• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಜ್ಜ, ಅಜ್ಜ, ಕಥೆ ಹೇಳು

By Staff
|

*ಡಾ. ಕೆ. ಆರ್‌. ಎಸ್‌. ಮೂರ್ತಿ

Dr. K.R.S.Murthy, The Authorಇನ್ನೂ ಪುಟ್ಟ ವಯಸ್ಸಿನ ಮಗುವಾಗಿದ್ದಾಗ, ಅಜ್ಜನ ತೊಡೆಯ ಮೇಲೆ ಕೂತೋ, ಅಜ್ಜಿಯ ಸೀರೆಯ ಸೆರಗನ್ನು ಬೆಚ್ಚಗೆ ಮುಚ್ಚಿ ಹೊದ್ದುಕೊಂಡೋ, ಒಂದಾದ ಮೇಲೊಂದರಂತೆ ಕಥೆಗಳನ್ನು ಕೇಳಿ, ಕೇಳಿ, ಅಜ್ಜ ಅಜ್ಜಿಯರಿಗೆ ನಿದ್ದೆ ಬಂದರೂ ನಮಗಂತೂ ಮತ್ತಷ್ಟು ಕಥೆಗಳನ್ನು ಕೇಳುವ ಚಪಲ. ಕೇಳಿದ್ದ ಕಥೆಯನ್ನೇ ಮತ್ತೆ ಮತ್ತೆ ಕೇಳಿಸಿಕೊಳ್ಳುವ ಉತ್ಸಾಹದ ದಿನಗಳು. ಗೊತ್ತಿದ್ದ ಕಥೆಯನ್ನು, ಗಟ್ಟುಮಾಡಿಕೊಂಡ ಘಟನೆಗಳನ್ನು, ಇನ್ನೂ ಮೊದಲಿನ ಸಾರಿ ಕೇಳುತ್ತಿರುವೆವೋ ಎಂಬಂತೆ ಇನ್ನಿಲ್ಲದ ಕುತೂಹಲ. ರಾಜ ರಾಣಿಯರ ಕಥೆಗಳು, ಭಯಬಿದ್ದು ಕೈಕಾಲು ನಡುಗುವ ಭೂತಗಳ ವಿಚಿತ್ರಗಳು, ಮಾಯ, ಮೋಜು, ಕಣ್ಕಟ್ಟು ಎಲ್ಲವನ್ನೂ ನಮ್ಮ ಕಣ್ಣ ಮುಂದೆ ಕಟ್ಟುವ ಹಾಗೆ ಹೇಳಿದ್ದು ನಮ್ಮೆಲ್ಲರ ಅಜ್ಜ-ಅಜ್ಜಿಯರ ಜಾಣತನವೋ, ಮುಗ್ಧ ಮನಸ್ಸಿನ ವಯಸ್ಸಿನ ಮಿದುಳಿನ ಹಸಿವೆಯೋ ಯಾರು ತಾನೆ ಬಲ್ಲರು!

ಈಗಲೂ, ಕಥೆ ಕೇಳುವ ಚಪಲ. ನಮ್ಮ ಕಾಲ ಕುದುರೆಯು ನಂಬಲಾಗದ ವೇಗದಲ್ಲಿ ಬಂದಿದ್ದರೂ, ನಮ್ಮ ಕಲ್ಪನೆಯ ರೆಕ್ಕೆ ಬಿಚ್ಚಿ ಗಗನಕ್ಕೆ ಹಾರುವ ಹೃದಯಕ್ಕೆ ಕಥೆಗಳನ್ನು ಕೇಳುವ ಹಸಿವೆಯು ಕಥೆಗಳನ್ನು ಕೇಳಿದಷ್ಟೂ ಹೆಚ್ಚಾಗುತ್ತದೆ.

ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥೆಗಳಿಗೆ ಬಹಳ ಪ್ರಾಶಸ್ತ್ಯ. ಓದಲು ಕೂತ ತಾಸಿನಲ್ಲೇ ಕಲ್ಪನೆಯ ಲೋಕಕ್ಕೆ ಹೋಗಿ ಹಿಂತಿರುಗಿ ಬಂದುಬಿಡಬಹುದು. ಆಪ್ತ ಮಿತ್ರರಿಗೆ ನಾವು ಓದಿದ ಕಥೆಗಳನ್ನು ಇನ್ನೂ ಕಡಿಮೆ ಸಮಯದಲ್ಲಿ ಹೇಳಿಬಿಡಬಹುದು. ಒಬ್ಬರಿಗೊಬ್ಬರು ಕಥೆ ಹೇಳಿ-ಕೇಳಿ ಗೆಳೆತನವನ್ನು ಬೆಳೆಸಿಕೊಳ್ಳಬಹುದು.

ನಮ್ಮ ಹಳ್ಳಿ ಬಿಟ್ಟು, ಕೇರಿ ದಾಟಿ, ಊರನ್ನು ದೂರ ಮಾಡಿ, ಪರದೇಶಿಯೂ ಆಗಿಬಿಟ್ಟ ಮೇಲೆ ಇನ್ನಾ ್ಯರಿಗೆ ಕಥೆ ಹೇಳಬಹುದು? ನಮ್ಮ ಪರನಾಡಿನ ಸ್ನೇಹಿತರಿಗೆ ಕನ್ನಡ ಬರುವುದಿಲ್ಲ ; ನಮ್ಮ ಅಮ್ಮನ ಮಾತಿನ ಮೋಡಿ ಇವರಿಗೆ ತಿಳಿಯುವುದಿಲ್ಲ. ಆದರೂ, ನಮ್ಮೂರ ಚೆಂದವನ್ನು ಇಲ್ಲಿನ ಗೆಳೆಯರಿಗೆ ಹೇಳಿ ಹೆಮ್ಮೆ ಪಡಬೇಕು. ನಮ್ಮೂರ ಕೆರೆಯು ಮಳೆಯ ನೀರಿನಿಂದ ತುಂಬಿ ಕೋಡಿ ಹರಿದಾಗ ಚಿಕ್ಕ ಮಕ್ಕಳಾದ ನಮಗೆ ಶಾಲೆಗೆ ರಜೆ. ಆಗ ಹಬ್ಬವೋ ಎಂಬಂತೆ ಅಮ್ಮನಿಗೆ ಗೊತ್ತಾಗದ ಹಾಗೆ ನೀರಿನಲ್ಲಿ ಆಟ ಆಡುತ್ತಿದ್ದಾಗಿನ ಸಂಭ್ರಮವನ್ನು ಹಂಚಿ, ನಮ್ಮ ಕಳೆದ ದಿನಗಳ ನೆನಪಿನ ಬುತ್ತಿಯ ಸಿಹಿ ತಿನಿಸಿ ಇವರ ಮುಖದಲ್ಲಾಗುವ ಆನಂದದ ಅಚ್ಚರಿ ಕಣ್ಣಾರೆ ನೋಡಬೇಕು.

ನಮ್ಮ ಕಥೆಗಾರರನ್ನು ಕನ್ನಡೇತರರಿಗೆ ಪರಿಚಯಿಸಬೇಕು

ನಾವು ಬೆಳೆಯುತ್ತಿದ್ದಾಗ ಪಠ್ಯ ಪುಸ್ತಕದೊಳಗೆ ಅವಿತಿಟ್ಟುಕೊಂಡು ಓದಿ ಆನಂದಿಸಿದ ನಮ್ಮ ಮೆಚ್ಚಿನ ಸಣ್ಣ ಕಥೆಗಾರರ ಅನೇಕ ಕಥೆಗಳನ್ನು ಕನ್ನಡೇತರರಿಗೆ ಅಚ್ಚುಕಟ್ಟಾಗಿ ಹೇಳಬೇಕು. ನಮ್ಮ ಕಥೆಗಾರರನ್ನು ಕನ್ನಡೇತರ ಪ್ರಪಂಚಕ್ಕೆ ಪರಿಚಯಿಸಬೇಕು. ಕನ್ನಡದ ಸಣ್ಣ ಕಥೆಗಳ ಭೀಷ್ಮರಾದ ಮಾಸ್ತಿ ಅಜ್ಜನಿಂದ ಹಿಡಿದು ಸಣ್ಣಕಥೆಗಳ ಬಹುದೊಡ್ಡ ಅರಮನೆಯ ಹೊಸ್ತಿಲನ್ನು ಮೊನ್ನೆ ದಾಟಿದ್ದರೂ ಈಗಾಗಲೇ ಚೆಂದವಾಗಿ ಚಿತ್ರಿಸಬಲ್ಲ ಅಭಿಮನ್ಯು ಸಾಹಿತಿಗಳನ್ನೂ, ಭಾರತದ ಸಾಹಿತ್ಯ ಸಂಸ್ಕೃತಿ ದೇವಿಯ ಸೌಂದರ್ಯವನ್ನು ಇನ್ನೂ ಕಾಣದ ಇಲ್ಲಿನ ಸಮಾಜಕ್ಕೆ ಇಂಗ್ಲೀಷು ಭಾಷೆಯಲ್ಲಿ ಒಪ್ಪವಾಗಿ ಹೇಳಬೇಕು.

