• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ಲೋಬಲ್‌ ವಾರ್ಮಿಂಗ್‌: ಧರೆ ಹತ್ತಿ ಉರಿದೊಡೆ ನಿಲಬಹುದೆ?

By Oneindia Staff Writer
|

*ಎಂ.ಆರ್‌.ದತ್ತಾತ್ರಿ,

ಸನ್ನಿವೇಲ್‌, ಕ್ಯಾಲಿಫೋರ್ನಿಯಾಏಳು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಅಮೆರಿಕಾಕ್ಕೆ ಬಂದಿದ್ದಾಗ ದಿನಸಿ ಸಾಮಾನುಗಳನ್ನು ತರಲು ನನ್ನ ಸ್ನೇಹಿತನೊಬ್ಬ ನನ್ನನ್ನು ಸೂಪರ್‌ ಮಾರ್ಕೆಟ್‌ಗೆ ಕರೆದುಕೊಂಡು ಹೊರಟಿದ್ದ. 'ತಡೆಯಯ್ಯಾ ಕೈ ಚೀಲವನ್ನು ತರುತ್ತೇನೆ’ ಎಂದರೆ ಒಮ್ಮೆ ಆಶ್ಚರ್ಯದಿಂದ ಹುಬ್ಬು ಮೇಲೆತ್ತಿ,' ಕೈ ಚೀಲವೇ ? ಬೇಕಾಗಿಲ್ಲ’ ಎಂದು ಹಾಗೆಯೇ ಕರೆದುಕೊಂಡು ಹೋದ. ಹಾಲು, ಮೊಸರು, ಅಕ್ಕಿ, ಬೇಳೆಗಳು, ಉಪ್ಪು ಸಕ್ಕರೆ, ತರಕಾರಿಗಳು...ಹೀಗೆ ಅಗತ್ಯದ ಅಡುಗೆ ಪದಾರ್ಥಗಳನ್ನು ಮನೆಗೆ ತೆಗೆದುಕೊಂಡು ಬಂದಾಗ ಜೊತೆಯಲ್ಲಿ ಬಂದದ್ದು ಹೆಚ್ಚು ಪ್ಲಾಸ್ಟಿಕ್‌ ಚೀಲಗಳು. ಹಾಲು ಮೊಸರಿನ ಡಬ್ಬಿಗಳಿಗೆ ಜಾರಿಕೊಳ್ಳದಂತೆ ಎರಡೆರಡು ಚೀಲಗಳು. 'ಇದೇನು ಅನ್ಯಾಯ’ ಎಂದು ಸ್ನೇಹಿತನ ಮುಖ ನೋಡಿದರೆ ಅನೇಕ ವರ್ಷಗಳಿಂದ ಅಮೆರಿಕಾದಲ್ಲೇ ನೆಲಸಿರುವ ಆತ ಕೈಚೀಲವನ್ನು ಹಿಡಿದು ಓಡಾಡಬೇಕು ಎನ್ನುವ ನನ್ನ ಪೆದ್ದುತನಕ್ಕೆ ನಕ್ಕು 'ವೆಲ್‌ಕಮ್‌ ಟು ಅಮೆರಿಕಾ’ ಎಂದು ಹೇಳಿ ನಾನೆಲ್ಲಿದ್ದೇನೆ ಎಂಬುದನ್ನು ಜ್ಞಾಪಿಸಿದ.

