ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೋತ್ಸಾಹದೊಂದಿಗೆ ನಾವು-ನೀವು :ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಯುಗಾದಿ

By Staff
|
Google Oneindia Kannada News
  • ಜ್ಯೋತಿ ಶೇಖರ್‌, ಕ್ಯಾಲಿಫೋರ್ನಿಯ
    Email : [email protected]
Jyothi Shekhar, Milpitas, Californiaವಸಂತನು ತನ್ನ ಕುಂಚದಿಂದ ಸಿಲಿಕಾನ್‌ ಕಣಿವೆಯ ಗಿಡ ಮರಗಳಿಗೆ ಹಸಿರು ತುಂಬುತ್ತಿರುವಾಗ ಬಂದೇ ಬಂತು ಸ್ವಭಾನುವನ್ನು ಸ್ವಾಗತಿಸಲು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಆಯೋಜಿಸಿದ ಯುಗಾದಿ ಕಾರ್ಯಕ್ರಮದ ಕರೆಯೋಲೆ.

ಮೊದಲ ಸಂಕ್ರಾಂತಿ ಕಾರ್ಯಕ್ರಮದಲ್ಲಿಯೇ ತನ್ನ ಅನನ್ಯತೆಯನ್ನು ತೋರಿದ ಕೂಟದ ನೂತನ ಸಮಿತಿ, ವರ್ಷಾರವರ ತಾಂತ್ರಿಕ ನೈಪುಣ್ಯತೆಯಿಂದ ಅಂತರ್ಜಾಲದ ತಾಣದಲ್ಲಿ ಕಾರ್ಯಕ್ರಮದ ಇಣುಕುನೋಟವನ್ನು ಸಚಿತ್ರವಾಗಿ ಪ್ರಕಟಿಸಿ, ಕಾರ್ಯಕ್ರಮದ ದಿವಸ ಬಂದೀತೆ ಎಂದು ಕಾತರದಿಂದ ನಿರೀಕ್ಷಿಸುವಂತೆ ಮಾಡಿತ್ತು.

ಅಂದು ಶನಿವಾರ, ಏಪ್ರಿಲ್‌ 26ರ ಸಂಜೆ, ಸುಮಾರು 4:30ಕ್ಕೆ ಸನ್ನಿವೇಲಿನ ಹಿಂದು ದೇವಾಲಯದ ಸಭಾಂಗಣವನ್ನು ಪ್ರವೇಶಿಸಿದಾಗ, ಒಂದು ಕ್ಷಣ ನಮ್ಮ ಬೆಂಗಳೂರಿನ ಸಸ್ಯಕಾಶಿಯಾದ ಲಾಲ್‌ಬಾಗನ್ನು ಹೊಕ್ಕಂತೆ ಭಾಸವಾಯಿತು. ರಾಧಾ ಮೂರ್ತಿ ಮತ್ತು ಪೂನಂ ಶರ್ಮರವರು ನೆಲದ ಮೇಲೆ ಹುಲ್ಲಿನ ಹೊದಿಕೆ, ಚಿಮ್ಮುತ್ತಿರುವ ನೀರಿನ ಕಾರಂಜಿ, ಪುಷ್ಪಭರಿತ ಹೂಕುಂಡಗಳು, ಹೂವಿನ ಬಳ್ಳಿ ಹೊತ್ತ ಕಮಾನು ಕಂಭಗಳ ಸಹಿತ ಸುಂದರ ಉದ್ಯಾನವನವನ್ನೇ ಅಲ್ಲಿ ಸೃಷ್ಟಿಸಿದ್ದರು! ಮರದಕಟ್ಟೆ, ಹಳೆಯಕಾಲದ ಧ್ವನಿವರ್ಧಕಗಳ ಕಲ್ಪನೆಗಳಲ್ಲಿ ರಶ್ಮಿ ರಾಜನ್‌ ಮತ್ತು ಈ ಬೃಹತ್‌ ಜೋಡಣೆಯ ಕೆಲಸಕ್ಕೆ ರಾಧಿಕ, ರಾಧಿಕ ರಾವ್‌, ಸಂಗೀತ ಸತ್ಯನ್‌, ನಂದಿನಿ ಉಮೇಶ್‌ ಮತ್ತು ಶ್ರೀನಾಥ ಹೊನ್ನವಳ್ಳಿಯವರು ನೆರವಾಗಿದ್ದರು.

