ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಿ ಹಾಲಿವುಡ್‌ ಆದರೆ ಇಲ್ಲಿ ಸ್ಯಾಂಡಲ್‌ವುಡ್‌ ಯಾಕೆ ?

By Staff
|
Google Oneindia Kannada News

* ಸತೀಶ್‌ ಕುಮಾರ್‌, ಅಲೆಕ್ಸಾಂಡ್ರಿಯಾ

Satish Kumar, The Authorನ್ಯೂಯಾರ್ಕನ್ನು ಸುತ್ತಿ ಸೋತು ಸುಣ್ಣವಾದ ಸುಬ್ಬ ಎರಡು ವಾರಗಳ ಕಾಲ ‘ಇನ್ನೆಲ್ಲೂ ಬರಲ್ಲಪ್ಪಾ’ ಎಂದು ಮನೆಯಲ್ಲೇ ಉಳಿದ. ‘ಅಮೇರಿಕಾ ನೋಡ್‌ಬೇಕು ಅಂತಾ ಬಂದು, ಅದೇನು ಹೆಂಗಸರ ತರಾ ಮನೇಲೇ ಉಳೀತೀಯಾ?’ ಅಂದ್ರೆ ‘ಗುರೂ, ನಾವು ಅಮೇರಿಕನ್‌ ಆಗಬೇಕು, ಇಲ್ಲೆಲ್ಲಾ ನೋಡು - ವಾರವಿಡಿ ಕಷ್ಟ ಪಟ್ಟು ಬರೀ ವೀಕೆಂಡಿನಲ್ಲಿ ಹೇಗೆ ಮಜಾ ಮಾಡ್ತಾರೆ, ನಾವೂ ಹಾಗೇ ಬರೋ ವೀಕೆಂಡ್‌ನಲ್ಲಿ ಎಲ್ಲಾದ್ರೂ ಹೋದ್ರಾಯ್ತು ಬಿಡು’ ಅಂದ. ‘ಸರಿ, ನಿನ್ನಿಷ್ಟ - ಆಮೇಲೆ ಊರಿಗೆ ಹೋಗಿ ನಾನು ಅದು ತೋರಿಸ್‌ಲಿಲ್ಲ , ಇದು ತೋರಿಸ್‌ಲಿಲ್ಲಾ ಅಂತ ಕಂಪ್ಲೈಂಟ್‌ ಮಾಡಿದ್ರೆ ನೋಡು ಮತ್ತೆ’ ಅಂದೆ.

ನಾನು ಕೆಲಸಕ್ಕೆ ಹೋದಾಗ ಸುಬ್ಬನಿಗೆ ಸಂಗಾತಿಯಾಗಿದ್ದು ನಮ್ಮ ಕೇಬಲ್‌ ಟಿ.ವಿ. ಆಗಾಗ ಕಂಪ್ಯೂಟರ್‌ನೂ ನೋಡುತ್ತಿದ್ದನಾದರೂ ಇಲ್ಲಿನ ಗಾಂಧರ್ವ ಲೋಕದ ಟಿ.ವಿ. ಅವನನ್ನ ಸೆಳೆದಂತೆ ಮತ್ಯಾವುದೂ ಆಕರ್ಷಿಸಲಿಲ್ಲ. ಸುಬ್ಬನಿಗೆ ಟಿ.ವಿ ಯಲ್ಲಿ ಬರೋ ಕಾರ್ಯಕ್ರಮಗಳು ಎಲ್ಲ ಮೆಚ್ಚಿಗೆಯಾದರೂ ಇಲ್ಲಿನ ಲೋಕಲ್‌ ನ್ಯೂಸ್‌ ಮಾತ್ರ ಸುತಾರಾಂ ಇಷ್ಟ ಆಗಲಿಲ್ಲ. ‘ಯಾಕೆ’ ಅಂತ ಕೇಳಿದ್ದಕ್ಕೆ ದೊಡ್ಡ ಕಥೆಯನ್ನೇ ಶುರುಮಾಡಿದ.

