• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುದ್ದು ಮಗನಿಗೆ ಸಿಕ್ಕ ಸ್ವಾಗತ - ಭಾಗ 2

By Staff
|

ರೈಲು ನಿಲ್ದಾಣದಲ್ಲಿ ಕಾದಿದ್ದ ವಿಚಿತ್ರ!

ಈ ಸೋಮನಘಟ್ಟದ ರೈಲ್ವೇ ನಿಲ್ದಾಣದಲ್ಲಿ ಜಾಡಮಾಲಿಯಾಗಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕೆಂಚ, ಅಲ್ಲಿ ಇಷ್ಟೊಂದು ಜನ, ಇಷ್ಟು ಸಡಗರ, ಸಂಭ್ರಮ ಎಂದೂ ನೋಡಿರಲಿಲ್ಲ . ಮಧುಸೂದನ ಬರುತ್ತಿರುವ ಅರಸೀಕೆರೆ ಷಟ್ಲು ಬರುವ ವೇಳೆ ಹನ್ನೊಂದೂವರೆ. ಆದರೂ 9 ಗಂಟೆಗಾಗಲೇ ಹೊಸಹಳ್ಳಿಯಿಂದ ಮಧುಸೂದನನ್ನು ಸನ್ಮಾನಿಸಿ, ಬೀಳ್ಕೊಡಲು ಬಂದ ಜನರಿಂದ ಇಡೀ ಸೋಮನಘಟ್ಟ ಸ್ಟೇಷನ್‌ ತುಂಬಿಹೋಗಿತ್ತು .

ಹೊಸಹಳ್ಳಿಯ ಮುತ್ತೆೈದೆಯರೆಲ್ಲಾ ಜಗಮಗಿಸುವ ಬಣ್ಣ ಬಣ್ಣದ ಸೀರೆಗಳನುಟ್ಟು , ಊರಿನ ಮುದ್ದು ಮಗನಿಗೆ ಸ್ವಾಗತಿಸಿ ಆರತಿ ಎತ್ತಲು ಸಿದ್ಧರಾಗಿ ನಿಂತಿದ್ದರು. ಊರಿನ ಏಕೈಕ ಶಾಲೆಗೆ ಆ ದಿನ ರಜಾ. ಶಾಲಾ ಮಕ್ಕಳೆಲ್ಲಾ ಸಮವಸ್ತ್ರ ಧರಿಸಿ, ಶಾಲಾ ಮಾಸ್ತರರ ನಿಯಮ ಸೂಚನೆಯಂತೆ ಶಿಸ್ತಿನಿಂದ ರೈಲು ಬಂದ ಘಳಿಗೆ, ಒಂದೇ ಕಂಠದಲ್ಲಿ ‘ಮಧುಸೂದನರವರಿಗೆ ಜಯವಾಗಲಿ’ ಎಂದು ಜಯಕಾರ ಮಾಡಲು ತಯಾರಿದ್ದರು. ಹೊಸಹಳ್ಳಿಯ ಮುಂದಾಳುಗಳು ಸೋಮನಘಟ್ಟದ ಹೆಸರಾದ ನಾಪಿತರ ನಾಗಸ್ವರದ ಗುಂಪೊಂದನ್ನು ಈ ಕಾರ್ಯಕ್ರಮದ ವೇಳೆಯಲ್ಲಿ ಮಂಗಳ ವಾದ್ಯದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಿದ್ದರು. ಘಮಘಮಿಸುವ ದೊಡ್ಡ ಮಲ್ಲಿಗೆಯ ಹೂವಿನ ಹಾರವನ್ನು ಹಿಡಿದು, ಎಲ್ಲರಿಗಿಂತ ಮುಂಚೆ ನಿಂತಿದ್ದ ಸೋಮನಘಟ್ಟದ ಅಮಲ್ದಾರ್‌ ಸಾಹೇಬರನ್ನು ಕಂಡು ‘ಇವರೇಕೆ ಇಲ್ಲಿ ?’ ಎಂದು ಎಲ್ಲರಿಗೂ ಆಶ್ಚರ್ಯ. ಮೈಸೂರು ಮೆಡಿಕಲ್‌ ಕಾಲೇಜ್‌ನಲ್ಲಿ ಇನ್ನೆರಡು ವರ್ಷಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ವೈದ್ಯನಾಗುತ್ತಿರುವ ಮಗನಿಗೆ ಅಮೆರಿಕಾಕ್ಕೆ ಹೋಗಲು ಮಧುಸೂದನನಿಂದ ಅನುಕೂಲವಾಗಬಹುದೆಂಬುದು ಅವರ ಗೌಪ್ಯ ಆಶಯ ಎಂದು ಯಾರೂ ಊಹಿಸಿರಲಿಲ್ಲ .

