ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುರಾಯರ 331ನೆ ಆರಾಧನೆ ಆಚರಿಸಿದ ಶಿಕಾಗೊ ಕನ್ನಡಿಗರು

By Staff
|
Google Oneindia Kannada News

*ಕೆ. ತ್ರಿವೇಣಿ ಶ್ರೀನಿವಾಸ ರಾವ್‌,
ಐಟಾಸ್ಕ, ಇಲಿನಾಯ್‌

Sudha Rao speaks about Gururayara Mahimeಪ್ರತಿ ವರ್ಷ ಭಾರತದಾದ್ಯಂತ ಸಾವಿರಾರು ಮಠಗಳಲ್ಲಿ ಶ್ರೀ ಗುರುರಾಯರ ಆರಾಧನೆಯ ಮಹೋತ್ಸವ ನಡೆಯುವುದು ಸಾಮಾನ್ಯವಾದ ಸಂಗತಿ. ಆದರೆ ಭಾರತದಿಂದ ಸಾವಿರಾರು ಮೈಲು ದೂರದ ಕಡಲಾಚೆಗಿನ ಅಮೆರಿಕಾದಲ್ಲಿ- ಮಹಾಮಹಿಮ ಗುರುರಾಯರ 331ನೆಯ ಆರಾಧನೆಯ ಕಾರ್ಯಕ್ರಮವನ್ನು ಶಿಕಾಗೊ ಕನ್ನಡಿಗರು ಕಳೆದ ಶನಿವಾರ, ಆಗಸ್ಟ್‌ 24ರ ಸಂಜೆ ವಿಜೃಂಭಣೆಯಿಂದ ಆಚರಿಸಿದರು.

Gururayara aradhaneಗ್ರೇಟರ್‌ ಶಿಕಾಗೊ ಹಿಂದು ದೇವಾಲಯದ ಆಶ್ರಯದಲ್ಲಿ ನಡೆದ ಆರಾಧನಾ ಮಹೋತ್ಸವದ ರೂವಾರಿ ಸುಧಾರಾವ್‌. ಸರಿಯಾಗಿ ಸಾಯಂಕಾಲ ಆರು ಗಂಟೆಗೆ ತಂಡೋಪತಂಡವಾಗಿ ಆಗಮಿಸಿದ ಉತ್ಸಾಹಿ ಕನ್ನಡಿಗರಿಂದ ದೇಗುಲದ ಆವರಣ ಕಿಕ್ಕಿರಿದು ತುಂಬಿತ್ತು. ನಿಗದಿತ ಕಾರ್ಯಕ್ರಮದಂತೆ ವೇದೋಕ್ತ ಮಂತ್ರಗಳ ಮೂಲಕ ಸಂಕಲ್ಪ ಸಹಿತ ಅರ್ಚನೆಯನ್ನು ಬೃಂದಾವನವೇ ಮಂದಿರವಾದ ರಾಘವೇಂದ್ರ ಸ್ವಾಮಿಗಳಿಗೆ ಸಲ್ಲಿಸಲಾಯಿತು. ನಂತರ ಗುರುರಾಯರ ಸಾರ್ಥಕ ಬದುಕು, ಸಾಧನೆಗಳನ್ನು ಐತಿಹಾಸಿಕ ಆಧಾರಗಳ ಸಹಿತ ಸುಧಾರಾವ್‌ ಸರಳವಾದ ನುಡಿಗಳಲ್ಲಿ ನೆರೆದಿದ್ದ ಜನರಿಗೆ ತಿಳಿಯಪಡಿಸಿದರು. ಅವರ ಈ ಚಿಕ್ಕ , ಚೊಕ್ಕ ಉಪನ್ಯಾಸ ಕಾರ್ಯಕ್ರಮ ಇಂಗ್ಲೀಷಿನಲ್ಲಿದ್ದುದರಿಂದ ಕನ್ನಡ ಬಾರದ ಯುವ ಪೀಳಿಗೆಗೂ ಗುರುರಾಯರ ಮಹಿಮೆ ತಿಳಿಸುವಲ್ಲಿ ಸಹಾಯಕವಾಯಿತು.

