• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಕ್ಯಾಲಿಫೋರ್ನಿಯಾ ಅಂಗಳದಲ್ಲಿ ಸಾಹಿತ್ಯಾಸಕ್ತ ರ ‘ಅಂಜಲಿ’

By Staff
|

*ರಾಜ್‌ ಅಯ್ಯಂಗಾರ್‌, ಅಲ್‌ಹಾಂಬ್ರಾ, ಕ್ಯಾಲಿಫೋರ್ನಿಯಾ

‘ಕೂಡಿ ಓದಿ ಕೂಡಾಡಿ ಅರಿಯೋಣ ಕೂಡಿ, ಕೂಡಿ..’

ವರಕವಿ ದತ್ತಾತ್ರೇಯ ರಾಮಚಂದ್ರ ಅವರ ಈ ಪ್ರಾರ್ಥನ ಗೀತೆ ಕಾರ್ಯಕ್ರಮದ ಉದ್ದೇಶಕ್ಕೆ ಕನ್ನಡಿ ಹಿಡಿದಂತಿತ್ತು . ಅದು ಸಾಹಿತ್ಯಾಸಕ್ತರ ‘ಅಂಜಲಿ’ಯಲ್ಲಿ ಅರಳಿದ ಕಾರ್ಯಕ್ರಮ. ಸೃಜನಶೀಲರ ತಹತಹಿಕೆಗೆ ರೂಪುಗೊಂಡ ವೇದಿಕೆ. ಕನ್ನಡದ ನೆಲದಲ್ಲಿ ಬೇರಿಳಿಸಿ, ಲಾಸ್‌ ಏಂಜಲೀಸ್‌ ಪರಿಸರದಲ್ಲಿ ಹಸಿರು ಹೂ ಅರಳಿಸಿದ ಮಂದಿಯ ಸಾಹಿತ್ಯ ಕೂಟ.

ಸೆಪ್ಟೆಂಬರ್‌ 20ರಂದು ಹೊಸಕೆರೆ ಅನಂತ್‌ ಮತ್ತು ಲಲಿತ ಅನಂತ್‌ ಅವರ ಹಂಟಿಂಗ್ಟನ್‌ ಬೀಚಿನ ನಿವಾಸದಲ್ಲಿ ಸಾಹಿತ್ಯದ್ದೇ ಘಮ. ಲಾಸ್‌ ಏಂಜಲೀಸ್‌ ಪ್ರದೇಶದ ಹಲವು ಸಾಹಿತ್ಯಾಭಿಮಾನಿಗಳು ಸೇರಿ ಆರಂಭಿಸಿದ ‘ಅಂಜಲಿ’ ಸಾಹಿತ್ಯ ಕೂಟ ವಿಧ್ಯುಕ್ತವಾಗಿ ಆರಂಭವಾಯಿತು. ನ್ಯೂಯಾರ್ಕ್‌ನ ಜನಪ್ರಿಯ ಕನ್ನಡಾಭಿಮಾನಿಗಳಾದ ಡಾ. ಎಚ್‌. ಕೆ. ಚಂದ್ರಶೇಖರ್‌ ಮತ್ತು ಅವರ ಧರ್ಮ ಪತ್ನಿ ಡಾ. ಶ್ರೀದೇವಿ ಅಂದಿನ ಸಾರಸ್ವತ ಸಮಾರಂಭದ ಮುಖ್ಯ ಅತಿಥಿಗಳು.

ಮೊದಲಿಗೆ ಡಾ. ಚಂದ್ರಶೇಖರ್‌ ದಂಪತಿಗಳ ಕಿರುಪರಿಚಯವನ್ನು ಅನಂತ್‌ ನೆರೆದಿದ್ದ ಸಹೃದಯರಿಗೆ ಮಾಡಿಕೊಟ್ಟರು. ನೂತನ ಸಾಹಿತ್ಯ ಕೂಟದ ಉದ್ದೇಶವನ್ನು ವಿವರಿಸಿದ ಡಾ. ನಾಗ ಐತಾಳರು- ‘ಅಂಜಲಿ’ಯಂತಹ ಸಾಹಿತ್ಯ ಕೂಟಗಳು ಅಮೆರಿಕನ್ನಡಿಗರಲ್ಲಿ ಗುಪ್ತವಾಗಿ ಹುದುಗಿದ್ದ ಸಾಹಿತ್ಯಾಭಿಮಾನವನ್ನು ಪ್ರಚೋದಿಸಿ ವ್ಯಕ್ತಪಡಿಸಲು ಸಹಾಯಕವಾಗುವುದು ಎಂದರು.

