• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಯಾಂದು ಕವಿತೆ ರಚನೆಯೂ ಒಂದೊಂದು ಬಸಿರಿನಂತೆ - ಜ್ಯೋತಿ ಮಹಾದೇವ್‌

By Staff
|

*ಸಂದರ್ಶಕರು : ಎಂ. ಆರ್‌. ದತ್ತಾತ್ರಿ

(ಮುಂದುವರಿದುದು...)

Jyothi MahadevM. R. Dattatriದತ್ತಾತ್ರಿ : ವಸ್ತುವಿನ ಆಯ್ಕೆಯಲ್ಲಿ ನಿಮಗನ್ನಿಸುವಂತೆ ನಿಮಗಿರುವ ಮಿತಿಗಳೇನು?

ಜ್ಯೋತಿ : ಒಬ್ಬ ಕವಿ ವಸ್ತುವಿನ ಆಯ್ಕೆಯಲ್ಲಿ ಎಲ್ಲಾ ಬಂಧಗಳನ್ನು ಮೀರುವಂತಿದ್ದರೆ ಬಹಳ ಸುಂದರವಾಗಿರುತ್ತದೆ! ಆದರಿದು ಒಂದು ರಮ್ಯ ಕಲ್ಪನೆಯಷ್ಟೆ. ವಾಸ್ತವದಲ್ಲಿ ಮಿತಿಗಳ ಅಧೀನರು ನಾವು. ನನ್ನ ಕೆಲವು ಮಿತಿಗಳ ಪ್ರಜ್ಞೆ ನನಗೆ ಸ್ಪಷ್ಟವಾಗಿದೆ. ಬಹು ಮುಖ್ಯವಾಗಿ, ಅತಿ ಸಾಧಾರಣವಾದ ಘಟನೆಗಳನ್ನು ಕಾವ್ಯವಾಗಿಸುವಲ್ಲಿನ ಜಾಣ್ಮೆ. ಈ ವಿಷಯದಲ್ಲಿ ನಾನು ನಿಮ್ಮನ್ನು ಬಹಳ ಮೆಚ್ಚುತ್ತೇನೆ. ನಿಮ್ಮ ‘ರೇಷ್ಮೇಸೀರೆಗಳು’ ಅಥವಾ ‘ಕವಿಯನ್ನು ಅರಸುವ ಕವಿತೆ’ಯಂತಹ ಕವನಗಳಲ್ಲಿ ಸಾಧಾರಣವಾದ ಆದರೆ ಕವಿತೆಯಾದ ಮೇಲೆ ಅಷ್ಟೇ ಮೇಲೆದ್ದು ಕಾಣುವಂತಹ ವಸ್ತುವಿನ ಆಯ್ಕೆಯಿದೆ. ನನ್ನ ಕ್ಯಾನ್‌ವಾಸ್‌ನಲ್ಲಿ ಮೂಡುವ ಆಕೃತಿಗಳು ಬೇರೇ ರೀತಿಯವು. ಗುಜರಾತ್‌ನ ಭೂಕಂಪನ ಅಥವಾ ವರ್ಲ್ಡ್‌ ಟ್ರೇಡ್‌ ಸೆಂಟರಿನ ಆಘಾತದಂತಹ ಘಟನೆಗಳು ನನ್ನ ಕವನಗಳಾಗಿವೆ. ದಿನನಿತ್ಯದ ಆಗುಹೋಗುಗಳಲ್ಲಿ ಮತ್ತಷ್ಟು ಸಂವೇದನಾಶೀಲಳಾಗುವ ಬಗ್ಗೆ ನನ್ನನ್ನು ನಾನು ಕೇಂದ್ರೀಕರಿಸಿಕೊಳ್ಳುವ ಅಗತ್ಯವಿದೆ, ಇನ್ನಷ್ಟು ಸೂಕ್ಷ್ಮವಾಗಿ ಸ್ಪಂದಿಸುವತ್ತ ಗಮನ ಹರಿಸಬೇಕಾಗಿದೆ. ಪ್ರಯತ್ನಪೂರ್ವಕವಾಗಿ ಪರಿಸರವನ್ನು ಹೀರಿಕೊಳ್ಳಬೇಕಾಗಿದೆ.

