ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಾರಾಯಣನ ಪಾತ್ರ ಅಂದರೆ ಮನೋಹರ್‌ ಕುಲಕರ್ಣಿ ನೆನಪಾಗ್ತಾರೆ’

By Staff
|
Google Oneindia Kannada News

*ಮವಾಸು

Mavasu urf Vallisha Shashtry and Manohar Kulkarniಅಮೆರಿಕೆಯಲ್ಲಿ ಇದೀಗ ಸಾಕಷ್ಟು ಸದ್ದು ಮಾಡುತ್ತಿರುವ ನಾಟಕ ‘ಯಯಾತಿ’. ಹಾಡು- ಹರಟೆಗಳ ಹೇರಳ ಭರಾಟೆಯ ನಡುವೆ ರಂಗ ತಾಲೀಮು ಅನ್ನುವುದು ಅಮೆರಿಕಾ ಮಟ್ಟಿಗೆ ಅಪರೂಪ ಅಂತಲೇ ಹೇಳಬಹುದು. ಕಲಾವಿದರನ್ನು ಹೆಕ್ಕಿ, ಅವರ ಕೆಲಸದ ಜಂಜಾಟದಲ್ಲೂ ಸಮಯ ಹೊಂದಿಸಿ, ತಾಲೀಮು ನಡೆಸಿ ಚೆಂದದೊಂದು ನಾಟಕ ಕಟ್ಟಿಕೊಡುವುದು ಅಮೆರಿಕಾದಂಥಾ ದೇಶದಲ್ಲಿ ವಿಕ್ರಮ ಅಂತಲೇ ಹೇಳಬಹುದು. ಇಂಥಾ ವಿಕ್ರಮ ಮಾಡಿರುವುದು ಮನೋಹರ ಕುಲಕರ್ಣಿ.

ಮನೋಹರ ಕುಲಕರ್ಣಿ ಅವರ ಹೆಸರನ್ನು ನಾನು ಬೆಂಗಳೂರಿನ ‘ಬೆನಕ’ ತಂಡದಲ್ಲಿ ನಾಟಕಗಳನ್ನು ಮಾಡುತ್ತಿದ್ದಾಗ ಕೇಳಿದ ನೆನಪು. ಅವರು ಅಮೆರಿಕಾದಲ್ಲಿ ಬಂದು ನೆಲಸಿದ್ದಾರೆ ಎಂದೂ ಕೇಳಿದ್ದೆ. ಆದರೆ ಮುಖತಃ ಭೇಟಿಯಾದದ್ದು ಕೆಸಿಎಯವರ ವತಿಯಿಂದ ನಡೆದ ಯಯಾತಿ ನಾಟಕದ ಸಂದರ್ಭದಲ್ಲಿ. ಅವರನ್ನು ಭೇಟಿ ಮಾಡಿ ಹರಟೆ ಹೊಡೆದಿದ್ದು ನನ್ನ ಹಳೆಯ ಬೆನಕಾದ ಸ್ನೇಹಿತರ ಜ್ಞಾಪಕ ತಂದಿತ್ತು.

ಹೆಗ್ಗಡದೇವನ ಕೋಟೆ ಶ್ಯಾನುಭೋಗರ ವಂಶದಿಂದ ಬಂದ ಮನೋಹರ್‌ ಕುಲಕರ್ಣಿ, ಓದಿದ್ದೆಲ್ಲಾ ಮೈಸೂರ್‌ನಲ್ಲಿ. ಕಾಲೇಜಿನಲ್ಲಿದ್ದಾಗಲಿಂದಲೇ ನಾಟಕದ ಗೀಳು ಹತ್ತಿತು. ಚಲನಚಿತ್ರ ನಟರಾದ ಸಂಪತ್‌, ಎಂಪಿ ಶಂಕರ್‌ ಜೊತೆಯಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ ಅನುಭವ ಪಡೆದುಕೊಂಡ ಮನೋಹರ್‌, 1974ರ ಸುಮಾರಿನಲ್ಲಿ ಬೆಂಗಳೂರಿಗೆ ಹೋದರು. ರಂಗ ತುಡಿತ ಇದ್ದಿದ್ದರಿಂದ ಬಿ.ವಿ.ಕಾರಂತರ ಸ್ನೇಹವಾಯಿತು. ‘ಬೆನಕ’ ತಂಡದ ಜೊತೆಗೂಡಿ ‘ಸತ್ತವರ ನೆರಳು’ ನಾಟಕ ಪ್ರಯೋಗ ಮಾಡಿದರು. ನಾರಾಯಣನ ಪಾತ್ರ ಎಂದೊಡನೆ ಮನೋಹರ್‌ ಕಣ್ಮುಂದೆ ಬರುತ್ತಾರೆ. ಅದು ಅವರ ಅಭಿನಯ ಪ್ರತಿಭೆಗೆ ಹಿಡಿದ ಕನ್ನಡಿ. ಹವ್ಯಾಸಿ ರಂಗದಲ್ಲಿ ಎಲ್ಲರಿಗೂ ಪರಿಚಿತರಾಗಿರುವ ಮನೋಹರ್‌, ಗಿರಡ್ಡಿ ಗೋವಿಂದರಾಜ್‌ ಅವರ ‘ಹಂಗು’ವಿನಲ್ಲೂ ಅಭಿನಯಿಸಿದರು.