ಒಂದು ಕುಹಕ ಸತ್ಯವೇನೆಂದರೆ, ಮಧುಸೂದನ ಹೊಸಹಳ್ಳಿಯನ್ನು ಬಿಟ್ಟು ಸುಮಾರು 25 ವರ್ಷಗಳಾಗಿತ್ತು . ಕೆಲವು ಹಳಬರನ್ನು ಬಿಟ್ಟರೆ, ಆ ಊರಿನ ಬಹಳ ಮಂದಿ ಆತನ ಹೆಸರು ಕೇಳಿದ್ದರೂ ಆತನನ್ನು ನೋಡಿಯೇ ಇರಲಿಲ್ಲ .

ಸ್ಟೇಷ್ನನಿನ ಗಡಿಯಾರ 11: 30 ವೇಳೆ ಸೂಚಿಸಿತು. ದೂರದಲ್ಲಿ ಬಿಸಿಲ್ಗುದುರೆಯ ಮಬ್ಬಿನಲ್ಲಿ ರೈಲಿನ ಹೊಗೆ, ರೈಲು ರಭಸದಲ್ಲಿ ಬರುತ್ತಿರುವ ‘ಚುಗು, ಚುಗು’ ಶಬ್ದ. ಎಲ್ಲರೂ ಎದ್ದು ನಿಂತರು. ಮಾಸ್ತರರು ಶಾಲಾ ಮಕ್ಕಳನ್ನು ಮುಂದೆ ಸಾಲಾಗಿ ನಿಲ್ಲಿಸಿದರು. ಹೆಣ್ಣು ಮಕ್ಕಳು, ಆರತಿಯ ತಟ್ಟೆಯಲ್ಲಿ ದೀಪ ಹತ್ತಿಸಿದರು. ಮಂಗಳ ವಾದ್ಯದ ಓಲಗವನ್ನು ಡೋಲು ಬಾರಿಸಿ ತುತ್ತೂರಿಯನ್ನು ಊದಿ, ಗಂಟಲನ್ನು ಸರಿ ಮಾಡಿಕೊಂಡು ಸಿದ್ಧವಾಗಿ ನಿಂತರು. ಅಮಲ್ದಾರರು ಎಲ್ಲರನ್ನೂ ನೂಕಿ ಎಲ್ಲರಿಗಿಂತ ಮುಂದೆ ಬಂದು ನಿಂತರು. ಹಿಂದೆ ನಿಂತ ಜನಗಳೆಲ್ಲಾ ಕಾಲು ಬೆರಳುಗಳ ಮೇಲೆ ನಿಂತು ಜಿರಾಫೆಯಂತೆ ಕತ್ತನ್ನು ಎತ್ತರಿಸಿ ಮಧುಸೂದನನ ದರ್ಶನಕ್ಕೆ ಎದುರು ನೋಡುತ್ತಾ ನಿಂತರು.