ವಸ್ತುವನ್ನು ಹೊರತುಪಡಿಸಿ ಬರೆಯುವ ಶೈಲಿಯಲ್ಲೂ ನನ್ನದೇ ಆದ ಕೆಲವು ಮಿತಿಗಳಿವೆ. ಭಾವುಕತೆಯ ಉತ್ಕಟತೆಯನ್ನು ಅನೇಕ ಬಾರಿ ನಿಯಂತ್ರಿಸುವಲ್ಲಿ ಅಸಫಲಳಾಗಿದ್ದೇನೆ. ಅತಿ ಭಾವುಕತೆ ಒಮ್ಮೊಮ್ಮೆ ಕವಿತೆಯ ಓಘವನ್ನು ವಿಲಕ್ಷಣಗೊಳಿಸಿಬಿಡುತ್ತದೆ. ಗಂಭೀರ ಶೈಲಿಗೆ ಜೋತುಬಿದ್ದು ಅನೇಕ ಬಾರಿ ಹಗುರವಾಗಿ ಹೇಳುವಲ್ಲಿ ಸೋತಿದ್ದೇನೆ. ಕೆಲವು ಸಂದರ್ಭಗಳಲ್ಲಿ ಯಾವ ಗುಣಗಳು ನಮ್ಮ ಬಲವರ್ಧಕಗಳಾಗುತ್ತವೆಯೋ ಅವೇ ಮತ್ತೆ ಕೆಲವು ಸಂದರ್ಭಗಳಲ್ಲಿ ದೌರ್ಬಲ್ಯಗಳಾಗಿ ಕಾಡುತ್ತವೆ. ಸಂದರ್ಭೋಚಿತವಾಗಿ ಕವಿತೆಯ ದನಿಯನ್ನು ಸಂಶ್ಲೇಷಿಸುವ ಜಾಣ್ಮೆಯನ್ನು ನಾನಿನ್ನೂ ಸಾಧಿಸಬೇಕಿದೆ.

ದತ್ತಾತ್ರಿ : ನಿಮ್ಮ ಭಾಷಾಪ್ರಯೋಗ ಮತ್ತು ಕಾವ್ಯ ಶೈಲಿಯ ಬಗ್ಗೆ ಈ ಪ್ರಶ್ನೆ - ನೀವು ಹಿಂದೆ ತಿಳಿಸಿದಂತೆ ಆರಿಸಿಕೊಳ್ಳುವ ವಸ್ತುವಿನ ವಿಷಯದಲ್ಲಿ ಮತ್ತು ಭಾವನೆಗಳ ಹತೋಟಿಯಲ್ಲಿ ನಿಮ್ಮ ಹಳೆಯ ಕವಿತೆಗಳಿಗೂ ಮತ್ತು ಹೊಸದಕ್ಕೂ ಬಹಳ ಭಿನ್ನತೆಗಳಿದ್ದರೂ ನಿಮ್ಮ ಅಭಿವ್ಯಕ್ತಿಯ ಹಾದಿ ಹೆಚ್ಚುಕಡಿಮೆ ಮಾರ್ಪಾಡನ್ನು ಹೊಂದದೆ ಸ್ಥಿರವಾಗಿದೆ. ಪ್ರಾಸಬದ್ಧತೆಗೆ ಒಳಗಾದ ಒಂದು ನಿಮ್ಮದೇ ಆದ ಶೈಲಿಗೆ ಮೊದಲಿಂದಲೂ ನಿಷ್ಠರಾಗಿದ್ದೀರಿ. ಯಾವ ಅಗತ್ಯಗಳು ನಿಮ್ಮನ್ನು ಈ ರೀತಿ ಒಂದೇ ಶೈಲಿಯಲ್ಲಿ ನಿಲ್ಲುವಂತೆ ಮಾಡಿವೆ?

ಜ್ಯೋತಿ : ಹೌದು, ಕವಿತಾರಚನೆಯಲ್ಲಿ ನನ್ನ ಅಭಿವ್ಯಕ್ತಿಯ ಮಾರ್ಗ ಹೆಚ್ಚುಕಡಿಮೆ ಬಹಳ ದಿನಗಳಿಂದ ಒಂದೇ ದಿಕ್ಕಿನಲ್ಲಿದೆ. ಇದರಿಂದ ನನಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಆಗಿವೆ. ಒಂದು ಶೈಲಿಯು ಸಿದ್ಧಿಸುವುದರಿಂದ ಅನೇಕ ಬಾರಿ ನಾನು ಭಾಷಾಪ್ರಯೋಗ ಮತ್ತು ಶೈಲಿಯ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಾನು ಆರಿಸಿಕೊಂಡಿರುವ ಶೈಲಿಯಿಂದ ಹೇಳಬೇಕಾದದ್ದನ್ನು ಕ್ಲುಪ್ತವಾಗಿ ಹೇಳುವ ಅನೇಕ ಅನುಕೂಲಗಳನ್ನು ಅರಿವಿಗೆ ಬಾರದಂತೆಯೇ ಅನುಭವಿಸಿದ್ದೇನೆ. ಇದರಿಂದಾಗಿ ಕವಿತೆಯು ವಾಚ್ಯವಾಗದಂತೆ ನಿಯಂತ್ರಿಸಲು ಸಾಧ್ಯವಾಗಿದೆ. ಕವಿತೆಯ ಗಾತ್ರವೂ ಹಿಡಿತದಲ್ಲಿರುತ್ತದೆ.

