• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪು.ತಿ.ನ ಟ್ರಸ್ಟ್‌ಗೆ ಬೆಂಬಲವಾಗಿ ನಿಂತ ಉ.ಕ್ಯಾಲಿಫೋರ್ನಿಯಾ ಕಲಾಭಿಮಾನಿಗಳು

By oneindia staff
|

*ಆಶಾ ಬಾಲಕೃಷ್ಣ, ಕ್ಯಾಲಿಫೋರ್ನಿಯಾ

Pu.Ti.Narsimhacharಮಾರ್ಚ್‌ 24, ಸಂಜೆ ನಾಲ್ಕರ ಸುಮಾರು. ಲಾಸ್‌ ಆಲ್ಟೋಸ್‌ನಲ್ಲಿರುವ ಫೂಟ್‌ ಹಿಲ್ಲ್‌ ಕಾಲೇಜಿನ ಸುವಿಸ್ತಾರ ರಂಗ ಮಂದಿರವು ಕಲಾಭಿಮಾನಿ ಕನ್ನಡಿಗರಿಂದ ತುಂಬಿತ್ತು. ಆ ದಿನ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟವು ಖ್ಯಾತ ಕವಿ ದಿವಂಗತ ಪು.ತಿ.ನ ಅವರ ಪ್ರತಿಷ್ಠಾನದ ಸಹಾಯಾರ್ಥ ಒಂದು ಅಪೂರ್ವವಾದಂತಹ ಕಾರ್ಯಕ್ರಮವನ್ನು ಅರ್ಪಿಸಿತು. ಸುಮಾರು ಎಂಟು ನೂರು ಜನರು ಈ ಸುಮಧುರ ಸಂಜೆಯ ಸವಿಯನ್ನುಂಡರು.

ಕಾರ್ಯಕ್ರಮದ ಮೊದಲಿಗೆ ಕನ್ನಡ ಕೂಟದ ಅಧ್ಯಕ್ಷರೂ ಕಾರ್ಯಕ್ರಮದ ರೂವಾರಿಗಳೂ ಆದ ರಾಂಪ್ರಸಾದ್‌ ಅವರು ತಮ್ಮ ಬಲು ಇಂಪಾದ ಧ್ವನಿಯಲ್ಲಿ ಸಂಸ್ಕೃತ ಶ್ಲೋಕದಿಂದ ಪ್ರಾರ್ಥನೆಗೈದರು. ನಂತರ ಅಲಮೇಲು ಅಯ್ಯಂಗಾರ್‌ ಅವರು ಸ್ವಾಗತ ಭಾಷಣದಲ್ಲಿ ಈ ಕಾರ್ಯಕ್ರಮವು ತಮ್ಮ ತೀರ್ಥರೂಪರಾದ ಪು.ತಿ.ನ ಅವರ ತೊಂಭತ್ತಾರನೆಯ ಜನ್ಮ ದಿನದಲ್ಲಿ ಸಮಯೋಚಿತವಾಗಿ ಒದಗಿ ಬಂದಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು.

ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಬಗ್ಗೆ, ಅದು ಕೈಗೊಂಡ ಹಾಗೂ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಹರಿಹರೇಶ್ವರ ಅವರು ಬರೆದ ಲೇಖನವನ್ನು ನಾಗಲಕ್ಷ್ಮಿಯವರು ಪ್ರಭಾವಯುತವಾಗಿ ಮಂಡಿಸಿದರು. ಭಾರತಕ್ಕೆ ಹೋದಾಗ ತಪ್ಪದೆ ಪು.ತಿ.ನ. ಅವರ ಹುಟ್ಟೂರಾದ ಮೇಲುಕೋಟೆಯಲ್ಲಿರುವ ಸಾಂಸ್ಕೃತಿಕ ಸ್ಮರಣಾಲಯವಾಗಿ ಪ್ರತಿಷ್ಠಾನಕ್ಕೆ ಪ್ರಾಚ್ಯ ವಸ್ತು ಇಲಾಖೆಯಿಂದ ಪುನಾರಚನೆಗೊಂಡು ಹಸ್ತಾಂತರಿಸಲ್ಪಟ್ಟ , ಕವಿಗಳು ವಾಸಿಸುತ್ತಿದ್ದ ಅವರ ಮನೆ ‘ಕಾವ್ಯ ಕುಟೀರ’ವನ್ನು ಸಂದರ್ಶಿಸುವಂತೆ ಸಾಹಿತ್ಯಾಭಿಮಾನಿಗಳಿಗೆ ಸಲಹೆಯಿತ್ತರು.

