• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಜ್ರದಂತೆ ಹೊಳೆಯುವ ಗಾಜೋ ಅಥವಾ ಗಾಜಂತೆ ಹೊಳೆಯುವ ವಜ್ರವೋ?

By Staff
|

* ಎಂ.ಆರ್‌. ದತ್ತಾತ್ರಿ, ಸನ್ನಿವೇಲ್‌, ಯು.ಎಸ್‌.ಎ

M. R. Dattatri, The Authorಆಲ್ಟ್‌ಸೈಮರ್ಸ್‌ ಬಹಳ ಭೀಕರವಾದ ರೋಗ. ಮೆದುಳಿಗೆ ತಗುಲುವ ಈ ರೋಗ ತನ್ನ ಇನ್ನೂ ಅನೇಕ ಗುಣಲಕ್ಷಣಗಳ ಜೊತೆಗೆ ರೋಗಿಯ ನೆನಪಿನ ಶಕ್ತಿಯ ಜೊತೆಗೆ ಆಟವಾಡುತ್ತದೆ. ಹಳೆಯ ನೆನಪುಗಳಿರುತ್ತವೆ, ಆದರೆ ಹೊಸ ಘಟನೆಗಳು ಮರೆತುಹೋಗುತ್ತವೆ. ಬೆಳಗ್ಗೆ ಭೇಟಿಯಾದವರು ಮಧ್ಯಾಹ್ನದ ಹೊತ್ತಿಗೆ ಹೊಸಬರಾಗಿ ಕಾಣುತ್ತಾರೆ. ಬೆಳಗ್ಗೆ ಏನು ತಿಂಡಿ ತಿಂದೆ ಎನ್ನುವುದು, ಯಾರೊಟ್ಟಿಗೆ ಮಾತನಾಡಿದೆ ಎನ್ನುವುದು ಸಂಜೆಯ ಹೊತ್ತಿಗೆ ಸಂಪೂರ್ಣವಾಗಿ ಮೆದುಳಿನಿಂದ ಅಳಿಸಿಹೋಗಿರುತ್ತದೆ.

ಅಮೆರಿಕಾದ ಅಯೋವಾ ರಾಜ್ಯದ ಡೆವನ್‌ಪೋರ್ಟ್‌ ಎಂಬ ಊರಿನಲ್ಲಿ ಈ ರೀತಿಯ ಆಲ್ಟ್‌ಸೈಮರ್ಸ್‌ ರೋಗದಿಂದ ನರಳುವವರಿಗಾಗಿಯೇ ಒಂದು ಗೃಹ ಸಮುಚ್ಛಯವಿದೆ.

ಒಂದು ರೀತಿಯಲ್ಲಿ ಹಾಸ್ಟೆಲ್‌ಗಳ ತರ ಎಂದುಕೊಳ್ಳಿ. ಅದನ್ನು ನೋಡಿಕೊಳ್ಳಲು ಜೆಸ್ಸಿಕಾ ಎಂಬ ಹುಡುಗಿ. ಚ್ಯೂಯಿಂಗ್‌ಗಮ್‌ ಜಗಿಯುತ್ತಾ ಓಡಾಡುವ ಅವಳ ಜವಾಬ್ದಾರಿಗಳು ಹಲವಾರು. ಎಲ್ಲವನ್ನೂ ಮರೆಸುವ ರೋಗ ತಮ್ಮನ್ನು ನೋಡಿಕೊಳ್ಳುತ್ತಿರುವ ಈ ಹುಡುಗಿಯನ್ನೂ ಮರೆಯುವಂತೆ ಮಾಡಿದ್ದಿದೆ ಅಲ್ಲಿಯ ಆಲ್ಟ್‌ಸೈಮರ್ಸ್‌ ರೋಗ ಪೀಡಿತ ನಿವಾಸಿಗಳಲ್ಲಿ. ಹಾಗಾಗಿ ಜೆಸ್ಸಿಕಾ ಪಕ್ಕದಲ್ಲೇ ನಿಂತಿದ್ದರೂ ಸಹಾಯಕ್ಕಾಗಿ ಯಾರನ್ನು ಕೂಗಬೇಕೆಂಬುದು ತಿಳಿಯದೆ ಭ್ರಾಂತರಾಗುವವರನ್ನು ತಾನಾಗಿಯೇ ಮಾತನಾಡಿಸಿ ಅವರ ಬೇಕು ಬೇಡಗಳನ್ನು ತಿಳಿಯಬೇಕು.

