• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಜಿಪ್ಟ್‌ ಪ್ರವಾಸ ಕಥನ

By Staff
|

*ದಿನೇಶ್‌ ಮೆಹೆಂದಳೆ, ಟಬುಕ್‌,ಜೋರ್ಡಾನ್‌.

Pyramids on the plain vast groundಈಜಿಪ್ಟ್‌ನ್ನು ‘ನೈಲ್‌ ನದಿಯ ವರಪ್ರಸಾದ’ ಎನ್ನುತ್ತಾರೆ - ಏಳನೇ ತರಗತಿಯಲ್ಲಿದ್ದಾಗ ನಮಗೆ ಚರಿತ್ರೆ/ಭೂಗೋಲ ಅಧ್ಯಾಪಕರು ಹೇಳುತ್ತಿದ್ದುದನ್ನು ಪರೀಕ್ಷೆಯಲ್ಲಿ ‘ಬಿಟ್ಟ ಸ್ಥಳ ತುಂಬಿ’ ಪ್ರಶ್ನೆಗೆ ಉತ್ತರವಾಗಿ ನೆನಪಿಟ್ಟುಕೊಂಡಿದ್ದೆನೇ ವಿನಹ ನಾನೇ ಮುಂದೊಂದು ದಿನ ಈಜಿಪ್ಟ್‌ಗೆ ಪ್ರವಾಸ ಹೋಗುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಲ್ಲ.

ಈಜಿಪ್ಟ್‌ಗೆ ಪಕ್ಕದ ಜೋರ್ಡಾನ್‌ನಲ್ಲಿ ಉದ್ಯೋಗದಲ್ಲಿರುವ ನಾನು ಮೊನ್ನೆ ಅಕ್ಟೋಬರ್‌ದಲ್ಲಿ ಸಂಸಾರಸಮೇತ ‘ನಾಗರಿಕತೆಯ ಜನ್ಮಸ್ಥಳ’ಕ್ಕೆ, ಮಮ್ಮಿ-ಪಿರಮಿಡ್ಡು-ಫರೋವಾಗಳ ನಾಡಿಗೆ ಹತ್ತು ದಿನಗಳ ಪ್ರವಾಸ ಹೋಗಿ ಬಂದೆ. ಈಜಿಪ್ಟ್‌ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ - ‘ಅದ್ಭುತ’! ಅದು ಉತ್ಪ್ರೇಕ್ಷೆಯಲ್ಲ. ಏಕೆಂದರೆ ಪ್ರಪಂಚದ ಮಹಾ ಅದ್ಭುತಗಳ ಕೆಲವು ಪಟ್ಟಿಗಳಲ್ಲಿ ಈಜಿಪ್ಟ್‌ನ ಪಿರಮಿಡ್‌ಗಳೂ ಸೇರಿವೆ.

ಹೆಚ್ಚಿನವರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ - ಈಜಿಪ್ಟ್‌ ದೇಶವು ಎರಡು ಭೂಖಂಡಗಳಲ್ಲಿ ಪಸರಿಸಿದೆ! ಪೂರ್ವದ ಭಾಗವೆಲ್ಲ ಏಷ್ಯಾ ಖಂಡದಲ್ಲಿದ್ದರೆ ಮಧ್ಯ ಮತ್ತು ಪಶ್ಚಿಮಾರ್ಧ ಆಫ್ರಿಕಾ ಖಂಡದಲ್ಲಿದೆ. ಮೊಟ್ಟಮೊದಲಾಗಿ ನಾಗರಿಕತೆ ಇಲ್ಲೇ ಹುಟ್ಟಿದ್ದು ಎಂದು ಪ್ರತೀತಿ ಇರುವ ಈ ಪ್ರದೇಶ ಈಗ ಸಾಂಪ್ರದಾಯಿಕ ಮತ್ತು ಆಧುನಿಕ ಸಂಸ್ಕೃತಿ-ಜನಜೀವನ ಶೈಲಿಗಳ ಸಮ್ಮಿಳಿತವಾಗಿದೆ. ಆಫ್ರಿಕಾದ ಈಶಾನ್ಯ ತುದಿಯಲ್ಲಿರುವ ನಮಗೆ ಜೋರ್ಡಾನ್‌ನ ಟಬುಕ್‌ ಎಂಬಲ್ಲಿಂದ ಈಜಿಪ್ಟ್‌ ತಲುಪಲು ನಡುವೆ ಕೆಂಪುಸಮುದ್ರವನ್ನು ಸುಮಾರು ಮೂರುವರೆ ಗಂಟೆಯ ಹಡಗು ಪ್ರಯಾಣದಲ್ಲಿ ದಾಟಿದರಾಯಿತು!