ಬಾಗಿಲಲ್ಲಿ ಬೇವು-ಬೆಲ್ಲ, ಕೊಬ್ಬರಿ ಸಕ್ಕರೆ ಹಿಡಿದ ದಂಪತಿಗಳು ಆಹ್ವಾನಿತರನ್ನು ಬರಮಾಡಿಕೊಳ್ಳುತಿದ್ದ ಸೌಹಾರ್ದತೆ ಮನಮೆಚ್ಚುವಂತಿತ್ತು. ಸಮಯಕ್ಕೆ ಸರಿಯಾಗಿ ಆಗಮಿಸಿದವರಿಗೆ ಕೋಸಂಬರಿ ಮತ್ತು ಪಾನಕದ ಸಮಾರಾಧನೆಯೇ ಕಾದಿತ್ತು, ಕನ್ನಡ ಕೂಟದ ಸಮಿತಿಯವರ ಕೃಪೆಯಿಂದ! ಒಟ್ಟಿನಲ್ಲಿ, ಹಬ್ಬದ ಸಂತೋಷದ ವಾತಾವರಣ ಎಲ್ಲೆಡೆಯೂ ಹಬ್ಬಿತ್ತು.

ಯುಗಾದಿ ಹಬ್ಬವನ್ನು ಆಚರಿಸಲು ‘‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’’ ಗೀತೆಗಿಂತ ಅರ್ಥಪೂರ್ಣವಾದ ಗೀತೆ ಇದೆಯೇ? ಈ ಸುಶ್ರಾವ್ಯವಾದ ಸ್ವಾಗತಗೀತೆಯಾಂದಿಗೆ ಗಾರ್ಗಿ ಪಂಚಾಂಗಂ ನೇತೃತ್ವದಲ್ಲಿ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯು, ಗುಣ ಹೆಬ್ಬಾರ್‌ ಅವರ ಪ್ರಕೃತಿಯ ಸೊಬಗಿನ ಹಿನ್ನಲೆಯ ವೇದಿಕೆಯಲ್ಲಿ ಸಮಾರಂಭವನ್ನು ಪ್ರಾರಂಭಿಸಿತು. ಕೂಟದ ಅಧ್ಯಕ್ಷರಾದ ಸುರೇಶ್‌ ಬಾಬು ತಮ್ಮ ಸ್ವಾಗತ ಭಾಷಣದೊಂದಿಗೆ ನೆರೆದಿದ್ದ ಸದಸ್ಯರಿಗೆ ಯುಗಾದಿಯ ಶುಭಾಶಯವನ್ನು ಕೋರಿದರು. ನಂತರ, ಹಿಂದು ದೇವಾಲಯದ ಪ್ರಧಾನ ಅರ್ಚಕರಾದ ಗಜಾನನ ಜೋಷಿಯವರಿಂದ ಸ್ವಭಾನು ಸಂವತ್ಸರದ ಪಂಚಾಂಗ ಶ್ರವಣ ನಡೆಯಿತು. ಇದು ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಮೆರುಗನ್ನು ಕೊಟ್ಟಿತು.

ವೀಣಾ ಗೌಡ ನಿರ್ದೇಶನದಲ್ಲಿ, ‘ರಾಮ ಲಕ್ಷ್ಮಣ’ ಚಿತ್ರದಿಂದ ಆಯ್ದ ‘‘ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು’’ ಹಾಡಿಗೆ ಚಿಕ್ಕ ಮಕ್ಕಳಿಂದ ನೃತ್ಯಾಭಿನಯ ನಡೆಯಿತು. ಪುಟ್ಟ ಮಗುವನ್ನು ಹಾವಿನಿಂದ ರಕ್ಷಿಸಿದ ಮುಂಗುಸಿಯನ್ನು ಒಬ್ಬ ತಾಯಿಯು ನಿಜ ವಿಚಾರವೇನೆಂದು ಪರಿಶೀಲಿಸದೆ, ದುಡುಕಿನಲ್ಲಿ ಕೊಂದು, ನಂತರ ಪಶ್ಚಾತ್ತಾಪ ಪಡುವ ನೀತಿ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಮಕ್ಕಳು ನಿರೂಪಿಸಿದರು.

