• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪರವಯಸ್ಕನ ಅಮೆರಿಕಾ ಯಾತ್ರೆ : ಒಂದು ಪರಿಚಯ

By * ಡಾ. ಎಚ್‌.ವೈ. ರಾಜಗೋಪಾಲ್‌
|

'ಹೊರದೇಶಕ್ಕೆ ಹೋಗಿಬಂದವರೆಲ್ಲ ಒಂದೊಂದು ಪುಸ್ತಕ ಬರೆದುಬಿಡುತ್ತಾರೆ" ಎಂಬ ಕುಹಕದ ಮಾತು ಆಗಾಗ್ಗೆ ಕೇಳಿಬಂದರೂ, ಕನ್ನಡದಲ್ಲಿ ಅಂಥ ಪುಸ್ತಕಗಳು ಕಡಿಮೆಯೆಂದೇ ನನ್ನ ಎಣಿಕೆ. ಅದರಲ್ಲೂ ಹೊರಗಿನ ಪ್ರವಾಸದ ಕಥನದೊಂದಿಗೆ, ಮನಸ್ಸು ಕೈಗೊಳ್ಳುವ ಒಳಗಿನ ಪ್ರವಾಸದ ಕಥನವನ್ನೂ ಒಳಗೊಂಡ ಪುಸ್ತಕಗಳು ಇನ್ನೂ ಕಡಿಮೆ. ಈ ದೃಷ್ಟಿಯಿಂದ ಮೂರ್ತಿರಾಯರ ಪುಸ್ತಕ ಒಂದು ಉತ್ತಮ ಸಾಧನೆ. ಹೊರನೋಟ-ಒಳನೋಟ ಎರಡೂ ಹದವಾಗಿ ಬೆರೆತಿರುವ ಈ ಪುಸ್ತಕಕ್ಕೆ ಒಂದು ವಿಶಿಷ್ಟ ಸ್ಥಾನ ಸಲ್ಲುತ್ತದೆ. ಪ್ರವಾಸ ಕಥನ ಸಾಹಿತ್ಯ ಪ್ರಕಾರದಲ್ಲಿ ಅದೊಂದು ಮಾರ್ಗಸೂಚಿಯಾಗಿ ನಿಲ್ಲುತ್ತದೆ.

ಮೂರ್ತಿರಾಯರು ಈ ಪುಸ್ತಕ ಬರೆದದ್ದು ಈ ದೇಶಕ್ಕೆ ಎರಡು ಬಾರಿ ಭೇಟಿ ಕೊಟ್ಟಮೇಲೆ. ಮೊದಲ ಭೇಟಿ 1973ರಲ್ಲಿ , ಎರಡನೆಯ ಭೇಟಿ 1976ರಲ್ಲಿ. ಎರಡು ಬಾರಿ ಬಂದಾಗಲೂ ಗುರುತು ಹಾಕಿಕೊಂಡ ಟಿಪ್ಪಣಿಗಳು, ಆಗಾಗ್ಗೆ ಬರೆದ ದಿನಚರಿ, ಅದಕ್ಕಿಂತ ಮುಖ್ಯವಾಗಿ ಅವುಗಳ ಬಗ್ಗೆ ಮೂಡಿದ ಚಿಂತನ ಇವುಗಳೆ ಈ ಪುಸ್ತಕಕ್ಕೆ ಆಧಾರ. ಮೂರ್ತಿರಾಯರೇ ಹೇಳಿಕೊಳ್ಳುವಂತೆ ಅವರು Wordsworth ಪಂಥದವರು; 'ನೆಮ್ಮದಿಯಾಗಿರುವಾಗ ಭಾವೋತ್ಕರ್ಷವನ್ನು ನೆನಪಿಗೆ ತಂದುಕೊಳ್ಳುವವರು." ಕಂಡು ಅನುಭವಿಸಿದ್ದನ್ನೆಲ್ಲ ಕೂಡಲೆ ಬರಹಕ್ಕಿಳಿಸಿ ಪುಸ್ತಕ ಪ್ರಕಟಿಸುವ ಆತುರವಿಲ್ಲ ಅವರಿಗೆ. (ಪುಸ್ತಕ ಹೊರಬಂದದ್ದು 1979ರಲ್ಲಿ.) ಕಂಡ ದೃಶ್ಯಗಳನ್ನು ಮತ್ತೆ ಮತ್ತೆ ನೋಡಿ, ಅನುಭವಗಳನ್ನು ಮೆಲುಕು ಹಾಕಿ ಅದರಿಂದ ಬಂದ ಒಟ್ಟು ಚಿತ್ರಣವನ್ನು ಓದುಗರ ಮುಂದೆ ಇಡುತ್ತಾರೆ. ಅವರ ಆಲೋಚನೆಗಳಿಗೂ, ಅಭಿಪ್ರಾಯಗಳಿಗೂ ಇದರಿಂದ ಹೆಚ್ಚಿನ ಸಮರ್ಥನೆ ಸಿಕ್ಕಿದೆ.

A.N. Murthy Raoಆದರೆ ಮೂರ್ತಿರಾಯರ ಮಾತುಗಳಿಗೆ, ಆಲೋಚನೆಗಳಿಗೆ ವಿಶೇಷವಾಗಿ ಬಲ ಕೊಡುವುದು ಅವರ ಸಾಂಸ್ಕೃತಿಕ ಅನುಭವ. ಅವರು ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಬೆಳೆದವರು. ಆದರೆ ಇಂಗ್ಲಿಷ್‌ ಸಾಹಿತ್ಯದಿಂದ ಪ್ರಭಾವಿತರಾದವರು; ಪಾಶ್ಚಾತ್ಯ ಸಂಸ್ಕೃತಿಯ ಪರಿಚಯ ಉಳ್ಳವರು. ತಮ್ಮ ಸಂಸ್ಕೃತಿಯ ನೆಲೆಯಲ್ಲಿ ಭದ್ರವಾಗಿ ನಿಂತು ಇತರ ಸಂಸ್ಕೃತಿಯನ್ನು ವೀಕ್ಷಿಸುವವರು. ಆದರೆ ಅವರ ವೀಕ್ಷಣೆಯಲ್ಲಿ ಕಾಠಿಣ್ಯವಿಲ್ಲ; ಅನುಕಂಪವಿದೆ, ಮಾರ್ದವತೆ ಇದೆ. ಭಾರತೀಯ ಸಂಸ್ಕೃತಿಯ ಪ್ರಧಾನ ಗುಣಗಳಾದ ಸಹನೆ, ಪಕ್ವತೆ ಇದೆ. ಎರಡು ಸಂಸ್ಕೃತಿಗಳು ಎದುರಾದಾಗ ಉಂಟಾಗುವ ಘರ್ಷಣೆಗಳ ಅವಲೋಕನ ಇದೆ, ಸಮನ್ವಯ ಇದೆ. ಈ ಸಮನ್ವಯ ಕೇವಲ ಆಲೋಚನೆಯಿಂದ ಉತ್ಪನ್ನವಾದದ್ದಲ್ಲ. ಸ್ವಂತ ಅನುಭವದಿಂದಲೂ ಬಂದದ್ದು. ಅವರ ಇಬ್ಬರು ಸೊಸೆಯರು ಪಾಶ್ಚಾತ್ಯರು. ಅವರ ಆಚಾರ, ವ್ಯವಹಾರ, ಭಾಷೆ, idiom,ಆಲೋಚನೆಯ ರೀತಿ, ಧೋರಣೆ ಇವನ್ನು ಅರ್ಥಮಾಡಿಕೊಳ್ಳುವುದು ಇವರಿಗೆ ಅವಶ್ಯಕ. ಇದರಿಂದಲೇ ಅವರ ವೀಕ್ಷಣೆಯಲ್ಲಿ ಸಹಾನುಭೂತಿ, ಅನುಕಂಪ ಹೆಚ್ಚಾಗಿವೆ.

ತಮ್ಮ ಮಗ ಪಾಶ್ಚಾತ್ಯ ಮಹಿಳೆಯನ್ನು ಮದುವೆಯಾಗುವುದಾಗಿ ತಿಳಿಸಿದಾಗ ಮೂರ್ತಿರಾಯರು ಅದಕ್ಕೆ ಮೊದಲು ಸಮ್ಮತಿ ಕೊಡಲಿಲ್ಲವಂತೆ. ಆದರೆ ಮಗ ತನ್ನ ನಿರ್ಧಾರ ಬದಲಿಸದೆ ಮದುವೆಯಾದ ಮೇಲೆ ಆಕೆಯನ್ನು ಆಶೀರ್ವದಿಸಿ ಸೊಸೆಯಾಗಿ ಅಂಗೀಕರಿಸಿದ್ದಾಯಿತು. ಆದರೆ ಅದು ಬರೀ ಅಸಹಾಯಕತೆಯಿಂದ ಬಂದ ಅಂಗೀಕಾರವಲ್ಲ. 'ಅವಳು ತಂದ ಪಾಶ್ಚಾತ್ಯ ಸಂಸ್ಕೃತಿಯ ಮಿಲನದಿಂದ ರಾಜುವಿನ ಮನೆಯ ನನ್ನ ಮನೆಯ ಜೀವನ ಸಂಪತ್ತು ಹೆಚ್ಚಿದೆ" - ಎಂದು ಹೇಳುವಷ್ಟು ಮಟ್ಟಿನ ಅಂಗೀಕಾರ.

ಈ ಸಂದರ್ಭದಲ್ಲಿ ಅವರ ಪತ್ನಿಯವರು ತೋರಿದ ಔದಾರ್ಯ, 'ಸಂಪ್ರದಾಯವನ್ನು ತಳ್ಳಿಹಾಕದೆ ಅದನ್ನೂ ಮಾನವೀಯತೆಯ ಅಧೀನಕ್ಕೊಳಪಡಿಸಬಲ್ಲ ಘನತೆ," 70 ವರ್ಷಕ್ಕೂ ಹಿಂದೆ ವೈದಿಕ ಕುಟುಂಬವೊಂದರಲ್ಲಿ ನಡೆದ ಇಂಥದೇ ಮದುವೆಯ ವಿಷಯದಲ್ಲಿ ಆ ಕುಟುಂಬ ತೋರಿದ ಹೃದಯ ವೈಶಾಲ್ಯ ಇವನ್ನು ಕುರಿತು ರಾಯರು ಹೀಗೆನ್ನುತ್ತರೆ: 'ಈ ಜನಾಂಗದವರಿಗಿಂತ ಆ ಜನಾಂಗದವರು ಉದಾರ ಮನಸ್ಕರು ಎನ್ನುವ ಸುಲಭ ಸಾಮಾನ್ಯವಾದ ಮಾತಿನಲ್ಲಿ ಹುರುಳಿಲ್ಲ ಎನ್ನಿಸುತ್ತದೆ. ಔದಾರ್ಯವಾಗಲೀ, ಸಣ್ಣತನವಾಗಲೀ ಯಾವುದೊಂದು ಜನಾಂಗದ, ದೇಶದ, ಅಥವ ಸಂಸ್ಕೃತಿಯ ಸ್ವತ್ತಲ್ಲ."