ಹಾಡು ಹಳೆಯದಾದರೇನು ಭಾವ ನವನವೀನ

Ramprasadಪ್ರೇಕ್ಷಕರೆಲ್ಲ ಕಾಯುತ್ತಿದ್ದ ಚಲನಚಿತ್ರ ಗೀತೆಗಳು ನಂತರದ ಕೆಲವು ಕ್ಷಣಗಳಲ್ಲೇ ಆರಂಭಗೊಂಡವು. ನಿರೂಪಕರಾದ ಸರಸ್ವತಿ ಮೋಹನ್‌ ಅವರು ಪೂರ್ವಭಾವಿಯಾಗಿ ಕಾರ್ಯಕ್ರಮಗಳನ್ನು ಆಯಾ ಗೀತೆಗಳ ನಾಯಕ- ನಾಯಕಿಯರ ವಿವರಗಳೊಂದಿಗೆ ಹಾಗೂ ಸಾಮಾಜಿಕ ತುಲನೆಯಾಂದಿಗೆ ಸೊಗಸಾಗಿ ವರ್ಣಿಸುತ್ತಿದ್ದರು. ಪಲ್ಲವಿ ಅನುಪಲ್ಲವಿ ಚಿತ್ರದ ‘ನಗುವ ನಯನ’ ಹಾಡನ್ನು ರಾಂಪ್ರಸಾದ್‌ ಮತ್ತು ಆರತಿ ಮೂರ್ತಿ ಅವರು ಹಾಡಿ ಆರಂಭದಲ್ಲೇ ಪ್ರೇಕ್ಷಕರನ್ನು ಗಂಧರ್ವ ಲೋಕಕ್ಕೆ ಕರೆದೊಯ್ದರು.

ನಂತರದ್ದು ಶರಪಂಜರ ಚಿತ್ರದ ವರಕವಿ ಬೇಂದ್ರೆಯವರಿಂದ ರಚಿಸಲ್ಪಟ್ಟ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಗೀತೆ. ಮೂಲ ಗಾಯಕ ಪಿ.ಬಿ.ಶ್ರೀನಿವಾಸ್‌ ಹಾಗೂ ಪಿ.ಸುಶೀಲ ಅವರಂತೆಯೇ ಅದ್ಭುತವಾಗಿ ಹಾಡಿದವರು ರಾಂಪ್ರಸಾದ್‌ ಮತ್ತು ಮೀರಾ ಮನೋಹರ್‌. ಬಹುಮುಖ ಪ್ರತಿಭೆಯ ಬಿ.ವಿ.ಜಗದೀಶ್‌ ಅವರು ಶುಭಮಂಗಳ ಚಿತ್ರದ ‘ಹೂವೊಂದು ಬಳಿಬಂದು’ ಹಾಡನ್ನು ಸಹಗಾಯಕಿಯರಾದ ಪರಿಮಳಾ, ಆರತಿ ಮತ್ತು ಶ್ರೀರಂಜನಿಯವರೊಂದಿಗೆ ತಮ್ಮ ಉತ್ತಮ ಕಂಠದಿಂದ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಹುಲಿಯ ಹಾಲಿನ ಮೇವು ಚಿತ್ರದ ‘ಚಿನ್ನದ ಮಲ್ಲಿಗೆ ಹೂವೆ’ ಯುಗಳ ಗೀತೆಯನ್ನು ರಾಂಪ್ರಸಾದ್‌ ಮತ್ತು ಪರಿಮಳಾ ಮುರಳೀಧರ್‌ ಬಹು ಸೊಗಸಾಗಿ ಹಾಡಿದರು. ಹೀಗೆ ಮುಂದೆ ಬಂಧನ ಚಿತ್ರದ ಗೀತೆ ‘ಈ ಬಂಧನಾ ಜನುಮ ಜನುಮದ ಅನುಬಂಧನಾ’ ಹಾಡನ್ನು ರಾಂಪ್ರಸಾದ್‌ ಹಾಗೂ ಆರತಿ ಮೂರ್ತಿ, ಹೊಂಬಿಸಿಲು ಚಿತ್ರದ ‘ಜೀವವೀಣೆ ನೀಡು ಮಿಡಿತದ ಸಂಗೀತ’ ಹಾಡನ್ನು ಪರಿಮಳಾ ಮತ್ತು ರಾಂಪ್ರಸಾದ್‌ ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ತಣಿಸಿದರು. ನಂತರ ಶೇಷಪ್ರಸಾದ್‌ ಅವರು ರಾಮಾಚಾರಿ ಚಿತ್ರದ ‘ಯಾರಿವಳು ಯಾರಿವಳು’ ಗೀತೆಯನ್ನು ಸಹ ಗಾಯಕಿಯರೊಂದಿಗೆ ಅದ್ಭುತವಾಗಿ ಹಾಡಿದಾಗ ಜನರೂ ಜೊತೆಯಲ್ಲಿ ತಾಳದೊಂದಿಗೆ ದನಿಗೂಡಿಸಿ ಹರ್ಷಿಸಿದರು. ಕಳ್ಳ ಕುಳ್ಳ ಚಿತ್ರದ ‘ಸುತ್ತಮುತ್ತ ಯಾರೂ ಇಲ್ಲ’ ಗೀತೆಯನ್ನು ಆರತಿ ಮತ್ತು ರಾಂಪ್ರಸಾದ್‌ ತುಂಬಾ ಚೆನ್ನಾಗಿ ಹಾಡಿದರು. ಆಮೇಲೆ ಶೇಷಪ್ರಸಾದ್‌ ಮತ್ತು ಶ್ರೀರಂಜನಿಯವರು ಹಾಡಿದ ‘ಲೋಕವೆ ಹೇಳಿದ ಮಾತಿದು’ ಎಂಬ ರಣಧೀರ ಚಿತ್ರದ ಹಾಡು ಬಹಳ ಚೆನ್ನಾಗಿ ಕೇಳಿಬಂತು.

