ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಷಾ ಚಾರ್‌ ನೇತೃತ್ವದ ‘ನಾದ ತರಂಗಿಣಿ’ಯಿಂದ ನಾದೋಪಾಸನೆ

By Staff
|
Google Oneindia Kannada News

*ಡಾ. ಮೈ. ಶ್ರೀ ನಟರಾಜ, ಗೈಥರ್ಸ್‌ ಬರ್ಗ್‌, ಮೇರೀಲ್ಯಾಂಡ್‌

Usha Charಹದಿನೈದು ವರ್ಷಗಳ ಅವಿಶ್ರಾಂತ ಸಂಗೀತ ಸೇವೆಯ ಫಲವನ್ನು ಪ್ರತ್ಯಕ್ಷವಾಗಿ ಬಂದು ನೋಡಿ, ಕೇಳಿ, ಸವಿದು, ಆನಂದಿಸಿ... ಎಲ್ಲರೂ ಬನ್ನಿ, ದಾಸರ ಪದಗಳನ್ನು ಕೇಳಿ ಪಾವನರಾಗಿ. ಸಂತ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಕೇಳಿ ಧನ್ಯರಾಗಿ. (ಹಾಡಲು ಬಂದರೆ ವೃಂದಗಾನದಲ್ಲಿ ಸೇರಿ ಆನಂದಿಸಿ.) ಮೂರು-ನಾಲ್ಕು ವಯಸ್ಸಿನ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ನೂರಾರು ಮಂದಿ ಕಲಾವಿದರು ಹಾಡುವ, ಪಕ್ಕವಾದ್ಯಗಳನ್ನು ನುಡಿಸುವ ವೈಖರಿಗೆ ತಲೆದೂಗಿ!

‘ ನಾದ ತರಂಗಿಣಿ’ ವಾಷಿಂಗ್ಟನ್‌ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಕರ್ಣಾಟಕ ಸಂಗೀತಪ್ರಿಯರಿಗೆಲ್ಲಾ ಚಿರಪರಿಚಿತವಾದ ಹೆಸರು. ಈ ಸಂಸ್ಥೆಯ ಜನನವಾದದ್ದು ಸುಮಾರು ಹದಿನೆಂಟು ವರ್ಷಗಳ ಹಿಂದೆ, ಒಹಾಯೋ ಸಂಸ್ಥಾನದಲ್ಲಿರುವ ಕೊಲಂಬಸ್‌ ನಗರದಲ್ಲಿ. ಅಮೆರಿಕೆಯಲ್ಲಿ ಕರ್ಣಾಟಕ ಸಂಗೀತದ ಕಲಿಸುವಿಕೆ, ಪ್ರಸಾರ ಮತ್ತು ಉಳಿಸುವಿಕೆಗಾಗಿಯೇ ಜನ್ಮವೆತ್ತಿದ್ದ ಸಂಸ್ಥೆ , ಸಂಗೀತ ವಿದುಷಿ ಉಷಾ ಚಾರ್‌ ಅವರ ಮೆದುಳಿನ ಕೂಸು.

ಉಷಾ ಚಾರ್‌ ಅವರು, ಹೆಸರಾಂತ ಸಂಗೀತ ವಿದ್ವಾಂಸರೂ ಅನೇಕ ಪ್ರಖ್ಯಾತ ಶಿಷ್ಯ- ಶಿಷ್ಯೆಯರನ್ನೂ ತಯಾರು ಮಾಡಿದ ಗುರು ಆನೂರು ರಾಮಕೃಷ್ಣರ ಪ್ರಮುಖ ಶಿಷ್ಯೆಯರಲ್ಲೊಬ್ಬರು. ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕರ್ಣಾಟಕ ಸಂಗೀತದಲ್ಲಿ ಸಂಶೋಧನೆ ನಡೆಸಿದವರು, ಹಾಗೂ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕರಾಗಿ ದುಡಿದವರು. ಎ. ಆರ್‌. ಚಾರ್‌ ಅವರನ್ನು ವಿವಾಹವಾಗಿ ಅಮೆರಿಕೆಯಲ್ಲಿ ಬಂದು ನೆಲಸಿದಾಗಿಂದಲೂ ನಿರಂತರವಾಗಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂಗೀತವನ್ನು ಕಲಿಸಿರುವುದೇ ಅಲ್ಲದೆ ಅನೇಕ ರಸಮಯ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಾ ಬಂದಿದ್ದಾರೆ.

