• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಗಣೇಶ ಯಜ್ಞ !

By Staff
|

*ಸಂಜಯ ಹಾವನೂರ, ಲಾಸ್‌ ಎಂಜಲೀಸ್‌, ಕ್ಯಾಲಿಫೋರ್ನಿಯಾ

Ganesha pooja in Los Angeles‘ನಮ್ಮ ಕನ್ನಡ ಸಂಘದ ಅಧ್ಯಕ್ಷ ನಾಗರಾಜರ ನವ ಮಂಡಳಿಯ ನೇತೃತ್ವದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಸಂಘದವರು ಈ ವರ್ಷ ಆಚರಿಸುವ ಗಣೇಶೋತ್ಸವ ಒಂದು ವಿಶಿಷ್ಟ ಕಾರ್ಯಕ್ರಮವಾಗುತ್ತದೆ, ಒಂದಿಷ್ಟು ವ್ಯವಸ್ಥಿತವಾಗಿಯೂ ನಡೆಯಬಹುದು’- ಎಂದು ಆಶಿಸಿದವರ ನಿರೀಕ್ಷೆ ಪೂರ್ತಿ ಹುಸಿಯಾಯಿತು! ಅವತ್ತು ಒಂದಲ್ಲ, ಐದು ವಿಶಿಷ್ಟ ಕಾರ್ಯಕ್ರಮಗಳು, ಅತ್ಯಂತ ವ್ಯವಸ್ಥಿತವಾಗಿ ನಡೆದು ಬಿಟ್ಟವು!!

ಈ ಸಲದ ಗಣೇಶ ಪೂಜೆ - ಪೂಜೆಯೇನು, ಯಜ್ಞವೆಂದರೆ ಸರಿಯಾದೀತು - ಕೇವಲ ಸಾರ್ವಜನಿಕ ಪೂಜೆಯಾಗದೇ ಸಾರ್ವಜನಿಕರೇ ಮಾಡುವ ಪೂಜೆಯಾಗಬೇಕು, ನೂರಾ ಎಂಟು (108) ಗಣಪರನ್ನು ಒಟ್ಟಿಗೆ ಅರ್ಚಿಸಬೇಕು, ಎಂಬ ವಿಶಿಷ್ಟ ಕಲ್ಪನೆಯ ಶಂಖವನ್ನು ಸಂಘದವರು ಊದಿದ್ದೇ ಸಾಕು, ಮುಂದಿನ ಕೆಲಸಕ್ಕೆ ಮುಂದೆ ಬಂದ ಕಾರ್ಯಕರ್ತರು ತಾಳ, ತಮ್ಮಟೆ, ಜಾಗಟೆ ಬಾರಿಸಿ ಕಾರ್ಯಕ್ರಮದ ಮ್ಯಾಳವನ್ನು ನಡೆಸಿಯೇ ಬಿಟ್ಟರು. ಪೂಜಾರ್ಥಿಗಳಿಗಂತೂ ಕೊರತೆಯಿರಲಿಲ್ಲ. ಒಂದು ನೂರ ಇಪ್ಪತ್ತ ಮೂರು (123) ಪರಿವಾರಗಳು ಮೊದಲೇ ಮುಂದೆ ಬಂದಿದ್ದರು. 108 ಸುಂದರ ವಿಗ್ರಹಗಳನ್ನು ಊರಿನಿಂದ ತರಿಸಿದ್ದಾಯಿತು. ಅದಕ್ಕೂ ಮುಖ್ಯವಾಗಿ ಪೂಜೆಗೆ ಬೇಕಾಗುವ ಒಂದೊಂದು ಗರಿ, ಪತ್ರೆ, ಹೂವಿನ ಎಸಳು, ಗೆಜ್ಜೆವಸ್ತ್ರ, ಮಂಗಳಾರತಿಗೆ ವಿಶೇಷ ‘ಬತ್ತಿ’ಯನ್ನೂ ಅಚ್ಚುಕಟ್ಟಾಗಿ ಕಟ್ಟಿಟ್ಟಿದ್ದ 108 ಪೂಜಾ ಸಾಮಗ್ರಿಗಳ ಕಂತೆಗಳೂ ಸಿದ್ಧವಾಗಿದ್ದವು. ನಡುವೆ ಮತ್ತೇನಾದರೂ ಬೇಕಿದ್ದರೆ ಅದನ್ನು ಪೂರೈಸಲು ನಿರಂತರವಾಗಿ ಓಡಾಡುತ್ತಿದ್ದ ಕಾರ್ಯಕರ್ತರ ಪಡೆ. ಎಲ್ಲಿಯವರೆಗೆ ತಯಾರಿ ಪರಿಪೂರ್ಣವಾಗಿತ್ತು ಅಂದರೆ, 108 ತೆಂಗಿನಕಾಯಿಗಳನ್ನು ಒಡೆಯಲಿಕ್ಕೆ ಸುತ್ತಿಗೆಗಳೊಡನೆ ಸಜ್ಜಿತರಾದ ಸ್ವಯಂಸೇವಕರೂ ಹಾಜರಿದ್ದರು! ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನೆರವೇರಿಸುವ ಜವಾಬ್ದಾರಿಯನ್ನು ಹೀಗೆ ಕಾರ್ಯಕರ್ತರೇ ಹೊತ್ತುಕೊಂಡಿದ್ದರಿಂದ ವಿಘ್ನೕಶ್ವರನೂ ನಿಶ್ಚಿಂತೆಯಿಂದ ಕುಳಿತು ಪೂಜೆಗಳನ್ನು ಸ್ವೀಕರಿಸಿರಬೇಕು !

