ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ಮ ಭೂಮಿಗೆ ಮರಳಿ ಬಂದ ಮುದ್ದು ಮಗನಿಗೆ ಸಿಕ್ಕ ಸ್ವಾಗತ !

By Staff
|
Google Oneindia Kannada News

*ಡಾ.ಅಶ್ವತ್ಥ ಎನ್‌.ರಾವ್‌
ಸೇಂಟ್‌ ಲೂಯಿಸ್‌, ಮಿಸ್ಸೌರಿ, ಯು.ಎಸ್‌.ಎ

Dr. Ashwath N. Rao, Saint Louis ನೀವು ಉಚ್ಚಮಟ್ಟದ ವ್ಯಾಪಾರ ಕೇಂದ್ರಗಳಿಗೆ ಇತ್ತೀಚೆಗೆ ಭೇಟಿ ಮಾಡಿದಾಗ ಅಲ್ಲಿ ಮಾರಾಟಕ್ಕೆ ಪ್ರದರ್ಶಿಸಿದ್ದ leather ವಸ್ತುಗಳೇ ಆಗಲಿ ಅಥವಾ ನಾರಿನಿಂದ ಮಾಡಿದ ರಗ್‌ ಮತ್ತು ಚಿತ್ರಯವನಿಕೆ ವಸ್ತುಗಳೇ ಆಗಲಿ ‘made in India’ ಎಂದಿರುವುದನ್ನು ಕಂಡು ಹೆಮ್ಮೆಯಿಂದ ಪ್ರಶಂಸಿಸಿದ್ದರೆ, ಆ ವಸ್ತುಗಳು ಬಹುಶಃ ಭಾರತದಲ್ಲೇ ಸುಪ್ರಸಿದ್ಧವಾದ ಕರ್ನಾಟಕ ವಾಣಿಜ್ಯ ಕೇಂದ್ರವೆಂದು ಹೆಸರಾದ ‘ ನ್ಯೂ ಡಾಡ್ರೇಂಜ್‌ ಸಿಟಿ’ NEW DOD RANGE CITY ಯಲ್ಲಿ ತಯಾರಿಸಿರಬಹುದೆಂದು ಊಹಿಸಿದರೆ ತಪ್ಪಾಗಿರಲಾರಿರಿ.

ಕೇವಲ 40 ವರ್ಷಗಳ ಹಿಂದೆ ಬೆಂಗಳೂರಿನಿಂದ ಸುಮಾರು 60 ಮೈಲಿ ವಾಯುವ್ಯದಲ್ಲಿ ಈ ಮಹಾನಗರ , ಸುಮಾರು 30 ಮನೆಗಳ, ಯಾರೂ ಗಮನಿಸದ ‘ಹೊಸ ಹಳ್ಳಿ’ ಎಂಬ ಗ್ರಾಮವಾಗಿತ್ತು. ಅಡಿಕೆ, ತೆಂಗಿನ ಕೃಷಿ, ವ್ಯವಸಾಯವೇ ಹಳ್ಳಿಯ ಜನರ ಜೀವನ ಸಾರ. ಹೊಸ ಹಳ್ಳಿಗೆ ಹೋಗಬೇಕೆಂದರೆ ಬೆಂಗಳೂರು- ಚಿತ್ರದುರ್ಗದ ಬಸ್ಸಿನಲ್ಲಿ ತುಮಕೂರಿನಿಂದ ಸುಮಾರು 20 ಮೈಲಿ ವಾಯುವ್ಯದಲ್ಲಿ ಹೆದ್ದಾರಿಯಲ್ಲಿ ಇಳಿದು, ನಡೆದುಕೊಂಡೋ ಅಥವಾ ಎತ್ತಿನ ಗಾಡಿಯಲ್ಲೋ 3 ಮೈಲಿ ಹೋಗಬೇಕು. ಆ ರಸ್ತೆಯೂ ಸರಿ ಇರಲಿಲ್ಲ. ಅಥವಾ ಬೆಂಗಳೂರು- ಅರಸೀಕೆರೆ ಷಟಲ್‌ ರೈಲಿನಲ್ಲಿ ಸೋಮನ ಘಟ್ಟಕ್ಕೆ ಬಂದಿಳಿದು 2 ಮೈಲಿ ನಡೆದು ಹೊಸ ಹಳ್ಳಿಗೆ ಹೋಗುವುದು.