ಅವರೊಡನೆಯೇ ದಿನ ಪೂರ್ತಿ ಬೆರೆತಿರುವ ಹುಡುಗಿಗೆ ತನಗೆ ಅನ್ನದಾತರಾದ ಮತ್ತು ಮಾರಣಾಂತಿಕ ರೋಗದಿಂದ ಸಂಕಟ ಪಡುತ್ತಿರುವ ಇವರಿಗೆ ಬಹಳ ಸಂತೋಷ ಆಗುವಂತಹದ್ದೇನಾದರೂ ಮಾಡಬೇಕೆನ್ನಿಸಿತು. ಸಹಾಯ ಮಾಡುವ ಸಂದರ್ಭಗಳಲ್ಲಿ ಅವರನ್ನು ವಿಚಾರಿಸಿದಳು. ‘ನಿಮಗೆ ಅತಿ ಸಂತೋಷ ನೀಡುವ ಘಟನೆಯಾವುದು?’ ಅಥವಾ ‘ನಿಮ್ಮ ಮನವನ್ನು ರಂಜಿಸಲು ಏನನ್ನು ಮಾಡಬೇಕು?’. ಆಶ್ಚರ್ಯವೆನ್ನುವಂತೆ ಬಹುತೇಕ ಒಂದೇ ತರದ ಉತ್ತರ ಬಂತು. ಒಂದು ಮದುವೆಯನ್ನು ನೋಡಬೇಕು! ಹೆಣ್ಣು ಹೀಗೆ ಹೀಗೆಯೇ ಅಲಂಕೃತಳಾಗಿರಬೇಕು, ಮದುವೆಯ ಕೇಕ್‌ ಹೀಗೆ ಹೀಗೆಯೇ ಇರಬೇಕು, ಮದುವೆಯ ನಂತರ ನವ ದಂಪತಿಗಳ ಜೊತೆ ನಾವೂ ನರ್ತಿಸಬೇಕು, ಅವರ ಹನಿಮೂನ್‌ನ ಕಾರನ್ನು ನಾವು ಶೃಂಗರಿಸಬೇಕು.... ಚಿಗುರುಗಳು ಮೂಡದ ನೆನಪಿನ ವೃಕ್ಷದಲ್ಲಿ ಹಣ್ಣೆಲೆಗಳ ಮರ್ಮರ! ಜೆಸ್ಸಿಕಾ ಬಹಳ ಯೋಚಿಸಿದಳು. ರೋಗಿಗಳ ಮಧ್ಯೆ ಅವರು ಹೇಳಿದಂತೆ ಮದುವೆಯಾಗಲು ಯಾರು ತಾನೆ ಒಪ್ಪುತ್ತಾರೆ?

ಕಡೆಗೆ ತನ್ನ ಉಳಿತಾಯದ ಒಂದಂಶವನ್ನು ಖರ್ಚು ಮಾಡಿ ವಧು-ವರ ಮತ್ತು ಮದುವೆಯ ಸೂತ್ರಧಾರರನ್ನು ‘ತಯ್ಯಾರು’ ಮಾಡಿದಳು, ಎಲ್ಲರೂ ಚೆನ್ನಾಗಿ ನಾಟಕ ಮಾಡುವವರೇ. ಮದುವೆ ವಿಜೃಂಭಣೆಯಿಂದ ನಡೆದು ಹೋಯಿತು. ಆಲ್ಟ್‌ಸೈಮರ್ಸ್‌ ರೋಗಿಗಳು ಬಹಳ ಸಂತಸಪಟ್ಟರು. ನಾವು ಹೇಳಿದಂತೆಯೇ ವಧು ರೂಪಗೊಂಡಿದ್ದಾಳೆ!

