• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಕೆಎನ್‌ಸಿ ದೀಪಾವಳಿ-ಹೇಮಂತ ವಿಹಾರ

By Staff
|

ಲಾಸ್‌ ಆಲ್ಟೋಸ್‌ ಹಿಲ್ಲ್ಸ್‌ನಲ್ಲಿರುವ ಸ್ಮಿತ್‌ವಿಕ್‌ ರಂಗಮಂದಿರ ನವೆಂಬರ್‌ 22ರ ಮಧ್ಯಾಹ್ನದಿಂದಲೇ ಅನೇಕ ಚಟುವಟಿಕೆಗಳಿಂದ ಗಿಜಿಗಿಜಿ ಎನ್ನುತ್ತಿತ್ತು. ಹತ್ತು ಹಲವು ತಂಡಗಳು ತಮ್ಮ ಬಹಳ ದಿನಗಳ ಕಸರತ್ತನ್ನು ಕೂಟದ ಸಭಿಕರ ಮುಂದೆ ಅಚ್ಚುಕಟ್ಟಾಗಿ ಪ್ರದರ್ಶಿಸಲು ತಮ್ಮ ಶಕ್ತಿಮೀರಿ ಸಕಲ ಸಿದ್ಧತೆಗಳಲ್ಲಿ ತೊಡಗಿದ್ದರು!

ಕಾರ್ಯಕ್ರಮ ಸುಮಾರು 5 ಘಂಟೆಗೆ ಪ್ರಾರಂಭವಾಯಿತು. ರಾಧ ಮೂರ್ತಿಯವರ ನಿರ್ದೇಶನದಲ್ಲಿ ಮೂಡಿಬಂದ ‘ಜಯ ಕರ್ನಾಟಕ ಮಾತೆ’ ವೃಂದಗಾನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಧ್ಯಕ್ಷ ಸುರೇಶ್‌ ಬಾಬು ತಮ್ಮ ಲವಲವಿಕೆಯ ಮಾತುಗಳಿಂದ ಸದಸ್ಯರನ್ನು ಆತ್ಮೀಯವಾಗಿ ಸಭೆಗೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನಮ್ಮೊಂದಿಗಿದ್ದ ಜ್ಯೋತಿಷ್ಯ ಶಾಸ್ತ್ರ ಪರಿಣಿತ, ನರಸಿಂಹ ಆಲ್ಸೆಯವರು ಸಭೆಯನ್ನು ಉದ್ದೇಶಿಸಿ ಎರಡು ಮಾತುಗಳನ್ನು ಹೇಳಿದರು.

Enthusiasts singing Jaya Bharatha Jananiya Tanujathe...ನಂತರ ಮೂಡಿಬಂದ ಪಿಗ್ಮಿ ಜಾನಪದ ನೃತ್ಯ, ಅರುಣ್‌ ಆಚಾರ್ಯರವರ ನಿರ್ದೇಶನದ ಬೊಂಬೆಯಾಟದ ಮಾದರಿಯಲ್ಲಿ ನಡೆದು ಸದಸ್ಯರೆಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಸಭಿಕರು ಅಲ್ಲಿಯ ಹಾಡಿನ ಜೊತೆಗೇ ತಮ್ಮ ಧ್ವನಿಯನ್ನು ಮತ್ತು ಚಪ್ಪಾಳೆಯ ಹಿತ-ಮಿತ ಶಬ್ದದೊಂದಿಗೆ ಅನುಭವಿಸಿದ್ದು ವಿಶೇಷ.