ಹಾಗೇ ಕೆಲವು ಕವಿತೆಗಳು ಮುಕ್ತ ಛಂದಸ್ಸಿನಲ್ಲೂ ಇವೆ. ಉದಾಹರಣೆಗೆ - ‘ನಾನೇ ಹರಿದೆ!!’, ‘ಲಗೋರಿ’, ‘ಶೂನ್ಯದೊಳಗೆ...’, ‘ಅಜ್ಞಾತನಿಗೆ...’, ‘ಲಹರಿಗಳು’- ಮುಂತಾದವು. ಈ ಕೆಲವು ಕವಿತೆಗಳು ನನ್ನ ಸಾಮಾನ್ಯ ಶೈಲಿಗೆ ನಿಲುಕದೆ ತಾವಾಗಿಯೇ ಬೇರೆಯ ರೀತಿಯಲ್ಲಿ ವ್ಯಕ್ತವಾದವುಗಳು. ಒಮ್ಮೊಮ್ಮೆ ಆರಿಸಿಕೊಂಡ ವಸ್ತುವಿಗೆ ನನ್ನ ಪಳಗಿದ ಶೈಲಿ ಚೌಕಟ್ಟನ್ನು ಒದಗಿಸಲು ಸೋತಾಗ ನಾನು ಕೈಚೆಲ್ಲಿ ಕುಳಿತದ್ದಿದೆ. ಅಂತಹ ಸಂದರ್ಭಗಳಲ್ಲಿ ಕವಿತೆಗಳು ಅರ್ಧಕ್ಕೇ ನಿಂತದ್ದಿದೆ.

ದತ್ತಾತ್ರಿ : ವೈಯಕ್ತಿಕ ಅನುಭವಗಳು ಕಾವ್ಯವಾಗುವ ರೀತಿಯ ಬಗ್ಗೆ ಹೇಳಿ....

ಜ್ಯೋತಿ : ಕಾವ್ಯದ ಸತ್ವ ಕವಿಯ ಅನುಭವದಲ್ಲಿ ಅಡಗಿದೆ. ಅದರಲ್ಲೂ ವೈಯಕ್ತಿಕ ಅನುಭವಗಳು ಕವಿತೆಗೆ ಖಾಸಗಿಯಾದ ಒಂದು ರೂಪವನ್ನು ಕೊಡುವುದರಿಂದ ಆ ರೀತಿಯ ಕವಿತೆ ಓದುಗನನ್ನು ಮುಟ್ಟುವ ರೀತಿಯೂ ವಿಶಿಷ್ಟವಾಗಿರುತ್ತದೆ. ಘಟನೆಗಳು ಮನಸ್ಸಿನಲ್ಲಿ ಮೂಡಿಸುವ ಪರಿಣಾಮಗಳ ಆಳ ಒಂದು ರೀತಿಯಲ್ಲಿ ಕವಿತೆಯ ಆಳವೂ ಆಗಿರುತ್ತದೆ. ನಾವು ಮೈಸೂರಿನಲ್ಲಿದ್ದಾಗ ನನ್ನ ದಾಯಾದಿಯಾಬ್ಬಳು ತನ್ನ ಭಾವೀಪತಿಯಾಡನೆ ತೆಗೆಸಿಕೊಂಡ ಒಂದು ಫೋಟೋ, ಅದರಲ್ಲಿ ಅವರಿಬ್ಬರ ಮುಖಭಾವಗಳು, ನನ್ನಲ್ಲಿ ಎಷ್ಟೊಂದು ಭಾವನೆಗಳನ್ನು ಕೆರಳಿಸಿದವೆಂದರೆ ಕೊನೆಯಲ್ಲಿ ಅದು ‘ಅವಳೆಲ್ಲಿ ಗೊತ್ತಾ?’ ಎನ್ನುವ ಒಂದು ಕವಿತೆಯಾಗಿ ಮಾರ್ಪಾಡಾಯಿತು. ‘ಅಜ್ಞಾತನಿಗೆ’ ಎನ್ನುವ ಕವಿತೆಯಲ್ಲಿ ಸಾವಿನ ಬಗ್ಗೆ ಬರೆದಿದ್ದೇನೆ. ಮೈಸೂರಿನಲ್ಲಿ ನಮ್ಮ ನೆರೆಹೊರೆಯಲ್ಲಿ ಒಬ್ಬ ವಯಸ್ಸಾಗಿ ನರಳಿ ನರಳಿ ಸಾವನ್ನು ಬಯಸಿ ಕೊನೆಗೆ ಅದನ್ನು ಪಡೆದುಕೊಂಡರೆ ಅವನ ಪಕ್ಕದ ಮನೆಯಲ್ಲೇ ಒಬ್ಬ ತರುಣ ಅರಿವಿಲ್ಲದೆಯೇ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಸಾವಿನ ದವಡೆಗೆ ಸಿಕ್ಕಿದ. ಈ ತದ್ವಿರುದ್ಧತೆ ನನ್ನ ಕವಿತೆಗೆ ಪ್ರೇರಣೆಯಾಯ್ತು. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಆಧ್ಯಾತ್ಮಿಕತೆಯೂ ನನ್ನ ಕವಿತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೇನೋ ಎಂದೆನಿಸುತ್ತಿದೆ. ನನ್ನ ಮನಃಸ್ಥಿತಿಯ ಆಧಾರದ ಮೇಲೆ ಈ ಮಾತನ್ನು ಹೇಳುತ್ತಿದ್ದೇನೆ.