ರೈಲು ರಭಸದಿಂದ ಬರುತ್ತಿತ್ತು . ಇನ್ನೇನು ಸ್ಟೇಷನ್‌ಗೆ ಹತ್ತಿರ ಬಂದರೂ, ಬರುತ್ತಿರುವ ರಭಸ ಕಡಿಮೆಯಾಗಲಿಲ್ಲಾ . ಇನ್ನೂ ಬಹು ಜೋರಾಗಿಯೇ ಬರುತ್ತಿರುವಂತೆ ಭಾಸವಾಯ್ತು . ಎಲ್ಲರೂ ಆಕಾಂಕ್ಷೆಯಿಂದ ನೋಡುತ್ತಿರುವಂತೆ, ಕೆಲವು ಕ್ಷಣಗಳಲ್ಲಿ ಆ ಗಾಡಿ ಅಷ್ಟೇ ರಭಸದಲ್ಲಿ ಸ್ಟೇಷನ್‌ ದಾಟಿ ಮಾಯವಾಯ್ತು. ನಿರಾಶರಾದ ಜನಗಳನ್ನೂ ನೋಡಿ ಸ್ಟೇಷನ್‌ ಮಾಸ್ಟರ್‌ ಘೋಷಿಸಿದರು. ‘ಈಗ ಹೋಗಿದ್ದು ಗೂಡ್ಸ್‌ ಗಾಡಿ. ಅರಸೀಕೆರೆ ಷಟ್ಲ್‌ , ಇನ್ನೂ ತುಮಕೂರಿನಲ್ಲೇ ಇದೆ. ಇಂಜಿನ್‌ ಟ್ರಬಲ್‌. ಬೆಂಗಳೂರಿನಿಂದ ಮತ್ತೊಂದು ಇಂಜಿನ್‌ ಬರೋಕೆ ಕಾಯ್ತಾ ಇದ್ದಾರೆ. ನಂತರ ಗಾಡಿ ಇಲ್ಲಿ ಬರೋದು. ಎಷ್ಟೊತ್ತು ಆಗುತ್ತೋ ಹೇಳೋಕಾಗೊಲ್ಲಾ’. ಅದನ್ನೂ ಕೇಳಿ ಅಲ್ಲಿ ಸೇರಿದ್ದ ಜನಗಳ ಹುಮ್ಮಸ್ಸು ಗಾಳಿ ಹೋದ ಬಲೂನಿನಂತಾಯ್ತು .

‘ಪರದೇಸೀ ಹುಡುಗನಾ ?’

ಮಧ್ಯಾಹ್ನ ಮೂರು ಘಂಟೆಯಾಯ್ತು . ಮಧುಸೂಧನನ ಪರಿವಾರ ಪ್ರಯಾಣಿಸುತ್ತಿರುವ ರೈಲಿನ ಪತ್ತೆ ಇನ್ನೂ ಇಲ್ಲಾ . ಬೆಳಿಗ್ಗೆ 9 ಗಂಟೆಯಿಂದ ಸಿದ್ಧರಾಗಿ ಕಾಯುತ್ತಿರುವ ಈ ಗುಂಪು, ಹಸಿವಿನಿಂದ ಮತ್ತು ಬಿಸಿಲಿಗೆ ಬಳಲಿ, ಬಾಡಲು ಪ್ರಾರಂಭಿಸಿತು.

ಪುಟ್ಟ ಮಕ್ಕಳು ಅಳಲು ಪ್ರಾರಂಭಿಸಿದವು. ತುಂಟ, ಶಾಲಾಮಕ್ಕಳು ಹಿರಿಯರ ಸೂಚನೆಗೆ ಕಿವಿ ಕೊಡದೆ, ಓಡಾಡಲು ಪ್ರಾರಂಭಿಸಿದರು. ಕೆಲವು ಮಕ್ಕಳ ತುಂಟಾಟ, ಜಗಳವನ್ನೂ ನಿಲ್ಲಿಸಲು ತಂದೆತಾಯಿಗಳೂ ದಣಿದಿದ್ದರು.

ಓಲಗದವರು ತಮ್ಮ ವಾದ್ಯ ಸಾಮಗ್ರಿಗಳನ್ನೂ ಕೆಳಗಿಟ್ಟು ಹಾಗೆ ಒರಗಿ ನಿದ್ದೆ ಹೋದರು.

ಊಟಕ್ಕೆ ಅಡಿಗೆ ಸಿದ್ಧಮಾಡಬೇಕೆಂದೂ ಕೆಲವರು, ಮನೆಗೆಲಸ ಮುಗಿಸಬೇಕೆಂದೂ ಮತ್ತೆ ಕೆಲವರು, ಮತ್ತು ಇತರ ನೆಪಗಳನ್ನು ಹೇಳಿ ಅಲ್ಲಿ ನೆರೆದಿದ್ದ ಜನ ಒಬ್ಬೊಬ್ಬರಾಗಿ ಸ್ಟೇಷನ್‌ ಬಿಟ್ಟು ಊರಿಗೆ ವಾಪಸ್‌ ಆಗಲು ಪ್ರಾರಂಭಿಸಿದರು.