ನೂತನ ಮಾದರಿಯಲ್ಲಿ ನಡೆದ ವಾರ್ಷಿಕ ವರದಿ ಸಭಿಕರನ್ನು ರಂಜಿಸಿತು. ಈ ಸಾಲಿನ ಕಾರ್ಯದರ್ಶಿಗಳಾದ ಮಧು ಕೃಷ್ಣಮೂರ್ತಿ ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಕೂಟದ ಈ ವರ್ಷದ ಎಲ್ಲಾ ಕಾರ್ಯಕ್ರಮಗಳ ಇಣುಕು ನೋಟವನ್ನು ಉತ್ತಮವಾಗಿ ಸೆರೆ ಹಿಡಿದು ಚಲನಚಿತ್ರ ರೂಪದಲ್ಲಿ ದೊಡ್ಡ ಪರದೆಯಲ್ಲಿ ಸವಿಸ್ತಾರವಾಗಿ ಬಿತ್ತರಿಸಿದಾಗ, ಸಭಿಕರೆಲ್ಲರೂ ನಿಬ್ಬೆರಗಾಗಿ ನೋಡಿ ತಮ್ಮ ಸಂತಸವನ್ನು ಕರತಾಡನದ ಮೂಲಕ ಪ್ರದರ್ಶಿಸಿದರು.

‘ಡಮರ್‌-ಡಮರ್‌’ ಶಬ್ದ ಸಭಿಕರನ್ನು ಒಂದರೆಗಳಿಗೆ ತಮ್ಮ ಕುರ್ಚಿಗಳಿಂದ ಮೇಲೆದ್ದು ಏನು ನಡೆಯುತ್ತಿದೆ ಎಂದು ನೋಡುವಂತೆ ಮಾಡಿತು. ಏನೆಂದುಕೊಂಡಿರಿ! ಸಂಧ್ಯಾ ಕೆದ್ಲಾಯರವರ ನಿರ್ದೇಶನದಲ್ಲಿ ನಡೆದ ಬೊಂಬಿನ ನೃತ್ಯ. ಸುಮಾರು 15 ನಿಮಿಷ ನಡೆದ ಈ ನೃತ್ಯ ಬೊಂಬುಗಳ ಮತ್ತು ಡೋಲಿನ ಲಯಬದ್ಧ ಕುಣಿತದೊಂದಿಗೆ ಇಡೀ ಸಭೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಎಲ್ಲರ ಮನ ರಂಜಿಸಿತು.

ನಂತರದ ಮಕ್ಕಳ ನಾಟಕ ಅಕ್ಬರ್‌ ಮತ್ತು ಬೀರ್ಬಲ್‌ ಕಥೆಯಾಧಾರಿತವಾದುದು. ಬದ್ರಿ ಪ್ರಸಾದ್‌ ನಿರ್ದೇಶನದ ಈ ಕಿರು ನಾಟಕ ಸುಮಾರು 15 ನಿಮಿಷಗಳ ಕಾಲ ಎಲ್ಲರನ್ನೂ ತಮ್ಮ ಚಿಕ್ಕಂದಿನ ದಿನಗಳ ಈ ಕಥೆಗಳನ್ನು ಮತ್ತೊಮ್ಮೆ ಮೆಲಕು ಹಾಕುವಂತೆ ಮಾಡಿತು.

ಆಹಾ ಸ್ವರ್ಣಸೇತು !

Coverpage of KKNCs annual magazine Swarnasethu‘ಸ್ವರ್ಣಸೇತು’- ವಾರ್ಷಿಕ ಸಾಹಿತ್ಯ ಸಂಚಿಕೆ ಬಿಡುಗಡೆಯ ಕಾರ್ಯಕ್ರಮ ಎಲ್ಲರನ್ನೂ ಸ್ವಲ್ಪ ಹೊತ್ತು ಒಂದು ಸಾಹಿತ್ಯಿಕ ಸಂಕಿರಣಕ್ಕೆ ಕರೆದೊಯ್ದಿತೆಂದರೆ ಅಚ್ಚರಿ ಏನಿಲ್ಲ. ಈ ಸಾಲಿನ ಸ್ವರ್ಣಸೇತು ಸಂಚಿಕೆಯ ಪ್ರಧಾನ ಸಂಪಾದಕರು ಪದ್ಮನಾಭ ರಾವ್‌ ಎಂ.ಎನ್‌.