ಕೊನೆಯದಾಗಿ, ಎರಡು ಕನಸು ಚಿತ್ರದ ‘ಥೈ ಥೈ ಥೈ ಥೈ ಬಂಗಾರಿ’ ಗೀತೆಯನ್ನು ರಾಂಪ್ರಸಾದ್‌ ಹಾಡಿ ಮುಗಿಸಿದಾಗ ಪ್ರೇಕ್ಷಕ ವೃಂದದಲ್ಲಿ ಇಷ್ಟು ಬೇಗನೆ ಮುಗಿಯಿತಲ್ಲಾ ಎಂಬ ಬೇಸರ ಕಾಣಿಸಿತು. ಹಿಮ್ಮೇಳದಲ್ಲಿದ್ದ ಅಂಜನ್‌ ಶ್ರೀನಿವಾಸ್‌ ಅವರು ಗಾಯಕರ ಹಾಗೂ ಹಿಮ್ಮೇಳದ ಕಲಾವಿದರ ಪರಿಚಯ ಮಾಡಿಕೊಟ್ಟರು. ‘ಧುನ್‌’ ಬಳಗದವರಿಂದ ಸುಸಜ್ಜಿತ ವಾದ್ಯ ಹಿಮ್ಮೇಳ ಬಹು ಸೊಗಸಾಗಿ ಹರಿದು ಬಂತು.

ನಂತರ ಕನ್ನಡ ಕೂಟದ ಕಲಾವಿದರಾದ ರವಿ ಕಶ್ಯಪ್‌ ಮತ್ತು ರೀಮಾ ಕಶ್ಯಪ್‌ ದಂಪತಿಗಳಿಂದ ‘ನನ್ನ ಪ್ರೀತಿಯ ಹುಡುಗಿ’ ಚಿತ್ರಕ್ಕಾಗಿ ರಾಂಪ್ರಸಾದ್‌ ಹಾಡಿರುವ ಜನಪ್ರಿಯ ಗೀತೆ ‘ಮೂಡಲ್‌ ಕುಣಿಗಲ್‌ ಕೆರೆ’ ಎಂಬ ಹಾಡಿಗೆ ಮಾಡಿದ ನೃತ್ಯ ಬಹಳ ಸುಂದರವಾಗಿ ಮೂಡಿ ಬಂದಿತು.