ಸ್ವಂತ ಅನುಭವಗಳನ್ನು ಸಾಹಿತ್ಯವಾಗಿಸುವಲ್ಲಿ ಅದರ ಪಕ್ವತೆಯನ್ನು ವಿಶ್ಲೇಷಿಸಿ ಬೇಕಾದ್ದನ್ನು ಉಳಿಸಿಕೊಂಡು ಸೇರಿಸಬೇಕಾದ್ದನ್ನು ಸೇರಿಸಿ ಓದುಗನಿಗಾಗಿ ಅದನ್ನು ಸಿದ್ಧ ಪಡಿಸುವುದು ಲೇಖಕನ ಮಹತ್ತರ ಜವಾಬ್ದಾರಿಗಳಲ್ಲೊಂದು.

ದತ್ತಾತ್ರಿ : ಇವತ್ತಿನ ವಿವಾದಾಸ್ಪದ ವಿಷಯ ಕಾವ್ಯ ಯಾವ ರೀತಿ ಇರಬೇಕು ಎನ್ನುವುದು. ಮುಕ್ತ ಛಂದಸ್ಸು ಎಷ್ಟರ ಮಟ್ಟಿಗೆ ಮುಕ್ತವಾಗಿರಬೇಕು ಎನ್ನುವುದರಿಂದ ಹಿಡಿದು ‘ಹೀಗೆ ಬರೆದರೆ ಮಾತ್ರ ಕಾವ್ಯ’ ಎಂದು ಕೆಲವರು ನಿಯಮಾವಳಿಗಳನ್ನು ಕಾರುವತನಕ ಈ ವಿವಾದ ಹಬ್ಬಿದೆ. ಬಹಳಷ್ಟು ವಿವಾದಾಸ್ಪದ ಪ್ರಶ್ನೆಗಳು ವಿಮರ್ಶಕರಿಂದ ಏಳುತ್ತಿವೆ. ನಿಮಗನ್ನಿಸುವಂತೆ ಕಾವ್ಯದ ಲಕ್ಷಣಗಳೇನು?

ಜ್ಯೋತಿ : ಕಾವ್ಯವೆನ್ನುವುದು ಹೀಗೇ ಇರಬೇಕು ಎನ್ನುವ ಸಾರ್ವತ್ರಿಕ ಹೇಳಿಕೆ ಸರಿಯಲ್ಲ. ಅನ್ನಿಸಿದ್ದು, ಕೇಳಿದ್ದು, ನೋಡಿದ್ದು ಅಥವಾ ಅನುಭವಿಸಿದ್ದು ಯಾವರೂಪದಲ್ಲೂ ಸಾಹಿತ್ಯವಾಗಬಹುದು, ಹಾಗೆಯೇ ಕಾವ್ಯ. ಸಂಗೀತದಲ್ಲಿ ಎಷ್ಟೊಂದು ಪ್ರಭೇದಗಳಿರುವಂತೆ ಕಾವ್ಯ ರಚನೆಯಲ್ಲೂ ಕೂಡ. ಸಂಗೀತದಲ್ಲಿ ಭೌತಿಕವಾಗಿ ಪ್ರಜ್ಞೆಯ ನೇರನಿಲುವಿಗೆ ಸಿಲುಕುವುದರಿಂದ ವರ್ಗೀಕರಣ ಸುಲಭ. ಕಾವ್ಯ ಹಾಗಲ್ಲ. ಬೌದ್ಧಿಕ ಕಸರತ್ತು ಅದು. ಈ ಅಂಶವನ್ನು ಪ್ರಾಥಮಿಕವಾಗಿ ಪರಿಗಣಿಸುವುದು ವಿಮರ್ಶಕನ ಆದ್ಯ ಕರ್ತವ್ಯ. ದುರಾದೃಷ್ಟವಶಾತ್‌, ಕನ್ನಡ ಕಾವ್ಯದಲ್ಲಿ ವಿಮರ್ಶೆಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ವಿಮರ್ಶಕರು ಎನಿಸಿಕೊಂಡವರು ತಮ್ಮ ಮೂಗಿನ ನೇರಕ್ಕೆ ದೃಷ್ಟಿಯಿಟ್ಟು ತಮ್ಮ ಪರಿಧಿಯಾಳಗೇ ಹುದುಗಿಕೊಂಡು ಇಡೀ ಜಗತ್ತನ್ನು ನೋಡಬಯಸುತ್ತಾರೆ. ಒಬ್ಬ ಸಾಧಾರಣ ಓದುಗನ ದೃಷ್ಟಿಗಿಂತ ಹಲವು ಮಜಲುಗಳ ಮೇಲಿರಬೇಕಾದ ಅಗತ್ಯ ಒಬ್ಬ ವಿಮರ್ಶಕನಿಗಿದೆ. ಕನ್ನಡದ ಕಾವ್ಯ ವಿಮರ್ಶಕರು ಈಗಾಗಲೇ ಪ್ರಸಿದ್ಧಿ ಪಡೆದ ಅನೇಕ ಕವಿಗಳನ್ನು ತಮ್ಮ ಮಾನದಂಡವಾಗಿ ಬಳಸುತ್ತಾರೆ. ಅಡಿಗರಂತೆ ಬರೆದರೆ ಮಾತ್ರ ಅದು ನವ್ಯ, ಕುವೆಂಪುರಂತೆ ಬರೆದರೆ ಮಾತ್ರ ಅದು ಸೌಂದರ್ಯ! ಮಾನದಂಡಕ್ಕೆ ಸಿಗದವರ ಕಾವ್ಯ ಕಾವ್ಯವೇ ಅಲ್ಲ ಎನ್ನುವ ಉದ್ಧಟ ನಿಲುವಿಗೂ ಬರಲು ಅನೇಕರು ಹಿಂಜರಿಯುವುದಿಲ್ಲ.