Dr H.Y. Rajgopalಈ ಹಿನ್ನೆಲೆಯಲ್ಲಿ ಮೂರ್ತಿರಾಯರು ಆ ಸೊಸೆಯ ತಂದೆತಾಯಿಯರನ್ನೂ, ಬಂಧು ಬಳಗವನ್ನೂ ಇಲ್ಲಿ ಕಂಡು ಅವರ ಆತಿಥ್ಯವನ್ನು ಸ್ವೀಕರಿಸಿದ ಸನ್ನಿವೇಶವನ್ನು ವರ್ಣಿಸುತ್ತಾರೆ. ಅಂದು ಅವರ ಭೇಟಿಗಾಗಿ ಅನೇಕ ನೆಂಟರನ್ನು ಕರೆದಿದ್ದುದು, ಅವರಲ್ಲಿ ಹಿರಿಯರೊಬ್ಬರು ಊಟಕ್ಕೆ ಮುಂಚೆ grace ಹೇಳುವಾಗ- ದೇವರ ಹರಕೆ ಈ ದೂರದಿಂದ ಬಂದ ನೆಂಟರ ಮೇಲೂ ಇರಲಿ ಎಂದಾಗ ಇವರಿಗೆ ಅವರು ತಮ್ಮನ್ನೂ ಅವರಲ್ಲಿ ಒಬ್ಬನನ್ನಾಗಿ ಮಾಡಿಕೊಂಡರೆಂಬ ಭಾವನೆ ಬಂದಿದ್ದನ್ನು ಸಂತೋಷದಿಂದ ಸ್ಮರಿಸುತ್ತಾರೆ. 'ಅಲ್ಲಿ ನೆರೆದಿದ್ದ ಅವರ ಬಂಧುಗಳನ್ನು ಮತ್ತೆ ನೋಡುವುದು ತೀರ ಅಸಂಭವ...ಆದರೂ ಅಂದು ಅವರು ಆಡಿದ ಮಾತೆಲ್ಲ ಸ್ನೇಹ ತುಂಬಿದ ಹೃದಯದಿಂದ ಬಂದದ್ದು. ಅದು ತಾತ್ಕಾಲಿಕ ಎನ್ನಬಹುದು. ಆದರೆ ಆಸಕ್ತಿಯೇ ಇಲ್ಲದಿರುವುದಕ್ಕಿಂತ ತಾತ್ಕಾಲಿಕ ಸ್ನೇಹವಾದರೂ ಒಳ್ಳೆಯದು..."

ಇದನ್ನು ನೋಡಿದರೆ ಕೆಲವರಿಗೆ 'ಅವರು ಇಲ್ಲಿಗೆ ಬರುವ ಮುಂಚೆಯೇ ಅವರ ಮನಸ್ಸು ಈ ಕಡೆಗೆ ವಾಲಿತ್ತು; ಇಲ್ಲಿನದನ್ನೆಲ್ಲ ಒಪ್ಪಿಕೊಳ್ಳುವ ಮನೋಭಾವವಿತ್ತು" ಎನ್ನಿಸಬಹುದೇನೋ. ಆದರೆ ಹಾಗೆಂದುಕೊಳ್ಳಲು ಕಾರಣವಿಲ್ಲ. ಇಲ್ಲಿನ ಜನರಲ್ಲಿ ಕಾಣುವ ಗೆಲುವು ಉತ್ಸಾಹಗಳನ್ನು ಗುರುತಿಸಿ ಮೆಚ್ಚಿಕೊಳ್ಳುವ ರಾಯರು ಅದರ ವಿಪರೀತ ಅವಸ್ಥೆಯಾದ ಹೃದಯ ಚಂಚಲತೆಯನ್ನೂ ಇವರಲ್ಲಿ ಕಂಡು ಅದರ ಬಗ್ಗೆ ತಮ್ಮ ಅಸಮ್ಮತಿ ತೋರುತ್ತಾರೆ. ಸಹಾನುಭೂತಿ, ಮಾನವೀಯತೆ ಎಲ್ಲಿ ಕಂಡುಬರುವುದೋ ಅದನ್ನೆಲ್ಲ ಒಪ್ಪಿಕೊಳ್ಳುವ ಅವರು, ಅವು ಇಲ್ಲದ್ದನ್ನು ತೀವ್ರವಾಗಿ ಪ್ರತಿಭಟಿಸುತ್ತಾರೆ. ಈ ಸಮಾಜ ವ್ಯಕ್ತಿ ವಿಕಾಸಕ್ಕೂ ವ್ಯಕ್ತಿಸ್ವಾತಂತ್ರ್ಯಕ್ಕೂ ಕೊಡುವ ಅತಿಪ್ರಾಧಾನ್ಯ, ಕುಟುಂಬದ ಅಸ್ಥಿರತೆ, ಸಮಾಜದಲ್ಲಿ ಎದ್ದೆದ್ದು ಕಾಣುವ ಕ್ರೌರ್ಯ, ಹಿಂಸೆ, Wasp ನಿಯಂತ್ರಿತ ವ್ಯವಸ್ಥೆ, ಅದರಿಂದ ಇತರ ಜನಾಂಗದವರಿಗಾಗಿರುವ ಅನ್ಯಾಯಗಳು - ಇವೆಲ್ಲ ವಿಷಯಗಳ ಬಗ್ಗೆ ಮೂರ್ತಿರಾಯರು ತೀವ್ರವಾಗಿ ಯೋಚಿಸಿದ್ದಾರೆ, ತಮ್ಮ ಆಲೋಚನೆಗಳನ್ನು ಓದುಗರ ಮುಂದಿರಿಸಿದ್ದಾರೆ.

ವ್ಯಕ್ತಿ ವಿಕಾಸ, ಸಮಾಜದಲ್ಲಿ ಕುಟುಂಬದ ಸ್ಥಾನ, ಜೀವನದಲ್ಲಿ ಸಾಮರಸ್ಯ ಇವುಗಳ ಬಗ್ಗೆ ತಮ್ಮ ಸೊಸೆಯ ತಂಗಿಯಾಂದಿಗೆ ನಡೆಸಿದ ಸಂಭಾಷಣೆಯ ಮುಖ್ಯಾಂಶಗಳನ್ನು ತೋರಿಸಿರುವುದು ಬಹಳ ಉಪಯುಕ್ತವೂ ಸಮಂಜಸವೂ ಆಗಿದೆ. ವ್ಯಕ್ತಿವಿಕಾಸದ ಬಗ್ಗೆ ಹೀಗೆಂದು ಹೇಳಿದ್ದಾರೆ: 'ವ್ಯಕ್ತಿವಿಕಾಸಕ್ಕೆ ಬೆಲೆಯಿಲ್ಲವೆ? ಉಂಟು. ವ್ಯಕ್ತಿ ವಿಕಾಸವಾಗುವುದು ಶೂನ್ಯದಲ್ಲಲ್ಲ, ಸಮಾಜದಲ್ಲಿ. ಇದನ್ನು ಗಮನದಲ್ಲಿಟ್ಟು ಕೊಂಡು ಸಮಾಜ ವ್ಯಕ್ತಿಗಳಿಬ್ಬರ ಹಿತಕ್ಕೂ ಹೊಂದಿಕೆ ಕಲ್ಪಿಸಬೇಕು...ಮಾನವ ಜೀವನದಲ್ಲಿ 'ಸಾಮರಸ್ಯ" ಎನ್ನುವುದು...ಪ್ರಕೃತಿಯೋ ದೇವರೋ ಮೊದಲೇ ಏರ್ಪಡಿಸಿರುವ ಸಾಮರಸ್ಯವಲ್ಲ. ಪೂರ್ವಸ್ಥಾಪಿತ ಸಾಮರಸ್ಯ(preestablished harmony) ಬರೀ ಗಗನಕುಸುಮ. ಸಾಮರಸ್ಯ ನಾವೇ ಪ್ರಯತ್ನ ಪೂರ್ವಕವಾಗಿ ಸಾಧಿಸಬೇಕಾದ್ದು. ಹೀಗೆ ಸಾಧಿಸುವುದು 100ಕ್ಕೆ 90ರಷ್ಟಾದರೂ ಸಾಧ್ಯ - ನಾವು ವ್ಯಕ್ತಿ ಪೂಜೆಯನ್ನು ಸ್ವಲ್ಪ ಕಡಿಮೆ ಮಾಡಿದರೆ ! ವ್ಯಕ್ತಿ ವಿಕಾಸ ಮಾನವನ ಅಂತಿಮ ಗುರಿಯಲ್ಲ, ಮಾನವ ಜೀವನದ ಶ್ರೇಯಸ್ಸನ್ನು - ಪ್ರೇಯಸ್ಸನ್ನಲ್ಲ ? ಹೆಚ್ಚಿಸುವುದಕ್ಕಾಗಿ ಇರುವ ಇತರ ಸಾಧನಗಳ ಜೊತೆಗೆ ವ್ಯಕ್ತಿವಿಕಾಸವೂ ಸಾಧನ." ಬೇರೊಂದು ಕಡೆ ಹೀಗೆಂದಿದ್ದಾರೆ:'ಇಲ್ಲಿನ ಜನ (ಎಲ್ಲರೂ ಅಲ್ಲ) ಸಾಮಾನ್ಯವಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯ ಕೊಡುವ ತಮ್ಮ ಸಮಾಜ ಪರಿಸ್ಥಿತಿಗೂ ಲೈಂಗಿಕ ಸ್ವಾಚ್ಛಂದ್ಯಕ್ಕೂ ಇರುವ ಸಂಬಂಧವನ್ನು ಕಣ್ಣುಬಿಟ್ಟು ನೋಡಲೊಲ್ಲರು." ವ್ಯಕ್ತಿಪಾರಮ್ಯ, ಲೈಂಗಿಕ ಸ್ವೈರವೃತ್ತಿಗಳಿಂದ ವರ್ಷ ವರ್ಷ ಇಲ್ಲಿ ಹೆಚ್ಚುತ್ತಿರುವ ವಿವಾಹವಿಚ್ಛೇದ, ಮಕ್ಕಳ ಮೇಲೆ, ಸಮಾಜದ ಮೇಲೆ ಅದರಿಂದ ಆಗುವ ಅನಾಹುತ ಇವುಗಳ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ.