ಈ ಹಳ್ಳಿಯಲ್ಲೇ ಹುಟ್ಟಿ ಬೆಲೆದ ದೊಡ್ಡರಂಗೇಗೌಡರು MLA ಆಗಿ ನಂತರ ಕರ್ನಾಟಕ ಸರಕಾರದ ಸಚಿವರಾಗಿ ಸೇವೆ ಸಲ್ಲಿಸಿ ಈ ಹೊಸಹಳ್ಳಿಯ ಪ್ರಗತಿಗೆ ಮುಖ್ಯ ಕಾರಣಕರ್ತರಾದರು. ಹೊಸಹಳ್ಳಿಗೆ ಬರಲು ಅನುಕೂಲವಾಗುವಂತೆ ರಸ್ತೆ ಮತ್ತು ಹೆದ್ದಾರಿಗಳನ್ನು ಕಟ್ಟಿಸಿದ್ದಲ್ಲದೆ ಇಲ್ಲಿ ಕೈಗಾರಿಕೆ ಪ್ರಾರಂಭಿಸಲು ಅನುಕೂಲ ಕಲ್ಪಿಸಿದರು. ಅವರ ನಾಯಕತ್ವದಲ್ಲಿ ಹೊಸ ಹಳ್ಳಿ ಇಡೀ ಭಾರತದಲ್ಲೇ ಹೆಸರಾದ ವಾಣಿಜ್ಯ ಕೇಂದ್ರವಾಗಿ ಪರಿವರ್ತನೆಯಾಯಿತು.

ಊರು ಬೆಳೆದಂತೆ ‘ಹೊಸಹಳ್ಳಿ’ ‘ಹೊಸನಗರ’ವಾಯಿತು. ದೊಡ್ಡರಂಗೇಗೌಡರು ತೀರಿಕೊಂಡ ನಂತರ ಅವರ ಗೌರವಾರ್ಥವಾಗಿ ಈ ಊರಿಗೆ ‘ಹೊಸದೊಡ್ಡರಂಗೇನಗರ’ ಎಂದು ಹೆಸರಿಡಲಾಯಿತು. ಇಲ್ಲಿ ತಯಾರಾದ ವಸ್ತುಗಳನ್ನು ಜಗತ್ತಿನಾದ್ಯಂತ ರಫ್ತು ಮಾಡಲು ಪ್ರಾರಂಭಿಸಿದಾಗ, ಪಾಶ್ಚಿಮಾತ್ಯ ಭಾಷೆಯ ಉಚ್ಚಾರಣೆಗೆ ಸಿಲುಕಿ, ಆ ಹೆಸರು ‘ನ್ಯೂ ಡಾಡ್ರೇಂಜ್‌ ಸಿಟಿ- New Dod range city ಆಯ್ತು.

ಈ ಕಥೆ ನಡೆದ ಕಾಲ, ‘ಹೊಸಹಳ್ಳಿ’ ಇನ್ನೂ ಸಣ್ಣ ಗ್ರಾಮವಾಗಿರುವಾಗ. ಶೇಷಣ್ಣನವರು ಅಲ್ಲಿಯ ಮೂರು ಕೊಠಡಿಗಳ ಪ್ರಾಥಮಿಕ - ಮಾಧ್ಯಮಿಕ ಪಾಠ ಶಾಲೆಗೆ ಹೆಡ್‌ ಮಾಸ್ಟರರು. ಮಾಧ್ಯಮ ಶಾಲೆಯನ್ನೂ ಮುಗಿಸಿ ಪ್ರೌಢ ಶಾಲೆಗೆ ‘ಉನ್ನತ ವಿದ್ಯಾಭ್ಯಾಸ’ಕ್ಕೆ ಹೋಗಬೇಕಾದಲ್ಲಿ ಹೊಸಹಳ್ಳಿ ಬಿಟ್ಟು ಹೋಗಬೇಕಿತ್ತು. ಶೇಷಣ್ಣ ಮತ್ತು ಭಾಗೀರಥಮ್ಮನವರು ಈ ಹಳ್ಳಿಯ ಸಂಕುಚಿತ ಪರಿಸರವನ್ನೂ ಬಿಟ್ಟು ಬೇರೆ ಊರಿನಲ್ಲಿ ಬೇರೂರುವ ಯೋಚನೆಯನ್ನೂ ಹಲವು ಸಾರಿ ಮಾಡಿದ್ದರು. ಊರಿನ ಜನಗಳ ಗೌರವದ ಬೇಡಿಕೆ, ಗ್ರಾಮದ ಮುಖ್ಯಸ್ಥರ ಆಗ್ರಹದಿಂದಲ್ಲದೆ, ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಧಕ್ಕೆ ತರಲು ಇಷ್ಟವಾಗದೆ ಆ ಯೋಚನೆಯನ್ನು ಕೈ ಬಿಟ್ಟಿದ್ದರು. ಸಂಬಳ ಹೇಳಿಕೊಳ್ಳುವಷ್ಟಲ್ಲದಿದ್ದರೂ ಇಲ್ಲಿನ ಜನಗಳ ಸಹಕಾರದಿಂದ, ತರಕಾರಿ, ದವಸಧಾನ್ಯಗಳಿಗೆ ಕೊರತೆ ಇಲ್ಲದಿದ್ದರಿಂದ ನೆಮ್ಮದಿಯಿಂದ ಜೀವಿಸಲು ಸಾಧ್ಯವಿತ್ತು.

