ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇ ಏರಿಯಾದ ರಂಗಕಟ್ಟೆಯಲ್ಲಿ ‘ಕಟ್ಟೆ’ ಬಳಗದ ‘ಉದ್ಭವ’

By Staff
|
Google Oneindia Kannada News

* ಎಂ. ಎನ್‌. ಪದ್ಮನಾಭ ರಾವ್‌, ಮಿಲ್ಪಿಟಾಸ್‌, ಕ್ಯಾಲಿಫೋರ್ನಿಯ

Ashok in Udbhavaಬೇ ಏರಿಯಾದ ಕನ್ನಡಿಗರಿಗೆ ಅಕ್ಟೋಬರ್‌ 26 ಒಂದು ರೀತಿಯ ಕಾತರದ ದಿನ. ಬಹಳಷ್ಟು ದಿನಗಳಿಂದ ನಿರೀಕ್ಷಿಸಿದ್ದ ನಾಟಕಾಭಿಮಾನಿಗಳಿಗೆ ದಿನದ ಬೆಳಗ್ಗೆಯಿಂದಲೇ ಸಡಗರದ ಸಂದರ್ಭ. ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸರಿಯಾಗಿ ಮಧ್ಯಾಹ್ನ ಮೂರು ಘಂಟೆಯಿಂದಲೇ ಸ್ಯಾನ್‌ ಹೊಸೇಯಲ್ಲಿರುವ ಸಿ.ಇ.ಟಿ ಕಲಾಮಂದಿರದೆಡೆಗೆ ಎಲ್ಲರ ಓಟ. ಗುರಿ ಮುಟ್ಟುವ ತವಕ. ಅಂತೂ ಬಂತು ಆ ಕ್ಷಣ - ಬೇ ಏರಿಯಾದ ಸ್ಥಳೀಯ ಪ್ರತಿಭೆಗಳಿಂದ ತುಂಬಿರುವ ‘ಕಟ್ಟೆ’ (KATTE Kannada Amteur Team for Theater Excellence) ಹವ್ಯಾಸಿ ನಾಟಕ ತಂಡ ಅರ್ಪಿಸಿದ ‘ಉದ್ಭವ’ ನಾಟಕ ಪ್ರಯೋಗ.

ಅಮೆರಿಕಾದಲ್ಲಿ ಹಲವೆಡೆ ಪ್ರಯೋಗಗೊಂಡು ಮೆಚ್ಚುಗೆ ಗಳಿಸಿದ ‘ಹುಡುಕಾಟ’ ನಾಟಕ ಪ್ರಯೋಗದೊಂದಿಗೆ ಹುಟ್ಟಿಕೊಂಡ ಕಟ್ಟೆಯ ಉದ್ದೇಶ ಕನ್ನಡದಲ್ಲಿ ಗಂಭೀರ ನಾಟಕಗಳನ್ನು ಮಾಡುವುದು. ಈ ಪ್ರದರ್ಶನದಿಂದ ಬರುವ ಹಣವನ್ನು ಭಾರತದಲ್ಲಿನ ಹಲವಾರು ಸಮಾಜಸೇವಾ ಕಾರ್ಯಕ್ರಮಗಳಿಗೆ ಅರ್ಪಿಸುವುದು. ಕಟ್ಟೆಯ ಈ ಬಾರಿಯ ಪ್ರಯೋಗವೇ ‘ಉದ್ಭವ’.

ಉತ್ತರ ಕ್ಯಾಲಿಫೋರ್ನಿಯಾದ ಸಹಭಾಗಿತ್ವದೊಡನೆ ವೇದಿಕೆಯನ್ನೇರಿದ ಈ ನಾಟಕ ಸಾಮಾಜಿಕ ಹಾಗೂ ರಾಜಕೀಯ ವಿಡಂಬನಾತ್ಮಕವಾದದ್ದು. ಹಿರಿಯ ಪತ್ರಕರ್ತ ಹಾಗೂ ನಾಟಕಕಾರ ಬಿ.ವಿ. ವೈಕುಂಠರಾಜು ಅವರ ಮೂಲಕಾದಂಬರಿಯನ್ನಾಧರಿಸಿದ, ಈ ನಾಟಕದ ರಚನೆಯನ್ನು ಶ್ರೀನಿವಾಸ ಪ್ರಭು ಮಾಡಿದ್ದಾರೆ.