ಕಲ್ಯಾಣಿರಾಗದ ‘ ಏಕರಾಗ ಸಭಾ’ ಕಾರ್ಯಕ್ರಮ, ವಿವಿಧ ಕೃತಿಗಳ ರಚನಾ ವೈವಿಧ್ಯವನ್ನು ಸಾದರಪಡಿಸುವ ‘ರಸಮಂಜರಿ’ ಕಾರ್ಯಕ್ರಮ. ಒಂಬತ್ತು ಸಂಸ್ಕೃತ ಕೃತಿಗಳಿಗೆ ಸಂಗೀತ ಸಂಯೋಜನೆ ಮಾಡಿದ ‘ ನವರತ್ನ ಮಾಲಿಕಾ’ ಧ್ವನಿ ಸುರುಳಿಯ ಬಿಡುಗಡೆ, ವಾಗ್ಗೇಯಕಾರ ಪಾಪನಾಶನ್‌ ಶಿವನ್‌ ಅವರ ಶತಮಾನೋತ್ಸವ, ಮತ್ತು ಅನೇಕ ಶಿವಶರಣರ ವಚನಗಳನ್ನೊಳಗೊಂಡ ‘ ವಚನಾಮೃತಧಾರೆ’(ಕನ್ನಡ ಮತ್ತು ಇಂಗ್ಲಿಷ್‌ ಭಾಷ್ಯಗಳೊಂದಿಗೆ) ಧ್ವನಿ ಸಂಪುಟದ ಬಿಡುಗಡೆ ; ಹೀಗೆ ಒಂದೇ ಎರಡೇ ಇವರ ಕೊಡುಗೆ.

ಒಂದೂವರೆ ದಶಕದಿಂದ ದಾಸರ ಆರಾಧನೆ!
Nadatarangini ಹದಿನೈದು ವರ್ಷಗಳಿಂದ ನಾದತರಂಗಿಣಿ ನಡೆಸಿಕೊಂಡು ಬಂದಿರುವ ಪುರಂದರದಾಸರ ಹಾಗೂ ತ್ಯಾಗರಾಜರ ಆರಾಧನೆ ಉಷಾ ಚಾರ್‌ ಅವರ ಅತ್ಯಂತ ದೊಡ್ಡ ಸಾಧನೆ. ಎರಡು ದಿನಗಳ ಸತತ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರು-ಮುನ್ನೂರಕ್ಕೂ ಮಿಕ್ಕು ಹಾಡುಗಾರರು ಭಾಗವಹಿಸುತ್ತಾರೆ. ಜೊತೆಗೆ, ಭಾರತದಿಂದ ಬರುವ ಖ್ಯಾತ ಸಂಗೀತಗಾರರೂ ಸೇರುತ್ತಾರೆ. ಎಂ. ಎಸ್‌. ಶೀಲಾ , ಮೈಸೂರು ನಾಗರಾಜ್‌ ಮತ್ತು ಮೈಸೂರು ಮಂಜುನಾಥ್‌ ಸಹೋದರರು, ಕಲಾವತಿ ಮುಂತಾದ ಸಂಗೀತಜ್ಞರು ಬಂದುಹೋಗಿದ್ದಾರೆ. ಈ ಬಾರಿ ಹೆಮ್ಮಿಗೆ ಶ್ರೀವತ್ಸನ್‌ ಅವರ ಕಾರ್ಯಕ್ರಮ ಏರ್ಪಾಡಾಗಿದೆ.