ಪ್ಲಾಸ್ಟಿಕ್‌ ಎಷ್ಟು ಪರಿಸರವನ್ನು ಉರಿಸಿ ನಮ್ಮ ಕೈಲಿದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ ಅಥವಾ ತಿಳಿದರೂ ಸುಖಗಳಿಂದ ವಂಚಿತರಾಗುವುದು ಇಷ್ಟವಿಲ್ಲ. ಪಾಶ್ಚಾತ್ಯ ಜಗತ್ತಿನಲ್ಲಿ ಕಾಗದ ಖರ್ಚಾಗುವ ಭರವನ್ನು ನೋಡಿದರೆ ಮನುಷ್ಯನ ಹಾಹಾಕಾರಕ್ಕೆ ನಾಚಿ ಮರಗಳು ಕಣ್ಮರೆಯಾಗುತ್ತಿರುವ ಬಗ್ಗೆ ಆಶ್ಚರ್ಯ ಪಡುವ ಅಗತ್ಯವೇ ಉಳಿದಿಲ್ಲ. ಟಾಯ್ಲೆಟ್ಟಿನಿಂದ ಹಿಡಿದು ಅಡುಗೆ ಮನೆಯ ಮುಸುರೆಯ ತನಕ ಕೈ ಬೆವರಿದರೆ ಮುದುರೆಸೆಯಲು, ಅಗುಳು ಚೆಲ್ಲಿದರೆ ತೆಗೆದೆಸೆಯಲು ಶೀತವಾದರೆ ಮೂಗು ಹಿಂಡಲು ಹೀಗೆ ಎಲ್ಲದಕ್ಕೂ ಕಾಗದ ಬೇಕು. ಬೆಳಗ್ಗಿನ ನ್ಯೂಸ್‌ಪೇಪರನ್ನು ಹೊತ್ತಾಡಲು ಕಷ್ಟ. ಅಷ್ಟು ಹಾಳೆಗಳು, ಅಷ್ಟು ಜಾಹೀರಾತು ಪತ್ರಗಳು... ಯಾರ ಮನೆಯ ಗಂಟೇನು ಹೋಗಬೇಕು ? 'ನಾವು ನಮ್ಮ ಮರಗಳನ್ನು ಕಡಿಯುವುದೇ ಇಲ್ಲ’ ನಗುತ್ತಾನೆ ಅಮೆರಿಕನ್‌. 'ನಮಗೆ ಕಾಗದಕ್ಕೆ ಬೇಕಾದ ಮರ ಮತ್ತು ಮರದಿಂದಾದ ಸಾಮಾಗ್ರಿಗಳು ಮೆಕ್ಸಿಕೋ, ಚೀನಾ, ಭಾರತ, ವಿಯೆಟ್ನಾಂ... ಮುಂತಾದ ದೇಶಗಳಿಂದ ಬರುತ್ತದೆ... ನಾವು ಸುರಕ್ಷಿತ ! ’ ಸ್ವಲ್ಪ ತಾಳಿ ! ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಯನ್ನೂ ಸುಡಲು ಎಷ್ಟು ಹೊತ್ತು ? ನೀವು ಕೇಳಿ ಬೇಕಾದರೆ, ಅವನು ಕೇಳಿಸಿಕೊಳ್ಳದಂತೆ ಸೋಗು ಹಾಕುತ್ತಾನೆ.

ಇವತ್ತು ನಮ್ಮ ಭೂಮಿಯ ಕತೆಯನ್ನು ಕೇಳಿದ್ದೀರಾ?ನಾವು ಹಾಕುತ್ತಿರುವ ಬೆಂಕಿಯ ಧಗೆಗೆ ಆಕೆ ನರಳುತ್ತಿದ್ದಾಳೆ. ಈ ಕತೆಯನ್ನು ಟ್ರಾಜಿಡಿ ಮಾಡಲು ಪುಟ್ಟಣ್ಣ ಕಣಗಾಲರು ಮತ್ತೆ ಬರಬೇಕಿಲ್ಲ, ಬೆಂಕಿಯ ಮತ್ತು ರಾಕ್ಷಸ ಅಲೆಗಳ ಭೀಕರ ದೃಶ್ಯಕ್ಕಾಗಿ ಹಾಲಿವುಡ್‌ನ ಯುನಿವರ್ಸಲ್‌ ಸ್ಟುಡಿಯೋ ಮಾಂತ್ರಿಕತೆಯನ್ನು ತೋರಬೇಕಿಲ್ಲ. ಪ್ರಕೃತಿ ನಮ್ಮೆದುರಿಗಿಡುತ್ತಿರುವ ಚಿತ್ರವಿದು ! ನೋಡಲು ಬಲವಂತವಿಲ್ಲ. ಆದರೆ ಚಿತ್ರ ಮುಗಿಯುವ ತನಕ ಪ್ರೇಕ್ಷಕರು ಅಳಿಯದೆ ಉಳಿಯುತ್ತಾರೆ ಎಂಬ ನಂಬಿಕೆ ಇಲ್ಲ. ಆಕೆ ಸುಟ್ಟರೆ ನಾವೂ ಕರಕಲಾಗುತ್ತೇವೆ ಎನ್ನುವ ಪರಿಜ್ಞಾನವೇ ಇಲ್ಲದ ಆಧುನಿಕ ಭಸ್ಮಾಸುರರ ಕತೆಯಿದು.

ಕೃಷ್ಣ ಪೂತನಿಯ ಮೊಲೆ ಹಾಲ ಹೀರುವ ನಿಮಿತ್ತದಲ್ಲಿ ಆಕೆಯ ಪ್ರಾಣವನ್ನೂ ಹೀರಿದ ಕತೆಯಿಂದ ತಂತ್ರವನ್ನು ಮಾತ್ರ ಸ್ವೀಕರಿಸಿ ಮೌಲ್ಯವನ್ನು ಬಿಟ್ಟು ಅದನ್ನು ಭೂಮಿತಾಯಿಯ ಮೇಲೆ ಪ್ರಯೋಗಿಸಿ ಸುಖದ ಲಾಲಸೆಯಿಂದ ಆಕೆಯ ಪ್ರಾಣವನ್ನೇ ಪೀಯೂಷದಂತೆ ಪ್ರತಿ ಕ್ಷಣಕ್ಕೂ ಹೀರುತ್ತಿರುವ 'ಅತಿ ಬುದ್ಧಿವಂತ’ ಪ್ರಾಣಿಗಳ ಸಾಹಸವಿದು.