ಕೈ ಬೀಸಿ ಕರೆದ ಕೈರೋ

ಕೈರೋ ಈಜಿಪ್ಟ್‌ನ ರಾಜಧಾನಿ. ಈಗ ಸುಮಾರು 17 ಮಿಲಿಯನ್‌ ಜನಸಂಖ್ಯೆಯಿರುವ ಈ ನಗರದಲ್ಲಿ, ಪುರಾತನ ನಾಗರಿಕತೆಯ ಹಲವು ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ಅವೆಲ್ಲ ಕನಿಷ್ಟವೆಂದರೂ ನಾಲ್ಕೈದು ಸಾವಿರ ವರ್ಷ ಇತಿಹಾಸವುಳ್ಳವು. ಅವುಗಳಲ್ಲೆಲ್ಲ ಪ್ರಮುಖವೆಂದರೆ, ಜಗದ್ವಿಖ್ಯಾತ ‘ಪಿರಮಿಡ್‌’ಗಳು. ದೈತ್ಯಗಾತ್ರದ ಈ ‘ಗೋರಿ’ಗಳು ನಿಜಕ್ಕೂ ಮೈನವಿರೇಳಿಸುತ್ತವೆ. ಅತಿದೊಡ್ಡ ಪಿರಮಿಡ್‌ನ ಅಡಿಪಾಯ 200 ಮೀಟರ್‌ ಭುಜ ಅಳತೆಯ ಚಚ್ಚೌಕ. ಎತ್ತರ 137 ಮೀಟರ್‌ (ಸುಮಾರು 35 ಮಹಡಿಗಳ ಕಟ್ಟಡದ ಎತ್ತರದಷ್ಟು)! ಪಿರಮಿಡ್‌ ರಚನೆಗೆ ಬಳಸಿದ ಪ್ರತಿಯಾಂದು ಕಲ್ಲು (ಇಟ್ಟಿಗೆ ಅನ್ನೋಣ) ಸುಮಾರು 5 ಅಡಿ ಎತ್ತರದ್ದು. ಒಂದೊಂದು ಪಿರಮಿಡ್‌ನ ರಚನೆಗೂ ಸುಮಾರು 20 ವರ್ಷಗಳು ತಗುಲಿವೆಯಂತೆ. ಈ ಎಲ್ಲ ಪಿರಮಿಡ್‌ಗಳು ಈಜಿಪ್ಟ್‌ನ ರಾಜಮನೆತನದವರ ಗೋರಿಗಳು. ರಾಜ ಸತ್ತಮೇಲೆ ಕಳೇಬರವನ್ನು ಸುಗಂಧದ್ರವ್ಯಗಳಿಂದ ಅಲಂಕರಿಸಿ, ರಾಜನಿಗೆ ಪ್ರಿಯವಾದ ವಸ್ತುಗಳನ್ನೆಲ್ಲ ಜೊತೆಗಿರಿಸಿ ನೆಲದಲ್ಲಿ ಹೂಳಿದ ಮೇಲೆ (ಇದನ್ನೇ ‘ಮಮ್ಮಿ’ ಎನ್ನುವುದು) ಅದರ ಮೇಲೆ ಪಿರಮಿಡ್‌ನ ರಚನೆ. ರಾಜ ಖ್ಯಾತನಾದಷ್ಟೂ ದೊಡ್ಡ ಗಾತ್ರದ ಪಿರಮಿಡ್‌ ಮೂಲಕ ಗೌರವ. ಕೈರೋ ಸುತ್ತಮುತ್ತಲೂ ಏನಿಲ್ಲೆಂದರೂ ನೂರು ಪಿರಮಿಡ್‌ಗಳಿವೆ.

