ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಇಕೆಕೆ ಪ್ರೋಗ್ರಾಂ ಏನ್‌ ಚಲೋ ಇತ್ತಂತೀರಿ..

By Staff
|
Google Oneindia Kannada News
  • ವಾದಿರಾಜ ಮನಗೋಳಿ
  • ಚಿತ್ರಗಳು : ಸಂಜಯ್‌ ಹಾಗೂ ಸಂತೋಷ್‌ ಅಂಗಡಿ
Vadiraja Managoli, Authorನಾನಂತೂ ಪಕ್ಕಾ ಧಾರವಾಡದಂವಾ. ಹೋದ ಸಲಾ ಬೆಂಗಳೂರ ಭಾಷೆಯಾಳಗ ಬರದು ಒಂಥರಾ ನಮ್ಮೂರಿನ ಐಡೆಂಟಿಟಿ ಕಳಕೊಂಡಂಗ ಆಗಿತ್ತು. ಈ ಸಲ ಅದಕ್ಕ ನಮ್ಮ ಭಾಷೆಯಾಳಗ ಬರದರಾತು ಅಂತ ವಿಚಾರ ಮಾಡಿದೆ. ನಾವು ಸಣ್ಣವರಿದ್ದಾಗ ಎಲ್ಲಾದರು ಟ್ರಿಪ್‌ ಅಂತ ಹೋಗಿ ಬಂದರ ನಮ್ಮ ಮಾಸ್ತರು ‘ಟ್ರಿಪ್‌ ಮ್ಯಾಲೆ ಒಂದು ನಿಬಂಧ ಬರೀಲೆ’ ಅಂತ ಹೇಳೊವ್ರು. ಅವಾಗ ಹಂಗ ಬರದಿದ್ದಕ್ಕ ಈಗ ಸ್ವಲ್ಪ ಬರೀಲಿಕತ್ತೀನಿ.

ನಮ್ಮ ‘ಮಂದಾರ ನ್ಯೂಇಂಗ್ಲಂಡ್‌ ಕನ್ನಡ ಕೂಟ’ದವರು ಇದ ಶನಿವಾರ ನವಂಬರ್‌ 23ಕ್ಕ ‘ಕರ್ನಾಟಕ ರಾಜ್ಯೋತ್ಸವ, ದೀಪಾವಳಿ ಮತ್ತ ಮಕ್ಕಳ ದಿನಾಚರಣೆ’ ಆಚರಿಸಿದರು. ಈ ಸಲಾ ಸಣ್ಣ ಹುಡುಗರ ಪ್ರೊಗ್ರಾಂ ನೋಡುವಂಗಿತ್ತು. ಪ್ರತೀ ಸಲದಂಗ ಈ ಸಲಾನೂ ಸ್ವಲ್ಪ ಲೇಟಾಗೇ ಹೋಗೋದಾತು (ಮನ್ಯಾಗ ಹೆಂಡ್ತಿ ಮಕ್ಕಳನ್ನ ಹೊರಡಿಸ್ಕೊಂಡು ಥಂಡ್ಯಾಗ ಹೋಗ್ಬೇಕಲ್ಲಾ). ನಾವು ಹೋಗೋದ್ರಾಗ ಲಕ್ಷ್ಮಿ ಪೂಜಾ ಮುಗದ ಹೋಗಿತ್ತು. ಲಕ್ಷ್ಮಿ ಅಲಂಕಾರ ಭಾಳ ಛಂದಾಗಿ ಮಾಡಿದ್ರು. ನಾವು ಹೋಗೋದಕ್ಕ ಕರೆಕ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸುರು ಆತು. ಸೆನೇಮಾ ಆಕ್ಟರ್‌ ಶ್ರೀನಾಥ್‌ ಅವರ ಮಗಳು ಅಮೂಲ್ಯ ದೀಪಕ್‌ ಅವರು ಅನೌನ್ಸ್‌ ಮಾಡಿಕೋತ ಪೂರಾ ಕಾರ್ಯಕ್ರಮ ನಡೆಸಿ ಕೊಟ್ರು.

