ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸುದಿನ.. ‘ಸಾಹಿತ್ಯಗೋಷ್ಠಿ’ಯ ಜನುಮ ದಿನ !

By Staff
|
Google Oneindia Kannada News

*ಗಣೇಶ್‌ ಕಡಬ

Ganesh Kadabaಡಿಸೆಂಬರ್‌14, 2002.
ನಾವೆಲ್ಲರೂ ತುಂಬಾ ಆಸಕ್ತಿ ಮತ್ತು ಕುತೂಹಲದಿಂದ ‘ಯಾವಾಗ ಬರುತ್ತದೆಯೋ!’ ಎಂಬ ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದ ದಿನ.

ಒಂದು ವರ್ಷದ ಹಿಂದೆ ಆರಂಭವಾಗಿ- ಬೇ ಏರಿಯಾದ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಪ್ರತಿ ತಿಂಗಳೂ ಕನ್ನಡ ಸಾಹಿತ್ಯ ಮತ್ತು ಕಾವ್ಯಲೋಕದ ಉಪನ್ಯಾಸಗಳ ಸಿಹಿ ತುತ್ತುಗಳನ್ನಿತ್ತ, ‘ಉತ್ತರ ಕ್ಯಾಲಿಫೋರ್ನಿಯ ಸಾಹಿತ್ಯ ಗೋಷ್ಠಿಯ’ ವಾರ್ಷಿಕ ಸಮಾರಂಭವದು. ಲಾಸ್‌ ಆಲ್ಟೋಸ್‌ ಲೈಬ್ರರಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೊರಗಡೆ ಚಂಡಮಾರುತದಂತೆ ರಭಸದಿಂದ ಬೀಳುತ್ತಿದ್ದ ಮಳೆ ಗಾಳಿಗಳನ್ನೂ ಲೆಕ್ಕಿಸದೆ ಸಭಿಕರು ನೆರೆದಿದ್ದರು.

ಮೈಸೂರು ಅನಂತಸ್ವಾಮಿಯವರ ‘ಕನ್ನಡದ ಋಷಿಗಳೇ..’ ಗೀತೆಯನ್ನು ಮಧುಕಾಂತ್‌ ಕೃಷ್ಣಮೂರ್ತಿಯವರು ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರಕಾಶ್‌ ನಾಯಕ್‌ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ವಿಶ್ವನಾಥ ಹುಲಿಕಲ್‌ ಅವರ ‘ನಾಗವರ್ಮನ ಕರ್ಣಾಟಕ ಕಾದಂಬರಿ -ಒಂದು ಚಿತ್ತಾಕರ್ಷಕ ಕಥೆ’ ಎಂಬ ಉಪನ್ಯಾಸ ಸಾಹಿತ್ಯ ಗೋಷ್ಠಿಯ ವಾರ್ಷಿಕೋತ್ಸವದ ವಿಶೇಷ. ಕನ್ನಡ ನಾಡಿನ ಸುಮಾರು ಹತ್ತನೇ ಶತಮಾನದ ಕವಿಯಾದ ನಾಗವರ್ಮನು, ಸಂಸ್ಕೃತದ ಬಾಣ ಭಟ್ಟನ ಮೇರು ಕೃತಿಯಾದ ‘ಕಾದಂಬರಿ’ ಮೂಲ ಕಥೆಯ ಮೇಲೆ ಆಧಾರಿಸಿ, ‘ಕರ್ಣಾಟಕ ಕಾದಂಬರಿ’ ಯನ್ನು ಚಂಪೂ ಕಾವ್ಯ ಧಾಟಿಯಲ್ಲಿ ರಚಿಸಿದನು. ಕಾಡಿಗೆ ಬೇಟೆಗೆ ಬಂದ ಬೇಡನು ಪೊಟರೆಯಾಳಗೆ ಕೈಹಾಕಿ ಮುದಿ ತಂದೆ ಗಿಳಿಯ ಕತ್ತನ್ನು ಮುರಿಯುವಾಗ, ಆ ಮುದಿ ಗಿಳಿಯು ತನ್ನ ಮುದ್ದಿನ ಮರಿ ಗಿಳಿಯು ಬೇಡನಿಗೆ ಕಾಣದಂತೆ ತನ್ನ ರೆಕ್ಕೆಯಡಿಯಲ್ಲಿ ಬಚ್ಚಿಟ್ಟುಕೊಂಡು, ತನ್ನ ಮರಿಗಿಳಿಯ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ತೆತ್ತಾಗ, ಸಭಿಕರ ಕಂಗಳು ತೇವಗೊಂಡವು.