ವಸ್ತು ಸಂಗ್ರಹಾಲಯದಲ್ಲಿ ಇತಿಹಾಸ ದರ್ಶನ

Dinesh Mehendale Familyಈಜಿಪ್ಟ್‌ ನ್ಯಾಷನಲ್‌ ಮ್ಯೂಸಿಯಂನಲ್ಲಿ ಈ ಪಿರಮಿಡ್‌ಗಳಿಂದ, ಗೋರಿಗಳಿಂದ, ದೇವಾಲಯಗಳಿಂದ ಉತ್ಖನನದ ವೇಳೆ ದೊರಕಿದ ಅಮೂಲ್ಯ ವಸ್ತುಗಳನ್ನೆಲ್ಲ ಸಂಗ್ರಹಿಸಿಟ್ಟಿದ್ದಾರೆ. ನಮ್ಮ-ನಿಮ್ಮ ಊಹೆಗೂ ನಿಲುಕದ ವಸ್ತುಗಳೆಲ್ಲ ಇಲ್ಲಿನ ಸಂಗ್ರಹದಲ್ಲಿವೆ. ವಿಗ್ರಹಗಳು, ಆಭರಣಗಳು, ನಕಾಶೆಗಳು, ‘ಮಮ್ಮಿ’ಕರಣದಲ್ಲಿ ಉಪಯೋಗಿಸುವ ಸ್ವರ್ಣಲೇಪಿತ ‘ಚೇಂಬರ್‌’ಗಳು, ಅತ್ಯಾಶ್ಚರ್ಯಕರ ರೀತಿಯಲ್ಲಿ ಜತನವಾಗಿರಿಸಿರುವ ಚಿತ್ರಕಲೆಗಳು, ಹಿರೋಗ್ಲಫಿಕ್‌ ಲಿಪಿಯಲ್ಲಿ ಬರವಣಿಗೆಗಳು, ರಾಜದರ್ಬಾರಿನ ಸಾಮಗ್ರಿಗಳು ... ಹೀಗೆ ನೋಡಿದಷ್ಟೂ ಮುಗಿಯದ ಸರಂಜಾಮುಗಳು. ಈ ಮ್ಯೂಸಿಯಂ ನೋಡಲು ಒಂದು ಇಡೀ ದಿನ ಬೇಕು!