ಪ್ರಸಿದ್ಧ ಮೃದಂಗ ವಿದ್ವಾನ್‌ ಆನೂರು ದತ್ತಾತ್ರೇಯ ಶರ್ಮ ಹಲವಾರು ಬಾರಿ ಭೇಟಿಕೊಟ್ಟಿರುವುದೇ ಅಲ್ಲದೆ, ಇಲ್ಲಿ ಅನೇಕ ಶಿಷ್ಯರನ್ನೂ ಸಹ ತಯಾರು ಮಾಡುತ್ತಿದ್ದಾರೆ. ಉಷಾ ಅವರ ನೇತೃತ್ವದಲ್ಲಿ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ವಾದ್ಯಗಳ ಮೇಳವನ್ನು ಒಗ್ಗೂಡಿಸಿ ಭಾರತೀಯರಿಗೇ ಅಲ್ಲದೇ ಅಮೇರಿಕನ್ನರಿಗೂ ಕೂಡ ನಮ್ಮ ಸಂಗೀತವನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಹೋದ ವರ್ಷ ಈ ವಾದ್ಯವೃಂದದ ಸೊಬಗನ್ನು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಸಹ ಕೊಂಡಾಡಿತ್ತು.

ಈ ವಾರಾಂತ್ಯದಲ್ಲಿ (ಏಪ್ರಿಲ್‌ 27, 28) ಎರಡು ದಿನಗಳ ಭರ್ಜರಿ ಸಂಗೀತ ಕಾರ್ಯಕ್ರಮಕ್ಕೆ ಶಿವ ವಿಷ್ಣು ದೇವಾಲಯ (6905 Cipriano Road, Lanham, MD 20706 )ದಲ್ಲಿ ಭರದಿಂದ ಸಿದ್ಧತೆ ಸಾಗಿದೆ. ಹಲವಾರು ಸ್ವಯಂ ಸೇಕವರು ಶ್ರೀ ಚಾರ್‌ ನೇತೃತ್ವದಲ್ಲಿ ಸೇರಿ ಹಬ್ಬದಡಿಗೆ ಮಾಡಿ ನಾದ ಬ್ರಹ್ಮನ ಜೊತೆಗೆ ಉದರ ಬ್ರಹ್ಮನ ಆರಾಧನೆಯನ್ನೂ ಮಾಡಿಸುತ್ತಾರೆ ! ಈ ಲೇಖನದ ಮೂಲಕ ಸುತ್ತ ಮುತ್ತಲ ಎಲ್ಲಾ ಸಂಗೀತಪ್ರಿಯರನ್ನೂ ನಾದತರಂಗಿಣಿ ಸಂಸ್ಥೆಯ ಕಾರ್ಯವಾಹಕರು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಾರೆ. ಅಂದಹಾಗೆ, ಕಾರ್ಯಕ್ರಮಕ್ಕೆ ಪ್ರವೇಶ ಉಚಿತ!

ಬೆಂಗಳೂರಿಗೆ ಬರುವರು ಉಷಾ ಚಾರ್‌
ಉಷಾಚಾರ್‌ ಈ ವರ್ಷದ ಬೇಸಗೆಯ ರಜಾದಿನಗಳಲ್ಲಿ ತಮ್ಮ ಶಿಷ್ಯವೃಂದವನ್ನು ಕಟ್ಟಿಕೊಂಡು ಭಾರತಯಾತ್ರೆ ಹೊರಡುವವರಿದ್ದಾರೆ. ಬೆಂಗಳೂರು ಮತ್ತಿತರ ಸ್ಥಳಗಳಲ್ಲಿ ಅನೇಕ ಕಚೇರಿಗಳ ಏರ್ಪಾಡು ಈಗಾಗಲೇ ಆಗಿದೆ. ನಾದತರಂಗಿಣಿ ಇದೇ ರೀತಿ ಸಂಗೀತ ಸೇವೆಯನ್ನು ಮುಂದುವರೆಸಲಿ ಎಂದು ಇಲ್ಲಿನ ಸಂಗೀತ ಪ್ರಿಯರು ಹಾರೈಸುತ್ತಾ ಉಷಾ ಚಾರ್‌ ಅವರಿಗೂ ಅವರ ಕುಟುಂಬ ಮತ್ತು ಶಿಷ್ಯವರ್ಗಕ್ಕೂ ಭಗವಂತನು ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತಾರೆ.

ನಾದತರಂಗಿಣಿ ಸಂಸ್ಥೆಯ ಬಗ್ಗೆ ಇನ್ನಷ್ಟು ಮಾಹಿತಿಗೆ ಕ್ಲಿಕ್ಕಿಸಿ- ನಾದತರಂಗಿಣಿ.ಆರ್ಗ್‌

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X