ಲಾಸ್ ಏಂಜಲೀಸ್ನಲ್ಲಿ 26.2 ಮೈಲುಗಳ ಮ್ಯಾರಥಾನ್ ಓಟ ಓಡಿದ ಕನ್ನಡಿಗರು
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಜ್ಜುಗೊಳ್ಳುತ್ತಿದ್ದ ಲಾಸ್ ಏಂಜಲೀಸ್ ನಗರದಲ್ಲಿ ದೂರದೋಟ, ಮ್ಯಾರಥಾನ್. ನಡೆದದ್ದು ಮಾರ್ಚ್ 3ರಂದು. ವೈದ್ಯರು, ಹೊಟೇಲ್ ಇಟ್ಟುಕೊಂಡವರು, ಇನ್ನಾವುದೋ ಕೆಲಸದಲ್ಲಿ ತೊಡಗಿದವರು ಎಲ್ಲರೂ ಒಂದೆಡೆ ಕಲೆತು, ಓಡಿದರು. 26.2 ಮೈಲುಗಳ ಭಾರೀ ಪಯಣವಿದು. ಓಟದ ನಡುವೆ ಓಡಿದವರ ವಯಸ್ಸು ಗೌಣ. ತವರೂರಿಂದ ದೂರ ಬಂದ ಕನ್ನಡಿಗರೂ ನಾವೇನು ಕಡಿಮೆ ಎಂಬಂತೆ ಓಟಕ್ಕೂ ಮುಂದಾದರು. ಈ ಮ್ಯಾರಥಾನ್ ಓಟವನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡಿಗರಿವರು...
ಡಾ। ಸುರೇಶ್ ಅಯ್ಯಂಗಾರ್ : ಶರ್ಮನೋಕ್ಸ್ ನಿವಾಸಿ. ಗೀಳುಗಳಿಗೆ ಕೊರೆಯಿಲ್ಲ. 58ರ ಹರೆಯದಲ್ಲೂ 26.2 ಮೈಲು ದೂರವನ್ನು ಕೇವಲ 4 ತಾಸು, 4 ನಿಮಿಷ, 39 ಸೆಕೆಂಡುಗಳಲ್ಲಿ ಪೂರೈಸಿದ್ದಾರೆ.
ಡಾ। ಶಿವಶಂಕರ್ : ಕೆನೋಗ ಪಾರ್ಕ್ನ ದಂತವೈದ್ಯ. 57ರ ಹರೆಯ. 17ರ ಹರೆಯದ ಮಗನ ಜೊತೆ ಓಡಿಯೂ, ಆತನಿಗಿಂತ ಕೇವಲ 5 ನಿಮಿಷ ತಡವಾಗಿ ಗುರಿ ಮುಟ್ಟಿದ್ದಾರೆ. ಮ್ಯಾರಥಾನ್ ಓಟಕ್ಕೂ ಇವರಿಗೂ ವರ್ಷಗಳ ನಂಟು. ತಮ್ಮ ಜೀವಮಾನದಲ್ಲಿ ಇಂಥಾ 100ಕ್ಕೂ ಹೆಚ್ಚು ಓಟಗಳನ್ನು ಓಡಿದ ಅನುಭವ. ಲಾಸ್ ಏಂಜಲೀಸ್ ಮ್ಯಾರಥಾನ್ ಓಟದ ಗುರಿ ಮುಟ್ಟಿದ್ದು 4 ಗಂಟೆ, 50 ನಿಮಿಷ, 15 ಸೆಕೆಂಡುಗಳಲ್ಲಿ.