ಪದ್ಮನಾಭ ರಾವ್‌ ನಿರ್ದೇಶನದಲ್ಲಿ ನಡೆದ ವಾರ್ಷಿಕ ಸಂಚಿಕೆ ಬಿಡುಗಡೆಯ ಕಾರ್ಯಕ್ರಮದ ವಿವರಗಳು ಹೀಗಿವೆ :

ಕಾರ್ಯಕ್ರಮದ ಮೊದಲಲ್ಲಿ ಸುರೇಶ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಾರಿ ಸಂಚಿಕೆ ಬಿಡುಗಡೆಯ ಕಾರ್ಯಕ್ರಮ ಸಾಂಪ್ರದಾಯಿಕ ರೀತಿಗಿಂತ ಭಿನ್ನವಾಗಿತ್ತು. ವಿನೂತನವಾಗಿ ಸಂಪಾದಕ ಮಂಡಲಿ ತಯಾರಿಸಿದ್ದ ವಿಶೇಷ ಚಲನಚಿತ್ರವನ್ನು ದೊಡ್ಡ ಪರದೆಯಲ್ಲಿ ತೋರಿಸಿದ್ದು. ಈ ಸಂಚಿಕೆಯ ಬಗ್ಗೆ ಮತ್ತು ನಮ್ಮ ಸದಸ್ಯ ಬರಹಗಾರರ ಬಗ್ಗೆ ದಟ್ಸ್‌ಕನ್ನಡ.ಕಾಮ್‌ನ ಸಂಪಾದಕರಾದ ಎಸ್‌.ಕೆ.ಶಾಮಸುಂದರ ಅವರ ಸಂದೇಶವನ್ನು ಬಿತ್ತರಿಸಿದ್ದು ಸಭಿಕರ ಮನ ಸೂರೆಗೊಂಡಿತು. ಶಾಮ್‌ ಅವರ ಆತ್ಮೀಯ ಮತ್ತು ಸ್ಫೂರ್ತಿ ತುಂಬಿದ ಮಾತು ಸಭಿಕರ ಮತ್ತು ಸಂಚಿಕೆಯ ಬರಹಗಾರರ ಉತ್ಸುಕತೆಯನ್ನು ಪ್ರತಿಬಿಂಬಿಸಿತು. ಶಾಮ್‌ ಮಾತುಗಳು ಅವರು ನಮ್ಮೆಲ್ಲರ ಮೇಲೆ ಇಟ್ಟಿರುವ ಪ್ರೀತಿಯ ದ್ಯೋತಕವಾಗಿತ್ತು. ಈ ಚಲನಚಿತ್ರದಲ್ಲಿ ಸುರೇಶ್‌ರವರ ಸಂದೇಶ, ಸಂಪಾದಕ ಮಂಡಲಿಯ ಪರಿಚಯ, ಅವರ ಶ್ರಮ ಮತ್ತು ಆನಂದವನ್ನು ಸಭಿಕರೊಂದಿಗೆ ಹಂಚಿಕೊಂಡ ವಿವರಗಳಿದ್ದವು. ನಂತರ ಮಿನಿಸೋಟದಿಂದ ಆಗಮಿಸಿದ್ದ, ಕಥೆಗಾರ ಗುರುಪ್ರಸಾದ್‌ ಕಾಗಿನೆಲೆಯವರಿಂದ ಸಂಚಿಕೆಯ ಬಿಡುಗಡೆ ನೆರವೇರಿತು. ಸ್ವರ್ಣಸೇತು ಬಿಡುಗಡೆ ನಂತರ ಗುರುಪ್ರಸಾದ್‌ ಕಾಗಿನೆಲೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಧು ಕೃಷ್ಣಮೂರ್ತಿಯವರ ನಿರ್ದೇಶನದಲ್ಲಿ ನಡೆದ ನಂತರದ ಕಾರ್ಯಕ್ರಮ ಕರ್ನಾಟಕ ವೈಭವ. ಕಿತ್ತೂರ ರಾಣಿ ಚೆನ್ನಮ್ಮನಿಂದ ಹಿಡಿದು ಕರ್ನಾಟಕ ಕವಿ ಪುಂಗವರ ಅಮರ ಕಥೆಯನ್ನು ಹಾಡಿ ಹೊಗಳಿದ, ಕನ್ನಡಿಗರು ಹೆಮ್ಮೆ ಪಡುವಂತಹ ಅನೇಕ ದೃಶ್ಯಗಳಿಂದ ಒಳಗೂಡಿದ ಈ ಕಾರ್ಯಕ್ರಮ ಸಭಿಕರ ಮನಸೂರೆಗೊಂಡಿತು. ಈ ಕಾರ್ಯಕ್ರಮದ ಕೆಲವು ವಿಶೇಷತೆಗಳೆಂದರೆ, ಮಿಂಚು-ಗುಡುಗು-ಸಿಡಿಲುಗಳ ಸೃಷ್ಟಿ. ಕನ್ನಡಮಾತೆ ಪುಷ್ಪಕ ವಿಮಾನದಲ್ಲಿ ರಂಗಪ್ರವೇಶ ಮಾಡಿದ್ದು ಮತ್ತು ಅನೇಕ ದೃಶ್ಯ ಹಾಗೂ ಶ್ರವಣ ಮಾಧ್ಯಮಗಳಿಂದ ಕನ್ನಡತನದ ಸಂಸ್ಕೃತಿ ಮತ್ತು ಚರಿತ್ರೆಯನ್ನು ಎತ್ತಿ ಹಿಡಿಯುವ ಸನ್ನಿವೇಶಗಳಿಗೆ ಕಿವಿಗಡಚಿಕ್ಕುವ ಚಪ್ಪಾಳೆಯ ಮೂಲಕ ಸಭಿಕರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