ಮುದ್ದು ಮಗ ಬಂದ...

ಮಧುಸೂದನ, ಶೇಷಣ್ಣ- ಭಾಗೀರಥಮ್ಮನವರಿಗೆ ಒಬ್ಬನೇ ಪುತ್ರ. ಬಹು ಪ್ರೀತಿಯಿಂದ ಸಾಕುತ್ತಿದ್ದರು. ಆತ ಓದು ಬರಹದಲ್ಲಿ ತುಂಬ ಛೂಟಿ. ಎಷ್ಟೇ ಆದರೂ ಮೇಷ್ಟರ ಮಗನಲ್ಲವೇ ? LS(BMS) Engineering ಕಾಲೇಜಿನಲ್ಲಿ ಸೀಟು ಸಿಕ್ಕಿತು. ಬೆಂಗಳೂರಿನಲ್ಲಿ Life Insurance Corporation ಆಗಿ ಕೆಲಸ ಮಾಡುತ್ತಿದ್ದ - ಶೇಷಣ್ಣನ ದೊಡ್ಡಪ್ಪನ ಮಗ ಸುಬ್ಬರಾಯನ ಮನೆಯಲ್ಲಿದ್ದು, ವಾರದನ್ನ ಮಾಡಿಕೊಂಡು ಎಂಜಿನಿಯರಿಂಗ್‌ ಪದವೀಧರನಾದ. ಅದೇ ಕಾಲೇಜಿನಲ್ಲಿ 2 ವರ್ಷ ಪ್ರಾಧ್ಯಾಪಕನಾಗಿ ಕೆಲಸ ಮಾಡಿ, ಸ್ಕಾಲರ್ಷಿಪ್‌ ಪಡೆದು, ಅಮೇರಿಕಾಗೆ ಉನ್ನತ ವಿದ್ಯಾಭ್ಯಾಸಕ್ಕೆ ಹೋದ. ಅಲ್ಲಿ ನಾಲ್ಕು ವರ್ಷದಲ್ಲೇ PhD ಪಡೆದು Houston ನ NASA ದಲ್ಲಿ ರಿಸರ್ಚ್‌ನ ಕೆಲಸ ಗಳಿಸಿದ್ದ. ಈ ಕೆಲಸಕ್ಕೆ ಹಾಜರ್‌ ಆಗುವ ಮುಂಚೆ, ತನ್ನ ತಂದೆ ತಾಯಿಗಳು ಒತ್ತಾಯ ಮಾಡಿದ್ದಂತೆ ಮೂರು ವಾರಗಳು ಭಾರತಕ್ಕೆ ಭೇಟಿ ನೀಡಿ, ಎಲ್ಲರನ್ನೂ ನೋಡಿ ಬರುವುದೆಂದು ನಿರ್ಧರಿಸಿ, ತನ್ನ ಬರುವಿಕೆಯ ಪ್ರಯಾಣದ ವೇಳಾಪಟ್ಟಿಯನ್ನೂ ಶೇಷಣ್ಣ- ಭಾಗೀರಥಮ್ಮನವರಿಗೆ ಕಳಿಸಿದ.