Akshara prasad sings beside her motherಮೊದ್ಲಿಗೆ ಸಣ್ಣ ಹುಡುಗರು ಎರಡು ಮೂರು ಹಾಡು ಹಾಡಿದ್ರು. ಒಂದು ಸಣ್ಣ ಹುಡುಗಿಯಂತೂ (ಅಕ್ಷರಾ ಪ್ರಸಾದ್‌) ಅವರಮ್ಮನ ಸೆರಗು ಹಿಡಕೊಂಡೇ ಎಂ. ಎಸ್‌, ಸುಬ್ಬಲಕ್ಷ್ಮಿಯವರ ’ವೆಂಕಟಾಚಲ ನಿಲಯಂ’ ಛೊಲೊ ಹಾಡಿದ್ಲು. ಇನ್ನೊಂದು ಹುಡುಗಿ ಅಶ್ವಿನಿ ಆನಂದ್‌ ‘ಅತ್ತಿತ್ತ ನೋಡದಿರು’ ಅಂತ ಒಂದು ಜೋಗುಳ ಹಾಡು ಹಾಡಿದ್ರ ಕೂತವ್ರು ಒಂದಿಬ್ರು ಆಕಳಿಸಿದ್ದ ನೋಡ್ದೆ (ಸುಮ್ಮನ ಅಂದೆ!). ಪ್ರೇರಣಾ ಪುರೋಹಿತ ಅಂತ ಒಂದು ಹುಡುಗಿ ಏನ ಛಂದ ಭರತನಾಟ್ಯ ಮಾಡಿದ್ಲಂದ್ರ ಯಾರೋ ಪ್ರೊಫೆಶನಲ್‌ ಡ್ಯಾನ್ಸರ್‌ ಮಾಡಿದಂಗಿತ್ತು.

ಆಮ್ಯಾಲೆ ಚಿನ್ಮಯ ಬಾಲವಿಹಾರದವರು ‘ಕಾಗೆ, ನರಿ ಮತ್ತು ಹಾವು’ ಅಂತ ಪಂಚತಂತ್ರದ್ದ ಒಂದು ಸ್ಕಿಟ್‌ ಭಾಳ ಛೊಲೊ ಮಾಡಿದ್ರು. ಮಕ್ಕಳಾದ್ರೂ ಒಂದು ತಪ್ಪೂ ಮಾಡಲಾರ್ದ ಅಭಿನಯಿಸಿದ್ರು. ನಂತರ ಚಿಣ್ಣರು ಮಾಡಿದ ಕೋಲಾಟ (ಕೋಲು ಕೋಲೆನ್ನ ಕೋಲೆ) ಈ ಇಡೀ ಪ್ರೋಗ್ರಾಂನ್ಯಾಗ ಭಾಳ ಮುದ್ದಾಗಿ ಇತ್ತು . ಮತ್ತ ಪ್ರೇಕ್ಷಕರೂ ನಕ್ಕೋತ ಚಪ್ಪಾಳೆ ಹೊಡದಿದ್ದ ಹೊಡದಿದ್ದು. ಇಷ್ಟು ಸಣ್ಣ ಹುಡುಗರಿಗೂ ಇಷ್ಟು ಟ್ಯಾಲೆಂಟ್‌ ಇರ್ತದಂತ ಇವತ್ತ ಗೊತ್ತಾಗಿದ್ದ ನೋಡ್ರಿ.