‘ಅಲ್ಲಯ್ಯಾ, ನಮ್ಮ ಊರಿನ ನ್ಯೂಸ್‌ ಪೇಪರ್‌, ಟಿ.ವಿ. ನ್ಯೂಸ್‌ಗಳಲ್ಲಿ ಪ್ರಾದೇಶಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳಿಗೆ ಎಷ್ಟು ಆದ್ಯತೆ ಮತ್ತು ಸಮಾನ ಮಹತ್ವ ಕೊಡುತ್ತಾರೆ, ಇಲ್ಲಿನವರ ಲೋಕಲ್‌ ನ್ಯೂಸ್‌ ಬರೀ ಲೋಕಲ್‌ಗೆ ಮಾತ್ರ ಸೀಮಿತವಾಗಿರುತ್ತೆ ’ ಅಂದು ಇನ್ನೂ ಮುಂದುವರೆಸಿ ‘ಇಲ್ಲಿಯ ಲೋಕಲ್‌ ಚಾನೆಲ್‌ಗಳಲ್ಲಿ ಅದೇನು ನ್ಯೂಸ್‌ ಹೇಳ್ತಾರೋ ಒಂದು ಘಂಟೆ ಕಾಲ? ಅಲ್ಲದೆ, ಮತ್ತೆ ಕೊನೆಯಲ್ಲಿ ಸುದ್ದಿಯ ಮುಖ್ಯಾಂಶವನ್ನೂ ಹೇಳೋಲ್ಲ!’.

‘ನೀನು ಫಾಕ್ಸ್‌-5 ಡಿಸಿ ನ್ಯೂಸ್‌ ನೋಡಿ ಹೇಳ್ತಾ ಇದೀಯೇನೋ, ಆದ್ರೆ ಸಿ.ಎನ್‌.ಎನ್‌ ನಲ್ಲಿ ಎಲ್ಲಾ ನ್ಯೂಸ್‌ ತೋರಿಸ್ತಾರಲ್ಲಪ್ಪಾ’ ಅಂದೆ.

ಅವನು ಸ್ವಲ್ಪ ಖಾರವಾಗಿ ‘ಏ ಸುಮ್ನಿರೋ ಕಂಡೀದೀನಿ, ವಿಶ್ವದ ಬಗ್ಗೆ ಮಾತಾಡೋ ಅಮೇರಿಕದವರ ದೊಡ್ಡತನವನ್ನ!’ ನಾನು ‘ಆಅǚ...’ ಎಂದು ಪ್ರಶ್ನಾರ್ಥಕವಾಗಿ ಅವನ ಕಡೆ ನೋಡಿದ್ರೆ ‘ಅದೇ ಮಾರಾಯಾ, ಇಲ್ಲಿನ ನ್ಯೂಜೆರ್ಸೀ, ಫ್ಲೋರಿಡಾ, ವರ್ಜೀನಿಯಾ ಇವರೆಲ್ಲ ಸೇರಿ ಆಟ ಆಡೋ ಬಾಸ್ಕೆಟ್‌ ಬಾಲ್‌ ಆಟಕ್ಕೂ ‘ವರ್ಲ್ಡ್‌ ಸೀರೀಸ್‌’ ಪಂದ್ಯ ಅಂತಲೇ ಹೇಳೋದು’ ಅರ್ಥ ಆಯ್ತಾ ಅಂತ ನನ್ನ ಕಡೆ ನೋಡಿ ಗಹಗಹಿಸಿ ನಕ್ಕ.