ಕೈರೋದಲ್ಲಿ ನ ಇತರ ಆಕರ್ಷಣೆಗಳೆಂದರೆ ವಿವಿಧ ಮಸೀದಿಗಳು. ಮೊಹಮ್ಮದ್‌ ಆಲಿ ಮಸೀದಿ ಅವುಗಳಲ್ಲಿ ಪ್ರಸಿದ್ಧ. ಅದಲ್ಲದೆ ಕೆಲವು ಚರ್ಚ್‌ಗಳೂ, ’ಗೀಜಾ’ ಪ್ರಾಣಿಸಂಗ್ರಹಾಲಯ (ವಿಶೇಷವಾಗಿ ಮಕ್ಕಳಿಗೆ ಆಕರ್ಷಣೀಯ) ಮತ್ತು ಕೈರೋ ಟವರ್‌ ಇತ್ಯಾದಿ ಕೂಡ ಇವೆ. ಕೈರೋ ಟವರ್‌ ಮೇಲೆ ನಾವು ಹತ್ತಿದಾಗ ಇಡೀ ಕೈರೋ ನಗರದ ಸುಂದರ ವಿಹಂಗಮ ದೃಶ್ಯ ಕಾಣುತ್ತದೆ. ಶಾಪಿಂಗ್‌ ಸೆಂಟರ್‌ಗಳೂ ಕೈರೋ ನಗರದಲ್ಲಿ ತುಂಬ ಇವೆ. ಮುಖ್ಯವಾಗಿ ಪರ್ಫ್ಯೂಮ್‌, ಆಂಟಿಕ್‌ಗಳು, ಶಿಲಾವಿಗ್ರಹಗಳು ಮತ್ತು ‘ಪೆಪಿರಸ್‌’ ಕಾಗದಗಳು ಇಲ್ಲಿ ಮಾರಾಟವಾಗುತ್ತವೆ. ಹಳೇ ಕಾಲದಲ್ಲಿ ಪೆಪಿರಸ್‌ ಮರದಿಂದ ತಯಾರಿಸಿದ ಹಾಳೆ ಬರವಣಿಗೆಗೆ ಉಪಯೋಗಿಸಲ್ಪಡುತ್ತಿತ್ತು. ಅದನ್ನೇ ಪೆಪಿರಸ್‌ ಎನ್ನುವುದು ಮತ್ತು ಅದೇ ಇಂದಿನ ‘ಪೇಪರ್‌’ಗೆ ಮೂಲ. ಪೆಪಿರಸ್‌ ಮರದಿಂದ ಪೇಪರ್‌ ತಯಾರಿಸುವುದು ಹೇಗೆ ಎಂದು ವಿವರಿಸುವ ಪ್ರಾತ್ಯಕ್ಷಿಕೆಗಳೂ ನಮಗೆ ಇಷ್ಟವಾದುವು.

ನೈಲ್‌ ನದಿಯಲ್ಲಿ ದೋಣಿವಿಹಾರ

Height of the Piramid symbolizes Kings Fameನೈಲ್‌ ನದಿಯಲ್ಲಿ ರಾತ್ರಿಯ ವೇಳೆ ‘ಕ್ರೂಸ್‌’ (ದೋಣಿವಿಹಾರ)ದಲ್ಲಿ ಕೈರೋ ದರ್ಶನ ಕಾರ್ಯಕ್ರಮವಿರುತ್ತದೆ. ನದಿಯ ಗುಂಟ ಸಾಗಿ ಕೈರೋ ನಗರದ ರಾತ್ರಿಯ ನೋಟದ ಸವಿಯಂತೂ ನೋಡಿಯೇ ಆನಂದಿಸುವಂಥದ್ದು. ಕ್ರೂಸ್‌ನ ಹಡಗಲ್ಲೇ ಈಜಿಪ್ಟ್‌ನ ಪ್ರಖ್ಯಾತ ‘ಬೆಲ್ಲಿ ಡ್ಯಾನ್ಸ್‌’, ‘ಸುಮೊ ಡ್ಯಾನ್ಸ್‌’ ಇತ್ಯಾದಿ ಮನರಂಜನೆಯೂ ಇರುತ್ತದೆಯಲ್ಲದೆ ಬಫೆ ಡಿನ್ನರ್‌ ಕೂಡ ಸೇರಿಸಿಯೇ ಟಿಕೇಟ್‌ ಚಾರ್ಜ್‌ ಮಾಡಿರುತ್ತಾರೆ. ಹಾಗೆಯೇ ಇನ್ನೊಂದು ದಿನ ನಾವು ನೈಲ್‌ ನದಿಯ ಮೂಲಕವೇ, ಆದರೆ ನಾಡದೋಣಿಗಳಲ್ಲಿ ಹತ್ತಿರದ ದ್ವೀಪಗಳಿಗೆ ಅರ್ಧದಿನದ ಟೂರ್‌ ಹೋಗಿದ್ದೆವು. ಅದು ಕೂಡ ತುಂಬ ಚೆನ್ನಾಗಿತ್ತು.