ಇವೆಲ್ಲಕ್ಕಿಂತ ಹೆಚ್ಚಾಗಿ ರಾಯರ ಮನಸ್ಸನ್ನು ಆತಂಕಗೊಳಿಸುವುದು ಇಲ್ಲಿನ ಕ್ರೌರ್ಯ, ಹಿಂಸೆ. 'ಕೊಂದು ಕೂಗುವ ಹಿಂಸಕರು" ಎಂಬ ಅಧ್ಯಾಯದಲ್ಲಿ ಈ ಕ್ರೂರ ಪ್ರವೃತ್ತಿಯ ಭಯಾನಕ ಚಿತ್ರವನ್ನು ಕೊಟ್ಟಿದ್ದಾರೆ. ಕೊಲೆ, ಸುಲಿಗೆ, ಲೈಂಗಿಕ ಅತ್ಯಾಚಾರ ಇವುಗಳ ಹಿಂದಿರುವ ಮಾನಸಿಕ ಅಸ್ವಸ್ಥತೆ ಹೇಗೆ ಇಲ್ಲಿ ದಿನದಿನಕ್ಕೆ ಬೆಳೆಯುತ್ತಿದೆ ಎಂಬುದನ್ನು ಗಮನಿಸಿದ್ದಾರೆ. ಅವರನ್ನು ವಿಶೇಷವಾಗಿ ಭಯಗೊಳಿಸುವುದು ಇಲ್ಲಿನ 'ಕೊಲೆಗಾಗಿ ಕೊಲೆ, ಹಿಂಸೆಗಾಗಿ ಹಿಂಸೆ" - ಯ ಮನೋಭಾವ. ಕಾರಣವಿಲ್ಲದೆಯೆ ಗುರುತು ಪರಿಚಯ ಏನೂ ಇಲ್ಲದವರನ್ನು ಯಾವ ಲಾಭದ ಆಸೆಯೂ ಇಲ್ಲದೆ ಕೊಂದು ತೃಪ್ತಿಪಡುವ ಮನೋವೃತ್ತಿ. (ಅದೊಂದು ಬಗೆಯ ನಿಷ್ಕಾಮ ಕರ್ಮ ಎನ್ನುತ್ತಾರೆ ರಾಯರು !) ಈ ಹಿಂಸಾತ್ಮಕ ಮನೋಭಾವ ಈ ರೀತಿಯ ಭಯಂಕರ ಕೃತ್ಯಗಳಲ್ಲಿ ಮಾತ್ರವೇ ಅಲ್ಲ ಕಾಣುವುದು. ಸಮಾಜದ ನಾನಾ ಪದರಗಳಲ್ಲೂ ಮುಖಗಳಲ್ಲೂ ಅದು ಕಾಣುತ್ತದೆ. ಸಿನೆಮಾ, ಚಿತ್ರಗಳು, ಅವುಗಳ ಜಾಹೀರಾತು, TV ಚಿತ್ರಗಳು, ರೆಸ್ಟುರಾಗಳ ಹೆಸರುಗಳು ('Tombstone Pizza', 'Hanging Tree Inn')ಕಡೆಗೆ ಮಕ್ಕಳ ಆಟದ ಸಾಮಾನುಗಳಲ್ಲೂ ಅದನ್ನು ಗುರುತಿಸುತ್ತಾರೆ.

*

ಮೂರ್ತಿರಾಯರ ಮನಸ್ಸು ಕೋಮಲವಾದುದು. 'ರಮ್ಯ ಮನೋವೃತ್ತಿಗೆ ಬಲಿಬಿದ್ದ ನನ್ನ ಮನಸ್ಸಿಗೆ ದಂತ, ನವಿಲು, ಕೋಗಿಲೆ, ಶ್ರೀಗಂಧ ಮುಂತಾದ ಸರಕುಗಳು ಪ್ರಿಯವೆ ಹೊರತು ಕಲ್ಲಿದ್ದಲು, ಕಬ್ಬಿಣದ ಸರಳು, ಉಕ್ಕಿನ ಪ್ಲೇಟು ಇತ್ಯಾದಿ ಪ್ರಿಯವಲ್ಲ." ಅವರಿಗೆ ನ್ಯೂ ಯಾರ್ಕ್‌, ಡೆಟ್ರಾಯ್ಟ್‌ ಬೇಕೆನಿಸಲಿಲ್ಲ. ಇಲ್ಲಿನ ಭವ್ಯವಾದ ಕಟ್ಟಡಗಳು, ಹೆದ್ದಾರಿಗಳು, ಕಾರುಗಳು, ಶ್ರೀಮಂತಿಕೆಯ ಡೌಲು, ಇಲ್ಲಿನ ರಭಸ - ಇವುಗಳ ಬಗ್ಗೆ ಬೆರಗಿಲ್ಲ. (ಅಂದಹಾಗೆ, ಅವರು ಈ ಪುಸ್ತಕದಲ್ಲಿ 'ಬೆರಗು" ಎಂಬ ಶಬ್ದವನ್ನು ಪ್ರಯೋಗಿಸಿರುವುದು ಒಂದೇ ಕಡೆ; ಅದನ್ನು ಮುಂದೆ ಹೇಳುತ್ತೇನೆ.) 'ಅಮೆರಿಕನ್ನರ ಐಶ್ವರ್ಯ, ಅವರು ಕಟ್ಟಿರುವ ವಾಣಿಜ್ಯ ಸಾಮ್ರಾಜ್ಯ, ಕೈಗಾರಿಕೆಯಲ್ಲಿ ಅವರು ಸಾಧಿಸಿರುವ ಔನ್ನತ್ಯ, ಅವರ ಅನುಪಮವಾದ ಟೆಕ್ನಾಲಜಿ - ಇವೆಲ್ಲವನ್ನೂ ಮರೆಸುತ್ತದೆ ಈ ನಾಡಿನ ಪ್ರಕೃತಿ ಸೌಂದರ್ಯ" ಎನ್ನುತ್ತಾರೆ. 'ಈ ಭೂರಮೆ ಅದೆಷ್ಟು ಬಗೆಯ ರತ್ನಗಳನ್ನು ಧರಿಸಿದ್ದಾಳೋ!" ಎಂದು ಅವಳನ್ನು ಕೊಂಡಾಡುತ್ತಾರೆ. (ಇದನ್ನು ಓದಿದಾಗ ಹಲವು ವರ್ಷದ ಹಿಂದೆ ಇಲ್ಲಿಗೆ ಬಂದಿದ್ದ ಗೋಪಾಲಕೃಷ್ಣ ಅಡಿಗರು ಇದೇ ರೀತಿ ಹೇಳಿದ ಮಾತೂ, ನನ್ನ ಸಸ್ಯವಿಜ್ಞಾನಿ ಅಣ್ಣ ಇಲ್ಲಿನ ವನರಾಶಿ ಶರತ್ಕಾಲದಲ್ಲಿ ವಿವಿಧ ಬಣ್ಣಗಳಿಂದ ಕಂಗೊಳಿಸುವ ವೈಭವವನ್ನು ವರ್ಣಿಸಿದ್ದುದೂ ನೆನಪಿಗೆ ಬಂತು).

ಪ್ರಕೃತಿ ಮನಸ್ಸನ್ನು ಉಲ್ಲಾಸಗೊಳಿಸಬಹುದು, ಹಾಗೆಯೇ ಉಸಿರು ಕಟ್ಟಿಸುವಂತೆಯೂ ಮಾಡಬಹುದು. ಮನಸ್ಸಿನ ಶಂಕೆಗಳನ್ನೆಲ್ಲ ಪರಿಹರಿಸಬಹುದು, ಅಂತೆಯೇ ಭಯವನ್ನೂ ಕಲ್ಪಿಸಬಹುದು. ಮೌಂಟ್‌ ವಾಷಿಂಗ್‌ಟನ್‌, ನಯಾಗರ, ರಾಕೀ ಪರ್ವತ ಪ್ರಾಂತ, ಲೇಕ್‌ ಲೂಯಿಸ್‌ ಇವುಗಳ ವರ್ಣನೆ, ಅಲ್ಲಿ ಮನಸ್ಸಿಗಾದ ವಿಚಿತ್ರ ದಿವ್ಯಾನುಭೂತಿ ಇವನ್ನು ಹೃದಯಂಗಮವಾಗಿ ಹೇಳಿದ್ದಾರೆ. ಮೌಂಟ್‌ ವಾಷಿಂಗ್‌ಟನ್ನಿನ ವಾತಾವರಣ ಭಯಗೊಳಿಸುವಂಥಾದ್ದು. Nathaniel Hawthorneನ 'The Carbuncle' ಕಥೆಯನ್ನು 'ಸ್ಫಟಿಕಗಿರಿಯ ರತ್ನ" ಎಂಬ ಹೆಸರಲ್ಲಿ ಕನ್ನಡಿಸಿದ್ದ ರಾಯರಿಗೆ ಈ ಪರ್ವತದ ವಾತಾವರಣ ಕಂಡು Hawthorne ತನ್ನ ಕತೆಯಲ್ಲಿ ವರ್ಣಿಸಿದ್ದ ರುದ್ರ ಗಂಭೀರ ದೃಶ್ಯ ಇಲ್ಲಿನದೇ ಎನ್ನಿಸಿತಂತೆ.

