ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪಟ ಕನ್ನಡ ಪ್ರೇಮಿ : ಎಸ್‌. ಕೆ. ಹರಿಹರೇಶ್ವರ

By Staff
|
Google Oneindia Kannada News

*ಯೋಗೇಶ್‌ ದೇವರಾಜ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯಾ
(ಆಗಸ್ಟ್‌ 3ರಂದು ಮಾತಿನ ಮಂಟಪ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಡಿದ ಭಾಷಣದ ಲೇಖನ)

Yogesh Jagadish, The Authorಮಾತಿನ ಮಂಟಪ’ ಪ್ರಬಂಧ ಸಂಕಲನ ಹಲವು ವಿಷಯಗಳ ಬಗೆಗಿನ ಹರಿಹರೇಶ್ವರರ ದೀರ್ಘ ಅಧ್ಯಯನದ ಫಲ ಮತ್ತು ಅರ್ಥೈಸುವಿಕೆಯ ಸಾರ. ಅನುಭವ, ಅಪೇಕ್ಷೆ ಹಾಗೂ ಅನಿಸಿಕೆಗಳ ಭಂಡಾರ. 24 ಪ್ರಬಂಧಗಳ ಈ ಸಂಕಲನ ವಿವಿಧ ವಸ್ತು, ವ್ಯಕ್ತಿ ಹಾಗೂ ಪಾತ್ರಗಳನ್ನು ಒಳಗೊಂಡಿವೆ. ಕಣ್ಣು, ಸಮಯ, ನೀರು, ನೋಟ ಇತ್ಯಾದಿಗಳ ಸ್ವರೂಪ, ಪಾತ್ರ ಮತ್ತು ಸಾಹಿತ್ಯಕ ನಂಟಿನ ಅಧ್ಯಯನ ಸಂಕಲನದಲ್ಲಿದೆ.

ಇಳೆಯಾಂಡ ಗುಡಿಮಾರನ ಪವಿತ್ರ ಶಿವ ಭಕ್ತಿ, ಸಂತ ರಾಮಾನುಜರು ದೇವರನ್ನು ವರ್ಣಿಸುವ ಬಗೆ, ಇಹಲೋಕವನ್ನು ಅಗಲಿ ಬಿಡುಗಡೆ ಹೊಂದುವ ಪುರಾಣದಲ್ಲಿನ ಪಾತ್ರಗಳು ಹಾಗೂ ಪ್ರಮೇಯಗಳು ಹರಿಯವರ ಲೇಖನದಲ್ಲಿ ಸೊಗಸಾಗಿ ಮೂಡಿ ಬಂದಿವೆ. ಹಾಗೆಯೇ ಹರಿಯವರು ಪ್ರಖ್ಯಾತ ಕವಿಗಳಾದ ಪು.ತಿ. ನರಸಿಂಹಾಚಾರ್‌, ಜಿ.ಎಸ್‌. ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗ ಮತ್ತು ಶಿವರಾಮ ಕಾರಂತರ ಕವನ ಸಂಕಲನಗಳನ್ನು, ಸಮೀಕ್ಷೆಯ ಮೂಲಕ ಪರಿಚಯಿಸಿದ್ದಾರೆ.

‘ಮಾತಿನ ಮಂಟಪ’ದಲ್ಲಿ ಎದ್ದು ಕಾಣುವುದು ಹರಿಯವರ ಅಚಲ ಕನ್ನಡ ಪ್ರೇಮ. ಇದು ಉತ್ಪ್ರೇಕ್ಷೆಯ ಮಾತಲ್ಲ. ಹರಿಯವರನ್ನು ಹತ್ತಿರದಿಂದ ಕಂಡಿರುವ ನನ್ನ ಅನುಭವಕ್ಕೆ ಬಂದ ವಿಷಯ. ಕನ್ನಡತನ ಮಾಯವಾಗುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ಕನ್ನಡ ಉಳಿಸಲು ಹರಿಯವರು ತೋರುತ್ತಿರುವ ಕಾಳಜಿ, ಹಾಗೂ ಕಳಕಳಿ ನಮ್ಮನ್ನು ಎಚ್ಚರಿಸುತ್ತವೆ. ಅಂತೆಯೇ ಕನ್ನಡ ಬೆಳೆಸುವವರ ಆಸಕ್ತಿ, ಕೋರಿಕೆ ಮತ್ತು ಸಲಹೆ-ಮಾರ್ಗದರ್ಶನಗಳು ಪ್ರಸ್ತುತ ಸ್ಥಿತಿಯಲ್ಲಿ ಬಹಳ ಅವಶ್ಯವೆನಿಸುತ್ತದೆ.