ನಾವು ಬಯಸಿದಂತೆಯೇ ಕೇಕ್‌ ತಯಾರಾಗಿದೆ! ಮದುವೆ ಎಂದರೆ ಹೇಗಿರಬೇಕು ಎಂದುಕೊಂಡಿದ್ದೆನೋ ಅಂತಹ ಮದುವೆಯೇ ಇದು. ಅವರ್ಯಾರಿಗೂ ಇದು ನಾಟಕದ ಮದುವೆ ಎನ್ನುವ ವಿಚಾರ ಕೊನೆಯ ತನಕವೂ ತಲೆಗೆ ಹೊಕ್ಕಲಿಲ್ಲ.

‘ದಿಸ್‌ ಅಮೆರಿಕನ್‌ ಲೈಫ್‌’ ಕಾರ್ಯಕ್ರಮಕ್ಕಾಗಿ ರೇಡಿಯೋ ಸಂದರ್ಶಕನೊಬ್ಬ ಜೆಸ್ಸಿಕಾಳನ್ನು ಕೇಳಿದ- ‘ಬೆಳಗ್ಗೆ ನಡೆದದ್ದು ಸಂಜೆಯ ಹೊತ್ತಿಗೆ ಮರೆತುಹೋಗುವ ಆಲ್ಟ್‌ಸೈಮರ್ಸ್‌ ರೋಗಿಗಳಿಗೆ ಈ ಮದುವೆಯನ್ನು ನಡೆಸುವ ಅಗತ್ಯವೇನಿತ್ತು?’

‘ಭೀಕರ ರೋಗದಿಂದ ಜರ್ಝರಿತರಾಗಿ ಸಾವನ್ನು ಪ್ರತಿದಿನವೂ ಎದುರು ನೋಡುತ್ತಿರುವ ರೋಗಿಗಳ ಕೆಲವು ನಿಮಿಷಗಳ ಸಂತೋಷಕ್ಕಾಗಿ’ ಎಂದಳು ಜೆಸ್ಸಿಕಾ.

ಸಂದರ್ಶಕ ಮತ್ತೊಂದು ಪ್ರಶ್ನೆ ಕೇಳಿದ- ‘ಹೀಗೆ ನಾಟಕದ ಮದುವೆ ಮಾಡಿ ನೀನು ಅವರನ್ನು ಮೋಸ ಮಾಡಿದಂತಾಗಲಿಲ್ಲವೇ?’. ಜೆಸ್ಸಿಕಾ ತಡವರಿಸಲಿಲ್ಲ. ‘ಇಲ್ಲ, ಅವರ ಅಭಿಲಾಷೆಯನ್ನು ತಿಳಿದೂ, ಪೂರೈಸುವ ಮಾರ್ಗಗಳಿದ್ದೂ, ಅದನ್ನು ಪೂರೈಸದಿದ್ದರೆ ಅದು ಮೋಸ ಮಾಡಿದ ಹಾಗೆ, ಇದಲ್ಲ’.