Cultural Programme banner of KKNCಈ ಎಲ್ಲಾ ಕಾರ್ಯಕ್ರಮ ಕಣ್ಣಿಗೆ ಮತ್ತು ಕಿವಿಗಾನಂದ ತಂದರೆ ನಂತರದ ಭೋಜನ ಕಾರ್ಯಕ್ರಮ ಸಭಿಕರ ಹಸಿದ ಹೊಟ್ಟೆಗಳಿಗೆ ಆಪ್ಯಾಯಮಾನವಾಗಿತ್ತು. ಪೂರಿ, ವೆಜ್‌ ಕೂರ್ಮ, ವೆಜ್‌ ಪಲಾವ್‌, ಈರುಳ್ಳಿ ಪಕೋಡ, ಡ್ರೈ ಜಾಮೂನು. ಬಾಯಲ್ಲಿ ನೀರೂರಿತೇ? ಮೊಸರನ್ನದ ಜೊತೆಗೆ ಉಪ್ಪಿನಕಾಯಿ ಕೂಡ ಇತ್ತು ಸ್ವಾಮಿ ! ಮಕ್ಕಳಿಗೆ ಪೀಜಾ! ಇಷ್ಟೇ ಅಲ್ಲ, ಭುಕ್ತಾಯಾಸವಾದವರಿಗೆ ಜೀರ್ಣವಾಗಲೆಂದು ವೀಳ್ಯದೆಲೆ-ಅಡಿಕೆಯ ವ್ಯವಸ್ಥೆ ಇತ್ತು. ತಾಂಬೂಲದಾತರಾದ ನರೇಂದ್ರ, ತಾರಿಣಿ ಮತ್ತು ಅಪರ್ಣ ತಂಡದವರಿಗೆ ಧನ್ಯವಾದಗಳು !