‘ನೀನು ಮಾತು-ಮಾತಿಗೂ ಹಳಿಯೋದಾದ್ರೆ ಆ ಕಾರ್ಯಕ್ರಮಗಳನ್ನೆಲ್ಲಾ ಬಾಯಿಬಿಟ್ಟುಕೊಂಡು ಯಾಕೆ ನೋಡ್ತಿ, ನಿನಗೆ ಇಷ್ಟ ಆಗ್ದೇ ಇದ್ರೆ, ಸುಮ್ನಿರಬೇಕಪ್ಪಾ’ ಎಂದೆ ಸ್ವಲ್ಪ ಖಾರವಾಗಿ, ಹಾಗೆ ಮುಂದುವರೆಸಿ ‘ನೋಡೋ, ನಮ್ಮ ಭಾರತದಲ್ಲಿ, ನಮ್ಮ ಕರ್ನಾಟಕದಲ್ಲಿ ನಡೆಯೋ ಎಷ್ಟೋ ಕಾರ್ಯಕ್ರಮಗಳಿಗೆ ನಾವು ‘ವಿಶ್ವ ಕಾರ್ಯಕ್ರಮ’ ಅಂತ ಹೇಳೋಲ್ವಾ? ಹಾಗೇ. ನಾನೇ ನಮ್ಮೂರಿನ ಎಷ್ಟೊಂದು ‘ವಿಶ್ವ ಸಮ್ಮೇಳನಗಳ’ ಬಗ್ಗೆ ಕೇಳಿದ್ದೇನೆ, ನಿನ್ನ ಮಾತನ್ನೇ ಮುಂದುವರೆಸಿದರೆ ಅವೆಲ್ಲ ನಿಜವಾಗಿ ‘ವಿಶ್ವ’ ವನ್ನು ಪ್ರತಿನಿಧಿಸುವಂತವಾ?’ ಯಾಕೋ ಸ್ವಲ್ಪ ಸುಮ್ಮನಾದ.

ಮಾಡುವ ಕೆಲಸದಲ್ಲಿ ಪರಿಪೂರ್ಣತೆ
ಸುಬ್ಬನಿಗೆ ಕಾಮಿಡಿ ಸೆಂಟ್ರಲ್‌ನಲ್ಲಿ ಬರುವ ಹಾಸ್ಯದ ಮಾತುಗಳು, ಹಲವು ಸಿಟ್‌ಕಾಮ್‌ಗಳೂ ತುಂಬಾ ಇಷ್ಟವಾಗುತ್ತಿದ್ದವು. ಅವನ ಜಿಜ್ಞಾಸಾ ದಾಹಕ್ಕೆ ನಾನು ತಲೆಕೆರೆದುಕೊಂಡ ಪ್ರಸಂಗಗಳು ಹಲವು. ಅಮೇರಿಕನ್ನರ ನಿರರ್ಗಳ ಮಾತುಕತೆಗಳು ಅವನಿಗೆ ಯಾವಾಗಲೂ ಆಶ್ಚರ್ಯ ಮೂಡಿಸುತ್ತಿತ್ತು. ತುಸು ಒರಟನಾದರೂ ಅವನ ಮನಸ್ಸಿನಲ್ಲಿರೋದನ್ನೆಲ್ಲ ಮುಗ್ಧವಾಗಿ ನನಗೆ ಒಪ್ಪಿಸುತ್ತಿದ್ದ. ಹೀಗೇ ಒಂದು ಟಿ.ವಿ. ಕಾರ್ಯಕ್ರಮ ನೋಡುತ್ತಲೇ ಕೇಳಿದ ‘ಇಲ್ಲಿ ಜನ ಹೊಟ್ಟಿಗೆ ಅದೇನು ತಿಂತಾರೆ!?’

ನಾನು, ಇವನಿಗೇನಪ್ಪಾ ಆಯ್ತು? ಇದ್ದಕ್ಕಿದ್ದಂತೆ ಎಲ್ಲಾದ್ರೂ ಒಬೇಸಿಟಿ ಬಗ್ಗೆ ಡಿಸ್ಕವರಿ ಚಾನೆಲ್‌ನಲ್ಲಿ ಏನಾದ್ರೂ ಕಾರ್ಯಕ್ರಮ ನೋಡಿದ್ನೋ ಅಂದುಕೊಳ್ಳುತ್ತಿರುವಷ್ಟಲ್ಲಿ ಮತ್ತೆ ಅವನೇ ಮುಂದುವರೆಸಿದ...