Thaatha..Kathe Helu Thaatha !ಇದಕ್ಕೆ ‘ಕನ್ನಡೇತರರಿಗೆ ಕನ್ನಡದ ಕಥೆಗಳು’ ಅಥವಾ Kannada Stories in English ಎಂಬ ಶೀರ್ಷಿಕೆಯ ವೇದಿಕೆಯಿಂದ ನಡೆಸುವ ಹಂಬಲ ನನ್ನದು. ಈ ಕನ್ನಡದ ಸೇವೆಯ ಕೈಂಕರ್ಯಕ್ಕೆ ಎಲ್ಲರಿಗೂ ಸ್ವಾಗತ. ಈ ಕೈಂಕರ್ಯದಿಂದ ನಮಗೆಲ್ಲರಿಗೂ ಬರುವ ಪುಣ್ಯದ ಫಲಗಳನ್ನು ಈ ಕೆಳಗಿನಂತೆ ವಿವರಿಸಬಹುದು:

1. ಇದನ್ನು ಬಹಳ ಸುಲಭವಾಗಿ, ಕಡಿಮೆ ಸಮಯದಲ್ಲಿ ನಡೆಸಬಹುದು.

2. ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಚಾರದಲ್ಲಿ ತೊಡಗಿರುವ ಇತರ ಕನ್ನಡ ಸಂಸ್ಥೆಗಳ ಹಾಗೂ ಹೊರನಾಡ ಕನ್ನಡ ಕೂಟಗಳ ವಿವಿಧ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಬಹುದು.

3. ಇಂಗ್ಲೀಷಿನಲ್ಲಿ ಕನ್ನಡ ಕಥೆಗಳನ್ನು ಬರೆಯುವುದಕ್ಕಿಂತ ಬಾಯಿಯಲ್ಲಿ ಹೇಳಲು ಕಡಿಮೆ ತಯಾರಿ ಬೇಕು.

4. ಈ ವೇದಿಕೆಯು ನಮ್ಮೆಲ್ಲರಿಗೂ, ಕಿರಿಯರಿಂದ ಹಿರಿಯರವರೆಗೂ, ಕಥೆ ಹೇಳುವ ತರಬೇತು ಕೊಡುತ್ತದೆ.

5. ಕಥೆ ಹೇಳುವುದನ್ನು ಪ್ರಯತ್ನಿಸಿದ ಮೇಲೆ, ಭಾಷಾಂತರ ಮಾಡುವುದಕ್ಕೆ ಹೆಚ್ಚು ಧೈರ್ಯವು ಬರುತ್ತದೆ.