ನಂತರದ ಕಾರ್ಯಕ್ರಮ ‘ದಿ ಶೋ’-ಸೌಂದರ್ಯ ಪ್ರದರ್ಶನ ನೃತ್ಯ ರೂಪಕ. ನಂದಿನಿ ಉಮೇಶ್‌ರವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮ ಸುಮಾರು 25 ನಿಮಿಷಗಳ ಕಾಲ ಸಭಿಕರನ್ನು ಯಾವುದೋ ಒಂದು ವಿಸ್ಮಯ ಲೋಕಕ್ಕೆ ಕರೆದೊಯ್ದಿತು. ಕಾರ್ಯಕ್ರಮದ ನೃತ್ಯ ಸಂಯೋಜನೆ, ಸುಂದರ ತರುಣ-ತರುಣಿಯರ ವೇಷ-ಭೂಷಣಗಳು, ನಡಿಗೆಗೆ ತಕ್ಕ ಲಯಬದ್ಧ ಸಂಗೀತ, ಚಿತ್ತಾಕರ್ಷಕ ನೆಳಲು-ಬೆಳಕಿನ ಸಂಯೋಜನೆ, ಅಶೋಕ್‌ ಕುಮಾರನ ಸಿರಿಕಂಠದ ಎರಡು ಚಿತ್ರಗೀತೆಗಳು ಸಂದರ್ಭಕ್ಕೆ ತಕ್ಕ ಮೆರಗು ನೀಡಿತು. ಸಭಿಕರು ‘ಬಿಟ್ಟ-ಕಣ್ಣು, ತೆರದ-ಬಾಯಿ’ ಎಂಬಂತೆ ಕಣ್ಣು-ಮಿಟುಕಿಸದೇ ಕಾರ್ಯಕ್ರಮ ವೀಕ್ಷಿಸಿದರು. ಸುಮಾರು 45 ಜನರ ಅವಿರತ ಶ್ರಮದ ಫಲ, ಉತ್ತಮ ರಂಗಸಜ್ಜಿಕೆಯ ವೈಭವದೊಂದಿಗೆ ಎಲ್ಲರ ಮನೆಮಾತಾದ ಕಾರ್ಯಕ್ರಮವಾಯಿತು ಎಂಬುದು ಅತಿಶಯೋಕ್ತಿಯೇನಲ್ಲ.

ಸುರೇಶ್‌ ತಮ್ಮ ಕಾರ್ಯಕಾರಿ ಸಮಿತಿಯ ಪರಿಚಯ ಕಾರ್ಯಕ್ರಮವನ್ನು ವಿನೂತನವಾದ ರೀತಿಯಲ್ಲಿ ನೆರವೇರಿಸಿದರು. ಒಂದೊಂದು ತಂಡದ ಪರಿಚಯದ ನಡುವೆ ಸಂದರ್ಭಕ್ಕೆ ಸರಿ ಹೊಂದುವ ಸುಮಧುರ ಚಲನ ಚಿತ್ರ ಗೀತೆಗಳ ಪಲ್ಲವಿಗಳೊಡನೆ ನವ್ಯ ರೀತಿಯಲ್ಲಿ ಸಭಿಕರಿಗೆ ಬೇಸರ ಬರದ ಹಾಗೆ ನಡೆಸಿಕೊಟ್ಟು ಸಭಿಕರ ಮನಗೆದ್ದರು.

ಕೂಟದ ಚುನಾವಣಾ ಕಾರ್ಯಕ್ರಮ !

ಕೂಟದ ಚರಿತ್ರೆಯಲ್ಲಿ ಮತದಾನವೇ ನಡೆದಿಲ್ಲ ! ಸದಾ ಕಾಲವೂ ಅವಿರೋಧ ಆಯ್ಕೆ!! ಈ ಬಾರಿ ಸಹ ವೇದಿಕೆಯ ಮೇಲೆ ಯೋಗೇಶ್‌ ದೇವರಾಜ್‌ ಅವರನ್ನು ಆರಿಸಿ, ಹೆಸರಿಸಿ, ನೋಂದಾಯಿಸಿ ಮುಂದಿನ ಸಾಲಿನ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ನಂತರ ಯೋಗೇಶ್‌ ಸಭೆಯನ್ನು ಉದ್ದೇಶಿಸಿ ಸ್ವಲ್ಪ ಕಾಲ ಮಾತನಾಡಿದರು.