ಇದೇ ನೈಲ್‌ ನದಿ ದಕ್ಷಿಣ ದಿಕ್ಕಿಗೆ ಮುಂದುವರೆದು ಸುಮಾರು ಒಂದು ಸಾವಿರ ಕಿ.ಮೀ ದೂರದಲ್ಲಿ, ಸೂಡಾನ್‌ ದೇಶದ ಗಡಿಯ ಸಮೀಪ ಅಸ್ವಾನ್‌ ಎಂಬ ಪಟ್ಟಣದಲ್ಲಿ ನದಿಗೆ ‘ಹೈ’ ಅಣೆಕಟ್ಟು ಕಟ್ಟಿದ್ದಾರೆ. ಭಾರೀ ಗಾತ್ರದ ಜಲಾಶಯ ಮತ್ತು ಹಿನ್ನೀರು ಈ ಪ್ರದೇಶದಲ್ಲಿದೆ. ಈ ಜಲಾಶಯದಿಂದ ಮುಳುಗಡೆಯಾಗಬಹುದೆಂದು ದೇವಾಲಯವೊಂದನ್ನು ಪ್ರತಿ-ಕಲ್ಲಿಗೆ-ಕಲ್ಲಿನಂತೆ ಸ್ಥಳಾಂತರ ಮಾಡಿದ್ದಾರಂತೆ.

ಅಸ್ವಾನ್‌ ಪಟ್ಟಣದಿಂದ ಲಸ್ಕರ್‌ಗೆ ನೈಲ್‌ ನದಿಯ ಮೂಲಕ!

ಅಸ್ವಾನ್‌ ಪಟ್ಟಣದಿಂದ ಉತ್ತರಾಭಿಮುಖವಾಗಿ ನೈಲ್‌ ನದಿಯ ಮೂಲಕ ಲಕ್ಸರ್‌ ಎಂಬ ಪಟ್ಟಣವನ್ನು ಸೇರುವ ‘ಪಂಚತಾರಾ’ ಹಡಗಿನಲ್ಲಿ ಎರಡು ದಿನ-ಎರಡು ರಾತ್ರಿ ಅವಧಿಯ ಕ್ರೂಸ್‌ ನಮ್ಮ ಮನಸ್ಸಲ್ಲಿ ಬಹುಕಾಲ ನೆನಪುಳಿಯುತ್ತದೆ. ಹಡಗಿನ ತುಂಬೆಲ್ಲ ನಮ್ಮಂತೆ ಪ್ರವಾಸಿಗಳು. ನೈಲ್‌ ನದಿಯೇ ನೋಡುವುದಕ್ಕೊಂದು ಚಂದ. ಇಡೀ ಮರುಭೂಮಿಯಲ್ಲೊಂದು ನದಿಯನ್ನು ಊಹಿಸಿ! ಕೆಲವು ಕಡೆಗಳಲ್ಲಿ ನೈಲ್‌ ಸುಮಾರು 200-300 ಮೀಟರ್‌ಗಳಷ್ಟು ಅಗಲವಾಗಿ ಹರಿಯುತ್ತದೆ. ಅನೇಕ ದೊಡ್ಡ ದೊಡ್ಡ ಹಡಗುಗಳಿಗೆ ಏಕಕಾಲದಲ್ಲಿ ರಾಜಮಾರ್ಗವಾಗುವ ಸಾಮರ್ಥ್ಯ ಈ ನದಿಗಿದೆ. ಮರುಭೂಮಿಯಾದರೂ ಕೆಲವು ಪ್ರದೇಶಗಳಲ್ಲಿ ಸಸ್ಯಶ್ಯಾಮಲೆಯಾದ ಭೂತಾಯಿ ಕಾಣುತ್ತಾಳೆ. ದಾರಿಯುದ್ದಕ್ಕೂ ಈ ಪ್ರವಾಸಿ ಹಡಗು ಅನೇಕ ಕಡೆಗಳಲ್ಲಿ ದೇವಾಲಯ, ಮಸೀದಿ ಮತ್ತಿತರ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಕ್ಕಾಗಿ ನಿಲ್ಲುತ್ತದೆ. ಹಡಗಿನ ಅತಿ ಮೇಲಿನ ಮಾಳಿಗೆಗೆ ಹೋಗಿ ನದೀತೀರದ ಹಳ್ಳಿ-ಪಟ್ಟಣ-ಕಾಡು-ಮೇಡನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