ಕೈಗಾರಿಕೀಕರಣ ಮತ್ತು ಅದರ ಕ್ರಾಂತಿ ನೂರು ವರ್ಷಗಳಿಗಿಂತಲೂ ಹಳೆತಾದರೂ ಪರಿಸರದ ಮೇಲಿನ ಅದರ ಪರಿಣಾಮವು ನಮಗೆ ತಿಳಿದದ್ದು ಇತ್ತೀಚೆಗೇನೇ. 1970ರಲ್ಲಿ ವಿಜ್ಞಾನಿಗಳು 'ನಾವು ಮಾಡುತ್ತಿರುವುದು ಸರಿಯಲ್ಲ’ ಎಂದು ಪಿಸುಗುಟ್ಟಿದರು. ಅದು ಕೆಲವರಿಗೆ ಕೇಳಿತು, ಬಹುತೇಕರಿಗೆ ಕೇಳಲಿಲ್ಲ. ಪಿಸುಗುಟ್ಟುವುದು ಬೊಬ್ಬೆ ಹೊಡೆಯುವ ಮಟ್ಟಕ್ಕೆ ಬಂದರೂ ಈಗಲೂ ಇದು ಅನೇಕರನ್ನು ಮುಟ್ಟಿಲ್ಲ. ಬ್ರೆಜಿಲ್‌ ವಿಶ್ವಕಪ್‌ ಫುಟ್‌ಬಾಲನ್ನು ಗೆದ್ದ ಮರುಕ್ಷಣದಲ್ಲೇ ಇಡೀ ಪ್ರಪಂಚಕ್ಕೆ ಸುದ್ದಿ ಹರಡುತ್ತದೆ. ಯಾವ ಸಿನೆಮಾಕ್ಕೆ ಆಸ್ಕರ್‌ ಬಂತು ಯಾವ ಹಾಡಿಗೆ ಗ್ರಾಮಿ ಬಂತು ಎನ್ನುವುದು ಯಾವ ಕಾರಣಕ್ಕೂ ನಮ್ಮನ್ನು 'ಮಿಸ್‌’ ಮಾಡಿಕೊಳ್ಳುವುದಿಲ್ಲ. ಕಾಶ್ಮೀರ ಮತ್ತು ಪ್ಯಾಲೆಸ್ಟೈನ್‌ಗಳ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವುದೆಲ್ಲಾ "CNN ನಲ್ಲಿ ಅಥವಾ "BBCಯಲ್ಲಿ ಹೆಡ್‌ಲೈನ್‌ ನ್ಯೂಸ್‌ ಆಗಿರುತ್ತದೆ. ಆದರೆ ಭೂಮಿತಾಯಿಯ ನರಳುವಿಕೆ ಮಾತ್ರಾ ಆಕೆ ಅತಿ ತಾಪದಿಂದ ನಿತ್ರಾಣಗಳಗುತ್ತಾ ಬಂದು ಅನೇಕ ದಶಕಗಳೇ ಸಂದರೂ ಬಹುತೇಕ ಜನರನ್ನು ಮುಟ್ಟಿಲ್ಲ. ನಮಗೆ ಈ ವಿಷಯ ಬೇಡವೋ ಅಥವಾ ನಮಗೆ ವಿಷಯ ತಲುಪುತ್ತಿಲ್ಲವೋ? ಎರಡೂ ಕೂಡವೋ ?