‘ಇಲ್ಲಿ ಯಾರನ್ನೇ ತಗೋ, ಬಾಳ ಚೆನ್ನಾಗಿ ಮಾತಾಡ್ತಾರೆ. ಅವರು ಏನೇ ಕೆಲ್ಸ ಮಾಡ್ಲಿ, ಅದರ ಬಗ್ಗೆ ಚೆನ್ನಾಗಿ ತಿಳಕೊಂಡಿರ್‌ತಾರೆ, ಅದರ ಬಗ್ಗೆ ಒಳ್ಳೆ ಅರಳು ಹುರಿದಂತೆ ಮಾತಾಡ್ತಾರೆ ನೋಡು’. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸುತ್ತಿರುವಾಗ ‘ನಾವು ಇಂಗ್ಲೀಷ್‌ ಕಲ್ತೇವಿ, ಆದ್ರೂ ನಾವು ಇಷ್ಟು ಚೆನ್ನಾಗಿ ಮಾತಾಡಲ್ಲ ಅನ್ನೋಕೆ ಭಾಷೆ ಸಮಸ್ಯೆ ಅಲ್ಲ, ನಮಗೆ ನಮ್ಮ ಬಗ್ಗೇನೇ ಯಾವಾಗ್ಲೂ ಬಾಳಾ ಯೋಚ್‌ನೆ, ಯಾರು ಏನಂತಾರೋ, ಹೆಂಗಂತಾರೋ ಅನ್ನೋ ಸಮಾಜದ ಮೇಲಿನ ನಮ್ಮ ಅವಲಂಬನೆ ಜಾಸ್ತಿ, ಇದ್ದರೆ ಹಿಂಗಿರಬೇಕಪ್ಪಾ, ಯಾರಿಗೂ ಕೇರ್‌ ಮಾಡದಂಗೆ...’

ಒಬ್ಬ ಪ್ಲಂಬರ್‌ ಇಷ್ಟು ಚೆನ್ನಾಗಿ ತಿಳಕೊಂಡಾನಲ್ಲ !
Hollywood ಸುಬ್ಬನಿಗೆ ಅಮೇರಿಕಾದ ಮೇಲೆ ಪ್ರೇಮ, ಮೋಹ, ತಿರಸ್ಕಾರ ಎಲ್ಲವೂ ಒಟ್ಟೊಟ್ಟಿಗೆ ಬರತೊಡಗಿವೆಯೆಂದು ಗೊತ್ತಾದ ಮೇಲೂ ನಾನು ಏನಾದ್ರೂ ಹೇಳಿದ್ರೆ ಸರಿ ಇರಲ್ಲ ಅಂತ ಅವನೇ ಅವನ ಅಬ್ಸರ್ವೇಷನ್‌-ಅಭಿಪ್ರಾಯಗಳಲ್ಲಿ ಬೆಳೆಯಲಿ ಎಂದು ಸುಮ್ಮನಾದೆ. ಅವ ಹಿಂಗೆ ಹೇಳಿದ್ದಕ್ಕೆ ಕಾರಣವೂ ಇದೆ, ನಮ್ಮ ಮನೆ ನಲ್ಲಿ ಪೈಪು ರಿಪೇರಿಗೆ ಬಂದ ಪ್ಲಂಬರ್‌ನನ್ನು ಗಂಟೆಗಟ್ಟಲೆ ಕೊರೆದು ಅವನಿಂದ ಇವನು ಬಹಳ ಕಲಿತಿದ್ದಾನೆ. ನಾವಿರೋದು ಇಪ್ಪತ್ತನೇ ಮಹಡಿಯಾದರೂ ಸದಾ ಒಂದೇ ಒತ್ತಡದಲ್ಲಿ ನೀರು ಹೇಗೆ ಎಲ್ಲಾ ಮನೆಗೂ ಬರುತ್ತೆ , ಈ ಊರಿನಲ್ಲಿ ನಮ್ಮ ದೇಶದಲ್ಲಿರುವಂತೆ ದೊಡ್ಡ ನೀರಿನ ಟ್ಯಾಂಕ್‌ಗಳಿರೋಲ್ಲ , ನೀರನ್ನು ಹೇಗೆ ಸಂಗ್ರಹಿಸುತ್ತಾರೆ, ಹೇಗೆ ಶುದ್ಧೀಕರಿಸುತ್ತಾರೆ, ಸರಬರಾಜು ಮಾಡುತ್ತಾರೆ... ಇವೇ ಹಲವು ಪ್ರಶ್ನೆಗಳಿಗೆ ಪಾಪ ಆ ಪ್ಲಂಬರ್‌ಗೆ ಉತ್ತರ ಕೊಟ್ಟು ಸಾಕು-ಸಾಕಾಯಿತು. ‘ಒಬ್ಬ ಪ್ಲಂಬರ್‌ ಇಷ್ಟು ಚೆನ್ನಾಗಿ ತಿಳಕೊಂಡಾನಲ್ಲ ! ಮಕ್ಕಳಿಗೂ ತಿಳಿಯುವಂತೆ ಎಷ್ಟು ಚೆನ್ನಾಗಿ ವಿವರಿಸ್‌ತಾನಲ್ಲ!’ ಅನ್ನೋ ಆಶ್ಚರ್ಯದ ಬೆನ್ನ ಹಿಂದೆ ನಮ್ಮೂರಿನಲ್ಲಿ ‘ಕಿವಿಯಲ್ಲಿ ಪೆನ್ಸಿಲ್‌ ಸಿಕ್ಕಿಸಿಕೊಂಡು, ತಲೆ ಕೆದರಿಕೊಂಡು, ಕೊಳೆ ಬಟ್ಟೆ ಧರಿಸಿ, ಕುಡಿದು ಕೆಲಸಕ್ಕೆ ಬರೋ ಆಚಾರಿಗಳಿಗೆ ಹಿಡಿ ಶಾಪ ಹಾಕಿದ! ‘ಹೇ, ನಮ್ಮ ದೇಶ ಬಂಡವಾಳಶಾಹಿ ದೇಶವಾಗಲಾರದು, ಹಾಗೆಲ್ಲ ಬಯ್ಯಬೇಡ...’ ಅನ್ನೋ ನನ್ನ ಮಾತುಗಳನ್ನು ಆತ ಕೇಳಿಸಿಕೊಳ್ಳುವ ಗೋಜಿಗೂ ಹೋಗಲಿಲ್ಲ!