ಶಿಶುಭಾರತಿ ಟೀಮಿನ ಮಕ್ಕಳು ಬಿ.ಎಂ.ಶ್ರೀಕಂಠಯ್ಯನವರ ‘ಪುಣ್ಯ ಕೋಟಿ’ ಡ್ಯಾನ್ಸ್‌/ಡ್ರಾಮಾ ಅಗದಿ ಸೆಂಟಿಯಾಗಿ ಮಾಡಿ ತೋರ್ಸಿದ್ರು. ಹುಲಿ ವೇಷಾ ಹಾಕ್ಕೊಂಡಿದ್ದ ಹುಡುಗ/ಗಿಯಂತೂ ಥೇಟ್‌ ಹುಲಿಯಂಗ ಕಾಣಿಸ್ತಿತ್ತು. ಈ ‘ಚಿನ್ಮಯ ಬಾಲವಿಹಾರ’ ಮತ್ತ ‘ಶಿಶುಭಾರತಿ’ಯಂಥಾವರು ಮಕ್ಕಳಿಗೆ ಛೊಲೊ ಟ್ರೇನಿಂಗ ಕೋಡ್ತಾರ. ಹುಡುಗರೂ ಮೈ ಛಳಿ ಬಿಟ್ಟು (ಹೊರಗ ಇಷ್ಟು ಛಳಿ ಇದ್ರುನೂ) ನಾಟಕಾ ಮಾಡ್ತಾವ ಮತ್ತ ಹಾಡಿ ಕುಣೀತಾವ, ಸ್ಟೇಜ್‌ ಫಿಯರ್‌ ಇರೂದಿಲ್ಲಾ.

Kolataಇದಾದ ಮ್ಯಾಲೆ ಪೂರ್ಣಿಮಾ ರಿಸಬುಡ್‌ ಅವರ ನಿರ್ದೇಶನದಾಗ ಮತ್ತಷ್ಟು ಹುಡುಗರು ‘ಬಾಲ ಶಿವ ಭಕ್ತರು’ ಅಂತ ಟು ಪಾರ್ಟ್‌ ಡ್ರಾಮಾ ಮಾಡಿದ್ವು. ಮೊದಲನೇ ಪಾರ್ಟ್‌ ಡ್ರಾಮಾ ‘ಭಕ್ತ ಮಾರ್ಕಂಡೇಯ’ ಮತ್ತು ಎರಡನೇದು ‘ಕೊಲ್ಲೂರು ಕೊಡಗೂಸು’. ಎಷ್ಟು ಸಣ್ಣ ಹುಡುಗರು ಥಡಥಡಾಂತ ಡೈಲಾಗ್‌ ಹೊಡೀತಾವಂದ್ರ ಇವ್ರ ಮುಂದ ದೊಡ್ಡವರೂ ತಲಿ ಕೆಳಗ ಹಾಕಬೇಕು.

ಇಷ್ಟೊತ್ತಿಗೆ ಹುಡುಗರು ಹಾಡು ಹಾಡಿ, ಕುಣದು, ನಾಟಕಾ ಮಾಡಿ ದಣದಾವಂತ ಅವಕ್ಕ ಬ್ರೇಕ್‌ ಕೊಟ್ಟ್ರು. ನಮ್ಮ ಕನ್ನಡ ಕೂಟದಾಗ ‘ಲಹರಿ ಸಂಗೀತ ವೃಂದ’ ಅಂತ ದೊಡ್ದವರ್ದೂ ಒಂದು ಹಾಡೊ ಟೀಂ ಅದ. ಅವರು ಈ ಸಲ ಒಂದು ಅಣ್ಣಾವ್ರು ಹಾಡು, ಗೀತಾ, ನಮ್ಮೂರ ಮಂದಾರ ಹೂವೆ, ಗಿರಿಕನ್ಯೆ, ಹೊಂಬಿಸಿಲು, ಅಮೇರಿಕಾ ಅಮೇರಿಕಾ ಸಿನೇಮಾದಂಥಾ ಹೊಸಾ ಹಳೆ ಹಾಡುಗೋಳ ಮಿಕ್ಸ್‌ ಹಾಡಿ ಕುಂತವರ ಚಪ್ಪಾಳೆ ಕಿಸೇಕ್ಕ ಹಾಕ್ಕೊಂಡ್ರು. ಈಗ ಮತ್ತ ಸುಹಾಸ ರಾವ್‌ ಅಂಡ್‌ ಉಲ್ಲಾಸ್‌ ರಾವ್‌ ಬ್ರದರ್ಸ್‌ ‘ತಾರಕ್ಕ ಬಿಂದಿಗೆ’, ‘ಕೋಡಗನ್ನ ಕೋಳಿ ನುಂಗಿತ್ತ’, ‘ಬಾರಿಸು ಕನ್ನಡ ಡಿಂಡಿಮವಾ’ ಅಂತ ಭಾವ-ಭಕ್ತಿ ಗೀತೆ ಹಾಡಿ ನಾವಿನ್ನೂ ದಣಿದಿಲ್ಲಾ ಅಂತ ತೋರಿಸಿ ಕೊಟ್ರು. ಲಾಸ್ಟ್‌ ಪ್ರೋಗ್ರಾಂ ಎನ್‌.ಇ.ಕೆ.ಕೆ. ಸದಸ್ಯರು ಮಾಡಿದ್ದು. ‘ಚಾಮುಂಡಿ ವಂದನೆ’ ಅಂತ ಒಂದು ಡಾನ್ಸ್‌ ಮಾಡಿ ಅದರಾಗ ‘ಚೆಲುವಯ್ಯಾ ಚೆಲುವೊ ತಾನೆ ತಂದಾನ’ ಹಾಡು ಹಾಡಿದ್ರು. ಇದನ್ನ ಅವರು ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದಾಗೂ ಹಾಡಿ ಡಾನ್ಸ್‌ ಮಾಡಿದ್ರು.