ಮರಳಿ ಬಂದನು: ಈಗಿನ ಸನ್ನಿವೇಶಕ್ಕೆ ಹೋಲಿಸಿದರೆ 1962ರಲ್ಲಿ ಅಮೇರಿಕಾ ದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ, ಅಲ್ಲಿಯೇ ಉದ್ಯೋಗಸ್ಥರಾದವರು ಬಹಳ ವಿರಳ. FOREIGN RETURN ಆದವನೆಂದರೆ ಸಪ್ತ ಸಮುದ್ರಗಳನ್ನೂ ದಾಟಿ, ಸಪ್ತ ಪರ್ವತಗಳನ್ನೂ ಜಿಗಿದು ಬಂದಂತಹ ವಿಶಿಷ್ಟ ವ್ಯಕ್ತಿ ಎಂದೇ ಪರಿಗಣಿಸುತ್ತಿದ್ದ ಕಾಲ.

ನಾಲ್ಕು ವರ್ಷಗಳ ನಂತರ ಅಮೆರಿಕಾದಿಂದ ಭಾರತಕ್ಕೆ ಮರಳುತ್ತಿರುವ ಮಗನನ್ನು ಭೇಟಿ ಮಾಡಲು, ಶೇಷಣ್ಣ ಮತ್ತು ಭಾಗೀರಥಮ್ಮ ಬೆಂಗಳೂರಿಗೆ ಬಂದು, ಸುಬ್ಬರಾಯ-ವಿಶಾಲಾಕ್ಷಿಯವರ ಮನೆಯಲ್ಲಿ ತಂಗಿದ್ದರು. ಶೇಷಣ್ಣ ನವರು ತಮ್ಮ ಮಗನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸಣ್ಣ ಪಟ್ಟೆಗಳಿರುವ ಕಪ್ಪು ಸೂಟು, ಚಿಟ್ಟೆ ಬಣ್ಣದ ಕಂಠ ಕೌಪೀನ, ಕರೀ ಕನ್ನಡಕವನ್ನೂ ಧರಿಸಿ ಸಿಸ್ತಾಗಿ ಕಂಡ ವ್ಯಕ್ತಿ ತಮ್ಮೆಡೆಗೆ ಬಂದು ‘ Hello Daddy, nice to see you ’ ಎಂದ ವ್ಯಕ್ತಿ ತನ್ನ ಮಧುಸೂದನನೇ ಎಂದು ಎಂದು ನಂಬಲಾಗಲಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಜೀವನದ ಸೋಂಕು, ನಾಲ್ಕು ವರ್ಷಗಳಲ್ಲಿ ಈತನನ್ನು ಇಷ್ಟು ಪರಿವರ್ತಿಸಿದೆ ಎಂದು ಅವರಿಗೆ ತುಂಬ ಆಶ್ಚರ್ಯ.

‘where is Mummy ? how is she doing?’

‘ಮನೆಯಲ್ಲಿ ನೀನು ಬರುವುದನ್ನೇ ಎದುರು ನೋಡುತ್ತಿದ್ದಾಳಪ್ಪಾ’ ಎಂದು ತುಂಬಿದ ಕಣ್ಣುಗಳಿಂದ ಮಧುಸೂದನನ್ನು ಆದರದಿಂದ ನೋಡುತ್ತಾ ಉತ್ತರಿಸಿದರು ಶೇಷಣ್ಣ.

ಅವರೊಂದಿಗೆ ಬಂದಿದ್ದ ಸ್ನೇಹಿತರನ್ನೂ ಒಬ್ಬೊಬ್ಬರಾಗಿ ಶೇಷಣ್ಣ ಮಗನಿಗೆ ಪರಿಚಯ ಮಾಡಿಕೊಟ್ಟರು. ಎರಡು ಕೈ ಸೇರಿಸಿ ನಮಸ್ಕಾರ ಮಾಡಬೇಕೋ ಅಥವಾ ಮಿಲಿಟರಿ ಸಲ್ಯೂಟ್‌ ಹೊಡಿಯಬೇಕೋ ಎಂದು ಅನುಮಾನಿಸುತ್ತಾ, ತಡವರಿಸುತ್ತಿದ್ದವರ ಕೈ ಕುಲುಕಿಸುತ್ತಾ ‘Hello, I am Dr. Sudan, " Friends Call me ಮ್ಯಾಡೂ’ ಎಂದು ತನ್ನ ಪರಿಚಯ ಮಾಡಿಕೊಂಡ.