ಕಾದೂ ಕಾದೂ ಬೇಸರದಿಂದ ಜೋಲು ಮುಖ ಹಾಕಿ ತಾವು ತಂದಿದ್ದ ಹೂವಿನ ಮಾಲೆ ಬಾಡಿ ಹೋಗಲು ಪ್ರಾರಂಭಿಸುವುದನ್ನು ಕಂಡು ಅದನ್ನೂ ಕಸದ ಬುಟ್ಟಿಗೆ ಎಸೆದು ಸ್ಟೇಷನ್‌ ಬಿಟ್ಟು ಹೊರಟರು ಅಮಲ್ದಾರರು. ಇವರನ್ನು ನೋಡಿ ಕೆಂಚ ಕೇಳ್ದ ‘ಸಾಹೇಬ್ರೇ! ಇಷ್ಟು ಜನ ನೋಡೋಕೆ ಕಾಯ್ತಾ ಇದಾರಲ್ಲಾ ಯಾರ್‌ ಸ್ವಾಮಿ ಇವರು? ಮಠದ ಗುರುಗಳಾ? ಸಿನಿಮಾ ಆಕ್ಟ್ರೋ? ಅಥವಾ ಮಿನಿಸ್ಟ್ರೋ?’

‘ಯಾರೂ ಅಲ್ಲಾ . ಪರದೇಶದಿಂದ ಶೇಷಣ್ಣನ ಮಗ ಬರ್ತಾವ್ನೆ. ಅಷ್ಟೇ’ ಎಂದು ಗೊಣಗಾಡಿಕೊಂಡು ಹೇಳುತ್ತಾ, ಆಚೆ ನಡೆದರು.

ಕೆಂಚನಿಗೆ ಕಿವಿ ಸ್ವಲ್ಪ ಮಂದ. ಅದರ ಜೊತೆಗೆ ಹುಡುಗರ ಗಲಾಟೆ, ಮಕ್ಕಳ ಕಿರುಚಾಟ ಬೇರೆ. ಅಮಲ್ದಾರ್‌ ಸಾಹೇಬ್ರು ಬೇಸರ ಕೋಪದಲ್ಲಿ ಹೇಳಿದ ಉತ್ತರ. ಕೆಂಚನ ಕಿವಿಗೆ ಶೋಧಿಸಿ ಕೇಳಿಸಿದ್ದು ‘ಪರದೇಸಿ.....ನ... ಮಗ’.

ವೇಳೆ ಮೀರಿ, ತರಗತಿಗೆ ತಡವಾಗಿ, ತಲೆ ತಗ್ಗಿಸಿ ನಿಶ್ಯಬ್ದವಾಗಿ, ಅಪರಾಧಿಯಂತೆ ನುಸುಳಿಬರುವ ವಿದ್ಯಾರ್ಥಿಯಂತೆ, ಕೊನೆಗೂ ಅರಸೀಕೆರೆ ಶಟ್ಲು ಸೋಮನಘಟ್ಟ ಸ್ಟೇಷನ್‌ ಅನ್ನು ತಲುಪಿತು.

ಶೇಷಣ್ಣ ಗಾಡಿಯಿಂದ ಕೆಳಗಿಳಿದು ನೋಡುತ್ತಾರೆ ; ಬೀಡಿ, ಸಿಗರೇಟನ್ನೂ ಕೂಗಿ ಮಾರುವವ, ನಿಯತ್ತಾಗಿ ತನ್ನ ಕೆಲಸವನ್ನು ನಿರ್ವಹಿಸುವ ಭಿಕ್ಷುಕ, ಕಂಬಕ್ಕೆ ಒರಗಿ ಗೊರಕೆ ಹೊಡೆಯುತ್ತಾ , ನಿದ್ರಿಸಿರುವ ಝಾಡಮಾಲಿ ಕೆಂಚನನ್ನು ಬಿಟ್ಟರೆ, ಇಡೀ ಸ್ಟೇಷನ್‌ ಬಿಕೋ ಎನ್ನುತ್ತಿತ್ತು . ನಾಲ್ಕು ದಿನಗಳ ಹಿಂದೆಯೇ ತಾವು ಕಳಿಸಿದ ಸಂದೇಶವನ್ನೂ ಹೊಸಹಳ್ಳಿಯ ಜನಗಳಿಗೆ ತಿಳಿಸಲು ಭೀಮಸೇನರಾಯರು ಮರೆತರೇ? ಅಥವಾ ತಾವು ತಪ್ಪು ಸೂಚನೆಯನ್ನೂ ಆಕಸ್ಮಿಕವಾಗಿ ಕೊಟ್ಟಿರಬಹುದೋ?- ಎಂದು ಕ್ಷಣಕಾಲ ಅನುಮಾನಿಸಿದರು.