ಪರಿಸರದ ಮೇಲಿನ ನಮ್ಮ ಅತ್ಯಾಚಾರಗಳು ಜನರಿಗೆ ತಲುಪದಂತೆ ದೊಡ್ಡ ಸಂಚುಗಳೇ ನಡೆಯುತ್ತವೆ ಎಂದರೆ ನಂಬುತ್ತೀರಾ ? ಪರಿಸರ ಇಂದು ಈ ಮಟ್ಟವನ್ನು ಮುಟ್ಟಿರುವುದು ನಾವುಉರಿಸುವ ಪೆಟ್ರೋಲ್‌, ಕಲ್ಲಿದ್ದಲಿನಂತಹ ಇಂಧನಗಳಿಂದ, ಫ್ಯಾಕ್ಟರಿಗಳು ಉಗುಳುವ ವಿಷ ಅನಿಲಗಳಿಂದ, ವನಗಳ ವಿನಾಶದಿಂದ ಮತ್ತು ನಿರಂತರ ಸುಖವನ್ನು ಅರಸಿ ಮೊಲೆ ಹಾಲಿನೊಂದಿಗೆ ಭೂಮಿತಾಯಿಯ ರಕ್ತವನ್ನೂ ಹೀರುತ್ತಿರುವುದರಿಂದ. ಇವುಗಳನ್ನು ಅವಲಂಬಿಸಿ ದೊಡ್ಡ ದೊಡ್ಡ ಉದ್ಯಮಗಳೇ ಇವೆ. ಕೋಟಿ ಡಾಲರುಗಳು ಹೂಡಿಕೆಯಾಗಿವೆ. ಅನೇಕರು ಕುಬೇರರಾಗಿದ್ದಾರೆ. ಈಗ ಪರಿಸರದ ಹೆಸರಿನಲ್ಲಿ ಎಲ್ಲವನ್ನೂ ನಿಲ್ಲಿಸಿಬಿಡಿ ಎಂದರೆ...'ನಿಲ್ಲಿಸುತ್ತೇವೆ ತಾಳಿ ಚತುರೋಪಾಯಗಳನ್ನು ಬಳಸಿ’ ಎನ್ನುತ್ತಾರೆ. ' ಆ ರೀತಿ ಪರಿಸರದ ಪರವಾದ ಕೂಗುಗಳನ್ನೇ’. ಮನುಷ್ಯ ಎಷ್ಟು ಸ್ವಾರ್ಥಿಯಾಗುತ್ತಾನೆ ನೋಡಿ. ಮೊದಲು ತನ್ನಷ್ಟೇ ಬದುಕುವ ಹಕ್ಕನ್ನು ಪಡೆದ ಪ್ರಾಣಿ ಸಂಕುಲದ ಬಗ್ಗೆ ಯೋಚಿಸಲಿಲ್ಲ . ಕೆಲವನ್ನು ವಿನಾಶಗೊಳಿಸಿ ಮತ್ತೆ ಕೆಲವನ್ನು ವಿನಾಶದ ಅಂಚಿಗೆ ದೂಡಿದ. ಅಕ್ಕಪಕ್ಕ ನೆರೆಹೊರೆಯ ಬಗ್ಗೆ ಯೋಚಿಸದೇ ಸುಖಕ್ಕಾಗಿ ಹೊಂಚು ಹಾಕಿದ. ಈಗ ಮಕ್ಕಳು, ಮೊಮ್ಮಕ್ಕಳಾದಿಯಾದಿ ತನ್ನ ಪೀಳಿಗೆಗೂ ಭೂಮಿ ಇರದಿದ್ದರೂ ಚಿಂತೆ ಇಲ್ಲ , ನಾನಿಂದು ಅಷ್ಟನ್ನೂ ನುಂಗಿ ನೀರು ಕುಡಿಯಬೇಕು ಎನ್ನುತ್ತಾನೆ !

Stop Global warming !ತಡವಾಗಿಯಾದರೂ ವಿಜ್ಞಾನಿಗಳ ಮತ್ತು ಪರಿಸರವಾದಿಗಳ ಬೊಬ್ಬೆ ವಿಶ್ವಸಂಸ್ಥೆಯನ್ನು ಮುಟ್ಟಿತು. ಪರಿಸರದ ಬದಲಾವಣೆಗಳನ್ನು ಅಭ್ಯಾಸಮಾಡಲು ಅಂತರಸರ್ಕಾರ ಪರಿಸರ ಅಧ್ಯಯನ ನಿಯೋಗ (IPCC Intergovernmental Panel On Climate Change)ವನ್ನು ರಚಿಸಿ ಈ ಬಗ್ಗೆ ಸುದೀರ್ಘವಾದ ಅಧ್ಯಯನವನ್ನು ನಡೆಸಿತು. IPCCಯಲ್ಲಿ ಸುಮಾರು ಅರವತ್ತು ದೇಶಗಳ ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಸಂಶೋಧನೆ ಮತ್ತು ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ IPCC ಯು ನೀಡಿದ ವರದಿ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸುವಂತದ್ದು. ಅದುವರೆಗೂ ಯಾವುದೋ ಅಡಗೂಲಜ್ಜಿಯ ಕತೆಯಂತಿದ್ದ 'ಗ್ಲೋಬಲ್‌ ವಾರ್ಮಿಂಗ್‌’ (ಜಾಗತಿಕ ಉಷ್ಣೋದ್ದೀಪನ) ಈಗ ನಿಜವಾಗಿಯೂ ನಮ್ಮನ್ನು ಕಾಡುತ್ತಿರುವ ಭೂತ ಎಂದು ಮನದಟ್ಟಾಯಿತು. ಪ್ರಪಂಚದ ಜಾಗತಿಕ ಪರಿಸರ ಈ ನೂರು ವರ್ಷಗಳಲ್ಲಿ ಎಷ್ಟು ಗಂಭೀರವಾಗಿ ಮಾರ್ಪಾಡಾಗಿದೆ ಎನ್ನುವಲ್ಲಿ ಈ ಕೆಳಗಿನ ನಿದರ್ಶನಗಳನ್ನು ಕೊಟ್ಟಿತು :