ನಯಾಗರಾ ಕಂಡಾಗ ಅವರಿಗೆ ಹಿಂದೊಮ್ಮೆ ಮುಂಗಾರು ಮಳೆಯ ಕಾಲದಲ್ಲಿ ಜೋಗದ ಜಲಪಾತದಲ್ಲಿ ಕಂಡಿದ್ದ ದರ್ಶನದ ನೆನಪು. ಜೋಗದ ಪ್ರಪಾತದಲ್ಲಿ ನಿಂತಾಗ ಅಲ್ಲಿ ತುಂಬಿದ್ದ ಮಂಜು, ಅದನ್ನು ಆಗಾಗ ಸೀಳಿಕೊಂಡು ಬಂದ ಬಿಸಿಲು, ಮುಖಕ್ಕೆ ರಾಚಿ ರಾಚಿ ಬಡಿಯುತ್ತಿದ್ದ ಮಳೆ - ಇವೆಲ್ಲ ಸೇರಿ ಅದೊಂದು 'ಉಂಟು-ಇಲ್ಲಗಳ ಕ್ರಮನಿಯಮವಿಲ್ಲದ ಅಕಾಂಡ ತಾಂಡವ" ಎನ್ನಿಸಿದ್ದನ್ನು ಹೇಳಿ 'ನಾಸದೀಯ ಸೂಕ್ತದ ಕವಿ ಕಂಡದ್ದು ಇಂಥ ದೃಶ್ಯವಿರಬೇಕು" ಎಂದು ಅದರ ಅದ್ಭುತವನ್ನು ನೆನೆಯುತ್ತಾರೆ: 'ಆಗ ಯಾವುದೂ ಇರಲಿಲ್ಲ. ಯಾವುದೂ ಇಲ್ಲದಿರಲಿಲ್ಲ. ವಾಯುವಿರಲಿಲ್ಲ. (ವಾಯುವಿತ್ತು ಕೂಡ!) ಆಕಾಶವಿರಲಿಲ್ಲ. ಅಲ್ಲಿ ನೀರಿತ್ತೆ? ಅಳತೆಗೆ ಸಿಕ್ಕದ ಆಳವಿತ್ತೆ? ಇದ್ದದ್ದೆಲ್ಲ...ಗೊಂದಲ; ರೂಪವಿಲ್ಲ...ನಾವು ನಯಾಗರವನ್ನು ನೋಡಿದ ದಿನ ಅಲ್ಲೂ ಮಳೆಯಿತ್ತು, ಸ್ವಲ್ಪ ಮಂಜೂ ಇತ್ತು. ಆದರೆ ಪ್ರಪಾತವೂ, ನೀರ್ಬೀಳೂ ಸ್ಪಷ್ಟವಾಗಿ, ಅದ್ಭುತವಾಗಿ, ಅದಮ್ಯ ಶಕ್ತಿಯುಳ್ಳದ್ದಾಗಿ ಕಾಣುತ್ತಿತ್ತು...ನಾವು ಆಗಸ್ಟ್‌ ತಿಂಗಳ ಜೋಗದಲ್ಲಿ ಕಂಡಿದ್ದು ಪ್ರಳಯದಿಂದ ಪ್ರಪಂಚ ಅರಳುತ್ತಿರುವ ಕಾಲದ ಭಯಾನಕ ಆಂದೋಲನ. ಇಲ್ಲಿ ಕಂಡದ್ದು ಆ ಆಂದೋಲನದ ಪರಿಣಾಮ. 'ಲೂಯಿಸ್‌ ಸರೋವರಕ್ಕೆ ಹೋದಾಗ " ಆ ವಾತಾವರಣ ಮನಸ್ಸಿನ ವಕ್ರ ಗತಿಯನ್ನು ನೇರ್ಪಡಿಸಿತು. ಶಾಂತಿ ಇರವಿನಲ್ಲೆಲ್ಲ ಸಾವಧಾನವಾಗಿ ವ್ಯಾಪಿಸಿದ್ದು ಮಾನಸಿಕ ಅನುಭವ ಮಾತ್ರವಲ್ಲ, ಬಾಹ್ಯೇಂದ್ರಿಯಗಳ ಅನುಭವ ಕೂಡ ಎನ್ನಿಸಿತು...ಇಂಥ ಸ್ಥಳದಲ್ಲೇ ಇರಬೇಕು ತಪಸ್ಸಿನಿಂದ ಇತ್ತ ಕೃಶಾಂಗಿಯೂ, ಅತ್ತ ತೇಜಸ್ವಿಯೂ ಆದ ಅಪರ್ಣಾ ದೇವಿಯನ್ನು ಕಾಮಹರನು ಒಲಿದುಕೊಂಡದ್ದು. ಈ ವಾತಾವರಣದಲ್ಲಿ ಕಾಮವನ್ನು ಮೀರಿದ ಒಲುಮೆ ಸಾಧ್ಯವೇನೋ. ಇಲ್ಲಿ ದೇವತೆಗಳು ಸಂಚರಿಸುತ್ತಾರೆಂದರೆ, ತುಂಬುರು ನಾರದರ ಗಾನ ಕೇಳಿಬರುತ್ತದೆಂದರೆ, ಅದು ಪ್ರಣವದ ಶ್ರುತಿಗೆ ಹೊಂದಿಕೊಳ್ಳುತ್ತದೆಂದರೆ - ನಂಬಬಹುದು...""

ಇದನ್ನು ಓದಿದ ಕೆಲವರಿಗೆ 'ಇದೇನು ಇವರಿಗೆ ಎಲ್ಲಿ ಹೋದರೂ ಬರೀ ಭಾರತವೇ ಕಾಣುತ್ತದೆ, ಇಂಥವರು ಹೊರದೇಶ ಏನು ಕಾಣುತ್ತಾರೆ?" ಎಂಬ ಶಂಕೆ ಬರಬಹುದೇನೋ! 'ನಯಾಗರವನ್ನು ನಯಾಗರವಾಗಿಯೇ ಏಕೆ ನೋಡಬಾರದು? ಅಲ್ಲಿ ಜೋಗ ಏಕೆ ಬರಬೇಕು? 'ನಾಸದೀಯ ಸೂಕ್ತ"ದ ಅಸಂಬದ್ಧ ಪ್ರಲಾಪ ಏಕೆ? ಲೇಕ್‌ ಲೂಯಿಸ್‌ನಲ್ಲಿ ನಾರದ ಏಕೆ ತಲೆಹಾಕಬೇಕು?" ಎನ್ನಬಹುದು. ನನಗೇನೋ ಅದರಲ್ಲಿ ಯಾವ ವಿರೋಧಾಭಾಸವೂ ಕಾಣಲಿಲ್ಲ. 'ನಾಸದೀಯ ಸೂಕ್ತ" ಹೇಳುವುದು ಬರಿ ಭಾರತದ ಸೃಷ್ಟಿಯ ಬಗ್ಗೆ ಅಲ್ಲವಲ್ಲ ! ಅದು ಇಡೀ ಸೃಷ್ಟಿಯನ್ನೇ ಕುರಿತದ್ದು. ಅದರ ಅಖಂಡ ವಿಸ್ತಾರದಲ್ಲಿ ಶರಾವತಿಯಾದರೇನು, ನಯಾಗರವಾದರೇನು? ರಾಯರ ದೃಷ್ಟಿ ಆ ಕ್ಷಣಕ್ಕೆ ಅಮೆರಿಕ, ಭಾರತ ಎಲ್ಲವನ್ನೂ ಮೀರಿ ವಿಶ್ವದೃಷ್ಟಿಯಾಗುತ್ತದೆ. ನಾವು ಎಲ್ಲಿದ್ದರೂ ಪ್ರಕೃತಿಯ ಅಂಶ ಎಂಬ ಸತ್ಯ ಅವರಿಗೆ ಕಂಡಿದೆ. 'ನಾವು ಬಾಹ್ಯ ಪ್ರಪಂಚವನ್ನು ನೋಡುತ್ತಿರುವಂತೆ ನಮಗಿಂತ ಮೇಲ್ಮಟ್ಟದ ಜೀವಿಯಾಬ್ಬ ಈ ಪ್ರಪಂಚವನ್ನು ನೋಡುತ್ತಿದ್ದರೆ ಅವನು ನಮ್ಮನ್ನೂ ಪ್ರಕೃತಿಯ ಭಾಗವೆಂದೇ ಪರಿಗಣಿಸಿಯಾನು. ಅರ್ಥವತ್ತಾಗಿ ಮಾತನಾಡಬಲ್ಲೆವಾದ್ದರಿಂದ ನಾವು ಪ್ರಕೃತಿಯ ಪ್ರಾತಿನಿಧಿಕ ಅಂಶ ಎಂದುಕೊಂಡಾನು" ಎನ್ನುತ್ತಾರೆ. ಆ 'ನಮಗಿಂತ ಮೇಲ್ಮಟ್ಟದ ಜೀವಿ" ಯಾರೇ ಆಗಿರಬಹುದು!

ಒಮ್ಮೊಮ್ಮೆ ಅವರ ಮನಸ್ಸು ಇಷ್ಟು ವಿಶಾಲ ದೃಷ್ಟಿಯನ್ನು ಒಡನೆಯೇ ಸಾಧಿಸಲಾರದು, ಅವರ ಮನಸ್ಸಿಗೆ ಅಂಟಿಕೊಂಡ ಸಂಕೇತಗಳ ಪೂರ್ವಗ್ರಹದ ಪ್ರಭಾವದಿಂದ. ಅದರ ಅರಿವು ಅವರಿಗೇ ಉಂಟು. ಒಂದು ಒಳ್ಳೆಯ ಉದಾಹರಣೆ ಅವರ ಮೊಮ್ಮಗ ಸುನೀಲನ ಹುಟ್ಟಿದ ಹಬ್ಬದ ವರ್ಣನೆ. ಪಾಶ್ಚಾತ್ಯ ರೀತಿಯಲ್ಲಿ ನಡೆದ ಆ ಹಬ್ಬವನ್ನು ನೋಡುತ್ತ ಕುಳಿತ ರಾಯರ ಕಣ್ಣಿಗೆ ಬೇರೊಂದು ಚಿತ್ರವೇ ಕಂಡಿತು. 'ಕೆಲವು ವೇಳೆ ಟಿ.ವಿ.ಯ ಫಲಕದ ಮೇಲೆ ಕಾಣುವ ಚಿತ್ರದ ಮಗ್ಗುಲಲ್ಲೇ ಇನ್ನೊಂದು ಚಿತ್ರ ಕಾಣುತ್ತದೆ. ಮೊದಲನೆಯದರಲ್ಲಿದ್ದ ಸ್ಫುಟವಾದ ರೂಪ, ಕಣ್ಣ ಹೊಳಪು, ಸುಳಿದು ಅದೃಶ್ಯವಾಗುತ್ತಿದ್ದ ಭಾವವೈವಿಧ್ಯ - ಈ ಎರಡನೆಯದರಲ್ಲಿಲ್ಲ, ಅದೇನೋ ಒಂದು ಬಗೆಯ ಕಲಸು ಮೇಲೋಗರ. ನನ್ನ ಕಣ್ಣೀಗೆ ಅಂದಿನ ಪಾರ್ಟಿ ಈ ಎರಡನೆಯ ಚಿತ್ರದಂತೆ ಕಂಡಿತು" ಎನ್ನುತ್ತಾರೆ. (ಇಲ್ಲಿ ಇಲ್ಲಿನ ನಾಗರೀಕತೆಗೆ ಸರಿಹೊಂದುವ TV ಚಿತ್ರದ ಉಪಮಾನ ಬಳಸಿರುವುದು ಸ್ವಾರಸ್ಯವಾಗಿದೆ.) ಅವರ ಕಿವಿಗೆ Happy Birthday to you ಹಾಡಿನ ಬದಲು ಯುವತಿಯಾಬ್ಬಳು ಹಾಡಿದ 'ಅಮ್ಮಾ ಎನ್ನ ಕೂಡಾಡುವ ಮಕ್ಕಳಣಕಿಸುವರೆ" ಹಾಡು ಕೇಳುತ್ತದೆ... ರಾಯರು ಇದಿಷ್ಟನ್ನೇ ಹೇಳಿ ಮುಗಿಸಿದ್ದರೆ ಅದೊಂದು ಭಾವಾತಿರೇಕದ (sentimental)ಚಿತ್ರವಾಗಿ ಸತ್ವಹೀನವಾಗಿರುತ್ತಿತ್ತು. ಆದರೆ ರಾಯರ ಒಳನೋಟ ಅದನ್ನು ಮೀರಿ ಮೇಲೇರುತ್ತದೆ. ತಮಗೆ ಹೀಗೇಕೆ ಎನಿಸಬೇಕು ಎಂದು ತಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಾರೆ. 'ನಮ್ಮ ಅತಿಥಿಗಳಾಗಿ ಬಂದಿರುವ ಮಹಿಳೆಯರ ಕಣ್ಣಿಗೆ ಈ ಸಮಾರಂಭದಲ್ಲಿ ಸೌಂದರ್ಯ ಕಾಣುತ್ತಿದೆ. ಇವರೊಬ್ಬರಿಗೂ ಸೌಂದರ್ಯದ ರೂಪ ತಿಳಿಯದು, ಇಲ್ಲಿ ನಡೆಯುತ್ತಿರುವುದೆಲ್ಲ ಕೃತಕ" ಎಂದು ಯಾವ ಧೈರ್ಯದಿಂದ ಹೇಳಲಿ! ನಮ್ಮ ಭಾರತದ ಆಚರಣೆಯ ಸೊಬಗನ್ನು ಕಡೆಗಣಿಸಬೇಕಿಲ್ಲ. ಇಲ್ಲಿ ಕಾಣುವ ಸೊಬಗನ್ನೂ ಸವಿಯುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನನ್ನ ದೃಷ್ಟಿ ತೀರ ಸಂಕುಚಿತವಲ್ಲ... ಅದು ನಿಜವಾದರೂ... ದೃಷ್ಟಿ ಇನ್ನೂ ವಿಶಾಲವಾಗಬೇಕು. ಉದಾರ ದೃಷ್ಟಿ ಎಷ್ಟೋ ವೇಳೆ ಕರೆಕೊಟ್ಟಾಗ ಬರಲೊಲ್ಲದು. ಪೂರ್ವಗ್ರಹ ಕೋಟಲೆಯಿಂದಾಗಿ ನನ್ನ ಹೃದಯದ ಕರೆಗೆ ಬಲ ಸಾಲದೇನೋ!" ರಾಯರ ಮನಸ್ಸಿನ ಸೂಕ್ಷ್ಮತೆಗೆ, ಪ್ರಾಮಾಣಿಕತೆಗೆ ಇದೊಂದು ನಿದರ್ಶನ.