ವರ್ತಮಾನದ ಪರಿಸರದತ್ತ ಚಿಕಿತ್ಸಕ ನೋಟ
ನಮ್ಮ ಪರಿಸರದ ಜನತೆಯ ಸ್ವಾರ್ಥ-ಮೌಲ್ಯಗಳನ್ನು ಬಿಂಬಿಸುವ ವೈಚಾರಿಕ ವಸ್ತು ಉದ್ಭವ ನಾಟಕದಲ್ಲಿದೆ. ಜನತೆಯ ನಂಬಿಕೆ, ಶ್ರದ್ಧೆಗಳನ್ನು ಉಪಯೋಗಿಸಿಗೊಂಡು ರಾಜಕಾರಣಿಗಳು ನಡೆಸುವ ಕರಾಮತ್ತು ನಾಟಕದ ಮುಖ್ಯ ವಸ್ತು. ಒಂದು ರಸ್ತೆಯ ಸುತ್ತಮುತ್ತ ಹೆಣೆದಿರುವ ಈ ನಾಟಕದ ಕಥಾವಸ್ತುವಿನಲ್ಲಿ ನಮ್ಮ ದಿನನಿತ್ಯ ನಡೆಯುವ ವಿಚಾರಗಳು ಮತ್ತು ಅನುಭವಗಳಿವೆ. ನಾಟಕದ ಸ್ವಾಭಾವಿಕತೆಯಾಡನೆ, ವಿಚಾರವಾದಿಗಳ ಗಮನ ಸೆಳೆಯುವ, ತಮ್ಮ ಅನುಭವದ ಸಂಗತಿಗಳನ್ನು ಅವಲೋಕಿಸಿಸುವ, ಬುದ್ಧಿಯನ್ನು

ಜಾಗೃತಗೊಳಿಸುವ ವ್ಯಂಗ್ಯ ಈ ನಾಟಕದಲ್ಲಿದೆ. ಇಂತಹ ಒಂದು ನಾಟಕವನ್ನು ‘ಕಟ್ಟೆ’ ಆರಿಸಿಕೊಂಡು ಬೇ ಏರಿಯಾದ ಕಲಾಭಿಮಾನಿಗಳಿಗೆ ತಿಳಿಹಾಸ್ಯದೊಡನೆ ಗಂಭೀರ ವಸ್ತುವನ್ನು ಮನ ಮುಟ್ಟುವಂತೆ ಅ.26 ರಂದು ಆಡಿ ತೋರಿಸಿದ್ದು ಮರೆಯಲಾಗದ ಕ್ಷಣಗಳು.

ಕಿಕ್ಕಿರಿದ ಜನಸಂದಣಿಗೆ ಮನರಂಜನೆಯ ಸುಗ್ಗಿ

ನಾಟಕ ಸಂಜೆ 4.30ಕ್ಕೆ ಆರಂಭವಾಯಿತು. ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕಲಾಭಿಮಾನಿಗಳಿಗೆ ಈ ನಾಟಕದ ರಸದೌತಣವನ್ನು ಉಣಬಡಿಸಿದ್ದು ಸುಮಾರು 20ಕ್ಕೂ ಹೆಚ್ಚು ಕಲಾವಿದರು, ಸುಮಾರು 30ಕ್ಕೂ ಹೆಚ್ಚು ಜನರ ಸಹಕಾರದೊಂದಿಗೆ. ರಾಗಣ್ಣನ ಪಾತ್ರದಲ್ಲಿ ಇಡೀ ಪ್ರೇಕ್ಷಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ಅಗ್ಗಳಿಕೆ ಎಚ್‌. ಸಿ. ಶ್ರೀನಿವಾಸ್‌ ಅವರದು.