ಅಂಜಲಿಯಂಥ ಕೂಟಗಳು ಅಮೆರಿಕದಾದ್ಯಂತ ಹುಟ್ಟಿಕೊಂಡಿರುವುದನ್ನು ನೆನೆದ ಐತಾಳರು, ಉತ್ತರ ಕ್ಯಾಲಿಫೋರ್ನಿಯಾದ ಕೂಟ, ಪೂರ್ವ ವಲಯದ ‘ಪ್ರಸ್ತಾಪ’( ನ್ಯೂಯಾರ್ಕ್‌, ನ್ಯೂಜೆರ್ಸಿ, ಫಿಲಡೆಲ್ಫಿಯ), ‘ಭೂಮಿಕಾ’(ವಾಷಿಂಗ್ಟನ್‌), ಮಧ್ಯ ವಲಯದ (ಶಿಕಾಗೋ) ‘ಮಂಥನ’ ಮುಂತಾದ ಕೂಟಗಳ ಚಟುವಟಿಕೆಗಳನ್ನು ಶ್ಲಾಘಿಸಿದರು. ಡಾ. ಚಂದ್ರಶೇಖರ್‌ ಇತ್ತೀಚೆಗೆ ಬರೆದ ‘ಭಾರತದ ಬೃಹತ್‌ ಬೇಲಿ’ ಒಂದು ಅಪೂರ್ವ ಗ್ರಂಥ. ಅಮೆರಿಕನ್ನಡಿಗನೊಬ್ಬ ಬರೆದ ಈ ಗ್ರಂಥವು ಚರಿತ್ರೆಯಲ್ಲಡಗಿದ್ದ ಬ್ರಿಟಿಷರ ಒಂದು ಕ್ರೂರ ದಬ್ಬಾಳಿಕೆಯ ಮೇಲೆ ಬೆಳಕನ್ನು ಚೆಲ್ಲಿ, ಎಲ್ಲ ಅಮೆರಿಕನ್ನಡಿಗರಿಗೂ ಹೆಮ್ಮೆ ಉಂಟು ಮಾಡಿದೆ ಎಂದು ಐತಾಳರು ಹೇಳಿದರು.

ಚರಿತ್ರೆಯ ಪುಟಗಳಿಂದ ತಪ್ಪಿಸಿಕೊಂಡ ಬೇಲಿ

ನ್ಯೂಯಾರ್ಕ್‌ನ ಬಾರ್ಡರ್ಸ್‌ ಗ್ರಂಥ ಭಂಡಾರದಲ್ಲಿ ಓದುತ್ತಿದ್ದಾಗ, ದೊರೆತ ರಾಯ್‌ ಮಾಕ್ಸ್‌ ಹ್ಯಾಂನ The Great Hedge Of India ಎಂಬ ಪುಸ್ತಕವೇ ತಮಗೆ ಅದನ್ನು ಕನ್ನಡದಲ್ಲಿ ಬರೆಯಲು ಪ್ರೇರಣೆ ಕೊಟ್ಟಿತು. ಜನರ ದೈನಂದಿನ ಬಳಕೆಗೆ ಬೇಕಾದ ಅತ್ಯಗತ್ಯ ವಸ್ತು ಉಪ್ಪಿನ ಮೇಲೆ ಸುಂಕ ಹಾಕಿ ಅದರ ಸಾಗಾಣಿಕೆಗೆ ಅಡ್ಡಿ ತರಲೆಂದೇ ಈ ಬೃಹತ್‌ ಬೇಲಿಯನ್ನು 19ನೇ ಶತಮಾನದಲ್ಲಿ ಬ್ರಿಟಿಷರು ನಿರ್ಮಿಸಿದ್ದರೂ, ಈ ವಿಷಯ ಭಾರತದ ಚರಿತ್ರೆಯ ಪುಸ್ತಕಗಳಲ್ಲಿ ಉಲ್ಲೇಖಿತವಾಗದೇ ಇದ್ದುದು ಒಂದು ಆಶ್ಚರ್ಯದ ಸಂಗತಿ ಎಂದು ತಮ್ಮ ಗ್ರಂಥದ ಕುರಿತು ಮಾತನಾಡಿದ ಡಾ. ಚಂದ್ರಶೇಖರ್‌ ಹೇಳಿದರು.