ವಿಮರ್ಶೆಯಂತಹ ಸಾಹಿತ್ಯ ಪ್ರಭೇದಕ್ಕೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಸಾಹಿತ್ಯ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನೊಂದಿಗೆ ತಳಕು ಹಾಕಿಕೊಂಡಿರುವುದರಿಂದ ಬೇರೆ ಭಾಷೆಯ, ಜಾಗತಿಕವಾದ ಇಂಗ್ಲೀಷೇ ಆಗಿರಬಹುದು, ಸಂಶೋಧನೆಗಳು ಮತ್ತು ಮಾನದಂಡಗಳು ನಮಗೆ ಎಷ್ಟರ ಮಟ್ಟಿಗೆ ಅನ್ವಯಿಸುತ್ತವೆ ಎನ್ನುವಲ್ಲಿ ವಿವೇಕದ ಅಗತ್ಯ ಬಹಳವಿದೆ. ವಿಶ್ವವಿದ್ಯಾಲಯಗಳು ಈ ಬಗ್ಗೆ ಗಮನಹರಿಸಿ ನಮ್ಮದೇ ಆದ ವಿಮರ್ಶಾತ್ಮಕ ಸಾಹಿತ್ಯವನ್ನು ಹೊಂದುವಲ್ಲಿ ನೆರವಾಗುವ ಅಗತ್ಯ ಕಾಣುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಕವಿತೆಯಾಂದನ್ನು ಓದುವಾಗ ಅಥವಾ ವಿಮರ್ಶಿಸುವಾಗ ಮುಕ್ತ ಮನಸ್ಸು ಅತಿ ಅಗತ್ಯ.

ದತ್ತಾತ್ರಿ : ಕರ್ನಾಟಕದಿಂದ ಹತ್ತು ಸಾವಿರ ಮೈಲುಗಳಾಚೆಯಲ್ಲಿ ಕುಳಿತು ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವವರು ನೀವು. ಇದರಿಂದ ನೀವು ಕಂಡುಕೊಂಡ ಅನುಕೂಲ ಮತ್ತು ಅನಾನುಕೂಲಗಳೇನು?

ಜ್ಯೋತಿ : ಮಾತೃಭಾಷೆಯ ಬರವಣಿಗೆ ನನಗೆ ಈ ಪರಕೀಯ ಸಂಸ್ಕೃತಿಯ ಸಾಗರದಲ್ಲಿ ಮುಳುಗದಂತೆ ತೇಲುತ್ತಿರಲು ಒಂದು ಸಾಧನವಾಗಿದೆ. ಆ ಮಟ್ಟಿಗೆ ಅಮೇರಿಕಾವೇ ಆಗಬೇಕಿಲ್ಲ. ಮದ್ರಾಸಿನಿಂದ ಬರೆಯುವವರು, ಮುಂಬಯಿಯಲ್ಲಿ ಕುಳಿತು ಬರೆಯುವವರು ಒಂದು ರೀತಿಯಲ್ಲಿ ತಮ್ಮತನವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ವಿದೇಶೀ ನೆಲದಲ್ಲಿ ಜೀವಿಸುತ್ತಾ ಕನ್ನಡದಲ್ಲಿ ಬರೆಯುವವಳು ಎನ್ನುವ ವಿಶೇಷ ಪುರಸ್ಕಾರವನ್ನು ಬಯಸುವವಳಲ್ಲ, ಹಾಗೆಯೇ ತಿರಸ್ಕಾರವನ್ನೂ ಕೂಡ.