ಪುಂಡರೀಕ, ಕಪಿಂಜಲ, ಮಹಾಶ್ವೇತೆ, ಕಾದಂಬರಿ ಮೊದಲಾದ ಪಾತ್ರಗಳಿದ್ದ ಈ ಪ್ರಣಯಭರಿತ ಕಥೆಯನ್ನು, ವಿಶ್ವನಾಥರು ಜೀವ ಭಾವ ತುಂಬಿ ಸಭಿಕರು ಮಂತ್ರ ಮುಗ್ಧರಾಗುವಂತೆ ಹೇಳಿದರು. ಕಥೆಯನ್ನು ನಿರೂಪಿಸಿದ ನಂತರ, ಕಥೆಯ ಮತ್ತು ಕಥೆಯಲ್ಲಿ ಬಂದ ಪಾತ್ರಗಳ ವಿಶ್ಲೇಷಣೆಯನ್ನೂ ಮಾಡಿದರು. ನಾಗವರ್ಮನ ಈ ಕೃತಿಯನ್ನು, ಅದರ ಮೂಲರೂಪವಾದ ಹಳೆಗನ್ನಡದಲ್ಲೇ ಓದಿ ಅರ್ಥೈಸಿಕೊಂಡು, ನಮಗೆಲ್ಲಾ ಅರ್ಥವಾಗುವಂತೆ ನಿರೂಪಿಸಿದ ವಿಶ್ವನಾಥರ ಉಪನ್ಯಾಸ ಮನರಂಜಿಸಿದ್ದೇ ಅಲ್ಲದೆ, ಸಭಿಕರ ಮನವನ್ನೂ ಗಾಢವಾಗಿ ತಟ್ಟಿತು.

ಮನೋರಮ ರಾವ್‌ ಅವರು, ತಮ್ಮ ಮಧುರ ಕಂಠದಲ್ಲಿ ಕನಕದಾಸರ ‘ನೀ ಮಾಯೆಯೋ..’, ಬಿ.ಎ. ಸನದಿ ಅವರ ‘ಅರುಣ ಛಾಯೆ ಕಿರಣವಾಗಿ..’ ಮತ್ತು ಎಸ್‌.ವಿ. ಪರಮೇಶ್ವರ ಭಟ್ಟರ ‘ಇನಿತು ಸೊಬಗು..’ ಭಾವಗೀತೆಗಳನ್ನು ಸಭಿಕರು ತಲೆದೂಗುವಂತೆ ಹಾಡಿದರು.
ಆಗ ಮಧ್ಯಾಂತರದ ವಿರಾಮ.
ಅನ್ನಪೂರ್ಣ ವಿಶ್ವನಾಥ್‌ ಅವರು ತಾವು ತಂದಿದ್ದ ಲಘು ಉಪಹಾರವನ್ನು ಎಲ್ಲರಿಗೂ ನೀಡಿದರು.