ಮೋಸ ಯಾವುದು, ಯಾವುದಲ್ಲ ? ಸತ್ಯ, ಅಸತ್ಯಗಳು ಕಬ್ಬಡ್ಡಿಯ ಅಂಕಣದಂತೆ ಎದುರು ಬದುರು ಗುಂಪಿನಲ್ಲಿ ನಿಂತು ಸುಣ್ಣದ ಪುಡಿಯಲ್ಲಿ ಮಧ್ಯೆ ಸ್ಪಷ್ಟವಾದ ಗೆರೆಯನ್ನು ಎಳೆದಿರುತ್ತವಾ? ಸಂತೋಷ ಮತ್ತು ಮೌಲ್ಯಗಳ ಸಂಬಂಧವೇನು? ಬೇರೆಯವರ ಸಂತೋಷಕ್ಕಾಗಿ ಮೌಲ್ಯಗಳೊಡನೆ ಸಂಧಾನ ಮಾಡಿಕೊಳ್ಳಬೇಕೆ ? ಸಮಾಜದ ಮೌಲ್ಯಗಳ ಗಡಿಗಳನ್ನು ದಾಟಲೇ ಬಾರದೆ ಅಥವಾ ಮಾನವೀಯತೆಯನ್ನು ಅಡ್ಡ ಹಿಡಿದು ಎಲ್ಲಿ ಹೆಜ್ಜೆ ಹಾಕುತ್ತಿದ್ದೇವೆಂದು ತಿಳಿಯದವರಂತೆ ಕಬ್ಬಡ್ಡಿಯ ಅಂಕಣದಲ್ಲಿ ಎದುರು ಬದಿಗೆ ಹೋಗಿ ಬಿಡಬಹುದೇ ?

ಅಲ್ಲಿ ಹಾಗಾದರೆ ಇಲ್ಲಿ ಸಕಲೇಶಪುರದಲ್ಲಿ ...

ಗಂಡನ ಪೆನ್ಷನ್‌ ದುಡ್ಡನ್ನು ಪುಟ್ಟಜ್ಜಿ ತೆಗೆದುಕೊಳ್ಳಲು ಪ್ರಾರಂಭಿಸಿ ಇಪ್ಪತ್ತೈದು ವರ್ಷಗಳಾದವು. ಅವರು ಸಂಬಳ ತೆಗೆದುಕೊಂಡಿದ್ದಕ್ಕಿಂಥಾ ಪುಟ್ಟಜ್ಜಿ ಅವರ ಕೆಲಸದ ಆಧಾರದ ಮೇಲೆ ಪೆನ್ಷನ್‌ ಜಾಸ್ತಿ ತೆಗೆದುಕೊಂಡಳು ಎಂದು ಮೊಮ್ಮಕ್ಕಳು, ಮರಿಮಕ್ಕಳು ಅಜ್ಜಿಯನ್ನು ಕಿಚಾಯಿಸುತ್ತಿರುತ್ತಾರೆ. ಪುಟ್ಟಜ್ಜಿಗೆ ತೊಂಬತ್ತಕ್ಕೆ ಹತ್ತಿರ. ಕಣ್ಣು ಬಹಳಷ್ಟು ಮರೆಮರೆ. ಬೆನ್ನು ಪೂರ್ತಿ ಬಾಗಿ ಹೋಗಿದೆ. ಕೊನೆಯ ಮಗ ಅಪ್ಪಣ್ಣನ ಜೊತೆಗಿದ್ದಾರೆ. ಅಪ್ಪಣ್ಣನಿಗೆ ತಾಯಿಯ ಮೇಲೆ ಬಹಳ ಪ್ರೀತಿ. ಚೆನ್ನಾಗಿ ನೋಡಿಕೊಳ್ಳುತ್ತಾನೆ. ಪುಟ್ಟಜ್ಜಿ ಬಹಳ ಸೂಕ್ಷ್ಮ ಮನಸ್ಸಿನವಳು. ಮಹಾ ಸ್ವಾಭಿಮಾನಿ.