ಮಧುಸೂದನ- ಅಂತಹ ಸುಂದರವಾದ, ಇಂಪಾದ ಹೆಸರನ್ನೂ ಯಾವಾಗ, ಏಕೆ ಬದಲಾಯಿಸಿದನೋ ಎಂದು ಶೇಷಣ್ಣನವರಿಗೆ ದುಃಖ ಮತ್ತು ಅಸಮಾಧಾನವಾಯ್ತು. ಪಾಪ! ಇದರಲ್ಲಿ ಮಧುಸೂದನನ ತಪ್ಪೇನೂ ಇರಲಿಲ್ಲ. ಅಮೇರಿಕಾಕ್ಕೆ ಬಂದ ಹೊಸದರಲ್ಲಿ, ಯಾವ ಕಾರಣವಿರಲಿ, ಅರ್ಜಿ ತುಂಬುವುದಿರಲಿ ‘your last name please, last name first, first name last ’ ಗಲಾಟೆಯಲ್ಲಿ ಸಿಲುಕಿದಾಗ, ‘I am only one person and that is my first, last and only name ’ ಎಂದು ಪ್ರತಿಪಾದಿಸುತ್ತಿದ್ದ. ಬರುಬರುತ್ತಾ, ತನ್ನ ನಿಲುವಿನ ನಿರರ್ಥಕತೆಯನ್ನು ಕಂಡು ತನ್ನ ಹೆಸರನ್ನು ಸೂದ್‌ ಮಧು ಎಂದು ತುಂಡರಿಸಿದ. ಅಮೇರಿಕನ್ನರ ಉಚ್ಚಾರಣೆಗೆ ಸಿಲುಕಿ ಅವನ ಹೆಸರು ಸೂದನ- ಸುಡ್ಯಾನ್‌ ಆಯ್ತು. ಕೊನೆಗೆ ದೂರವಾಣಿಯಲ್ಲಿ ಕರೆ ಬಂದಾಗ ಆತನೇ ‘ಡಾಕ್ಟರ್‌ ಸುಡ್ಯಾನ್‌ ಹಿಯರ್‌’ ಎಂದು ಉತ್ತರಿಸಲು ಪ್ರಾರಂಭಿಸಿದ. ಅವನ ಆಪ್ತ ಸ್ನೇಹಿತರಿಗೆ ಮತ್ತು ಸಹಪಾಠಿಗಳಿಗೆ ಅವನು ‘ಮ್ಯಾಡ್‌’ ಆದ.

ಮನೆಗೆ ಹೋದಾಗ ಅಲ್ಲಿ ಅವನನ್ನು ಕಂಡು ಎಲ್ಲರಿಗೂ ಆಶ್ಚರ್ಯ. ಪರದೇಶದಿಂದ ಬಂದಿರುವ ಈ ‘ಆಗಂತುಕ’ ಖಂಡಿತಾ ತಮ್ಮ ಮಧುಸೂದನನೇ ಎಂದು ನಂಬಲಾರರು. ಅವನ ಭಾವ, ನಡವಳಿಕೆ, ಭಾಷೆ, ನಿಲುವು, ಎಲ್ಲಾ ಪೂರ್ಣವಾಗಿ ಬದಲಾಗಿತ್ತು. ಕೇವಲ ನಾಲ್ಕು ವರ್ಷಗಳ ಪಾಶ್ಚಿಮಾತ್ಯ ದೇಶದಲ್ಲಿ ಜೀವಿಸುವ ಪ್ರಭಾವ ಮನುಷ್ಯನನ್ನು ಇಷ್ಟು ಬದಲಾಯಿಸಲು ಸಾಧ್ಯವೆಂದು ಯಾರೂ ತಿಳಿದಿರಲಿಲ್ಲ. ಇವನು ಖಂಡಿತ ಕನ್ನಡ ಭಾಷೆಯನ್ನೂ ಮರೆತಿರಬಹುದೆಂದು ನಿರ್ಧರಿಸಿ ಎಲ್ಲರೂ ಇವನೊಡನೆ ಮುರುಕು ಮುರುಕು ಇಂಗ್ಲಿಷ್‌ ಭಾಷೆಯಲ್ಲೇ ಮಾತನಾಡಲು ಪ್ರಯತ್ನಿಸುತ್ತಿದ್ದರು. ಇಂಗ್ಲಿಷ್‌ ಭಾಷೆ ಸುತ್ರಾಂ ಗೊತ್ತಿಲ್ಲದ ಭಾಗೀರಥಮ್ಮ ಮತ್ತು ವಿಶಾಲಾಕ್ಷಿಯವರು ಆತನೊಡನೆ ಮಾತನಾಡಲು ಹೋಗಲೇ ಇಲ್ಲ.