ರಸ್ತೆಯ ಸಮೀಪದ ಆಗುಹೋಗುಗಳಿಗೆ ಸ್ಪಂದಿಸುವ ನಿಂಗವ್ವನಾಗಿ ಅಲಮೇಲು ಅಯ್ಯಂಗಾರ್‌, ರಾಗಣ್ಣನ ಚಮಚಾಗಳಾದ ನಂಜುಂಡನ ಪಾತ್ರದಲ್ಲಿ ಅಂಜನ್‌ ಶ್ರೀನಿವಾಸ್‌ ಮತ್ತು ರುದ್ರನ ಪಾತ್ರದಲ್ಲಿ ಆಶೋಕ್‌ ಕುಮಾರ್‌, ಮರಿ ಪುಢಾರಿ ರಾಧಾಕೃಷ್ಣನ ಪಾತ್ರದಲ್ಲಿ ವಾದಿರಾಜ ಭಟ್‌, ಸ್ವಾತಂತ್ರ್ಯ ಹೋರಾಟಗಾರ ನಾರಾಯಣರಾಯರ ಪಾತ್ರದಲ್ಲಿ ವಿಶ್ವನಾಥ್‌ ಹುಲಿಕಲ್‌, ಅಂಗಡಿಯ ಪಳನಿಯಾಗಿ ಶಂಕರ್‌ ಜಯರಾಮನ್‌, ಗೋವಿಂದಪ್ಪನಾಗಿ ಶ್ರೀಕಾಂತ್‌ ದೇಶಪಾಂಡೆ, ಹೋಟೆಲ್‌ ಭಟ್ಟರಾಗಿ ವೆಂಕಟರಮಣ ಭಟ್‌, ಪೋಲೀಸಿನ ಪೋಷಾಕಿನಲ್ಲಿ ಪ್ರಶಾಂತ ಪಡುಬಿದ್ರಿ, ಉದ್ಭವ ಗಣೇಶ ಮೂರ್ತಿಯ ಅರ್ಚಕರಾಗಿ ಮಧು ಕೃಷ್ಣಮೂರ್ತಿ, ರಂಗಪ್ಪನಾಗಿ ಅಶೋಕ್‌ ಉಪಾದ್ಯ, ವೀರಣ್ಣನ ಪಾತ್ರದಲ್ಲಿ ಭಗವಾನ್‌ ಕೃಷ್ಣಸ್ವಾಮಿ, ಹಳ್ಳಿಯ ಪಾಲಿಟಿಶಿಯನ್‌ ಶಂಕರಪ್ಪನಾಗಿ ಗಂಗಾಧರ್‌ ಹೊಸಳ್ಳಿ ಮತ್ತು ಪಾಲಿಟಿಶಿಯನ್‌ ಚೇಲನಾಗಿ ಸುಧಿ ಬೆಂಗಳೂರು, ಮೂಡಲ್‌ ಗಿರಿಯಪ್ಪನಾಗಿ ರಾಜ್‌ ಜೋಷಿ, ಉದ್ಭವ ಮೂರ್ತಿಯ ಶಿಲ್ಪಿಯಾಗಿ ತಿರುನಾರಾಯಣ ಅಯ್ಯಂಗಾರ್‌, ಸಾಹುಕಾರ ರಾಮಯ್ಯನಾಗಿ ಸತೀಶ್‌ ಸ್ವಾಮಿ, ರಾಗಣ್ಣನ ತಿರುಮಂತ್ರಕ್ಕಾಗಿ ಉಪಯೋಗಿಸಿಕೊಂಡ ನಟಿಯ ರೂಪದಲ್ಲಿ ಪ್ರೇಮ ಹೆಗಡೆ, ಪೇಪರ್‌ ಹುಡುಗನಾಗಿ ಮನೋಜ್‌ ಮರಡಿತಾಯ, ವ್ಯಕ್ತಿಯ ರೂಪದಲ್ಲಿ ದಿಲೀಪ್‌ ದೇಶಪಾಂಡೆ ಮತ್ತು ಶ್ರೀವತ್ಸ ದುಗ್ಲಾಪುರ ತಮ್ಮ ವಿವಿಧ ಭಾವಭಂಗಿಗಳಲ್ಲಿ ನಟಿಸಿ ಸಭಿಕರನ್ನು ರಂಜಿಸಿದರು.