1979ರ ಸುಮಾರಿನಲ್ಲಿ ಉದರ ನಿಮಿತ್ತಂ ಅಮೇರಿಕಾಗೆ ಹಾರಿದರು. ಸಾಗರದಾಚೆ ಬಂದರೂ ರಂಗ ತುಡಿತಕ್ಕೆ ಕ್ವಚಿತ್ತೂ ಕುಂದು ತಂದುಕೊಳ್ಳಲಿಲ್ಲ. ಕಾಳು ಸಂಪಾದನೆ ಭರದಲ್ಲಿ ಗೀಳನ್ನು ಕಳಕೊಳ್ಳಲಿಲ್ಲ. ಕಳೆದ 25 ವರ್ಷಗಳಿಂದ ವಾಷಿಂಗ್ಟನ್‌ ಪ್ರದೇಶದಲ್ಲಿ ಹವ್ಯಾಸಿ ರಂಗಕ್ಕೆ ಮೆರುಗು ಕೊಡುತ್ತಲೇ ಸದ್ದು ಮಾಡಿದವರು ಕುಲಕರ್ಣಿ. ಜೋಕುಮಾರ ಸ್ವಾಮಿ, ಅರಸಿ ಬಂದ ಆತ್ಮ, ಕ್ರಾಂತಿ ಬಂತು ಕ್ರಾಂತಿ, ಯಯಾತಿ ನಾಟಕಗಳನ್ನು ವಿದೇಶೀ ಭೂಮಿಕೆಯಲ್ಲೂ ಯಶಸ್ವಿಯಾಗಿ ರಂಗದ ಮೇಲೆ ತಂದು, ಅಮೆರಿಕನ್ನಡಿಗರ ಮನೆ ಮಾತಾಗಿದ್ದಾರೆ.

ಕುಲಕರ್ಣಿ ನಟರಷ್ಟೇ ಅಷ್ಟೇ ಅಲ್ಲ, ನಾಟಕಕಾರರೂ ಹೌದು. ‘ಅರಸಿ ಬಂದ ಆತ್ಮ’ , ‘ವ್ಯೂಹ’ ಇವರ ಯಶಸ್ವಿ ನಾಟಕಗಳು. ‘ಸಮಾಧಿಯಿಂದ ಎದ್ದ ಸುಂದರಿ’ ಕಥಾ ಸಂಕಲನ ಇವರೊಳಗಿನ ಕತೆಗಾರನ ಜಾಣತನಕ್ಕೆ ಸಾಕ್ಷಿ. ಸೃಜನಶೀಲ ಸಾಹಿತ್ಯವಷ್ಟೇ ಅಲ್ಲದೆ, ಅನುವಾದಕ್ಕೂ ಕೈ ಹಚ್ಚಿ ಸೈ ಎನಿಸಿಕೊಂಡ ಪ್ರತಿಭಾವಂತ ಕುಲಕರ್ಣಿ. ಸತ್ತವರ ನೆರಳಿನ ಆಂಗ್ಲಾನುವಾದ Faith ಆಂಗ್ಲ ಓದುಗರನ್ನು ಆಕರ್ಷಿಸಿದೆ. ಈ ನಾಟಕವನ್ನು ಕಾರಂತರ ನಿರ್ದೇಶನದಲ್ಲಿ ರಂಗ ಪ್ರಯೋಗಿಸಬೇಕೆಂಬ ಇವರ ಕನಸು ಮಾತ್ರ ಕನಸಾಗೇ ಉಳಿಯಿತು.

ಕನ್ನಡ ನಾಟಕ ಮತ್ತು ಸಾಹಿತ್ಯದ ಉದ್ಧಾರಕ್ಕಾಗಿಯೇ ಟೊಂಕ ಕಟ್ಟಿರುವ ‘ಭೂಮಿಕ’, ಮನೋಹರ್‌ ಕಟ್ಟಿರುವ ಅಪರೂಪದ ಸಂಘ. ತಿಂಗಳಿಗೊಮ್ಮೆ ಭೂಮಿಕಾ ಅಂಗಳದಲ್ಲಿ ಬೆಳದಿಂಗಳು ಗ್ಯಾರಂಟಿ. ಆ ಬೆಳದಿಂಗಳ ಹಿಂದೆ ಚಂದ್ರನಷ್ಟೇ ಸಾರ್ಥ್ಯಕ್ಯ ಭಾವ ತೋರುತ್ತಾ, ಮತ್ತೆ ರಂಗ ತಾಲೀಮಿಗೆ ಸಜ್ಜಾಗುವ ಮನೋಹರ್‌ ನಮ್ಮ ನಡುವಿನ ಅಪರೂಪದ ಬಹುಮುಖ ಪ್ರತಿಭೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X