ಕೆಂಚನ ಬಳಿ ಹೋಗಿ ಅವನನ್ನು ಎಬ್ಬಿಸುತ್ತಾ , ‘ಏನು? ಯಾರೂ ಕಾಣ್ತಾಯಿಲ್ಲಾ ?’ ಎಲ್ಲರೂ, ಎಲ್ಲಿ ಹೋದ್ರೂ?’

‘ಏ ಮೇಷ್ಟ್ರೇ, ಈಗ ಬತ್ತಿದೀರಾ? ಈ ಬೆಳಿಗ್ಗೆ ನೋಡ್ಬೇಕಿತ್ತು . ಟೇಸನ್‌ ತುಂಬ್ಹೋಗ್ಬಿಟ್ಟಿತ್ತು . ಕಾಲಿಡೋಕ್‌ ಜಾಗ ಇರ್ಲಿಲ್ಲಾ. ಇಡೀ ಹೊಸಳ್ಳಿನೇ ಇಲ್ಲಿತ್ತು . ಏನ್‌ ಗಲಾಟೆ, ಏನ್‌ ಬಾಜಾ ಭಜಂತ್ರಿ ಅಂತೀರಿ’

‘ಅದಿರ್ಲಿ, ಎಲ್ಲಾರು ಎಲ್ಹೋದ್ರು? ಏನಾಯ್ತು ?’ ಎಂದು ದಂಗು ಬಡೆದ ಶೇಷಣ್ಣನ ಪ್ರಶ್ನೆಗಳ ಸುರಿಮಳೆ. ‘ಎಲ್ಹೋದ್ರು?’ ಎಂದು ಅಣಕಿಸುತ್ತಾ ‘ಮತ್ತೇನ್ಮಾಡ್ತಾರೆ ಏಳಿ ನೀವೇ. ಬೆಳಿಗ್ಗೆ 9 ರಿಂದ ಕಾದೂ ಕಾದೂ, ಕೊನೆಗೆ ಸುಸ್ತಾಗಿ, ಬೈಕೊಂಡು ವಾಪಸ್‌ ಊರ್ಗೆ ಓದ್ರು’.

ಶೇಷಣ್ಣ ಈ ಪ್ರಯಾಣದಿಂದ ದಣಿದಿದ್ದಲ್ಲದೆ ನಿರಾಸೆಯಿಂದ ಹೀಗೇಕಾಯ್ತು ಎಂದು ಯೋಚನಾಮಗ್ನರಾಗಿರುವಾಗ, ಕೆಂಚ ತನ್ನ ವಿಚಾರ ಲಹರಿಯನ್ನೂ ಮುಂದುವರಿಸಿದ. ‘ಅಮಲ್ದಾರ್‌ ಸಾಹೇಬ್ರು, ಭಾಳ ಬೇಜಾರ್ಮಾಂಕೊಂಡು, ಬೇಕಂಡು ಓದ್ರು’

‘ಯಾಕಂತೆ? ಏನು ಬೈದ್ರೂ?’