ರಾಜೇಶ್ ಶಂಕರ್ : ಶಿವಶಂಕರ್ ಅವರ ಪುತ್ರ. ಓಟದಲ್ಲಿ ಅಪ್ಪನಿಗೆ ತಕ್ಕ ಮಗ. 17ರ ಹರೆಯದಲ್ಲೇ ಮ್ಯಾರಥಾನ್ ಓಡಲು ಮುಂದು. ಓಟ ಪೂರೈಸಿದ್ದು 4 ಗಂಟೆ, 45 ನಿಮಿಷ, 58 ಸೆಕೆಂಡುಗಳಲ್ಲಿ .ಮಾರಪ್ಪ ಗೋಪಿನಾಥ್ : ವೃತ್ತಿಯಲ್ಲಿ ಮೂಳೆತಜ್ಞ. ಟಸ್ಟಿನ್ ನಗರವಾಸಿ. ಓಟ ಪೂರೈಸಿದ್ದು 5 ಗಂಟೆ, 8 ನಿಮಿಷ, 11 ಸೆಕೆಂಡುಗಳಲ್ಲಿ. 54ರ ಹರಯದಲ್ಲೂ ಭಾರೀ ಉತ್ಸಾಹ. ಇವರ ಓಟವೇ ಇದಕ್ಕೆ ಹಿಡಿದ ಕನ್ನಡಿ.
ಚಿಕ್ಕ ರಾಜು : ಚಿನೋ ಹಿಲ್ಸ್ನ ದಂತವೈದ್ಯ. ವಯಸ್ಸು 43 ವರ್ಷ. ಓಟ ಪೂರೈಸಿದ್ದು 7 ಗಂಟೆ, 45 ನಿಮಿಷ, 21 ಸೆಕೆಂಡುಗಳಲ್ಲಿ.
ಲಲಿತಾ ರಾವ್ : 46ರ ಹರೆಯದ ದಂತವೈದ್ಯೆ. ಡೈಮಂಡ್ ಬಾರ್ ನಿವಾಸಿ. ಹೆಂಗಸು ಯಾರಿಗೇನು ಕಡಿಮೆ ಎಂಬುದನ್ನು 26 ಮೈಲುಗಳಿಗೂ ಹೆಚ್ಚು ದೂರ ಓಡುವುದರ ಮೂಲಕ ಸಾಬೀತುಪಡಿಸಿದ್ದಾರೆ. ಇಷ್ಟು ದೂರ ಓಡಲು ಈಕೆ ತೆಗೆದುಕೊಂಡ ಸಮಯ 7 ಗಂಟೆ, 32 ನಿಮಿಷ, 1 ಸೆಕೆಂಡು.
ರಾಮ್ ರಾವ್ : ವಯಸ್ಸು 48 ವರ್ಷ. ಡೈಮಂಡ್ ಬಾರ್ವಾಸಿ. ಲಲಿತಾ ರಾವ್ ಅವರಿಗೆ ಓಟದಲ್ಲಿ ಸಾಥಿಯಾದ ಇವರು ಮ್ಯಾರಥಾನ್ ಓಟ ಪೂರೈಸಿದ್ದು 7 ತಾಸು, 32 ನಿಮಿಷಗಳಲ್ಲಿ.
ವೆಂಕಟಪ್ಪ ಕುಮಾರಸ್ವಾಮಿ : ಬ್ಯುಸಿನೆಸ್ ಮತ್ತು ಫಿನಾನ್ಶಿಯಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಕೆಲಸ. ವಯಸ್ಸು 52. ಛಲ ಬಿಡದೆ 26.2 ಮೈಲುಗಳನ್ನು ಕ್ರಮಿಸಿದ್ದು 10 ತಾಸು, 37 ನಿಮಿಷ 4 ಸೆಕೆಂಡುಗಳಲ್ಲಿ.
ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಭಾಗವಹಿಸುವುದು ಮುಖ್ಯ. ವಯಸ್ಸು ಎಷ್ಟಾದರೇನು? ನಾವು ಯಾರುಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿರುವ ಈ ಕನ್ನಡಿಗರೆಲ್ಲರಿಗೂ ಶುಭಾಶಯ.
ಮ್ಯಾರಥಾನ್ ಬಗ್ಗೆ ಪೂರ್ಣ ವಿವರ ಬೇಕಿದ್ದರೆ ಕ್ಲಿಕ್ಕಿಸಿ-
ಮುಖಪುಟ / ಸಾಹಿತ್ಯ ಸೊಗಡು