ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾಗೋದಲ್ಲಿ ಮತ್ತೆ ವಸಂತ!!

By Staff
|
Google Oneindia Kannada News
  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    Email : [email protected]
ಅಮೆರಿಕಾದ ಅದರಲ್ಲೂ ಶಿಕಾಗೋದ ತಂಪು ಹವಾಮಾನ ನನಗೆ ತುಂಬ ಪ್ರಿಯವಾದುದು. ಅಷ್ಟಾಗಿ ಕಲುಷಿತಗೊಂಡಿಲ್ಲದ ನಿರ್ಮಲ ಪರಿಸರ ನನಗೆ ಆಪ್ಯಾಯಮಾನ. ಇಂಡಿಯಾದಂತೆ ಇಲ್ಲಿನ ಬಿಸಿಲು ಕ್ರೂರಿಯಾಗಿ ಸುಡುವುದಿಲ್ಲ . ಇನ್ನೇನು ತಲೆ ಬೆನ್ನಿಗೆ ಬಿಸಿಲಿನ ಚುರುಕು ತಗಲಿತು ಅನ್ನುವುದರೊಳಗಾಗಿ ಅದೆಲ್ಲಿಂದಲೋ ಹಾರಿ ಬಂದ ದೊಡ್ಡ ತಂಪು ಗಾಳಿ ಧಗೆಯ ರೆಕ್ಕೆಯನ್ನು ಕತ್ತರಿಸಿ ಹಾಕಿ ಬಿಡುತ್ತದೆ.

Chicago botanical garden‘ವಿಂಡ್‌ ಸಿಟಿ’ ಎಂದೆ ಹೆಸರಾದ ಇಲ್ಲಿ ಚಳಿ, ಗಾಳಿಯದೇ ಕಾರು ಬಾರು. ವರ್ಷದ ಮುಕ್ಕಾಲು ಭಾಗ ಚಳಿಗಾಲವೇ. ಚಳಿಯ ಜೊತೆಗೆ ಸುರಿಯುವ ಮಂಜಿನ ಸ್ನೇಹ. ಹಾಗಾಗಿ ಯಥೇಚ್ಚ ಥಂಡಿ. ಕಣ್ಣಿಗೆ ಹಿತವಾಗಿ ಕಾಣುವ ಬಿಸಿಲನ್ನು ನೆಚ್ಚಿಕೊಂಡು ದಪ್ಪನೆಯ ಜಾಕೆಟ್‌ ಇಲ್ಲದೆ ಹೊರಗೆ ಹೋದರೆ ಕೆಟ್ಟೆವು. ಶಿಕಾಗೊ ಬಿಸಿಲನ್ನು ಎಂದಿಗೂ ನಂಬುವ ಹಾಗಿಲ್ಲ . ಇಲ್ಲಿಯ ಮೂಲ ನಿವಾಸಿ ಚಳಿಯೇ; ಬಿಸಿಲು ಏನಿದ್ದರೂ ಹೀಗೆ ಬಂದು ಹಾಗೆ ಹೋಗುವ ಅತಿಥಿ ಮಾತ್ರ.

ಮಾರ್ಚ್‌ ಕೊನೆಯಲ್ಲಿ ವಸಂತ ಮಾಸ ಅಧಿಕೃತವಾಗಿ ಆರಂಭವಾಗಿದ್ದರೂ ಚಳಿ ಇನ್ನು ಬಿಟ್ಟು ಹೋಗಿರುವುದಿಲ್ಲ. ಏಪ್ರಿಲ್‌ ತಿಂಗಳ ಕೊನೆಗೆ ಅಂತೂ ಇಂತೂ ಹವೆ ಕೊಂಚ ಬಿಸುಪು ಪಡೆದಿದ್ದೇ ತಡ, ಇದ್ದಕ್ಕಿದ್ದಂತೆ ಇದೇನಾಗಿ ಹೋಯಿತೋ!! ರಾಶಿ ರಾಶಿ ಹಿಮದಲ್ಲಿ ಮುಳುಗಿ ನಿರ್ಜೀವವಾಗಿ ಹೋಗಿದ್ದ ಕಂದು ಗಿಡ ಮರಗಳ ತುದಿಗೆಲ್ಲ ಹಸಿರಿನ ಅಭಿಷೇಕವಾಗಿ ಹೋಗಿದೆ. ಬೇಲಿಗಳ ತುಂಬೆಲ್ಲಾ ನೂರಾರು ಹೆಸರಿರದ ಹೂವುಗಳು..... ಹಕ್ಕಿಗಳು.... ಈಗ ನಿಜ... ಈಗ ಮಾತ್ರ ನಂಬಿದೆ.... ಬಂದ ವಸಂತ....ನಮ್ಮ ರಾಜ ವಸಂತ..... ಋತುಗಳ ರಾಜ ವಸಂತ!