  1. ಸರಾಸರಿ ಉಷ್ಣತೆ 0.5 ರಿಂದ 1.1 ಡಿ.ಫ್ಯಾ (0.3 ರಿಂದ 0.6 ಡಿ.ಸೆಂ.) ಏರುತ್ತಿದೆ.
  2. ಉಷ್ಣತೆಯ ಏರುವಿಕೆಗೆ ಅನುಗುಣವಾಗಿ ಸಮುದ್ರದ ಮಟ್ಟ 3.9 ರಿಂದ 10 ಇಂಚುಗಳಷ್ಟು (10-25 ಸೆಂ.ಮೀ) ಏರಿದೆ.
  3. ಧ್ರುವ ಪ್ರದೇಶಗಳಲ್ಲಿ ಸರಾಸರಿ ಉಷ್ಣತೆ ಏರುತ್ತಲೇ ಹೋಗಿ ಅಲ್ಲಿ ಹಿಮ ಕರಗುತ್ತಿದೆ.
  4. ಇಪ್ಪತ್ತನೇ ಶತಮಾನವು ನಮಗೆ ಹಿಂತಿರುಗಿ ನೋಡಿ ಲೆಕ್ಕ ಹಾಕಲು ಸಾಧ್ಯವಾದ ಎಲ್ಲಾ ಶತಮಾನಗಳಿಗಿಂತಲೂ ಅತ್ಯಂತ 'ಬಿಸಿ’ಯಾದ ಶತಮಾನ.

ಇತ್ತೀಚೆಗೆ ಕಾಡಿದ ಪ್ರಕೃತಿ ವಿಕೋಪಗಳಿಗೆ, ಉದಾಹರಣೆಗೆ, 1999 ರ ಅಕ್ಟೋಬರ್‌ನಲ್ಲಿ ಒರಿಸ್ಸಾದ ಮೇಲೆ ಬೀಸಿದ ಪ್ರಚಂಡ ಮಾರುತ ಮತ್ತು ಪ್ರವಾಹಗಳಿಗೆ ಗ್ಲೋಬಲ್‌ ವಾರ್ಮಿಂಗ್‌ ಕೂಡಾ ಕಾರಣವಾಗಿರಬಹುದು ಎನ್ನುವುದು ಈಗ ನಿಚ್ಚಳವಾಗಿ ಅರ್ಥವಾಗುತ್ತಿದೆ. ಹೀಗೆಯೇ ಮುಂದುವರೆದಲ್ಲಿ ಭೂಮಿಯ ಮೇಲೆ ಮತ್ತು ಜನ ಜೀವನದ ಮೇಲೆ ಮೂಡುವ ಪರಿಣಾಮಗಳು ಊಹಿಸಲಸಾಧ್ಯವಾದಷ್ಟು ಭಯಂಕರ. ನಮ್ಮ ಕಾರು, ಸ್ಕೂಟರು, ಬಸ್ಸುಗಳು ಉಗುಳುವ ಹೊಗೆ ಪರಿಸರದಲ್ಲಿ ಕಾರ್ಬನ್‌ ಡೈಆಕ್ಸೈಡ್‌ ಮತ್ತು ಕಾರ್ಬನ್‌ ಮೊನಾಕ್ಸೈಡ್‌ಗಳ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಈ ಅನಿಲಗಳು ಸೂರ್ಯನಿಂದ ಬರುವ ಶಾಖವನ್ನು ಹೀರಿ ಭೂಮಿಯೆಡೆಗೆ ತಳ್ಳುವ ಅನಿಲಗಳು. ಇವುಗಳಿಂದಲೇ ಭೂಮಿ ತನ್ನ ತಾಪಮಾನವನ್ನು ಕಾಪಾಡಿಕೊಳ್ಳುವುದು (Greenhouse Effect -ಹರಿತ್‌-ಗೃಹ ಪರಿಣಾಮ). ಆದರೆ ಈ ಅನಿಲಗಳ ಹೆಚ್ಚಳದಿಂದ ಭೂಮಿಯ ತಾಪಮಾನವೂ ಹೆಚ್ಚುತ್ತದೆ. ತಾಪಮಾನದ ಏರಿಕೆಯಿಂದ ಸಮುದ್ರದ ಮಟ್ಟ ಏರುತ್ತದೆ. ಸಮುದ್ರದ ಮಟ್ಟ ಏರಿತೆಂದರೆ ಭೀಕರ ಅಲೆಗಳಿಂದ ಹಿಡಿದು ಅನೇಕ ದ್ವೀಪಗಳನ್ನು ಮುಳುಗಿಸಿಕೊಳ್ಳುವ ತನಕ, ಕೊಲ್ಲಿ ಭೂಮಿಗಳನ್ನು ಕೊರೆದು ದಂಡೆಯ ನಗರಗಳ ಮೇಲೆ ನಿರಂತರವಾಗಿ ಅಲೆಗಳಿಂದ ಅಪ್ಪಳಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ತನಕ ಪರಿಣಾಮಗಳು ಖಚಿತ.