ಅಪ್ಪಣ್ಣನಿಗೆ ಭಾರವಾಗದಂತೆ ಬದುಕಬೇಕೆಂಬುದು ಅವಳ ಇಚ್ಛೆ . ಪ್ರತಿ ತಿಂಗಳೂ ಮೊದಲ ವಾರದಲ್ಲಿ ಬರುವ ಪೆನ್ಷನ್‌ ಹಣವನ್ನು ತಾನೇ ಕೈಯಾರೆ ಮಗನಿಗೆ ಒಪ್ಪಿಸಿದ ಮೇಲೆ ಮನಸ್ಸಿಗೆ ನಿರಾಳ. ಅದರಲ್ಲಿ ಬರುವ ಸಣ್ಣ ಮೊತ್ತದಿಂದ ತನ್ನ ಖರ್ಚುಗಳೆಲ್ಲವೂ ಯಾವ ರೀತಿಯಲ್ಲೂ ತೂಗಲಾಗವು ಎಂದು ಪುಟ್ಟಜ್ಜಿಗೆ ಗೊತ್ತು. ಆದರೂ ಈ ತಿಂಗಳ ಪೆನ್ಷನ್‌ ಹಣವನ್ನು ಕೊಟ್ಟರೆ 30 ದಿನಗಳಿಗೆ ಋಣಮುಕ್ತಳಾದೆ ಎನ್ನುವ ಒಂದು ರೀತಿಯ ಒಳತೃಪ್ತಿ ಪುಟ್ಟಜ್ಜಿಗೆ.

ಕಾಫಿ ಪ್ಲಾಂಟರ್‌ ಆಗಿರುವ ಅಪ್ಪಣ್ಣನಿಗೆ ಪುಟ್ಟಜ್ಜಿಯ ಹಣ ಬೇಕಿಲ್ಲ. ಅದು ಏನೇನೂ ಅಲ್ಲ ಅವನಿಗೆ. ಆದರೂ ತಾಯಿಯ ಮನಸ್ಸಿನ ಸೂಕ್ಷ್ಮಗಳನ್ನು ಅರಿತು ವಿನಮ್ರನಾಗಿ ಹಣವನ್ನು ಸ್ವೀಕರಿಸುತ್ತಾನೆ. ಈ ಪೆನ್ಷನ್‌ ಇಪ್ಪತ್ತೈದು ವರ್ಷಗಳಿಂದ ಮರೆಯಾದ ಗಂಡನ ಕೊಂಡಿಯಾಗಿ ಪುಟ್ಟಜ್ಜಿಯಲ್ಲಿ ಉಳಿದಿರುವುದನ್ನು ಗುರುತಿಸಿದ್ದಾನೆ. ಹಾಗಾಗಿ ಅದನ್ನು ಗೌರವಿಸುತ್ತಾನೆ.

ಒಮ್ಮೆ ಯಾವುದೋ ಕಾರಣಗಳಿಗಾಗಿ ಪುಟ್ಟಜ್ಜಿಯ ಪೆನ್ಷನ್‌ ತಿಂಗಳ ಎರಡನೇ ವಾರ ಕಳೆದರೂ ಬರಲಿಲ್ಲ. ಪುಟ್ಟಜ್ಜಿಯ ತಳಮಳ ಹೇಳತೀರದು. ಮಬ್ಬು ದೃಷ್ಟಿ, ಮಂದಗಿವಿ ಮಧ್ಯಾಹ್ನ ಹನ್ನೆರಡಕ್ಕೆ ಬರುವ ಪೋಸ್ಟ್‌ಮ್ಯಾನನ ಸುತ್ತಮುತ್ತವೇ. ಟಪ್‌ ಎಂದು ಏನೇ ಶಬ್ದವಾದರೂ ‘ಇವತ್ತಿನ ಟಪ್ಪಾಲು ಬಂತೇ’ ಎಂದು ಆಸೆಯಿಂದ ಕೇಳುತ್ತಾಳೆ.