ಕನ್ನಡದ ಕಡೆಗಿನ ತುಡಿತ...
‘ವಿದೇಶದಲ್ಲಿ ಕನ್ನಡ ಬೆಳೆಸುವ ಬಗೆ’ ಪ್ರಬಂಧದಲ್ಲಿ ಹರಿಯವರ ಮನದ, ಕನ್ನಡದ ಕಡೆಗಿನ ತುಡಿತ ನಿಚ್ಚಳವಾಗಿ ಕಾಣಿಸುತ್ತದೆ. ಕನ್ನಡದಲ್ಲಿ ದಿನನಿತ್ಯ ಸಂಭಾಷಣೆ ನಡೆಸುವುದರ ಮೂಲಕ ಕರ್ತವ್ಯ ಪಾಲನೆಯ ಸಲಹೆ. ಸಂಭಾಷಣೆಯ ನಡುವೆ ಅನ್ಯ(ಆಂಗ್ಲ) ಭಾಷಿಕ ಪದಗಳು ತಿಳಿದೋ ಅಥವಾ ತಿಳಿಯದೆಯೋ ಮೂಡಿದರೆ ಚಿಂತಿಸುವ ಪ್ರಮೇಯವಿಲ್ಲ. ಆ ಮಟ್ಟದ ಮಡಿವಂತಿಕೆ ಬೇಡ. ನಂತರ ಕನ್ನಡ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಬಗ್ಗೆ. ಅದರಲ್ಲೂ ವಿಶೇಷವಾಗಿ ಕೊಂಡು ಓದುವಂತೆ ಪ್ರೋತ್ಸಾಹ. ಹಾಗೆಯೇ ಲೇಖಕರಿಂದ ಮತ್ತು ಕನ್ನಡ ಸಂಘಗಳಿಂದ ಲೇಖನ ಪ್ರಕಟಣೆಯ ಬಗ್ಗೆ ಸಲಹೆ ಮತ್ತು ಕೋರಿಕೆ.

ಅಂತರ್ಜಾಲ ಪ್ರಕಟಣೆಗಳು ಕನ್ನಡ ಸಾಹಿತ್ಯವನ್ನು ದೊರಕಿಸಿಕೊಡುವ ಕೆಲಸವನ್ನು ಈಗಾಗಲೇ ಸಮರ್ಪಕವಾಗಿ ಮಾಡುತ್ತಿವೆ. ಈ ಪ್ರಕಟಣೆಗಳು ಯಶಸ್ಸುಗಳಿಸುವಲ್ಲಿ ನಮ್ಮೆಲ್ಲರ ಪ್ರೋತ್ಸಾಹ- ನಿತ್ಯ ಪತ್ರಿಕೆ ಓದುವ ಮೂಲಕ ಮತ್ತು ಸಹಾಯ-ಅವುಗಳಿಗೆ ಲೇಖನ ಬರೆಯುವ ಮೂಲಕ. ಇದು ಬಹು ಅವಶ್ಯಕವೆಂಬುದು ಹರಿಯವರ ಅಭಿಪ್ರಾಯ. ಹರಿಯವರ ಪ್ರಕಾರ ಲೇಖನಗಳು ಇಂಥದೇ ವಸ್ತು ಅಥವ ವಿಷಯದ ಬಗ್ಗೆ ಇರಬೇಕೆಂಬ ನಿರ್ಬಂಧವಿಲ್ಲ. ‘ನಿಮಗೆ ಅನಿಸಿದ್ದನ್ನು ಬರೆಯಿರಿ. ಕಾಲ ಕ್ರಮೇಣ ನೀವು ಬೆಳವಣಿಗೆ ಕಾಣುತ್ತೀರಿ’ ಅನ್ನುವುದು ಅವರ ಸಲಹೆ. ‘ಮಾತಿನ ಮಂಟಪ’ದ ಲೇಖನಗಳನ್ನು ಓದಿಕೊಂಡಾಗ, ಲೇಖಕನಾದವನಿಗೆ ಯಾವತ್ತೂ ವಿಷಯದಾರಿದ್ರ್ಯವಿರುವುದಿಲ್ಲ ಎಂದು ತಿಳಿಯುತ್ತದೆ.