one of the seven Wonders of the Worldಲಕ್ಸರ್‌ ಪಟ್ಟಣ ಕೈರೋಗಿಂತ ತುಂಬ ಸಣ್ಣದು. ಆದರೂ ಒಂದು ಕಾಲಕ್ಕೆ ಈಜಿಪ್ಟ್‌ನ ರಾಜಧಾನಿಯಾಗಿತ್ತಂತೆ. ಲಕ್ಸರ್‌ನ ಪ್ರಮುಖ ಆಕರ್ಷಣೆಗಳೆಂದರೆ ‘ವ್ಯಾಲೀ ಆಫ್‌ ಕಿಂಗ್ಸ್‌ ಏಂಡ್‌ ಕ್ವೀನ್ಸ್‌’. ಇದೊಂದು ಸುಂದರ ಕಣಿವೆ ಪ್ರದೇಶ. ಅಲ್ಲೆಲ್ಲ ರಾಜ-ರಾಣಿಯರ ಗೋರಿಗಳಿವೆ. ಪರ್ವತ ಪ್ರದೇಶದಲ್ಲಿ ಸುರಂಗಗಳನ್ನು ಕೊರೆದು ಈ ಗೋರಿಗಳನ್ನು ಪತ್ತೆಹಚ್ಚಲಾಗಿದೆ. ಗೋರಿಗಳಲ್ಲಿರುವ ಮಮ್ಮಿಗಳನ್ನು ಮ್ಯೂಸಿಯಂಗೆ ಟ್ರಾನ್ಸ್‌ಫರ್‌ ಮಾಡಿದ್ದಾರೆ. ಈ ಗೋರಿಗಳಲ್ಲೂ ಕೆಲವು ಪೈಂಟಿಂಗ್‌ಗಳು, ಭಿತ್ತಿಚಿತ್ರಗಳು ನಯನಮನೋಹರವಾಗಿವೆ. ಕರ್ನಾಕ್‌ ಮತ್ತು ಲಕ್ಸರ್‌ ದೇವಾಲಯಗಳೆಂದು ಪ್ರಖ್ಯಾತವಾದ ಕಟ್ಟಡಗಳೂ ಪ್ರವಾಸಿಗರ ಮೆಚ್ಚುಗೆ ಪಡೆಯುತ್ತವೆ. ಇವೆಲ್ಲ ಸುಮಾರು ನಾಲ್ಕೈದು ಸಾವಿರ ವರ್ಷ ಹಳೆಯವು. ಶತಶತಮಾನಗಳ ಕಾಲ ಪ್ರಕೃತಿಗೆ ಮೈಯಾಡ್ಡಿ ನಿಂತಿರುವುದರಿಂದ ಸಾಕಷ್ಟು ಶಿಥಿಲಗೊಂಡಿವೆ. ಒಬ್ಬ ಭಾರತೀಯನಾಗಿ ನನಗೆ ಈ ಕಟ್ಟಡಗಳ ವಿನ್ಯಾಸ ಅಷ್ಟೇನೂ ಆಕರ್ಷಕವಾಗಿ ಕಾಣದಿದ್ದರೂ (ನಮ್ಮ ಅಜಂತಾ, ಎಲ್ಲೋರ, ಬೇಲೂರು, ಹಳೆಬೀಡುಗಳಿಗೆ ಹೋಲಿಸಿದರೆ) ಅವುಗಳ ಗಾತ್ರ ಅಗಾಧವೇ. ಹೀಗೆಯೇ ಈಜಿಪ್ಟ್‌ನಲ್ಲಿ ಸಿನಾಯ್‌ ಮರುಭೂಮಿ, ಅಲೆಕ್ಸಾಂಡ್ರಿಯಾ ಇತ್ಯಾದಿ ಪ್ರವಾಸಿ ತಾಣಗಳೂ ಇವೆ. ಕೆಂಪುಸಮುದ್ರದ ಕರಾವಳಿಗುಂಟ ಹರ್‌ಘಡಾ ಮತ್ತಿತರ ಆಕರ್ಷಣೆಗಳೂ ಇವೆ. ನಮ್ಮ ಪ್ರವಾಸದಲ್ಲಿ ಇವು ಸೇರಿರಲಿಲ್ಲ.