ನಿನ್ನ ಪೆನ್ಷನ್‌ನ ಹಣ ಬರಲಿಲ್ಲ ಎಂದು ಅಂಚೆಯವನು ನಕ್ಕರೆ ಅವಳ ಮನಸ್ಸು ಮತ್ತು ಮುಖಗಳು ಬಾಡಿಹೋಗುತ್ತವೆ. ಮೌನಿಯಾಗುತ್ತಾಳೆ. ಅಮ್ಮನ ಈ ತಳಮಳವನ್ನು ನೋಡಲಾಗದೆ ಅಪ್ಪಣ್ಣ ಸಕಲೇಶಪುರದಲ್ಲಿ ಸಂಬಂಧಪಟ್ಟ ಕಛೇರಿಗೂ ಹೋಗಿ ವಿಚಾರಿಸಿ ಗುಮಾಸ್ತರಿಗೆ ಕೈಬೆಚ್ಚಗೆ ಮಾಡಿ ಎಲ್ಲಾ ಸರಿ ಮಾಡಿಸಿ ಬಂದ. ‘ನೀವು ಹೋಗಿ, ನಾಳೆ ನಾಡಿದ್ದರಲ್ಲೇ ಹಣ ತಲುಪುತ್ತದೆ’ ಎಂದರು.

ಆದರೆ ಪೆನ್ಶನ್‌ ಬಂತೇ ?

ತಿಂಗಳ ನಾಲ್ಕನೇ ವಾರ ಮುಗಿದು ನೆತ್ತಿಯಲ್ಲಿ ಉರಿ ಉರಿಯುವ ಬೇಸಿಗೆಯ ಮತ್ತೊಂದು ತಿಂಗಳು ಪ್ರಾರಂಭವಾದರೂ ಅಂಚೆಯವನು ಸಿಹಿ ಸುದ್ದಿಯನ್ನು ತರಲಿಲ್ಲ. ಪುಟ್ಟಜ್ಜಿ ಬಹಳ ಹತಾಶಳಾದಳು. ಊಟ ತಿಂಡಿ ಏನೂ ಬೇಕಿಲ್ಲ. ಯಾರೊಡನೆಯೂ ಹೇಳುವಂತಿಲ್ಲ, ಹಣಕ್ಕಾಗಿ ಪುಟ್ಟಜ್ಜಿ ಹೀಗೆ ಮಾಡುತ್ತಿದ್ದಾಳೆ ಅಂದಾರು! ವೃದ್ಧಾಪ್ಯದ ಆರಂಭದಲ್ಲಿರುವ ಅಪ್ಪಣ್ಣ ಕೂಡ ಅಮ್ಮನ ಈ ಮುಜುಗರವನ್ನು ಅಸಹಾಯಕನಾಗಿ ನೋಡುತ್ತಿದ್ದಾನೆ. ಅವಳು ಪರಭಾರವಾದೆ ಎನ್ನುವಂತೆ ಒಳಗೊಳಗೇ ಕೊರಗುವುದ ಕಂಡು ತಾನೂ ಸಂಕಟಪಡುತ್ತಾನೆ.

ಹಿತ್ತಲಿಗೆ ಹೋದವಳು ಬಚ್ಚಲನ್ನು ದಾಟಿ ನಿಧಾನವಾಗಿ ಒಳಗೆ ಬರುತ್ತಿದ್ದವಳಿಗೆ ಅಪ್ಪಣ್ಣ ಎದುರಾದ. ‘ನಿನ್ನ ಹಣ ಬಂತು ನೋಡಿಲ್ಲಿ’ ಎಂದ. ಪುಟ್ಟಜ್ಜಿಯ ಮುಖ ಅರಳಿತು. ‘ಪೋಸ್ಟ್‌ಮ್ಯಾನ್‌ ನಿನಗೋಸ್ಕರ ಇಷ್ಟು ಹೊತ್ತು ಕಾದ. ಕಡೆಗೆ ನಾನೇ ರುಜು ಮಾಡಿ ತೆಗೆದುಕೊಂಡೆ!’

ಕೊಡಿಲ್ಲಿ ಎಂದು ಪುಟ್ಟಜ್ಜಿ ಕೈ ಚಾಚಿತು. ಪ್ರತಿ ತಿಂಗಳು ಬರುವಂತಹದ್ದೇ! ತನ್ನಂತೆಯೇ ಬತ್ತಿಹೋದ ನೋಟುಗಳು! ಒಮ್ಮೆ ಸವರಿ ಅಪ್ಪಣ್ಣನಿಗೆ ಕೊಟ್ಟಿತು. ಅವತ್ತು ರಾತ್ರಿ ಪುಟ್ಟಜ್ಜಿ ನೆಮ್ಮದಿಯಿಂದ ಉಂಡು ನಿದ್ರೆ ಮಾಡಿದಳು.