ಇಂತಹ ಒಂದು ನಾಟಕಕ್ಕೆ ಕಳೆ ಕಟ್ಟುವ ಕಾರ್ಯ ರಂಗ ಸಜ್ಜಿಕೆಯವರದು. ಕಿಂ ವೆಲ್ಲೋರ್‌, ಮೋನಿಕ ವೆಂಕಟೇಶಮೂರ್ತಿ ಮತ್ತು ಸುಕನ್ಯ ರಮೇಶ್‌ರವರ ನಿರಂತರ ಪ್ರಯತ್ನದ ಫಲ ಅತ್ಯುತ್ತಮ ರಂಗ ಸಜ್ಜಿಕೆ. ಕಲಾಮಂದಿರದೊಳಗೊಂದು ಕನ್ನಡನಾಡಿನ ಸಣ್ಣ ಹಳ್ಳಿಯ ರಸ್ತೆಯನ್ನೇ ನಿರ್ಮಿಸಿದ ಇವರಿಗೆ ಸಹಾಯ ಮಾಡಿದವರು ಸಿದ್ದಾರ್ಥ್‌ ಸತೀಶ್‌, ಶ್ರೀವತ್ಸ ದುಗ್ಲಾಪುರ, ಹರೀಶ್‌ ಗೋಲಿ ಮತ್ತು ಮಧು ಕೃಷ್ಣ ಮೂರ್ತಿ. ನಾಟಕಕ್ಕೆ ಮೆರಗು ತಂದ ಮೇಳದ ಪರಿವಾರದಲ್ಲಿ ಪರಿಮಳ ಮುರಳೀಧರ, ಶೋಭ ಪ್ರಭಾಕರ್‌, ರಾಂಪ್ರಸಾದ್‌, ಶೇಷಪ್ರಸಾದ್‌, ಮುಕುಂದನ್‌ ಮತ್ತು ಅಲೆಕ್ಸ್‌ ಅರಲಂತು ಇದ್ದರು.

ನಟ ನಟಿಯರ ವೇಷ-ಭೂಷಣಕ್ಕೆ ಅಲಮೇಲು ಅಯ್ಯಂಗಾರ್‌ ಮತ್ತು ಪ್ರಸಾದನ ವ್ಯವಸ್ಥಾಪಕರಾಗಿ ರಮೇಶ್‌ ಕೋಲಾರ್‌ ವಿಶೇಷವಾಗಿ ಶ್ರಮಿಸಿದವರು. ನೆಳಲು ಬೆಳಕಿನ ಜವಾಬ್ದಾರಿ ಹೊತ್ತವರು ಸುನೀಲ್‌ ಶಂಕರ್‌ ಹಾಗೂ ನಟರಾಜ್‌ ಗುಜ್ರನ್‌. ನೃತ್ಯ ಸಂಯೋಜನೆ : ಸುನೀಲ್‌ ಶಂಕರ್‌. ಇದಕ್ಕೆ ಸಹಾಯ ಮಾಡಿದವರು ರಶ್ಮಿ ಅಶೋಕ್‌. ಧ್ವನಿ ವ್ಯವಸ್ಥೆಯ ಜವಾಬ್ದಾರಿಯನ್ನು ಅತುಲ್‌ ವೈದ್ಯ ಮತ್ತು ವಾದಿರಾಜ ಭಟ್‌ ವಹಿಸಿಕೊಂಡಿದ್ದರು.