‘ಊಟ ಮಾಡಲು ಏಳು. ಸ್ನಾನಕ್ಕೆ ನೀರು ಸಿದ್ಧವಾಗಿದೆ, ಕಾಫಿ ಬೇಕಾ ?’ ಇವೆಲ್ಲವನ್ನೂ ಮೂಕರಂತೆ ಮುಖ ಭಾವ ಕೈ ಸನ್ನೆಯಲ್ಲೇ ಸೂಚಿಸುತ್ತಿದ್ದರು. ಈ ಬಾಯಿ- ನಾಲಿಗೆ ಬಳಸದ ಸಂಭಾಷಣೆಯನ್ನು ಕಂಡು ಅಳಬೇಕೋ ನಗಬೇಕೋ ತಿಳಿಯುತ್ತಿರಲಿಲ್ಲ ಶೇಷಣ್ಣನವರಿಗೆ.

ಮಧುಸೂದನ ಬರುವನೆಂದು ತಿಳಿದಾಗ, ಆತನಿರುವ ಮೂರು ವಾರಗಳ ಅವಿಶ್ರಾಂತ ಕಾರ್ಯಕ್ರಮಗಳ ಕ್ರಮವಾದ ವೇಳಾಪಟ್ಟಿಯನ್ನೂ ಶೇಷಣ್ಣನವರು ತಯಾರಿಸಿದ್ದರು. ಭಾಗೀರಥಮ್ಮನವರ ಮಟ್ಟಿಗೆ, ಅವರು ಮಧುಸೂದನನಿಗೆ ಹೆಣ್ಣುಗಳನ್ನು ತೋರಿಸಲು ಜಾಗ, ವೇಳೆ ಆಗಲೇ ನಿರ್ಧರಿಸಿದ್ದರು. ಶೇಷಣ್ಣನವರಿಗೆ ತಮ್ಮ ಮಗನನ್ನು ಆತನ ಜನ್ಮಭೂಮಿಯಾದ ಹೊಸಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಮತ್ತು ಸುತ್ತ ಮುತ್ತ ಹಳ್ಳಿಗಳ ಪ್ರಜೆಗಳಿಗೆ ಆತನನ್ನೂ ಭೇಟಿ ಮಾಡಿಸಿ, ಅತಿ ವಿಜೃಂಭಣೆಯ ಕಾರ್ಯಕ್ರಮದ ಮೂಲಕ ಅವನನ್ನೂ ಊರಿನ ಜನರಿಂದ ಸತ್ಕರಿಸಬೇಕೆಂಬ ಆಶಯ. ಅದಕ್ಕೆಲ್ಲಾ ಆಗಲೇ ಬಹು ಏರ್ಪಾಟು ನಡೆದಿತ್ತು.

ಜನ್ಮಭೂಮಿ ದರ್ಶನ ಕಾರ್ಯಕ್ರಮ ಮರೆತು ಹೋಯ್ತು...

ಮಧುಸೂದನ ಬಂದ ಮೊದಲೆರಡು ದಿನಗಳಲ್ಲಿ , ಆತ ವ್ಯಕ್ತಪಡಿಸಿದ ಅಸಮಾಧಾನಗಳನ್ನು ಅಮೇರಿಕಾದಿಂದ ಬಂದವನಿಗೆ ಇಲ್ಲಿ ಅನುಸರಿಸಿ ಹೋಗುವ ಒಂದು ಘಟ್ಟ ಎಂದು ತುಂಬ ಮನಸ್ಸಿಗೆ ಹಾಕಿಕೊಳ್ಳಲಿಲ್ಲ . ಆದರೆ ಕ್ರಮೇಣ ಅವನ ಧೋರಣೆ, ಕೃತಕ ನಡವಳಿಕೆ, ಜನಗಳೊಂದಿಗೆ ನಡೆಯುತ್ತಿದ್ದ ಅಸಭ್ಯತೆ, ಶೇಷಣ್ಣ ಮತ್ತು ಭಾಗೀರಥಮ್ಮನವರಿಗೆ ಬೇನೆಯಾಗಿ ಕಾಣಿಸಹತ್ತಿತು. ಕೊನೆಕೊನೆಯಲ್ಲಿ ಅವನ ಅಸಂತೋಷಕ್ಕೆ ಮಿತಿಯೇ ಇಲ್ಲ . ಭಾರತದ ಹವಾಗುಣ, ಆಹಾರ, ಗಲೀಜ್‌ ಪ್ರಯಾಣದ ಅಸೌಕರ್ಯ ಇತ್ಯಾದಿ ವಿಚಾರಗಳ ಅಸಹನೆ ಮತ್ತು ನಿಂದನೆಯನ್ನೂ ಕೇಳಿ ಕೇಳಿ ಸಾಕಾಯ್ತು . ಅವರು ತಮ್ಮ ತಾಳ್ಮೆ ಮತ್ತು ಸೈರಣೆಯ ಮಿತಿಯನ್ನೂ ಮುಟ್ಟಿದ್ದರು.