ಸುಬ್ಬನಿಗೆ ಸಡಗರ ತರುತ್ತಿದ್ದ ವಿಷಯಗಳಲ್ಲಿ ನನ್ನ ಡಿವಿಡಿ ಪ್ಲೇಯರ್ರೂ ಒಂದು. ಸಿನಿಮಾ ನೋಡುವ ವಿಚಾರದಲ್ಲಿ ಇವ ಯಾವಾಗಲೂ ಒಂದು ಹೆಜ್ಜೆ ಮುಂದೆ ಅನ್ನೋದು ನನಗೆ ಯಾವತ್ತೋ ಗೊತ್ತಿದ್ದ ವಿಷಯ.

ಅನುಕರಣೆ
ನಮ್ಮೂರಿನ ವೀರಭದ್ರೇಶ್ವರ ಟಾಕೀಸ್‌ಗೆ ಬರೋ ಪ್ರತಿ ಸಿನಿಮಾವನ್ನು ನಾವು ಒಟ್ಟಿಗೇ ನೋಡಿದ್ದೇವೆ, ಹೌದು, ವರ್ಷದ ಪ್ರತಿಯಾಂದನ್ನೂ! ಒಂದು ರೂಪಾಯಿ ಕೊಟ್ಟು ಮೊದಲು ನೆಲಕ್ಕೆ ಹೋಗಿ ಕೂತು, ಆಮೇಲೆ ಬೆಂಚಿಗೆ ಹಾರೋದರಲ್ಲಿ ಸುಬ್ಬ ಮೊದಲು, ನಾನು ಅವನ ಹಿಂದೆ! ಸಿನಿಮಾ ನೋಡೋದು ಅಂದ್ರೆ ಅದೇನು ಸಂಭ್ರಮ?