ನಂತರದ ಕಾರ್ಯಕ್ರಮ ಭಜನೆ ಮತ್ತು ದೇವರ ನಾಮ ಗಾಯನ. ಪ್ರಸನ್ನ ರಾವ್‌, ಚಿತ್ರಾ, ಅರುಣ ಮುಂತಾದ ಗಾಯಕರು ಇಂಪಾಗಿ ಹಾಡಿದ ದೇವರ ನಾಮಗಳು, ಭಕ್ತಿ ಗೀತೆಗಳು ಬಹುಕಾಲ ಮನಸ್ಸಿನಲ್ಲಿ ಉಳಿಯುವಂತಹವು. ಇದಾದ ನಂತರ ಮಹಾಮಂಗಳಾರತಿ ನಡೆಸಲಾಯಿತು. ಇದೇ ಸಮಯದಲ್ಲಿ ಮಂತ್ರಾಲಯದಿಂದ ತಂದ ಪ್ರಸಾದ ಮತ್ತು ತುಳಸಿ ಸಸಿಗಳನ್ನು ಭಕ್ತರಿಗೆ ವಿತರಿಸಲಾಯಿತು.

Aradhana bhajanಕಾರ್ಯಕ್ರಮದ ಕೊನೆಯಲ್ಲಿ ವ್ಯವಸ್ಥಿತ ಭೋಜನ ಕೂಟ ಏರ್ಪಡಿಸಲಾಗಿತ್ತು. ಈರುಳ್ಳಿ- ಬೆಳ್ಳುಳ್ಳಿಗಳ ಸೋಂಕಿಲ್ಲದ ಶುದ್ಧ, ಸಾಂಪ್ರದಾಯಿಕ ವೈದಿಕ ಭೋಜನ ಬೆರಗುಗೊಳಿಸುವಷ್ಟು ಅಚ್ಚುಕಟ್ಟಾಗಿತ್ತು. ಶುಚಿ ರುಚಿಯಾದ ಸವಿಯಾದ ರಾತ್ರಿಯೂಟ, ಹಿತವಾದ ವಾತಾವರಣ. ಅಲ್ಲಿ ಸೇರಿದ್ದ ಇನ್ನೂರಕ್ಕೂ ಹೆಚ್ಚು ಕನ್ನಡ ಮನಸ್ಸುಗಳಲ್ಲಿ, ಒಂದೇ ಸೂರಿನಡಿ, ಒಂದೇ ಕುಟುಂಬದವರೊಡನೆ ಆಹಾರ ಸೇವಿಸಿದ ಸಾರ್ಥಕತೆ ನೆಲೆಸಿತ್ತು. ಅಮೆರಿಕಾದಂತಹ ಯಾಂತ್ರಿಕ ದೇಶದಲ್ಲಿ ಯಂತ್ರವೇ ಆಗಿ ಹೋಗಿರುವ ಜನರ ಹೃದಯ, ಮೆದುಳನ್ನು ಕೊಂಚ ಮಟ್ಟಿಗಾದರೂ ಜೀವಂತವಾಗಿರಿಸಲು ಆಗಾಗ ಇಂತಹ ಮಂತ್ರ ಪ್ರಯೋಗ ಅವಶ್ಯ ಎಂದು ನನಗನ್ನಿಸಿತು. ಇಂತಹ ಒಂದು ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲು ತಿಂಗಳುಗಳಿಂದ ಶ್ರಮಿಸಿದ ಸುಧಾರಾವ್‌ ಮತ್ತು ಅವರ ಸಂಗಡಿಗರು ನಿಜಕ್ಕೂ ಅಭಿನಂದನೆಗೆ ಅರ್ಹರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X