ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಟ್ರಾಯಿಟ್‌ನಲ್ಲಿ ಸಂಗೀತ ಕಟ್ಟಿಯ ‘ಘಮ ಘಮಾ ಗಮಾಡಿಸ್ತಾವ ಮಲ್ಲಿಗಿ..’

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

Sangeetha Kattiಬಾಲ್ಯದಲ್ಲೇ ಸಂಗೀತದ ಬಗ್ಗೆ ಪ್ರೀತಿ ಬೆಳೆಸಿಕೊಂಡ ಸಂಗೀತ ಕಟ್ಟಿ ಕುಲಕರ್ಣಿ ಕರ್ನಾಟಕದ ಧಾರವಾಡದಾಕಿ. ‘ನಾಲ್ಕರ ವಯಸ್ನಾಗೇ ಸಂಗೀತ ಚಲೋ ಹಾಡ್ತಾಳ’ ಅನ್ನುವ ಸುದ್ದಿ ಕೇಳಿ, ಬಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ ನೌಶಾದ್‌ ಆಲಿ ಸೀದಾ ಈಕಿ ಮನಿಗ ಬಂದಿದ್ರಂತ ! ಈಕಿ ಹಾಡು ಕೇಳಿದ ಮೇಲಂತೂ ನೌಶಾದ್‌- She is wonder in music ಅಂತ ಬಣ್ಣಿಸಿದ್ರಂತ.

ಅಪ್ಪ ಎಚ್‌.ಎ.ಕಟ್ಟಿ ಬೆನ್ನು ತಟ್ಟಿ, ಮಗಳ ಸಂಗೀತದ ಬೀಜವನ್ನು ಮರವಾಗಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಜನೆಗಳು- ಎಲ್ಲ ಪ್ರಕಾರಗಳಲ್ಲೂ ಪಳಗಿದ ಕಂಠ ಸಂಗೀತಾರದ್ದು. ದೆಹಲಿ, ಮುಂಬಯಿ, ಚೆನ್ನೈ, ನಾಗಪುರ, ನಾಸಿಕ್‌, ಪುಣೆ, ಹೈದರಾಬಾದ್‌, ಬೆಂಗಳೂರು ಎಲ್ಲೆಡೆಯಲ್ಲೂ ಹಾಡಿ ಭೇಷ್‌ ಎನಿಸಿಕೊಂಡಿರುವ ಸಂಗೀತ ದಸರಾ ಉತ್ಸವ, ಸಹ್ಯಾದ್ರಿ ಉತ್ಸವ ಮತ್ತು ಹಂಪಿ ಉತ್ಸವಗಳಲ್ಲೂ ಹಾಡಿದ್ದಾರೆ.

ಭಾರತದ ಮುಂಚೂಣಿ ಕೆಸೆಟ್‌ ಕಂಪನಿಗಳಾದ ಮಾಸ್ಟರ್‌ ರೆಕಾರ್ಡಿಂಗ್‌ ಕಂಪೆನಿ ಆಫ್‌ ಚೆನ್ನೈ ಮತ್ತು ಎಚ್‌ಎಂವಿ ಈಕೆ ಹಾಡಿರುವ ಹಿಂದಿ ಮತ್ತು ಕನ್ನಡ ಗೀತೆಗಳ 50ಕ್ಕೂ ಹೆಚ್ಚು ಕೆಸೆಟ್‌ಗಳನ್ನು ಹೊರತಂದಿವೆ. ವಾಣಿ ವೀಣಾಪಾಣಿ, ದೀಪಾಂಜಲಿ, ಶಿವ ಪಾರ್ವತಿ, ಕರ್ನಾಟಕ ಕ್ಷೇತ್ರ ದರ್ಶನ, ಮಂತ್ರಾಲಯ, ಮಂದಿರದಲ್ಲಿ ಶ್ರವಣ ದಾಸ ಸೌರಭ- ಸಾಕಷ್ಟು ಬಿಕರಿಯಾಗಿರುವ ಈಕೆಯ ಗೀತೆಗಳ ಕೆಲವು ಕೆಸೆಟ್‌ಗಳು.

ಅಮೆರಿಕ ಅಮೆರಿಕ, ಅಮರ ಪ್ರೇಮ, ಕಿತ್ತೂರಿನ ಹುಲಿ, ಕಲ್ಯಾಣ ಮಂಟಪ, ಸಿಂಧೂರ ತಿಲಕ, ಬೆಳ್ಳಿ ಮೋಡಗಳು, ಸಪ್ತಪದಿ, ರೆಡಿಮೇಡ್‌ ಗಂಡ, ಒಡಹುಟ್ಟಿದವರು, ನಾಗಮಂಡಲ, ಜನುಮದ ಜೋಡಿ, ಹೆತ್ತಕರುಳು- ಹೀಗೆ ಈಕೆ ಹಾಡಿರುವ ಸಿನಿಮಾಗಳ ಸಂಖ್ಯೆ 100ಕ್ಕೂ ಹೆಚ್ಚು. ಡಾ.ಬಾಲಮುರಳಿ ಕೃಷ್ಣ, ಡಾ.ರಾಜ್‌ಕುಮಾರ್‌, ಎಸ್‌.ಪಿ.ಬಾಲಸುಬ್ರಮಣ್ಯಂ, ಪಿ.ಬಿ.ಶ್ರೀನಿವಾಸ್‌ ಮೊದಲಾದವರ ಜೊತೆ ಯುಗಳ ಗೀತೆಗಳನ್ನು ಹಾಡಿ ಸಂಗೀತ ಪಳಗಿದ್ದಾರೆ.