ದಾಳಿಕೋರರ ದುಷ್ಕೃತ್ಯಗಳಿಗೆ ಮೂಕಸಾಕ್ಷಿ

ಈಜಿಪ್ಟ್‌ನ ಇತಿಹಾಸ ವರ್ಣರಂಜಿತ. ಚರಿತ್ರೆಯುದ್ದಕ್ಕೂ ಅನೇಕ ದಾಳಿಕೋರರಿಂದ ಘಾಸಿಗೊಂಡ ದೇಶಗಳಲ್ಲಿ ಇದೂ ಒಂದು. ರೋಮನ್ನರು ಬರುವುದರೊಂದಿಗೆ ಫರೋವಾಗಳ ಆಡಳಿತ ಮುಗಿಯಿತು. ಆಮೇಲೆ ಗ್ರೀಕರು, ಅರಬರು, ಇಂಗ್ಲೀಷರು ಮತ್ತು ಫ್ರೆಂಚರು ಬಂದರು. ಫರೋವಾಗಳು ಕಟ್ಟಿದ್ದ ಸೌಧಗಳೆಲ್ಲ ಈ ವಸಾಹತುಶಾಹಿಗಳ ದಾಳಿಗೆ ಬಲಿಯಾದುವು. ಅಮೂಲ್ಯ ವಸ್ತುಗಳ ಲೂಟಿ, ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ದಾಳಿಗಳಿಂದ ಈ ಕಟ್ಟಡಗಳು ಜರ್ಜರಿತವಾದುವು. ಈಗ ಉಳಿದವುಗಳೆಂದರೆ ಒಂದೋ ಈ ದಾಳಿಕೋರರ ಕಣ್ಣಿಗೆ ಬೀಳದವು ಇಲ್ಲವೇ ನಾಶಮಾಡಲು ದುಸ್ಸಾಧ್ಯವಾಗಿದ್ದಂಥವು - ಒಂದು ರೀತಿ ನಮ್ಮ ಹಂಪೆಯಲ್ಲಿಯಲ್ಲಿರುವ ಮೂಕಸಾಕ್ಷಿ ಸ್ಮಾರಕಗಳಂತೆ.