ವರುಷವಿಡೀ ಚಳಿಗೆ ಹೆದರಿ ಅಡಗಿ ಕುಳಿತಿದ್ದ ಇಲ್ಲಿಯ ಜನ ಈಗ ಸುಮ್ಮನಿರುವವರಲ್ಲ . ದೈತ್ಯ ಬೈಕು, ತೆರೆದ ಕಾರುಗಳಲ್ಲಿ ಬೀದಿಗೆ ಇಳಿಯುತ್ತಾರೆ. ಅವರಿವರು ಏನೆಂದುಕೊಂಡಾರೆಂಬ ಭಯಕ್ಕಲ್ಲದಿದ್ದರೂ, ಕೊರೆವ ಚಳಿಗಾಳಿಯಿಂದ ಪಾರಾಗಲು ಮೈ ಮುಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲಿಯ ಹೆಣ್ಣು ಗಂಡುಗಳಿಗೆ ಈಗಿಲ್ಲ. ತೆರೆದ ಮೈ, ತೆರೆದ ಮನಸ್ಸುಗಳಲ್ಲಿ ಮನ್ಮಥನದೇ ಆಧಿಪತ್ಯ.

ಹಾದಿ ಬದಿಯ ಹುಲ್ಲು ಹಾಸುಗಳು, ಕಾರಂಜಿಗಳು, ಹೂದೋಟಗಳೆಲ್ಲ ಈಗ ರವಿಚಂದ್ರನ್‌ ನಿರ್ದೇಶನದ ‘ಪ್ರೇಮ ಲೋಕ’ಗಳು. ಕಣ್ಣಿಗೆ ಕಣ್ಣು , ತುಟಿಗೆ ತುಟಿ, ಮೈಗೆ ಮೈ ಹಚ್ಚಿದ ಹುಚ್ಚು ಖೋಡಿ ವಯಸ್ಸಿನ ಪ್ರೇಮ ದೇವತೆಗಳು. ಬೇಲಿಯೇ ಇರದ ಬಯಕೆ ತೋಟದಲ್ಲೀಗ ಹೂವು, ಹಾಸಿಗೆ, ಚಂದ್ರ, ಚಂದನ, ಬಾಹು ಬಂಧನ. ಚುಂಬನಾ...

ಮೊದಲಿನಿಂದಲೂ ವಾಯುವಿಹಾರ, ಕಾಲ್ನಡಿಗೆಯನ್ನು ಬಹುವಾಗಿ ಪ್ರೀತಿಸುವ ನಾನು ಬೆಂಗಳೂರಿನ ತ್ಯಾಗರಾಜನಗರದ ನನ್ನ ಮನೆಯಿಂದ ಸೌತ್‌ ಎಂಡ್‌ ಸರ್ಕಲ್ಲಿನ ಪಬ್ಲಿಕ್‌ ಲೈಬ್ರರಿಗೆ ನಡೆದೇ ಹೋಗಿ ಬರುತ್ತಿದ್ದೆ. ಮುಸ್ಸಂಜೆಯ ಹೊತ್ತು, ವಾಹನಗಳ ಸಂಚಾರ ಶಿಖರ ತಲುಪಿದ ಸಮಯ ಬೇರೆ. ಧೂಳು, ಹೊಗೆ, ಘಾಟುಗಳಿಗೆ ಒಗ್ಗದ ನನ್ನ ಶ್ವಾಸಕೋಶಗಳು ಮನೆ ತಲುಪುವುದರೊಳಗಾಗಿ ಚಡಪಡಿಸಲು ಅರಂಭಿಸಿಬಿಡುತ್ತಿದ್ದವು. ಈ ಕಿರಿ ಕಿರಿಗಳಿಗೆ ಅಂಜಿ ನನ್ನ ಸುತ್ತಾಟ ಬಹಳ ಕಡಿಮೆ ಆಗಿ ಹೋಗಿತ್ತು.