ಉಪೇಂದ್ರಕುಮಾರ್‌, ವಿಜಯ ಭಾಸ್ಕರ್‌, ಸಿ.ಅಶ್ವತ್‌, ಕೀರವಾಣಿ, ಹಂಸಲೇಖ, ವಿ.ಮನೋಹರ್‌ ಮೊದಲಾದವರ ಟ್ಯೂನ್‌ಗಳಲ್ಲಿ ಹಾಡಿರುವ ಸಂಗೀತ, ಟಿವಿ ಮತ್ತು ರೆಡಿಯೋ ಸಹೃದಯರಿಗೆ ಚಿರಪರಿಚಿತ ಹೆಸರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಸಿನಿಮಾ ಹಾಡುಗಳನ್ನು ತಾದಾತ್ಮ್ಯದಿಂದ ಹಾಡುವ ಈಕೆ ಅಪರೂಪದ ‘ಫ್ಯೂಷನ್‌’ ಗಾಯಕಿ.

ಈಕೆಯ ಪ್ರತಿಭೆಗೆ ಮಾಧ್ಯಮಗಳು ಕನ್ನಡಿ ಹಿಡಿಯುತ್ತಲೇ ಬಂದಿವೆ. ಸಾಧನೆಯ ಹಾದಿಯಲ್ಲಿ ಪ್ರಶಸ್ತಿಗಳ ಗರಿಗಳೂ ಮೂಡಿವೆ. 1991- 92ರಲ್ಲಿ ಚಿತ್ರ ರಸಿಕರ ಸಂಘ ಪ್ರಶಸ್ತಿ, 1995ರಲ್ಲಿ ಆರ್ಯಭಟ ಪ್ರಶಸ್ತಿ ಮತ್ತು 1998ರಲ್ಲಿ ನಾಕ್‌ಔಟ್‌ ಉದಯ ಟಿವಿ ಪ್ರಶಸ್ತಿಗೆ ಸಂಗೀತ ಭಾಜನರಾಗಿದ್ದಾರೆ. ಪದ್ಮಭೂಷಣ ಪಂಡಿತ್‌ ಬಸವರಾಜ ರಾಜಗುರು ಮತ್ತು ಪದ್ಮಭೂಷಣ ಕಿಶೋರಿ ಅಮೋಂಕರ್‌ ಗರಡಿಯಲ್ಲಿ ಪಳಗಿರುವ ಸಂಗೀತ ಈಗ ಅಮೆರಿಕೆಯಲ್ಲಿ ಕಾರ್ಯಕ್ರಮಗಳನ್ನು ನೀಡಲು ಮುಂದಾಗಿದ್ದಾರೆ.

ಇಂಥಾ ಪ್ರತಿಭೆಯ ಕಂಠದಲ್ಲಿ ಹಿಂದಿ ಚಿತ್ರಗೀತೆಗಳು, ಮರಾಠಿ ಭಜನೆಗಳು, ಗಜಲ್‌ಗಳು ಮತ್ತು ಕನ್ನಡದ ಸುಗಮ ಸಂಗೀತ ಕೇಳುವ ಅವಕಾಶ ಇಲ್ಲಿದೆ-

ಸೆಪ್ಟೆಂಬರ್‌ 28ನೇ ತಾರೀಖು ಶನಿವಾರ ಮಧ್ಯಾಹ್ನ 3 ಗಂಟೆಯಿಂದ 6 ಗಂಟೆವರೆಗೆ ಸಂಗೀತ ಕಟ್ಟಿ ಹಾಡುವರು.
ಸ್ಥಳ-
University of Detroit Mercy
Life Sciences Building, Room 113 Next to Clock tower
Detroit, MI
Entrance from Livernois Road only.

ಪ್ರವೇಶ ಶುಲ್ಕ : ಒಂದು ಟಿಕೇಟಿಗೆ 10 ಡಾಲರ್‌. ಹನ್ನೆರಡು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ.

ಟಿಕೇಟುಗಳು ಮತ್ತು ಇತರ ವಿವರಗಳಿಗೆ ಸಂಪರ್ಕಿಸಿ-
ಡಾ.ಎಸ್‌.ರಂಗಸ್ವಾಮಿ (248) 373-9329
ರಂಗ ತಿರುಮಲ (248) 240-7565
ತುಮಕೂರು ದಯಾನಂದ್‌ (248) 497-1294

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X