ಇಂಧನಕ್ಕಾಗಿ ಮತ್ತು ಕಾರ್ಖಾನೆಗಳಲ್ಲಿ ನಾನಾ ಯಾಂತ್ರಿಕ ಚಟುವಟಿಕೆಗಳಿಗಾಗಿ ನಾವು ಉರಿಸುವ ಕಲ್ಲಿದ್ದಲು, ಸಲ್ಫರ್‌ ಆಕ್ಸೈಡ್‌, ನೈಟ್ರೊಜನ್‌ ಆಕ್ಸೈಡ್‌, ಮಿಥೇನ್‌ ಮತ್ತು ಕ್ಲೋರಿನ್‌ಗಳ ಅನೇಕ ವಿಷಧಾತುಗಳನ್ನು ವಾತಾವರಣಕ್ಕೆ ಸೇರಿಸಿ ಅವು ಸೂರ್ಯನಿಂದ ಅಪಾಯಕಾರೀ ವಿಕಿರಣಗಳು (ultraviolet radiations)ನಮ್ಮನ್ನು ತಲುಪದಂತೆ ತಡೆಯುತ್ತಿರುವ ಓಜೋನ್‌ ಪದರವನ್ನು ಹಾಳುಗೆಡವಿ ರಂಧ್ರಗಳನ್ನು ಮಾಡುತ್ತಿವೆ. ನಮ್ಮ ಕಲುಷಿತಗಳಿಂದ 'ಆಮ್ಲ ಮಳೆ’ (Acid Rain) ಆಗುತ್ತಿದೆ. ಯುರೋಪಿನ ಬಹುತೇಕ ಅರಣ್ಯಪ್ರದೇಶಗಳು ಇಂದು ಆಮ್ಲ ಮಳೆಯಿಂದ ಅಪಾಯದ ಅಂಚಿನಲ್ಲಿವೆ.

ನಮ್ಮ ಈ ಎಲ್ಲಾ ಕ್ರಿಯೆಗಳ ಪರಿಣಾಮದ ಭೀಕರತೆಯನ್ನು ಯೋಚಿಸಿದರೆ ಇದರಿಂದ ನಾವು ಉಳಿದು ನಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಬಗ್ಗೆಯೇ ಅನುಮಾನಗಳೇಳುತ್ತವೆ. ಕೆರೆ, ಕೊಳ್ಳ, ನದಿ, ಸರೋವರ ಮತ್ತು ಸಾಗರಗಳಲ್ಲಿ ಆಹಾರ ಚಕ್ರವೇ ಹಾಳಾಗುತ್ತದೆ ಮತ್ತು ಬಹುತೇಕ ಪ್ರದೇಶಗಳು ಮಳೆಯಿಲ್ಲದೆ ತೀವ್ರ ಬರವನ್ನು ಅನುಭವಿಸುತ್ತವೆ. ಸಮುದ್ರದ ಮೇಲಿನ ಬಿರುಗಾಳಿಗಳು ಅಪಾರ ನಷ್ಟಗಳನ್ನು ಉಂಟು ಮಾಡಿ ಕೊಲ್ಲಿ ಪ್ರದೇಶಗಳಲ್ಲಿ ನೆಲೆಸಿರುವವರನ್ನು ಪಲ್ಲಟಗೊಳಿಸುತ್ತವೆ. ಆಮ್ಲ ಮಳೆಯಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ವ್ಯವಸಾಯದ ಉತ್ಪಾದನೆ ಗಣನೀಯವಾಗಿ ಕ್ಷೀಣಿಸುತ್ತದೆ. ನಾನಾ ಬಗೆಯ ರೋಗಗಳು ಮತ್ತೆ ಮತ್ತೆ ಮನುಕುಲವನ್ನು ಕಾಡುತ್ತವೆ. ಅರಣ್ಯನಾಶ ಈ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಾ ಹೋಗುತ್ತದೆ. ಜನಸಂಖ್ಯಾ ಸ್ಫೋಟದಿಂದಾಗಿ ವಿಶ್ವದ ಜನಸಂಖ್ಯೆ ಈಗಾಗಲೇ 600 ಕೋಟಿಯನ್ನು ದಾಟಿದೆ ಮತ್ತು 2100 ರ ಹೊತ್ತಿಗೆ ಇದು 1000 ಕೋಟಿಯನ್ನು ಮುಟ್ಟುವ ಅಂದಾಜಿದೆ. ಇಷ್ಟೊಂದು ಜನರಿಗೆ ಆಹಾರ, ವಸತಿ ಮತ್ತು ಉದ್ಯೋಗಗಳೆಂದರೆ ಅಳಿದುಳಿದಿರುವ ಅರಣ್ಯಗಳ ನಾಶವೆಂದೇ ಅರ್ಥ.