ವಾರ್‌ ಪಿಚ್ಚರ್‌ ಕೂಡಾ ಬಿಡದೇ ನೋಡುತ್ತಿದ್ದೆವು (ವಾರ್‌ ಪಿಚ್ಚರ್‌ ಅಂದ್ರೆ - ಸಿನಿಮಾ ಶುರು ಮಾಡೋಕ್ಕಿಂತ ಮೊದಲು ನ್ಯೂಸ್‌ ರೀಲು ತೋರಿಸುತ್ತಾರಲ್ಲ ಅದು, ಹಿಂದೆ ಯುದ್ಧಕ್ಕೆ ಸಂಬಂಧಿಸಿದ ರೀಲ್‌ಗಳನ್ನು ತೋರಿಸುತ್ತಿದ್ದರಂತೆ...ಆದರೆ ಅದರಲ್ಲಿ ಈಗ ಏನೇ ತೋರಿಸಿದರೂ ಇವತ್ತಿಗೂ ಅದು ನಮ್ಮೂರಿನವರ ಬಾಯಿಯಲ್ಲಿ ವಾರ್‌ ಪಿಚ್ಚರ್ರೇ!). ಇಲ್ಲಿ ಬಂದ ಸುಬ್ಬನಿಗೆ ನಿರಾಶೆ ಏನೂ ಆಗಲಿಲ್ಲ, ಆತ ನನ್ನ ಬ್ಲಾಕ್‌ಬಸ್ಟರ್‌ ಕಾರ್ಡನ್ನು ಚೆನ್ನಾಗಿ ಬಳಸಿಕೊಳ್ಳತೊಡಗಿದ.

ನಮ್ಮ ಮನೆಗೆ ಬಂದವರು ಇವ ಅಮೇರಿಕಾ ನೋಡೋಕ್ಕೆ ಬಂದನೋ, ಇಲ್ಲಿ ಸಿನಿಮಾ ನೋಡೋಕೆ ಬಂದನೋ ಎಂದು ಮೂಗಿನ ಮೇಲೆ ಬೆರಳಿಡುವಷ್ಟರ ಮಟ್ಟಿಗೆ ಇವ ಬೆಳೆದಿದ್ದ! ಒಂದು ದಿನ ಇವ ಅದ್ಯಾವ ಕಾರ್ಯಕ್ರಮ ನೋಡಿದನೋ, ಓದಿದನೋ ಗೊತ್ತಿಲ್ಲ, ನಾನು ಆಫೀಸಿನಿಂದ ಮನೆಗೆ ಬಂದ ಕೂಡಲೇ ಹಾಲಿವುಡ್‌ ಬಗ್ಗೆ ಒಂದೇ ಸಮನೆ ಪ್ರಶ್ನೆ ಕೇಳತೊಡಗಿದ...

‘ಹಾಲಿವುಡ್‌ ಅಂದ್ರೆ ಏನು?’, ‘ಅದು ಎಲ್ಲಿದೆ?’ ‘ಅದಕ್ಕೂ, ನಮ್ಮ ಬಾಲಿವುಡ್‌ಗೂ ಏನು ಸಂಬಂಧ?’ ಇವೇ ಇತ್ಯಾದಿ ಪ್ರಶ್ನೆಗಳು.

ನನ್ನ ಅದೃಷ್ಟಕ್ಕೆ ನಾನು ಎನ್‌.ಪಿ.ಆರ್‌.ನ ಮಾರ್ನಿಂಗ್‌ ಎಡಿಷನ್‌ನಲ್ಲಿ ಇತ್ತೀಚೆಗಷ್ಟೇ ಅದರ ಬಗ್ಗೆ ಕೇಳಿದ್ದೆ, 1923 ರಲ್ಲಿ ಲಾಸ್‌ ಎಂಜೆಲೆಸ್‌ ಪ್ರಗತಿಯ ನಡುವೆ ಇರುವಾಗ ಅಲ್ಲಿಯ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಅಲ್ಲಿಯ ಮರುಭೂಮಿಯನ್ನು ನಂದನವನವನ್ನಾಗಿ ಹೇಗೆ ಪರಿವರ್ತಿಸಿತು. ಹಾಲಿವುಡ್‌ ಬೆಟ್ಟಗಳ ಕಡಿದಾದ ಹಾದಿಯಲ್ಲಿ ಲೈಟುಕಂಬಗಳ ಸಹಾಯದಿಂದ ನಿಲ್ಲಿಸಿದ ಐವತ್ತು ಅಡಿ ಎತ್ತರದ ಒಂದೊಂದು ಅಕ್ಷರಗಳು, ಅವುಗಳ ನಿರ್ವಹಣೆ, ಸುಮಾರು ನಾಲ್ಕು ಸಾವಿರ ಲೈಟು ಬಲ್ಬುಗಳು, ಸುಟ್ಟು ಹೋದ ಬಲ್ಬುಗಳನ್ನು ಹೇಗೆ ಬದಲಾಯಿಸುತ್ತಿದ್ದರು, ನಂತರ ಹಾಲಿವುಡ್‌ ಲ್ಯಾಂಡ್‌ ಅನ್ನೋ ಪದದ ಬದಲು ಹಾಲಿವುಡ್‌ ಅನ್ನೋ ಪದ ಹೇಗೆ ಬಂತು, ಅದರ ಒಂದೊಂದು ಅಕ್ಷರವನ್ನ ಒಬ್ಬೊಬ್ಬ ಕಲಾವಿದ ಪೋಷಿಸಿ, ಅವಸಾನ ಸ್ಥಿತಿಯಿಂದ ಹೇಗೆ ಪಾರಾಯಿತು ಎಂದೆಲ್ಲ ಹೇಳಿ ಮುಗಿಸಿದೆ.

