ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸ್ಮೃತಿಗಳಿಗೆ ಸಂದ, ಗೆಜ್ಜೆಯ ಸದ್ದಿನಲ್ಲಿ ಅಮರರಾದ ಡಾ.ಲಲಿತಮ್ಮ

By Staff
|
Google Oneindia Kannada News

(ಮಾಹಿತಿ : ವಿ.ಎಂ.ಕುಮಾರ ಸ್ವಾಮಿ)

Dr. Lalithamma Kumaraಮಕ್ಕಳೆಂದರೆ ಇಷ್ಟ , ಕಲಿಸುವುದೆಂದರೆ ಕಾಲವನ್ನೇ ಮರೆಯುವಷ್ಟು ಮೆಚ್ಚು , ನೃತ್ಯ ಅಚ್ಚುಮೆಚ್ಚು . ಭಾರತದ ಶಾಸ್ತ್ರೀಯ ನೃತ್ಯ ಆರನೇ ಪ್ರಾಣವೆಂದರೂ ನಡೆದೀತು. ಡಾ. ಲಲಿತಮ್ಮ ಕುಮಾರ ಅವರಿದ್ದುದೇ ಹಾಗೆ. ಸದಾ ಚಟುವಟಿಕೆಯ ಬುಗ್ಗೆ . ಬತ್ತದ ಕನ್ನಡಾಭಿಮಾನದ ಒರತೆ. ಆದರೆ, ಆದಿಯಿರುವ ಎಲ್ಲದಕ್ಕೂ ಅಂತ್ಯವಿರುತ್ತದಲ್ಲ -
ಡಾ. ಲಲಿತಮ್ಮ ಕುಮಾರ್‌ ಇನ್ನಿಲ್ಲ .

ಮಾರಕ ಕ್ಯಾನ್ಸರ್‌ನೊಂದಿಗೆ ದೀರ್ಘ ಕಾಲ ಸೆಣಸಿದ ಲಲಿತಮ್ಮ ಏಪ್ರಿಲ್‌ 23 ರಂದು ನಿಧನರಾದರು. ಆದರೆ, ಅವರ ನೆನಪನ್ನ, ಸಾಹಸಿ ಪ್ರವೃತ್ತಿಯನ್ನ, ಕನ್ನಡ ಪ್ರೇಮವನ್ನ, ಕಲಾಭಿರುಚಿಯನ್ನ ಮರೆಯುವುದು ಹೇಗೆ? ಮಳೆ ನಿಂತ ಮೇಲೂ ಎಲೆಯಿಂದ ಹನಿಯುತ್ತದಲ್ಲ , ನೆನಪುಗಳೂ ಹಾಗೇನೆ. ಆದರೆ, ಲಲಿತಮ್ಮ ಅವರ ನೆನಪುಗಳು ತುಂತುರಷ್ಟೇ ಅಲ್ಲ - ಅದು ಗುಪ್ತಗಾಮಿನಿ. ಸದಾ ಹರಿಯುತ್ತಲೇ ಇರುತ್ತದೆ.

ಕೆಲವು ವ್ಯಕ್ತಿಗಳೇ ಹಾಗೆ. ತಮ್ಮ ಗೈರು ಹಾಜರಿಯಲ್ಲೂ ವ್ಯಕ್ತಿತ್ವದ ಛಾಯೆ ಉಳಿಸಿರುತ್ತಾರೆ. ಲಲಿತಮ್ಮ ಈ ಸಾಲಿಗೆ ಸೇರಿದವರು. ಹುಟ್ಟಿದ್ದು ಭಾರತದಲ್ಲಿ, ವೈದ್ಯಕೀಯ ಶಿಕ್ಷಣ ಪಡೆದದ್ದು ಮೈಸೂರಿನ ಮೆಡಿಕಲ್‌ ಕಾಲೇಜಿನಲ್ಲಿ . 1972 ರಲ್ಲಿ ಭಾರತದಿಂದ ಕೆನಡಾಕ್ಕೆ ಬಂದ ಲಲಿತಮ್ಮ, ಅಮೆರಿಕಾಕ್ಕೆ ಬಂದದ್ದು 1974 ರಲ್ಲಿ. ಆನಂತರದ ಬದುಕು ಅರಳಿದ್ದು ಅಮೆರಿಕದ ಅಂಗಳದಲ್ಲಿಯೇ. ಕನ್ನಡ ಸ್ಮೃತಿಗಳನ್ನು ಅಮೆರಿಕದ ಪರಿಸರದಲ್ಲಿ ಜೀವಗೊಳಿಸಲು ಪ್ರಯತ್ನಿಸಿದ ಅವರು, ಕನ್ನಡ ಸಮುದಾಯಕ್ಕೆ ಸಲ್ಲಿಸಿದ ಸೇವೆ ದೊಡ್ಡದು.

ಪತಿ ಡಾ. ಹಳೆಕೋಟೆ ಎನ್‌.ಕುಮಾರ (ಸ್ಯಾನ್‌ ಆಂಟೋನಿಯದಲ್ಲಿ ವೈದ್ಯ ವೃತ್ತಿಯಲ್ಲಿ ನಿರತ), ಇಬ್ಬರು ಪುತ್ರಿಯರು- ವರುಣಿ (ಸ್ಯಾನ್‌ ಆಂಟೋನಿಯಾ) ಹಾಗೂ ಶಶಿ (ಹ್ಯೂಸ್ಟನ್‌), ಸಹೋದರಿಯರಾದ ಡಾ.ಸರೋಜಾ ವಿಶ್ವಾಮಿತ್ರ (ಮ್ಯಾಕ್‌ಅಲೆನ್‌) ಮತ್ತು ಕಲ್ಪನಾ ರಾಜ್‌ಗೋಪಾಲ್‌ (ಸ್ಯಾನ್‌ ಆಂಟೋನಿಯಾ) ಹಾಗೂ ಅಪಾರ ಬಂಧು ಬಳಗಕ್ಕೀಗ ಲಲಿತಮ್ಮ ಅವರ ಅಗಲಿಕೆಯ ನೋವು.

ಅನಸ್ತೇಷಿಯಾ ಅಂಡ್‌ ಕ್ರಿಟಿಕಲ್‌ ಕೇರ್‌ ಕ್ಷೇತ್ರದಲ್ಲಿ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ನ ಫೆಲೋ ಆಗಿದ್ದ ಡಾ.ಲಲಿತಮ್ಮ , 26 ವರ್ಷಗಳ ಕಾಲ ಸ್ಯಾನ್‌ ಆಂಟೋನಿಯಾದಲ್ಲಿ ಹಿರಿಯ ಅನಸ್ತೇಷಿಯಾ ತಜ್ಞರಾಗಿ ಸೇವೆ ಸಲ್ಲಿಸಿದ್ದರು, ಜನಪ್ರಿಯತೆ ಗಳಿಸಿದ್ದರು.

ಲಲಿತಮ್ಮ ಅವರೀಗ ಭೌತಿಕವಾಗಿ ನಮ್ಮ ನಡುವಿಲ್ಲ . ಆದರೆ, ನೂರಾರು ಮಕ್ಕಳ ನಗುವಿನಲ್ಲಿ, ಗೆಜ್ಜೆ ಸದ್ದಿನ ಘಲಕಿನಲ್ಲಿ ಅವರು ಜೀವಂತ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X