ಹೊಟ್ಟೆ ಹುಣ್ಣಾಗುವಂತೆ ನಗಿಸಿದ ‘ನಂಜುಂಡಾ....ಶ್ರೀನಿವಾಸಾ’

ಅರ್ಧ ತಾಸಿನ ಭೋಜನ ವಿರಾಮದ ತರುವಾಯ ಅಭಿಮಾನಿಗಳೆಲ್ಲ ಕಾತುರದಿಂದ ಕಾಯುತ್ತಿದ್ದ, ಅಲಮೇಲು ಅಯ್ಯಂಗಾರರಿಂದ ರಚಿಸಿ, ನಿರ್ದೇಶಿಸಿ, ಅಭಿನಯಿಸಲ್ಪಟ್ಟ ‘ನಂಜುಂಡಾ....ಶ್ರೀನಿವಾಸಾ’ ಎಂಬ ನಗೆ ನಾಟಕದ ಪ್ರದರ್ಶನ ಪ್ರಾರಂಭವಾಯಿತು. ಅಮೆರಿಕಾಕ್ಕೆ ವಲಸೆ ಬಂದಿರುವವರ ದೈನಂದಿನ ಸಾಂಸಾರಿಕ ಹಿನ್ನೆಲೆಯ ಜೊತೆಗೆ ಹಾಸ್ಯ ಸಂಭಾಷಣೆಯಾಂದಿಗೆ ಕಥೆಯನ್ನು ಹೆಣೆದ ಜಾಣ್ಮೆ ಅಲಮೇಲು ಅವರದು.

ಕಥಾ ವಸ್ತು ಹೀಗಿದೆ- ತನ್ನದೇ ಕಂಪೆನಿಯನ್ನು ಹೊಂದಿದ್ದ ತರುಣ ರಮೇಶನಿಗೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸೀಮಾ ಎಂಬ ಹುಡುಗಿಯನ್ನು ಮದುವೆಯಾಗುವ ಆಸೆ. ಹಾಗೂ ಇದಕ್ಕೆ ಸೀಮಾಳ ಅನುಮತಿಯೂ ಇರುತ್ತದೆ. ಊರಿಂದ ಬಂದಿರುವ ರಮೇಶನ ತಾಯಿ, ಮಗನೊಂದಿಗೆ ಕೆಲಸ ಮಾಡುತ್ತಿದ್ದ ಕ್ಯಾಥರೀನ್‌ ಎಂಬ ಅಮೇರಿಕನ್‌ ಮಹಿಳೆಯಾಂದಿಗೆ ತುಂಬಾ ಸ್ನೇಹದಿಂದ ಇರುತ್ತಾಳೆ. ಅವಳಿಗೆ ಚೆನ್ನಾಗಿಯೇ ಕನ್ನಡವನ್ನೂ ಸಹ ಕಲಿಸಿರುತ್ತಾಳೆ.

ಇತ್ತ ಸೀಮಾಳ ತಾಯಿ ತಂದೆಯರೂ ತಮ್ಮ ಮಗನಾದ ಶ್ರೀರಾಮನ ಮನೆಯಲ್ಲಿ ಇರುತ್ತಾರೆ. ಅವರಿಗೆ ಊರಿಗೆ ಹೋಗುವುದಕ್ಕೆ ಮೊದಲು ಸೀಮಾಳ ಮದುವೆ ಮುಗಿಸಬೇಕೆಂಬ ಆತುರ. ರಮೇಶನ ತಾಯಿಗೆ ಮತ್ತು ಸೀಮಾಳ ಹೆತ್ತವರಿಗೆ ಪರಸ್ಪರ ಪರಿಚಯವಿದ್ದರೂ ಸಂಬಂಧ ಬೆಳೆಸುವ ಇಚ್ಛೆಯಿರುವುದಿಲ್ಲ. ಯಾಕೆಂದರೆ ಒಬ್ಬರದು ನಂಜುಂಡನ ಒಕ್ಲು ಮತ್ತೊಬ್ಬರದು ಶ್ರೀನಿವಾಸನ ಒಕ್ಲು. ಸೀಮಾಳ ತಾಯಿ ಸಾವಿತ್ರಮ್ಮ ಹಾಗೂ ರಮೇಶನ ತಾಯಿ ನಾಗರತ್ನ ಆ ಬಗ್ಗೆ ಆಡಿಕೊಳ್ಳುತ್ತಾನೇ ಇರುತ್ತಾರೆ. ಮಕ್ಕಳೆಲ್ಲರಿಗೂ ಈ ಬಗ್ಗೆ ಬೇಸರ.