Padmanabha Rao Melanahalli, The Authorಪ್ರಚಾರ ಮತ್ತು ಪ್ರವೇಶ ಚೀಟಿಯ ವ್ಯವಸ್ಥಾಪಕರು ವಿಜಯ ಜೋಶಿ, ಪದ್ಮನಾಭ ರಾವ್‌, ಛಾಯಾ ಕುಂಬ್ಳೆ, ಪ್ರಶಾಂತ ಪಡುಬಿದ್ರಿ. ಸುಮಾರು 7.30 ಘಂಟೆಗೆ ಮುಗಿದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ವಿರಾಮದ ವೇಳೆಯ ಸಮೋಸ ಬಹಳ ಜನರಿಗೆ ಇಷ್ಟವಾಯಿತು. ರಸ್ತೆ ಅಪಘಾತದ ಸನ್ನಿವೇಶ, ಪ್ರಚಾರದ ಪ್ರಕರಣ ಮತ್ತು ಅದರಲ್ಲಿನ ಸಾಂದರ್ಭಿಕವಾದ ಹಾಡು, ನಾರಾಯಣರಾಯರೊಡನೆ ಸಿದ್ಧತಾ ಪ್ರಕರಣ, ಗಣೇಶನ ಉದ್ಭವ ಪ್ರಕರಣ, ಚುನಾವಣಾ ಸನ್ನಿವೇಶಗಳು, ರಾಗಣ್ಣನ ತಿರುಮಂತ್ರದ ದೃಶ್ಯ ಮತ್ತು ಪೇಪರ್‌ ಹುಡುಗನ ಸ್ಪಷ್ಟ ಕನ್ನಡದ ತಾಜಾ ಸುದ್ದಿ ಬಿತ್ತರಣೆ ಎಲ್ಲವೂ ಉತ್ತಮವಾಗಿ ಮೂಡಿಬಂದವು. ಈ ನಾಟಕಕ್ಕೆ ಸಂಪೂರ್ಣವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಲ್ಲಿ ಮೂಡುಬಾಗಿಲು ಪ್ರಭಾಕರ, ಅನಂತ ಚಿನಿವಾರ್‌, ನರೇನ್‌ ಕುಞೂೕಡಿ, ಜ್ಯೋತಿ ಮಹದೇವ್‌, ಕೆ.ಎಸ್‌. ಪ್ರಸಾದ್‌, ಶಿವರಾಮ್‌, ವಿಜಯಸಿಂಹ ಕಡಾಚಿ, ವಿಶಾಲ ಮೂಂದ್ರ, ಮಧು ಆತ್ರೇಯ ಮತ್ತು ಮೇಘ ಜೋಶಿಯವರು.

ಈ ನಾಟಕದ ಮುಖ್ಯ ಸೂತ್ರಧಾರ, ಸಂಗೀತ ಸಂಯೋಜನೆ ಮತ್ತು ನಿರ್ದೇಶನ ಅಶೋಕ್‌ ಕುಮಾರ್‌. ಅಶೋಕ್‌ ಒಬ್ಬ ಉತ್ತಮ ಕಲಾವಿದ ಮತ್ತು ಹಾಡುಗಾರ. ತಮ್ಮ ದಿನ ನಿತ್ಯದ ಜಂಜಾಟದೊಡನೆಯೂ ಸ್ನೇಹಿತರನ್ನು ಕಟ್ಟಿಕೊಂಡು, ಹುರಿದುಂಬಿಸಿ ಬೇ ಏರಿಯಾದ ಕನ್ನಡ ಜನತೆಗೆ ಒದಗಿಸಿದ ಈ ನಾಟಕ ರಸದೌತಣಕ್ಕಾಗಿ ಅವರು ಸ್ತುತ್ಯಾರ್ಹರು.

ಈ ನಾಟಕದಿಂದ ಬರುವ ಸಂಪೂರ್ಣ ಗಳಿಗೆಯನ್ನು ‘ಭಾರತೀಯ ಸಾಕ್ಷರತಾ ಯೋಜನೆ’ ಎಂಬ ಸಮಾಜ ಕಾರ್ಯಕ್ಕೆ ಮೀಸಲಾದ ಸಂಸ್ಥೆಗೆ ಅರ್ಪಿಸಲಾಗುವುದು. ಅಶೋಕ್‌, ನಾಟಕದ ಕೊನೆಯಲ್ಲಿ ತಮ್ಮ ಪಾತ್ರವರ್ಗವನ್ನು ಜನತೆಗೆ ಪರಿಚಯಿಸಿದರು. ಭಾರತ ಮತ್ತು ಅಮೇರಿಕಾದ ರಾಷ್ಟ್ರಗೀತೆಯಾಂದಿಗೆ ಕಾರ್ಯಕ್ರಮ ಮುಗಿಯಿತು.

ಅಂದಹಾಗೆ, ನಾಟಕವನ್ನು ನೀವು ನೋಡಿದಿರಾ? ಹಾಗಿದ್ದಲ್ಲಿ , ನಾಟಕದ ಬಗ್ಗೆ ನಿಮಗೇನನ್ನಿಸಿತು ಎಂದು ಬಿಡುವು ಮಾಡಿಕೊಂಡು ಇ-ಮೈಲ್‌ [email protected] ವಿಳಾಸಕ್ಕೆ ಬರೆದು ತಿಳಿಸಿ.

ಫೋಟೋಗಳಲ್ಲಿ ನಾಟಕ ನೋಡಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X