ಪ್ರವಾಸೋದ್ಯಮದ ಮಾದರಿ

ಒಟ್ಟಾರೆಯಾಗಿ ಈಜಿಪ್ಟ್‌ನ ಬಗ್ಗೆ ಹೇಳುವುದಾದರೆ, ಅನುಕ್ರಮವಾಗಿ ಸೂಯೆಜ್‌ ಕಾಲುವೆ, ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ದೇಶದ ಆರ್ಥಿಕತೆಯ ಮೂಲ ಅಂಶಗಳು. ನಾಗರಿಕ ಸೌಕರ್ಯ-ಸೌಲಭ್ಯಗಳು ಪರವಾ ಇಲ್ಲ. 90% ಜನವಸತಿ ನೈಲ್‌ ನದಿಯ ತೀರದುದ್ದಕ್ಕೂ, ಏಕೆಂದರೆ ಉಳಿದ ಪ್ರದೇಶವೆಲ್ಲ ಮರುಭೂಮಿ. ಪ್ರವಾಸೋದ್ಯಮ ಒಂದು ಒಳ್ಳೆಯ ಉದ್ದಿಮೆಯಾಗಿ, ಟ್ರಾವೆಲ್‌ ಏಜೆಂಟ್ಸ್‌-ಹೊಟೇಲ್‌-ರೆಸ್ಟೋರೆಂಟ್‌ಗಳ ದೊಡ್ಡ ನೆಟ್‌ವರ್ಕ್‌ನೊಂದಿಗೆ ಬೆಳೆದಿದೆ. ನಮಗೆ ಅಲ್ಲಿಯ ಜನರು ಪ್ರವಾಸಿಗಳನ್ನು ದೋಚುವ ಪ್ರವೃತ್ತಿಯವರಲ್ಲವೆಂದೆನಿಸಿತು. ಹೆಚ್ಚಿನ ಪ್ರದೇಶಗಳಲ್ಲಿ ಇಂಗ್ಲೀಷ್‌ ಭಾಷೆ ಜನರಿಗೆ ಅರ್ಥವಾಗುತ್ತದೆ. ಭಾರತೀಯರನ್ನು ನೋಡಿದರೆ ಅಮಿತಾಭ ಬಚ್ಚನ್‌ನ ಹೆಸರು ತೆಗೆಯುತ್ತಾರೆ. ಏಕೆಂದರೆ ಭಾರತದ ಹಿಂದೀ ಮಸಾಲಾ ಸಿನೆಮಾಗಳು ಇಲ್ಲಿ ಜನಸಾಮಾನ್ಯನಿಗೂ ಪರಿಚಿತ ಮಾತ್ರವಲ್ಲ ಆಪ್ಯಾಯಮಾನ ಕೂಡ!

ಯುರೋಪ್‌, ಆಸ್ಟ್ರೇಲಿಯಾ, ಅಮೆರಿಕದಿಂದ ಬಂದ ಪ್ರವಾಸಿಗಳೆಲ್ಲ ಭೇಟಿಯಾಗುತ್ತಾರೆ. ಕಳೆದ ಒಂದು ವರ್ಷದಲ್ಲೇ ಸುಮಾರು ಏಳು ಮಿಲಿಯನ್‌ ಪ್ರವಾಸಿಗರು ಈಜಿಪ್ಟ್‌ಗೆ ಭೇಟಿಯಿತ್ತಿದ್ದಾರಂತೆ - ಅಂದ ಮೇಲೆ ಗೊತ್ತಾಗುತ್ತದೆ ಇಲ್ಲಿ ಪ್ರವಾಸೋದ್ಯಮ ಎಷ್ಟು ಹುಲುಸಾಗಿ ಬೆಳೆದಿದೆ ಎನ್ನುವುದು! ನಮ್ಮ ಭಾರತದಲ್ಲೂ ಎಷ್ಟೆಲ್ಲ ಪ್ರಾಚೀನ ಐತಿಹಾಸಿಕ ಸ್ಮಾರಕಗಳಿದ್ದರೂ ಕೆಂಪುಪಟ್ಟಿಯ ಆಡಳಿತ ವ್ಯವಸ್ಥೆಯಿಂದ, ಆರ್ಥಿಕ ಅನನುಕೂಲತೆಯಿಂದ, ರಕ್ಷಣಾನೀತಿಗಳಿಂದ ನಾವದನ್ನು ಪ್ರವಾಸೋದ್ಯಮವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದೇವೆ ಎಂದು ಅನ್ನಿಸಿತು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X