ದಿವಂಗತ ಎ.ಕೆ. ರಾಮಾನುಜನ್‌ರಿಂದ ಹಿಡಿದು ಶಾಂತಾರಾಮ ಸೋಮಯಾಜಿಗಳ ತನಕ ಅಮೆರಿಕಾದಲ್ಲಿ ನೆಲಸಿ ಕನ್ನಡದಲ್ಲಿ ಬರೆಯುತ್ತಾ ಪ್ರಸಿದ್ಧರಾದ ಪ್ರತಿಭಾವಂತರಿದ್ದಾರೆ. ಇಲ್ಲಿಯ ಸಾಹಿತಿಗಳಿಗೆ ಇರುವ ಅನುಕೂಲವೆಂದರೆ ಅನೇಕ ಸಂಸ್ಕೃತಿಗಳನ್ನು ನೇರವಾಗಿ ಕಂಡು ಅನುಭವಿಸಿ ‘ಇಲ್ಲಿ ಹೀಗಿದೆ’ ಎಂದು ಬರೆಯಬಹುದಾದ ಅವಕಾಶ. ಹೊಸ ವಿಷಯಗಳನ್ನು ಅರಿಯಲು ಅಲ್ಲಿಯ ಸಾಮಾನ್ಯ ಓದುಗ ಉತ್ಸುಕನಾಗಿರುತ್ತಾನೆ ಕೂಡ.

ಇದಕ್ಕೆ ಇನ್ನೊಂದು ಮಜಲು ಕೂಡ ಇದೆ. ತಮಗೆ ಅರಿವಿಲ್ಲದ್ದನ್ನು ಅಥವ ತಾವು ಮತ್ತು ತಮ್ಮ ಸಮಾಜ ಕಂಡ ದೃಷ್ಟಿಯಿಂದ ಭಿನ್ನವಾಗಿ ನೋಡುವ ಸಾಹಿತ್ಯವನ್ನು ಕಂಡಾಗ ಹರಿಹಾಯುವವರೂ ಇದ್ದಾರೆ. ತಾವಂದುಕೊಂಡದ್ದಕ್ಕಿಂತ ಭಿನ್ನವಾದದ್ದು ‘ಸಾಂಸ್ಕೃತಿಕವಾಗಿ ಘನೀರ್ಭವಿಸಿದಂತೆ’ ಕಾಣುತ್ತದೆ ಅವರಿಗೆ. ಬಡತನದ ಬಗ್ಗೆ ಬರೆದಾಗ ಅಮೆರಿಕೆಯ ಐಷಾರಾಮಿ ಬದುಕಿನಲ್ಲಿ ಕುಳಿತು ಬರೆದಿರುವ ಇದು ಕೃತಕ ಎನ್ನುವ ಹಂಗು, ಸಿರಿವಂತಿಕೆಯ ಬಗ್ಗೆ ಬರೆದರೆ ಡಾಲರಿನ ಪೊಗರಿದು ಎನ್ನುವ ಕೊಂಗು. ಒಂದು ರೀತಿಯಲ್ಲಿ ಪೂರ್ವಾಗ್ರಹಪೀಡಿತರಾಗಿ ಯೋಚಿಸುವವರನ್ನು ತೃಪ್ತಿಪಡಿಸುವುದು ಕಷ್ಟ. ಅನುಕೂಲ ಅನಾನುಕೂಲಗಳು ಇಲ್ಲಿ ಕುಳಿತು ಬರೆಯುವವರಿಗೂ ಇದೆ, ಅಲ್ಲಿಂದ ಬರೆಯುವವರಿಗೂ ಇದೆ. ಬರವಣಿಗೆಯ ಪ್ರಕ್ರಿಯೆ ಮುಖ್ಯ, ಅಷ್ಟೆ.

ಬರವಣಿಗೆಗೆ ತಕ್ಷಣದ ಪರಿಸರ ಬಹಳ ಅಗತ್ಯ. ಇಲ್ಲಿಂದ ಬರೆಯುವಾಗ ರಸ್ತೆ ಎಂದೊಡನೆ, ಪಾರ್ಕ್‌, ಪೋಲಿಸ್‌ ಎಂದೊಡನೆ ಇಲ್ಲಿಯ ವ್ಯವಸ್ಥೆಯೇ ಮೂಡಿಬರುತ್ತದೆಯೇ ಹೊರತು ಅಲ್ಲಿಯದಲ್ಲ. ಹಾಗೆಂದು ಹೇಳಿ ಅಲ್ಲಿಯದನ್ನು ಮರೆತುಬಿಟ್ಟಿದ್ದಾರೆ ಎನ್ನುವ ಅರ್ಥವಲ್ಲ. ಚಿತ್ತಾಲರು ಮುಂಬೈಯಲ್ಲಿ ಕುಳಿತು ಬರೆಯುವಾಗ ಮುಂಬೈಯ ಪರಿಸರವನ್ನು ಬರೆಯುತ್ತಾರೆ. ಆದರೆ ಒಬ್ಬ ಓದುಗನಿಗೆ ಮುಂಬೈಯ ಪರಿಸರ ತನ್ನೂರಿಗಿಂತ ಭಿನ್ನವಾದರೂ ಸಾಂಸ್ಕೃತಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳಲು ಸವಾಲಾಗುವುದಿಲ್ಲ. ಆದರೆ ವಿದೇಶೀ ಪರಿಸರ ಹಾಗಲ್ಲ. ತನ್ನ ಸುತ್ತಲಿನ ಪರಿಸರವನ್ನು ತೊರೆದು ಬೇರೊಂದನ್ನು ಬರೆಯುವುದು ಲೇಖಕನ ಜಾಯಮಾನಕ್ಕಲ್ಲ ಹಾಗೆಯೇ ಬೇರೊಂದು ಪರಿಸರದ ಸೂಕ್ಷ್ಮಗಳನ್ನು ಗ್ರಹಿಸುವುದು ಸಾಮಾನ್ಯ ಓದುಗನಿಗೆ ಸ್ವಲ್ಪಮಟ್ಟಿಗೆ ಕ್ಲಿಷ್ಟವೆನಿಸಬಹುದು.