‘ಮಧುಮಾಸದಲ್ಲಿ ನೆಟ್ಟ ಮರದ ಶಾಖೋಪಶಾಖೆಗಳು’
ಈಗಿನ ಅಂತರ್ಜಾಲಗಳ ಕೆಲಸವನ್ನು ಹರಿಯುವರು ಅಂತರ್ಜಾಲ ರಹಿತ ಕಾಲದಲ್ಲಿ ‘ಅಮೆರಿಕನ್ನಡ’ ಪತ್ರಿಕೆಯನ್ನು ನಡೆಸುವ ಮೂಲಕ ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಹಾಗೆಯೇ, ಲೇಖನ ಓದಿದ ನಂತರ ಓದುಗರು ತಮ್ಮ ಅನಿಸಿಕೆಯನ್ನು ಲೇಖಕನೊಡನೆ ಹಂಚಿಕೊಂಡಾಗ ಲೇಖಕನಿಗೆ ತೃಪ್ತಿ ನೀಡುತ್ತದೆ ಎಂಬುದು ಹರಿಯವರ ಅನಿಸಿಕೆ.ಈ ಉತ್ತಮ ಅಭ್ಯಾಸವನ್ನು ಹರಿಯವರು ಅಮೆರಿಕದಲ್ಲಿನ ಲೇಖಕರಿಗೆ ಬೆನ್ನು ತಟ್ಟುವ ಮೂಲಕ ಮಾಡುತ್ತಿರುವುದು ನಮಗೆಲ್ಲ ಸಂತಸದ ವಿಷಯ.

Cover Page of Mathina Mantapa‘ಮಧುಮಾಸದಲ್ಲಿ ನೆಟ್ಟ ಮರದ ಶಾಖೋಪಶಾಖೆಗಳು’ ಪ್ರಬಂಧದಲ್ಲಿ ಹರಿಯವರು ಅಮೆರಿಕದಲ್ಲಿನ ಕನ್ನಡ ಸಂಘ ಸಂಸ್ಥೆಗಳ ಬೆಳವಣಿಗೆಯ ಚರಿತ್ರೆಯನ್ನು ಹಂಚಿಕೊಂಡಿದ್ದಾರೆ. ಮೊದಲ ಕನ್ನಡ ಸಂಘದ ಉದಯ ಡೆಟ್ರಾಯಿಟ್‌ನಲ್ಲಿ 1971ರಲ್ಲಿ ಆದದ್ದು. ಅನಂತರ ಇಪ್ಪತ್ತಕ್ಕೂ ಹೆಚ್ಚು ಕೂಟಗಳು ಅಮೆರಿಕದ ಪ್ರಮುಖ ನಗರಗಳಲ್ಲಿ ಸ್ಥಾಪನೆಯಾದದ್ದರ ಬಗ್ಗೆ ಬರೆಯುತ್ತಾ ಸ್ಥಾಪನೆಗೆ ಕಾರಣರಾದವರನ್ನು ನೆನೆಯುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಈಗ ಡೆಟ್ರಾಯಿಟ್‌ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಹರಿಯವರ ಎಲ್ಲ ಕೋರಿಕೆಗಳು ಬಹು ಪ್ರಸ್ತುತ.

ಹರಿಹರೇಶ್ವರರ ‘ಮಾತಿನ ಮಂಟಪ’ದಲ್ಲಿನ ಅಪೇಕ್ಷೆ ಮತ್ತು ಕೋರಿಕೆಯಂತೆಯೆ ನನ್ನ ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಂಡು ಅವರ ಕನ್ನಡ ಕಾರ್ಯವನ್ನು ನೆನೆಯುತ್ತಿದ್ದೇನೆ. ವೃತ್ತಿಯಲ್ಲಿ ನಮ್ಮೆಲ್ಲರಂತೆ ಇಂಜಿನಿಯರ್‌ ಆಗಿರುವ ಹರಿಯವರು ಪ್ರವೃತ್ತಿಯಲ್ಲಿ ಕನ್ನಡ ಕೆಲಸ ಮಾಡುತ್ತ ‘ಅಪ್ಪಟ ಕನ್ನಡ ಪ್ರೇಮಿ’ಯಾಗಿದ್ದಾರೆ. ಬಹು ಎತ್ತರಕ್ಕೆ ಬೆಳೆದಿರುವ ಅವರು ನಮ್ಮೆಲ್ಲರನ್ನು ಅವರೆತ್ತರಕ್ಕೆ ಬೆಳೆಯುವಂತೆ ಪ್ರೇರೇಪಿಸುವ ಗುಣ ಮಹತ್ತರವಾದುದು. ಅವರ ಸಮಗ್ರ ಕನ್ನಡ ಸೇವೆಗೆ ನನ್ನ ಅಭಿನಂದನೆ. ಅವರ ಕನ್ನಡ ಕಾರ್ಯ ಹೀಗೆಯೇ ಮುಂದುವರೆಯಲಿ ಎಂಬುದೇ ನಮ್ಮೆಲ್ಲರ ಹಂಬಲ ಮತ್ತು ಆಶಯ.

ಇವನ್ನೂ ಓದಿ...
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X