*

ಪ್ರವಾಸಿಯಾಗಿ ಬಂದವರಿಗೆ, ಮಕ್ಕಳು ಮೊಮ್ಮಕ್ಕಳೊಡನೆ ನೂರಿಪ್ಪತ್ತು ದಿನ ಸುಖವಾಗಿದ್ದು ಹೋಗಲು ಬಂದವರಿಗೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಮನಸ್ಸು ಅಷ್ಟಾಗಿ ಹರಿಯದು. ಏಕೆ, ಇಲ್ಲಿ ನೆಲಸಿರುವ ಭಾರತೀಯರನೇಕರಿಗೂ ಹೀಗೇ - ಆ ಸಮಸ್ಯೆ ತಮ್ಮನ್ನೇ ತಟ್ಟುವವರೆಗೆ. ನಮ್ಮಲ್ಲಿ ಎಷ್ಟು ಜನ ಇಲ್ಲಿನ ಇಂಡಿಯನ್ನರು, ಕಪ್ಪು ಜನರು, ಹಿಸ್ಪಾನಿಕ್‌ ಜನರು - ಇವರ ಸಮಸ್ಯೆಗಳನ್ನು ಕುರಿತು ಯೋಚಿಸುತ್ತೇವೆ? ಬಹು ಮಂದಿಗೆ ಇವೆಲ್ಲ ಬೇಕೇ ಇಲ್ಲ. ನಮ್ಮ ಒಲವು ಬಿಳಿಯರ ಕಡೆಗೇ. ಇಂದಿಗೂ ನಮ್ಮ ಮನಸ್ಸನ್ನು ಆಳುವವರು ಅವರೇ. ವರ್ಣದ್ವೇಷವಂತೂ ನಮ್ಮಲ್ಲಿ ಬೇಕಾದಷ್ಟಿದೆ. ಇಂಥದ್ದರಲ್ಲಿ ಮೂರ್ತಿರಾಯರು ಇಲ್ಲಿನ ಇತರ ಜನಾಗದವರ ಸಮಸ್ಯೆಗಳ ಬಗ್ಗೆ ಯೋಚಿಸಿದ್ದಾರೆ, ತಮ್ಮ ಅನುಕಂಪ ಸಹಾನುಭೂತಿಗಳನ್ನು ವ್ಯಕ್ತಪಡಿಸಿದ್ದಾರೆ. 'ನನ್ನ ಯಹೂದ್ಯ ಮಿತ್ರರು" ಎಂಬ ಅಧ್ಯಾಯದಲ್ಲಿ ನೆರೆಮನೆಯಾತನೊಡನೆ ಯೆಹೂದ್ಯರ ಬಗ್ಗೆ ನಡೆದ ಚರ್ಚೆ ಇದೆ. ಅದರಲ್ಲಿ ಒಂದು ಕಡೆ ಮೂರ್ತಿರಾಯರು ಯೆಹೂದ್ಯರ ನಾಯಕ ಮೋಶೆ (Moses)ಗೂ, ನಮ್ಮ ಮಹಾಭಾರತದ ವ್ಯಾಸನಿಗೂ ಕಾಣಿಸಿರುವ ಹೋಲಿಕೆ ಬಹಳ ಸ್ವಾರಸ್ಯವಾಗಿದೆ. 'ಮೋಶೆ, ವ್ಯಾಸ ಇಬ್ಬರಿಗೂ ತಮ್ಮ ದೇಶದ ಮತ್ತು ಮತಧರ್ಮಗಳ ವಿಷಯದಲ್ಲಿ ಅಮಿತವಾದ ಪ್ರೇಮವಿತ್ತು... ಇಬ್ಬರಿಗೂ ತಮ್ಮ ಜನರ ವಿಷಯದಲ್ಲಿ ಪ್ರೇಮದ ಜೊತೆಗೆ ಅಸಮಾಧಾನವೂ ಇತ್ತು...ನಮ್ಮ ವ್ಯಾಸ 'ಎರಡು ತೋಳುಗಳನ್ನೂ ಆಕಾಶಕ್ಕೆತ್ತಿ ಕೂಗುತ್ತಿದ್ದೇನೆ: ಧರ್ಮದಿಂದಲೇ ಅರ್ಥ, ಧರ್ಮದಿಂದಲೇ ಕಾಮ ಎಂದು. ಅನುಸರಿಸುವವರು ಗತಿಯಿಲ್ಲ" ಎಂದು ತಮ್ಮ ನಿರಾಶೆಯನ್ನೂ ಜುಗುಪ್ಸೆಯನ್ನೂ ಹೊರಗೆಡವಿದರು. ಮೈಕೆಲಾಂಜೆಲೋವಿನ ಮೋಶೆಯ ಮುಖದಲ್ಲಿ ಇದೇ ಜುಗುಪ್ಸೆ, ನಿರಾಶೆ, sternnessಕಾಣುತ್ತದೆ... ಮೋಶೆ ಸ್ವತಃ ಸುಖಪಡಲಿಲ್ಲ. ತನ್ನ ಜನರನ್ನು promised land ಕಡೆಗೆ ನಡೆಸಿದನೇ ಹೊರತು ತಾನು ಆ ಪುಣ್ಯಭೂಮಿಯನ್ನು ನೋಡಲೇ ಇಲ್ಲ!" ಇದನ್ನೋದಿದಾಗ ಮಹಾತ್ಮ ಗಾಂಧಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಆ ಸ್ವಾತಂತ್ರ್ಯ ಬಂದ ರೀತಿಯ ಬಗ್ಗೆ ಅಸಮಾಧಾನ ತಾಳಿದ್ದು, ಸ್ವಾತಂತ್ರ್ಯ ಬಂದ ಕೆಲವೇ ತಿಂಗಳಲ್ಲಿ ಕೊಲೆಗೀಡಾದುದು, ಅವರ ಕನಸಿನ ರಾಮರಾಜ್ಯ ಕನಸಾಗಿಯೇ ಉಳಿದದ್ದು ಮನಸ್ಸಿನಲ್ಲಿ ಹಾದು ಹೋಯಿತು.

ಇಲ್ಲಿನ ಕಪ್ಪು ಜನರ ಸಮಸ್ಯೆಗಳ ಬಗ್ಗೆ ರಾಯರು ಹೆಚ್ಚಿಗೆ ಹೇಳಿಲ್ಲ. ಅದರೆ ಇಲ್ಲಿನ ಮೂಲನಿವಾಸಿ ಇಂಡಿಯನ್ನರ ಬಗ್ಗೆ ಅವರ ಅರಿವು, ಸಹಾನುಭೂತಿ ಹೆಚ್ಚು. ಬಿಳಿಯ ಜನ ತಮ್ಮ ಕ್ಷೇತ್ರಲಾಲಸೆಯಿಂದ, ಕ್ರೌರ್ಯದಿಂದ ಇಲ್ಲಿನ ಇಂಡಿಯನ್ನರನ್ನು ಸದೆಬಡಿದು, ಅವರ ಸಂಪತ್ತನ್ನೆಲ್ಲ ಲೂಟಿಮಾಡಿ ಅವರನ್ನು ಮೂಲೆಗುಂಪಾಗಿ ಮಾಡಿದುದರ ಬಗ್ಗೆ ಅವರಿಗೆ ಬಹಳ ಕಳಕಳಿ. 'ಬಿಳಿಯರು ಅನ್ಯಾಯ ಮಾಡಿದರೆಂಬುದು ಕೇವಲ ಆದರ್ಶವಾದಿಗಳ ಮತ್ತು ಸಾಹಿತಿಗಳ ಕಲ್ಪನೆಯಲ್ಲ. ಐತಿಹಾಸಿಕ ಸತ್ಯ." ಈ ಸಂದರ್ಭದಲ್ಲಿ 1855ರಲ್ಲಿ ವಾಷಿಂಗ್‌ಟನ್‌ ರಾಜ್ಯದಲ್ಲಿದ್ದ ಸುವಾಮಿಷ್‌ ಇಂಡಿಯನ್‌ ಬಣದ ನಾಯಕ ಸಿಯಾತಲ್‌ ಸಂಯುಕ್ತ ಸಂಸ್ಥಾನಗಳ ಆಗಿನ ಅಧ್ಯಕ್ಷ ಫ್ರಾಂಕ್ಲಿನ್‌ ಪಿಯರ್ಸ್‌ಗೆ ಬರೆದ ಕಾಗದದ ಕೆಲವು ಭಾಗಗಳ ಭಾಷಾಂತರವನ್ನು ಕೊಟ್ಟಿದ್ದಾರೆ. (ಹಿಂದೆ ಮೂರ್ತಿರಾಯರು 'ಬೆರಗು" ಎಂಬ ಪದವನ್ನು ಪ್ರಯೋಗಿಸಿರುವುದು ಒಂದೇ ಕಡೆ ಎಂದೆನಲ್ಲವೆ, ಅದು ಇಲ್ಲಿಯೇ.) 'ನಿಮ್ಮ ಬಣಕ್ಕೆ ಸೇರಿದ ಜಮೀನನ್ನು ನಮಗೆ ಖರೀದಿಗೆ ಕೊಡಿ" ಎಂದು ಅಧ್ಯಕ್ಷ ಪಿಯರ್ಸ್‌ ಬರೆದನಂತೆ. ಆ ಕಾಗದಕ್ಕೆ ಸಿಯಾತಲ್‌ ಬರೆದ ಉತ್ತರದಲ್ಲಿ ಎದ್ದು ತೋರುವ ಆತ್ಮಗೌರವ, ದ್ವೇಷಕ್ಕಾಗಲಿ, ಗೋಳುಕರೆಗಾಗಲಿ ಇಳಿಯದೆ ಅಪ್ರಿಯ ಸತ್ಯವನ್ನು ಕಂಡುಕಾಣಿಸುವ ಆತ್ಮವಂತಿಕೆ, ಭವಿಷ್ಯದೃಷ್ಟಿ, ಆಡಂಬರವಿಲ್ಲದ ಕವಿಸಹಜವಾದ ಮನೋವೃತ್ತಿ - ಇವು ನನ್ನನ್ನು ಬೆರಗುಗೊಳಿಸಿದವು." ಸಿಯಾತಲನ ಉತ್ತರ ಒಂದು ಕಾವ್ಯ. ಅದನ್ನು ಪೂರ್ತಿ ಉದ್ಧರಿಸಲು ಇಲ್ಲಿ ಸ್ಥಳಾವಕಾಶವಿಲ್ಲ. ಸ್ವಲ್ಪ ಮಾತ್ರ ಕಾಣಿಸುತ್ತೇನೆ :