Hulikal couple cutting Cakeಹುಟ್ಟುಹಬ್ಬ ಆಚರಣೆ :
ಸಾಹಿತ್ಯ ಗೋಷ್ಠಿಯೆಂಬ ಕಂದನ ಮೊದಲ ವರುಷದ ಹುಟ್ಟು ಹಬ್ಬದ ಸಲುವಾಗಿ ಒಂದು ಮೋಂಬತ್ತಿಯಿರಿಸಿದ್ದ ಕೇಕ್‌ ಅನ್ನು ಹುಲಿಕಲ್‌ ದಂಪತಿಗಳು ಕತ್ತರಿಸಿದರು. ಎಲ್ಲರೂ ಮಾಮೂಲಿನಂತೆ ‘ಹ್ಯಾಪ್ಪೀ ಬರ್ತ್‌ ಡೇ ಟೂ ಯೂ’ ಎಂದು ಹಾಡಲು ಹೋದಾಗ, ಅಮೇರಿಕಾದಲ್ಲಿ ನಲ್ವತ್ತು ವರುಷದಿಂದ ವಾಸವಾಗಿದ್ದರೂ ಕನ್ನಡತನವನ್ನು ಮರೆಯದ ಸತ್ಯನಾರಾಯಣ ಅವರು ಎಲ್ಲರನ್ನೂ ತಡೆದು, ‘ನಾವು ಈ ಹುಟ್ಟು ಹಬ್ಬದ ಹಾಡನ್ನು ಕನ್ನಡದಲ್ಲೇ ಹೇಳಬೇಕು’ ಎಂದು, ಜಿ.ಪಿ.ರಾಜರತ್ನಂ ಅವರ ‘ಆ ಜೂಜು ಮಲ್ಲಿಗೇ, ಆ ಜಾಜಿ ಸಂಪಿಗೇ, ರಾಜ ತೇಜ ಮಗುವೆ ಎನ್ನ ಗಾಜು ಗೊಂಬೆಯೇ..’ ಎಂಬ ಹುಟ್ಟು ಹಬ್ಬದ ಹಾರೈಕೆಯ ಗೀತೆಯನ್ನು ಹೇಳಿ ಎಲ್ಲರನ್ನೂ ಮುದಗೊಳಿಸಿದರು!

ವಿರಾಮದ ನಂತರದ ಕಾರ್ಯಕ್ರಮ, ಡಾ. ಕೆ.ಅರ್‌.ಎಸ್‌. ಮೂರ್ತಿಯವರ ‘ವೇದವ್ಯಾಸನಿಗೇ ಕರ್ಣನ ತಿರುಗು ಬಾಣ’ ಎನ್ನುವ ವಿನೂತನ ಪ್ರಯೋಗ. ಇದರಲ್ಲಿ ವ್ಯಾಸ ನಿರ್ಮಿತ ಕರ್ಣ, ಅರ್ಜುನ, ಭೀಷ್ಮ, ಭೀಮಾದಿ ಪಾತ್ರಗಳು ವ್ಯಾಸನಿಗೆ ಹಾಗೂ ತಮ್ಮ ತಮ್ಮಲ್ಲೇ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮತ್ತು ಉತ್ತರಿಸುವ ಅವಕಾಶ. ಪದ್ಮನಾಭ ರಾವ್‌ ಅವರು ಕರ್ಣನಾಗಿ, ವಿಶ್ವನಾಥ್‌ ಹುಲಿಕಲ್‌ ಅರ್ಜುನನಾಗಿ, ಅನ್ನಪೂರ್ಣ ವಿಶ್ವನಾಥ್‌ ಕುಂತಿಯಾಗಿ, ಪ್ರಕಾಶ್‌ ನಾಯಕ್‌ ದುರ್ಯಾಧನನಾಗಿ, ಹನುಮಂತ ಶೆಟ್ಟರು ಶ್ರೀಕೃಷ್ಣನಾಗಿ, ವಿಜಯ ಏಳಂಜಿಯವರು ಏಕಲವ್ಯನಾಗಿ, ಶಶಿಕಲ ನಿಂಬಾಳ್‌ ದ್ರೌಪದಿಯಾಗಿ, ಗಣೇಶ್‌ ಕಡಬ ಭೀಮನಾಗಿ, ಮಧುಕಾಂತ್‌ ಕೃಷ್ಣಮೂರ್ತಿ ಭೀಷ್ಮನಾಗಿ, ಮತ್ತು ವ್ಯಾಸನಾಗಿ ಮೂರ್ತಿಯವರು ಉತ್ತಮ ಅಭಿನಯ ನೀಡಿದರು. ಮೂರ್ತಿಯವರು ತಾವು ಸೃಷ್ಟಿಸಿದ ಪಾತ್ರಗಳ ಮತ್ತು ಸಭಿಕರ ಪ್ರಶ್ನೆಗಳಿಗೆ ವ್ಯಾಸನ ರೂಪದಲ್ಲಿ ಸಮರ್ಪಕವಾಗಿ ಉತ್ತರಿಸಿದರು.