ಧರ್ಮನಿಷ್ಠ ಮತ್ತು ಪ್ರಾಮಾಣಿಕನಾದ ಅಪ್ಪಣ್ಣನಿಗೆ ಅಂತಃರಂಗದಲ್ಲಿ ತಳಮಳ. ‘ಅಮ್ಮನಿಗೆ ಸುಳ್ಳು ಹೇಳಿದೆನಲ್ಲಾ’. ಮಗ ತಾಯಿಗೆ, ಅದೂ ಈ ವಯಸ್ಸಿನಲ್ಲಿ ಸುಳ್ಳು ಹೇಳಬಹುದೇ, ಮೋಸ ಮಾಡಬಹುದೇ?

ಲೋಕ ಪ್ರಸಿದ್ಧಿಯ ಬೆಳ್ಳಿ ಬೆಳಕಿಗೆ ಫಳಫಳನೆ ಹೊಳೆಯುವ ಸತ್ಯದ ಹಾದಿಯಲ್ಲಿ ನಿರಂತರವಾಗಿ ನಡೆದೆನೆಂಬ ಹೆಮ್ಮೆಯಾಂದಿಗೆ ಸುವರ್ಣ ಮುಕುಟಕ್ಕಾಗಿ ಜೋತುಬಿದ್ದು ‘ಅಶ್ವತ್ಥಾಮನೆಂಬ ಆನೆ ಸತ್ತಿದ್ದಾನೆ’ ಎನ್ನುವಲ್ಲಿ , ಕೃಷ್ಣನಿಂದ ಶಂಖವನ್ನು ಊದಿಸುವ ನಾಟಕವಾಡಿ ಸತ್ಯವಂತನೆಂಬ ಬಿರುಸು ಕಲ್ಲಿನಂತಹ ಬಿರುದಿನೊಂದಿಗೇ ಆನೆಯನ್ನು ಕೊಂದ ಪಾಪವನ್ನೂ ಸ್ವಆಯ್ಕೆಯಿಂದ ತಲೆಯ ಮೇಲೆ ಹೊತ್ತ ಧರ್ಮರಾಯ, ಜೆಸ್ಸಿಕಾ ಮತ್ತು ಅಪ್ಪಣ್ಣರ ಮುಂದೆ ಎತ್ತರವಾಗಿ ಕಾಣುತ್ತಾನೋ, ಕುಬ್ಜನಾಗೋ?

ರಾಜ ವಿಕ್ರಮಾದಿತ್ಯನ ಹೆಗಲನ್ನೇರಿದ ಬೇತಾಳ ಪ್ರಶ್ನಿಸುವಂತೆ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಅಯೋವಾದಲ್ಲಿ ಜೆಸ್ಸಿಕಾ ಮತ್ತು ಸಕಲೇಶಪುರದಲ್ಲಿ ಅಪ್ಪಣ್ಣ ತಮ್ಮನ್ನು ನಂಬಿದವರನ್ನು ಮೋಸಮಾಡಿದರೆ?

Post your Views

ಇದೇ ಲೇಖಕರ ಇತರ ಲೇಖನಗಳು

ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಕೃಷ್ಣನ ಕಂಡಿರೇನೆ?

ಕಾವ್ಯದಲ್ಲಿ ರೂಪಾಂತರದ ಸವಾಲುಗಳು

ರೇ ಎಂಬ ಮಾಂತ್ರಿಕ ಮತ್ತು ಪಥೇರ್‌ ಪಾಂಚಾಲಿ ಎಂಬ ಮಂತ್ರ

ಧರೆ ಹತ್ತಿ ಉರಿದೊಡೆ ನಿಲಬಹುದೆ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more