6. ಕಥೆ ಬರೆದು ಅಥವ ಭಾಷಾಂತರಿಸಿ ಪ್ರಕಟಿಸಿದ ಮೇಲೆ ಓದುಗರ ಪ್ರತಿಕ್ರಿಯೆ ಬರುವುದಕ್ಕೆ ಬಹಳ ಕಾಲವೇ ಆಗಬಹುದು. ಆದರೆ, ಈ ವೇದಿಕೆಯಲ್ಲಿ ಪ್ರತಿಕ್ರಿಯೆಗಳನ್ನು ನಿಮ್ಮ ಸಭಿಕರಿಂದ ಸುಲಭವಾಗಿಯೂ, ಶೀಘ್ರವಾಗಿಯೂ ಅವರ ಮಾತುಗಳಲ್ಲೇ, ಅವರವರ ಬಾಯಿಂದಲೇ ಕೇಳಿ ತಿಳಿದು ಕೊಳ್ಳಬಹುದು. ಸಭಿಕರು ನಿಮ್ಮ ಕಥೆಗಳನ್ನು ಕೇಳುವಾಗ ಅವರಿಗೆ ತಿಳಿದಂತೆಯೂ, ತಿಳಿಯದಂತೆಯೂ ಅವರ ಭಾವ-ಭಂಗಿ ಪ್ರತಿಕ್ರಿಯೆಯ ಮೂಲಕ ನೀವೂ, ನಿಮ್ಮ ಸಹಪಾಠಿ ಸಾಹಿತಿಗಳು ನಿಮ್ಮ ಪರವಾಗಿಯೂ ಅತ್ಯವಶ್ಯಕ ಅವಲೋಕನಗಳನ್ನು ಪಡೆಯಬಹುದು. ಈ ಸಮಯದಲ್ಲಿ , ಉದಯೋನ್ಮುಖ ಕಥೆಗಾರರೂ, ಭಾಷಾಂತರಕಾರರೂ ‘ಕೆಲವಂ ಬಲ್ಲವರಿಂದೆ ಕಲ್ತು ...’ ಎನ್ನುವ ಹಾಗೆ ಕಲಿಯಬಹುದು; ಕಲಿತದ್ದನ್ನು ಸರಿ ಇದೆ-ಇಲ್ಲ ಎಂದು ಮನನ ಮಾಡಿಕೊಳ್ಳಬಹುದು.

7. ಈ ವೇದಿಕೆಯ ಕಾರ್ಯಕ್ರಮಗಳನ್ನು ಆಹ್ವಾನಿತ ಸಭಿಕರಿಗಾದರೂ, ಸರ್ವಜನಾಹ್ವಾನಿತ ಸಭಿಕರಿಗಾದರೂ ನಡೆಸಬಹುದು.

8. ಅಮೆರಿಕ, ಕೆನಡಾ, ಇಂಗ್ಲೆಂಡು, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಈಗಾಗಲೇ ಅನೇಕ ಸಣ್ಣಕಥೆ ಮತ್ತು ಇತರ ಸಾಹಿತ್ಯ ಪ್ರಕಾರಗಳ ಪ್ರಿಯರ ಸಂಘ-ಸಂಸ್ಥೆಗಳು ಪ್ರಚಲಿತವಾಗಿವೆ. ಈ ವೇದಿಕೆಯಲ್ಲಿ ಕನ್ನಡೇತರ ಸಾಹಿತ್ಯ ಪ್ರೇಮಿಗಳು ಭಾರತದ, ಕನ್ನಡದ ಕಥೆಗಳನ್ನು ಕೇಳಲು ಆಸಕ್ತರಿದ್ದಾರೆ. ಕಥೆಗಳನ್ನು ಇಂಗ್ಲೀಷು ಭಾಷೆಯಲ್ಲಿದ್ದರೂ ಓದುವಾಗ ಸರಿಯಾಗಿ ತಿಳಿಯುವುದು ಕಷ್ಟವಾದ್ದರಿಂದ, ಯಾರಾದರೂ ಕಥೆಯನ್ನು ಹೇಳಿದರೆ ಬೇಕೆಂದಾಗ ಪ್ರಶ್ನೆಗಳನ್ನು ಕೇಳಿ ತತ್ಸಮಯದಲ್ಲೇ ತಿಳಿದುಕೊಳ್ಳಬಹುದು ಎಂಬ ಮುಖ್ಯ ಕಾರಣದಿಂದ ನಮಗೆ ಆಹ್ವಾನ ಕೊಡುತ್ತಾರೆ.