ಕೊನೆಯದಾಗಿ, ವಿಶ್ವನಾಥ ಹುಲಿಕಲ್‌ ಅವರು ಗೋಷ್ಠಿಯ ವಾರ್ಷಿಕ ವರದಿಯನ್ನು ನೀಡಿದರು. ವರ್ಷದಲ್ಲಿ ನೆರವೇರಿಸಿದ ಕಾರ್ಯಕ್ರಮಗಳ ಮುಖ್ಯಾಂಶಗಳು, ವ್ಯಯಗಳ ವಿವರಣೆ ಮತ್ತು ಗೋಷ್ಠಿಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಈ ವರ್ಷದಲ್ಲಿ ಸಾಹಿತ್ಯ ಗೋಷ್ಠಿಯ ಎಲ್ಲ ಹನ್ನೆರಡು ಕಾರ್ಯಕ್ರಮಗಳನ್ನು ಆಯೋಜಿಸಿ ನಡೆಸಲು ತಗುಲಿದ ಎಲ್ಲ ಖರ್ಚು ವೆಚ್ಚಗಳನ್ನೂ (500 ಡಾಲರುಗಳಿಗೂ ಮೀರಿದ ಮೊತ್ತವನ್ನು) ಸಾಹಿತ್ಯ ಗೋಷ್ಠಿಯ ಸಂಸ್ಥಾಪಕ ದಂಪತಿಗಳಾದ ವಿಶ್ವನಾಥ ಹುಲಿಕಲ್‌ ಮತ್ತು ಅನ್ನಪೂರ್ಣ ವಿಶ್ವನಾಥ್‌ ಅವರೇ ಸಂಪೂರ್ಣವಾಗಿ ಭರಿಸಿದ್ದಾರೆ.

ಪ್ರಕಾಶ್‌ ನಾಯಕ್‌ ಅವರು ಎಲ್ಲರಿಗೂ ತಮ್ಮ ವಂದನೆಗಳನ್ನು ತಿಳಿಸಿದರು. ಕೊನೆಯದಾಗಿ ಅನ್ನಪೂರ್ಣ ವಿಶ್ವನಾಥ್‌ ಮತ್ತು ಶಶಿಕಲ ನಿಂಬಾಳ್‌ ಅವರು ತಾವು ಮಾಡಿಕೊಂಡು ತಂದಿದ್ದ ವೆಜಿಟೆಬಲ್‌ ಬಾತ್‌ ಮತ್ತು ಮಸಾಲೆ ಮೊಸರನ್ನದ ರುಚಿಯಾದ ಊಟದೊಂದಿಗೆ ಗೋಷ್ಠಿಯ ವಾರ್ಷಿಕೋತ್ಸವ ಸಮಾಪ್ತಿಯಾಯಿತು.

ಸಾಹಿತ್ಯಗೋಷ್ಠಿಯ ಈವರೆಗಿನ ಕಾರ್ಯಕ್ರಮಗಳು :