ಪೂಜೆಯ ಮಧ್ಯೆ ಮಕ್ಕಳಿಂದ ಸಮೂಹಗೀತೆ. ಅಂದರೆ ಗೊತ್ತಲ್ಲ . ತಕ್ಕಡಿಗೆ ಹಾಕಿದ ಕಪ್ಪೆಗಳಂತೆ ಚಡಪಡಿಸುವ ಒಂದಿಷ್ಟು ಮಕ್ಕಳು. ತಯಾರಿ ಮಾಡಿಸಿದ್ದು ಇಪ್ಪತ್ತೈದಕ್ಕಾದರೂ ಕೊನೆಗೆ ವೇದಿಕೆಗೆ ಬಂದಿರುವವು ಹದಿನೈದು ಮಾತ್ರ. ಅದರಲ್ಲಿ ಮನಸ್ಸಿಟ್ಟು ಹಾಡುವವು ಏಳೋ ಎಂಟೋ. ಅವೂ ಎಂಟು ದಿಕ್ಕಿಗೆ ನೋಡುತ್ತ ತಪ್ಪು ತಪ್ಪಾಗಿ ಹನ್ನೊಂದು ಶೃತಿಗಳಲ್ಲಿ ಹಾಡುತ್ತ ... ಅಯ್‌...ತಾಳಿ ಮಾರಾಯರೆ...ಇದು ಬೆಂಗಳೂರಿನ ಗೋಳಲ್ಲ. ಕ್ಯಾಲಿಫೋರ್ನಿಯಾ ಕನ್ನಡದ ಹಾಡು. ಐವತ್ತು ಮಕ್ಕಳು ಶಿಸ್ತಿನಿಂದ ವೇದಿಕೆಗೆ ಬಂದು ಒಂದಿಷ್ಟೂ ತಡವರಿಸದೇ ಸುಶ್ರಾವ್ಯವಾಗಿ ಒಂದಾದ ಮೇಲೊಂದರಂತೆ ನಾಲ್ಕು ಹಾಡುಗಳನ್ನು ಹಾಡಿ ತೋರಿಸಿದರು. ಈ ಐವತ್ತು ಮರಿ ಕೋಗಿಲೆಗಳನ್ನು ಕಾಲ ಕಾಲಕ್ಕೆ ಕಲೆ ಹಾಕಿ ತಯಾರು ಮಾಡುವ ದೀಕ್ಷೆ ತೆಗೆದುಕೊಂಡವರಿಗೆ ನಮೋ ಎನ್ನಬೇಕು.

ಪೂಜೆಯ ನಂತರ ಪ್ರಸಾದ ಎಂದು ನೀವು ಊಹಿಸಿದ್ದು ಅತ್ಯಂತ ಸರಿ. ಆದರೆ ಇದನ್ನು ವಿಶಿಷ್ಟ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಬೇಕೋ ಬೇಡವೋ ಎಂಬ ಬಗ್ಗೆ ಸ್ವಲ್ಪ ಸಂದೇಹ. ಇಲ್ಲಿ ನ ತಪ್ಪು ಕನ್ನಡ ಸಂಘದ ಸದಸ್ಯೆಯರದ್ದು. ಪ್ರತಿ ಕಾರ್ಯಕ್ರಮಕ್ಕೂ ಉತ್ತಮವಾದ ಭೋಜನವನ್ನು ಒದಗಿಸುವ ಸಂಪ್ರದಾಯವನ್ನು ಅವರೇ ಹಾಕಿಕೊಂಡಿದ್ದು. ಇವತ್ತೂ ಆ ಪರಂಪರೆಯನ್ನು ಪಾಲಿಸಿದ್ದಾರೆ ಎಂದು ಹೇಳಿ ಮುಗಿಸಿಬಿಡಬಹುದು. ಆದರೆ ಮರುಕ್ಷಣಕ್ಕೆ ಅವತ್ತಿನ ಕರ್ಜಿಕಾಯಿ, ಕಡಲೆಕಾಯಿ ಉಸುಳಿ, ಕೋಸಂಬ್ರಿಗಳೆಲ್ಲ ನೆನಪಾಗಿ ಅವುಗಳ ಸ್ಮರಣೆಯನ್ನು ಇಲ್ಲಿ ಮಾಡದಿದ್ದರೆ ಪೂಜೆಯ ಪೂರ್ಣ ಪುಣ್ಯ ದಕ್ಕಲಾರದೆಂದೆನಿಸುತ್ತದೆ.