‘ಬರೆಯುವಾಗ ಓದುಗನನ್ನು ದೃಷ್ಟಿಯಲ್ಲಿಟ್ಟುಕೊಳ್ಳುವುದು’ ಎನ್ನುವ ಸರಳವಾಕ್ಯ ಇಂತಹ ಕಠಿಣ ಅರ್ಥದಮೇಲೆ ನಿಂತಿದೆ! ಇಂತಹ ಸಂದರ್ಭಗಳಲ್ಲಿ ಮಾಡಬೇಕಾದ ಸಮಯೋಚಿತ ಹೊಂದಾಣಿಕೆಯೇ ಕವಿಯ ಜಾಣ್ಮೆ.

ದತ್ತಾತ್ರಿ : ದಟ್ಸ್‌ಕನ್ನಡ.ಕಾಂನಲ್ಲಿ ಪ್ರಶಸ್ತಿಗಳಿಸಿದ ‘ಹೇಳು ಮನಸೇ’ ಕವಿತೆಯ ಬಗ್ಗೆ ಹೇಳಿ...

ಜ್ಯೋತಿ : ನನ್ನ ಕೆಲವೇ ಕೆಲವು ಸಾನೆಟ್‌ಗಳಲ್ಲಿ ಇದೂ ಒಂದು. ಸಾನೆಟ್‌ ನನ್ನ ಅಚ್ಚುಮೆಚ್ಚಿನ ಕಾವ್ಯ ರೂಪ. ಹದಿನಾಲ್ಕು ಸಾಲುಗಳಲ್ಲಿ ವ್ಯವಸ್ಥಿತವಾಗಿ ಏನನ್ನೆಲ್ಲಾ ಹೇಳಬಹುದು! ಮೇಲಾಗಿ ನಾನು ಹೊಂದಿಕೊಂಡಿರುವ ನನ್ನದೇ ಆದ ಕವಿತಾರಚನೆಯ ಶೈಲಿಗೆ ಸಾನೆಟ್‌ ಬಹಳ ಹೊಂದಿಕೆಯಾಗುತ್ತದೆ. ನನ್ನ ಮತ್ತೊಂದು ಸಾನೆಟ್‌ ‘ಸ್ಮರಣೆ’, ಡಾ।। ಸಾ.ಶಿ. ಮರುಳಯ್ಯನವರಿಗೆ ಬಹಳ ಮೆಚ್ಚುಗೆಯಾಯಿತು.

ಮನುಷ್ಯ-ಮನುಷ್ಯನ ನಡುವಿನ ಸಂಬಂಧಗಳ ತಿಕ್ಕಾಟ ಈ ಕವಿತೆಯ ವಸ್ತು. ಆತ್ಮೀಯರಾದವರೇ ಎದುರಿಗೊಂದು ಹಿಂದೊಂದು ಸ್ವಭಾವವನ್ನು ತೋರ್ಪಡಿಸಿದಾಗ, ಸ್ನೇಹ-ಸಂಬಂಧಗಳಲ್ಲಿ ಕೃತಕತೆ ಕಂಡಾಗ ಈ ಪದ್ಯ ಹುಟ್ಟಿತು.

ದತ್ತಾತ್ರಿ : ನಿಮ್ಮ ‘ಭಾವ ಲಹರಿ’ಯಲ್ಲಿರುವ ಒಂದು ಪದ್ಯ ‘ಜಲ ಧಾರೆ’. ಇದು ನನಗೆ ಬಹಳ ಇಷ್ಟವಾದ ಕವಿತೆ. ಜೋಗಕ್ಕೂ ನಯಾಗರಕ್ಕೂ ಹೋಲಿಕೆಗಳ ನಡುವೆಯೇ ಅನಿವಾಸಿ ಭಾರತೀಯರ ಬದುಕನ್ನು ಸೂಚ್ಯವಾಗಿ ವಿವರಿಸುವ ಪದ್ಯವಿದು. ಇದರ ಬಗ್ಗೆ ಹೇಳಿ...