Fairy Flowers...Merry spring !ಅಮೆರಿಕಾದಂತಹ ಚಳಿ ದೇಶಗಳಲ್ಲಿ ಸದಾಕಾಲ ಚಳಿಯಲ್ಲಿ ಹೊರಗೆ ಓಡಾಟ ಅಸಾಧ್ಯ. ಏನಿದ್ದರೂ ಈ ಮೂರು ನಾಲ್ಕು ತಿಂಗಳು ಮಾತ್ರ ಹೊರಗೆ ವಾಯು ವಿಹಾರ ಮಾಡಬಯಸುವವರಿಗೆ ಸುವರ್ಣ ಕಾಲ. ಹಾಗಾಗಿ ಈ ಸಮಯವನ್ನು ಯಾರೂ ವ್ಯರ್ಥವಾಗಿ ಜಾರಿ ಹೋಗ ಬಿಡಲು ಬಯಸುವುದಿಲ್ಲ . ಚಿಕ್ಕ ಮಕ್ಕಳಿಗೆ ಆಟದ ಮೈದಾನಗಳಲ್ಲಿ ನಲಿದಾಡುವ ಸಂಭ್ರಮವಾದರೆ, ದೊಡ್ಡವರು ಮನೆಯಲ್ಲಿದ್ದ ಟೆನ್ನಿಸ್‌ ಬ್ಯಾಟು, ಬಾಲುಗಳನ್ನು ಕೈಗೆತ್ತಿಕೊಳ್ಳುತ್ತಾರೆ. ನಡು ನಡುವೆ ಈಜಾಟದ ಮೋಜು ಇದ್ದೇ ಇರುತ್ತದೆ. ಈಗ ಸೂರ್ಯನ ಬೆಳಕು ಕೂಡ ಬಹಳ ಸಮಯವಿದ್ದು, ರಾತ್ರಿ ಎಂಟೂವರೆಯವರೆಗೂ ಕತ್ತಲು ಕವಿಯುವುದಿಲ್ಲ . ಹಾಗಾಗಿ ಆಟೋಟಗಳಿಗೆ ಸಮೃದ್ಧ ಸಮಯ ದೊರಕುತ್ತದೆ. ಈಗೀಗ ಮನೆಯ ನಾಲ್ಕು ಗೋಡೆಗಳ ನಡುವೆ ಆಚರಿಸುತ್ತಿದ್ದ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವಗಳಂತಹ ಸರಳ ಸಮಾರಂಭಗಳನ್ನು ಉದ್ಯಾನಗಳಲ್ಲಿ , ಹೂ ತೋಟಗಳಲ್ಲಿ ಆಚರಿಸುವ ಪರಿಪಾಠ ಹೆಚ್ಚುತ್ತಿದೆ. ಮಕ್ಕಳಿಗೆ ಮುಕ್ತವಾಗಿ ಆಡಿ ನಲಿಯಲು ಇಲ್ಲಿ ಸದವಕಾಶ.

ರಜಾ ದಿನ, ವಾರಾಂತ್ಯಗಳಲ್ಲಿ ನದಿ ಸರೋವರ ತೀರಗಳಲ್ಲಿ , ಬೀಚುಗಳಲ್ಲಿ ಜೀವ ಜಾತ್ರೆ. ನಮ್ಮಂತಹ ಕಂದು ಮೈಯ ಭಾರತೀಯರಿಗೆ ಬಿಸಿಲಿಗೆ ಮತ್ತಷ್ಟು ಕಪ್ಪಿಡುವ ಆತಂಕವಾದರೆ, ಈ ದಂತದ ಮೈಯ ಬಿಳಿಯರದೋ ಬಿಸಿಲಿಗೆ ಮೈಗೊಡ್ಡಿ, ನೂರಾರು ತರದ ಕ್ರೀಮುಗಳನ್ನು ಬಳಿದುಕೊಂಡು ಕಪ್ಪಾಗುವ ಅತಿರೇಕ !! ನೀರಿನಲೆಗಳ ನಡುವೆ ಮೀನಾಗುವ ಈಜುವ ಮೋಜು. ಸಕ್ಕರೆ ಮರಳಿನ ಮೆತ್ತನೆಯ ರಾಶಿಯಲ್ಲಿ ಚಿನ್ನಾಟವಾಡುವ ಪುಟ್ಟ ಕಂದಮ್ಮಗಳ ಹಾಲು ಹೆಜ್ಜೆ ಗುರುತುಗಳ ಸಾಲು ಸಾಲು..

ಶಿಕಾಗೊದಲ್ಲಿ ಎಂದಿನಂತೆ ಮತ್ತೆ ಮರಳಿ ಬಂದಿದೆ ವಸಂತ. ಯಾರಿಗೆ ತಾನೇ ಬೇಡ ಇಂತಹ ವಸಂತ ವೈಭವ ?

ಪ್ರತಿ ವರುಷ ಮತ್ತೆ ಮತ್ತೆ ಮರು ಹುಟ್ಟು ಪಡೆದು, ತನ್ನ ನಿತ್ಯೋತ್ಸವ, ನಿತ್ಯ ವಿನೂತನ ಲೀಲೆಗಳಿಂದ, ಘಳಿಗೆ ಘಳಿಗೆಗೂ ಬದಲಾಗುವ ಈ ಪ್ರಕೃತಿ ತನ್ನ ಮಾಯಾ ವಿಲಾಸದಿಂದ ನಮ್ಮನ್ನು ಪರವಶವಾಗಿಸುತ್ತಲೇ ಇರುತ್ತದೆ. ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರಯವನ್ನು ಮಾತ್ರ ಪಡೆದ ನಮ್ಮನ್ನು ಕರುಬುವಂತೆ ಮಾಡುತ್ತಾ ಕಾಲ ಚಕ್ರದಲ್ಲಿ ಮತ್ತೊಂದು ಸಂವತ್ಸರವಾಗಿ ಸೇರಿ ಹೋಗಿರುತ್ತದೆ!!

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X