ರಮೇಶ್‌, ಶ್ರೀರಾಂ, ಸೀಮಾ, ರಮೇಶನ ಗೆಳೆಯ ಶ್ರೀನಾಥ್‌ ಮತ್ತು ಕ್ಯಾಥರೀನ್‌ ಸೇರಿ ಹಿರಿಯರೆದುರಿಗೆ ನಾಟಕವಾಡಿ ಅವರನ್ನು ಒಪ್ಪಿಸುವ ಉಪಾಯ ಹೂಡುತ್ತಾರೆ. ರಮೇಶನು ಕ್ಯಾಥರೀನ್‌ಳನ್ನು ಇಷ್ಟಪಟ್ಟಂತೆಯೂ ಮತ್ತು ಸೀಮಾಳನ್ನು ಶ್ರೀನಾಥ್‌ ಇಷ್ಟಪಟ್ಟಂತೆಯೂ ಮತ್ತು ಅವನಿಗೆ ಹಲವಾರು ದುಶ್ಚಟಗಳಿದ್ದಂತೆಯೂ ಅಭಿನಯಿಸುತ್ತಾರೆ. ಮೊದಲು ಶ್ರೀನಾಥನಿಗೆ ಸೀಮಾಳನ್ನು ಕೊಡುವ ಇಷ್ಟವಿದ್ದ ಸೀಮಾಳ ತಂದೆ ತಾಯಿಗಳು ಅವನ ದುಶ್ಚಟಗಳ ಪರಿಚಯವಾದಾಗ, ರಮೇಶನೇ ಒಳ್ಳೆಯ ಹುಡುಗ ಎಂದು ತೀರ್ಮಾನಿಸುತ್ತಾರೆ.

ಇತ್ತ ರಮೇಶನು ಕ್ಯಾಥರಿನ್‌ ಜೊತೆ ಸ್ನೇಹದಿಂದಿರುವುದನ್ನು ನಾಗರತ್ನ ಸಹಿಸದೆ ಮಗನನ್ನು ಪ್ರಶ್ನಿಸುತ್ತಾಳೆ. ಆಗ ಅವನು ತಾನು ಮೊದಲು ಸೀಮಾನ್ನು ಬಯಸಿದ್ದಾಗಿಯೂ, ಅಮ್ಮನ ಒಪ್ಪಿಗೆಯಿಲ್ಲದ ಕಾರಣ ಕ್ಯಾಥರೀನ್‌ಗೆ ಮನಸೋತಿದ್ದಾಗಿಯೂ ಹೇಳುತ್ತಾನೆ. ಆಗ ನಾಗರತ್ನ ಅವನಿಗಿಂತ ಹೆಚ್ಚು ವಯಸ್ಸಾಗಿ, ಮೂರು ವಿಚ್ಛೇದನಗಳಾಗಿರುವ ಕ್ಯಾಥರೀನ್‌ಗಿಂತ ಸೀಮಾಳನ್ನು ಮದುವೆಯಾಗುವುದೇ ಒಳ್ಳೆಯದು ಎಂದಾಗ ರಮೇಶ ಹರ್ಷಿತನಾಗುತ್ತಾನೆ. ಹಿರಿಯ ಹೆಂಗೆಳೆಯರಿಬ್ಬರೂ ಪರಸ್ಪರ ಮೆಚ್ಚುಗೆಯ ಮಾತಾಡುತ್ತಾರೆ. ತಮ್ಮ ಉಪಾಯ ಫಲಿಸಿದ್ದಕ್ಕಾಗಿ ಕಿರಿಯರೆಲ್ಲರೂ ಸಂತೋಷಿಸುತ್ತಾರೆ.

ಸಂಭಾಷಣೆಗಳೆಲ್ಲವೂ ಹಾಸ್ಯ ಭರಿತವಾಗಿಯೇ ಇದ್ದು ಜನರನ್ನು ನಗೆಗಡಲಲ್ಲಿ ತೇಲಾಡಿಸಿದವು.

ನಗಿಸಿದವರಿವರು....