ಜ್ಯೋತಿ : ನಾಗತಿಹಳ್ಳಿ ಚಂದ್ರಶೇಖರರು ‘ಅಮೆರಿಕಾ! ಅಮೆರಿಕಾ!!’ ಚಿತ್ರ ನಿರ್ಮಿಸಲು ಇಲ್ಲಿಗೆ ಬಂದಾಗ ಇಲ್ಲಿಯ ಕನ್ನಡ ಲೇಖಕರನ್ನು ಚಿತ್ರಕ್ಕೆ ಪೂರಕವಾಗಿ ಕಥಾಹಂದರ ಬರೆಯುವಂತೆ ಕೇಳಿಕೊಂಡಿದ್ದರು. ನನಗೆ ಅದಲ್ಲದೆ, ಚಿತ್ರದ ಕೆಲವು ಸನ್ನಿವೇಶಗಳಿಗೆ ತಕ್ಕಹಾಗೆ ಕೆಲವು ಗೀತೆಗಳನ್ನು ರಚಿಸಿಕೊಡುವಂತೆ ಹೇಳಿದ್ದರು. ಹಾಗೆ ನಾನು ಬರೆದ ಐದಾರು ಕವನಗಳಲ್ಲಿ ಒಂದು- ‘ಜಲ ಧಾರೆ’. ಅವು ಯಾವುವೂ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ, ಆ ಮಾತು ಬೇರೆ. ಇದೊಂದು ಪ್ರಣಯಗೀತೆ. ಜೊತೆಗೇ ಇಲ್ಲಿಯ ವಿಶೇಷತೆಗಳನ್ನು ಅಲ್ಲಿಂದ ಬಂದು ನೆಲಸಿದವರ ಬದುಕನ್ನೂ ವಿವರಿಸುವುದು ನನ್ನ ಉದ್ದೇಶವಾಗಿತ್ತು. ಆ ಪದ್ಯದ ಕೊನೆಯ ಸಾಲುಗಳು ಹೀಗೆ ಬರುತ್ತವೆ:

ಜೋಗದಿಂದ ನಯಾಗರಾವರೆಗೆ

ಬೆಳೆದ ನಮ್ಮ ಪಯಣ

ಒಲವು ಬತ್ತದೇ ತುಂಬಿ ಮೊರೆಯಲಿ

ಹರಡಿ ಹೊನ್ನ ಕಿರಣ.

ದತ್ತಾತ್ರಿ : ಒಬ್ಬ ಲೇಖಕಿಯಾಗಿ ನಿಮ್ಮ ಭವಿಷ್ಯದ ನಿಲುವುಗಳೇನು? ಕಾವ್ಯದಲ್ಲೇ ಮುಂದುವರೆಯಬೇಕೆಂಬುದೇ?

ಜ್ಯೋತಿ : ನಾನು ಕವಿತೆ ಬರೆಯುವುದನ್ನು ಬಿಡಲಾರೆ. ಅದು ಸಾಧ್ಯವೆಂದು ನನಗನ್ನಿಸುವುದಿಲ್ಲ. ನಾನು ಆಗಾಗ ಮಹಾದೇವ್‌ಗೆ ಛೇಡಿಸುತ್ತಿರುತ್ತೇನೆ- ಕವಿತೆ ನನ್ನ ಮೊದಲ ಪ್ರೀತಿ ನೀವು ಎರಡನೆಯವರು ಎಂದು. ಯಾವಾಗಲೋ ಮಾತನಾಡುತ್ತಾ ಒಬ್ಬ ಕವಿಯ ಒಂದು ವಾಕ್ಯವನ್ನು ನೀವು ಹೇಳಿದ್ದೀರಲ್ಲಾ ಅಂತ. ಆ ಕವಿಯ ತರಹವೇ ನನಗಾಗಿದೆ. ಕಾವ್ಯ ನನ್ನನ್ನು ಸಂಪೂರ್ಣವಾಗಿ ಆವರಿಸಿದೆ, ಸೆಳೆದುಕೊಂಡುಬಿಟ್ಟಿದೆ. ಯಾರಾದರೂ ಓದಲಿ, ಬಿಡಲಿ; ನಾನು ಮಾತ್ರ ಬರೆಯಲೇಬೇಕು. ಬೇರೆ ಯಾರಿಗಲ್ಲದಿದ್ದರೂ ನನಗೋಸ್ಕರ ನಾನು ಬರೆಯಲೇಬೇಕು, ಬರೆದೇ ಬರೆಯುತ್ತೇನೆ. ಬರವಣಿಗೆ, ಅದರಲ್ಲೂ ಕವಿತೆ ನನ್ನ ಉಸಿರು.

ಸಂಭಾಷಣೆಯಲ್ಲಿ ಉಲ್ಲೇಖಿತವಾದ ಜ್ಯೋತಿಯವರ ಕೆಲವು ಕವಿತೆಗಳು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X