ಸದ್ದು ಗದ್ದಲವಿಲ್ಲದೇ ನೇರವಾಗಿ ಕನ್ನಡಿಗರ ಮನ ಮುಟ್ಟುವಂಥ ಇನ್ನೊಂದು ಕಾರ್ಯಕ್ರಮವೂ ಅವತ್ತು ನಡೆಯಿತು. ಧಾರವಾಡದ ಮನೋಹರ ಗ್ರಂಥಮಾಲೆಯು ಇಪ್ಪತ್ತನೆ ಶತಮಾನದ ಕನ್ನಡ ಸಾಹಿತ್ಯಕ್ಕೆ ಸರಿ ಸಮಾಂತರವಾಗಿ ಬೆಳೆದುಕೊಂಡ ಬಂದ ಸಂಸ್ಥೆ . ಕನ್ನಡದ ಎಲ್ಲಾ ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಅವರದು. ಅವರೂ ಇದೇ ಸಂದರ್ಭದಲ್ಲಿ ತಮ್ಮದೊಂದು ಪ್ರದರ್ಶನವನ್ನಿಟ್ಟುಕೊಂಡಿದ್ದರು. ಅದು ತಮ್ಮ ಪುಸ್ತಕಗಳದ್ದಲ್ಲ, ತಾವು ಪ್ರಚಲಿತಗೊಳಿಸಿದ ಸಾಹಿತಿಗಳದ್ದು. ಮಾಸ್ತಿಯವರಿಂದ ಹಿಡಿದು ಅನಂತಮೂರ್ತಿಯವರ ವರೆಗೆ ಎಲ್ಲ ಶ್ರೇಷ್ಠರ ಭಾವಚಿತ್ರಗಳು, ಹಸ್ತಾಕ್ಷರದ ನಮೂನೆಗಳು. ಅದಕ್ಕೂ ಮೇಲಾಗಿ ಗಮನ ಸೆಳೆದದ್ದೆಂದರೆ ‘ತುಘಲಕ್‌’, ‘ಸಂಸ್ಕಾರ’ದಂಥ ಐತಿಹಾಸಿಕ ಕೃತಿಗಳ ಮೂಲ ಹಸ್ತಪ್ರತಿಗಳು. ದೂರದ ಕ್ಯಾಲಿಫೋರ್ನಿಯಾದಲ್ಲಿ ಅವುಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.

ಅವತ್ತಿನ ಕೊನೆಯ ಕಾರ್ಯಕ್ರಮ ಕಾವೇರಿ ಕನ್ನಡ ಕೂಟದವರಿಂದ ಪ್ರಸ್ತುತಗೊಂಡ ‘ಯಯಾತಿ’ ನಾಟಕ. ಈ ಬಗ್ಗೆ ವಿಸ್ತಾರವಾದ ವಿಮರ್ಶೆ ಈಗಾಗಲೇ ಬಂದಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಎತ್ತಿ ಹೇಳಬೇಕಾದ ಇನ್ನೊಂದು ಅಂಶವೆಂದರೆ ಸಂಯೋಜಕರ ಸಮಯಪ್ರಜ್ಞೆ. ಇಡೀ ದಿನದಲ್ಲಿ ಯಾವ ಕಾರ್ಯಕ್ರಮವೂ ಅರ್ಧ ಗಂಟೆಗಿಂತ ಹೆಚ್ಚು ತಡವಾಗಲಿಲ್ಲ. ಯಾವ ನಾಡಿನ ಕನ್ನಡಿಗರಿಗೂ ಅದೊಂದು ಅಪರೂಪದ ಅನುಭವವಲ್ಲವೆ?!

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X