Ashwini Anandಗಡಿಯಾರ ಒಂಭತ್ತು ಹೊಡೀಲಿಕತ್ತಿತ್ತು, ಹೊಟ್ಟಿ ಚುರು ಚುರು ಅನ್ಲಿಕತ್ತಿತ್ತು. ಇವರಿಗೆ ಇದು ಹೆಂಗೋ ಗೊತ್ತಾತು ಅಂತ ಕಾಣಸ್ತದ, ಈ ಸಲಾ ಮತ್ತ ಶಿಶುವಿಹಾರದ ಮಕ್ಕಳು ‘ಜಯ ಭಾರತ ಜನನಿಯ ತನುಜಾತೆ’ ಹಾಡಿ ನಮಗೆಲ್ಲಾ ಊಟಕ್ಕ ಹೋಗ್ಲಿಕ್ಕೆ ಅಪ್ಪಣಿ ಕೊಟ್ರು. ಮತ್ತ, ಊಟದಾಗ ಏನಿತ್ತು ಅಂತ ಕೇಳ್ರಿ! ಎಂಟಹತ್ತು ತರದ ಅನ್ನಾ, ಅಷ್ಟೇ ತರದ ಪಲ್ಯೆ, ಚಪಾತಿ, ನ್ಯೂ ಜರ್ಸಿಯಿಂದ ತರಿಸಿದ ಸ್ವೀಟಗೊಳು, ಕುಡಿಯೋರಿಗೆ ಕೋಕ್‌, ಸ್ಪ್ರೈಟ್‌, ಕಾಫಿ ಅಂತ ಏನೇನೊ ಇಟ್ಟಿದ್ರು. ಒಟ್ಟ ಎಲ್ಲಾ ಒಂದಿಷ್ಟು ಟೇಸ್ಟ ಮಾಡಿ ಹೊಟ್ಟಿ ತುಂಬಿಸ್ಕೊಂಡು ಹೊರಗ ಬಂದು ಭಾಳ ದಿವಸದ ಮ್ಯಾಲೆ ಸಿಕ್ಕ ಗುರ್ತಿನವರಿಗೆಲ್ಲಾ ‘ಏನಪಾ ಆರಾಮೇನು’ ಅಂತ ಕೇಳಿ, ಇನ್ನೂ ಆಟಾ ಆಡ್ತೀನಿ ಅಂತ ಹಠಾ ಹಿಡಿದಿದ್ದ ಮಗಳನ್ನ ಎಳಕೊಂಡ ಥಂಡ್ಯಾಗ ಕಾರಿನ್ಯಾಗ ಕುತ್ತು ಮನಿ ಕಡೆ ಹೊಂಟಾಗ ಟೈಮು ಹತ್ತೂವರಿ. ನಾ ಅಲ್ಲೆ ಮಿಸ್ಸ್‌ ಮಾಡಿದ್ದಂದ್ರ ಹೊರಗೊಂದು ಪಾನಪಟ್ಟಿ ಅಂಗಡಿ!!

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X