'ಅಂತರಿಕ್ಷವನ್ನೂ ಭೂಮಿತಾಯಿಯ ಮಡಿಲ ಸುಖೋಷ್ಣವನ್ನೂ ಮಾರುವುದು ಹೇಗೆ? ಈ ಯೋಜನೆಯೇ ನಮಗೆ ವಿಚಿತ್ರವಾಗಿದೆ. ಗಾಳಿಯ ಆಪ್ಯಾಯದ ಮೇಲಾಗಲೀ, ನೀರಿನ ಚಂಚಲ ಕಾಂತಿಯ ಮೇಲಾಗಲೀ ನಾವಿನ್ನೂ ಒಡೆತನ ಸಂಪಾದಿಸಿಲ್ಲ! ಅವನ್ನು ನಮ್ಮಿಂದ ಹೇಗೆ ತಾನೆ ಕೊಂಡೀರಿ? ಈ ನೆಲದ ಪ್ರತಿ ಅಂಗುಲವೂ ನನ್ನ ಜನಕ್ಕೆ ಪವಿತ್ರ. ಹೊಳೆಯುವ ಪೈನ್‌ ಸೂಜಿ, ಮರಳ ತೀರ, ಕತ್ತಲ ಕಾಡಿನಲ್ಲಿ ಕವಿಯುವ ಮಂಜು, ತೆರವಾದ ವನಸ್ಥಲ, ಗುಂಗುಟ್ಟುವ ಕೀಟ - ಪ್ರತಿಯಾಂದಕ್ಕೂ ನಮ್ಮ ನೆನಪಿನಲ್ಲೂ, ನಮ್ಮ ಅನುಭವದಲ್ಲೂ ಪವಿತ್ರ ಸ್ಥಾನವಿದೆ...ನಾನು ನಿಮ್ಮ ಕೇಳಿಕೆಗೆ ಒಪ್ಪಬಹುದೆಂದು ನಿಶ್ಚಯಿಸಿದರೆ ಒಂದು ಷರತ್ತು ಹಾಕುತ್ತೇನೆ. ಈ ಪ್ರಾಂತದಲ್ಲಿರುವ ಮೃಗಗಳನ್ನು ಬಿಳಿಯ ಜನ ಸೋದರರಂತೆ ಕಾಣಬೇಕು, ಸೋದರರಂತೆ ನಡೆಸಿಕೊಳ್ಳಬೇಕು...ಕಾಡೆಮ್ಮೆಗಳನ್ನೆಲ್ಲ ಕೊಂದಮೇಲೆ, ಕಾಡು ಕುದುರೆಗಳನ್ನೆಲ್ಲ ಪಳಗಿಸಿದಮೇಲೆ, ಕಾಡಿನ ಪವಿತ್ರವಾದ ಮೂಲೆಮೂಲೆಯೂ ಮಾನವಗಂಧದಿಂದ ದಟ್ಟವಾದಮೇಲೆ...ನಮ್ಮ ಹಸಿರು ಹೊದರುಗಳೆಲ್ಲಿ ? ಗರುಡನೆಲ್ಲಿ ? ಇವೆಲ್ಲವನ್ನೂ ಕಳಿಸಿಕೊಟ್ಟು ಕೈತೊಳೆಯುವ ಅನುಭವ, ಅದೇ ಜೀವನದ ಅಂತ್ಯ, ಮರಣದ ಆದಿ!...ನಮ್ಮ ಭೂಮಿಯನ್ನು ನಿಮಗೆ ಮಾರಿದರೆ ನಾವು ಅದನ್ನು ಪ್ರೀತಿಸಿದಂತೆಯೇ ನೀವೂ ಪ್ರೀತಿಸಿ. ನಾವು ಅದಕ್ಕೆ ಮನಸ್ಸು ಧಾರೆಯೆರೆದು ಕೊಟ್ಟಂತೆ ನೀವೂ ಕೊಡಿ...ನಿಮ್ಮ ಒಲವು, ನಿಮ್ಮ ಶಕ್ತಿ, ನಿಮ್ಮ ಹೃದಯದ ಆಸೆ - ಎಲ್ಲವನ್ನು ವಿನಿಯೋಗಿಸಿ ಅದನ್ನು ನಿಮ್ಮ ಮಕ್ಕಳಿಗಾಗಿ ರಕ್ಷಿಸಿಕೊಳ್ಳಿ...ಒಂದು ಸತ್ಯವನ್ನು ನಾವು ಕಂಡಿದ್ದೇವೆ. ನಮ್ಮ ದೇವರು ನಿಮ್ಮ ದೇವರು. ಈ ಭೂಮಿ ಅವನಿಗೆ ಅಮೂಲ್ಯವಾದದ್ದು, ಪ್ರಿಯವಾದದ್ದು. ಮಾನವ ಕುಲಕ್ಕೆಲ್ಲಕ್ಕೂ ಅನ್ವಯಿಸುವ ನೀತಿಗೆ ಬಿಳಿಯ ಜನ ಹೊರತಲ್ಲ !"

ಸಿಯಾತಲ್‌ ಮಹಾಶಯನ ಕಾಗದ ನಿಜಕ್ಕೂ ಬೆರಗುಗೊಳಿಸುವಂತಹುದು. ಆ ಕಾಗದ ಮನಸ್ಸಿನಲ್ಲಿ ನಾನಾ ಯೋಚನೆಗಳನ್ನು ಎಬ್ಬಿಸಿತು. (ಈ ಕಾಗದದ ವಿಷಯ ನಮ್ಮಲ್ಲಿ ಬಹಳ ಜನಕ್ಕೆ ತಿಳಿದಿರಲಾರದು. ನನಗಂತೂ ತಿಳಿದಿರಲಿಲ್ಲ. ಅದನ್ನು ಸೇರಿಸಿದ್ದಕ್ಕಾಗಿ ಮೂರ್ತಿರಾಯರಿಗೆ ನನ್ನ ವಂದನೆ.) ಬಿಳಿಯ ಜನ ತಮ್ಮ ವಿಧ್ವಂಸಕ ಮನೋವೃತ್ತಿಯನ್ನು ಮೆರಸಿಯೇ ಮೆರೆಸಿದರು, ಲಕ್ಷಾಂತರ ಕಾಡೆಮ್ಮೆಗಳನ್ನೂ, ಕಾಡು ಕುದುರೆಗಳನ್ನೂ ಕೊಂದರು! ನಿಸರ್ಗದ ಪರಿಸರವನ್ನು ಎಷ್ಟೋ ಹಾಳುಮಾಡಿದರು. ಆದರೆ ಅದು ಪೂರ್ತಿ ಹಾಳಾಗುವ ಮೊದಲು ಸದ್ಯ ವಿಜ್ಞಾನದ ದೃಷ್ಟಿಯಿಂದಲಾದರೂ ಸ್ವಲ್ಪ ವಿವೇಕ ಬರುತ್ತಿದೆ. ಪ್ರಕೃತಿ ಪರಿಸರಗಳಿಗೆ ಅನ್ಯಾವೆಸಗಬಾರದೆಂಬ ತತ್ವದ ಅರಿವಾಗುತ್ತಿದೆ. ಶತಮಾನಗಳ ಹಿಂದೆ ಸಿಯಾತಲ್‌ ಕಂಡ ಸತ್ಯವನ್ನು ಈಗೀಗ ಪರಿಸರ ವಿಜ್ಞಾನಿಗಳು ಕಾಣುತ್ತಿದ್ದಾರೆ.