ಹಾಲಿವುಡ್‌ ಹಾಳಾಗಲಿ, ಸ್ಯಾಂಡಲ್‌ವುಡ್‌ ಯಾಕೆ ?
ಸುಬ್ಬನಿಗೆ ಇದ್ಯಾವುದರಲ್ಲೂ ಅಷ್ಟೊಂದು ಆಸಕ್ತಿ ಇರುವಂತೆ ಕಾಣಲಿಲ್ಲ , ಆತ ಎಂದಿನಂತೆ ತನ್ನ ಮನಸಲ್ಲಿದ್ದದ್ದನ್ನೆಲ್ಲಾ ಒಂದೇ ಉಸಿರಿನಲ್ಲಿ ಹೇಳ ಹೊರಟವನಂತೆ ಊಳಿಡತೊಡಗಿದ...

‘ಅಲ್ಲಾ, ಇವರು ಇವರ ಬೆಟ್ಟ, ಗುಡ್ಡ, ಊರನ್ನೇನೋ ಹಾಲಿವುಡ್‌ ಅಂತ ದೊಡ್ಡದಾಗಿ ಕರೆದುಕೊಂಡರು, ಬರೆದುಕೊಂಡರು, ಅದರ ಲಾಭ-ನಷ್ಟ ಅವರಿಗೇ ಇರಲಿ. ನಮಗೇನೂ ಮಾನ ಮರ್ಯಾದೇ ಇಲ್ಲವೇನಯ್ಯಾ? ನಾವು ಯಾಕೆ ನಮ್ಮ ಸ್ಥಳವನ್ನ ಬಾಲಿವುಡ್‌, ಟ್ಯಾಲಿವುಡ್‌, ಸ್ಯಾಂಡಲ್‌ವುಡ್‌ ಅಂತ ಕರೆದುಕೊಳ್ಳಬೇಕು? ನಮಗೆ ನಮ್ಮತನ ಅನ್ನೋದಿದ್ದರೆ ಇವತ್ತು ಈ ಸ್ಥಿತಿಗ್ಯಾಕೆ ತಲುಪುತಿದ್ದೆವು?’