ಬಳಿಕ, ತೆರೆಯ ಮರೆಯಲ್ಲಿ ಮುಂದಿನ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿದ್ದಾಗ, ಬಾಲಕ ದತ್ತಾನಂದ ಬಹು ಇಂಪಾಗಿ ಕೊಳಲು ನುಡಿಸಿದ. ಇದು ಮುಗಿದು, ಪರದೆ ತೆರೆದಾಗ, ಸಭಿಕರಿಗೆ ಅಚ್ಚರಿ ಕಾದಿತ್ತು. ಕಾರಣ, ವೇದಿಕೆಯು ಕಾವೇರಿ ತೀರದಲ್ಲಿರುವ ಒಂದು ಕಾಡಾಗಿ ಮಾರ್ಪಾಡಾಗಿತ್ತು. ಅಂದು ಮೃಗರಾಜನ ಜನುಮದಿನ-ಎಲ್ಲ ಪ್ರಾಣಿಗಳು ನಲಿವ ದಿನ! ಈ ಸನ್ನಿವೇಶವನ್ನು ವರ್ಣಿಸುವ ಚಲನ ಚಿತ್ರದ ಹಾಡಿಗೆ ಚಿಣ್ಣರು, ಕಾಡಿನ ವಿವಿಧ ಪ್ರಾಣಿಗಳ ವೇಷಧರಿಸಿ, ತಾಳಬದ್ಧವಾಗಿ ಕುಣಿದು, ಮನೋಹರವಾದ ವಾತಾವರಣವನ್ನು ನಿರ್ಮಿಸಿದ್ದರು. ಮಕ್ಕಳ ಉತ್ಸಾಹಕ್ಕೆ ಪೂರಕವಾಗಿ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟುತ್ತಿದ್ದಂತೆ, ಇವರನ್ನು ತಯಾರು ಮಾಡಿದ ವೀಣಾ ಗೌಡ ಮತ್ತು ವೇಷ ಭೂಷಣ ವಿನ್ಯಾಸಕ್ಕೆ ಶ್ರಮಪಟ್ಟ ತಂದೆ ತಾಯಿಯರಿಗೆ ಸಂತೃಪ್ತ ಮನೋಭಾವ ಮೂಡಿ ಬಂದಿತ್ತು.

ನೇಪಥ್ಯದಲ್ಲಿ ಮುಂದಿನ ಕಾರ್ಯಕ್ರಮದ ತಯಾರಿ ನಡೆಯುತ್ತಿದ್ದಾಗ, ಶ್ರೀನಿಧಿಯವರು ಬರೆದ ಕವನವನ್ನು ಹಾಡುವ ಮೂಲಕ ರೋಹಿಣಿ ಶಶಿಧರ್‌ ಜನರ ಮನರಂಜಿಸಿದರು. ತದನಂತರ, ಹದಿನೈದನೆಯ ಶತಮಾನದ ಕವಿಯಾದ ಕುಮಾರ ವ್ಯಾಸ ರಚಿತ ಗದುಗಿನ ಭಾರತದಿಂದ ಆಯ್ದ ಒಂದು ಸನ್ನಿವೇಶವನ್ನು ವಿಜಯ ಕಣೆಕಲ್‌ ನಿರ್ದೇಶನದಲ್ಲಿ ಇಬ್ಬರು ಕಿರಿಯ ಕಲಾವಿದರು ಅಭಿನಯಿಸಿ ತೋರಿಸಿದರು. ಶ್ರೀ ಕೃಷ್ಣನು ಕರ್ಣನಿಗೆ ಅವನು ಕುಂತಿ ಪುತ್ರನೆಂಬ ಸತ್ಯವನ್ನು ಅರುಹಿ ಪಾಂಡವರ ಪಕ್ಷಕ್ಕೆ ಬರಲು ಪ್ರೇರೇಪಿಸುವುದು, ಕರ್ಣನು ದುರ್ಯೋಧನನಿಗೆ ಮಿತ್ರ ದ್ರೋಹವನ್ನು ಮಾಡಲಿಚ್ಛಿಸದೆ ಕೊನೆಗೆ ‘‘ನಿನ್ನಯ ವೀರರೈವರನು ನೋಯಿಸೆನು’’ ಎಂಬ ಭಾಷೆ ನೀಡುವುದು - ಇದನ್ನು ಗಮಕ ರೂಪದಲ್ಲಿ ಹಾಡಿ ಮಕ್ಕಳು ಪ್ರೇಕ್ಷಕರನ್ನು ಪೌರಾಣಿಕ ಲೋಕಕ್ಕೆ ಕರೆದೊಯ್ದರು. ನಂತರ, ವೈದೇಹಿಯವರು, ಹಲವಾರು ಪ್ರಸಿದ್ಧ ಗಾಯಕರನ್ನು ತಮ್ಮ ಅನುಪಮ ಹಾಸ್ಯ ಶೈಲಿಯಲ್ಲಿ ಅನುಕರಿಸಿ ಎಲ್ಲರನ್ನು ನಕ್ಕು ನಲಿಸಿದರು.