*

ಮೂರ್ತಿರಾಯರಿಗೆ ಗೆಳೆಯರೊಂದಿಗೆ ಆಪ್ತರೊಂದಿಗೆ ಹರಟೆ ಹೊಡೆಯುವುದು ಬಹಳ ಪ್ರಿಯ. ಭಾರತೀಯರು ಒಬ್ಬರ ಮನೆಗೊಬ್ಬರು ಹೋದಾಗ ನಡದೇ ನಡೆಯುವ ಚರ್ಚೆಗಳು ಅವರಿಗೆ ಪ್ರಿಯವೇ. ಹೊಸ ದೇಶಕ್ಕೆ ಬಂದು ಹೊಸ ನಿಷ್ಠೆಯನ್ನು (loyalty)ಬೆಳೆಸಿಕೊಂಡ ಭಾರತೀಯರ ಮಾತು ಅವರಿಗೆ ಸ್ವಲ್ಪ ಕೃತಕವಾಗಿ ಕಂಡರೂ, ಅವರಲ್ಲಿ 'ನಿಷ್ಪಕ್ಷಪಾತ ವಿಚಾರಶಕ್ತಿ" ಬೆಳೆದಿರುವುದನ್ನು ಗಮನಿಸಿ ಮೆಚ್ಚುತ್ತಾರೆ. ಇಲ್ಲಿ ನೆಲಸಿರುವ ಭಾರತೀಯರಲ್ಲಿ ಅವರು ಎರಡು ಬಗೆಯ ಜನರನ್ನು ಗುರುತಿಸುತ್ತಾರೆ. ಒಂದು ಬಗೆಯ ಜನ ಕೇವಲ ಇಲ್ಲಿನ ಹೆಚ್ಚಿನ ಸಂಪಾದನೆ, ಜೀವನ ಸೌಕರ್ಯ ಇವಕ್ಕಾಗಿ ಬಂದವರು. ಎರಡು ಮೂರು ವರ್ಷಕ್ಕೊಮ್ಮೆ ಇಂಡಿಯಾಕ್ಕೆ ಹೋಗಿಬರುತ್ತಾರೆ. ಅವರಿಗೆ ಇಲ್ಲಿನ ಸೌಕರ್ಯವೂ ಬೇಕು, ಭಾರತದ ಸಂಪರ್ಕವೂ ಬೇಕು. ಈ ಜನ ಇದನ್ನು ಪ್ರಾಮಾಣಿಕವಾಗಿಯೇ ಒಪ್ಪಿಕೊಳ್ಳುತ್ತಾರೆ. ಇಲ್ಲಿರುವ ಬಹು ಮಂದಿ ಈ ಗುಂಪಿಗೆ ಸೇರಿದವರು. ಇನ್ನೊಂದು ಗುಂಪಿನ ಜನಕ್ಕೆ ತಮ್ಮ ಭಾರತೀಯ ಹಿನ್ನೆಲೆಯ ಬಗ್ಗೆ ನಾಚಿಕೆ. 'ನಮಗೆ ಕನ್ನಡ ಮರೆತುಹೋಗಿದೆ" ಎಂದು ಹೇಳಿಕೊಳ್ಳುವುದಕ್ಕೆ ಇವರಿಗೆ ಹೆಮ್ಮೆ. (ಇಲ್ಲಿ ಕನ್ನಡದ ಬದಲು ಭಾರತದ ಇನ್ನಾವ ಭಾಷೆಯ ಹೆಸರು ಹಾಕಿದರೂ ಅನ್ವಯಿಸುತ್ತದೆ.) ಭಾರತ ಎಂದರೆ ಅವರಿಗೆ ತೋರುವುದೆಲ್ಲ ಅಲ್ಲಿನ ಹೊಲಸು ಮಾತ್ರ. (ಈ ಆತ್ಮಗೌರವವಿಲ್ಲದ ಜನ ಯಾವ ದೇಶಕ್ಕಾದರೂ ಹೊರೆ ಎಂದೇ ನನ್ನ ಭಾವನೆ. ಅವರ ಮನೋಭಾವದಿಂದ ಅವರಿಗೂ, ಇಲ್ಲಿ ಬೆಳೆಯುತ್ತಿರುವ ಅವರ ಮಕ್ಕಳಿಗೂ identity crisis ನಿಂದ ಆಗಬಹುದಾದ ಆಘಾತವನ್ನು ಈ ಜನ ಕಂಡುಕೊಳ್ಳಬೇಕು).

ಮೂರ್ತಿರಾಯರು ಪ್ರವಾಸ ಹೋಗಿದ್ದಾಗ ಅಕಸ್ಮಾತ್‌ ಸಂಧಿಸಿದ ಸಿಂಧಿ ಮಹನೀಯರೊಬ್ಬರ ಪ್ರಸ್ತಾಪ ಬರುತ್ತದೆ. ಆತ ಹಲವು ವರ್ಷದ ಹಿಂದೆಯೆ ಇಲ್ಲಿಗೆ ಬಂದು ನೆಲಸಿದ್ದರೂ ಅವರಿಗೆ ಇಲ್ಲಿನ ಜೀವನಕ್ರಮ ಹಿಡಿಸದು. ಅವರ ಒಲವು ಇನ್ನೂ ಭಾರತದ ಕಡೆಗೇ. 'ಬಂದದ್ದಾಯಿತು, ಇಲ್ಲಿ ಇದ್ದುಬಿಟ್ಟಿದ್ದೇನೆ. ಎಲ್ಲವೂ ಅನುಕೂಲವಾಗಿದೆ. ಭಾರತಕ್ಕೆ ಬಂದರೆ ಮತ್ತೆ ಹೊಸ ಜೀವನ ಆರಂಭಿಸಬೇಕು. ಈ ವಯಸ್ಸಿನಲ್ಲಿ ಇದ್ದ ಕಡೆ ಇರುವುದೇ ಹಿತ. ಆದರೆ ನಿಜವಾಗಿ ಹೇಳಬೇಕಾದರೆ ನನಗೆ ಈ ದೇಶ ಹಿತವೆನ್ನಿಸಲಿಲ್ಲ." 'ಭಾರತದ ವಿಷಯ ಮಾತನಾಡಿದಾಗ ಅವನ ದನಿಯಲ್ಲಿ ತಿರಸ್ಕಾರವಲ್ಲ - ಸಂಕಟವಿತ್ತು," ಎನ್ನುತ್ತಾರೆ. ಈ ಸಿಂಧಿ ಮಹಾಶಯರಂಥ ಜನ ತುಂಬ ಅಪರೂಪವೇನಲ್ಲ. ಆ ಜನರ ಮಾನಸಿಕ ತೊಳಲಾಟ ತೀಕ್ಷ್ಣವಾದದ್ದು. ರಾಯರು ಹೇಳಿದ ಮೊದಲ ಗುಂಪಿನ ಜನರಲ್ಲಿ ಹಲವರಾದರೂ ಕಾಲಕ್ರಮೇಣ ಈ ಸಿಂಧಿ ಮಹಾಶಯನ ಗುಂಪಿಗೆ ಸೇರಬಹುದು. 'ಸರಿ, ನಿನಗೆ ಅಷ್ಟು ಬೇಕಿದ್ದರೆ ಭಾರತಕ್ಕೇ ಏಕೆ ಹೋಗಲಿಲ್ಲ? ನಿರ್ಧಾರ ಮಾಡಲಾರದವನು ನೀನು, ಈ ತ್ರಿಶಂಕುತನ ನೀನೇ ಕೇಳಿಕೊಂಡದ್ದು, ಅನುಭವಿಸು" ಎಂದು ಆತನ ಮಾತನ್ನು ತಳ್ಳಿಹಾಕಬಹುದಿತ್ತು. ಅದರೆ ಮೂರ್ತಿರಾಯರಿಗೆ ಆತನ ಸಂಕಟ ತಟ್ಟಿತು. ಅವನದು ಅಷ್ಟು ಸುಲಭವಾಗಿ ಬಿಡಿಸಬಲ್ಲ ಪ್ರಶ್ನೆಯಲ್ಲ. ಅತನ ಚಿತ್ರಣದಲ್ಲಿ ರಾಯರು ತುಂಬ ಅಂತಃಕರಣ ತೋರಿದ್ದಾರೆ. ಆತನ ಹೆಸರು ಹೇಳಿಲ್ಲ; ಕೇಳಲೂ ಇಲ್ಲವಂತೆ. ಹೊರದೇಶಕ್ಕೆ ಬಂದಾಗ ಅನೇಕರು ಅನುಭವಿಸುವ ಅನಾಮಿಕತೆಗೆ ಇದು ಸಂಕೇತವಾಗಿ ಕಾಣುತ್ತದೆ. ಈಗ ಎಷ್ಟೋ ಜನ ವಯಸ್ಸಾದ ತಾಯಿತಂದೆಯರು ತಮ್ಮ ಮಕ್ಕಳೊಂದಿಗೆ ಇಲ್ಲಿರಲು ಬರುತ್ತಿದ್ದಾರೆ. ಅವರು ಅನುಭವಿಸಬಹುದಾದ ಒಂಟಿತನ, ಈ ಸುಖ ಸಂಪತ್ತಿನಲ್ಲೂ ಏನೋ ಕಳೆದುಕೊಂಡ ಭಾವನೆ, ವಿಷಾದಗಳ ಸೂಕ್ಷ್ಮ ಚಿತ್ರಣ ಸ್ವಂತ ಅನುಭವವಾಗಿ ಹೊರಬಂದಿದೆ. 'ವಯಸ್ಸಿನ ಮಹಿಮೆಯಿಂದಾಗಿ ಪುತ್ರರೊಡನೆ ಮಿತ್ರವತ್‌ ಆಚರಿಸಬೇಕೆಂಬುದು ನಿಜ. ಆದರೂ ಅವರು ನಿಜವಾಗಿ ಮಿತ್ರರ ಸ್ಥಾನವನ್ನು ತುಂಬಲಾರರು,"ಎನ್ನುತ್ತಾರೆ. ಗತಿಸಿಹೋದ ಪ್ರಿಯ ಮಿತ್ರರನ್ನು ನೆನೆದು ಅವರ ಮನಸ್ಸು ಭಾರವಾಗುತ್ತದೆ.