  1. ‘ಜನ್ನನ ಯಶೋಧರ ಚರಿತೆ - ಒಂದು ವಿಮರ್ಶಾತ್ಮಕ ಪರಿಚಯ’ - ವಿಶ್ವನಾಥ್‌ ಹುಲಿಕಲ್‌
  2. ‘ ಕಾವ್ಯದಲ್ಲಿ ಕ್ರಿಯಾಶೀಲತೆ’ - ಡಾ. ಕೆ. ಆರ್‌. ಎಸ್‌. ಮೂರ್ತಿ
  3. ‘ಕಾವ್ಯದಲ್ಲಿ ಅನುವಾದಕನ ಸಮಸ್ಯೆಗಳು’ - ಎಂ. ಆರ್‌. ದತ್ತಾತ್ರಿ
  4. ಬೇಂದ್ರೆಯವರ ‘ನೀ ಹೀಂಗ ನೋಡಬೇಡ ನನ್ನ’ ಕವನದ ವಿಮರ್ಶೆ’ - ಜ್ಯೋತಿ ಮಹದೇವ
  5. ‘ಆಧುನಿಕ ದೃಷ್ಟಿಯಲ್ಲಿ ರಾಮಾಯಣ’ - ಎಂ. ವಿ. ನಾಗರಾಜ ರಾವ್‌
  6. ‘ನಾನೇಕೆ ಸಣ್ಣಕಥೆ ಬರೆಯುತ್ತೇನೆ?’ - ಕಡೂರು ರಾಮಸ್ವಾಮಿ
  7. ‘ಮಂಕುತಿಮ್ಮನ ಕಗ್ಗದಲ್ಲಿ ಮಾನವೀಯ ಮೌಲ್ಯಗಳು’ - ಪದ್ಮನಾಭ ರಾವ್‌
  8. ‘ಅಡಿಗರ ಕಾವ್ಯದಲ್ಲಿ ರಾಜಕೀಯ ವಿಡಂಬನೆ’ - ಪ್ರಕಾಶ್‌ ನಾಯಕ್‌
  9. ‘ಕಳೆದ ಶತಮಾನದಲ್ಲಿ ಕನ್ನಡದ ಕಾವ್ಯ ಬೆಳೆದು ಬಂದ ದಾರಿ’ - ವಿಚಾರ ಸಂಕಿರಣ, ಕವಿ ಗೋಷ್ಠಿ ಮತ್ತು ವನಭೋಜನ
  10. ‘ಸಾಹಿತ್ಯದಲ್ಲಿ ಭಾಷೆಯ ಮಹತ್ವ ಮತ್ತು ಪ್ರಯೋಗ’ - ಮಹಾಬಲ ಶಾಸ್ತ್ರಿ
  11. ‘ಅನಂತ ಮೂರ್ತಿಯವರ ಕೆಲವು ಶ್ರೇಷ್ಠ ಸಣ್ಣ ಕಥೆಗಳು’ - ವಿಶ್ವನಾಥ್‌ ಹುಲಿಕಲ್‌
  12. ‘ಶ್ರೀ ರಾಮಾಯಣ ಮಹಾನ್ವೇಷಣಂ’ - ವೀರಪ್ಪ ಮೊಯಿಲಿ
  13. ‘ನಾಟಕದ ಸಾಹಿತ್ಯ ಮತ್ತು ಭಾಷೆ’ ಎಚ್‌. ಸಿ. ಶ್ರೀನಿವಾಸ್‌
  14. ‘ಭೈರಪ್ಪನವರ ಸಾರ್ಥ’ - ಯೋಗೇಶ್‌ ದೇವರಾಜ್‌
  15. ‘ಕನ್ನಡ ಓದುಗರು ಎಂತಹ ಲೇಖನಗಳನ್ನು ಮೆಚ್ಚುತ್ತಾರೆ?’ - ಎಸ್‌. ಕೆ. ಶಾಮಸುಂದರ
  16. ‘ಭೈರಪ್ಪನವರ ಜಲಪಾತ - ಒಂದು ವಿಮರ್ಶೆ’ - ಗಣೇಶ್‌ ಕಡಬ
  17. ‘ದಾಸ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳು’ - ಡಾ. ಕೆ. ಆರ್‌. ಎಸ್‌. ಮೂರ್ತಿ
  18. ‘ನಾಗವರ್ಮನ ಕರ್ಣಾಟಕ ಕಾದಂಬರಿ - ಒಂದು ಚಿತ್ತಾಕರ್ಷಕ ಕಥೆ’ ವಿಶ್ವನಾಥ್‌ ಹುಲಿಕಲ್‌
  19. ‘ವೇದ ವ್ಯಾಸರೊಡನೆ ಸಂವಾದ’ - ಡಾ. ಕೆ. ಆರ್‌. ಎಸ್‌. ಮೂರ್ತಿ
ಸಾಹಿತ್ಯ ಗೋಷ್ಠಿಯ ಮುಂದಿನ ಕಾರ್ಯಕ್ರಮಗಳ ಹೆಚ್ಚಿನ ಮಾಹಿತಿಗಾಗಿ ವಿಶ್ವನಾಥ್‌ ಹುಲಿಕಲ್‌ ಅವರನ್ನು ಸಂಪರ್ಕಿಸಿ: (408) 3433900, [email protected]

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X