ಮುಂದೆ ಹಳ್ಳಿಯಿಂದ ಪಟ್ಟಣಕ್ಕೆ ಬಂದಾಗ ಉಂಟಾಗುವ ಪರದಾಟವನ್ನು ರತ್ನ ದತ್‌ ಅವರು, ಚಿತ್ರ ಗೀತೆಯಾಂದನ್ನು ಆಧರಿಸಿ ರೂಪಿಸಿದ ಮಕ್ಕಳ ನೃತ್ಯದೊಂದಿಗೆ ತೋರಿಸಿದರು. ಯುವ ಪೀಳಿಗೆ ಮೆಚ್ಚುವ ಬ್ಯಾಸ್ಕೆಟ್‌ ಬಾಲ್‌, ಸ್ಕೇಟ್‌ ಬೋರ್ಡ್‌ ಇತ್ಯಾದಿ ಕ್ರೀಡೆಗಳನ್ನು ಅಳವಡಿಸಿಕೊಂಡು ಮಾಡಿದ ಈ ನೃತ್ಯ ಬಹು ಸಹಜವಾಗಿ ಮೂಡಿಬಂದಿತು.

ಮುಂದಿನ ಕಾರ್ಯಕ್ರಮವೇ ಎಚ್‌.ಸಿ.ಶ್ರೀನಿವಾಸ್‌ ನಡೆಸಿಕೊಟ್ಟ ‘‘ಒಂದೇ ನಿಮಿಷದ ಮಾತು’’ ಶೀರ್ಷಿಕೆಯ ಸ್ಪರ್ಧೆ. ಇಲ್ಲಿ ಆರು ಜನ ಆಹ್ವಾನಿತರು ತಮಗೆ ನೀಡಿದ ವಿಷಯದ ಬಗ್ಗೆ, ಪೂರ್ವಸಿದ್ಧತೆಯಿಲ್ಲದೆ, ವ್ಯಾಕರಣ ದೋಷವಿಲ್ಲದೆ, ಅಚ್ಚ ಕನ್ನಡದಲ್ಲಿ ನಿಯಮಬದ್ಧವಾಗಿ ಒಂದು ನಿಮಿಷ ಎಡೆಬಿಡದೆ ಮಾತನಾಡಬೇಕು. ಮಾತೃಭಾಷೆ ಕನ್ನಡವಾದರೂ, ನಾವು ಆಂಗ್ಲ ಭಾಷೆಯ ಆಸರೆಯಿಲ್ಲದೆ, ಒಂದು ನಿಮಿಷ ಮಾತನಾಡಲೂ ಸಹ ಎಷ್ಟು ಕಷ್ಟ ಪಡುತ್ತೇವೆ ಎಂಬುದಕ್ಕೆ ಈ ಸ್ಪರ್ಧೆ ಸಾಕ್ಷಿಯಾಗಿ ಹೊಮ್ಮಿತು!

‘ಒನಕೆ ಓಬವ್ವ’, ‘ಕಿತ್ತೂರ್‌ ರಾಣಿ ಚೆನ್ನಮ್ಮ’, ‘ಹಾಸ್ಯ ಚಟಾಕಿ’, ‘ಕಥೆ ಮತ್ತು ಕವನ’, ‘ಮೆಣಸಿನಕಾಯಿ ಬಜ್ಜಿ’, ‘ವೈಯಾರಿ’ ಇವೇ ಮುಂತಾದ ಕಾರ್ಯಕ್ರಮಗಳು ಕರತಾಡನ ಗಿಟ್ಟಿಸಿದವು. ಪ್ರೇಕ್ಷಕರ ಉತ್ತೇಜನ, ಉದ್ಗಾರಗಳೊಂದಿಗೆ, ಸ್ಪರ್ಧಾಳುಗಳು ಕನ್ನಡದಲ್ಲಿ ಸೆಣಸುವುದನ್ನು ನೋಡಲು ಬಹಳ ಮಜವಾಗಿತ್ತು.