ಬೃಹತ್‌ ಬೇಲಿಯ ಪರಿಣಾಮ ಕಷ್ಟಕ್ಕೊಳಗಾದ ಭಾರತೀಯರು ಅಸಂಖ್ಯಾತ ಸಂಖ್ಯೆಯಲ್ಲಿ ಸಾವಿಗೀಡಾದರೂ ಬ್ರಿಟಿಷರು ಭಾರತದ ಸಂಪತ್ತನ್ನು ಸುಲಿದು ಇಂಗ್ಲೆಂಡ್‌ಗೆ ಸಾಗಿಸಿದರು. ಇವೆಲ್ಲವನ್ನು ತಾವು ತಮ್ಮ ಗ್ರಂಥದಲ್ಲಿ ಸಂಕ್ಷಿಪ್ತವಾಗಿ ನಿರೂಪಿಸಿರುವುದಾಗಿ ಚಂದ್ರಶೇಖರ್‌ ಹೇಳಿದರು.

ಉಪ್ಪಿನ ಕೊರತೆ ಮತ್ತು ಉಪ್ಪನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ಉಂಟಾಗುವ ಕೆಡುಕುಗಳನ್ನೂ ಗ್ರಂಥದಲ್ಲಿ ವಿವರಿಸಿದ್ದೇನೆ. ಈ ಗ್ರಂಥಕ್ಕೆ ಮುನ್ನುಡಿ ಬರೆದಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು. ಆರ್‌. ಅನಂತ ಮೂರ್ತಿಯವರು ಬರೆದ ‘ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದದ್ದು 1947ರಲ್ಲಿ ಎಂದು ಎಲ್ಲರೂ ತಿಳಿದಿರುವುದು. ಆದರೆ ನಾವು ನಿಜವಾಗಿ ಸ್ವತಂತ್ರರಾದದ್ದು ದಂಡೀ ಯಾತ್ರೆ ಅಂತ್ಯದಲ್ಲಿ ಗಾಂಧೀಜಿಯವರು ಒಂದು ಮುಷ್ಟಿ ಉಪ್ಪನ್ನು ದಂಡೆಯಿಂದ ಎತ್ತಿ ಜನಸ್ತೋಮಕ್ಕೆ ತೋರಿಸಿದಾಗ’ ಎಂಬ ಮಾತನ್ನು ನೆನೆದ ಚಂದ್ರಶೇಖರ್‌, ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ನೆನೆದು ಮನಸಾರೆ ಹೊಗಳಿದರು.

ರುಚಿಕರವಾದ ಭೋಜನದೊಂದಿಗೆ ಅಂಜಲಿಯ ಜನನದ ಸಂಭ್ರಮದ ಕಾರ್ಯಕ್ರಮ ಮುಕ್ತಾಯವಾಯಿತು. ಕಡಿಮೆ ಪಕ್ಷ ಎರಡು ತಿಂಗಳಿಗೊಮ್ಮೆಯಾದರೂ ಈ ಕೂಟ ಕನ್ನಡ ಸಾಹಿತ್ಯ ಚಿಂತನ ಮಾಡುವ ನಿರೀಕ್ಷೆಯಿದೆ. ಈ ಕೂಟದಲ್ಲಿ ಭಾಗವಹಿಸುವ ಅಭಿಲಾಷೆಯುಳ್ಳ ಸಾಹಿತ್ಯಾಭಿಮಾನಿಗಳು ಸಂಪರ್ಕಿಸಬೇಕಾದ ಇ-ಮೇಲ್‌ ವಿಳಾಸ: naithal@msn.com

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more