಿಲ್ಲ. ಅಕ್ಕ ಸಂಸ್ಥೆಗೆ ವೈಯಕ್ತಿಕ (ಅಂದರೆ ಬಿಡಿ ಸದಸ್ಯರ) ಪ್ರಾತಿನಿಧ್ಯ ಇರಬೇಕೇ ಅಥವಾ ಕೂಟಗಳಿಗೆ ಮಾತ್ರ ಸದಸ್ಯತ್ವ ಇರಬೇಕೇ? ಒಬ್ಬ ವ್ಯಕ್ತಿಯ ಮತಕ್ಕೆ ಇರುವ ತೂಕವೂ ಒಂದು ಕನ್ನಡಕೂಟದ ಮತಕ್ಕಿರುವ ತೂಕವೂ ಒಂದೇ ಆಗಿರಬೇಕೆ ? 50 ಸದಸ್ಯರಿರುವ ಕೂಟದ ಮತಕ್ಕೂ 500 ಸದಸ್ಯರಿರುವ ಕೂಟದ ಮತಕ್ಕೂ ಒಂದೇ ತೂಕವೇ? ಚುನಾವಣೆ ಎಲ್ಲಿ ಹೇಗೆ ಯಾವಾಗ ನಡೆಯಬೇಕು? ಮತದಾನ ಹೇಗೆ ನಡೆಯಬೇಕು? ಲೆಕ್ಕಪತ್ರಗಳನ್ನು ಯಾರು ಯಾರಿಗೆ ಯಾವಾಗ, ಹೇಗೆ ಒಪ್ಪಿಸಬೇಕು ? ಇವೇ ಮುಂತಾದ ವಿಷಯಗಳನ್ನು ಒಳ್ಳೆಯ ನುರಿತ ಸಂವಿಧಾನಪಟುಗಳಿಂದ ಬರೆಸಿ ವಕೀಲರಿಂದ ಪರಿಷ್ಕರಿಸಿ ಎಲ್ಲರಿಗೂ ದೊರಕುವಂತೆ ಪ್ರಕಟಿಸದಿದ್ದರೆ, ‘ಅಕ್ಕ’ ಅಮೇರಿಕದಲ್ಲಿ ಕಚ್ಚಾಡುವ ಕನ್ನಡಿಗರ ಆಗರವಾಗುವುದರಲ್ಲಿ ಸಂದೇಹವಿಲ್ಲ ! ಅಷ್ಟೇ ಅಲ್ಲ, ಅಮೇರಿಕಾ ಸರ್ಕಾರದ ಸುಂಕದ ಇಲಾಖೆ ಬೆನ್ನುಬಿದ್ದರೆ ಲಾಭರಹಿತ ಅಂತಸ್ತನ್ನು ಕಿತ್ತುಹಾಕುವುದು ಖಂಡಿತ.
ಅಕ್ಕ ಒಡೆದು ಹೋಳಾಗದಿರಲಿ ಎಂಬ ಒಂದೇ ಉದ್ದೇಶದಿಂದ ಈ ಲೇಖನವನ್ನು ಬರೆದಿರುವೆನಲ್ಲದೇ ನನಗೆ ಹಿಂದಿನ, ಇಂದಿನ ಅಥವಾ ಮುಂದಿನ ಯಾವ ಸಮಿತಿಯ ಬಗ್ಗೆಯೂ ವೈಮನಸ್ಯವಿಲ್ಲ . ಎಲ್ಲರೂ ಶಾಂತಚಿತ್ತರಾಗಿ ನಿರ್ಲಿಪ್ತರಾಗಿ ಅಮೇರಿಕಾದಲ್ಲಿ ಕನ್ನಡದ ಉಳಿವು-ಅಳಿವಿನ ಬಗ್ಗೆ ಕಾಳಜಿ ಇದ್ದವರೆಲ್ಲ ಐಕ್ಯತೆಯಿಂದ ದುಡಿದರೆ ಒಳ್ಳೆಯ ಭವಿಷ್ಯವಿರಲು ಸಾಧ್ಯ.

ಸಿರಿಗನ್ನಡಂ ಗೆಲ್ಗೆ! ಅಮೆರಿಕನ್ನಡಂ ಬಾಳ್ಗೆ !!

ಪೂರಕ ಓದಿಗೆ-

‘ಅಮೆರಿಕಾದ ಭಾರತೀಯರಿಗಿದು ಅವಮಾನವಲ್ಲದೆ ಮತ್ತಿನ್ನೇನು !’

ಅಕ್ಕಗಳಿರಾ... ಅಣ್ಣಗಳಿರಾ...ಸ್ವಲ್ಪ ಕೇಳಿರಾ..!

ಕನ್ನಡದ ಕೆಲಸಗಳಿಗೆ ನಾವು ಬದ್ಧ

ಕರ್ನಾಟಕದ ಕನ್ನಡಿಗರಿಗೆ ಸಸ್ನೇಹ ನಮಸ್ಕಾರಗಳು - ಅಕ್ಕ

ಅಕ್ಕ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದ ತ್ರಿಮೂರ್ತಿಗಳು !

ಸಿಡುಕು ಮೋರೆ ಮುಚ್ಚಿಟ್ಟು ಕನ್ನಡಾಂಬೆಯ ಆರಾಧಿಸಬೇಕು

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more