ಈ ಸ್ಪರ್ಧೆ ಕೊನೆಗೊಳ್ಳುತ್ತಿದ್ದಂತೆ ಊಟದ ವಿರಾಮ ಘೋಷಿಸಲ್ಪಟ್ಟಿತು. ಬಿಸಿಬೇಳೆಭಾತ್‌, ಮೊಸರನ್ನ, ಬಜ್ಜಿ, ಒಬ್ಬಟ್ಟುಗಳನ್ನೊಳಗೊಂಡ ಭರ್ಜರಿ ಹಬ್ಬದೂಟ. ಉಪಹಾರ ಗೃಹದ ಸಂಪೂರ್ಣ ಜವಾಬ್ದಾರಿಯನ್ನು ಅತಿ ಉತ್ತಮವಾಗಿ ನಿರ್ವಹಿಸಿದವರು ನರೇಂದ್ರ ಮತ್ತು ತಾರಿಣಿ. ಎಣಿಸಿದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಊಟ ಸಾಲದಾಗಿ ಸುಮಾರು ಸದಸ್ಯರು ಅಕ್ಕ ಪಕ್ಕದ ಹೋಟೆಲಿನ ಮೊರೆ ಹೋಗಬೇಕಾಗಿ ಬಂತು!

ಊಟ ಮುಗಿಸಿ ಬಂದ ಸದಸ್ಯರನ್ನು, ‘ಬಾಲಬಂಧು’ ವೃಂದದವರ ಗಾನಮಂಜರಿ ಕಾರ್ಯಕ್ರಮವು ಬರ ಮಾಡಿಕೊಂಡಿತು. ಜನಪ್ರಿಯ ಕನ್ನಡ ಹಾಡುಗಳನ್ನು ಕೀಬೋರ್ಡ್‌, ಗಿಟಾರ್‌, ತಬಲ ಮುಂತಾದ ಪಕ್ಕ ವಾದ್ಯಗಳೊಂದಿಗೆ ಶೃತಿ ಬೆರೆಸಿ, ಅತ್ಯುತ್ತಮವಾಗಿ ಹಾಡಿದ ಈ ಮಕ್ಕಳು ಎಲ್ಲರ ಮನಗೆದ್ದರು. ಈ ಪುಟ್ಟ ಪ್ರತಿಭೆಗಳನ್ನು ತಯಾರು ಮಾಡಿದ ಕೀರ್ತಿ ಶೋಭಾ ಪ್ರಭಾಕರ್‌ ಅವರಿಗೆ ಸಲ್ಲಬೇಕು.

ಪುರಂದರದಾಸರ ‘ಜಗದೋದ್ಧಾರನ’ ಕೀರ್ತನೆಗೆ ಕಾವ್ಯ ಕುರುಬೂರ್‌ ಅವರು ತಮ್ಮ ಸಂಗಡಿಗರೊಂದಿಗೆ ನರ್ತಿಸಿದರು. ಪುಟ್ಟ ಕೃಷ್ಣನ ಲೀಲೆಗಳನ್ನು ಬಣ್ಣಿಸುತ್ತ ತಾಯಿ ಯಶೋದೆ ಅವನನ್ನು ಆಡಿಸುವುದು ಮನ ಮೋಹಕವಾಗಿತ್ತು. ತರುವಾಯ, ಜೈರಾಜ್‌ ಗಲಗಲಿಯವರು ಗೋವಿನ ಹಾಡು ತಮಿಳುನಾಡಿನಲ್ಲಿ ಯಾವ ರೀತಿಯಾಗಿ ಪರಿವರ್ತನೆ ಹೊಂದುತ್ತದೆಯೆಂಬ ವಿಡಂಬನಾತ್ಮಕ ಚುಟುಕು ಕವಿತೆಗಳಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮೀಯಿಸಿದರು.

ಜುಗಲ್ಬಂದಿ - ಇದು ಸಂಗೀತ ಪ್ರೇಮಿಗಳು ಅತ್ಯಾಸಕ್ತಿಯಿಂದ ಸಾಯಂಕಾಲವೆಲ್ಲ ಎದುರು ನೋಡುತ್ತಿದ್ದ ಕಾರ್ಯಕ್ರಮ. ಒಂದೆಡೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರುಪರ್ವತದಂತಿರುವ ಪದ್ಮಭೂಷಣ ಪಂಡಿತ್‌ ಬಸವರಾಜ ರಾಜಗುರುಗಳ ಆಖಾಡದಲ್ಲಿ ಪಳಗಿ, ಕ್ಯಾಲಿಫೋರ್ನಿಯಾದ ಪ್ರಖ್ಯಾತ ಅಲಿ ಅಕ್ಬರ್‌ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ ಶಿಕ್ಷಕರಾಗಿರುವ ಗಾಯಕ ನಚೀಕೇತ ಶರ್ಮ. ಇನ್ನೊಂದೆಡೆ ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಡಾ।। ಬಾಲಮುರಳೀಕೃಷ್ಣ ಮತ್ತು ಅರ್‌.ಕೆ.ಶ್ರೀಕಂಠನ್‌ ಬಳಿ ತರಬೇತಿ ಪಡೆದು ಬೇ ಏರಿಯಾದಲ್ಲಿ 1993ರಿಂದ ಸಂಗೀತ ಶಿಕ್ಷಣ ನೀಡುತ್ತಿರುವ ಗಾಯಕಿ ಜಯಂತಿ ಉಮೇಶ್‌. ಇಂತಹ ಪ್ರಸಿದ್ಧ ಸಂಗೀತಗಾರರ ಗಾನಲಹರಿಯನ್ನು ಆನಂದಿಸುವುದೇ ಒಂದು ಸುಯೋಗವೆಂದು ಭಾವಿಸಿ ಕೂತ ಸಭಿಕರ ನಿರೀಕ್ಷೆ ಸುಳ್ಳಾಗಲಿಲ್ಲ.

ಶರ್ಮ ಮತ್ತು ಉಮೇಶರವರು ಒಟ್ಟಿಗೆ ಹಾಡಿದ ಸರಸ್ವತಿ ವಂದನೆಯಾಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ, ‘ಚಾರುಕೇಶೀ ಪ್ರಿಯೆ ಜಗದೀಶ್ವರಿ ನಿನಗೆ ವಂದನೆ’ ಎಂದು ಚಾರುಕೇಶಿ ರಾಗದ ರಾಗ ತಾನ ಪಲ್ಲವಿಯನ್ನು ಇಬ್ಬರೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಹಾಡಿ ಕಿಕ್ಕಿರಿದು ತುಂಬಿದ ಸಭೆಯನ್ನು ಗಂಧರ್ವ ಲೋಕದಲ್ಲಿ ವಿಹರಿಸುವಂತೆ ಮಾಡಿದರು. ಆಮೇಲೆ, ಇತ್ತೀಚೆಗೆ ನಡೆದ ರಾಮನವಮಿಯ ಪ್ರಯುಕ್ತವಾಗಿ ತುಳಸೀದಾಸರ ರಾಮ ಭಜನೆಯನ್ನು ಹಾಡಿದರು. ಕೊನೆಯದಾಗಿ ಅಕ್ಕಮಹಾದೇವಿಯ ವಚನದೊಂದಿಗೆ ಕಛೇರಿಯನ್ನು ಮುಗಿಸಿದಾಗ, ಶ್ರೋತೃಗಳ ಕಿವಿಗಡಚಿಕ್ಕುವ ಕರತಾಡನ ಸಭಾಂಗಣದಲ್ಲಿ ಮಾರ್ದನಿಸುತಿತ್ತು. ಪಕ್ಕ ವಾದ್ಯದಲ್ಲಿ ಅಜಯ್‌ ನರಸಿಂಹ(ಪಿಟೀಲು), ಸಾಯಿ ಕೃಷ್ಣನ್‌(ಮೃದಂಗ), ರವಿ ಗುಟಾಲ (ತಬಲ) ಮತ್ತು ನರೇಂದ್ರ ಜೋಷಿ (ಹಾರ್ಮೋನಿಂ) ಉತ್ತಮವಾದ ಸಾಥ್‌ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಕೊನೆಯ ಕಾರ್ಯಕ್ರಮವೇ ಅಪರ್ಣಾ ರಾವ್‌ ವಿರಚಿತ ‘ಬೆಂಬಿಡದ ಭೂತ’ ನಗೆ ನಾಟಕ. ಚುರುಕಾದ ಅಭಿನಯ ಮತ್ತು ಹಾಸ್ಯಭರಿತ ಸಂಭಾಷಣೆಯಾಂದಿಗೆ ನಗೆ ಬುಗ್ಗೆಯನ್ನು ಹರಿಸುವಲ್ಲಿ ಈ ನಾಟಕ ಯಶಸ್ವಿಯಾಯಿತು. ಮಕ್ಕಳಾದ ಅಭಿಜಿತ್‌ ಮತ್ತು ಅಖಿಲ್‌ ಮೂರ್ತಿಯವರಿಂದ ಸುಮಧುರವಾಗಿ ಭಾರತ ಮತ್ತು ಅಮೇರಿಕ ದೇಶಗಳ ರಾಷ್ಟ್ರಗೀತೆಗಳೊಂದಿಗೆ ಸಮಾರಂಭವು ಮುಕ್ತಾಯವಾಯಿತು.

ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಮನೋರಮ ರಾವ್‌ ಅವರ ಕಾರ್ಯದಕ್ಷತೆ ಮೆಚ್ಚುವಂಥದ್ದು . ಆಗಾಗ್ಗೆ ಮೈಕಾಸುರನ ಹಾವಳಿ ಕಾಡಿಸಿತಾದರೂ, ಪ್ರಸಾದ್‌ ಪಂಚಾಂಗಂ ಮತ್ತು ಸಂಗಡಿಗರು ತಮ್ಮ ಶಬ್ದ ತಂತ್ರಜ್ಞತೆಯ ಕಾರ್ಯವನ್ನು ಬಹಳ ಶ್ರದ್ಧೆ ಮತ್ತು ಸಹನೆಯಿಂದ ನಿರ್ವಹಿಸಿದರು. ತಿಂಗಳಾನುಗಟ್ಟಲೆ ಶ್ರಮವಹಿಸಿ ನಮಗೆಲ್ಲರಿಗೂ ಇಂತಹ ರಸಭರಿತ ಮನರಂಜನೆಯ ಸಂಜೆಯನ್ನು ಉಣಬಡಿಸಿದ ಕನ್ನಡ ಕೂಟದ ಸಮಿತಿಯನ್ನು ಮನದಲ್ಲಿಯೇ ಹೊಗಳುತ್ತಾ, ಇನ್ನು ಮುಂದೆಯೂ ಇದೇ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸುತ್ತಾ ಮನೆ ಸೇರಿದಾಗ ರಾತ್ರಿ ಬೆಳಗಿನ ಜಾವದ ಸ್ವಾಗತಕ್ಕೆ ಅಣಿಯಾಗುತ್ತಿತ್ತು.

ಕಾರ್ಯಕ್ರಮದ ಛಾಯಾಚಿತ್ರಗಳ ವೀಕ್ಷಣೆಗೆ ಈ ಅಂತರ್ಜಾಲ ಪುಟವನ್ನು ಎದುರುನೋಡುತ್ತಿರಿ. ಮತ್ತು ಕೂಟದ ಮುಂದಿನ ಕಾರ್ಯಕ್ರಮಗಳಿಗೆ ಈ ಅಂತರ್ಜಾಲ ಪುಟವನ್ನು ವೀಕ್ಷಿಸುತ್ತಿರಲು ಮರೆಯದಿರಿ- http://www.kknc.org/events.htm

ಫೋಟೋಗಳನ್ನು ಇಲ್ಲಿ ನೋಡಿ- http://www.kknc.org/past_events.htm

ಚಿತ್ರಭಾನು ಸಂವತ್ಸರದ ಯುಗಾದಿ ಸಂಭ್ರಮದ ಮೆಲುಕು
ಚೈತ್ರೋಲ್ಲಾಸಕೆ ನೀವೂ ಬನ್ನಿ, ಎಲ್ಲರೂ ಬನ್ನಿ - ಆಹ್ವಾನ, ಶಿಕಾರಿಪುರ ಹರಿಹರೇಶ್ವರ
ಚೈತ್ರೋಲ್ಲಾಸ : ಸಿಲಿಕಾನ್‌ ಕಣಿವೆಗೆ ಬಂದ ವಸಂತ- ವರದಿ ಪ್ರಕಾಶ್‌ ನಾಯಕ್‌
ಯುಗಾದಿ ಹಾಸ್ಯ ಕವನ ಗೋಷ್ಠಿ - ವಿವಿಧ ಕವಿಯತ್ರಿಯರು
ಕನ್ನಡಿಗರ ಹೊಸ ವರ್ಷ : ಹತ್ತು ದಿಕ್ಕು, ಹಲವಾರು ದನಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X