‘ಮತ್ತೇನ್ಹೇಳಿ ಬುದ್ಧಿ. ಹೊತ್ತಾರೆಯಿಂದ ಕಾದೂ ಕಾದೂ ಆ ಪರ್ದೇಸಿ... ನನ್ಮಗ, ಬಂದ್ರೆ ಬರ್ಲಿ, ಇಲ್ದಿದ್ರೆ ಇಲ್ಲಾ’ ಅಂತ ತಂದಿದ್ದ ಊವಿನ್ಹಾರನ ಕಸದ ಬುಟ್ಟಿಗೆ ಎಸ್ದು , ಓಗ್ಬಿಟ್ರು’ ಯಾರು ಮೇಷ್ಟ್ರೇ ಆತ?- ಈಸ್ಟೊಂದ್ಮಂದಿ ನೋಡಾಕೆ ಬಂದಿದ್ರಲ್ಲಾ ?’

ಇತರೆ ಸನ್ನಿವೇಶಗಳಲ್ಲಿ ಕೆಂಚನ ಅತಿ ಪ್ರಸಂಗತನ, ಒರಟು ಭಾಷೆಯನ್ನೂ ಶೇಷಣ್ಣ ಬಹುಷಃ ತಡೆಯುತ್ತಿರಲಿಲ್ಲಾ, ಆದರೆ ಈ ಮಧ್ಯಾಹ್ನ ಅವರು ತುಂಬಾ ತಗ್ಗಿ ಹೋಗಿದ್ದರು. ‘ಕೆಂಚ! ಪರದೇಸಿ ಅಲ್ಲಾ , ಪರ ದೇಶದಿಂದ ಬಂದವನು. ಆತ... ಆತ ನನ್ನ ಮಗ ತಿಳೀತಾ?’ ಎನ್ನುತ್ತಾ ಗಾಡಿಯ ಕಡೆ ನಿಧಾನವಾಗಿ ನಡೆಯುತ್ತಿದ್ದ ಶೇಷಣ್ಣನವರನ್ನು ಅವರು ಹೇಳಿದುದನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳದೆ ಕಣ್ಣು ಕಣ್ಣು ಬಿಟ್ಟು ನೋಡುತ್ತಾ ಕೆಂಚ ಕುಳಿತ.

ಗಾಡಿಯ ಒಳಗೆ ಮಧುಸೂದನ Tie ಅನ್ನು ಸಡಿಲ ಮಾಡಿಕೊಂಡು ತಾನು ಧರಿಸಿರುವ ಸೂಟು ಸುಕ್ಕಾಗುವುದನ್ನೂ ಗಮನಿಸದೆ ಸಣ್ಣ ಮಗುವಿನಂತೆ ಮುದುಡಿ ಪಕ್ಕದಲ್ಲಿ ತಿರುಗಿ ನಿದ್ದೆ ಹೋಗಿದ್ದ . ಪಕ್ಕದಲ್ಲಿ ಭಾಗೀರಥಮ್ಮ ತೂಕಡಿಸುತ್ತಾ ಕುಳಿತಿದ್ದರು. ‘ಮಧು! ಇಕೋ ನಿನ್ನ ಜನ್ಮಭೂಮಿ ನಿನಗೆ ಸ್ವಾಗತಿಸುತ್ತಿದೆ’ ಎಂದು ಅವನನ್ನು ಏಳಿಸಲು ಹಿಂಜರಿಯುತ್ತಾ ಮೆಲುವಾಗಿ ಪಿಸುಗುಟ್ಟಿದರು.

ಗಾರ್ಡ್‌ನ ಸಿಳ್ಳೆ ಹಾಕಿದ ಶಬ್ದಕ್ಕೇ ಕಾಯುತ್ತಿರುವಂತೆ, ಹೊಗೆಯನ್ನೂ ಕಾರುತ್ತಾ ಚಕ್ರಗಳನ್ನು ಚಗ್‌ ಚಗ್‌ ಎಂದು ಉರುಳಿಸುತ್ತಾ ಮಧುಸೂದನ, ತನ್ನ ಜನ್ಮಭೂಮಿಗೆ ಭೇಟಿ ಮಾಡಿದ ಕಾರ್ಯಕ್ರಮದ ಸಮಾಪ್ತಿಯನ್ನೂ ಸೂಚಿಸುತ್ತಾ , ಸೋಮನಘಟ್ಟವನ್ನು ಬಿಟ್ಟು ರೈಲು ಹೊರಟಿತು.

ಪೂರಕ ಓದಿಗೆ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X