ಅಮೆರಿಕಾ ಮತ್ತು ರಷ್ಯಾದಂತಹ ರಾಷ್ಟ್ರಗಳ ಸಾಗರದ ಆಳದಲ್ಲಿ ಹುದುಗಿಸಿರುವ ನ್ಯೂಕ್ಲಿಯರ್‌ ತ್ಯಾಜ್ಯಗಳು ಸ್ವಲ್ಪ ಹೆಚ್ಚುಕಡಿಮೆಯಾಗಿ ಹೊರಚೆಲ್ಲಿದರೆ ಯಾವ ಕ್ಷಣದಲ್ಲಿ ಬೇಕಾದರೂ ಸಾಗರದ ಜೀವಿಗಳನ್ನು ವಿನಾಶಕ್ಕೆ ತಳ್ಳಬಹುದು. ಈ ನ್ಯೂಕ್ಲಿಯರ್‌ ಅವಶೇಷಗಳ ಆಯಸ್ಸು ಸಾವಿರಾರು ವರ್ಷಗಳು. ಈ ನಡುವೆ ನ್ಯೂಕ್ಲಿಯರ್‌ ಅಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಅದನ್ನು ಪ್ರಯೋಗಿಸುವ ಬಗ್ಗೆಯೂ ಮಾತನಾಡುತ್ತವೆ ! ಈ ನಾಯಕರಿಗೆ ನ್ಯೂಕ್ಲಿಯರ್‌ನ ದುಷ್ಪರಿಣಾಮಗಳು ತಿಳಿದಿದೆಯೋ ಎಂದು ಆಶ್ಚರ್ಯವಾಗುತ್ತದೆ. ಇಂದು ಪ್ರಪಂಚವನ್ನು ಅನೇಕ ಬಾರಿ ನಾಶಮಾಡುವಷ್ಟು ಅಣ್ವಸ್ತ್ರಗಳು ಕೆಲವು ದೇಶಗಳ ಆಯುಧ ಭಂಡಾರದಲ್ಲಿವೆ. ಒಮ್ಮೆ ಅಣುಯುದ್ಧ ನಡೆದರೆ ಸಾಕು, ಅದರಿಂದ ಏಳುವ ಧೂಳು ಮತ್ತು ವಿಷ ಅನಿಲಗಳು ಮೇಲೆ ಪದರವಾಗಿ ನಿಂತು ಸೂರ್ಯನ ಶಾಖವನ್ನು ಭೂಮಿಗೆ ತಲುಪದಂತೆ ತಡೆದು ಭೂಮಿಯನ್ನು 'ಅಣು ಶೀತಲತೆ’(ನ್ಯೂಕ್ಲಿಯರ್‌ ವಿಂಟರ್‌)ಗೆ ತಳ್ಳುತ್ತವೆ. ಹಾಗೇನಾದರೂ ಆದಲ್ಲಿ ನಮಗೆ ತಿಳಿದಂತೆ ಜೀವಚಯವನ್ನು ಹೊರಬಲ್ಲ ಶಕ್ತಿಯಿರುವ ಒಂದು ಒಂದು ಗ್ರಹ ಎಲ್ಲವನ್ನೂ ಕಳೆದುಕೊಂಡು ಬರಡಾಗಿ ನಿಲ್ಲುವುದು ಗ್ಯಾರಂಟಿ.