ನಾನು ಸುಮ್ಮನೇ ಇದ್ದುದನ್ನು ನೋಡಿ ಅವನೇ ಮುಂದುವರೆಸಿದ - ‘ನೋಡೋ, ನಮ್ಮ ದೇಶದಲ್ಲಿ ವರ್ಷಕ್ಕೆ ಐನೂರಕ್ಕಿಂತಲೂ ಹೆಚ್ಚು ಸಿನಿಮಾ ತಯಾರಿಸುತ್ತೇವೆ, ಅದರ ಬಗ್ಗೆ ಅಭಿಮಾನ, ಕಾಳಜಿ ನಮಗಿಲ್ಲ. ನಮ್ಮ ದಾಸ ಮನೋಭಾವನೆಗೆ ಇದಕ್ಕಿಂತ ಮತ್ತೊಂದು ನಿರೂಪಣೆ ಬೇಕೆ? ನಮ್ಮ ಬೆಂಗಳೂರಿನ ಗಾಂಧೀನಗರವೇ ನಮಗ್ಯಾಕೆ ಅಪ್ಯಾಯಮಾನ ಆಗುವುದಿಲ್ಲ ? ಅದನ್ನು ಇವರ ಶೈಲಿಯಲ್ಲಿ ಸ್ಯಾಂಡಲ್‌ವುಡ್‌ ಅಂತ ಕರೆದಾಗಲೇ ನಮಗೆ ಸಮಾಧಾನವಾಗಬೇಕೆ? ಇವರಲ್ಲಿನ ಒಳ್ಳೆಯದನ್ನು ಖಂಡಿತ ಕಲಿಯೋಣ, ನಾನು ಅದಕ್ಕೆ ಬೇಡ ಅನ್ನುತ್ತಿಲ್ಲ, ಆದರೆ ಇವರನ್ನು ಅನುಕರಿಸೋ ನೆಪದಲ್ಲಿ ನಮ್ಮತನವನ್ನೇ ಮಾರಿಕೊಳ್ಳುತ್ತಿದ್ದೇವಲ್ಲಾ, ಅದು ತುಂಬಾ ಹೇಸಿಗೆಯ ವಿಷಯ’ ಅಂದ. ಸಧ್ಯ! ಅವನೇ ಒಂದು ಕನ್‌ಕ್ಲೂಷನ್‌ಗೆ ಬಂದ ಎಂದು ಸುಮ್ಮನಾಗಲು ತೊಡಗಿದ ನನ್ನನ್ನ ದುರುಗುಟ್ಟಿ ನೋಡಿದ.

ನಾನು ‘ಅದೆಲ್ಲಾ ಮಾರ್ಕೆಟ್ಟಿಂಗ್‌ ಟೆಕ್‌ನೀಕು ಕಣಯ್ಯಾ, ಸಿಂಪಲ್‌ ಆಗಿ ಗಾಂಧೀನಗರ ಅಂದ್ರೆ ಯಾರಿಗೂ ರುಚಿಸೋಲ್ಲ...’ ಎಂದು ಹೇಳುತ್ತಿದ್ದಂತೆಯೇ ನನ್ನನ್ನು ಮಧ್ಯದಲ್ಲಿ ತಡೆದು "Marketing necessarily doesnt mean one should trash their values completely ತನ್ನ ಮೇಲಿನ ಅಮೇರಿಕಾದ ಇಂಗ್ಲಿಷ್‌ ಪ್ರಭಾವವನ್ನು ಸಾಬೀತುಪಡಿಸಿದ.

‘ತಿಂಡಿ ತರ್ತೀನಿ ತಡಿ’ ಎಂದು ನಾನು ಏಳುತ್ತಿದ್ದಂತೆ ಇವ ಟಿ.ವಿ. ಚಲಾಯಿಸಿದ, ಅದರಲ್ಲಿ ದರ್ಶನ್‌ ಟಿ.ವಿ.ಯ ವಾರದ ಕಾರ್ಯಕ್ರಮ ಬರುತ್ತಿತ್ತು. ‘ಥೂ ನಿಮ್ಮವ್ವನ್‌, ನೆಟ್ಟಗೆ ದರ್ಶನ್‌ ಅಂತ ಅನ್ರೋǚ, ಅದನ್ಯಾಕೆ ಡಾǚರ್ಶಾǚನ್‌ ಅಂತ ರಾಗ ಏಳೀತೀರಿ’ ಅಂತ ಸುಬ್ಬ ಕೂಗುತ್ತಿದ್ದುದು ಕೇಳಿ ಅಡುಗೆ ಮನೆಯಲ್ಲಿದ್ದ ನನಗೆ ನಗು ಬಂತು.

Post your Views

ಅಮೆ-ರಿ-ಕಾ-ದ-ಲ್ಲಿ ಸುಬ್ಬ-

ಎಲ್ಲಾ Flushing ಗಣೇಶನ ಮಹಿಮೆ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X