ಮರೆಯಬೇಡಿ: ಸಂಸ್ಕೃತಿಯ, ಸಾಹಿತ್ಯದ ಪರಸ್ಪರ ವಿನಿಮಯವನ್ನು ಉಭಯ ದಿಕ್ಕುಗಳಲ್ಲೂ ಮಾಡುವುದನ್ನು ಗಮನದಲ್ಲಿಟ್ಟುಕೊಳ್ಳಿ. ಮೊದಲಿಗೆ, ಅವರ ಕಾರ್ಯಕ್ರಮಗಳಿಗೆ ಶ್ರಧ್ಧೆಯಿಂದ ಕೆಲವು ಸಾರಿ ಹೋಗಿ, ಸ್ನೇಹವನ್ನು ಚೆನ್ನಾಗಿ ಬೆಳೆಸಿಕೊಂಡು, ನಂತರವೇ ನೀವು ಕಥೆ ಹೇಳಲು ಒಪ್ಪಿಕೊಳ್ಳಿ. ಆಡಂಬರ, ಟೊಳ್ಳು ಹೆಮ್ಮೆಗಳನ್ನು ಪ್ರದರ್ಶಿಸ ಬೇಡಿ. ನಮ್ಮ ಭಾಷೆಯೇ ಹೆಚ್ಚು ಎಂಬ ವಿದ್ಯಮಾನಗಳನ್ನು ಮನೆಯಲ್ಲಿಯೇ ಬಿಟ್ಟುಬನ್ನಿ. ಎಲ್ಲರಿಗೂ ಅವರವರ ಮಾತೃಭಾಷೆ ಅತಿಪ್ರಿಯವಾದದ್ದು ಎಂಬುದನ್ನು ಮರೆಯಬೇಡಿ. ಗೊತ್ತಿದ್ದನ್ನು ಮಾತ್ರ ಹೇಳಿ; ಗೊತ್ತಿಲ್ಲದಿದ್ದರೆ, ತಿಳಿದುಕೊಂಡು ಬಂದು ಹೇಳುತ್ತೇನೆ ಎಂದು ನಮ್ರವಾಗಿ ಹೇಳಿ. ನಾವು ಯಾರೂ ಸರ್ವಜ್ಞರಲ್ಲ; ನಮ್ರತೆಯು ಸಜ್ಜನರ, ಬುಧ್ಧಿವಂತರ ಬಹು ಮುಖ್ಯ ಗುಟ್ಟು, ಬಹುಬೆಲೆಯ ಆಭರಣ.

ಮಕ್ಕಳಲ್ಲವೇ ಉಭಯ ಸಂಸ್ಕೃತಿ ನಡುವಿನ ಸೇತು

9. ಪರನಾಡಿನಲ್ಲಿ ಹುಟ್ಟಿ ಬೆಳೆದ ನಮ್ಮ ಕನ್ನಡಿಗರ ಮಕ್ಕಳು ನಮಗಿಂತ ರಸವತ್ತಾಗಿ ಪರನಾಡಿನ ಜನಗಳಿಗೆ ಸುಲಭವಾಗಿ ಅರ್ಥವಾಗುವಂತೆ ಕಥೆಯನ್ನು ಹೇಳಬಲ್ಲರು. ನಿಮ್ಮ ಮಕ್ಕಳಿಗೆ ಕನ್ನಡ ಭಾಷೆ ಓದಲು, ಬರೆಯಲು ಬರಬೇಕಾಗಿಯೇ ಇಲ್ಲ. ನೀವು ಕನ್ನಡದ ಕಥೆಯನ್ನು ಕನ್ನಡದಲ್ಲಿಯಾಗಲೀ, ಇಂಗ್ಲೀಷಿನಲ್ಲಿಯಾಗಲೀ, ಸಮಯಕ್ಕೆ ತಕ್ಕಂತೆ ಎರಡು ಭಾಷೆಗಳಲ್ಲೂ, ಚಿತ್ರ, ಛಾಯಾಚಿತ್ರ ಮೊದಲಾದವುಗಳ ಸಹಾಯದಿಂದ ಮಕ್ಕಳಿಗೆ ನಿಮ್ಮ ಮೆಚ್ಚಿನ ಸಣ್ಣ ಕಥೆಗಳನ್ನು ತಿಳಿಸಬಹುದು. ನಂತರ, ನಿಮ್ಮ ಮಕ್ಕಳು ಅವರಿಗೆ ಅನುಕೂಲವಾಗುವಂತೆ ಇಂಗ್ಲೀಷಿನಲ್ಲಿ ಕಥೆಯನ್ನು ಬರೆದುಕೊಳ್ಳಬಹುದು. ಬರೆಯುವುದರಲ್ಲಿಯೂ, ಕಥೆಯನ್ನು ಹೇಳಲು ತರಬೇತಿ ಮಾಡುವ ಸಮಯದಲ್ಲೂ ನೀವೂ, ನಿಮ್ಮ ಮಕ್ಕಳೂ ಒಟ್ಟಿಗೆ ಕೆಲಸವನ್ನು ಸಾಧಿಸಬಹುದು. ಸಭೆಯಲ್ಲಿ ಕಥೆಯನ್ನು ಹೇಳುವಾಗ ಸೂಕ್ತವಾಗಿ ಚಿತ್ರ, ಛಾಯಾಚಿತ್ರ, ವಿಗ್ರಹ, ಮನೆಯ ವಸ್ತುಗಳನ್ನು ಉಪಯೋಗಿಸಬಹುದು. ನಿಮ್ಮ ಮಕ್ಕಳಲ್ಲವೇ ಉಭಯ ಸಂಸ್ಕೃತಿಗಳಿಗೂ ನಡುವೆ ಇರುವ ಸೇತುವೆ!