ಐಪಿಸಿಸಿಯ ವರದಿಯ ಪ್ರಕಾರ ಭೂಮಿಯನ್ನು ನಮ್ಮ ಕಲುಷಿತಗಳಿಂದ ಬಚಾವು ಮಾಡಲು ನಮ್ಮ ಕೈಗಾರಿಕೆಗಳು ಮತ್ತು ನಮ್ಮ ವಾಹನಗಳು ಹೊರ ಹೊಮ್ಮಿಸುತ್ತಿರುವ ಅನಿಲಗಳು ಸುಮಾರು ಶೇ 70 ಕಡಿಮೆಯಾಗಬೇಕು ! ತಮ್ಮ ಆರ್ಥಿಕತೆಗೆ ಬೆನ್ನೆಲುಬಾದ ಕೈಗಾರಿಕೆಗಳು ತಮ್ಮ ಉತ್ಪಾದನಾ ವೇಗವನ್ನು ಕಡಿಮೆ ಮಾಡಿಕೊಳ್ಳುವುದು ಮುಂದುವರೆದ ರಾಷ್ಟ್ರಗಳಿಗೆ ಬೇಕಿಲ್ಲ. ಭೂಮಿಯನ್ನು ಉರಿಸುವಲ್ಲಿ ಇಂಧನವಾದ ಪೆಟ್ರೋಲ್‌ನ ಉತ್ಪಾದನೆಯನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಅರಬ್‌ ರಾಷ್ಟ್ರಗಳಿಗೆ ಬೇಕಿಲ್ಲ. ತಮ್ಮ ಅರಣ್ಯಗಳು ಕರಗದಂತೆ ಕಾಪಾಡಿಕೊಳ್ಳುವುದು ಚೀನಾದಂತಹ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಇನ್ನು ನಾವೂ ನೀವು, ಸ್ಕೂಟರ್‌ ಕಾರುಗಳನ್ನು ನಿಲ್ಲಿಸಿ, ಬಸ್ಸಿನಲ್ಲಿ ಓಡಾಡುವುದು, ಮನೆಗೆ ಬಂದೊಡೆಯನೆಯೇ ರೆಫ್ರಿಜರೇಟರಿನ ತಂಪು ನೀರನ್ನು ಮರೆತು ಅದರ ಉತ್ಪಾದನೆಯಲ್ಲಿ ಕ್ಲೋರೋಫ್ಲೋರೋ ಕಾರ್ಬನ್‌ಗಳು ಓರೆkೂೕನ್‌ ಪದರವನ್ನು ಭೇದಿಸುವ ಬಗೆಯನ್ನು ನೆನೆದು ಸುಖಗಳಿಂದ ವಂಚಿತರಾಗುವುದು ಬೇಕಿಲ್ಲ. ಇನ್ನು ಭೂಮಿಯನ್ನು ಉಳಿಸುವುದೆಂತು ? ಪವಾಡಗಳೇ ಸಂದು ವಿಷ್ಣು ವರಾಹ ಅವತಾರದಲ್ಲಿ ರಾಕ್ಷಸರಿಂದ ಭೂಮಿಯನ್ನು ಉಳಿಸಿದಂತೆ ಈಗ ಮತ್ತೊಂದು ಅವತಾರವನ್ನು ತಳೆದು ಮನುಜ ದೈತ್ಯರಿಂದ ವಸುಂಧರೆಯನ್ನು ರಕ್ಷಿಸಬೇಕಾಗಿದೆ.

ಭೂಮಿಯನ್ನು ಮತ್ತು ನಾಗರೀಕತೆಯನ್ನು ಉಳಿಸುವಲ್ಲಿ ನಾವಿಂದು ಮಾಡುತ್ತಿರುವುದು ಏನೇನೂ ಸಾಲದು. ನೋಡುವ ಮತ್ತು ಅರಿತುಕೊಳ್ಳುವ ಶಕ್ತಿಯಿದ್ದೂ ನಾವಿಂದು ಧೃತರಾಷ್ಟ್ರನಂತೆ ಕುರುಡಾಗಿ ಅವನಂತೆಯೇ ಅಸಹಾಯಕತೆಯ ನಾಟಕವಾಡುತ್ತಿದ್ದೇವೆ. ಉಳಿಸುವ ಅಥವಾ ಉರುಳಿಸುವ ಆಯ್ಕೆಯನ್ನು ಪ್ರಕೃತಿ ಇಂದು ನಮಗೆ ನೀಡಿದೆ. ಆದರೆ ನೆನಪಿಡಿ, ನಾಳೆ ಆ ಆಯ್ಕೆಯೂ ನಮ್ಮ ಕೈಲಿರುವುದಿಲ್ಲ.

ಮುಖಪುಟ / ಸಾಹಿತ್ಯ ಸೊಗಡು

English summary
global warming
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X