'ಆರೇಳು ವರ್ಷಗಳ ಕೆಳಗೆ ಭೋಪಾಲಿನಲ್ಲಿ ಮೊಮ್ಮಕ್ಕಳ ಆಟವನ್ನು ನೋಡುತ್ತ ಕುಳಿತಿದ್ದಾಗ ಶ್ರೀಕಂಠಯ್ಯನಿಂದ (ತೀನಂಶ್ರೀ) ಒಂದು ಕಾಗದ ಬಂತು. ಅದರ ಒಕ್ಕಣೆಯನ್ನು ನೋಡುವುದಕ್ಕಿಂತ ಮುಂಚೆ ನನ್ನ ಕಣ್ಣು ಅಕಸ್ಮಾತ್‌ ತಾರೀಖು ಬರೆಯುವ ಬಲತುದಿಗೆ ತಿರುಗಿತು. ಶ್ರೀಕಂಠಯ್ಯ ಈಗ ಚಾಲತಿಯಲ್ಲಿರುವ ಪಾಶ್ಚಾತ್ಯ ಪದ್ಧತಿಯಂತೆ ತಾರೀಖು ಕಾಣಿಸುವ ಬದಲು 'ಆಷಾಢಸ್ಯ ಪ್ರಥಮ ದಿವಸೇ" ಎಂದು ಬರೆದಿದ್ದರು. ಅದನ್ನು ನೋಡಿದಾಗ ಮರಳುಗಾಡಿನಲ್ಲಿ ಓಯೆಸಿಸ್ಸನ್ನು ಕಂಡಂತಾಯಿತು. 'ಮೇಘದೂತ"ದ ಆ ಪಂಕ್ತಿಗಳೂ ಚಿತ್ರಗಳೂ ನೆನಪಿಗೆ ಬಂದವು...ಮನಸ್ಸಿನಲ್ಲಿ ಸ್ವಿಚ್‌ ಒಂದನ್ನು ಒತ್ತಿದಂತಾಗಿ ಅದು ಕಾಲದಲ್ಲಿ ಹಿಂದುಹಿಂದಾಗಿ ಪ್ರಯಾಣಮಾಡಿತು. 'ಮೇಘದೂತ"ದ ಇತರ ಪದ್ಯಗಳು, ಅದರ ಕಾವ್ಯಗುಣದ ವಿಷಯವಾಗಿ ನಾವು ನಡೆಸಿದ್ದ ಚರ್ಚೆ, ಕಪಿಮುಷ್ಟಿ ಹಿಡಿದು ಸಮರ್ಥಿಸಿದ ಅಭಿಪ್ರಾಯಗಳು, ನೆನಸಿಕೊಂಡ ಇತರ ಕಾವ್ಯಗಳು, ಹಾಸ್ಯ, ಕುಚೋದ್ಯ,...ಅವೆಲ್ಲ ಸ್ಮೃತಿಪಥಕ್ಕೆ ಹೋಗಿ ಅದೆಷ್ಟು ವರ್ಷಗಳಾದುವೋ! ಸ್ಮೃತಿಯಲ್ಲಿ ಸಹ ಅವು ಮಂಕಾಗತೊಡಗಿವೆ. ಮಹಾರಾಜಾ ಕಾಲೇಜಿನ ಮಿತ್ರವರ್ಗ ನಿರ್ಮಿಸಿಕೊಂಡಿದ್ದ ದಿವ್ಯಪ್ರಪಂಚ ಒಡೆದುಹೋಯಿತು. ಅಳಿದುಳಿದವರ ಮನಸ್ಸಿನಲ್ಲಿ 'ಕಾಂತಿಮತ್ಖಂಡಮೇಕಂ" ...ಇನ್ನೂ ಇರಬಹುದೇನೋ, ಅಷ್ಟೆ. ಶ್ರಿಕಂಠಯ್ಯನೇ ಆ ಕಾಗದ ಬರೆದ ಕೆಲವು ತಿಂಗಳಲ್ಲಿ ತೀರಿಕೊಂಡರು..."

*

ಮೂರ್ತಿರಾಯರ ಭಾಷೆ, ಶೈಲಿ, ಅವರ ಕಥನಕ್ರಮ ಬಹಳ ಆಪ್ಯಾಯಮಾನವಾದುದು. ಅವರ ಬರಹ ಇಂಗ್ಲಿಷ್‌ ಸಾಹಿತ್ಯದ ರೀತಿಯ ಪ್ರಭಾವಕ್ಕೆ ಒಳಗಾಗಿದ್ದರೂ, ಅದರಲ್ಲಿ ಯಾವ ಕೃತಕತೆಯೂ ಇಲ್ಲ. ಮಾತು ಸರಳ, ನೇರ. ತಮ್ಮ ಪ್ರವಾಸದ ಅನುಭವವನ್ನು ಮನೆಯವರಿಗೋ, ಹತ್ತಿರದ ಗೆಳೆಯರಿಗೋ ಹೇಳುವಾಗ ಇರುವ ಸಾಮೀಪ್ಯ ಕಾಣುತ್ತದೆ. ಅವರ ಕಥನದಲ್ಲಿ, ಭಾಷೆಯಲ್ಲಿ ಸೂಕ್ಷ್ಮತೆ ಇದೆ. ಅವರ ಮೆಚ್ಚಿನ ಹೇಮಾವತಿ ನದಿಯ ಶುದ್ಧವಾದ ನೀರಿನಲ್ಲಿ ನದಿಯ ತಳದ ಮರಳ ಕಣಕಣಗಳೂ ಕಾಣುವಂತೆ ಅವರ ಭಾಷೆಯಲ್ಲಿ ಸೂಕ್ಷ್ಮ ಭಾವಾರ್ಥಗಳೆಲ್ಲ ಕಾಣುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸನ್ನು ಆಕರ್ಷಿಸುವುದು ಕಥನದ ಉದ್ದಕ್ಕೂ ಕಾಣಬರುವ ತಿಳಿಹಾಸ್ಯದ ಎಳೆ. ಅವರ ಸೂಕ್ಷ್ಮವಾದ ಕಣ್ಣು ಜೀವನದ ವಿವಿಧ ಅಸಂಬದ್ಧಗಳನ್ನೂ, ವಿರೋದಾಭಾಸಗಳನ್ನೂ, ಐರನಿಗಳನ್ನೂ ಕಾಣಬಲ್ಲದು. ಅದರೆ ಅವುಗಳ ಬಗ್ಗೆ ಅವರಿಗೆ ರೋಷವಿಲ್ಲ. ಜೀವನದ ಹಾಸುಹೊಕ್ಕಾಗಿ ಇವೆಲ್ಲ ಇರುವುದೇ -ಎಂಬ ಸಹನೆ, ತಾಳಿಕೆ.

ಕನ್ನಡದ ಕೆಲವೇ ಲೇಖಕರಲ್ಲಿ ಕಂಡುಬರುವ ಉತ್ತಮವಾದ sense of humor ಇವರಲ್ಲಿದೆ. ಎಲ್ಲೂ ಶ್ರಮಪಟ್ಟು ಓದುಗರನ್ನು ನಗಿಸಬೇಕೆಂದು ಹೊರಟಿಲ್ಲ. ತಿಳಿಹಾಸ್ಯದ ಮಿಂಚು ಅವರ ಬರಹಕ್ಕೆ ವಿಶೇಷವಾದ ಕಾಂತಿ ತಂದಿದೆ. ಅವರ ಬೀಗ-ಬೀಗಿತಿಯರ ಚಿತ್ರಣದಲ್ಲಿ ಇದು ಬಹಳ ಚೆನ್ನಾಗಿ ಬಂದಿದೆ. ತಮ್ಮ ಬೀಗಿತ್ತಿಯ ಬಗ್ಗೆ ಬರೆಯುತ್ತ 'ಅವರ ದೃಷ್ಟಿಯಲ್ಲಿ ಜೀವನವೆಂದರೆ ಕೊನೆಯ ಪಕ್ಷ ಎಪ್ಪತ್ತು ಮೈಲಿ ವೇಗದಲ್ಲಿ ಗಾಳಿಯನ್ನು ಸೀಳಿಕೊಂಡು ಭೋರೆಂದು ಓಡುತ್ತಿರುವುದು!" ಎನ್ನುತ್ತರೆ. ಚಿಕಾಗೋದಲ್ಲಿ ರೈಲುಪ್ರಯಾಣ ಮಾಡುವಾಗ ಅನ್ನಿಸಿದ್ದು: 'ರೈಲುಗಾಡಿಯ ನೆಲವೂ, ಪ್ಲಾಟ್‌ಫಾರಮ್ಮೂ ಒಂದೇ ಮಟ್ಟದಲ್ಲಿರುವುದರಿಂದ ರೈಲನ್ನು ಹತ್ತಬೇಕಾಗಿಲ್ಲ; ಅದರಿಂದ ಇಳಿಯಬೇಕಾಗಿಲ್ಲ." Shopping Center ಗೆ ಹೋದಾಗ ಅಲ್ಲಿನ ಕೈಗಾಡಿಗಳನ್ನು ಉಪಯೋಗಿಸಲು ಯಾವ ಫಾರಂ ಅನ್ನೂ ಭರ್ತಿಮಾಡಿಕೊಡಬೇಕಾಗಲಿಲ್ಲ ಎನ್ನುತ್ತಾರೆ. ದೊಡ್ಡಸ್ತಿಕೆಯ, ಐಶ್ವರ್ಯದ ಪ್ರದರ್ಶನ ಮಾಡುವವರಿಗೆ ಬೇಕೆಂದೇ ಉದಾಸೀನ ಮಾಡಿಯೋ, ಬೇರೆ ರೀತಿಯಿಂದಲೋ ಅವರ ಸ್ವಪ್ರತಿಷ್ಠೆಯ ಬುಗ್ಗೆಯನ್ನು ಚುಚ್ಚಿ ಒಡೆದು ಅವರಿಗೆ ಸ್ವಲ್ಪ ಮಣ್ಣು ಮುಕ್ಕಿಸುವ ತುಂಟತನ (impishness)ಕೂಡ ಅವರಲ್ಲಿ ಇಲ್ಲದೆ ಇಲ್ಲ. ಅವರ ಬೀಗರ ಚಿತ್ರಣದಲ್ಲಿ ಇದು ಚೆನ್ನಾಗಿ ಕಾಣುತ್ತದೆ.

*

ನಮ್ಮಲ್ಲಿ ಅನುಭವಸ್ಥರನ್ನು ಕುರಿತು ಹೇಳುವಾಗ 'ಅವರು ದೇಶ ಕಂಡವರು" ಎನ್ನುವುದನ್ನು ಕೇಳಿದ್ದೇನೆ. ಆ ಮಾತು ಮೂರ್ತಿರಾಯರಿಗೆ ಎರಡು ರೀತಿಯಲ್ಲಿ ಬಹು ಚೆನ್ನಾಗಿ ಅನ್ವಯಿಸುತ್ತದೆ. ಅವರು ದೇಶ ಕಂಡವರು; ಈ ದೇಶವನ್ನೂ ಬಹು ಚೆನ್ನಾಗಿ ಕಂಡವರು. ಈ ಪ್ರವಾಸ ಕಥನದಲ್ಲಿ ಅವರ ಎರಡು ಬಗೆಯ ಕಾಣ್ಕೆಗಳೂ ಬಹಳ ಸುಂದರವಾಗಿ ಕೂಡಿಬಂದಿವೆ. ಸುಮಾರು 260 ಪುಟಗಳಲ್ಲಿ ಅದೆಷ್ಟು ವಿಷಯಗಳನ್ನು ತುಂಬಿದ್ದಾರೋ! ಅದೂ ಹಿತವಾದ ಪ್ರಮಾಣದಲ್ಲಿ! ಆ ವಿಚಾರ ಸಂಗ್ರಹ, ಆಲೋಚನೆಯ ಧಾರೆ ಭಾರತದಲ್ಲೇ ಇರುವ ಕನ್ನಡಿಗರಿಗೆ ಮಾತ್ರವೇ ಅಲ್ಲ, ಇಲ್ಲಿ ನೆಲಸಿರುವ ಕನ್ನಡಿಗರಿಗೂ ಅಷ್ಟೇ ಉಪಯುಕ್ತವಾದದ್ದು. ಕನ್ನಡಕ್ಕೆ ಇಷ್ಟು ರಸವತ್ತಾದ ಕೃತಿಯನ್ನು ಕೊಟ್ಟ ಆಚಾರ್ಯ ಮೂರ್ತಿರಾಯರಿಗೆ ಕೃತಜ್ಞತೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more