ನಿಮ್ಮ-ನಮ್ಮ ಗುಟ್ಟು: ಈ ವೇದಿಕೆಯ ಮೂಲಕ ನಿಮ್ಮ ಮಕ್ಕಳಿಗೂ ಲಾಭ, ನಿಮಗೂ ಲಾಭ; ನಿಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಹೆಮ್ಮೆ ಹುಟ್ಟುತ್ತದೆ, ನಿಮಗೆ ನಿಮ್ಮ ಮಕ್ಕಳ ಬಗ್ಗೆ ಹೆಮ್ಮೆ ಹೆಚ್ಚುತ್ತದೆ.

10. ಈ ವೇದಿಕೆಯಿಂದ ಕನ್ನಡದ ಸಾಹಿತ್ಯವೂ, ಸಂಸ್ಕೃತಿಯೂ, ಸಾಹಿತಿಗಳೂ ಪರನಾಡಿನಲ್ಲಿ ಸಾಹಿತ್ಯಾಭಿಮಾನಿಗಳ ಜ್ಞಾನ ಭಂಡಾರಕ್ಕೆ ಸೇರುತ್ತಾರೆ.

11. ಕನ್ನಡದ ಸಾಹಿತಿಗಳೋ, ವಿಶೇಷವಾಗಿ ಸಣ್ಣಕಥೆಗಾರರೋ, ಪರನಾಡಿನಲ್ಲಿರುವ ನಿಮ್ಮೂರಿಗೆ ಬಂದರೆ, ಅವರಿಂದಲೂ ಅವರ ಕಥೆಗಳನ್ನು ಹೇಳಿಸಬಹುದು. ನೀವೂ, ನಿಮ್ಮ ಮಕ್ಕಳೂ ಒಟ್ಟಿಗೆ ಸಭೆಯಲ್ಲಿದ್ದು, ಸಮಯ ಸೂಕ್ತವಾಗಿ, ಆ ಕನ್ನಡದ ಸಣ್ಣ ಕಥೆಗಾರರು ಇಂಗ್ಲೀಷಿನಲ್ಲಿ ಕನ್ನಡೇತರ ಸಾಹಿತ್ಯಾಭಿಮಾನಿ ಸಭಿಕರಿಗೆ ಕಥೆ ಹೇಳುವಾಗ ಸಹಾಯಕರಾಗಬಹುದು.

ಈ ಕಾರ್ಯಕ್ರಮಗಳನ್ನು ನಡೆಸಲು, ತಯಾರಿಯ ಸಮಯದಲ್ಲಿ ನಿಮಗೆ ಸಹಾಯ ಬೇಕಿದ್ದಲ್ಲಿ ಈ-ಮೇಲ್‌ ಮೂಲಕ ನನ್ನನ್ನು ಸಂಪರ್ಕಿಸ ಬಹುದು: kannada_maathe@yahoo.com

Post your views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X