ಏನು ದಾಸರವಾಣಿ ಕೇಳಿಸಿತೇ !! ಹೌದು ಸ್ವಾಮಿ ಮುಂದಿನ ಕಾರ್ಯಕ್ರಮ ‘ಪುರಂದರ ದರ್ಶನ’. ಗಾರ್ಗಿ ಪ್ರಸಾದ್‌ರವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮ ಸುಮಾರು 30 ನಿಮಿಷಗಳ ಕಾಲ ಮೂಡಿಬಂತು. ಪುರಂದರ ದಾಸರ ಜೀವನ ಚಿತ್ರಣವನ್ನು, ಅವರ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ, ನೃತ್ಯ, ನಾಟಕ ದೃಶ್ಯಗಳಿಂದ ಉತ್ತಮವಾಗಿ ಸಂಯೋಜಿಸಿದ ಕಾರ್ಯಕ್ರಮ ಇದಾಗಿತ್ತು. ಕೂಟದ ಅನೇಕ ಹಿರಿಯ ಕಲಾವಿದರು ಇದರಲ್ಲಿ ಸ್ವತಃ ಭಾಗವಹಿಸಿದ್ದರು. ನಚಿಕೇತ ಶರ್ಮ ಮತ್ತು ಜಯಂತಿ ಉಮೇಶ- ಇವರ ಅತ್ಯುತ್ತಮ ಹಾಡುಗಾರಿಕೆ, ವಾದಿರಾಜ ಭಟ್‌ ಅವರ ಹಾಸ್ಯಭರಿತ ಮಾತುಗಳು ಮತ್ತು ನಟನೆ ಇಡೀ ಕಾರ್ಯಕ್ರಮಕ್ಕೆ ಶೋಭೆ ತಂದವು. ಕಾರ್ಯಕ್ರಮದ ಪ್ರತಿಯಾಂದು ಸನ್ನಿವೇಶಕ್ಕೂ ಹಿಂಬದಿಯ ಪರದೆಯ ಮೇಲೆ ಪುರಂದರ ದಾಸರ ಜೀವನದ ಪ್ರಮುಖ ಸನ್ನಿವೇಶಗಳಿರುವ ಚಿತ್ರಗಳನ್ನು ಪ್ರದರ್ಶಿಸಿದ್ದು ಒಂದು ವಿನೂತನ ಪ್ರಯೋಗ.

ಜ್ಯೋತಿ ಶೇಖರ್‌ ಮತ್ತು ವೀಣಾ ಗೌಡ ಅವರು ಈ ಕಾರ್ಯಕ್ರಮ ನಿರ್ವಹಿಸಿದರು. ಒಟ್ಟಿನಲ್ಲಿ 2003ನೇ ಇಸವಿಯ ಕೊನೆಯ ಕಾರ್ಯಕ್ರಮವಾದ ಈ ಹೇಮಂತ ವಿಹಾರ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಮಾಡಿ, ಎಲ್ಲರೂ ಚಿರಕಾಲ ನೆನಪಿನಲ್ಲಿಟ್ಟುಕೊಳ್ಳುವ ರೀತಿ ಮಾಡಲು ಸಹಕರಿಸಿದವರೆಲ್ಲರಿಗೂ ವಂದಿಸಿ, ಭಾರತ ಮತ್ತು ಅಮೇರಿಕಾ ರಾಷ್ಟ್ರಗೀತೆಗಳಿಂದ ಕಾರ್ಯಕ್ರಮ ಮುಗಿಸಿದಾಗ ರಾತ್ರಿ ಸುಮಾರು 10.30 ಘಂಟೆಯಾಗಿತ್ತು.

ಕಾರ್ಯಕ್ರಮದ ಮಧುರ ಕ್ಷಣಗಳ ಚಿತ್ರಮಾತು

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more