ಪಾತ್ರವರ್ಗ ಈ ರೀತಿಯಿದೆ- ರಮೇಶನಾಗಿ ಶೇಷಪ್ರಸಾದ್‌ ಕೃಷ್ಣಾಪುರ, ಸೀಮಾಳ ಪಾತ್ರದಲ್ಲಿ ನಂದಿನಿ ಉಮೇಶ್‌, ಶ್ರೀರಾಮನ ಪಾತ್ರದಲ್ಲಿ ಬಿ.ವಿ.ಜಗದೀಶ್‌, ಅವನ ಹೆಂಡತಿ ರೂಪಾಳ ಪಾತ್ರದಲ್ಲಿ ಪುಷ್ಪಾ ಸುಬ್ಬರಾವ್‌, ಸೀಮಾಳ ತಾಯಿ ಸಾವಿತ್ರಮ್ಮನಾಗಿ ಸಂಧ್ಯಾ ರವೀಂದ್ರನಾಥ್‌, ಸೀಮಾಳ ತಂದೆ ನಾರಾಯಣರಾವ್‌ ಪಾತ್ರದಲ್ಲಿ ನಾರಾಯಣ ಅಯ್ಯಂಗಾರ್‌, ಗೆಳೆಯ ಶ್ರೀನಾಥನ ಪಾತ್ರದಲ್ಲಿ ಸತೀಶ್‌ ಸ್ವಾಮಿ, ರಮೇಶನ ಅಮ್ಮ ನಾಗರತ್ನನ ಪಾತ್ರದಲ್ಲಿ ಅಲಮೇಲು ಅಯ್ಯಂಗಾರ್‌ ಮತ್ತು ಕ್ಯಾಥರಿನ್‌ ಪಾತ್ರದಲ್ಲಿ ಕ್ಯಾರಿನ್‌ ವಾಸುದೇವ್‌ ಎಂಬ ಅಮೇರಿಕನ್‌ ಮಹಿಳೆ ಉತ್ತಮ ಅಭಿನಯ ನೀಡಿದರು. ಹಾಗೂ ಶ್ರೀರಾಮನ ಇಬ್ಬರು ಮಕ್ಕಳಾಗಿ (ದೀಪಾ ಮತ್ತು ಅನಿಲ್‌) ನೇಹಾ ವೆಂಕಟೇಶ್‌ ಮತ್ತು ಕಾರ್ತಿಕ್‌ ಜಗದೀಶ್‌ ಇವರು ಬಹಳ ಸಹಜವಾಗಿ ಅಭಿನಯಿಸಿ ಜನಮನ ಗೆದ್ದರು.

ದೃಶ್ಯಗಳ ಮಧ್ಯ ಕತೆಗೆ ಪೂರಕವಾದ, ಹಿಮ್ಮೇಳಗಳೊಂದಿಗೆ ಮುದ್ರಿತ ಹಾಡುಗಳನ್ನು ಅಳವಡಿಸಿದ್ದು ನಾಟಕಕ್ಕೆ ವಿಶೇಷ ಕಳೆಯನ್ನು ಕೊಟ್ಟಿತು. ಕೊನೆಯಲ್ಲಿ ಅಲಮೇಲು ಅಯ್ಯಂಗಾರರು ಪಾತ್ರ ಪರಿಚಯ ಮಾಡಿಸಿದರು. ಹಾಗೂ ಹಾಡುಗಳಿಗೆ ಸಾಹಿತ್ಯ ರಚಿಸಿದ ಸಂಧ್ಯಾ ರವಿಯವರಿಗೆ, ಸಂಗೀತ ಸಂಯೋಜನೆ ಮಾಡಿದ ರವಿ ರವೀಂದ್ರನಾಥ್‌ ಅವರಿಗೆ, ಹಿನ್ನೆಲೆ ಗಾಯಕರಿಗೆ, ವೇದಿಕೆಯ ಹಿಂದೆ ಸಹಾಯ ಮಾಡಿದ ಪ್ರಭಾ ವೆಂಕಟೇಶ್‌, ಗಾಯತ್ರಿ ಚಂದ್ರಶೇಖರ್‌, ರಮಾ ನರಸಿಂಹನ್‌ ಅವರಿಗೆ, ಬೆಳಕಿನ ವ್ಯವಸ್ಥೆ ಮಾಡಿದ ನಂದಕಿಶೋರ್‌ ಅವರಿಗೆ, ರಂಗಾಲಂಕಾರ ಒದಗಿಸಿದ ಮಂಗಳ ಕುಮಾರ್‌ ಅವರಿಗೆ, ರಂಗ ನಿರ್ವಾಹಕರಾದ ಹರಿಸರ್ವೋತ್ತಮದಾಸ್‌ ಮತ್ತು ವೀಡಿಯೋ ಗ್ರಾಹಕರಾದ ರಾಜ್‌ ಜೋಶಿ, ಮತ್ತು ಚಂದ್ರಶೇಖರ್‌ ಹಾಗೂ ಪ್ರೇಕ್ಷಕರಿಗೆಲ್ಲ ವಂದನಾರ್ಪಣೆ ಗೈಯ್ಯುವುದರೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಂಡವು.

ಪು.ತಿ.ನ. ಪ್ರತಿಷ್ಠಾನಕ್ಕೆ ಈವರೆಗೆ 15 ಸಾವಿರ ಡಾಲರ್‌ ಹಣ ಸಂಗ್ರಹವಾಗಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ಹಿಡಿದ ಕನ್ನಡಿ.

ವಾರ್ತಾ ಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more