ಬೆಂಗಳೂರಿನಿಂದ ದಿನವಿಡೀ ಪ್ರಯಾಣ ಮಾಡಿ ತಲುಪಿದ ನಂತರ, ಮಧುಸೂದನ ಹೊಸಹಳ್ಳಿಯ ಪರಿಸರ ಮತ್ತು ಜೀವನಕ್ಕೆ ಹೊಂದಿಕೊಂಡು, ಕ್ಷಣಕಾಲವೂ ಇರಲಾರ ಎಂದು ಖಾತ್ರಿಮಾಡಿಕೊಂಡ ಶೇಷಣ್ಣ ಆತನ ಜನ್ಮಭೂಮಿಯ ದರ್ಶನದ ಕಾರ್ಯಕ್ರಮವನ್ನು ಮರೆತರು. ಆತನೂ ಈ ವಿಚಾರದಲ್ಲಿ ಅತಿ ಆಸಕ್ತಿ ತೋರಿಸಲಿಲ್ಲ .

ಮಧುಸೂದನ ಅಮೇರಿಕಾಕ್ಕೆ ಮರಳುವ ದಿನ ಹತ್ತಿರ ಬಂದಂತೆ, ಹೊಸಹಳ್ಳಿ ಮತ್ತು ಸುತ್ತಮುತ್ತ ಹಳ್ಳಿಗಳ ಜನರು ಆತನನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲು ಒಂದು ಸಂಧಾನಕ್ಕೆ ಬಂದರು.

ಶೇಷಣ್ಣ ಮತ್ತು ಭಾಗೀರಥಮ್ಮನವರು ಮಧುಸೂದನನೊಂದಿಗೆ ಬೆಂಗಳೂರಿನಿಂದ ಅರಸೀಕೆರೆಗೆ Shuttleನಲ್ಲಿ ಹೋಗುವುದು. ಸೋಮನಘಟ್ಟದ ನಿಲ್ದಾಣದಲ್ಲಿ ರೈಲು ನಿಲ್ಲುವ ವೇಳೆಯಲ್ಲಿ , ಹೊಸಹಳ್ಳಿಯ ಊರಿನ ಜನರೆಲ್ಲಾ ಆತನನ್ನು ಭೇಟಿ ಮಾಡಿ ಬೀಳ್ಕೊಡುವುದು. ಅದೇ ಟ್ರೆೃನಿನಲ್ಲಿ ಅರಸೀಕೆರೆ ತಲುಪಿ ಅಲ್ಲಿಂದ ಬೊಂಬಾಯಿಗೆ Bombay Express ನಲ್ಲಿ ಪ್ರಯಾಣ ಮುಂದುವರೆಸುವುದು ಎಂದು ತೀರ್ಮಾನವಾಯ್ತು. ಕಾರ್ಯಕ್ರಮವನ್ನು ಏರ್ಪಡಿಸಲು ಹೊಸಹಳ್ಳಿ ಜನರಿಗೆ ಸೂಚನೆ ಕೊಡುವಂತೆ ಹೊಸಹಳ್ಳಿಯ ಜವಳಿ ವರ್ತಕ ಭೀಮಸೇನರಾಯರಿಂದ ನಾಲ್ಕು ದಿನಗಳ ಮುಂಚೆಯೆ ಸಂದೇಶವನ್ನೂ ಕಳಿಸಿದರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X